ಹೇಳುವುದು ಒಂದು……
-ಅಭಿನಂದನ್
ಆದರೆ ಒಂದೊಂದ್ ಸಲ ಅದು ಕೇಳಿಸೋದೇ ಇನ್ನೊಂದು ಥರ!!
ಮೊನ್ನೆ ಟ್ರೈನಿನಲ್ಲಿ ಶಿವಮೊಗ್ಗಕ್ಕೆ ಹೋಗ್ತಾ ಇದ್ದೆ. ಮುಂಜಾನೆ ಮಂಪರು..ಯಥಾ ಪ್ರಕಾರ ಮಲಗಿದ್ದೆ.
“ಮಲ್ಗೋರ್ರಿ..ಮಲ್ಗೋರ್ರಿ….!” ಅಂತ ಕೂಗಿಕೊಂಡು ಹೋದ ನಾಸಿಕ ವಾಣಿಯೊಂದು ಮಲಗಿದ್ದ ನನ್ನನ್ನು ಎಬ್ಬಿಸಿತು. ಯಾರಪ್ಪ pirvate ಆಗಿ ಮಲ್ಗಿರೋದನ್ನ public ಮಾಡ್ತಿದಾರೆ ಅಂತ ಕಣ್ಣು ತೆಗೆದು ನೋಡಿದಾಗ ಗೊತ್ತಾಯ್ತು, ಮಲ್ಲಿಗೆ ಹೂವು ಮಾರುವವ ಅವನ ಸಂಕ್ಷಿಪ್ತ, ಕ್ಷಿಪ್ರ, ಗೌಪ್ಯ ಶೈಲಿಯಲ್ಲಿ, “ಮಲ್ಲಿಗೆ ಹೂವು ರೀ, ಮಲ್ಲಿಗೆ ಹೂವು ರೀ….” ಅಂತಿದ್ರು ಅಂತ. ಅವರ speed ಗೆ ಒದ್ದಾಡಿ ಹೋಗಿ, ಬಾಯಿಂದ ಹೊರಗೆ ಬೀಳೋ ಹೊತ್ತಿಗೆ ಅದು “ಮಲ್ಗೋರ್ರಿ” ಆಗೋಗಿತ್ತು.
ಈ ಆಸಾಮಿ ಎಷ್ಟೋ ಪರವಾಗಿಲ್ಲ. ನಮ್ಮ ಮನೆ ಹತ್ತಿರ ಹೂವು ಮಾರುವವ ಏನು ಹೇಳುತ್ತಾರೋ ಇದುವರೆಗೂ ನಂಗೆ ಗೊತ್ತಾಗಿಲ್ಲ. ಒಟ್ಟಿನಲ್ಲಿ “ನಾನು ಹೂವು ಮಾರುತ್ತಿದ್ದೀನಿ” ಅನ್ನೋದನ್ನ ಅವ ಭಾರೀ effective ಆಗಿ ವರ್ಷಗಳಿಂದ communicate ಮಾಡುತ್ತಾ ಬಂದಿದ್ದಾರೆ…ಅದೂ ಅವರದೇ ಬಾಯಿಂದ.
ಇನ್ನು ಎಳನೀರಿನ ಗತಿಯಂತೂ ಬ್ಯಾಡ್ವೇ ಬ್ಯಾಡ. “ಎನ್ನೀರ್ರು”, “ನ್ನೀರ್ರು”, “ಈರ್ರು”, “…ರ್ರು”…ಅದಕ್ಕೇ ಒಂದು ತತ್ಸಮ ತದ್ಭವ ಗ್ರಂಥ ಬರೀಬೋದೇನೋ.
ಬಸ್ಸಿನಲ್ಲಿ ಕಂಡಕ್ಟರ್ರು “ಓಲ್ಡೈನ್” ಅಂತಿದ್ದಿದ್ದು ನನಗೆ ಚಿಕ್ಕಂದಿನಲ್ಲಿ ಸುಮಾರು ವರ್ಷಗಳ ಕಾಲ ತಲೆ ಕೆಡೆಸಿತ್ತು, ಅದ್ಯಾವ ಭಾಷೆಯಲ್ಲಿ ಅದರ ಅರ್ಥ ಎನು ಅಂತ. ಯಾರೋ ಪುಣ್ಯಾತ್ಮೆ sophisticated ಅಜ್ಜಿ ಒಂದು ದಿನ ಸ್ಟಾಪಿನಲ್ಲಿ ನಿಲ್ಲಿಸದೆ ಮುಂದೆ ಹೋಗುತ್ತಿದ್ದ ಬಸ್ಸಿನಿಂದ ಇಳೀಬೇಕಾದ್ರೆ ದಯನೀಯವಾಗಿ “HOLD ON PLEASE” ಅಂತ ಕೂಗಿದಾಗ್ಲೇ ಗೊತ್ತಾಗಿದ್ದು , ಓಲ್ಡೈನ್ ಎಲ್ಲಿಂದ ದಾರಿ ತಪ್ಪಿ ಬಂತು ಅಂತ.
ರೈಲು, ಬಸ್ಸು ಸ್ಟೇಷನ್ನುಗಳಲ್ಲಿ ಇಡ್ಲೀನ ಹೇಗೆಲ್ಲಾ ಚಿತ್ರಾನ್ನ ಮಾಡಲ್ಲ. “ಯಾರ್ರೀಡ್ಲಿ?”, “ಯಾರ್ಗಿಡ್ಲಿ?”, “ಎಲ್ರೀಡ್ಲಿ?”…
ಅಮೇರಿಕ ಕಡೆ ವಿಮಾನಗಳಲ್ಲಂತೂ orange juice ಅಂದ್ರೆ ಅರ್ಥ ಆಗದೆ ಇರೋ ಅಷ್ಟರ ಮಟ್ಟಿಗೆ ಅದು “onjuce” ಆಗೋಗಿದೆ.
ನನಗೆ ಪಿ ಯು ನಲ್ಲಿ physics ಹೇಳಿಕೊಟ್ಟ ಮೇಷ್ಟರಿಗೆ ತಮ್ಮ ಮಾತಿನ ವೇಗ, ಶೈಲಿ ಬಗ್ಗೆ ಎಷ್ಟು ನಂಬಿಕೆಯಿತ್ತು ಅಂದ್ರೆ, ಅವರು ತಮ್ಮ ಮೊದಲನೆ ಕ್ಲಾಸಿನಲ್ಲಿ, ಅವರ ಹೆಸರನ್ನು boardನ ಮೇಲೆ ಬರೆದು…”This is my name…” ಅಂದಿದ್ರು. ಆಮೇಲೆ ಅವರು ಅವರ ಹೆಸರಿನ ಒಂದೊಂದೇ ಶಬ್ದಾನ, ನಿಧಾನವಾಗಿ ಹೇಳುತ್ತ, “….and this is how you will call it” ಅಂದಿದ್ರು. ಅವರು ಹಾಗೆ ಮಾಡಿಲ್ಲದೆ ಹೋಗಿದ್ದಿದ್ರೆ ಅವರ ಹೆಸರನ್ನು ಅವರ ಬಾಯಿಂದ, ನಂತರ ನಮ್ಮಗಳ ಬಾಯಿಂದ ಹೇಗೆಲ್ಲಾ ಕೇಳಿಸಿಕೊಳ್ಳಬೇಕಾಗಬಹುದೆಂಬ ನಿಖರ idea ಅವರಿಗಿದ್ದಂತಿತ್ತು. Experience you see!!!
ಇನ್ನು chemistry ಮಾಸ್ತರರು “tthaaalpy” ಅಂದಾಗ ಅವ್ರು ಏನು ಹೇಳ್ತಿದಾರೆ ಅಂತ ನಾವೆಲ್ಲ ಮುಖ ಮುಖ ನೋಡಿಕೊಂಡಿದ್ದು ಹೇಗೆ ಮರೆಯೋದು. ಮನುಷ್ಯ, boardನ ಮೇಲೆ ಬರೀತಿರ್ಲಿಲ್ಲ ಬೇರೆ. Spelling ಕೇಳಕ್ಕೆ ನಮಗೆ ನಾಚಿಕೆ. ಅವ್ರು “enthalpy” ಅಂತ ಹೇಳ್ತಿದಾರೆ ಅಂತ ಮನೆಗೆ ಹೋಗಿ text bookನಲ್ಲಿ ನೋಡಿದಾಗ್ಲೇ ನಮಗೆ ಗೊತ್ತಾಗಿದ್ದು. ಅದಕ್ಕೇ ಅನ್ನಿ 15 ವರ್ಷ ಆದ್ಮೇಲೂ “tthaalpy” ನನ್ನ ತಲೇನಲ್ಲಿ stamp ಹೊಡ್ಕೊಂಡು ಕೂತಿರೋದು. ಇನ್ನು ಅವರ ತಂದೆ ಕೂಡ ನಮಗೆ ಪಾಠ ಮಾಡ್ತಿದ್ರು. (I mean, the his biological father). ಅವರು “azimuthal quantum number” ಅಂತ ನಮಗೆ ಹೇಳಿಕೊಟ್ಟಾಗ..”ಅದ್ರಜ್ಜಿ ಯಾವ್ ಭಾಸೆ ಸಿವ ಇದು!!” ಅನ್ನಂಗಾಗಿತ್ತು.
ಅಜ್ಜಿ ಅಂತಿದ್ದಂಗೆ ನೆನಪಿಗೆ ಬರತ್ತೆ. ಒಂದಿನ ನಮ್ಮಜ್ಜಿ ಜೊತೆ ನಾನು, ನನ್ನ ತಂಗಿ ಕಾಡು ಹರಟೆ ಹೊಡೀತಿದ್ವಿ. ನೀವು ಎಲ್ಲೀವರೆಗೂ ಓದಿದ್ದೀರಿ ಅಂತ ನಾವು ಕೇಳಿದ್ದಕ್ಕೆ ಅವರು ಹೇಳಿದ್ದು ನಮಗೆ “ನಾನು LSಬೀನು ಗೊತ್ತಾ?” ಅಂತ ಕೇಳಿಸಿತು. ಏನಪ್ಪಾ ಇದು..ನಮ್ಮಜ್ಜಿ ಇಷ್ಟು ವರ್ಷ ಆದ್ಮೇಲೇ ಅವರ flashbackನ ಬಗ್ಗೆ ಇಷ್ಟು forwardಆಗಿ ಮಾತಾಡ್ತಾರೆ ಅಂತ ಅನ್ನುಸ್ತು. “ಹಾಂ? ಏನಂದೆ?” ಅಂತ ಕೇಳಿದ್ದಕ್ಕೆ, ಒಂದೆರಡು ಸಾರಿ ಅವರು ನಿಧಾನವಾಗಿ ಹೇಳಿದ ಮೇಲೆ ತಿಳಿದಿದ್ದು..ಅವರು ಹೇಳ್ತಿದ್ದಿದ್ದು, “LS ಫೇಲು” ಅಂತ. ಅಂದ್ರೆ lower secondary fail ಅಂತ!! ಯಪ್ಪಾ ಶೆಕೆ!!
ಇನ್ನು ಸಿನೆಮಾ ಹಾಡುಗಳಿಗೇನು ಕಡಿಮೆ.
ಚೈತ್ರದ ಪ್ರೇಮಾಂಜಲಿ ಸಿನೆಮಾದಲ್ಲಿ ಬರೋ “ಓ……ಕೋಗಿಲೆ” ಹಾಡಿನಲ್ಲಿ “ಭೂತಾಯಮ್ಮನಾ.. ಕೈಗೂಸಮ್ಮನಾ..” ಲೈನಂತೂ ನನ್ನ ಕನ್ನಡತನಕ್ಕೇ ಸವಾಲು ಹಾಕಿತ್ತು. ಎಸ್ಪಿಬಿ ಹಾಡ್ತಿರೋ “ಕೈಗೂ-ಸಮ್ಮನ” ಅಂದ್ರೆ ಏನಪ್ಪ ಅಂತ ಸುಮಾರು ಸಲ ಯೋಚಿಸಿದ್ದೆ. ಆ ಲೈನಿನ ಅರ್ಥ “ಭೂತಾಯಮ್ಮನ ಕೈಗೂ ಸಮ್ಮಾನ” ಅನ್ನೋ ಒಂದು wierd self made logical opinionಗೆ ಬಂದಿದ್ದೆ. ಆಮೇಲೆ ಸುಮಾರು ವರ್ಷಗಳಾದ ಮೇಲೆ ನನ್ನ ಗೆಳೆಯನೊಬ್ಬನ್ನ ಕೇಳೇಬಿಟ್ಟೆ. “ಏನು ಸಿಸ್ಯ ಕೈಗೂ-ಸಮ್ಮನ ಅಂದ್ರೆ?” ಅಂತ. “ಥೂ ನನ್ ಮಗನೆ..ಅದು –ಕೈ+ ಕೂಸು+ಅಮ್ಮ+ನಾ–ಅಂತ ಕಣೋ ಗುಗ್ಗು” ಅಂತ ಸಂಧಿ-ಸಮಾಸಗಳನ್ನ ಉಪಯೋಗಿಸಿ ಹೇಳಿದಾಗ, “ಓ……ಹಂಗಾ!!” ಅಂತ ಹುಸ್ಸಪ್ಪ ಅಂದಿದ್ದೆ.
ಈ ಥರದ್ದು ಇನ್ನೂ ಸುಮಾರು ಅಪಾರ್ಥಗಳಿವೆ…ಕೇಳೋ ನಮ್ ಕಿವಿ ಸ್ವಲ್ಪ ಕಷ್ಟ ಪಟ್ರೆ, ಅಥವಾ ಪಡದೇ ಇದ್ರೆ…ಏನೆಲ್ಲಾ ಕೇಳ್ಸ್ಕೋಬೋದು ನೋಡಿ.
* * * * * * * *
ಚಿತ್ರಕೃಪೆ : ಅಂತರ್ಜಾಲ
bombaataagide
ಚೆನ್ನಾಗಿದೆ,
ಇದನ್ನ ನೋಡಿದ್ಮೇಲೆ ನನ್ನ ರಸಾಯನಶಾಸ್ತ್ರ ಉಪನ್ಯಾಸಕರು ಒಮ್ಮೆ ನೆನಪಿನಲ್ಲಿ ಇಣುಕಿ ಹೋದರು ಅವರೂ ಹೀಗೆ… ಪಾಠ ಮಾಡುವುದು ಅತಿವೇಗ ….. ಒಮ್ಮೆ ತರಗತಿಯಲ್ಲಿ ಪಾಠಮಾಡುತ್ತಾ …. occudtion ಮತ್ತೆ didration ಅಂತ ಹೇಳಿದ್ರು … ಅದು ಏನು ಅಂತ ಅರ್ಥವಾಗೋಕೆ ೨ ದಿನ ಬೇಕಾಯ್ತು .. ಅಮೇಲೆ ತಿಳಿದದ್ದು ಅದು oxidation and dehydration ಅಂತ ….
ನನ್ನ ಗೆಳೆಯನೊಬ್ಬನಿಗೆ ನೆನಪಿಗೆ ಬಂದದ್ದು….
“ನಮ್ ಸ್ಕೂಲ್ ಅಲ್ಲಿ ಒಂದು ಪದ ಜಾರಿ ಇತ್ತು….
ಯಾರ್ದಾರ ಸಾಮಾನು ಕಳೆದು ಹೋಗಿದ್ರೆ ‘ಕೊಯ ಪಿಯ’ section ಅಲ್ಲಿ ಹೋಗಿ ನೋಡಬೇಕಿತ್ತು…
ನಾನು ಸ್ಕೂಲ್ ಬಿಟ್ಟು ಸುಮಾರು ವರ್ಷಗಳಾದ್ಮೇಲೆ ನನಗೆ ಅರ್ಥ ಆಯ್ತು (decode ಮಾಡ್ದೆ) ….’ಕೊಯ ಪಿಯ’ ಅಂದ್ರೆ खोया-पाया (lost and found) ಅಂತ!”
ಸತ್ಯಕ್ಕೆ ಹಿಡಿದ ಕನ್ನಡಿ, ತು೦ಬ ಚೆನ್ನಾಗಿದೆ