ವಿಷಯದ ವಿವರಗಳಿಗೆ ದಾಟಿರಿ

ಜನವರಿ 16, 2012

ಸಂಸ್ಕೃತಿ ಸಂಕಥನ – 18 – ಇಸ್ಲಾಮಿಕ್ ಹಾಗೂ ಯುರೋಪಿಯನ್ ವಸಾಹತುಶಾಹಿ

‍ನಿಲುಮೆ ಮೂಲಕ

-ರಮಾನಂದ ಐನಕೈ

ಇತ್ತೀಚೆಗೆ ಮಂಚೀಕೇರಿಯಲ್ಲಿ ಬಾಲಗಂಗಾಧರರ ಸಂವಾದ ಕಾರ್ಯಕ್ರಮ ಏರ್ಪಡಿಸ ಲಾಗಿತ್ತು. ಮುಂಚೀಕೇರಿಯ ಸಂಹತಿ ಟ್ರಸ್ಟ್ ಹಾಗೂ ಶಿವಮೊಗ್ಗ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರದ ಜಂಟಿ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮವನ್ನು ಸಂಹತಿ ಗೆಳೆಯರು ತುಂಬಾ ಅಚ್ಚುಕಟ್ಟಾಗಿ ಸಂಘಟಿಸಿದ್ದರು. ನೂರಕ್ಕೂ ಹೆಚ್ಚು ಜನ ಸಂವಾದದಲ್ಲಿ ಪಾಲ್ಗೊಂಡು ಪ್ರಶ್ನೆಗಳ ಸುರಿಮಳೆ ಗೈದರು. ಬೇರೆ ಬೇರೆ ಪ್ರಶ್ನೆಗಳಿಗೆ ಬಾಲ ಗಂಗಾಧರರು ನೀಡಿದ ಉತ್ತರಗಳನ್ನು ಒಂದು ಚೌಕಟ್ಟಿನಲ್ಲಿ ಹಿಡಿದಿಡುವ ಪ್ರಯತ್ನ ಇಲ್ಲಿದೆ.

ಭಾರತ ತನ್ನ ಇತಿಹಾಸದಲ್ಲಿ ಎರಡು ವಸಹಾತು ಶಾಹಿಗಳನ್ನು ಕಂಡಿದೆ. ಇಸ್ಲಾಮಿಕ್ ಹಾಗೂ ಯುರೋಪಿಯನ್ ವಸಾಹತುಶಾಹಿ. ಇವೆರಡೂ ಕೂಡಾ ಸೆಮೆಟಿಕ್ ರಿಲಿಜನ್ ಹೊಂದಿದ ಸಂಸ್ಕೃತಿ ಯಿಂದ ಬಂದಂತಹವುಗಳು. ಇವರು ಪ್ರಪಂಚದ ಎಲ್ಲ ಸಂಸ್ಕೃತಿಗಳಲ್ಲಿ ರಿಲಿಜನ್ ಇದೆ ಎಂದು ನಂಬಿ ದವರು, ಭಾರತಕ್ಕೆ ಬಂದಾಗ ಇಲ್ಲಿನ ಸಂಸ್ಕೃತಿ ಯಲ್ಲೂ ರಿಲಿಜನ್ ಹುಡುಕಲು ಪ್ರಾರಂಭಿಸಿದರು. ಅದು ಅವರಿಗೆ ಸುಲಭಕ್ಕೆ ಸಾಧ್ಯವಾಗಲಿಲ್ಲ. ಸೆಮೆಟಿಕ್ ರಿಲಿಜನ್ಗಳ ಕನ್ನಡಕ ಹಾಕಿಕೊಂಡು ಹುಡುಕಿದರು. ಕೊನೆಗೂ ‘ಹಿಂದೂಯಿಸಂ’ ಎಂಬ ರಿಲಿಜನ್ನನ್ನು ಕಂಡುಹಿಡಿದೇಬಿಟ್ಟರು. ಹಿಂದೂ ರಿಲಿಜನ್ ಅಂದರೆ ಪಾಶ್ಚಾತ್ಯರಿಗೆ ಮಾತ್ರ ಅರ್ಥ ವಾಗುತ್ತದೆ. ಭಾರತೀಯರಿಗೆ ಅರ್ಥವಾಗುವು ದಿಲ್ಲ. ಏಕೆಂದರೆ ಭಾರತದ ಹೆಚ್ಚಿನ ಜನರಿಗೆ ಹಿಂದೂ ರಿಲಿಜನ್ನಿನ ಅನುಭವವೇ ಆಗುವುದಿಲ್ಲ. ರಿಲಿಜ ನ್ನಿನ ಯಾವುದೇ ಸರಳ ರೇಖೆಗಳು ನಮ್ಮಲ್ಲಿಲ್ಲ. ದಿನನಿತ್ಯ ನಮ್ಮ ನಡುವೆ ಕಾಣುವ ಗೊಂದಲಗಳು ರಿಲಿಜನ್ ಹಾಗೂ ಸಂಸ್ಕೃತಿಯ ನಡುವಿನ ಹೊಂದಾಣಿಕೆ ಆಗದ ತಿಕ್ಕಾಟಗಳು, ಆದರೆ ಇದು ವರೆಗೆ ಯಾವ ಭಾರತೀ ಯನೂ ಈ ಕುರಿತು ಸಂಶೋಧನೆ ನಡೆಸದೇ ಇದ್ದದ್ದು ಆಶ್ಚರ್ಯದ ವಿಷಯ. ಪಾಶ್ಚಿಮಾತ್ಯರು ಭಾರತದ ಕುರಿತಾದ ತಮ್ಮ ಅನುಭವಗಳನ್ನು ಹೇಳಿ ಕೊಳ್ಳುತ್ತ ಬಂದರು. ಅವರ ಅನುಭವಗಳನ್ನೇ ಭಾರತೀಯರು ತಮ್ಮ ನಿಜ ಎಂದು ನಂಬಿಕೊಳ್ಳುತ್ತ ಬಂದರು. ಅವರ ಅನುಭವಗಳನ್ನೇ ಈಗ ನಮ್ಮ ಅನುಭವಗಳೆಂಬಂತೆ ಪುನರಾವರ್ತಿಸುತ್ತಿದ್ದೇವೆ. ಇದನ್ನೇ ವಸಾಹತು ಪ್ರಜ್ಞೆ ಅನ್ನುವುದು. ಬಾಲ ಗಂಗಾಧರರು ಈ ಕುರಿತು ಸಂಶೋ ಧನೆ ನಡೆಸುತ್ತಿರುವ ದೇಶದ ಹಾಗೂ ಪ್ರಪಂಚದ ಪ್ರಪ್ರಥಮ ಚಿಂತಕರು.

ಪಾಶ್ಚಾತ್ಯರ ಪ್ರಕಾರ ಬೈಬಲ್ಲಿನ ಗಾಡ್ ಒಬ್ಬನೇ ನಿಜವಾದ ದೇವರು. ಆದ್ದರಿಂದ ಗಾಡ್ ‘ಸತ್ಯದೇವ’, ಉಳಿದ ದೇವರುಗಳೆಲ್ಲ ಸುಳ್ಳು ದೇವರುಗಳು. ಅವರು ಸತ್ಯದೇವ ನಿಗೆ ‘God ಎಂದು G ಕ್ಯಾಪಿಟಲ್ ಬಳಸುತ್ತಾರೆ. ಸುಳ್ಳು ದೇವರುಗಳನ್ನು god ಎಂದು ಚಿಕ್ಕ ಅಕ್ಷರ ಬಳಸು ತ್ತಾರೆ. ಹಾಗಾಗಿ ಭಾರತೀಯ ದೇವರುಗಳೆಲ್ಲ ಸುಳ್ಳು ದೇವರುಗಳು ಹಾಗೂ ಸೈತಾನನ ಪ್ರತಿರೂಪಗಳು. ಈ ಸುಳ್ಳು ದೇವರುಗಳನ್ನು ಪೂಜಿ ಸುತ್ತ ನಾವೆಲ್ಲ ತಪ್ಪಾದ ಮಾರ್ಗದಲ್ಲಿ ದ್ದೇವೆಂದು ನಂಬಿಸಿದರು. ನಾವು ಅದನ್ನು ನಂಬಿದೆವು. ಕಳೆದ ಎರಡು ನೂರು ವರ್ಷಗಳಿಂದ ಪಾಶ್ಚಾತ್ಯರು ನಮ್ಮ ದೇಶದ ಕುರಿತು ಬರೆದಿದ್ದು ಕೇವಲ ಕಾಗಕ್ಕ, ಗುಬ್ಬಕ್ಕನ ಕಥೆಯನ್ನೇ ಹೊರತು ಇಲ್ಲಿನ ವಾಸ್ತವಿಕವನ್ನಲ್ಲ. ನಮ್ಮ ಬುದ್ಧಿಜೀವಿಗಳೆನಿಸಿಕೊಂಡವರೂ ಅದನ್ನೇ ಅನುಸರಿಸಿಹೊರಟರು. ನೆಹರೂರಂತಹವರೂ ಕೂಡಾ ಪಾಶ್ಚಿಮಾತ್ಯರ ಕಥೆಗಳ ಪ್ರೇರಣೆಯಿಂ ದಲೇ ಭಾರತ ಪ್ರವೇಶಿಸುತ್ತಾರೆ. ಇಂತಹ ವಸಾ ಹತುಶಾಹಿ ಪ್ರಕ್ರಿಯೆಗಳಿಂದಾಗಿಯೇ ದೇಶದಲ್ಲಿ ಏನೆಲ್ಲ ಅನಾಹುತ ಉಂಟಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಅನಾಹುತ ಇನ್ನೂ ಹೆಚ್ಚಾಗಲಿದೆ ಎಂಬುದು ಬಾಲಗಂಗಾಧರರ ಅಭಿಪ್ರಾಯ.

ಹಾಗಾಗಿ ಪಾಶ್ಚಿಮಾತ್ಯರ ಅನುಭವ ನಮ್ಮ ನಿಜ ಎಂದು ನಂಬುವ ಯಾವ ಅಗತ್ಯವೂ ಇಲ್ಲ. ಇಷ್ಟೆಲ್ಲ ಗೊಂದಲಗಳಿಗೆ ನಮ್ಮ ಭಾಷಾಂತರ ತೊಂದರೆಯೂ ಇದೆ. ಪಾಶ್ಚಾತ್ಯ ಪರಿಕಲ್ಪನೆಗಳನ್ನು ಭಾಷಾಂತರ ಮಾಡುವಾಗ ಎಚ್ಚರಿಕೆ ಬೇಕು. ಉದಾಹರಣೆಗೆ ಕನ್ನಡದ ಪ್ರಥಮ ನಿಘಂಟು ಸಂಪಾದಿಸಿದವರು ಕಿಟಲ್. ಅವರಿಗೆ ಪಾಶ್ಚಾತ್ಯ ಪರಿಕಲ್ಪನೆಯೊಂದನ್ನು ಕನ್ನಡದಲ್ಲಿ ಅನುಭವಿಸಲು ಸಾಧ್ಯವಿಲ್ಲ. ಹಾಗಿದ್ದಾಗ ಕೆಲವೊಂದಿಷ್ಟು ಶುಷ್ಕ ಪ್ರಯತ್ನವಾಗುತ್ತದೆ. ಆದ್ದರಿಂದ ಕಿಟಲ್ ನಿಘಂಟುವಿನ ಎಷ್ಟೋ ಶಬ್ದ ಕನ್ನಡಿಗರ ಅನುಭವಕ್ಕೆ ದಕ್ಕಲಾರದು. ಆಗ ಕೆಲವು ಶಬ್ದಕ್ಕಾಗೇ ಬಡಿದಾಡಿಕೊಳ್ಳಬೇಕಾಗುತ್ತದೆ. ಈಗ 21ನೇ ಶತಮಾನದ ಭಾಷೆಯಲ್ಲಿ ನಮ್ಮ ಪೂಜೆ, ಆಧ್ಯಾತ್ಮ, ಆತ್ಮ ಮುಂತಾದವು ಗಳನ್ನೆಲ್ಲ ಭಾಷಾಂತರಿಸಲು ಹೋಗಿ ಅನರ್ಥದಲ್ಲಿ ಸಿಲುಕು ತ್ತಿದ್ದೇವೆ.

ಕೇವಲ ಭಾಷಾಂತರ ಮಾತ್ರ ವಲ್ಲ, ಪರಿಕಲ್ಪನೆಗಳೂ ಕೂಡಾ ನಮ್ಮಲ್ಲಿ ಸಮಸ್ಯೆ ಸೃಷ್ಟಿಸುತ್ತವೆ. ಪಶ್ಚಿಮದ ಪರಿಕಲ್ಪನೆಗಳನ್ನು ಯಥಾ ವತ್ತಾಗಿ ಭಾರತಕ್ಕೆ ತಂದು ಉಪಯೋಗಿಸಿದಾಗ ಈ ರೀತಿಯ ಸಮಸ್ಯೆ ಎದುರಾಗುತ್ತದೆ. ಉದಾಹರಣೆಗೆ ಸೆಕ್ಯುಲರಿಸಂ ಅನ್ನುವ ಕಲ್ಪನೆಯನ್ನು ನೋಡ ಬಹುದು. ರಿಲಿಜನ್ನೇ ಇಲ್ಲದ ಭಾರತೀಯ ಸಂಸ್ಕೃತಿಗೆ ಸೆಕ್ಯುಲರ್ ಪರಿಕಲ್ಪನೆಯನ್ನು ಪ್ರಯೋಗಿಸಿದಾಗ ಅವಾಂತರವಾಗುತ್ತದೆ. ಅದಕ್ಕೆ ಪರ್ಯಾಯವಾಗಿ  ಹಿಂದೂ ರಿಲಿಜನ್ ಸೃಷ್ಟಿಸುವ ಅನಿವಾರ್ಯತೆ ಎದುರಾಗುತ್ತದೆ. ಸೆಕ್ಯುಲರ್ ಹೆಸರಿನಲ್ಲಿ ಜಾತಿಗಳನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತದೆ. ಅದು ಸಂಘರ್ಷಕ್ಕೆ ಕಾರಣವಾಗುತ್ತದೆ. ಭಾರತದಲ್ಲಿಂದು ಗುರುತಿಸುತ್ತಿ ರುವ ರಿಲಿಜನ್ನಿನ ಹಾಗೂ ಮತೀಯ ಸಂಘರ್ಷ ಗಳೆಲ್ಲ ನಮ್ಮ ಸೆಕ್ಯುಲರಿಸಂನ ಕೊಡುಗೆ ಎಂಬುದು ಬಾಲಗಂಗಾಧರರ ಅಭಿಪ್ರಾಯ.

ಭಾರತಕ್ಕೆ ಬಂದ ಪಶ್ಚಿಮದವರು ರಿಲಿಜನ್ ಆಧಾರಿತ ಶ್ರೇಣೀಕೃತವಾದ ಸಮಾಜದಿಂದ ಬಂದ ವರು. ರಿಲಿಜನ್ಗಳ ಪ್ರಕಾರ ಸಮಾಜ ಅನ್ನುವುದು ಸ್ಕ್ರಿಪ್ಚರ್ಗಳ ಆಧಾರದಲ್ಲಿ ರಚಿತವಾದದ್ದು. ಅವರು ಭಾರತದಲ್ಲಿ ಈ ರೀತಿಯ ಒಂದು ವ್ಯವಸ್ಥೆಯನ್ನು ಹುಡುಕುವ ಪ್ರಯತ್ನ ಮಾಡಿದರು. ಅದರ ಫಲ ರೂಪವೇ ಜಾತಿವ್ಯವಸ್ಥೆ, ಭಾರತೀಯ ಸಮಾಜ ಜಾತಿವ್ಯವಸ್ಥೆಯ ಮೇಲೆ ನಿಂತಿದೆ ಎಂಬ ನಿರ್ಣಯಕ್ಕೆ ಬಂದರು. ಆದರೆ ಅವರ ಈ ನಿರ್ಣಯ ನಮ್ಮ ಅನು ಭವಕ್ಕೆ ಬರಲಾರದು. ಭಾರತದಲ್ಲಿ ನೂರಾರು ಜಾತಿ ಗಳಿವೆ ನಿಜ. ಆದರೆ ಈ ಜಾತಿಗಳನ್ನು, ಸಮಾಜ ವ್ಯವಸ್ಥೆಯನ್ನು ಬೋಧಿಸುವ ಯಾವ ಗ್ರಂಥಗಳೂ ಇಲ್ಲ. ವೇದಗಳು, ಪುರಾಣಗಳು, ಉಪನಿಷತ್, ಭಗವದ್ಗೀತೆ ಯಾವುದೂ ನಮ್ಮ ಸಮಾಜ ವ್ಯವಸ್ಥೆ ಯನ್ನು ಬೋಧಿಸುವ ಗ್ರಂಥಗಳಲ್ಲ ಹಾಗೂ ಈ ಗ್ರಂಥಗಳನ್ನಾಧರಿಸಿಯೇ ನಮ್ಮ ಸಮಾಜ ವ್ಯವಸ್ಥೆ ನಿಂತಿಲ್ಲ. ಗೀತೆ ನಮ್ಮ ಸಮಾಜದ ಬುನಾದಿ ಅಲ್ಲ. ಗೀತೆಯನ್ನು ಓದದಿದ್ದರೆ ನಮ್ಮ ದೇಶದ ಸಮಾಜ ವ್ಯವಸ್ಥೆ ಬುಡಮೇಲಾಗಲಾರದು. ಇವೆಲ್ಲ ಜ್ಞಾನ ಭಂಡಾರಗಳು, ಜ್ಞಾನದ ವಿವಿಧ ಶಾಖೆಗಳು. ಬೇಕು ಅನ್ನುವವರು ಮಾತ್ರ ಅದನ್ನು ಪಡೆಯಬಹುದು. ಈ ಜ್ಞಾನ  ಎಲ್ಲಾ ಜನರಿಗೂ ಮುಕ್ತವಾಗಿ ಲಭ್ಯವಿದೆ. ಹೀಗಿದ್ದಾಗ ಅನ್ಯಥಾ ಇವುಗಳನ್ನೆಲ್ಲ  ಅಖಾಡಕ್ಕೆ ಎಳೆದು ಕಚ್ಚಾಡುವುದು ಮೂರ್ಖತನ ಎಂಬುದು ಬಾಲಗಂಗಾಧರರ ಸ್ಪಷ್ಟ ಅಭಿಪ್ರಾಯ. ಭಾರತೀಯ ಸಮಾಜ ವ್ಯವಸ್ಥೆಗೆ ಮನುಸ್ಮೃತಿ ಕೂಡಾ ಬುನಾದಿ ಅಲ್ಲ, ಮನುಸ್ಮೃತಿ ಅಂದರೆ ಆ ಕಾಲದ ಕುರಿತಾದ ಒಂದು ವರದಿಯೇ ವಿನಾ ಭಾರತೀಯ ಸಮಾಜದ ಸಂವಿಧಾನ ಅಲ್ಲ.

ನಮ್ಮಲ್ಲಿ ಸಂಪ್ರದಾಯ ಹಾಗೂ ಪದ್ಧತಿಗಳಿವೆ. ಆದರೆ ರಿಲಿಜನ್ ಇಲ್ಲ. ನಮ್ಮ ಸಮಾಜ ವ್ಯವಸ್ಥೆ ಚಲಿಸುತ್ತಿರುವುದೇ ಸಂಪ್ರದಾಯ ಹಾಗೂ ಪದ್ಧತಿ ಗಳ ಪರಿವರ್ತಕ ಗುಣದಿಂದಾಗಿ. ನಮ್ಮ ಸಮಾಜ ವ್ಯವಸ್ಥೆ ಯಾವುದೋ ಒಂದು ನಿರ್ಧಿಷ್ಟ ರಚನೆಯ ಆಧಾರದ ಮೇಲೆ ಪುನರ್ ಸಂಘಟಿತವಾಗುತ್ತಿಲ್ಲ. ಈ ಕಾರಣಕ್ಕಾಗೇ ಇಷ್ಟೆಲ್ಲಾ ವೈರುಧ್ಯಗಳ ನಡು ವೆಯೂ ಸಾಮರಸ್ಯದಿಂದ ಬದುಕುವ ಸಂಸ್ಕೃತಿ ನಮ್ಮದು. ಸೆಕ್ಯುಲರಿಸಮ್ಮೇ ನಾಚಿಕೊಳ್ಳುವಂತಹ ಬಹುತ್ವ ಹಾಗೂ ಸಹಜತೆ ನಮ್ಮ ಸಂಸ್ಕೃತಿಯಲ್ಲಿದೆ. ಈ ದೇಶದ ಜನರು ನೆಮ್ಮದಿ ಕಂಡುಕೊಂಡು ಬಂದ ಮಾರ್ಗಗಳೇ ಬೇರೆ. ಅದು ಪಾಶ್ಚಿಮಾತ್ಯರಿಗೆ ಹಾಗೂ ಅದರಿಂದ ಪ್ರಭಾವಿತರಾದ ನಮ್ಮ ಬುದ್ಧಿ ಜೀವಿಗಳಿಗೆ ಅರ್ಥವಾಗಿಲ್ಲ. ಹಾಗಾಗಿ ಎಲ್ಲರೂ ನೆಮ್ಮದಿಯ ಪಾಠ ಮಾಡುತ್ತಿದ್ದಾರೆ. ಈ ಪಾಠ ಭಾರತೀಯರಿಗೆ ಅರ್ಥ ವಾಗಲಾರದು. ಪರಿಣಾ ಮವಾಗಿ ಸಂಘರ್ಷಗಳು ಹೆಚ್ಚಾಗುತ್ತಲಿವೆ. ಈ ಕುರಿತು ಸಂಶೋಧನೆ ಹೆಚ್ಚಾಗಬೇಕು.

ನಾವು ನಮ್ಮ ಸಂಸ್ಕೃತಿ ಯನ್ನು ನೋಡುವ ರೀತಿಯೇ ಬೇರೆ. ಅದಕ್ಕಾಗಿ ಅಸ್ಪೃಶ್ಯತೆ ಹಾಗೂ ಆಚರಣೆಗಳ ಕುರಿತಾದ ಆಧುನಿಕ ವ್ಯಾಖ್ಯಾನ ನಮ್ಮ ಅನುಭವಕ್ಕೆ ದಕ್ಕುವುದೂ ಇಲ್ಲ. ನಾವು ನಮ್ಮ ಸಂಸ್ಕೃತಿಯನ್ನು ನಮ್ಮ ಅನುಭವದ ಮೂಲಕ ಗ್ರಹಿಸುತ್ತೇವೆ. ಕಳೆದ ಮೂರು ಸಾವಿರ ವರ್ಷಗಳಿಂದ ಈ ಸಂಸ್ಕೃತಿ ಬದುಕಿಬಂದಿದೆ. ಅತ್ಯಂತ ಉತ್ತಮ ಹಾಗೂ ಶ್ರೀಮಂತ ಸಂಸ್ಕೃತಿ ಅನಿಸಿಕೊಂ ಡಿದೆ. ಈಗ ಇದು ಸರಿಯಿಲ್ಲ ಎನ್ನು ವವರನ್ನು ಏನನ್ನಬೇಕು?

ಧರ್ಮ ಎಂದರೇನೆಂಬುದೇ ನಮಗೆ ಗೊತ್ತಿಲ್ಲ. ಹಿಂದೂ ಎನ್ನು ವುದು ಧರ್ಮಸೂಚಕವಾದ ಪದ ಅಲ್ಲ. ಹಿಂದೂ ಅಂದರೆ ಒಂದು ಸಂಸ್ಕೃತಿ. ಈ ಸಂಸ್ಕೃತಿಯನು ಒಟ್ಟು ಗೂಡಿಸಿ ಧರ್ಮ ಎಂದು ಕರೆಯ ಬಹುದು. ಆದರೆ ರಿಲಿಜನ್ನಿಗೆ ಪರ್ಯಾಯವಾಗಿ ಧರ್ಮ ಎನ್ನು ವುದು ಸರಿಯಲ್ಲ. ನಮ್ಮ ಸಂಸ್ಕೃತಿ ಯನ್ನು ಧರ್ಮ (ರಿಲಿಜನ್) ಎಂದು ಪ್ರತಿಪಾದಿಸಲು ಹೊರಟಾಗ ಹಲವಾರು ಸಮಸ್ಯೆಗಳು ಶುರುವಾಗುತ್ತವೆ. ಆದ್ದರಿಂದ ನಾವು ನಮ್ಮ ಸಂಸ್ಕೃತೀಯ ಸ್ವರೂಪವನ್ನು ಮೊದಲು ಅರ್ಥಮಾಡಿಕೊಳ್ಳಬೇಕು.

ಹೀಗೆ ಮಂಚಿಕೇರಿ ಕಾರ್ಯಕ್ರಮದಲ್ಲಿ  ಸ್ವಾರಸ್ಯಕರ ಚರ್ಚೆ ನಡೆಯಿತು. ಅಲ್ಲಿ ಸೇರಿದವರಿಗೆ ಬಾಲಗಂಗಾಧರರ ಈ ವಿಚಾರದ ಕುರಿತು ಹೆಚ್ಚಿನ ತಿಳುವಳಿಕೆ ಪಡೆಯುವ ಕುತೂಹಲ ಮೂಡಿದ್ದು ಸಂವಾದದಲ್ಲಿ ಕಂಡುಬಂತು.

* * * * * * *

ಚಿತ್ರಕೃಪೆ : http://timothyministries.org

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments