ಸಂಸ್ಕೃತಿ ಸಂಕಥನ 15 -ಭಾರತೀಯ ಪ್ರಭುತ್ವದ ಸೆಕ್ಯುಲರ್ ಗೊಂದಲಗಳು
ರಮಾನಂದ ಐನಕೈ
ಬಹುಸಂಸ್ಕೃತಿ ಹಾಗೂ ರಿಲಿಜನ್ ಎರಡೂ ಒಟ್ಟಿಗೇ ಬಾಳಬೇಕಾದ ಭಾರತದಂತಹ ದೇಶದಲ್ಲಿ ಪ್ರಭುತ್ವ ತಟಸ್ಥವಾಗಿರಲು ಸಾಧ್ಯವೇ? ಏಕೆಂದರೆ ಇಲ್ಲಿ ನಂಬಿಕೆಯಲ್ಲಿ ಭಿನ್ನತೆ ಇದೆ. ಇಂಥಲ್ಲಿ ಸೆಕ್ಯುಲರ್ ಪ್ರಭುತ್ವ ಯಾರಿಗೆ ನ್ಯಾಯ ನೀಡುತ್ತದೆ? ಒಂದಕ್ಕೆ ನೀಡಿದ ನ್ಯಾಯ ಇನ್ನೊಂದಕ್ಕೆ ಅನ್ಯಾಯವಾಗಲು ಸಾಧ್ಯ. ಏಕೆಂದರೆ ರಿಲಿಜನ್ನವರು ಲೋಕಜ್ಞಾನದಲ್ಲಿ ಬದುಕುತ್ತಾರೆ. ಸಂಸ್ಕೃತಿಯಲ್ಲಿ ಕ್ರಿಯಾಜ್ಞಾನ ಇರುತ್ತದೆ. ಸೆಕ್ಯುಲರ್ ನೀತಿ ಲೋಕಜ್ಞಾನದಲ್ಲಿ ಉದಯಿಸಿದ್ದು. ಹಾಗಾಗಿ ಕ್ರಿಯಾಜ್ಞಾನದ ಸೂಕ್ಷ್ಮತೆಗೆ ಸ್ಪಂದಿಸುವಲ್ಲಿ ಸೋಲುವ ಸಾಧ್ಯತೆ ಇದೆ. ಹಾಗಾಗಿ ಸೆಕ್ಯುಲರ್ ನೀತಿಯನ್ನು ಭಾರತೀಯ ಸಂದರ್ಭದಲ್ಲಿ ಪುನರ್ಪರಿಶೀಲನೆ ಮಾಡುವ ಅಗತ್ಯ ಇದೆ.
ಭಾರತ ಸರಕಾರದ ಸೆಕ್ಯುಲರ್ ನೀತಿಯ ಸುತ್ತ ಹಲವು ಸಂದಿಗ್ಧಗಳಿವೆ. ನಮ್ಮ ಪ್ರಭುತ್ವಕ್ಕೆ ಈ ಪರಿಸ್ಥಿತಿ ಎದುರಾಗಲು ಕಾರಣವೇನು? ಸೆಕ್ಯುಲರ್ ಎಂಬ ಸಮಾನತೆಯ ಮಂತ್ರ ನಮ್ಮಲ್ಲಿ ಯಾವ ಫಲಿತಾಂಶ ನೀಡುತ್ತಿದೆ?
ಸಮಾಜಶಾಸ್ತ್ರದ ಹಕೀಮರಾದ ಬಾಲಗಂಗಾಧರರು ಭಾರತೀಯ ಪ್ರಭುತ್ವದ ಸೆಕ್ಯುಲರ್ ನೀತಿಯನ್ನು ಎಳೆಎಳೆಯಾಗಿ ಬಿಡಿಸುತ್ತಾರೆ. ಅದನ್ನು ತಿಳಿದಾಗ ‘ಹೀಗೆಲ್ಲ ಉಂಟೆ’ ಎಂಬ ಉದ್ಗಾರ ನಮ್ಮಿಂದ ಹೊರಡುತ್ತದೆ. ನಮ್ಮ ಪ್ರಭುತ್ವದ ಕುರಿತು ನಮಗಿದ್ದ ತಿಳುವಳಿಕೆ ಇಷ್ಟೇನಾ ಎಂಬ ನಾಚಿಕೆ ಆಗುತ್ತದೆ. ಅಂದರೆ ಈ ಕ್ಷಣದಲ್ಲೂ ಕೂಡಾ ನಮ್ಮ ದೇಶದ ಬಗ್ಗೆ ಹಾಗೂ ನಮ್ಮ ಸಂಸ್ಕೃತಿಯ ಕುರಿತು ನಮಗೆ ಏನೂ ಅರ್ಥ ವಾಗಿಲ್ಲವೆಂಬುದು ಸ್ಪಷ್ಟವಾಗುತ್ತದೆ.
ನಾವು ಆಮದು ಮಾಡಿಕೊಂಡದ್ದು ಯುರೋಪಿನ ಸೆಕ್ಯುಲರ್ ಪರಿಕಲ್ಪನೆಯನ್ನು. ಅದು ಎಲ್ಲಿ ರಿಲಿಜನ್ ಇರುತ್ತದೆಯೋ ಅಲ್ಲಿ ಮಾತ್ರ ನ್ಯಾಯದ ಹೆಸರಿನ ಕೆಲಸ ಮಾಡುತ್ತದೆ. ಪರಸ್ಪರ ಒಟ್ಟಿಗೇ ಬಾಳಬೇಕಾದ ಎರಡು ಅಥವಾ ಅದಕ್ಕಿಂತ ಹೆಚ್ಚು ರಿಲಿಜನ್ಗಳ ಸಂದರ್ಭದಲ್ಲಿ ಅಥವಾ ತಾತ್ವಿಕ ಭಿನ್ನಾಭಿಪ್ರಾಯಗಳನ್ನು ಹೊಂದಿದ ಒಂದೇ ರಿಲಿಜನ್ನಿನ ಎರಡು ಪಂಗಡಗಳ ಸಂದರ್ಭದಲ್ಲಿ ಇಂಥ ಸೆಕ್ಯುಲರಿಸಂ ಕೆಲಸ ಮಾಡುತ್ತದೆ.
ರಿಲಿಜನ್ ಅಂದರೆ ಗಾಡ್ ಮನುಷ್ಯನಿಗೆ ನೀಡಿದ್ದು. ಅದು ಪರಿಪೂರ್ಣ. ಅದೇ ಸರ್ವಶ್ರೇಷ್ಠ. ಅದೇ ಅಂತಿಮ ಸತ್ಯ. ಅದನ್ನು ಬಿಟ್ಟು ಉಳಿದೆಲ್ಲವೂ ಮಿಥ್ಯ. ಹೀಗೆ ರಿಲಿಜನ್ನಿನ ನಂಬಿಕೆ ಅನುವುದು ತರ್ಕಬದ್ಧವಾಗಿ ಹೆಪ್ಪುಗಟ್ಟಿರುವಂತಹದ್ದು. ಒಂದು ರಿಲಿಜನ್ನಿನ ಸತ್ಯವನ್ನು ಒಪ್ಪಿಕೊಳ್ಳುವ ವೇಳೆಯಲ್ಲಿ ಮತ್ತೊಂದು ರಿಲಿಜನ್ನಿನ ಸತ್ಯವನ್ನು ನಿರಾಕರಿಸುವ ಮತಾಂತರದ ಪ್ರಕ್ರಿಯೆಯೂ ಇರುತ್ತದೆ. ಅದಕ್ಕಾಗೇ ಅಸಹಿಷ್ಣುತೆ ರಿಲಿಜನ್ನಿನ ಒಂದು ಅನಿವಾರ್ಯ ಲಕ್ಷಣ. ರಿಲಿಜನ್ನಿನ ಇಂಥ ಗಾಢವಾದ ನಂಬಿಕೆಯ ನಡುವೆ ಪ್ರಭುತ್ವ ತಟಸ್ಥವಾಗಿರುವ ಕುರಿತು ರಿಲಿಜನ್ ಹೊಂದಿರುವ ಜನ ಹಾಗೂ ಅಲ್ಲಿನ ಪ್ರಭುತ್ವದ ನಡುವೆ ಆದ ಲೌಕಿಕ ಒಪ್ಪಂದವೇ ಸೆಕ್ಯುಲರಿಸಂ.
ರಿಲಿಜನ್ನಿನ ನ್ಯಾಯಕ್ಕಾಗಿ ಹುಟ್ಟಿದ ಸೆಕ್ಯುಲರಿಸಂ, ರಿಲಿಜನ್ನೇ ಇಲ್ಲದ ಸಂಸ್ಕೃತಿಯಲ್ಲಿ ಹೇಗೆ ಕೆಲಸ ಮಾಡಬಹುದೆಂಬುದಕ್ಕೆ ಭಾರತವೇ ಜ್ವಲಂತ ಉದಾಹರಣೆ. ಭಾರತದಲ್ಲಿ ಇದ್ದದ್ದು ಹಲವು ಸಂಪ್ರದಾಯಗಳ ಸಂಸ್ಕೃತಿಯೇ ವಿನಾ ರಿಲಿಜನ್ ಅಲ್ಲ. ನಮ್ಮಲ್ಲಿ ಧರ್ಮ ಅನ್ನುವುದು ರಿಲಿಜನ್ ಅಲ್ಲ. ಧರ್ಮ ಅನ್ನುವುದು ಇಡೀ ಭಾರತದ ಎಲ್ಲ ಸಂಸ್ಕೃತಿಗಳ ಮೌಲ್ಯಾತ್ಮಕ ತಿರುಳು. ಧರ್ಮ ಅನ್ನುವುದು ಜೀವನಕ್ರಮ. ಧರ್ಮ ಅನ್ನುವುದು ಅನುಭವ ಮತ್ತು ಆಚರಣೆಯೆ ವಿನಾ ದೈವೀ ವ್ಯಾಖ್ಯಾನವಲ್ಲ. ರಿಲಿಜನ್ನಿನಂತೆ ಧರ್ಮವನ್ನು ಸೀಮಿತ ಚೌಕಟ್ಟಿನಲ್ಲಿ ಜೋಡಿಸಿಡಲೂ ಸಾಧ್ಯವಿಲ್ಲ. ಧರ್ಮವನ್ನು ದೇವರು ನಮಗೆ ನೇರವಾಗಿ ಕೊಟ್ಟಿದ್ದಾನೆಂಬ ರಿಲೀಜಿಯಸ್ ನಂಬಿಕೆ ನಮ್ಮಲ್ಲಿಲ್ಲ. ಋಷಿಗಳ, ದಾರ್ಶನಿಕರ ಜೀವನಾನುಭವದ ಫಲವಾಗಿ ಈ ಧರ್ಮಪ್ರಜ್ಞೆ ನಮ್ಮ ಪರಂಪರೆಯಲ್ಲಿ ಹರಿದುಬಂದಿದೆ. ಆದ್ದರಿಂದ ಭಾರತೀಯ ಪ್ರಭುತ್ವ ಇಲ್ಲಿನ ಸಂಸ್ಕೃತಿ ಅಥವಾ ಧರ್ಮವನ್ನು ರಿಲಿಜನ್ ಎಂದು ಗ್ರಹಿಸಿದರೆ ತೊಂದರೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ. ಈಗ ಭಾರತದಲ್ಲಿ ಇದೇ ತೊಂದರೆ ಇದೆ.
ಭಾರತೀಯರ ಧರ್ಮ ರಿಲಿಜನ್ ಅಲ್ಲದ್ದರಿಂದ ಇಲ್ಲಿನ ಧಾರ್ಮಿಕ ಚಟುವಟಿಕೆಗಳು ಎಂದೂ ರಿಲೀಜಿಯಸ್ ಚಟುವಟಿಕೆಯಾಗಲಾರದು. ಆದರೆ ಭಾರತದಲ್ಲಿ ಧಾರ್ಮಿಕ ಚಟುವಟಿಕೆಯನ್ನು ರಿಲೀಜಿಯಸ್ ಎಂದು ಕರೆಯಲಾಗುತ್ತಿದೆ. ರಿಲೀಜಿಯಸ್ ಚಟುವಟಿಕೆ ಅಂದರೆ ಗಾಡ್ ಹೇಳಿದ್ದನ್ನು ನಂಬಿಕೆಯಿಟ್ಟು ಮಾಡುವಂತಹದ್ದು. ಈ ನಂಬಿಕೆ ಇನ್ನೊಂದು ನಂಬಿಕೆಯನ್ನು ತಿರಸ್ಕರಿಸಬೇಕು. ಹಾಗಾಗಿ ರಿಲೀಜಿಯಸ್ ಚಟುವಟಿಕೆಗಳಲ್ಲಿ ಸಂಘರ್ಷ ಅನಿವಾರ್ಯ. ಆದರೆ ಧಾರ್ಮಿಕ ಚಟುವಟಿಕೆ ಗಳಲ್ಲಿ ಇಂಥ ಸಂಘರ್ಷ ಇರಲಾದರು. ಯಾವ ಸಂಪ್ರದಾಯವೂ ತಾನೇ ಅಂತಿಮ ಸತ್ಯ ಹೇಳುತ್ತಿದ್ದೇನೆಂದು ನಂಬಿಕೊಂಡಿಲ್ಲ. ಸಂಪ್ರದಾಯಗಳ ಮಧ್ಯೆ ದ್ವೇಷ ಇಲ್ಲ. ಒಂದು ಇನ್ನೊಂದನ್ನು ಗೌರವಿಸುತ್ತದೆ. ಎಲ್ಲ ಸಂಪ್ರದಾಯಗಳೂ ಮಾನವ ನಿರ್ಮಿತವಾದ್ದರಿಂದ ಒಂದರ್ಥದಲ್ಲಿ ಅಪರಿಪೂರ್ಣ ಎಂದೇ ನಂಬಿದವರು ನಾವು. ಸಂಪ್ರದಾಯಗಳ ಮಧ್ಯೆ ಸತ್ಯಕ್ಕಾಗಿ ಹೊಡೆದಾಟ ಇಲ್ಲ. ಹೀಗಿದ್ದಾಗ ಇದು ರಿಲೀಜಿಯಸ್ ಚಟುವಟಿಕೆಯಾಗಲೂ ಹೇಗೆ ಸಾಧ್ಯ? ಇಂಥ ಧಾರ್ಮಿಕ ಚಟು ವಟಿಕೆಗಳ ಮೇಲೆ ಸೆಕ್ಯುಲರ್ ಪ್ರಭುತ್ವ ಕಡಿವಾಣ ಹಾಕುವುದು ನ್ಯಾಯವೇ? ನಮ್ಮ ಸಂಪ್ರದಾಯ ಗಳನ್ನೆಲ್ಲ ನಮ್ಮ ಪ್ರಭುತ್ವವೇ ತಿರಸ್ಕಾರದಿಂದ ನೋಡಿದಂತಲ್ಲವೇ?
ಪ್ರತಿಯೊಬ್ಬರೂ ತಮ್ಮ ರಿಲಿಜನ್ಗಳನ್ನು ಖಾಸಗಿ ಯಾಗಿ ಆಚರಿಸಬಹುದೇ ವಿನಾ ಸಾರ್ವಜನಿಕ ಸ್ಥಳಗಳಲ್ಲಿ ತರಬಾರದು ಎಂದು ಸೆಕ್ಯುಲರ್ ನೀತಿ ಹೇಳುತ್ತದೆ. ಸೆಕ್ಯುಲರಿಸಂನ ಈ ನೀತಿ ವೈಜ್ಞಾನಿಕ ಸಂಶೋಧನೆಯಿಂದ ರಚಿತವಾದದ್ದಲ್ಲ. ಇದು ಯುರೋಪಿನ ರಿಲಿಜನ್ ನೀಡಿದ ನಿರ್ಣಯ. ಒಂದು ಚಟುವಟಿಕೆಯನ್ನು ರಿಲೀಜಿಯಸ್ ಎಂದು ನಿರ್ಣಯಿಸುವ ಮಾನದಂಡಗಳಾವವು? ಈಗ ಮತ್ತೆ ರಿಲಿಜನ್ನಿನ ಕಥೆ ಹೇಳಬೇಕಾಗುತ್ತದೆ. ಮನುಷ್ಯನಿಗೆ ಇಂಥದ್ದನ್ನು ಕಡ್ಡಾಯವಾಗಿ ಮಾಡು ಎಂದು ಗಾಡ್ ತನ್ನ ರಿಲಿಜನ್ನಿನ ಮೂಲಕ ಹೇಳಿದ್ದೆಲ್ಲ ರಿಲೀಜಿಯಸ್ ಚಟುವಟಿಕೆಗಳು. ಇದಕ್ಕೆ ಆಧಾರ ಬೇಕು. ಆಧಾರ ಎಂದರೆ ದೈವವಾಣಿ (ಸ್ಕ್ರಿಪ್ಚರ್). ದೈವವಾಣಿ ಯಲ್ಲಿ ಗಾಡ್ ಎಲ್ಲವನ್ನೂ ವಿವರವಾಗಿ ಹೇಳಿದ್ದಾನೆ. ಇಸ್ಲಾಂ ಮತ್ತು ಕ್ರಿಶ್ಚಿಯನಾನಿಟಿಯ ಕುರಾನ್ ಹಾಗೂ ಬೈಬಲ್ಗಳು ಇಂಥ ದೈವವಾಣಿಗಳು. ಇವುಗಳನ್ನು ಧರ್ಮಗ್ರಂಥಗಳೆಂದು ಕರೆಯುವುದು ತಪ್ಪು ಅನುವಾದ. ಇವು ರಿಲೀಜಿಯಸ್ ಗ್ರಂಥಗಳು. ಇಂಥ ದೈವವಾಣಿಗಳ ಮೂಲಕ ಮತಾಂತರವನ್ನೂ ಒಂದು ರಿಲೀಜಿಯಸ್ ಚಟುವಟಿಕೆ ಎಂದು ಅರ್ಥೈಸಲಾಗುತ್ತದೆ. ಅಂದರೆ ದೈವವಾಣಿ ಪ್ರಕಾರ ಮತಾಂತರ ಕೂಡಾ ಶಾಸನಬದ್ದ ಚಟುವಟಿಕೆ! ಸೆಕ್ಯುಲರ್ ಪ್ರಭುತ್ವ ಖಾಸಗಿಯಾಗಿ ನಡೆ ಯುವ ಇಂಥ ಚಟುವಟಿಕೆಗಳಿಗೆ ಮೌನವಾಗಿರುತ್ತದೆ. ಆಗ ಭಾರತದಂತಹ ದೇಶದಲ್ಲಿ ಪರಿಸ್ಥಿತಿ ಏನಾಗ ಬಹುದು?
ಭಾರತದ ಪ್ರಭುತ್ವ ರಿಲೀಜಿಯಸ್ ಸ್ವಾತಂತ್ರ್ಯದ ಹೆಸರಿನಲ್ಲಿ ಖಾಸಗಿಯಾಗಿ ಮತಾಂತರ ಮಾಡುವುದಕ್ಕೆ ನಿರ್ಲಿಪ್ತವಾಗಿರುತ್ತದೆ. ಆದರೆ ಇಲ್ಲಿನ ಮೂಲ ಭಾರತೀಯ ಸಂಸ್ಕೃತಿಯವರಿಗೆ ಬಹುತ್ವ ಮತ್ತು ಸಹಿಷ್ಣುತೆಯ ಕಾರಣದಿಂದಾಗಿ ಮತಾಂತರದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅಷ್ಟೇಅಲ್ಲ, ನಮ್ಮ ಸಂಪ್ರದಾಯಗಳು ಮತಾಂತರವನ್ನು ವಿರೋಧಿಸುತ್ತವೆ. ಈಗ ಯೋಚಿಸಿ ಭಾರತದ ಸೆಕ್ಯುಲರ್ ನೀತಿಯ ಫಲಾನುಭವಿಗಳು ಯಾರು? ರಿಲಿಜನ್ ಹೊಂದಿದ ಗುಂಪುಗಳು ಇದರ ಲಾಭ ಪಡೆಯುತ್ತವೆ. ನಮ್ಮ ಸಂಸ್ಕೃತಿಗೆ ಬೇರೆಯವರನ್ನು ಮತಾಂತರಮಾಕೊಳ್ಳುವ ಗುಣ ಇಲ್ಲದ್ದರಿಂದ ನಮ್ಮನ್ನು ಬೇರೆ ರಿಲೀಜನ್ನಿಗೆ ಮತಾಂತರ ಮಾಡಿಕೊಳ್ಳುತ್ತಿರುವುದು ವ್ಯಗ್ರತೆಗೆ ಕಾರಣ ಆಗುತ್ತದೆ. ಸೆಕ್ಯುಲರ್ ಪ್ರಭುತ್ವ ಇದಕ್ಕೂ ಮೌನವಾಗಿರುತ್ತದೆ. ಈ ರೀತಿಯಾಗಿ ರಿಲಿಜನ್ ಹಾಗೂ ಒಂದು ರಿಲಿಜನ್ ಅಲ್ಲದ ಸಂಸ್ಕೃತಿಯ ಮಧ್ಯೆ ಸೆಕ್ಯಲರ್ ಪ್ರಭುತ್ವ ವಿವಾದಕ್ಕೆ ಎಡೆಯಾಗುತ್ತದೆ. ರಿಲೀಜಿಯಸ್ ಚಟುವಟಿಕೆಗಳನ್ನು ಸಾರ್ವಜನಿಕ ಸ್ಥಳ ಗಳಲ್ಲಿ ನಡೆಸಬಾರದು ಎಂಬುದು ಸೆಕ್ಯುಲರ್ ನೀತಿ. ಈ ಕಾರಣಕ್ಕಾಗಿ ನಮ್ಮ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ತರುವುದನ್ನು ಸೆಕ್ಯುಲರ್ ನೀತಿ ವಿರೋಧಿಸುತ್ತದೆ. ಅನ್ಯಾಯ ಯಾರಿಗೆ? ಮೇಲಿನ ಎರಡೂ ಸಂದರ್ಭಗಳಲ್ಲೂ ನಮ್ಮ ಸೆಕ್ಯುಲರ್ ಪ್ರಭುತ್ವ ನಮ್ಮ ಸಂಸ್ಕೃತಿಯ ಪರವಾಗಿದ್ದಂತೆ ಕಾಣುತ್ತದೆಯೇ?
ಇದೇ ಹಿನ್ನೆಲೆಯಲ್ಲಿ ರಿಲೀಜಿಯಸ್ ಮೈನಾರಿಟಿ ಎಂಬುದೂ ಗೊಂದಲ ಸೃಷ್ಟಿಸುತ್ತದೆ. ಭಾರತದಲ್ಲಿದ್ದ ರಿಲಿಜನ್ನಿನವರೆಂದರೆ ಇಸ್ಲಾಂ ಹಾಗೂ ಕ್ರಿಶ್ಚಿಯನ್ನರು. ಇವರನ್ನು ಮೈನಾರಿಟಿ ರಿಲಿಜನ್ ಎಂದು ಕರೆಯುತ್ತಾರೆ. ಅದು ಹೇಗೆ ಸಾಧ್ಯ? ಹಿಂದೂಯಿಸಂ ಎನ್ನುವ ರಿಲಿಜನ್ನೇ ಇಲ್ಲ ಎಂಬುದು ಬಾಲಗಂಗಾಧರರ ತರ್ಕದಲ್ಲಿ ಸಾಬೀತಾಗುತ್ತದೆ. ಅದನ್ನು ಒಪ್ಪಿಕೊಂಡ ಪಕ್ಷದಲ್ಲಿ ಭಾರತದಲ್ಲಿದ್ದದ್ದು ವೈವಿಧ್ಯ ಮಯವಾದ ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ಗುಂಪುಗಳು. ಹೀಗಿದ್ದಾಗ ಇಸ್ಲಾಂ ಮತ್ತು ಕ್ರಿಶ್ಚಿಯನ್ನರೇ ಮೆಜಾರಿಟಿ ರಿಲಿಜನ್ ಆಗುವುದಿಲ್ಲವೇ? ಇದು ಭಾರತೀಯ ಪ್ರಭುತ್ವದ ಸೆಕ್ಯುಲರ್ ನೀತಿಯ ದ್ವಂದ್ವ.
ಸೆಕ್ಯುಲರ್ ಪರಿಭಾಷೆಯಲ್ಲೇ ಯೋಚಿಸುವುದಾರೆ ಭಗವದ್ಗೀತಾ ಪಠಣ ಹೇಗೆ ರಿಲೀಜಿಯಸ್ ಚಟುವಟಿಕೆಯಾಗಲು ಸಾಧ್ಯ? ಏಕೆಂದರೆ ಇದು ಏಕೈಕ ಗಾಡ್ನ ಕೊಡುಗೆ ಅಲ್ಲ. ಹಿಂದುಗಳ ಏಕೈಕ ದೈವವಾಣಿ ಅಲ್ಲ. ಭಗವದ್ಗೀತೆ ನಮಗೆ ಧಾರ್ಮಿಕ ನಂಬಿಕೆಯೇ ವಿನಾ ರಿಲೀಜಿಯಸ್ ನಂಬಿಕೆ ಅಲ್ಲ. ಭಗವದ್ಗೀತೆ ತಾನೇ ಶ್ರೇಷ್ಠ, ಅಂತಿಮ ಸತ್ಯ ಎಂದುಕೊಂಡಿಲ್ಲ. ಪಂಚತಂತ್ರದ ನೀತಿಕಥೆಗಳಂತೆ ಗೀತೆ ಕೂಡಾ ಜೀವನದ ನಿರ್ಣಾಯಕ ಕ್ಷಣಗಳನ್ನು ಎದುರಿಸಲು ಬೇಕಾದ ದೃಷ್ಟಿ ನೀಡುವ ಜೀವನಕಥೆ. ಇದನ್ನು ರಿಲೀಜಿಯಸ್ ಸ್ಕ್ರಿಪ್ಚರ್ ಅಂದವರು ಯಾರು? ಇದು ನಮ್ಮ ಸೆಕ್ಯುಲರ್ ನೀತಿಯಲ್ಲಿರುವ ಸಂದಿಗ್ಧ. ಈ ಕಾರಣಕ್ಕಾಗೇ ನಮ್ಮ ಸೆಕ್ಯುಲರ್ ಪ್ರಭುತ್ವ ಭಾರತೀಯರಿಗೊಂದು ಬಿಟ್ಟು ಉಳಿದವರೆಲ್ಲರಿಗೂ ನ್ಯಾಯ ನೀಡುತ್ತಿರುವಂತೆ ಕಾಣುತ್ತದೆ. ಈ ದೇಶದ ಹಲವಾರು ಅಶಾಂತಿಗಳಿಗೆ ಇದೇ ಕಾರಣ.
ಭಾರತೀಯ ಪ್ರಭುತ್ವ ಪ್ರತಿಯೊಂದು ಸಾಂಪ್ರದಾಯಿಕ ನಂಬಿಕೆಗಳನ್ನು ರಿಲೀಜಿಯಸ್ ನಂಬಿಕೆ ಎಂಬುದಾಗಿ ಅಪಾರ್ಥ ಮಾಡಿಕೊಳ್ಳುತ್ತ ಹೋಗುತ್ತದೆ. ಇದು ನಮ್ಮ ಪ್ರಭುತ್ವದ ತೊಂದರೆ ಅಲ್ಲ. ಪ್ರಭುತ್ವ ಅಳವಡಿಸಿಕೊಂಡ ಸೆಕ್ಯುಲರ್ ನೀತಿಯ ತೊಂದರೆ.
* * * * * * * * *
ಚಿತ್ರಕೃಪೆ : ಅಂತರ್ಜಾಲ