ವಿಷಯದ ವಿವರಗಳಿಗೆ ದಾಟಿರಿ

ಜನವರಿ 5, 2012

ಅಗೋಚರತೆ (ಇನ್ವಿಸಿಬಿಲಿಟಿ)

‍ನಿಲುಮೆ ಮೂಲಕ

ರಾವ್ ಎವಿಜಿ

ಮಿಸ್ಟರ್ ಇಂಡಿಯ, ಹ್ಯಾರಿ ಪಾಟ್ಟರ್, ಟಾಮ್ ಅಂಡ್ ಜೆರ್ರಿ ಇವೇ ಮೊದಲಾದ ಕೆಲವು ಚಲನಚಿತ್ರಗಳಲ್ಲಿ ಏನೋ ಒಂದು ದ್ರಾವಣ ಕುಡಿಯುವುದರಿಂದಲೋ, ಒಂದು ವಿಶಿಷ್ಟ ಮೇಲಂಗಿ ಅಥವ ಹೊದಿಕೆಯನ್ನು ಧರಿಸುವುದರಿಂದಲೋ, ಉಂಗುರವೊಂದನ್ನು ವಿಶಿಷ್ಟ ರೀತಿಯಲ್ಲಿ ಹಾಕಿಕೊಳ್ಳುವುದರಿಂದಲೋ ತಮಗೆ ಬೇಕೆನಿಸಿದಾಗ ಅದೃಶ್ಯರಾಗುವ ಪಾತ್ರಗಳನ್ನು ನೀವು ಗಮನಿಸಿರುತ್ತೀರಿ. ಬೇಕೆನಿಸಿದಾಗ ಅದೃಶ್ಯವಾಗುವುದು, ಅರ್ಥಾತ್ ಅಗೋಚರತೆ ಸಾಧನೀಯವೇ?

ಅಪಾರದರ್ಶಕ, ಅರ್ಥಾತ್ ಅಪಾರಕ ವಸ್ತುವಿನ ಮೇಲೆ ಬಿದ್ದ ಬೆಳಕಿನ ಕಿರಣಗಳು ಪ್ರತಿಫಲನಗೊಂಡು ನಮ್ಮ ಅಕ್ಷಿಪಟಲದ ಮೇಲೆ ಬಿಂಬವನ್ನು ಮೂಡಿಸಿದರೆ ಅದು ನಮಗೆ ಗೋಚರಿಸುತ್ತದೆ (ಚಿತ್ರ ೧). ಇದಕ್ಕೆ ಬದಲಾಗಿ ವಸ್ತು ತನ್ನ ಮೇಲೆ ಬಿದ್ದ ಬೆಳಕಿನ ಕಿರಣಗಳನ್ನು ಸಂಪೂರ್ಣವಾಗಿ ಹೀರಿಕೊಂಡರೆ ಏನಾಗುತ್ತದೆ ಊಹಿಸಬಲ್ಲಿರಾ? ಶಾಸ್ತ್ರ ರೀತ್ಯಾ ಆ ವಸ್ತು ನಮಗೆ ಗೋಚರಿಸಕೂಡದಾದರೂ ಅದರ ಆಸುಪಾಸಿನ ಎಲ್ಲ ವಸ್ತುಗಳೂ ನಮಗೆ ಗೋಚರಿಸುವುದರಿಂದ ಆ ವಸ್ತು ಎಷ್ಟು ಸ್ಥಳವನ್ನು ಆಕ್ರಮಿಸಿಕೊಂಡಿದೆಯೋ ಅಷ್ಟು ಸ್ಥಳ ಕಪ್ಪಾಗಿ ಗೋಚರಿಸುತ್ತದೆ! ಅದರ ಹಿಂದೆ ಏನಿದೆಯೋ ಅದು ನಮಗೆ ಗೋಚರಿಸುವುದಿಲ್ಲ (ಚಿತ್ರ ೨). ತತ್ಪರಿಣಾಮವಾಗಿ, ಆ ವಸ್ತುವಿನ ಸ್ವರೂಪ ನಮಗೆ ಗೋಚರಿಸದೇ ಇದ್ದರೂ ಅಲ್ಲಿ ಏನೋ ಒಂದು ಇದೆ ಎಂಬುದು ತಿಳಿಯುತ್ತದೆ. ಪರಿಪೂರ್ಣ ಅಗೋಚರತೆ ಆಗಬೇಕಾದರೆ ವಸ್ತು ನಮಗೆ ಗೋಚರಿಸ ಕೂಡದು, ಅದರ ಹಿಂದಿರುವ ವಸ್ತುಗಳು ನಮಗೆ ಗೋಚರಿಸಬೇಕು (ಚಿತ್ರ ೩). ವಸ್ತು ಯಾವದೋ ಒಂದು ತಂತ್ರದಿಂದ ಪಾರಕವಾದರೆ ಇಂತು ಆಗ ಬೇಕಲ್ಲವೇ? ಇಂತಾಗುವುದರಲ್ಲಿ ಒಂದು ಸಮಸ್ಯೆ ಇದೆ. ಈ ರೀತಿ ಅಗೋಚರವಾದ ವ್ಯಕ್ತಿಯ ಮೂಲಕ, (ಅಕ್ಷಿಪಟಲವೂ ಸೇರಿದಂತೆ ಪ್ರತಿಯೊಂದು ಅಂಗದ ಮೂಲಕ) ಬೆಳಕಿನ ಕಿರಣಗಳು ಹಾದು ಹೋಗುವುದರಿಂದ ಅವನಿಗೆ ಏನೂ ಕಾಣಿಸುವದಿಲ್ಲ. ಅರ್ಥಾತ್, ಆತ ಸಂಪೂರ್ಣ ಕುರುಡು ವ್ಯಕ್ತಿ ಆಗಲೇ ಬೇಕು!! ಇಂಥ ಅಗೋಚರತೆಯಿಂದ ಏನು ಲಾಭ?

ಅಗೋಚರತೆಯನ್ನು ಸಾಧಿಸ ಬಹುದಾದ ಇನ್ನೊಂದು ತಂತ್ರವಿದೆ. ಆದರೆ, ಇದನ್ನು ಸಾಧ್ಯವಾಗಿಸಬಲ್ಲಿರಾದರೆ ನೀವು ಕುಬೇರರು ಆಗುವುದು ಖಚಿತ. ಒಂದು ಹೊದಿಕೆಯನ್ನು ನೀವು ಸೃಷ್ಟಿಸ ಬೇಕು. ಆ ಹೊದಿಕೆಯ ಮೇಲೆ ಬಿದ್ದ ಬೆಳಕಿನ ಕಿರಣಗಳು ಬಾಗಿ ಅದರ ಹೊರಮೈಗುಂಟ ಚಲಿಸಿ ಅದನ್ನು ಬಳಸಿ ದಾಟಿದ ಬಳಿಕ ಅದು ಇಲ್ಲದೇ ಇದ್ದರೆ ಯಾವ ಪಥದಲ್ಲಿ ಚಲಿಸುತ್ತಿತ್ತೋ ಅದೇ ಪಥದಲ್ಲಿ ಚಲಿಸುವಂತಾಗ ಬೇಕು(ಚಿತ್ರ ೪)!!!

ಇಂಥದ್ದೊಂದು ವಸ್ತುವನ್ನು ಶೋಧಿಸಲು ಕೆಲವು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆಂಬ ವರದಿಗಳೂ ಇವೆ. ಅವರು ಯಶಸ್ವಿಗಳಾದರೆ ಏನಾಗಬಹುದೆಂಬುದನ್ನು ಊಹಿಸಿ. ಅವರಿಗೆ ಯಶಸ್ಸು ಸಿಕ್ಕದಿರಲಿ ಎಂದು ಆಶಿಸೋಣವೇ?

* * * * * * * *

ಚಿತ್ರಕೃಪೆ : raoavg.wordpress.com

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments