ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 20, 2011

3

ಆಧುನಿಕ ವಿಕ್ರಮಾದಿತ್ಯ, ಬೇತಾಳನೂ ಮತ್ತು ಕುರುನಾಡ ಉಳಿಸಿ ವೇದಿಕೆಯ ವ್ಯಥೆಯೂ…

‍ನಿಲುಮೆ ಮೂಲಕ

-ಸಾತ್ವಿಕ್ ಎನ್ ವಿ

ಎಂದಿನಂತೆ ಬೇತಾಳವು ಲೇಡಿಸ್ ಹಾಸ್ಟೆಲ್ ಎದುರಿಗಿನ ಹುಣಸೆ ಮರದ ತನ್ನ ಕೊಂಬೆಯ ಮೇಲೆ ನೇತಾಡುತ್ತಿತ್ತು. ರಸ್ತೆ ಅಗಲೀಕರಣವಾಗುವಾಗ  ತನ್ನ ಮರಕ್ಕೂ ಎಲ್ಲಿ ಕೊಡಲಿ ಬೀಳುತ್ತದೋ ಎಂಬ ಭಯ ಇದ್ದುದರಿಂದ ತರಗತಿಯಲ್ಲಿರುವ ಸಭ್ಯ ವಿದ್ಯಾರ್ಥಿಯಂತೆ ಒಂದೇ ಕಣ್ಣಿನಲ್ಲಿ ನಿದ್ದೆ ಮಾಡುತ್ತಿತ್ತು. ಇಂಥ ಸ್ಥಿತಿಯಲ್ಲಿ ವೋಟರ್ ಐಡಿಯಲ್ಲಿರುವ ಫೋಟೋದಂತೆ ಮುಖ ಮಾಡಿಕೊಂಡು ವಿಕ್ರಮರಾಜನು ಬೇತಾಳವನ್ನು ಸೆಳೆದುಕೊಂಡು ಹೋಗಲು ಧಾವಿಸಿದನು. ಆಗ ಬೇತಾಳವು ‘ನಿನಗಂತೂ ಕೆಲಸವಿಲ್ಲ. ಪದೇಪದೇ ಬಂದು ನನ್ನನ್ನು ಹೊತ್ತುಕೊಂಡು ಹೋಗುತ್ತಿಯಾ. ಆದರೆ ಒಮ್ಮೆಯೂ ನೀನು ನಿನ್ನ ಕೆಲಸದಲ್ಲಿ ಉತ್ತೀರ್ಣನಾಗಿಲ್ಲ. ಇದೆಲ್ಲ ನೋಡಿದರೆ ಮುಂದಿನ ಜನ್ಮದಲ್ಲಿ ನೀನು ಎಂಜಿನಿಯರಿಂಗ್ ವಿದ್ಯಾರ್ಥಿಯಾಗುವ ಎಲ್ಲ ಅರ್ಹತೆಗಳಿವೆ’ ಎಂದಿತು.

ಇದೆಲ್ಲವನ್ನೂ ತಲೆಗೆ ತೆಗೆದುಕೊಳ್ಳದ ವಿಕ್ರಮನು, ಮುಂದೆ ಮಕ್ಕಳು ತಮ್ಮನ್ನು ನೋಡಿಕೊಳ್ಳುತ್ತಾರೆ ಎಂಬ ಭರವಸೆ ಇಲ್ಲದಿದ್ದರೂ ಮಕ್ಕಳಿಗೆ ಒಳಿತನ್ನೇ ಬಯಸುವ ಪಾಪದ ತಂದೆತಾಯಿಗಳ ಹಾಗೆ ತನ್ನಷ್ಟಕ್ಕೆ ತನ್ನ ಕಾರ್ಯದಲ್ಲಿ ನಿರತನಾದನು. ಇವನ ಹಸುತನವನ್ನು ಗಮನಿಸಿದ ಬೇತಾಳದ ಮನಸ್ಸು ಕರಗಿ ವಿಕ್ರಮನೇ, ನಿನ್ನ ಕಾರ್ಯಶ್ರದ್ಧೆಯನ್ನು ಮೆಚ್ಚಿದ್ದೇನೆ. ಪದೇ ಪದೇ ವಿಫಲನಾದರೂ ಸ್ವಮೇಕ್ ಚಿತ್ರವನ್ನೇ ಮಾಡುವ ಕನ್ನಡ ನಿರ್ದೇಶಕನಂಥ ನಿನ್ನ ಅಚಲ ನಿರ್ಧಾರವನ್ನು ಗೌರವಿಸುತ್ತೇನೆ. ದಾರಿ ಸವೆಯಲಿ ಎಂದು ಕಥೆಯೊಂದನ್ನು ಹೇಳುತ್ತೇನೆ ಎಂದು ಹೇಳಿ ವಿಕ್ರಮನ ಅನುಮತಿಯನ್ನೂ ಕಾಯದೇ ಕಥೆಯೊಂದನ್ನು ಹೇಳಲು ಪ್ರಾರಂಭಿಸಿತು.

ಮುಂದಕಾಲತ್ತಿಲ್ ಭರತಖಂಡ ಎಂಬ ದೇಶ. ಆ ಜಂಬೂ ದ್ವೀಪದ ದಕ್ಷಿಣ ಭಾಗಕ್ಕೆ ಕುರುನಾಡು ಎಂಬ ರಾಜ್ಯವಿತ್ತು. ಇಲ್ಲಿನ ಜನರು ಸ್ವಲ್ಪ ಜಾಸ್ತಿ ಎನಿಸುವಷ್ಟು ಸಾಧುಗಳು. ಕರೆಯುವ ಹಸುವಿರುವಾಗ ಚೆಂಬು ತರುವವರಿಗೆ ಏನು ಬರ? ಅಕ್ಕಪಕ್ಕದ ರಾಜ್ಯಗಳ ಜನರೆಲ್ಲ ಇಲ್ಲಿಗೆ ಬಂದು ನೆಲೆಸಲು ಆರಂಭ ಮಾಡಿದರು. ಕಿಟ್ಟಪ್ಪ ಎಂಬುವನು ಮುಖ್ಯಮಂತ್ರಿ ಆಗಿರುವಾಗ ವಿದೇಶಿ ಉದ್ದಿಮೆಗಳನ್ನು ಕುರುನಾಡಿನ ರಾಜಧಾನಿ ತಂಗಳೂರಿಗೆ ತಂದನು. ಕುರುನಾಡಿನ ಜನ ಇನ್ನೇನು ತಮ್ಮ ತಂಗಳೂರು ಸಿಂಗಾಪುರವೇ ಆಗಿ ಹೋಗುತ್ತೆ ನಾವೆಲ್ಲ ಬಸ್ಸಿನ ಬದಲಿಗೆ ವಿಮಾನದಲ್ಲೇ ಓಡಾಡಬಹುದು ಎಂದು ಭಾವಿಸಿದರು. ಆದರೆ ತಾನೊಂದು ಬಗೆದರೆ ವಿಧಿ ಇನ್ನೊಂದು ಬಗೆಯುತ್ತಂತೆ. ಅಕ್ಕಪಕ್ಕದ ರಾಜ್ಯಗಳ ಜನ ಇಲ್ಲಿಗೆ ಟ್ರಂಕ್, ಚಾಪೆ, ಚೆಂಬುಗಳ ಸಹಿತ ದಿನಪ್ರತಿ ಇಳಿಯತೊಡಗಿದೆರು. ಕಿಟ್ಟಪ್ಪನ ಪ್ಲ್ಯಾನ್ ಫ್ಲಾಪ್ ಆಗಿ ಕುರುನಾಡಿನ ಜನರಿಗೆ ಬಿಟ್ಟಿ ಚಾಕರಿ ಬಿಟ್ಟು ಬೇರೇನೂ ಸಿಗಲಿಲ್ಲ. ಬಂದ ಜನ ಒಂದಾದರು ಅಂದ್ರೆ, ತಮ್ಮದೇ ತಮ್ಮೂರಿನ ಭಾಷೆ, ಸಂಸ್ಕೃತಿಗಳನ್ನು ಹೆಚ್ಚಿಸತೊಡಗಿದರು. ಇಲ್ಲಿ ಖಾಲಿ ಇರುವ ಕೆಲಸಕ್ಕೆ ತಮ್ಮ ಊರಿನಿಂದ ಅಣ್ಣ, ಅತ್ತಿಗೆ, ಹೆಂಡತಿ, ಬಾಮೈದುನ ಮತ್ತು ’ಅವಳನ್ನು’ ಕರೆಸತೊಡಗಿದರು. ಕಡೆಕಡೆಗೆ ಕುರುನಾಡಿನ ವೀರನಿಗೆ ಕಕ್ಕಸ್ಸು ತೊಳೆಯುವ ಕೆಲಸಕ್ಕೂ ಬರಗಾಲ ಬಂದಿತು.

ಕುರುನಾಡ ಜನರ ತೆರಿಗೆ ಹಣ, ನೆಲ, ನೀರು, ವಿದ್ಯುತ್ ಎಲ್ಲವನ್ನೂ ಬಳಸಿಕೊಂಡು ಅವರಿಗೆ ಮೂರುನಾಮ ಎಳೆದುಬಿಟ್ಟರು. ಕೆಲವರು ಭೂಮಿಗಳ್ಳತನ ಮಾಡಿ ಕುರುನಾಡಿಗನನ್ನು ಕಾರಂತರ ’ಚೋಮ’ನನ್ನಾಗಿ ಮಾಡಿದರು. ಉತ್ತರ ಭಾಷೆಯಾಡುವವರು ಮನೆಕಟ್ಟಿಕೊಡುತ್ತಾ ಕುರುನಾಡ ಕಾರ್ಮಿಕರ ಕೈಗೆ ತಂಬಿಗೆ ಕೊಡತೊಡಗಿದರು. ಕುರುನಾಡಿಗರ ಮಧ್ಯೆಯೇ ಹುಳಿಹಿಂಡಿ ತಮ್ಮ ಕೆಲಸವನ್ನು ನಯವಾಗಿ ಮಾಡಿಕೊಳ್ಳುವ  ’ಮನೆಹಾಳರ’ ಕೈ ಕಟ್ಟುವವರು ಯಾರು ಇರಲಿಲ್ಲ.

ಇಂಥ ಪರಿಸ್ಥಿತಿ ಇರುವಾಗ ಹುಟ್ಟಿಕೊಂಡದ್ದೇ ಕುರುನಾಡ ಉಳಿಸಿ ಎಂಬ ವೇದಿಕೆ. ಹುಟ್ಟಿಕೊಂಡ ತಕ್ಷಣವೇ ಇಲ್ಲಿಯವರಗೆ ಸೋತಿದ್ದ ಜನ, ಸಾಗರದ ರೀತಿಯಲ್ಲಿ ಬೆಂಬಲಿಸತೊಡಗಿದರು. ಕುರುನಾಡ ಉಳಿಸಿ ವೇದಿಕೆಯು ಕುರುನಾಡಿಗರ ಆಶೋತ್ತರಗಳಿಗೆ ಸ್ಪಂದಿಸತೊಡಗಿತು. ಸಾಕಷ್ಟು ಸಮಯದಿಂದ ಬಗೆಹರಿಯದ ಸಮಸ್ಯೆಗಳನ್ನು ತನ್ನ ಎಲ್ಲ ’ಬಲಗಳನ್ನು’ ಪ್ರಯೋಗಿಸಿ ಬಗೆಹರಿಸಿತು. ದಿನೇದಿನೇ ಈ ವೇದಿಕೆಯ ಖ್ಯಾತಿ ಹೆಚ್ಚತೊಡಗಿತು. ಕುರುನಾಡಿಗರಲ್ಲೂ ತಮ್ಮ ಬಗ್ಗೆ ನಂಬಿಕೆ ಮೂಡತೊಡತೊಡಗಿತು. ದೌರ್ಜನ್ಯವನ್ನು ಸಹಿಸಿದ್ದ ಜನ ತಮಗೂ ಮಾತಾಡಲು ಬರುತ್ತದೆ ಎನ್ನುವುದನ್ನು ತೋರಿಸತೊಡಗಿದರು.

ಇಂತಿಪ್ಪ ಕಾಲದಲ್ಲಿ ಏಕಾಏಕಿ ಈ ಕುರುನಾಡ ಉಳಿಸಿ ವೇದಿಕೆಯು ಪದಾಧಿಕಾರಿಗಳ ವೈಮನಸ್ಸಿನಿಂದ ಹೋಳಾಗತೊಡಗಿತು. ಜನರು ಈ ಸಂಸ್ಥೆಯ ಬಗ್ಗೆ ಉದಾಸೀನದ ಮಾತುಗಳನ್ನು ಆಡತೊಡಗಿದರು. ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ಪಕ್ಕದ ಮನೆಯ ಜನರು ಕುರುನಾಡಿನಲ್ಲಿ ಸಿಕ್ಕಿದನ್ನು ರಾಜರೋಷವಾಗಿ ದೋಚತೊಡಗಿದರು ಎಂದು ಹೇಳಿ ಬೇತಾಳವು ನಿಟ್ಟುಸಿರು ಬಿಟ್ಟಿತು.

‘ಎಲೈ ದೊರೆಯೇ, ನೀನು ಸಮಸ್ಯೆಗಳನ್ನು ಪರಮ್ ಕಂಪ್ಯೂಟರ್‌ನಷ್ಟೇ ವೇಗವಾಗಿ ಬಗೆಹರಿಸಬಲ್ಲವನು ಎಂಬುದನ್ನು ಕೇಳಿಬಲ್ಲೆ. ಆದುದರಿಂದ ಈ ಪ್ರಶ್ನೆಗಳಿಗೆ ಉತ್ತರ ಹೇಳು. ಯಾಕೆ ಕುರುನಾಡಿನ ಜನ ತುಂಬಾ ಸಂಭಾವಿತರ ಹಾಗೆ ಫೋಸ್ ಕೊಡುತ್ತಾ ತಮ್ಮ ಮೂಲಕ್ಕೆ ಅಪಾಯವನ್ನು ತಂದು ಕೊಳ್ಳುತ್ತಿದ್ದಾರೆ? ಕುರುನಾಡಿನ ಹಿತರಕ್ಷಣೆಗೆ ಎಂದು ಹುಟ್ಟಿಕೊಂಡ ಸಂಸ್ಥೆಯೂ ಯಾಕೆ ಹೋಳಾಯಿತು? ಈ ಎರಡು ಪ್ರಶ್ನೆಗಳಿಗೆ ಉತ್ತರ ಹೇಳು. ಇಲ್ಲವಾದರೆ ನಿನ್ನ ತಲೆಯನ್ನು ಕಿತ್ತು ನಗ್ನದೇಹದ ಚಿತ್ರದೊಂದಿಗೆ ಅಂಟಿಸಿ ಫೇಸ್ಬುಕ್‌ನಲ್ಲಿ ಪ್ರಕಟಿಸಿಬಿಡುವೆ ಎಂದು ವೈಟ್‌ಮೇಲ್ ಮಾಡಿತು.

ಅದಕ್ಕೆ ಸೋತುಸುಣ್ಣವಾದ ಭಾರತೀಯ ಕ್ರಿಕೆಟ್ ತಂಡದ ನಾಯಕನ ಸ್ಟೈಲಿನಲ್ಲಿ ಉತ್ತರಿಸಿದ ವಿಕ್ರಮನು ’ಅಯ್ಯಾ ಬೇತಾಳವೇ, ನೀನು ನನ್ನ ಬೆನ್ನು ಬಿಟ್ಟ ದಿನ ಕುರುನಾಡಿನ ಜನಕ್ಕೆ ನೆಮ್ಮದಿ ಸಿಗಬಹುದು. ಯಾಕೆಂದರೆ ನೀನು ೨೦ ಮಾರ್ಕಿನ ಪ್ರಶ್ನೆ ಕೇಳಿರುವೆ. ನಾನು ಒಂದು ಅಂಕದ ಪ್ರಶ್ನೆಯಾಗಿ ಉತ್ತರಿಸುವೆ. ಇದಕ್ಕೆಲ್ಲ ಕಾರಣ ಸ್ವಾರ್ಥ. ಕುರುನಾಡಿನ ಜನ ಎಂದೂ ಸಮುದಾಯವಾಗಿ ಬದುಕಿದವರೇ ಅಲ್ಲ. ಬೇರೆ ಬೇರೆ ರಾಜ್ಯಗಳ ಜೊತೆ ಇದ್ದು ಅಧೀನ ಭಾವ ಪ್ರಾಪ್ತಿಯಾಗಿದೆ. ಅದು ಹೋಗದ ಹೊರತು ಸ್ವಾಭಿಮಾನ ದುರ್ಲಭ. ಅದು ಬಾರದೇ ಇನ್ನು ಪ್ರಶ್ನಿಸುವ ಮನಸ್ಥಿತಿ ಎಲ್ಲಿಯದು? ಎಂದನು. ’ಬೇತಾಳವೇ, ಮುಖ್ಯಮಂತ್ರಿ ಕಿಟ್ಟಪ್ಪನು ವಿದೇಶಿ ಕಂಪೆನಿಗಳನ್ನು ತರುವಾಗ ಆತನಿಗೆ ಬಡವರ ಸ್ಥಿತಿ ಏನಾಗಬಹುದು? ಇದರ ಆದಾಯ ನನ್ನ ಜನರಿಗೆ ಸಿಗುವುದಾ ಎಂಬ ಸಣ್ಣ ಯೋಚನೆಯೂ ಆತನ ತಲೆಯಲ್ಲಿ ಬಂದಿರಲಿಕ್ಕಿಲ್ಲ. ಅದರ ಫಲ ಇದೆಲ್ಲ’ ಎಂದನು. ಮುಂದುವರೆದು ’ನೀನು ಕೇಳಿದ ಎರಡನೆಯ ಪ್ರಶ್ನೆಗೂ ಇದೇ ಉತ್ತರ. ಯಾವುದೇ ಸಂಸ್ಥೆ ಹುಟ್ಟುವಾಗ ಅಲ್ಲಿ ಮೌಲ್ಯಗಳಿರುತ್ತವೆ. ಆಶಯಗಳಿರುತ್ತವೆ. ಆದರೆ ಒಮ್ಮೆ ಹಣ ಅಥವಾ ಅಧಿಕಾರದ ಲಾಲಸೆ ಜೊತೆಗೆ ಜಾತಿಯ ಸೋಂಕು ಹಿಡಿಯಿತೋ ಒಂದು ವೇಳೆ ನಿನ್ನ ಹಿಡಿತದಿಂದ ಬೇಕಾದರೂ ಬಿಡಿಸಿಕೊಳ್ಳಬಹುದು ಆದರೆ ಅವುಗಳಿಂದ ಅಲ್ಲ. ಇದು ಕುರುನಾಡಿನ ದುಸ್ಥಿತಿಗೆ ಕಾರಣ ಎಂದನು.

ವಿಕ್ರಮರಾಜನು ಮೌನ ಮುರಿದ್ದದ್ದೇ ತಡ, ವೋಟ್ ಪಡೆದು ಕನ್ನಡಿಗರ ಹಿತ ಮರೆಯುವ ಕೇಂದ್ರ ಮಂತ್ರಿಗಳಂತೆ ಮಾಯವಾಗಿ ತನ್ನ ಲೇಡಿಸ್ ಹಾಸ್ಟೆಲ್ ಎದುರಿಗಿನ ಹುಣಸೆ ಮರದ ಉಳಿದ ಕೊಂಬೆಗಳಿಗಾಗಿ ಹುಡುಕತೊಡಗಿತು.

*****************

ಚಿತ್ರಕೃಪೆ:sarvotam.com

3 ಟಿಪ್ಪಣಿಗಳು Post a comment
 1. Nithin Kanoji
  ಜನ 6 2012

  Good One………….

  ಉತ್ತರ
 2. Jagan ramesh
  ಜೂನ್ 4 2012

  ದೇಶ ಆಳ್ತೀನಿ ಅಂತ ಎಲೆಕ್ಷನ್ ಗೆ ನಿಂತು ಗೆದ್ದಮೇಲೆ ದೇಶ ಹಾಳು ಮಾಡೋ ನಮ್ ನಾ(ಲಾ)ಯಕರು., ಸದಾ ಎಸಿ ಕಾರ್ ನಲ್ಲಿ ತಿರುಗಾಡ್ತಾ, ಎಸಿ ರೂಂ ನಲ್ಲೆ ಕೂರೋರು, ಎಲೆಕ್ಷನ್ ಬರ್ತಿದ್ದ ಹಾಗೇ ವೋಟು ಗಿಟ್ಟಿಸೋ ಸಲುವಾಗಿ ದೊಡ್ಡವರ ಕಾಲಿಗೆ ಬಿದ್ದು, ಚಿಕ್ಕವರಿಗೂ ಕೈ ಎತ್ತಿ ಮುಗಿಯುತ್ತಾ ವೈಟ್ ಅಂಡ್ ವೈಟ್ ನಲ್ಲಿ ಪಾದಯಾತ್ರೆ ಮಾಡೋ ನಮ್ಮ ಸೋ ಕಾಲ್ಡ್ ಪೊಲಿಟಿಶಿಯನ್ಸ್., ಜಾತಿ ಹೆಸರಲ್ಲಿ ರಾಜಕಾರಣ ಮಾಡೋ ಅವರು ಸರಿ ಇಲ್ವಾ..? ಅಥವಾ ಅವನು ಒಳ್ಳೆಯವನಾ., ಕೆಟ್ಟವನಾ ಅನ್ನೋದನ್ನೂ ನೋಡದೆ, ಕೇವಲ ಅವನು ತಮ್ಮ ಜಾತಿಯವನು ಅಂತ ನೋಡಿ ವೋಟು ಹಾಕಿ ಆಮೇಲೆ ಕಣ್ಣು ಬಾಯಿ ಬಿಟ್ಟು ನೋಡುವ ನಮ್ಮ ವೋಟರ್ಸ್ ಸರಿ ಇಲ್ವಾ..? ದೇವರಾಣೆಗೂ ಗೊತ್ತಾಗ್ತಿಲ್ಲ.. ನೋಟಿನ ಆಸೆ ತೋರ್ಸಿ ವೋಟು ಹಾಕಿಸ್ಕೊಂಡು, ಸೀಟ್ ಮೇಲೆ ಕೂತ್ಕೊಂಡ್ಮೇಲೆ ಮನೆ ಗೇಟ್ ಒಳಗೂ ಬಿಟ್ಟುಕೊಳ್ಳದ ನಮ್ಮ ಗ್ರೇಟ್ ರಾಜಕಾರಣಿಗಳು ಬುದ್ಧಿವಂತರ..? ಇಲ್ಲ ನಮ್ ಜನರೇ ದಡ್ದರಾ..??

  ಹ ಹ ಹಾ.. ಇದು ಆ ಬೆತಾಳನಿಗೆ ನಾ ಕೇಳ್ತಿರೋ ಪ್ರಶ್ನೆ…:P ಈ ಪ್ರಶ್ನೆಗೆ ಉತ್ತರ ಹೇಳದೇ ಹೋದರೆ ವಿಕ್ರಮನ ಹೆಗಲೇರೋ ಆ ಬೇತಾಳನ ಹೆಗಲೇರೋಕೆ ಒಂದು ಹೆಣ್ಣು ಬೆತಾಳವನ್ನ ಕಳಿಸಬೇಕಾಗುತ್ತೆ..;)

  ಏನಾದ್ರೂ ಇರ್ಲಿ., ಇಲ್ಲಿ ತಪ್ಪು ಎಲ್ಲ ಕಡೆ ಇಂದಲೂ ಇವೆ, ಕಟುಕನೊಬ್ಬ ಸಾಧು ಪ್ರಾಣಿ ಅಂತ ಹೇಳಿ ಕುರಿಯನ್ನ ಕಡಿಯೋಕೆ ಹೋಗ್ತಾನೆ ಹೊರತು, ಹುಲಿಯನ್ನಲ್ಲ…. ಇದು ಕಟುಕನ ತಪ್ಪಾ..? ಸಾಧುವಾದ ಕುರಿಯ ತಪ್ಪಾ…??
  ಕನ್ನಡ, ಕರ್ನಾಟಕಕ್ಕೆ ಎಂದಿಗೂ ಕನ್ನಡಿಗರೇ ಶತ್ರುಗಳು….

  ಉತ್ತರ
 3. M Maravanthe
  ಜೂನ್ 4 2012

  ಕೊಟ್ಟಿರುವ ಉಪಮೆಗಳು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತೆ.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments