ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 27, 2011

5

ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರಿಗೆ ಉತ್ತಮ ಭವಿಷ್ಯ ಇಲ್ಲವೇ?

‍ನಿಲುಮೆ ಮೂಲಕ

-ರಾವ್ ಎವಿಜಿ 

ಇಲ್ಲ ಎಂದು ಬಹುಮಂದಿ ನಂಬಿರುವುದರಿಂದ ತಮ್ಮ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಲು ಹಿಂಜರಿಯುವ ಜನ್ಮದಾತೃಗಳ ಸಂಖ್ಯೆ ಹೆಚ್ಚುತ್ತಿದೆ. ತತ್ಪರಿಣಾಮವಾಗಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿರುವ ಶಾಲೆಗಳು, ವಿಶೇಷತಃ ಸರ್ಕಾರೀ ಶಾಲೆಗಳು ದುಸ್ಥಿತಿಯಲ್ಲಿವೆ. ಈ ಪರಿಸ್ಥಿತಿಗೆ ಕಾರಣ?

ನಾನು ಎಸ್ ಎಸ್ ಎಲ್ ಸಿ ವರೆಗೆ ಕನ್ನಡ ಮಾಧ್ಯಮದಲ್ಲಿ ಸರ್ಕಾರೀ ಶಾಲೆಯಲ್ಲಿ ಓದಿದವನು. ಪಿ ಯು ಸಿ ಮತ್ತು ಆನಂತರದ ಶಿಕ್ಷಣ ಪಡೆದದ್ದು ಇಂಗ್ಲಿಷ್ ಮಾಧ್ಯಮದಲ್ಲಿ. ಆಗ ಕೊಡಗಿನಲ್ಲಿ ಎಲ್ಲರೂ ಶಿಕ್ಷಣ ಪಡೆಯುತ್ತಿದ್ದದ್ದೇ ಹೀಗೆ. ತಮ್ಮ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಬೇಕೆಂಬ ಹಂಬಲವೇ ಆಗಲಿ, ಖಾಸಗಿ ಶಾಲೆಗಳು ಸರ್ಕಾರೀ ಶಾಲೆಗಳಿಗಿಂತ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತವೆ ಎಂಬ ನಂಬಿಕೆಯೇ ಆಗಲಿ ಅಂದಿನ ಜನ್ಮದಾತೃಗಳಿಗೆ ಇರಲಿಲ್ಲ. ವಾಸ್ತವವಾಗಿ, ಎಸ್ ಎಸ್ ಎಲ್ ಸಿ ವರೆಗೆ ಇಂಗ್ಲಿಷ್ ಮಾಧ್ಯಮ, ಪಿ ಯು ಸಿ ಮತ್ತು ಆನಂತರದ ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಆಗ ಅಲ್ಲಿ ಇರಲೇ ಇಲ್ಲ. (ಎಸ್ ಎಸ್ ಎಲ್ ಸಿ ವರೆಗೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಮೈಸೂರು, ಮಂಗಳೂರು, ಬೆಂಗಳೂರುಗಳಂಥ ದೊಡ್ಡ ನಗರಗಳಲ್ಲಿ ಲಭ್ಯವಿತ್ತಂತೆ) ನನಗೆ ತಿಳಿದ ಮಟ್ಟಿಗೆ ಕೊಡಗಿನಲ್ಲಿ ಆಗ ಇದ್ದದ್ದು ಎರಡೋ ಮೂರೋ ಕ್ರಿಶ್ಚಿಯನ್ ಆಡಳಿತದ ಖಾಸಗಿ ಪ್ರೌಢಶಲೆಗಳು. ಖಾಸಗಿ ಕಾಲೇಜುಗಳು ಇರಲೇ ಇಲ್ಲ.  ಈ ಪದ್ಧತಿಯಲ್ಲಿ ಶಿಕ್ಷಣ ಪಡೆದ ನಾನು ಏನಾಗ ಬಯಸಿದ್ದೆನೋ ಅದೇ ಆದೆ. ಈ ಪದ್ಧತಿಯಲ್ಲಿ ಶಿಕ್ಷಣ ಪಡೆದವರು ಎಂಜಿನಿಯರುಗಳೂ ಡಾಕ್ಟರುಗಳೂ ಆಗುತ್ತಿದ್ದರು. ಎಂದೇ, ೧ ನೇ ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಆವಶ್ಯಕತೆ ಇದೆ ಎಂದು ಯಾರೂ ತಿಳಿದಿರಲಿಲ್ಲ. ಎಸ್ ಎಸ್ ಎಲ್ ಸಿ ವರೆಗೆ ಕನ್ನಡ ಮಾಧ್ಯಮದಲ್ಲಿ ಸರ್ಕಾರೀ ಶಾಲೆಗಳಲ್ಲಿ ವ್ಯಾಸಂಗ ಮಾಡಿದ್ದರಿಂದ ಯಾರ ಭವಿಷ್ಯವೂ ಅಂದು ಹಾಳಾದದ್ದು ನನಗೆ ತಿಳಿದಿಲ್ಲ. ಆಗ ಏಕೆ ಹಾಗಿತ್ತು?

ಎಸ್ ಎಸ್ ಎಲ್ ಸಿ ಪಾಸಾಗುವುದರ ಒಳಗೆ ಅನಕೃ, ತರಾಸು, ಶಿವರಾಮ ಕಾರಂತರು, ಮಾಸ್ತಿಯವರು ಇವರೇ ಮೊದಲಾದವರ ಕೆಲವು ಕಾದಂಬರಿಗಳನ್ನು ನಾನು ಓದಿದ್ದೆ. ಇದಕ್ಕೆ ಕಾರಣ ನಮಗೆ ಕನ್ನಡ ಬೋಧಿಸುತ್ತಿದ್ದ ಶಿಕ್ಷಕರು. ಚಾರ್ಲ್ಸ್ ಡಿಕ್ಕನ್ಸ್ ವಿರಚಿತ ‘ನಿಕೋಲಸ್ ನಿಕ್ಲೆಬೈ’ ಕಾದಂಬರಿಯ ಸಂಕ್ಷಿಪ್ತ ರೂಪವನ್ನೂ ಮತ್ತು ಶೇಕ್ಸ್ಪಿಯರ್ ವಿರಚಿತ ‘ಮರ್ಚೆಂಟ್ ಆಫ್ ವೆನಿಸ್’ ನಾಟಕದ ಕಥಾರೂಪವನ್ನೂ ಜೊನಾದನ್ ಸ್ವಿಫ್ಟ್ ವಿರಚಿತ ‘ಗಲಿವರ್ಸ್ ಟ್ರಾವಲ್ಸ್’ ನ ಮೊದಲನೇ ಭಾಗದ ಸಂಕ್ಷಿಪ್ತ ರೂಪವನ್ನೂ ‘ನಾನ್ ಡಿಟೇಯ್ಲ್ಡ್ ಟೆಕ್ಸ್ಟ್’ ಆಗಿ ಇಂಗ್ಲಿಷಿನಲ್ಲಿಯೇ ಅಭ್ಯಸಿಸಿದ್ದು ಇನ್ನೂ ಮರೆತಿಲ್ಲ. ಬಹುಶ: ಅಂದಿನ ಅನುಭವಗಳ ಪರಿಣಾಮವೋ ಏನೋ ಮುಂದೆಯೂ ಅನೇಕ ಕನ್ನಡ ಮತ್ತು ಇಂಗ್ಲಿಷ್ ಕಾದಂಬರಿಗಳನ್ನು ಓದಿದ್ದೇನೆ. ಸ್ವತಂತ್ರವಾಗಿ ಪುಟ್ಟ ಪ್ರಬಂಧಗಳನ್ನು ಬರೆಯುವ ಅಭ್ಯಾಸವಾದದ್ದು ಈ ಶಾಲೆಗಳ ಬೋಧನಾಪದ್ಧತಿಯಿಂದ. ವಾರಕ್ಕೆ ಕನಿಷ್ಠ ಒಂದಾದರೂ ಪಠ್ಯಾಧಾರಿತವಲ್ಲದ ಸ್ವತಂತ್ರ ಪತ್ರ/ಪ್ರಬಂಧವನ್ನು ಕಡ್ಡಾಯವಾಗಿ ಕನ್ನಡ ಮತ್ತು ಇಂಗ್ಲಿಷ್ ಈ ಎರಡೂ ಭಾಷೆಗಳಲ್ಲಿ ಬರೆಯಬೇಕಿತ್ತು. ವಾರದಲ್ಲಿ ಒಂದು ದಿನ ತರಗತಿ ಮಟ್ಟದಲ್ಲಿ ಚರ್ಚಾಗೋಷ್ಠಿ ನಡೆಯುತಿತ್ತು. ಸರದಿಯ ಪ್ರಕಾರ ಎಲ್ಲರೂ ಇದರಲ್ಲಿ ಭಾಗವಹಿಸಲೇ ಬೇಕಿತ್ತು. ಕನ್ನಡ ವ್ಯಾಕರಣವನ್ನು ಸಾಂಪ್ರದಾಯಿಕವಾಗಿ ಕಲಿಸುತ್ತಿದ್ದರು. ಇಂಗ್ಲಿಷ್ ವ್ಯಾಕರಣವನ್ನೂ ಇದೇ ರೀತಿ ಕಲಿಸುತ್ತಿದ್ದರು. ರೆನ್ ಅಂಡ್ ಮಾರ್ಟಿನ್ ಹೈಸ್ಕೂಲ್ ಇಂಗ್ಲಿಷ್ ಗ್ರಾಮರ್ ಅಂಡ್ ಕಾಂಪೋಸಿಷನ್ ಎಂಬ ವ್ಯಾಕರಣ ಪುಸ್ತಕದ ಬಹುಬಾಗವನ್ನು ಆ ಹಂತದಲ್ಲಿಯೇ ನಾವು ಕಲಿತಿದ್ದೆವು. ಪರಿಣಾಮ – ಹೆಚ್ಚುಕಮ್ಮಿ ತಪ್ಪಿಲ್ಲದೆ ಕನ್ನಡದಲ್ಲಿ ‘ಓದುವ, ಬರೆಯುವ ಮತ್ತು ಮಾತನಾಡುವ’ ಸಾಮರ್ಥ್ಯವನ್ನೂ ಇಂಗ್ಲಿಷಿನಲ್ಲಿ ‘ಓದುವ ಮತ್ತು ಬರೆಯುವ’ ಹೆಚ್ಚುಕಮ್ಮಿ ಎಲ್ಲರೂ ಗಳಿಸಿರುತ್ತಿದ್ದರು. ತತ್ಪರಿಣಾಮವಾಗಿ ಇಂಗ್ಲಿಷ್ ಮಾಧ್ಯಮದಲ್ಲಿ ಇರುತ್ತಿದ್ದ ಉನ್ನತ ಶಿಕ್ಷಣಕ್ಕೆ ಹೊಂದಿಕೊಳ್ಳುವುದು ಒಂದು ಸಮಸ್ಯೆಯೇ ಆಗಿರಲಿಲ್ಲ. ಇಂಗ್ಲಿಷ್ ಮಾಧ್ಯಮದ ತರಗತಿ ಪಾಠಗಳು ಅರ್ಥವಾಗುತ್ತಿದ್ದವಾದರೂ ಉಪನ್ಯಾಸಕರೊಂದಿಗೆ ಇಂಗ್ಲಿಷಿನಲ್ಲಿ ಒಂದು ವಾಕ್ಯ ಮಾತನಾಡಲೂ ಪೂರ್ವಸಿದ್ಧತೆ ಮಾಡಿಕೊಳ್ಳಬೇಕಾಗುತ್ತಿತ್ತು. ಅದೂ ಐದಾರು ತಿಂಗಳ ಕಾಲ ಮಾತ್ರ. ಇದರರ್ಥ ಇಷ್ಟು- ಎಸ್ ಎಸ್ ಎಲ್ ಸಿ ಪಾಸಾದವರು ಹೆಚ್ಚುಕಮ್ಮಿ ತಪ್ಪಿಲ್ಲದೆ ಕನ್ನಡದಲ್ಲಿ ‘ಓದುವ, ಬರೆಯುವ ಮತ್ತು ಮಾತನಾಡುವ’ ಸಾಮರ್ಥ್ಯವನ್ನೂ ಇಂಗ್ಲಿಷಿನಲ್ಲಿ ‘ಓದುವ ಮತ್ತು ಬರೆಯುವ’ ಹೆಚ್ಚುಕಮ್ಮಿ ಎಲ್ಲರೂ ಗಳಿಸಿದರೆ ಮಾಧ್ಯಮ ಒಂದು ಸಮಸ್ಯೆ ಆಗುವುದಿಲ್ಲ.

ದುರದೃಷ್ಟವಶಾತ್, ಪರಿಸ್ಥಿತಿ ಹೀಗೆಯೇ ಮುಂದುವರಿಯಲಿಲ್ಲ. ಕ್ರಮೇಣ ಭಾಷಾ ಬೋಧನೆ-ಕಲಿಕೆ ದುರ್ಬಲವಾಯಿತು. ಕನ್ನಡ ಕಲಿಕೆಯೂ ಶಿಥಿಲವಾಯಿತು, ಇಂಗ್ಲಿಷ್ ಕಲಿಕೆ ಹೆಚ್ಚು ಕಮ್ಮಿ ಜರಗಲೇ ಇಲ್ಲ ಅನ್ನಬಹುದಾದಷ್ಟು ದುರ್ಬಲವಾಯಿತು. (ಇದಕ್ಕೆ ಸಾಕ್ಷ್ಯಾಧಾರಗಳು ನಿಮ್ಮ ಆಸುಪಾಸಿನಲ್ಲಿ ಹೇರಳವಾಗಿ ದೊರೆಯುತ್ತವೆ) ತತ್ಪರಿಣಾಮವಾಗಿ ಉನ್ನತ ಶಿಕ್ಷಣದಲ್ಲಿ, ವಿಶೇಷತಃ ವೃತ್ತಿಪರ ಶಿಕ್ಷಣದಲ್ಲಿ ನಗರಗಳಿಗೆ ಸೀಮಿತವಾಗಿದ್ದ ಬೆರಳೆಣಿಕೆಯಷ್ಟಿದ್ದ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಕಲಿತು ಬಂದವರ ಪ್ರಾಬಲ್ಯ ಹೆಚ್ಚಾಗತೊಡಗಿತು. ಉನ್ನತ ಶಿಕ್ಷಣದಲ್ಲಿ ಯಶಸ್ಸು ಗಳಿಸಬೇಕಾದರೆ ಆರಂಭದಿಂದಲೇ ಇಂಗ್ಲಿಷ್ ಮಾಧ್ಯಮದಲ್ಲಿ ಅಭ್ಯಸಿಸಬೇಕು ಎಂಬ ಭಾವನೆ ಮೂಡಲು ಕಾರಣವಾದದಷ್ಟೇ ಅಲ್ಲ, ಇಂದು ಸಾರ್ವತ್ರಿಕವಾಗಿ ಹಬ್ಬಿರುವ ಇಂಗ್ಲಿಷ್ ಮಾದ್ಯಮದ ವ್ಯಾಮೋಹವನ್ನು ಹುಟ್ಟುಹಾಕಿತು. ಇದಕ್ಕೆ ಪುಷ್ಟಿ ಕೊಟ್ಟಿತು ಕನ್ನಡ ಕುರಿತಾದ ಸರ್ಕಾರದ ನೀತಿ ನಿಯಮಾವಳಿ, ಕನ್ನಡಿಗರು ತಮ್ಮ ಭಾಷೆಯ ಬಗ್ಗೆ ತಳೆದಿರುವ ನಿರಭಿಮಾನ.

ಅಂದ ಮೇಲೆ, ಕನ್ನಡ ಮಾಧ್ಯಮ ಶಾಲೆಗಳ ಪ್ರಾಬಲ್ಯ ಪುನಃ ಹೆಚ್ಚಬೇಕಾದರೆ ಆ ಶಾಲೆಗಳಲ್ಲಿ ಜರಗುತ್ತಿರುವ ಇಂಗ್ಲಿಷ್ ಬೋಧನೆ-ಕಲಿಕೆಯ ಪ್ರಕ್ರಿಯೆಯ ಬಲವರ್ಧಿಸುವ ಕಾರ್ಯ ಮೊದಲು ಆಗಬೇಕು. ಕನ್ನಡ ಮಾಧ್ಯಮದಲ್ಲಿ ಓದಿದವರೂ ಇಂಗ್ಲಿಷ್ ಅನ್ನು ಸಮರ್ಪಕವಾಗಿ ಓದಿ ಅರ್ಥೈಸಿಕೊಳ್ಳಬಲ್ಲವರಾದರೆ ಸರಳ ಇಂಗ್ಲಿಷಿನಲ್ಲಿ ಸ್ವತಂತ್ರವಾಗಿ ಬರೆಯಬಲ್ಲವರಾದರೆ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದವರು ಉನ್ನತ ಶಿಕ್ಷಣದಲ್ಲಿ ಮೇಲುಗೈ ಸಾಧಿಸಲು ಸಾಧ್ಯವಾಗುವುದಿಲ್ಲ.

‘ದೈನಂದಿನ ವ್ಯವಹಾರಕ್ಕೆ ಅನುಕೂಲವಾಗುವಷ್ಟರ ಮಟ್ಟಿಗಾದರೂ ಪ್ರಭುತ್ವ ಸಾಧಿಸಲು ಅಗತ್ಯವಾದಷ್ಟು ಕನ್ನಡ, ಮಾಹಿತಿ ಸಂಗ್ರಹಣೆಗೆ ಮತ್ತು ಸರಳ ಅಭಿವ್ಯಕ್ತಿಗೆ ಅಗತ್ಯವಾದಷ್ಟು ಇಂಗ್ಲಿಷ್’ ಕಲಿಸುವುದು ಕಡ್ಡಾಯ ಸಾರ್ವತ್ರಿಕ ಶಿಕ್ಷಣ ನೀಡುವ ಶಾಲೆಗಳಿಂದ ಸಾಧ್ಯವಾದರೆ ಭಾಷಾಮಾಧ್ಯಮದ ವಿವಾದ ತಣ್ಣಗಾದೀತು. ಇಲ್ಲವಾದರೆ, ‘ತಮ್ಮ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸುತ್ತಿದ್ದರೂ’ ಶಾಲೆಗಳಲ್ಲಿ ಕನ್ನಡ ಮಾಧ್ಯಮವೇ ಇರಬೇಕು ಎಂದು ‘ಉಗ್ರ’ವಾಗಿ ಹೋರಾಡುವವರೂ ಬುದ್ಧಿಜೀವಿಗಳೂ ಸದಾ ಸುದ್ದಿಯಲ್ಲಿರುವುದು ಸಾಧ್ಯವಾಗುತ್ತದೆ.

* * * * * * * * *

ಚಿತ್ರಕೃಪೆ : ಒನ್ ಇಂಡಿಯಾ.ಇನ್

5 ಟಿಪ್ಪಣಿಗಳು Post a comment
 1. ಡಿಸೆ 28 2011

  ಸರ್,

  ನಮಸ್ಕಾರ. ನಾನು ನಿಮ್ಮ ಹಾಗೆಯೇ ಕನ್ನಡ ಮಾಧ್ಯಮದಲ್ಲಿ ಓದಿ ಆನಂತರ ಇಂಗ್ಲಿಶ್ ಮಾಧ್ಯಮಕ್ಕೆ ಅನಿವಾರ್ಯವಾಗಿ ಜಿಗಿಯಬೇಕಾಯಿತು. ಆದರೆ, ಕನ್ನಡ ಮಾಧ್ಯಮದಲ್ಲಿ ಓದಿದ್ದರ ಪರಿಣಾಮವೋ ಅಥವಾ ಕನ್ನಡದ ಮೇಲಿನ ನನ್ನ ಅಭಿಮಾನವೋ ನಾನು ತುಂಬ ಚೆನ್ನಾಗಿ ಕನ್ನಡ ಓದಬಲ್ಲೆ, ಮಾತಾಡಬಲ್ಲೆ, ಬರೆಯಬಲ್ಲೆ. ಹಲವಾರ ಬರೆಹಗಳನ್ನು ಇಂಗ್ಲಿಶಿನಿಂದ ಕನ್ನಡಕ್ಕೆ ಅನುವಾದಿಸಿಯೂ ಇದ್ದೇನೆ. ನಾನು ಇಂಗ್ಲಿಶಿನಲ್ಲಿ ಎಂಎ ಮಾಡಿದ್ದರೂ, ಎಲ್ಲರೂ ಕನ್ನಡ ಎಂಎನಾ ಎಂದು ಕೇಳುವಶ್ಟರ ಮಟ್ಟಿಗೆ ನನ್ನ ಕನ್ನಡ ಬೆಳೆದಿದೆ. ವಿಚಿತ್ವರೆಂದರೆ, ಇಂದು ನಾವು ಮನೆಯಲ್ಲಿ ಬರೀ ಕನ್ನಡವನ್ನೇ ಮಾತನಾಡಿದರೂ ಹೊರಗೆ ಮಾತ್ರ ನನಗೆ ಕನ್ನಡದ ಗಂಧಗಾಳಿಯೂ ಗೊತ್ತಿಲ್ಲ ಎನ್ನುವಶ್ಟರ ಮಟ್ಟಿಗೆ ಇರುತ್ತಾರೆ. ಹಾಗೆಯೇ, ಇಂಗ್ಲಿಶಿನಲ್ಲಿ ವ್ಯವಹರಿಸುವಶ್ಟು ಚೆನ್ನಾಗಿ ಕನ್ನಡದಲ್ಲಿ ವ್ಯವಹರಿಸಲಾರೆವು ಎನ್ನುತ್ತಾರೆ. ಇದೊಂದು ಬೂಟಾಟಿಕೆಯಶ್ಟೆ. ಕನ್ನಡ ಪರಂಪರೆಯಲ್ಲಿ ಇಂಗ್ಲಿಶ್ ಪ್ರಾಧ್ಯಾಪಕರಾದವರೆಲ್ಲರೂ ಅದ್ಭುತವಾದ ಕನ್ನಡ ಸಾಹಿತ್ಯ ಸೃಶ್ಟಿ ಮಾಡಿರುವುದನ್ನು ಕಂಡಿದ್ದೇವೆ. ದುರದೃಶ್ಟವಶಾತ್, ಇಂದು ಯಾರಾದರೂ ಕನ್ನಡ ಚೆನ್ನಾಗಿ ಮಾತನಾಡಿದರೆ ಅಬ್ಬಾ! ಎಶ್ಟು ಚೆಂದ ಕನ್ನಡ ಮಾತನಾಡುತ್ತಾರೆ ಎಂದು ಅಚ್ಚರಿಗೊಳ್ಳುವ ಸ್ಥಿತಿಗೆ ತಲುಪಿದ್ದೇವೆ. ನಾವೆಲ್ಲರೂ ಕನ್ನಡದಲ್ಲೇ ರುಜು ಮಾಡಬೇಕು, ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಕನ್ನಡದಲ್ಲೇ ವ್ಯವಹರಿಸಬೇಕು. ಬಳಕೆಯಿಂದಶ್ಟೆ ಭಾಶೆ. ಇಲ್ಲದಿದ್ದರೆ ಸಂಸ್ಕ್ರುತದ ಹಾಗೆ “ಮೃತಭಾಶೆ” ಆಗಬೇಕಾಗುತ್ತದೆಯಶ್ಟೆ.

  ಉತ್ತರ
 2. ಡಿಸೆ 30 2011

  ಮಾನ್ಯರೇ, ಇದೇ ಒಂದು ದೊಡ್ಡ ಸಮಸ್ಯೆ. ಸಾಮಾನ್ಯವಾಗಿ, ಕನ್ನಡ ಮಾಧ್ಯಮದಲ್ಲಿ ಓದುವವರು ಆರ್ಥಿಕವಾಗಿ, ಹಿಂದುಳಿದವರಾಗಿರುತ್ತಾರೆ. ಮನೆ ಪಾಠಕ್ಕೆ, ಟ್ಯೂಷನ್ನಿಗೆ ಹೋಗಲು ಶಕ್ತಿ ಇರುವುದಿಲ್ಲ, ತಂದೆ, ತಾಯಿ ಅವಿದ್ಯಾವಂತರಾಗಿದ್ದರೆ ಇನ್ನೂ ಕಷ್ಟಸಾಧ್ಯ. ವಿಧ್ಯಾರ್ಥಿಗಳಿಗೆ ಓದುವುದೆಂದರೆ ಸಮಸ್ಯೆಯಾಗಿರುತ್ತದೆ. ಅದರಲ್ಲಿ ಮಾಧ್ಯಮದ ಚಿಂತೆ ಇರುವುದಿಲ್ಲ. ಅವರಿಗೆ ಹೇಗೋ ಓದಿ ಪಾಸಾದರೆ ಸಾಕು ಎಂಬ ಚಿಂತೆಯಲ್ಲಿರುತ್ತಾರೆ. ಮೊದಲಿನಿಂದ ಕನ್ನಡ ಮಾಧ್ಯಮದಲ್ಲಿಯೇ ಓದುತ್ತ ಬಂದವನಿಗೆ ಎಸ್.ಎಸ್.ಎಲ್.ಸಿ ಯಲ್ಲಿ ಅವರಿಗೆ ಕಷ್ಟವಾಗಿರುವ ವಿ‍ಷಯಗಳೆಂದರೆ, ಇಂಗ್ಲೀಷ್, ಗಣಿತ, ಹಿಂದಿ. ಆಂಗ್ಲ ಮಾಧ್ಯಮದವರಿಗೆ ಸಮಸ್ಯೆ ಇರುವುದಿಲ್ಲ. ಪ್ರಯತ್ನಿಸಿದರೆ, ಕನಿಷ್ಟ ಅಂಕಗಳನ್ನು ಪಡೆದು ಪಾಸಾಗಿರುತ್ತಾರೆ. ಎಸ್.ಎಸ್.ಎಲ್.ಸಿ. ನಂತರ ಅವರು ಹಾರಿಸಿಕೊಳ್ಳುವ ವಿಷಯಗಳೆಂದರೆ, ಅರ್ಟ್ಸ್ ಅಥವಾ ಕಾಮರ್ಸ್ . ವಿಜ್ನಾನದ ಕಡೆಗೆ ತಿರುಗಿಯೂ ನೋಡುವುದಿಲ್ಲ. ಕನ್ನಡ ಮಾಧ್ಯಮದಲ್ಲೇ ಪದವಿ, ಸ್ನಾತಕೋತ್ತರ ಪದವಿ ಪಡೆದರೂ, ಬೆಲೆ ಇಲ್ಲದಂತಾಗುತ್ತದೆ. ಆಂಗ್ಲ ಮಾಧ್ಯಮದಲ್ಲಿ ಎಸ್.ಎಸ್.ಎಲ್.ಸಿ. ಅಥವಾ ಪಿ.ಯು.ಸಿ. ಓದಿದರೆ, ಕಂಪ್ಯೂಟರ್ ಡಿಪ್ಲೊಮಾ ಮಾಡಿಕೊಂಡರೆ ಕಾಲ್ ಸೆಂಟರ್ ನಲ್ಲೋ, ಎಂ.ಎನ್.ಸಿ. ಕಂಪನಿಗಳಲ್ಲೋ ಕೆಲಸ ಸಿಗುತ್ತದೆ. ಅದೇ ಕನ್ನಡ ಜ್ನಾನಿ, ಅಟೋ ಚಾಲಕನೋ, ಚಿಲ್ಲರೆ ಅಂಗಡಿಯ ವ್ಯಾಪಾರಿಯೋ, ಅದೇ ಕಾಲ್ ಸೆಂಟರ್, ಎಂ.ಎನ್.ಸಿ. ಕಂಪನಿಯಲ್ಲಿ ಕೆಲಸ ಮಾಡುವವರ ವಾಹನದ ಚಾಲಕನಾಗುತ್ತಾನೆ. ಅಲ್ಲವೇ?

  ಉತ್ತರ
 3. ಕರಾವಳಿ ಕನ್ನಡಿಗ
  ಜೂನ್ 14 2016

  ಟ್ವಿಟರ್ ಫೇಸ್‌ಬುಕ್ಕಿನ ಪೋಸ್ಟುಗಳನ್ನು ನೋಡಿದರೆ ಕನ್ನಡದ ಭವಿಷ್ಯದ ಬಗ್ಗೆ ತುಂಬಾ ಹೆದರಿಕೆ ಆಗುತ್ತದೆ. ಹೆಚ್ಚಿನವರು ಇಂಗ್ಲಿಷಿನಲ್ಲೇ ರೈಲು ಬಿಡುತ್ತಾರೆ. ಯುವಕರನ್ನು ಬಿಡಿ, ಹಳೆಯ ತಲೆಮಾರಿನವರೂ ಕೂಡ ಕನ್ನಡ ಬಳಸುವುದಿಲ್ಲ. ಅವರು ಬಳಸುವ ಇಂಗ್ಲಿಷಾದರೂ ಸರಿಯಾಗಿರುತ್ತದೆಯೋ, ಅದೂ ಇಲ್ಲ. ಹಿಂದಿ ಇಂಗ್ಲಿಷುಗಳ ದಾಳಿಯಲ್ಲಿ ಸಿಲುಕಿದ ನಾವು ಎಲ್ಲಿಯೂ ಸಲ್ಲದ ಎಡಬಿಡಂಗಿಗಳಂತಾಗಿದ್ದೇವೆ!

  ನಮ್ಮ ದೊಡ್ಡ ಸಮಸ್ಯೆ ಎಂದರೆ ನಮ್ಮ ಭಾಷೆಯ ಅಳಿವು-ಉಳಿವಿನ ಬಗ್ಗೆ ನಮಗೇ ಕಾಳಜಿಯಿಲ್ಲ. ಕರ್ನಾಟಕದಲ್ಲಿ ಕನ್ನಡ ಪ್ರೇಮ ಜಾಗೃತವಾಗಲು ನಮ್ಮ ಸೆಲೆಬ್ರಿಟಿಗಳ ಬೆಂಬಲ ಬೇಕಾಗಿದೆ. ಅಣ್ಣಾವ್ರ ಬೆಂಬಲವಿಲ್ಲದೇ ಗೋಕಾಕ್‌ ಚಳವಳಿಯ ಕಿಚ್ಚು ತೀವ್ರವಾಗುತ್ತಿರಲಿಲ್ಲ. ಆದರೆ ಇಂದಿನ ನಮ್ಮ ಸೆಲೆಬ್ರಿಟಿಗಳೋ (ಸಿನೆಮಾ, ಕ್ರಿಕೆಟ್, ಇತ್ಯಾದಿ), ಅವರೇ ಇಂಗ್ಲಿಷಿನ ನಶೆಯಲ್ಲಿ ಮುಳುಗಿದ್ದಾರೆ. ಒಂದು ಸ್ಪಷ್ಟ ಕನ್ನಡ ವಾಕ್ಯ ಮಾತನಾಡಲು ಬಾರದಷ್ಟು ಅವರ ಸ್ಥಿತಿ ಅಧ್ವಾನವಾಗಿದೆ. ಕರ್ನಾಟಕ ರಣಜಿ ತಂಡದಲ್ಲಿ ಅರ್ಧಕ್ಕರ್ಧ ಹೊರಗಿನವರೇ ತುಂಬಿದ್ದಾರೆ.

  ಕನ್ನಡ ಶಿಕ್ಷಣದ ಉಳಿವಿಗೆ ಹೋರಾಡಬೇಕಾದ ಸರಕಾರ ಅದರ ಬದಲಿಗೆ ಖಾಸಗಿ ಶಾಲೆಗಳಿಗೆ ಅನುಕೂಲ ಮಾಡಲು ಪಣತೊಟ್ಟು ನಿಂತಿದೆ. ಸರಕಾರಿ ಶಾಲೆಗಳನ್ನು ಬಲಪಡಿಸುವುದನ್ನು ಬಿಟ್ಟು ಅವುಗಳನ್ನು ಮುಚ್ಚಿ ಖಾಸಗಿಯವರಿಗೆ ಮಾರಿಕೊಳ್ಳುವ ಮಾನಗೆಟ್ಟ ನೀತಿಯನ್ನು ಅನುಸರಿಸುತ್ತಿದೆ. ದುಡ್ಡು ಸಿಕ್ಕಿದರೆ ಸಾಕು ಹೆತ್ತಮ್ಮನನ್ನೂ ಮಾರುವ ಮನೋಭಾವ ಇದು!

  ಉತ್ತರ
 4. ಗುರು ಸಾರಂಗಮಠ
  ಏಪ್ರಿಲ್ 22 2017

  ಒಂದು ಕಂಪನಿಯಲ್ಲಿ ಕೆಲಸಮಾಡುವಉದ್ದೇಶದಿಂದ ಮಾತ್ರ ಇಂಗ್ಲಿಷ್ ಮಾಧ್ಯಮ ಅನಿವಾರ್ಯ ಅನ್ನೋ ನಿಮ್ ನಂಬಿಕೆಗೆ ನನಗೆ ಖೇದಕರವಾಗಿ ಕಾಣಿಸುತ್ತಿದೆ ಒಂದು ಕಂಪನಿ ಇರೋದು ಕರ್ನಾಟಕದಲ್ಲಿ ಅದನ್ನು ನಡೆಸೋರು ಕನ್ನಡದೋರು ಅದರ ಜೊತೆ ವ್ಯವಹಾರ ಮಾಡುವವರು ಕನ್ನಡದವರೆ ಆದರೂ ಎಲ್ಲರ ನಡುವೆ ಇಂಗ್ಲಿಷ್ ಅನ್ನೋ ಅಫೀಮು ಎಲ್ಲರಿಗೂ ಬೇಕು ಬದಲಾಗಬೇಕಿರುವುದು ಭಾಷೆಯಲ್ಲ ನಮ್ ಮನಸ್ಥಿತಿಅಷ್ಟೇ. ಕನ್ನಡದಲ್ಲಿ ಓದಿದೋರು ಚೆನ್ನಾಗಿರೋ ಹುದ್ದೆ ತಗೊಳ್ಳಲ್ಲ ಅಂತ ಅಂತಿರಲ್ಲ ನೀವು ಒಂದು ತಿಳ್ಕೊಳ್ಳಿ ಕೇವಲ ಒಂದು ಕೆಲಸಕ್ಕಾಗಿ ಓದದೇ ಮಾತೃಭಾಷೆಯಲ್ಲಿ ಜೀವನ ಪಾಠ ಕಲಿತರೆ ಮಾತ್ರ mnc software ಎಲ್ಲಾ ಕಂಪನಿಗಳು ಮುಚ್ಚಿದ್ರು ಬದುಕೋ ಕಲೆ ಗೊತ್ತಿರುತ್ತೆ ಇಲ್ಲಾಂದ್ರೆ ಒಂದು ಕಂಪನಿ ಕೆಲಸ ಕಿತಗೊಂತು ಅಂತನೋ ಕೆಲಸ ಜಾಸ್ತಿ ಆಯಿತುಅಂತಾನೋ ಆತ್ಮಹತ್ಯೆ ಮಾಡ್ಕೊಳ್ಳೊ ಮಟ್ಟಿಗೆ ಬಂದಿದೆ ಇವತ್ತು depression ನಿಂದ ಸಾಯೋರು ಡ್ರೈವರ್ ಮೆಕ್ಯಾನಿಕ್ ಅಲ್ಲಾ ಮನ್ಚ್ employees ದಯವಿಟ್ಟು ನಿಮ್ಮಷ್ಟಕ್ಕೆ ನೀವೇ ಕನ್ನಡ ಮಾಧ್ಯಮ ಬಗ್ಗೆ ಕೀಳಾಗಿ ನೋಡಬೇಡಿ

  ಉತ್ತರ
 5. Balamma
  ಫೆಬ್ರ 18 2021

  Shikan ondu madayam agide

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments