ರಾಮುಲು ಗೆಲುವು ಬಿಜೆಪಿಗೆ ದಿಗಿಲು
ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ (ಈ ಹಿಂದೆ ಕುರಗೋಡು ಕ್ಷೇತ್ರ ಎಂದು ಕರೆಯಲಾಗುತ್ತಿತ್ತು) ಹೆಚ್ಚಾಗಿ ಲಿಂಗಾಯತರೇ ಗೆದ್ದು ಬರುತ್ತಿದ್ದರು. ರಾಮುಲು ಈ ಪರಂಪರೆಯನ್ನು ಮುರಿದಿದ್ದಾರೆ (ಈ ಹಿಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ). ಆದರೆ ಈ ಮುರಿಯುವ ಪ್ರಕ್ರಿಯೆಯಲ್ಲಿ ರಾಜ್ಯದ ಲಿಂಗಾಯತ ಸಮುದಾಯದ ಅನಭಿಷಿಕ್ತ ನಾಯಕ ತಾನೇ ಎಂದು ಸ್ವಯಂಘೋಷಿಸಿಕೊಂಡಿರುವ ಅಥವಾ ಆ ರೀತಿ ತನ್ನ ಭಟ್ಟಂಗಿಗಳಿಂದ ಘೋಷಿಸಲ್ಪಟ್ಟಿರುವ ಯಡಿಯೂರಪ್ಪರಿಗೆ ಒಂದು ರೀತಿಯಲ್ಲಿ ಹೊಡೆತ ಮತ್ತು ಮತ್ತೊಂದು ರೀತಿಯಲ್ಲಿ ಹೊಸ ನಿರೀಕ್ಷೆಗಳನ್ನು ಹುಟ್ಟಿಸಿದ್ದಾರೆ.
ಹೊಡೆತ ಹೇಗೆಂದರೆ ಯಡಿಯೂರಪ್ಪ ತಾವೇ ಖುದ್ದು ಚುನಾವಣೆಯಲ್ಲಿ ಬಂದು ಪ್ರಚಾರ ನಡೆಸಿದ್ದರೂ ಕೂಡ ತಮ್ಮ ಸಮುದಾಯಕ್ಕೆ ಸೇರಿದ ೩೦,೦೦೦ ಮತಗಳಲ್ಲಿ ಶೇ. ೭೫ನ್ನು ಕೂಡ ಗಾದಿ ಲಿಂಗಪ್ಪರ ತೆಕ್ಕೆಗೆ ಹಾಕಲು ಅವರಿಂದ ಸಾಧ್ಯವಾಗದೇ ಹೋಯಿತು. “ಯಡಿಯೂರಪ್ಪರ ಪೊಟೋ ಹಿಡ್ಕೊಂಡೆ ಬಳ್ಳಾರಿ ಚುನಾವಣೆ ಗೆಲ್ತಿವಿ” ಎಂದು ಕೊಚ್ಚಿಕೊಂಡಿದ್ದ ಅಬಕಾರಿ ಸಚಿವ ರೇಣುಕಾಚಾರ್ಯರಿಗಂತೂ ಮತ್ತೊಮ್ಮೆ ಮುಖಭಂಗವಾಗಿದೆ. ಆದರೆ ಈ ಚುನಾವಣೆಯಲ್ಲಿ ಬಿಜೆಪಿಯ ಸೋಲನ್ನು ಯಡಿಯೂರಪ್ಪ ಬಯಸಿದ್ದೆ ಆಗಿದ್ದರೆ ಅವರು ಗೆದ್ದಿದ್ದಾರೆ. ಬಿಜೆಪಿ ಸರ್ಕಾರ ಪತನದಂಚಿಗೆ ಬಂದು ನಿಂತಿದೆ. ಮತ್ತೆ ಅಪರೇಷನ್ ಮಾಡಿ ಸರ್ಕಾರ ಉಳಿಸುವ ಪ್ರಯತ್ನ ನಡೆದಿದೆ. ಯಡಿಯೂರಪ್ಪರಿಗೆ ಪಕ್ಷಕ್ಕೆ ತನ್ನ ನಾಯಕತ್ವ, ತಂತ್ರಗಾರಿಕೆ ಎಷ್ಟು ಅನಿವಾರ್ಯವಾಗಿದೆ ಎಂಬುದನ್ನು ತೋರಿಸಿಕೊಡಲು ಮತ್ತೊಂದು ಅವಕಾಶ ಪ್ರಾಪ್ತವಾಗಿದೆ.
ರಾಮುಲುರ ಗೆಲುವಿನ ಬಗ್ಗೆ ಟಿಎಸ್‌ಐ ಜೊತೆ ಮಾತನಾಡಿದ ಹಿರಿಯ ಪತ್ರಕರ್ತ ಮದನ್ ಮೋಹನ್, “ಇದನ್ನು ಯಾರೂ ಊಹಿಸಿರಲು ಸಾಧ್ಯವಿಲ್ಲ. ರಾಜಕೀಯ ಪಕ್ಷವೊಂದರಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದು ಬೇರೆ, ಸ್ವತಂತ್ರ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತು ಗೆಲ್ಲುವುದು ಬೇರೆ. ಈ ಗೆಲುವಿನ ಮೌಲ್ಯಮಾಪನ ಮಾಡುವುದು ಕಷ್ಟ ಯಾಕೆಂದರೆ ಕೇವಲ ಹಣ ಇಷ್ಟೊಂದು ಮತ ಗಳಿಸಿಕೊಡಲು ಸಾಧ್ಯವಿಲ್ಲ; ಅದ್ದರಿಂದ ಇವರ ಗೆಲುವಿಗೆ ಬೇರೆ ಆಯಾಮಗಳು ಕೂಡ ಇವೆ” ಎನ್ನುತ್ತಾರೆ. ಆದರೆ ನಾಡಿನ ಹಿರಿಯ ಚಿಂತಕ ಚಂದ್ರಶೇಖರ ಪಾಟೀಲ (ಚಂಪಾ) ಅವರು, “ಕಾಂಗ್ರೆಸ್‌ನ ನಿಷ್ಕ್ರೀಯತೆ ಮತ್ತು ಬಿಜೆಪಿಯ ಅಸಮರ್ಥತೆಗೆ ಜನರು ಈ ಮೂಲಕ ಪಾಠ ಕಲಿಸಿದ್ದಾರೆ. ರಾಮುಲುರ ಮೇಲೆ ಜನರಿಗಿದ್ದ ಪ್ರೀತಿ ಮತ್ತು ಅವರು ಬಳಸಿಕೊಂಡ ಸ್ವಾಭಿಮಾನದ ಟ್ಯಾಗ್ ಅವರನ್ನು ಗೆಲ್ಲಿಸಿದೆ” ಎನ್ನುತ್ತಾರೆ.
ಆದರೆ ರಾಮುಲುರ ಹೆಸರು ಲೋಕಾಯುಕ್ತ ವರದಿಯಲ್ಲಿ ಉಲ್ಲೇಖಗೊಂಡಿತ್ತು ಎನ್ನುವ ಅಂಶದ ಬಗ್ಗೆ ಮದನ್ ಮೋಹನ್ ಹೇಳುವುದು ಹೀಗೆ, “ದೇಶದಲ್ಲಿ ಯಾವತ್ತೂ ಭ್ರಷ್ಟಾಚಾರ ಮತದಾನದ ವಿಷಯವಾಗಿಲ್ಲ. ಈಗ ಯಡಿಯೂರಪ್ಪ ಚುನಾವಣೆಗೆ ನಿಂತರೂ ಗೆಲ್ಲುತ್ತಾರೆ. ಚುನಾವಣೆಯಲ್ಲಿ ಬೀಳುವ ಮತಗಳು ಅನೇಕ ಅಂಶಗಳನ್ನು ಆಧಾರಿಸಿರುತ್ತದೆ. ಚುನಾವಣೆ ಒಂದು ಸಂಕೀರ್ಣ ವಿಷಯ ಅದನ್ನು ಒಂದೇ ವಿಷಯದಿಂದ ಅಳೆಯಲಾಗದು”.
“ಎಲ್ಲರೂ ಭ್ರಷ್ಟರಾಗಿದ್ದಾರೆ ಅದ್ದರಿಂದ ರಾಮುಲುರ ಮೇಲಿದ್ದ ಭ್ರಷ್ಟಾಚಾರದ ಆರೋಪ ಕೆಲಸ ಮಾಡಲಿಲ್ಲ. ಶ್ರೀರಾಮುಲುರಲ್ಲಿ ಸ್ವಲ್ಪ ಮಟ್ಟಿನ ಪ್ರಾಮಾಣಿಕತೆ ಇದ್ದುದ್ದರಿಂದ ಅವರಿಗೆ ಈ ಗೆಲುವು ಸಾಧ್ಯವಾಯಿತು. ಅವರ ಹೆಸರು ಲೋಕಾಯುಕ್ತ ವರದಿಯಲ್ಲಿ ಉಲ್ಲೇಖವಾಗಿದೆ. ನಿಜ. ಆದರೆ ಕೊನೆಗೆ ಕಾನೂನು ಉಳಿಯಬೇಕು. ಜನಾದೇಶವಲ್ಲ” ಎಂಬುದು ಚಂಪಾ ಅಭಿಪ್ರಾಯ.
ಆದರೆ ಬಳ್ಳಾರಿಯಲ್ಲಿ ನಡೆದ ಅಕ್ರಮ ಗಣಿಗಾರಿಕೆಯ ಬಗ್ಗೆ ವರದಿ ಸಿದ್ಧಪಡಿಸಿದ ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಪ್ರಕಾರ, “ಖಂಡಿತವಾಗಿಯೂ ಇದು ಭ್ರಷ್ಟಾಚಾರ ವಿರೋಧಿ ಅಭಿಯಾನಕ್ಕಾದ ಸೋಲಲ್ಲ, ಒಂದು ವೇಳೆ ಯಾರಾದರೂ ಹಣ ಪಡೆದು ಮತ ನೀಡಿದ್ದೆ ಆದರೆ ಅವರು ತಮ್ಮ ಆತ್ಮಸಾಕ್ಷಿಗೆ ಉತ್ತರ ನೀಡಬೇಕಾಗಿದೆ. ಅದೂ ಅಲ್ಲದೆ ಯಾವುದೇ ರಾಜಕೀಯ ಪಕ್ಷ ಕೂಡ ಲೋಕಾಯುಕ್ತ ವರದಿಯನ್ನು ತಮ್ಮ ಚುನಾವಣಾ ವಿಷಯವನ್ನಾಗಿಸಿಕೊಂಡಿರಲಿಲ್ಲ” ಎನ್ನುತ್ತಾರೆ. ರಾಮುಲುರ ಗೆಲುವಿನ ಬಗ್ಗೆ ಚಂಪಾರ ಅಭಿಪ್ರಾಯದ ಬಗ್ಗೆ ಸಹಮತ ವ್ಯಕ್ತಪಡಿಸಿರುವ ಹೆಗ್ದೆ, “ಬಳ್ಳಾರಿ ಜನರಿಗೆ ಅನ್ಯ ಆಯ್ಕೆಗಳಿರಲಿಲ್ಲ” ಎನ್ನುತ್ತಾರೆ.
ಇದೀಗ ರಾಜ್ಯದಲ್ಲಿ ಮತ್ತೊಂದು ಹಾವುಏಣಿಯಾಟದ ಕಣ ಸಿದ್ಧವಾಗಿದೆ. ರಾಮುಲು ಬಿಜೆಪಿಯಿಂದ ಅಧಿಕೃತವಾಗಿ ಹೊರಬಂದಿದ್ದಾರೆ. ಜೆಡಿಎಸ್ ಶ್ರೀರಾಮುಲು ಜೊತೆ ಅಧಿಕೃತವಾಗಿಯೇ ಹೆಜ್ಜೆ ಹಾಕುತ್ತಿದೆ. ರಾಮುಲು ಜೆಡಿಎಸ್ ಸೇರುವ ಸಾಧ್ಯತೆ ಬಲು ಕ್ಷೀಣ. ಏಕೆಂದರೆ ರಾಜ್ಯದಲ್ಲಿನ ತೃತೀಯ ರಂಗದಲ್ಲಿದ್ದ ಪ್ರಬಲ ನಾಯಕರೆಲ್ಲರಿಗೂ ಆ ಪಕ್ಷದಲ್ಲಿನ ಕುಟುಂಬ ರಾಜಕಾರಣದ ಭಸ್ಮಾಸುರ ಕಾಟದಿಂದ ತೊಂದರೆಗೀಡಾಗಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ರಾಮುಲು ಮತ್ತು ಜೆಡಿಎಸ್ ಜೊತೆಯಾಗಿಯೇ ಚುನಾವಣೆ ಎದುರಿಸುವ ಸಾಧ್ಯತೆ ಇದೆ. ಇದು ಸಾಧ್ಯವಾಗಬೇಕಾದರೆ ಒಂದೋ ರಾಮುಲು ಪಕ್ಷೇತರರಾಗಿಯೇ ಉಳಿಯಬೇಕು ಇಲ್ಲ ತಮ್ಮದೆ ಆದ ಪ್ರಾದೇಶಿಕ ಪಕ್ಷ ಕಟ್ಟಿಕೊಳ್ಳಬೇಕು. ಆದರೆ ಅವರೀಗ ಜೆಡಿಯುನ ಬಾಗಿಲು ಬಡಿಯುತ್ತಿದ್ದಾರೆ ಎಂಬ ಸುದ್ದಿ ಹುಟ್ಟಿಕೊಂಡಿದೆ. ಅದರ ಜೊತೆಗೆ ಅಹಿಂದವನ್ನು ಸೇರಿಕೊಳ್ಳುತ್ತಾರೆ ಎಂಬ ಗಾಳಿಪಟ ಕೂಡ ಹಾರಾಡುತ್ತಿದೆ.
ಆದರೆ ರಾಮುಲು ಗೆದ್ದಿರುವುದಕ್ಕೂ ನಾಳೆ ಅವರ ಹಿಂಬಾಲಕರನ್ನು ಗೆಲ್ಲಿಸುವುದಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಈ ವರ್ಷ ನಡೆದಿದ್ದ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ರೆಡ್ಡಿ ಸೋದರ ಆರ್ಭಟ ಉತ್ತುಂಗದಲ್ಲಿದ್ದರೂ ಕೂಡ ಬಳ್ಳಾರಿಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿರಲಿಲ್ಲ. ಬಳ್ಳಾರಿಯ ೩೬ ಜಿಲ್ಲಾ ಪಂಚಾಯತ್ ಸ್ಥಾನಗಳಲ್ಲಿ ಅದು ಕೇವಲ ೧೮ ಸ್ಥಾನ ಗೆದ್ದಿತ್ತು. ಅಪರೇಷನ್ ಕಮಲಕ್ಕೆ ಮೊರೆ ಹೋಗಿ ಕಾಂಗ್ರೆಸ್‌ನ ವಿಜೇತ ಅಭ್ಯರ್ಥಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತ್ತು. ೨೦೦೮ರಲ್ಲಿ ನಡೆದ ಚುನಾವಣೆಯಲ್ಲಿ ಬಳ್ಳಾರಿ ಸಂಸತ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಮುಲು ಸೋದರಿ ಜೆ. ಶಾಂತ ಕೇವಲ ೨,೦೦೦ ಮತಗಳಿಂದ ಗೆದ್ದಿದ್ದರೆ ಬಳ್ಳಾರಿ ನಗರ ಕ್ಷೇತ್ರದಲ್ಲಿ ಅನಿಲ್ ಲಾಡ್ ವಿರುದ್ಧ ಸ್ಪರ್ಧಿಸಿದ್ದ ಸೋಮಶೇಖರ ರೆಡ್ಡಿ ಕೇವಲ ೧,೧೦೦ ಮತದಿಂದ ಗೆದ್ದಿದ್ದರು. ಇದರರ್ಥ ಬಳ್ಳಾರಿ ಸಾರಸಾಗಟಾಗಿ ರೆಡ್ಡಿಗಳ ಪಾರುಪತ್ಯಕ್ಕೆ ಒಳಪಟ್ಟಿಲ್ಲ ಎಂಬುದೇ ಆಗಿದೆ.
ಆದರೆ ರಾಮುಲುರ ಗೆಲುವು ಇದನ್ನು ಸುಳ್ಳು ಎಂಬುದು ಸಾಬೀತು ಮಾಡಿಲ್ಲವೇ ಎಂದು ಭಾವಿಸಬಹುದು. ನಾಮಪತ್ರ ಸಲ್ಲಿಸಲು ಕೊನೆಯ ದಿನನದರೆಗೂ ಬಿಜೆಪಿ ರಾಮುಲುರನ್ನು ತಮ್ಮ ಪಕ್ಷದ ಅಭ್ಯರ್ಥಿ ಆಗುತ್ತಾರೆ ಎಂದೆ ಭಾವಿಸಿತ್ತು. ಕೊನೆಗೆ ‘ಹಕ್ಕಿ ಪಂಜರೊಳಿಲ್ಲ’ ಎಂದು ಅರಿವಾಗುತ್ತಲೆ ಗಾದಿಲಿಂಗಪ್ಪರನ್ನು ತಮ್ಮ ಅಭ್ಯರ್ಥಿಯನ್ನಾಗಿಸುವ ಶಾಸ್ತ್ರ ಮಾಡಿತ್ತು. ಅದು ಅಲ್ಲದೆ ಚುನಾವಣಾ ಆಯೋಗ ಕೂಡ ತೆರವಾದ ಸ್ಥಾನಕ್ಕೆ ಬಹಳ ಬೇಗನೆ ಚುನಾವಣೆಯನ್ನು ಘೋಷಿಸಿತ್ತು. ಅದ್ದರಿಂದ ಬಿಜೆಪಿಗೆ ಚುನಾವಣೆಗೆ ಸಿದ್ಧವಾಗಲು ಸಮಯವೇ ಇರಲಿಲ್ಲ. ಇದರ ಜೊತೆಗೆ ರಾಮುಲು ತಮ್ಮ ಸ್ವಾಭಿಮಾನ ಎಂಬ ಭಾವನಾತ್ಮಕ ವಿಷಯವನ್ನು ಮುಂದೊಡ್ಡಿದ್ದರು. ಭಾರತೀಯ ಮತದಾರರು ಭಾವನಾತ್ಮಕವಾಗಿ ಭಾರಿ ಉದಾರಿಗಳು ಎಂದು ಆಗಾಗ ಸಾಬೀತಾಗುತ್ತಲೇ ಇದೆ. ರಾಜೀವ್ ಗಾಂಧಿಯವರ ಹತ್ಯೆ ಕಾಂಗ್ರೆಸ್‌ಗೆ ೧೯೯೧ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಭಾರಿ ಅಂತರದ ಗೆಲುವು ತಂದುಕೊಟ್ಟರೆ, ಆಯೋಧ್ಯೆ ವಿವಾದ ಬಿಜೆಪಿಯನ್ನು ಅಧಿಕಾರದ ಗದ್ದುಗೆಯಲ್ಲಿ ಕೂರಿಸಿತ್ತು. ಇಷ್ಟೆ ಏಕೆ ನಮ್ಮ ರಾಜ್ಯದಲ್ಲಿ ೨೦೦೮ರಲ್ಲಿ ಬಿಜೆಪಿ ಗದ್ದುಗೆ ಏರಲು ಕುಮಾರಸ್ವಾಮಿ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡದಿದ್ದ ಅಂಶವೆ ಪ್ರಮುಖ ಕಾರಣವಾಗಿತ್ತು. ಇಂತಹ ಭಾವನಾತ್ಮಕ ಅಲೆಯ ಮೇಲೆ ತೇಲಿದ ರಾಮುಲು ವಿಜಯದ ದಡ ಸೇರಿದ್ದಾರೆ. ಆದರೆ ಈ ಭಾವನಾತ್ಮಕ ಅಂಶ ಎಲ್ಲಿವರೆಗೆ ಇರಬಹುದು ಅನ್ನುವುದೇ ಈಗಿರುವ ಪ್ರಶ್ನೆ. ನಮ್ಮ ದೇಶದಲ್ಲಿ ಯಾವುದೇ ಒಂದು ಭಾವನಾತ್ಮಕ ಸಂಗತಿ ಒಂದು ಚುನಾವಣೆಗಿಂತ ಹೆಚ್ಚು ಸಲ ಕೆಲಸ ಮಾಡಿದ್ದು ಬಹು ಅಪರೂಪ. ಚಂಪಾರ ಮಾತುಗಳಲ್ಲಿ ಇದನ್ನು ಹೇಳುವುದಾದರೆ, “ರಾಮುಲು ಅವರು ತಮ್ಮ ವೈಯಕ್ತಿಕ ಸ್ವಾಭಿಮಾನದ ಜೊತೆಗೆ ಕರ್ನಾಟಕದ ಸ್ವಾಭಿಮಾನವನ್ನು ತಮ್ಮ ಆದ್ಯ ವಿಷಯವಾಗಿಸಿಕೊಳ್ಳಬೇಕು”.
ಈಗ ರಾಮುಲುರ ಗೆಲುವು ರಾಜ್ಯದಲ್ಲಿ ಮತ್ತೊಂದು ಪ್ರಾದೇಶಿಕ ಪಕ್ಷದ ಬಗೆಗೆನ ಚರ್ಚೆಯನ್ನು ಮುನ್ನೆಲೆಗೆ ತಂದಿರುವುದು ಸುಳ್ಳಲ್ಲ. “ರಾಜ್ಯದಲ್ಲಿನ ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ರಾಜ್ಯದಲ್ಲಿ ಸಂಪೂರ್ಣವಾಗಿ ವಿಫಲವಾಗಬೇಕು. ಅವುಗಳಿಂದ ರಾಜ್ಯಕ್ಕೆ ಒಳ್ಳೆಯದಾಗುವುದಿಲ್ಲ ಎಂಬುದನ್ನು ತಡವಾಗಿಯಾದರೂ ರಾಜ್ಯದ ಜನತೆ ತಿಳಿದುಕೊಳ್ಳುತ್ತಿದ್ದಾರೆ. ಕಾರಣ ಏನೇ ಆಗಿದ್ದರೂ ಕೂಡ ರಾಷ್ಟ್ರೀಯ ಪಕ್ಷಗಳು ಮಣ್ಣು ಮುಕ್ಕಿರುವುದು ನನಗೆ ಖುಷಿ ಕೊಟ್ಟಿದೆ” ಎಂಬ ಚಂಪಾರ ಅಭಿಪ್ರಾಯ ಮತ್ತು “ರಾಮುಲು ಗೆಲುವಿನಿಂದ ರಾಜ್ಯ ರಾಜಕೀಯದ ಚಿತ್ರಣ ಬದಲಾಗುವುದು ಖಂಡಿತ. ಅವರು ತಮ್ಮ ಜಿಲ್ಲೆಯ ಜೊತೆಗೆ ಬೇರೆ ಕಡೆಗೂ ತಮ್ಮ ವರ್ಚಸ್ಸನ್ನು ಬೀರುತ್ತಾರೆ. ಅವರಿಗೆ ಜನರನ್ನು ಸೆಳೆಯುವ ಸಾಮರ್ಥ್ಯವಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ನ ಅಧ್ಯಕ್ಷ ಕುಮಾರಸ್ವಾಮಿ ಮತ್ತು ರಾಮುಲುರ ನಡೆಗಳು ರಾಜ್ಯ ರಾಜಕೀಯವ ಭವಿಷ್ಯವನ್ನು ಬರೆಯಲಿದೆ” ಎನ್ನುವ ಮದನ್ ಮೋಹನ್‌ರ ಅನಿಸಿಕೆ ಈ ನಡೆಯನ್ನೆ ಪ್ರತಿಫಲಿಸುತ್ತದೆ.
ಆದರೆ ರಾಮುಲುರ ಮುಂದಿನ ನಡೆ, ಗಾಲಿ ಜನಾರ್ದನ ರೆಡ್ಡಿಯ ಬಿಡುಗಡೆ ಮತ್ತು ಈಗ ತಟಸ್ಥರಾಗಿ ಉಳಿದಿರುವ ಕರುಣಾಕರ ರೆಡ್ಡಿಯವರ ಮೌನ ಜೊತೆಗೆ ಯಡಿಯೂರಪ್ಪ ಉರುಳಿಸಲಿರುವ ದಾಳಗಳು ಮುಂದಿನ ರಾಜಕೀಯದಾಟದ ನಿಯಮಗಳನ್ನು ರೂಪಿಸುವುದು ನಿಶ್ವಿತ.
ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ ಇಂದಿರಾ ಗಾಂಧಿಯ ಬಗ್ಗೆ “ಜನಪ್ರಿಯತೆಯಿಂದಾಗಿ ಅಧಿಕಾರಕ್ಕೇರಿದ ನಾಯಕನೊಬ್ಬ ರಾಜಕೀಯವಾಗಿ ಸ್ವಪ್ರಶಂಸಕನಾದಾಗ ಪ್ರಜಾಪ್ರಭುತ್ವದ ವಿರುದ್ಧ ದುರಂತ ಮೇಲುಗೈ ಸಾಧಿಸುತ್ತದೆ” ಎಂಬ ಮಾತನ್ನು ಹೇಳಿದ್ದರು. ಆ ಮಾತು ರಾಜ್ಯದಲ್ಲಿ ನಾನಾ ಕಾರಣಗಳಿಂದ ಮತ್ತು ವಿವಿಧ ವ್ಯಕ್ತಿಗಳಿಂದಾಗಿ ಮತ್ತೆ ಮತ್ತೆ ರುಜುವಾಗುತ್ತಿರುವುದು ಪ್ರಜಾಪ್ರಭುತ್ವಕ್ಕೆ ಶೋಭೆ ತರುವಂತದ್ದಲ್ಲ.
ಅಕ್ರಮ ಗಣಿಗಾರಿಕೆಯಿಂದ ರಾಜ್ಯದ ಸಂಪತ್ತನ್ನು ಪರದೇಶಗಳಿಗೆ ಮರಿ ಸಾವಿರಾರು ಕೋಟಿ ರೂಪಾಯಿಗಳನ್ನು ಕೂಡಿಹಾಕಿದ ಗಣಿಕಳ್ಳರ ಬೆಂಬಲದಿಂದ ರಾಜಕೀಯ ನಡೆಸುವ ಶ್ರೀರಾಮುಲು ಹಾಗೂ ಸಮಯ ಸಾಧಕ ರಾಜಕಾರಣ ನಡೆಸುವ ತತ್ವ, ಸಿದ್ಧಾಂತ ಒಂದೂ ಇಲ್ಲದ ಜೆ.ಡಿ. ಎಸ್. ಪಕ್ಷಗಳು ಜೊತೆಕೂಡಿ ರಾಜಕೀಯ ನಡೆಸಿದರೆ ಕರ್ನಾಟಕದ ಸ್ಥಿತಿ ಇನ್ನಷ್ಟು ಚಿಂತಾಜನಕವಗಲಿದೆ. ಇವರ ಜೊತೆಗೆ ಅಪರೇಷನ್ ಕಮಲವೆಂಬ ಅನೈತಿಕ ರಾಜಕಾರಣದ ಜನಕ ಯಡಿಯೂರಪ್ಪನವರು ಪ್ರಾದೇಶಿಕ ಪಕ್ಷದ ಹೆಸರಿನಲ್ಲಿ ಜೊತೆಕೂಡಿದರೆ ಕರ್ನಾಟಕವು ಹಿಂದೆಂದೂ ಕಾಣದ ಲೂಟಿಗೆ ಕಾರಣವಾಗಬಹುದು. ಇಂಥ ತತ್ವರಹಿತ, ದೂರದೃಷ್ಟಿಯಿಲ್ಲದ, ಸ್ವಾರ್ಥಿಗಳೂ, ಸಮಯಸಾಧಕರೂ ಆದ ರಾಜಕಾರಣಿಗಳ ಪ್ರಾದೇಶಿಕ ಪಕ್ಷಕ್ಕಿಂತ ರಾಷ್ಟ್ರೀಯ ಪಕ್ಷಗಳೇ ಮೇಲು.
ನಿಜವಾಗಿಯು ಇದು ಪ್ರಜಾಪ್ರಭುತ್ವದ ಮುಳುಗಡೆಯ ಹಾದಿಯಾಗಿದೆ, ಯಾವ ಜನ ಪರ ಕಾಳಜಿಯು ಇಲ್ಲದ ಕೇವಲ ಸ್ವಪ್ರತಿಷ್ತೆಗಾಗಿ ಚುನಾವಣೆಯನ್ನು ಮಾಡುವುದು ಅ೦ತವರನ್ನು ಜನ ಗೆಲ್ಲಿಸುವುದು ಇದೊ೦ದು ವಿಪರ್ಯಾಸವೆ ಸರಿ
ಈಗ ಗೆದ್ದಿರುವ ಅಭ್ಯರ್ಥಿ ಯಾವ ರೀತಿಯಿ೦ದ ನೋಡಿದರು ಒಬ್ಬ ಒಳ್ಳೆಯ ರಾಜಕಾರಣಿಯಾಗುವ ಲಕ್ಷಣಗಳು ಇಲ್ಲ
ಒಟ್ಟಿನಲ್ಲಿ ಕರ್ನಾಟಕದ ರಾಜಕಾರಣಕ್ಕೆ HIV ಸೊ೦ಕು ತಗಲಿದ ಹಾಗಿದೆ ಇದು ವಾಸಿಯಾಗುವ ಲಕ್ಷಣಗಳು ಕಾಣುತ್ತಿಲ್ಲ
ಇದಕ್ಕೆಲ್ಲಾ ಕಾರಣರಾದ ಯಡ್ಯುರಪ್ಪನವರಿಗೆ ಶುಭಾಶಯ ಹೇಳಲೆಬೇಕು!