ಮೂಢನಂಬಿಕೆಗಳು ಅಂಧಾನುಕರಣೆಯೇ ?
-ರಾವ್ ಎವಿಜಿ
ಮೂಢನಂಬಿಕೆ ಎಂದರೇನು? ಈ ಪ್ರಶ್ನೆ ನನ್ನಲ್ಲಿ ಉದ್ಭವಿಸಲು ಕಾರಣವಾದದ್ದು ಹಾಲಿ ಅಸ್ತಿತ್ವದಲ್ಲಿ ಇರುವ ಕೆಲವು ಮತೀಯ ಆಚರಣೆಗಳ ಪರ-ವಿರೋಧ ವಾದಗಳು. ಇದಕ್ಕೆ ಸಂಬಂಧಿಸಿದಂತೆ ನನ್ನ ಗಮನ ಸೆಳೆದ ಪತ್ರಿಕೆಗಳಲ್ಲಿ ವರದಿ ಆದ ಮತೀಯ ಆಚರಣೆಗಳು ಇವು:
(೧) ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಲು ಹಿಂದಿನಿಂದ ಆಚರಣೆಯಲ್ಲಿ ಇರುವ ‘ಬ್ರಾಹ್ಮಣರು ಉಂಡೆದ್ದ ಎಂಜಲೆಲೆಗಳ ಮೇಲೆ ಉರುಳು ಸೇವೆ ಮಾಡುವ ಮಡೆಸ್ನಾನ ಪದ್ಧತಿ’
(೨) ಗುಲ್ಬರ್ಗ ಜಿಲ್ಲೆಯಲ್ಲಿ ಆಚರಣೆಯಲ್ಲಿ ಇರುವ ‘ಸೂರ್ಯಗ್ರಹಣ ಕಾಲದಲ್ಲಿ ಸುಮಾರು ೬ ತಾಸು ಕಾಲ ಮಕ್ಕಳನ್ನು ಆಂಗವೈಕಲ್ಯದ ನಿವಾರಣೆಗಾಗಿ ಕುತ್ತಿಗೆಯ ತನಕ ಭೂಮಿಯಲ್ಲಿ ಹುಗಿದಿರಇಸುವ ಪದ್ಧತಿ’
(೩) ಮಹಾರಾಷ್ಟ್ರದ ಶೋಲಾಪುರದಲ್ಲಿ ಆಚರಣೆಯಲ್ಲಿ ಇರುವ ‘ಸುಮಾರು ೫೦ ಅಡಿ ಎತ್ತರದಿಂದ ಹಸುಗೂಸುಗಳನ್ನು ಕೆಳಗೆ ಬಿಗಯಾಗಿ ಎಳದು ಹಿಡಿದುಕೊಂಡಿರುವ ಬೆಡ್ ಶೀಟಿಗೆ ಎತ್ತಿ ಹಾಕುವ ಪದ್ಧತಿ’
(೪) ತಮಿಳುನಾಡಿನಲ್ಲಿ ಆಚರಣೆಯಲ್ಲಿ ಇರುವ ‘ಗಲ್ಲದ ಮೂಲಕ ಚೂಪಾದ ದಬ್ಬಳದಂಥ ಸಾಧನಗಳನ್ನು, ಬೆನ್ನಿನ ಚರ್ಮಕ್ಕೆ ಕಬ್ಬಿಣದ ಕೊಕ್ಕೆಗಳನ್ನು ಸಿಕ್ಕಿಸಿಕೊಂಡು ಆವೇಶದಿಂದ ಕುಣಿಯುವ ಕಾವಡಿ ಆಟಮ್ ಪದ್ಧತಿ’
(೫) ಭಾರತದ ಗಡಿಗೆ ತಾಗಿಕೊಂಡಿರುವ ನೇಪಾಳದ ಹಳ್ಳಿಯೊಂದರಲ್ಲಿ ೫ ವರ್ಷಕ್ಕೊಮ್ಮೆ ಜರಗುವ ಹಿಂದೂ ಹಬ್ಬದಲ್ಲಿ ಸುಮಾರು ೨೫೦೦೦೦ ಕ್ಕೂ ಅಧಿಕ ಪ್ರಾಣಿಗಳನ್ನು (ವಿಶೇಷತಃ ಎಮ್ಮೆಗಳನ್ನು) ಬಲಿ ಕೊಡುವ ಪದ್ಧತಿ
(೬) ಒರಿಸ್ಸಾದ ಕೆಲವೆಡೆ ಆಚರಣೆಯಲ್ಲಿ ಇರುವ ‘ಪುಟ್ಟ ಬಾಲಕರನ್ನು ನಾಯಿಯೊಂದಿಗೆ ಮದುವೆ ಮಾಡುವ ಪದ್ಧತಿ’
(೭) ಚಾಮರಾಜನಗರ ಜಿಲ್ಲೆಯಲ್ಲಿ ಸುಬ್ರಹ್ಮಣ್ಯ ಷಷ್ಠಿಯಂದು ಆಚರಿಸುವ ‘ಹುತ್ತಕ್ಕೆ ಪೂಜೆ ಸಲ್ಲಿಸಿ ಅದರ ಮೇಲೆ ಒಂದು ಕೋಳಿಮೊಟ್ಟೆ ಇಟ್ಟು (ಸಾಮಾನ್ಯವಾಗಿ ಹೆಂಗಸರು) ಕೋಳಿಯ ಕತ್ತು ಕೊಯ್ದು ಬಿಸಿರಕ್ತ ಸುರಿಯುವ ಪದ್ಧತಿ’
ಇಲ್ಲಿ ನಮೂದಿಸಿರುವ ಪ್ರತೀ ಆಚರಣೆಯನ್ನು ಸಮರ್ಥಿಸಿಕೊಳ್ಳಲು ‘ಅನಾದಿಕಾಲದಿಂದಲೂ ಆಚರಣೆಯಲ್ಲಿದೆ’, ‘ಆಚರಣೆಯಿಂದ ಅನೇಕರಿಗೆ ಒಳ್ಳೆಯದಾಗಿದೆ’, ‘ಅನೇಕರಿಗೆ ರೋಗ ವಾಸಿ ಆಗಿದೆ’ ‘ನಮಗೆ ಮನಶ್ಶಾಂತಿ ದೊರೆತಿದೆ’, ‘ಇತರರಿಗೆ ತೊಂದರೆ ಕೊಡುವುದಿಲ್ಲ’ ಮುಂತಾದ ವಾದಗಳನ್ನು ಮುಂದಿಡುತ್ತಾರೆ. ಇವುಗಳನ್ನು ‘ಆಧ್ಯಾತ್ಮಿಕ ಪ್ರತೀಕಗಳಾಗಿ’ ಏಕೆ ಪರಿಗಣಿಸ ಬೇಕು ಅನ್ನುವುದನ್ನು ವಿವರಿಸುವುದೂ ಉಂಟು. ಇವು ‘ಅಮಾನವೀಯ’, ‘ಅನಾಗರೀಕ’. ‘ವೈದಿಕ ಸಂಪ್ರದಾಯವಾದಿಗಳು ಅರ್ಥಾತ್ ಬ್ರಾಹ್ಮಣ ವರ್ಗದವರು ಹಿಂದುಳಿದವರನ್ನೂ ದಲಿತರನ್ನೂ ಶೋಷಿಸಲೋಸುಗವೇ ಹುಟ್ಟುಹಾಕಿ ಪೋಷಿಸಿಕೊಂಡು ಬಂದಿರುವ ಮೂಢನಂಬಿಕೆಗಳು’ ಎಂದೆಲ್ಲ ವಿರೋಧಿಸುವವರೂ ಇದ್ದಾರೆ. ಇರುವ ಅಸಂಖ್ಯ ಸ್ವಘೋಷಿತ ಮತ್ತು ಪರಂಪರಾಗತ ಮಠಾಧಿಪತಿಗಳ ಪೈಕಿ ಬಹುತೇಕರು ಈ ಕುರಿತು ‘ದಿವ್ಯಮೌನ’ ತಳೆದಿದ್ದಾರೆ, ಕೆಲವರು ‘ಇವೆಲ್ಲ ನಂಬಿಕೆಯ ಪ್ರಶ್ನೆಗಳು, ಬಲು ಹಿಂದಿನಿಂದ ಪರಂಪರಾಗತ ನಂಬಿಕೆಯನ್ನು ಪ್ರಶ್ನಿಸಿ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟುಮಾಡುವುದು ಸರಿಯಲ್ಲ’, ಆತ್ಮಸಂತೋಷಕ್ಕಾಗಿ ಅವರಿಗೆ ಸರಿ ಅನ್ನಿಸಿದ್ದನ್ನು ಮಾಡುವ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡುವುದು ಸರಿಯೇ?’ ಅನ್ನುವುದರ ಮೂಲಕ ಈ ಆಚರಣೆಗಳನ್ನು ಪರೋಕ್ಷವಾಗಿ ಪೋಷಿಸುತ್ತಿದ್ದಾರೆ.
ಈ ಎಲ್ಲ ಆಚರಣೆಗಳು ವೈಜ್ನಾನಿಕ ಹಿನ್ನೆಲೆ ಉಳ್ಳವೇ ಅಥವ ಅಂಧಾನುಕರಣೆಗಳೇ? ವೈಜ್ಞಾನಿಕ ಹಿನ್ನೆಲೆ ಉಳ್ಳವು ಆಗಿದ್ದರೆ ವೈಜ್ಞಾನಿಕ ವೈಚಾರಿಕತೆಯ ಅಥವ ವಿಜ್ಞಾನ ವಿಧಾನದ ನಿಕಷಕ್ಕೆ ಒರೆಹಚ್ಚಿ ಪರೀಕ್ಷಿಸಬಹುದು. ನನಗೆ ತಿಳಿದ ಮಟ್ಟಿಗೆ ಈ ಕಾರ್ಯವನ್ನು ಈ ತನಕ ಯಾರೂ ಮಾಡಿಲ್ಲ ಅಥವ ಮಾಡುವ ಪ್ರಯತ್ನವನ್ನೇ ಮಾಡಿಲ್ಲ. ಕೆಲವರು ಈ ಆಚರಣೆಗಳಲ್ಲಿ ‘ಆಧ್ಯಾತ್ಮಿಕ ಪ್ರತೀಕಗಳನ್ನು ಕಾಣಲು’ ಪ್ರಯತ್ನಿಸಿದ್ದಾರೆ. ಸಾಮಾನ್ಯವಾಗಿ ಇವರು ಯಾವುದೋ ಪುರಾತನ ಶಾಸ್ತ್ರಗ್ರಂಥದಲ್ಲಿ ಯಾವುದೋ ಸಂದರ್ಭದಲ್ಲಿ ಇನ್ನೇನನ್ನೋ ವಿವರಿಸಲು ಬಳಸಿದ್ದ ಸಂಸ್ಕೃತ ಉಕ್ತಿಯನ್ನು ಉದ್ಧರಣವಾಗಿ ಉಪಯೋಗಿಸಿಕೊಳ್ಳುತ್ತಾರೆ (ಕ್ವೋಟಿಂಗ್ ಔಟ್ ಆಫ್ ಕಾನ್ಟೆಕ್ಸ್ಟ್). [ಸಂಸ್ಕೃತ ಪಂಡಿತರೊಬ್ಬರು ಇದಕ್ಕೆ ನೀಡಿದ ಉದಾಹರಣೆ ಇಂತಿದೆ: ಒಂದು ಉಕ್ತಿಯ ಪೂರ್ಣಪಾಠ – ಸತ್ಯಮ್ ಬ್ರೂಯಾತ್ ಪ್ರಿಯಮ್ ಬ್ರೂಯಾತ್, ನಬ್ರೂಯಾತ್ ಸತ್ಮಪ್ರಿಯಮ್, ಪ್ರಿಯಮ್ ಚ ನಾನೃತಮ್ ಬ್ರೂಯಾತ್ ಏಷಃ ಧರ್ಮಃ ಸನಾತನಃ. ತಾತ್ಪರ್ಯ: ಇತರರಿಗೆ ಪ್ರಿಯವಾಗುವ ರೀತಿಯಲ್ಲಿ ಸತ್ಯವನ್ನು ಹೇಳು. ಇತರರಿಗೆ ಅಪ್ರಿಯವಾಗುವ ರೀತಿಯಲ್ಲಿ ಸತ್ಯವನ್ನು ಎಂದೂ ಹೇಳಬೇಡ. ಪ್ರಿಯವಾಗಬಹುದಾದ ಅಸತ್ಯವನ್ನೂ ಹೇಳಬೇಡ. ಇದೇ ಸನಾತನ ಧರ್ಮದ ಮಾರ್ಗ. ಸುಳ್ಳು ಹೇಳುವುದನ್ನು ಸಮರ್ಥಿಸಿಕೊಳ್ಳಲು ಈಗ ಅನೇಕರು ಕೊಡುವ ಕಾರಣ: ನಮ್ಮ ಶಾಸ್ತ್ರಗಳೇ ಹೇಳಿವೆ ‘ನಬ್ರೂಯಾತ್ ಸತ್ಮಪ್ರಿಯಮ್’ ಎಂದು] ಇಂಥ ವಾದಗಳು ‘ವಾದ ಮಾಡಲೇ ಬೇಕು ಎಂದು ಮಾಡುವ ವಾದಗಳಾದೀತೇ’ ವಿನಾ ವೈಜ್ಞಾನಿಕ ಪುರಾವೆಗಳಾಗುವುದಿಲ್ಲ. ‘ಅನಾದಿ ಕಾಲದಿಂದಲೂ ನಡೆದು ಬರುತ್ತಿದೆ, ಆದ್ದರಿಂದ —-’ – ಈ ವಾದ ಅಂಧಾನುಕರಣೆಯನ್ನು ಪೋಷಿಸೀತೇ ವಿನಾ ವೈಚಾರಿಕತೆಯನ್ನು ಅಲ್ಲ. ವೈಜ್ಞಾನಿಕ ವೈಚಾರಿಕತೆಯ ಅಥವ ವಿಜ್ಞಾನ ವಿಧಾನದ ನಿಕಷಕ್ಕೆ ಒರೆಹಚ್ಚದೆಯೇ ಸ್ವೀಕರಿಸಿರುವ ನಂಬಿಕೆಗಳೆಲ್ಲವೂ ಮೂಢನಂಬಿಕೆಗಳೇ ಆಗಿರುತ್ತವೆ. ಎಲ್ಲರೂ ಮಾಡುತ್ತಿದ್ದಾರೆ,ಎಷ್ಟೋ ತಲೆಮಾರುಗಳಿಂದ ಆಚರಣೆಯಲ್ಲಿದೆ ಇವೇ ಮೊದಲಾದ ಕಾರಣಗಳಿಗಾಗಿ ನಾವೂ ಆಚರಿಸುವುದು ಅಂಧಾನುಕರಣೆ. ಅಂದಮಾತ್ರಕ್ಕೆ ಮೂಢನಂಬಿಕೆಗಳೆಲ್ಲವೂ ಹಾನಿಕಾರಕಗಳು ಎಂದು ಅರ್ಥೈಸಕೂಡದು. ಅವುಗಳಲ್ಲಿ ಕೆಲವು ವೈಜ್ಞಾನಿಕ ತಪಾಸಣೆಯಲ್ಲಿ ಸರಿಯಾದವು ಎಂದು ಸಾಬೀತಾಗುವ ಸಾಧ್ಯತೆಯೂ ಇದೆ. ಈ ರೀತಿ ಸಾಬೀತು ಪಡಿಸಿದವು ‘ಮೂಢನಂಬಿಕೆ’, ‘ಅಂಧಾನುಕರಣೆ’ ಹಣೆಪಟ್ಟಿಯನ್ನು ಕಳೆದುಕೊಳ್ಳುತ್ತವೆ
ಯಾವುದೋ ಕಾಲಘಟ್ಟದಲ್ಲಿ ಏನೋ ಕಾರಣಕ್ಕಾಗಿ ಯಾರೋ ಮಾಡಿದ್ದ ಆಚರಣೆಯೊಂದು ಅವರಿಗೆ ಅಪೇಕ್ಷಿತ ಫಲ ನೀಡಿತೆಂದು (ಕಾಕತಾಳೀಯವಾಗಿ ನೀಡಿರಲೂ ಬಹುದು) ನಂಬಿ ಆ ಆಚರಣೆ ಮಾಡಿದವರೆಲ್ಲರಿಗೂ ಅದೇ ಫಲ ದೊರೆಯುತ್ತದೆಂದು ಸಾರ್ವತ್ರೀಕರಿಸುವುದು ವಿಕಸಿತ ಬುದ್ಧಿಮತ್ತೆಯ ಲಕ್ಷಣವಲ್ಲ, ವೈಜ್ಞಾನಿಕತೆಯ ಲಕ್ಷಣವೂ ಅಲ್ಲ. ನೈಸರ್ಗಿಕ ನಿಯಮಗಳ ಅರಿವಿಲ್ಲದಿರುವುದು, ಅರಿವಿದ್ದರೂ ಅತಿಮಾನುಷ ಶಕ್ತಿಯಲ್ಲಿ/’ವಿಧಿ’ಯಲ್ಲಿ/ಪವಾಡಗಳಲ್ಲಿ ಅಚಲ ವಿಶ್ವಾಸ ಇರುವುದು, ಸಾಮಾಜಿಕ ಒತ್ತಡ ಇವೇ ಮೊದಲಾದ ಕಾರಣಗಳಿಂದಾಗಿ ಆಚರಣೆ-ನಿರೀಕ್ಷಿತ ಫಲಗಳ ನಡುವೆ ತಾರ್ಕಿಕ ಸಂಬಂಧ ಇಲ್ಲದಿದ್ದರೂ ತಿಳಿದಿರುವ ಭೌತಿಕವಾದ ನೈಸರ್ಗಿಕ ಪ್ರಕ್ರಿಯೆಯಿಂದ ಉಂಟಾಗುವ ಸಂಬಂಧ ಇಲ್ಲದಿದ್ದರೂ ಕ್ರಿಯೆ-ಪರಿಣಾಮ (ಕಾಸ್-ಇಫೆಕ್ಟ್) ಸಂಬಂಧ ಕಾಣುವ ಮಾನವ ಸಹಜ ದೌರ್ಬಲ್ಯ – ಇಂಥ ಅಂಧಾನುಕರಣೆಯ ಆಚರಣೆಗಳ, ಮೂಢನಂಬಿಕೆಗಳ ಜನನಕ್ಕೆ ಕಾರಣ ಎಂಬುದು ನನ್ನ ಅಭಿಪ್ರಾಯ. ಎಲ್ಲ ಮತಗಳಲ್ಲಿಯೂ (ರಿಲಿಜನ್) ಇರುವ ಪುರೋಹಿತ ವರ್ಗ (ಪ್ರೀಸ್ಟ್ ಲೀ ಕ್ಲಾಸ್), ‘ಧರ್ಮಗುರುಗಳು’ ಎಂಬ ಹುದ್ದೆಯನ್ನೇರಿದವರು ಬಹುತೇಕ ಸನ್ನಿವೇಶಗಳಲ್ಲಿ ತಮ್ಮ ಪಟ್ಟಭದ್ರ ಹಿತಾಸಕ್ತಿಯನ್ನು ರಕ್ಷಿಸುತ್ತವೆ ಎಂಬ ಏಕೈಕ ಕಾರಣಕ್ಕಾಗಿ ಇಂಥ ಆಚರಣೆಗಳನ್ನು ನೇರವಾಗಿ (ಅವಕ್ಕೆ ಧಾರ್ಮಿಕ ಬಣ್ಣ ಬಳಿಯುವ ಮೂಲಕ) ಅಥವ ಪರೋಕ್ಷವಾಗಿ (ದಿವ್ಯಮೌನ ತಾಳುವುದರ ಮೂಲಕ) ಪೋಷಿಸಿದರು, ಪೋಷಿಸುತ್ತಲೂ ಇದ್ದಾರೆ, ಮುಂದೆಯೂ ಪೋಷಿಸುತ್ತಾರೆ ಎಂಬುದು ನನ್ನ ನಂಬಿಕೆ. ತರ್ಕಕ್ಕೆ ನಿಲುಕದ ಇಂಥ ಆಚರಣೆಗಳು ಎಲ್ಲ ಮತಗಳಲ್ಲಿಯೂ ಇರುವುದೇ ನಾನು ಈ ನಿಲುವು ತಳೆಯಲು ಕಾರಣ.
ದುರದೃಷ್ಟವಶಾತ್, ಇಂಥ ಆಚರಣೆಗಳ ಪೈಕಿ ಕೆಲವು ‘ಅಸಹ್ಯ’, ಕೆಲವು ‘ಅನಾರೋಗ್ಯಕರ’, ಕೆಲವು ‘ಅಪಾಯಕಾರಿ’, ಕೆಲವು ‘ಕ್ರೂರ’——. ಎಂದೇ, ಇವನ್ನು ತೊಡೆದುಹಾಕುವ ಪ್ರಯತ್ನಗಳು ಆಗಲೇಬೇಕು. ಮಠಾಧಿಪತಿಗಳು, ಜಾತಿ ಪದ್ಧತಿ ಪೋಷಿತ ‘ಜಗದ್ಗುರು’ಗಳು, ಪುರೋಹಿತ ವರ್ಗ ಸಂಕಲ್ಪಿಸಿದರೆ ಇದು ಅಸಾಧ್ಯವಲ್ಲ. ಎಂದೇ, ಇವರುಗಳು ‘ಮಠಾಧಿಪತಿ. ಜಗದ್ಗುರು’ ಆಗಿ ಮುಂದುವರಿಯುವುದರ ಬದಲು ನಿಜವಾದ ‘ಧರ್ಮಗುರು’ಗಳಾಗಿ ಬದಲಾಗ ಬೇಕು. [ನೋಡಿ- ದೇವರು, ಧರ್ಮ ಮತ್ತು ಮತ].
ಇವರೊಂದಿಗೆ, ಶಾಲಾ ಮಟ್ಟದಲ್ಲಿ ವೈಜ್ಞಾನಿಕ ಮಾಹಿತಿಯ ಕುರುಡು ಕುಂಟುಪಾಠಕ್ಕೆ ಒತ್ತು ನೀಡುವುದರ ಬದಲು ವೈಜ್ಞಾನಿಕತೆಯ ಬೆಳೆವಣಿಗೆಗೆ ಒತ್ತು ನೀಡಿದರೆ, ವಿಜ್ಞಾನ ವಿಧಾನದ ತರಬೇತಿಗೆ ಆದ್ಯತೆ ನೀಡಿದರೆ, ವಿಜ್ಞಾನ ಶಿಕ್ಷಕರು ತಾವೇ ಅನುಕರಣಯೋಗ್ಯ ಮಾದರಿ ಆಗಲು ಪ್ರಯತ್ನಿಸಿದರೆ ಬಲು ಒಳ್ಳೆಯದು. ತಕ್ಷಣದ ಕ್ರಮವಾಗಿ ಈಗ ಈ ಕುರಿತು ‘ಹೋರಾಡುತ್ತಿರುವ’ ಸಂಘಟನೆಗಳು ಹಾನಿಕಾರಕ ಮೂಢನಂಬಿಕೆಗಳಿಂದಾಗುವ ಹಾನಿಯನ್ನು ತಿರಸ್ಕರಿಸಲು ಸಾಧ್ಯವೇ ಇಲ್ಲದ ಸಾಕ್ಷ್ಯಾಧಾರ ಸಹಿತ ಜನಸಾಮಾನ್ಯರಿಗೆ ತಲುಪಿಸಬಲ್ಲ ಜನಾಂದೋಲನಗಳನ್ನು ಹುಟ್ಟುಹಾಕಿದರೆ ಪರಿಸ್ಥಿತಿ ಸುಧಾರಣೆ ಆದೀತು. ಕಾನೂನಿನ ಬಲದಿಂದ ಇಂಥವನ್ನು ತಾತ್ಕಾಲಿಕವಾಗಿ ಅದುಮಿ ಇಡಬಹುದೇ ವಿನಾ, ಬಹಿರಂಗವಾಗಿ ಆಚರಿಸುವದನ್ನು ತಾತ್ಕಾಲಿಕವಾಗಿ ತಡೆಯಬಹುದೇ ವಿನಾ ತೊಡೆದುಹಾಕಲು ಸಾಧ್ಯವಿಲ್ಲ ಎಂಬುದು ನನ್ನ ಅಭಿಮತ.
* * * * * * * * *
ಚಿತ್ರಕೃಪೆ : ಅಂತರ್ಜಾಲ
ಬಹಳ ಉತ್ತಮವಾದ ಲೇಖನ. ಧರ್ಮ ಗುರುಗಳು ಹಾಗೂ ಸ್ವಾಮೀಜಿಗಳು ಮೂಢ ನಂಬಿಕೆಗಳ ವಿರುದ್ಧ ಜನಜಾಗೃತಿ ಮಾಡುವ ಸಂಭವ ಇಲ್ಲ. ಒಂದು ವೇಳೆ ಸ್ವಾಮೀಜಿಗಳು ಇಂಥ ಕಾರ್ಯಕ್ಕೆ ಹೊರಟರೂ ಅವರ ಹಿಂದಿರುವ ಪಟ್ಟಭದ್ರ ಹಿತಾಸಕ್ತಿಗಳು ಇಂಥ ಪ್ರಯತ್ನಕ್ಕೆ ಬೆಂಬಲ ಕೊಡಲಾರವು. ಶಿಕ್ಷಕರು ಶಾಲೆಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ಮನಸ್ಸು ಮಾಡಿದರೆ ಪ್ರಯೋಜನ ಆಗಬಹುದು. ಅಂಥ ಶಿಕ್ಷಕರ ಕೊರತೆ ಭಾರತದಲ್ಲಿದೆ. ಹುಲಿಕಲ್ ನಟರಾಜ್ ಅವರಂಥ ಶಿಕ್ಷಕರು ಪವಾಡ ಬಯಲು ಕಾರ್ಯಕ್ರಮಗಳ ಮೂಲಕ ಮೂಢ ನಂಬಿಕೆಗಳ ವಿರುದ್ಧ ಹೋರಾಡುತ್ತಿದ್ದಾರೆ. ಇಂಥ ಶಿಕ್ಷಕರ ಅಗತ್ಯ ನಮ್ಮ ದೇಶಕ್ಕೆ ಇದೆ. ಟಿವಿ ಮಾಧ್ಯಮ ಮೂಢ ನಂಬಿಕೆಗಳ ವಿರುದ್ಧ ಜನ ಜಾಗೃತಿ ಮೂಡಿಸಲು ಮುಂದೆ ಬಂದರೆ ದೇಶದಲ್ಲಿ ಮೂಢ ನಂಬಿಕೆಗಳು ಕಡಿಮೆ ಆಗಬಹುದು. ಆದರೆ ನಮ್ಮ ಟಿವಿ ವಾಹಿನಿಗಳಿಗೆ ಆಧುನಿಕ, ಮಾನವೀಯ ನೆಲೆಗಟ್ಟಿನ ರಾಷ್ಟ್ರ ನಿರ್ಮಾಣದ ಕನಸು ಇಲ್ಲ.