ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು (ವ್ಯಾಲ್ಯೂಸ್) ಕಲಿಸುವುದು ಹೇಗೆ?
-ರಾವ್ ಎವಿಜಿ
ಮೌಲ್ಯಗಳು ಎಂದರೇನು ಎಂಬ ಪ್ರಶ್ನೆಗೆ ‘ನಿರ್ದಿಷ್ಟ ವಸ್ತು, ಕ್ರಿಯೆ ಮತ್ತು ಸನ್ನಿವೇಶಗಳಿಗೆ ವ್ಯಕ್ತಿಗಳು ನೀಡುವ ಬೆಲೆಗೆ ಸಂಬಂಧಿಸಿದ ಅದ್ವಿತೀಯ ಶಾಬ್ದಿಕ ಪರಿಕಲ್ಪನೆಗಳು’ ಎಂಬ ಸೈದ್ಧಾಂತಿಕ ಉತ್ತರ ನೀಡಬಹುದಾದರೂ ಎಲ್ಲರಿಗೂ ಸುಲಭವಾಗಿ ಅರ್ಥವಾಗುವ ಸರ್ವಸಮ್ಮತ ಉತ್ತರ ನೀಡುವುದು ಕಷ್ಟ. ಕೆಲವು ವಿಶೇಷಜ್ಞರು ವ್ಯಕ್ತಿಯ ಮನೋಧರ್ಮಗಳ (ಆಟಿಟ್ಯೂಡ್) ಸಂಘಟನೆಯನ್ನು ಮೌಲ್ಯ ಎಂದು ಉಲ್ಲೇಖಿಸುವುದೂ ಉಂಟು. ಅದೇನೇ ಇರಲಿ ವರ್ತನೆಯ ನೈತಿಕತೆಗೆ ಸಂಬಂಧಿಸಿದಂತೆ ಯಾವುದು ಸರಿ ಯಾವುದು ತಪ್ಪು, ಜೀವನದಲ್ಲಿ ಯಾವುದಕ್ಕೆ ಎಷ್ಟು ಪ್ರಾಮುಖ್ಯ ನೀಡಬೇಕು, ಜೀವನದ ಗುರಿ ಏನಾಗಿರಬೇಕು ಮುಂತಾದವನ್ನು ನಿರ್ಧರಿಸುವುದರಲ್ಲಿ ನಾವು ಒಪ್ಪಿಕೊಂಡಿರುವ ಮೌಲ್ಯಗಳು ನಿರ್ಣಾಯಕ ಪಾತ್ರ ವಹಿಸುತ್ತವೆ ಎಂಬುದರಲ್ಲಿ ಸಂಶಯವಿಲ್ಲ. ಆದರೂ ಬಹುತೇಕ ಸನ್ನಿವೇಶಗಳಲ್ಲಿ ನಾವು ಕೈಗೊಳ್ಳುವ ಮೌಲ್ಯಾಧಾರಿತ ತೀರ್ಮಾನಗಳು ವ್ಯಕ್ತಿನಿಷ್ಠವೂ ಸಾಪೇಕ್ಷವೂ ಆಗಿರುತ್ತವೆ. (ಅ) ನಿರ್ದಿಷ್ಟ ಅಂಶಕ್ಕೆ ನಾವು ಎಷ್ಟು ಬೆಲೆ ಕೊಡುತ್ತೇವೆ ಎಂಬುದನ್ನು ಸೂಚಿಸುವ ಪರಿಮಾಣಾತ್ಮಕ ಆಯಾಮ, (ಆ) ನಿರ್ದಿಷ್ಟ ಮೌಲ್ಯಕ್ಕೆ ನಾವು ಎಷ್ಟು ಬದ್ಧರಾಗಿರುತ್ತೇವೆ ಎಂಬುದನ್ನು ಸೂಚಿಸುವ ಗುಣಾತ್ಮಕ ಆಯಾಮ ಮತ್ತು (ಇ) ನಮ್ಮಲ್ಲಿ ಅಂತಸ್ಥವಾಗಿರುವ ಮೌಲ್ಯಗಳ ನಡುವಿನ ಸಂಬಂಧವನ್ನು ಸೂಚಿಸುವ ಅಂತರ್- ಸಂಬಂಧ ಆಯಾಮ – ಈ ಮೂರು ಆಯಾಮಗಳು ನಮ್ಮಲ್ಲಿ ಅಂತಸ್ಥವಾಗಿರುವ ಮೌಲ್ಯಗಳಿಗೆ ಇರುತ್ತವೆ.
ಸಾಮಾನ್ಯವಾಗಿ ಮೌಲ್ಯಗಳು ಅನುಭವದಿಂದ ಅಂತಸ್ಥವಾಗುತ್ತವೆ. ಸುತ್ತಣ ಆಗುಹೋಗುಗಳ ವೀಕ್ಷಣೆ, ಸಮವಯಸ್ಕರ ಮತ್ತು ಹಿರಿಯರ ಅನುಕರಣೆ, ಅರಿವಿಲ್ಲದೆ ಜರಗುವ ಸೋಪಾಧಿಕ (ಕನ್ಡೀಷನ್ಡ್) ಕಲಿಕೆ ಇವೇ ಮೊದಲಾದವುಗಳ ಮೂಲಕ ಮೌಲ್ಯಗಳು ಸಹಜವಾಗಿ ಅಂತಸ್ಥಗೊಳ್ಳುತ್ತವೆ. ಆದ್ದರಿಂದ ಇತರ ಪಠ್ಯವಿಷಯ ಸಂಬಂಧಿತ ಜ್ಞಾನ ಮತ್ತು ಕುಶಲತೆಗಳನ್ನು ಕಲಿಸಿದಂತೆ ಮೌಲ್ಯಗಳನ್ನು ಕಲಿಸಲು ಸಾಧ್ಯವಿಲ್ಲ. ಆದರೂ ಅಗತ್ಯವಾದ ಅನುಭವಗಳನ್ನು ಮಕ್ಕಳಿಗೆ ಒದಗಿಸುವುದರ ಮೂಲಕ ಅವರಲ್ಲಿ ಅಪೇಕ್ಷಿತ ಮೌಲ್ಯಗಳು ಅಂತಸ್ಥವಾಗುವಂತೆ ಮಾಡುವುದು ಸಾಧ್ಯ. ಇದಕ್ಕಾಗಿ ಶಿಕ್ಷಕರು ಮತ್ತು ಜನ್ಮದಾತೃಗಳು ಮಾಡಬೇಕಾದದ್ದು ಇಷ್ಟು:
೧. ಅನುಕರಣೀಯ ಮಾದರಿ ಒದಗಿಸಬೇಕು. ಈ ಅನುಕರಣೀಯ ಮಾದರಿ ತಾವೇ ಆಗಿದ್ದರೆ ಅತ್ಯತ್ತಮ. ಎಳೆವಯಸ್ಸಿನಲ್ಲಿ ಸಾಮಾನ್ಯವಾಗಿ ತಂದೆತಾಯಿಯರನ್ನೂ ತದನಂತರ ಶಿಕ್ಷಕರನ್ನೂ ‘ಸಾಮಾಜಿಕ ನಡೆನುಡಿ, ಆಚಾರವಿಚಾರ, ಸಂಪ್ರದಾಯ’ ಇವೇ ಮೊದಲಾದವುಗಳಿಗೆ ಮಕ್ಕಳು ತಮಗರಿವಿಲ್ಲದೆಯೇ ಅನುಕರಿಸುತ್ತಾರೆ ಎಂಬುದು ಅನುಭವವೇದ್ಯ ತಥ್ಯ. ಐತಿಹಾಸಿಕ ಅಥವ ಪೌರಾಣಿಕ ಪ್ರಸಿದ್ಧರನ್ನು ಅನುಕರಿಸುವ ಸಾಧ್ಯತೆ ಬಲು ಕಮ್ಮಿ. ಹದಿಹರೆಯದ ನಂತರ ತಮ್ಮ ದೃಷ್ಟಿಯಲ್ಲಿ ‘ಜನಪ್ರಿಯರು’, ‘ಶಕ್ತಿಶಾಲಿಗಳು’, ‘ಉನ್ನತ ಸ್ಥಾನಮಾನ ಗಳಿಸಿದವರು’ ಅನ್ನಿಸಿಕೊಂಡ ಜೀವಂತ ವ್ಯಕ್ತಿಗಳನ್ನು ಅರಿವಿದ್ದೋ ಅರಿವಿಲ್ಲದೆಯೋ ಅನುಕರಿಸುತ್ತಾರೆ. ಅಂದ ಮೇಲೆ, ಇಂದಿನ ಯುವ ಪೀಳಿಗೆಯನ್ನು ದೂಷಿಸುವುದು ಸರಿಯೇ ನೀವೇ ಆಲೋಚಿಸಿ. ಯುವಜನಾಂಗದಲ್ಲಿ ಉತ್ತಮ ಮೌಲ್ಯಗಳನ್ನು ಬೇರೂರಿಸಲು ಪ್ರಯತ್ನಿಸುವವರು ಸದಾ ನೆನಪಿನಲ್ಲಿ ಇಟ್ಟುಕೊಂಡಿರ ಬೇಕಾದ ತಥ್ಯ ಇಂತಿದೆ: ‘ಏನನ್ನು ಮಾಡಲು ಮಕ್ಕಳಿಗೆ ಹೇಳುತ್ತೀರಿ ಎಂಬುದು ಮುಖ್ಯವಲ್ಲ. ಅವರ ಸಾನ್ನಿಧ್ಯದಲ್ಲಿ ನೀವು ಏನು ಮಾಡುತ್ತೀರಿ ಎಂಬುದು ಬಲು ಮುಖ್ಯ’. ನಿಮ್ಮಲ್ಲಿ ಅಂತಸ್ಥವಾಗಿರುವ ಮೌಲ್ಯಗಳು ನಿಮ್ಮದಾದದ್ದು ಹೇಗೆ ಎಂಬುದರ ಕುರಿತು ಆಲೋಚಿಸಿದರೆ ಈ ಹೇಳಿಕೆಯ ಮಹತ್ವ ನಿಮಗೇ ತಿಳಿಯುತ್ತದೆ.
ಕೆಲವು ಮೌಲ್ಯಗಳು ನನ್ನಲ್ಲಿ ಅಂತಸ್ಥವಾಗಲು ಕಾರಣವಾಗಿರಬಹುದಾದ ಜೀವನಾನುಭವಗಳ ಪೈಕಿ ಕೆಲವು ಇಂತಿವೆ:
(ಆ) ನನ್ನ ದೊಡ್ಡಪ್ಪನವರು (ದಿ ಎ ಪಿ ಶ್ರೀನಿವಾಸ ರಾವ್) ಮುಖ್ಯೋಪಾಧ್ಯಾಯರಾಗಿದ್ದ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯಾಗಿದ್ದಾಗಿನ ಒಂದು ಅನುಭವ – ದೊಡ್ಡಪ್ಪನವರ ಮನೆಯಲ್ಲಿಯೇ ನನ್ನ ವಾಸ್ತವ್ಯ. ಅದೊಂದು ದಿನ ಬೆಳಗ್ಗೆ ಮಧ್ಯವಯಸ್ಸಿನ ಪುರುಷರೊಬ್ಬರು ಎರಡು ಚಿಪ್ಪು ಬಾಳೆಹಣ್ಣಿನೊಂದಿಗೆ ಮನೆಗೆ ಬಂದು ‘ಸ್ವಾಮೀ, ಇದು ನಮ್ಮ ತೋಟದ ಹಣ್ಣು. ನಿಮಗೆ ಕೊಡೋಣವೆಂದು ಬಂದೆ’ ಅಂದರು. ದೊಡ್ಡಪ್ಪನವರ ಪ್ರತಿಕ್ರಿಯೆ ‘ ನಿನ್ನ ಮಗ ದಡ್ಡ. ಈ ವರ್ಷ ಫೇಲಾಗುವುದು ಖಾತರಿ. ಅವನನ್ನು ಪಾಸು ಮಾಡಿ ಎಂದು ಹೇಳಲೋಸುಗ ಈ ಲಂಚ ಕೊಡಲು ಬಂದಿದ್ದೀಯಾ, ತೊಲಗಾಚೆ. ಇನ್ನೊಮ್ಮೆ ಇತ್ತ ಸುಳಿದರೆ ಜವಾನರ ಕೈನಿಂದ ತಳ್ಳಿಸುತ್ತೇನೆ’
(ಆ) ನನ್ನ ತಂದೆಯವರು (ದಿ ಎ ಪಿ ವೆಂಕಟಸುಬ್ಬಯ್ಯ) ಸರ್ಕಾರೀ ಆಸ್ಪತ್ರೆಯ ವೈದ್ಯರು. ಅಂದು ಕೊಡಗಿನಲ್ಲಿದ್ದ ಬಹುತೇಕ ಸರ್ಕಾರೀ ಆಸ್ಪತ್ರೆಯ ವೈದ್ಯರಿಗೆ ಆಸ್ಪತ್ರೆಯ ಆವರಣದಲ್ಲಿಯೇ ವಸತಿ ಸೌಕರ್ಯ ಇತ್ತು. ಆದ್ದರಿಂದ, ಆಸ್ಪತ್ರೆಯಲ್ಲಿ ಏನಾದರೂ ವಿಶೇಷ ಘಟನೆ ಘಟಿಸಿದರೆ ಅದನ್ನು ನಾವು ಮನೆಯಿಂದಲೇ ನೋಡಬಹುದಿತ್ತು. ಅದೊಂದು ದಿನ ಇದ್ದಕ್ಕಿದ್ದಂತೆ ಆಸ್ಪತ್ರೆಯಿಂದ ನನ್ನ ತಂದೆಯವರು ಬಲು ಜೋರಾಗಿ ‘ಚೀರುತ್ತಿದ್ದದ್ದು’ ಕೇಳಿಸಿತು. ಅದೇಕೆಂದು ನೋಡಿದಾಗ ಕಂಡದ್ದು – ಅದಾರನ್ನೋ ನನ್ನ ತಂದೆಯವರು ಕತ್ತಿನಪಟ್ಟಿ ಹಿಡಿದು ದರದರನೆ ಎಳೆದು ಆಸ್ಪತ್ರೆಯಿಂದ ಹೊರಹಾಕುತ್ತಿದ್ದರು – ಸರ್ಕಾರೀ ಡಾಕ್ಟರಿಗೆ ಲಂಚ ಕೊಡುವಷ್ಟು ಧೈರ್ಯವೇ ನಿನಗೆ – ಎಂಬ ಉಕ್ತಿಯೊಡನೆ. ಅವನು ಮಾಡಿದ ಅಪರಾಧ – ಚುಚ್ಚುಮದ್ದು ನೀಡಿದ್ದಕ್ಕೆ ಎರಡು ರೂಪಾಯಿ ಕೊಡಲು ಪ್ರಯತ್ನಿಸಿದ್ದು.
(ಇ) ಮಡಿಕೇರಿಯ ಸರ್ಕಾರೀ ಕಾಲೇಜಿನಲ್ಲಿ ನಾನು ವಿದ್ಯಾರ್ಥಿಯಾಗಿದ್ದ ಐದು ವರ್ಷಗಳಲ್ಲಿ ಗಣಿತದ ಉಪನ್ಯಾಸಕರಾಗಿದ್ದ ದಿ. ಜಿ ಟಿ ನಾರಾಯಣ ರಾವ್ ಅವರು ಅವರ ತರಗತಿಗಳಿಗೆ ಒಂದು ನಿಮಿಷ ತಡವಾಗಿ ಬಂದದ್ದೂ ಇಲ್ಲ, ಒಂದು ನಿಮಿಷ ತಡವಾಗಿ ತರಗತಿ ಬಿಟ್ಟದ್ದೂ ಇಲ್ಲ.
ಈ ಉದಾಹರಣೆಗಳನ್ನು ಉಲ್ಲೇಖಿಸಿದ್ದು ಏಕೆ ಎಂಬುದನ್ನು ನೀವು ಊಹಿಸಬಲ್ಲಿರಿ ಎಂದು ನಂಬುತ್ತೇನೆ.
೨. ಅಪೇಕ್ಷಿತ ಮೌಲ್ಯಗಳನ್ನು ಬೆಳೆಸಿಕೊಳ್ಳಲು ತಕ್ಕುದಾದ ಜ್ಞಾನದ ಬುನಾದಿ ಹಾಕಬೇಕು. ಮಕ್ಕಳ ವಯೋಮಾನಕ್ಕೆ ಹೊಂದಾಣಿಕೆ ಆಗುವಂತೆ ನೀತಿಕಥೆಗಳ ಅಧ್ಯಯನ, ಮೌಲ್ಯಗಳನ್ನು ಅಂತಸ್ಥಗೊಳಿಸಿಕೊಳ್ಳ ಬೇಕಾದದ್ದರ ಆವಶ್ಯಕತೆಯ ಕುರಿತಾದ ಚರ್ಚೆ, ಸಾಮಾಜಿಕ ಮತ್ತು ವೈಯಕ್ತಿಕ ಒಳಿತನ್ನು ಸಾಧಿಸಬಲ್ಲ ಮೌಲ್ಯಗಳು ಯಾವುವು ಎಂಬುದರ ಕುರಿತಾದ ಚರ್ಚೆ, ಈ ಮೌಲ್ಯಗಳನ್ನು ಉಲ್ಲಂಘಿಸಿದರೆ ಏನಾಗಬಹುದು ಎಂಬುದರ ಕುರಿತಾದ ಚರ್ಚೆ, ವಿಭಿನ್ನ ಮತಗಳ (ಗಮನಿಸಿ: ‘ಒಂದು ಮತದ’ ಅಲ್ಲ) ‘ಪವಿತ್ರ ಗ್ರಂಥ’ಗಳು ಪ್ರತಿಪಾದಿಸಿರುವ ಇಂದಿಗೂ ಅನುಷ್ಠಾನಯೋಗ್ಯ ಮೌಲ್ಯಗಳ ಸರ್ವೇಕ್ಷಣೆ ಇವೇ ಮೊದಲಾದ ತಂತ್ರಗಳನ್ನು ಉಪಯೋಗಿಸುವುದರಿಂದ ಜ್ಞಾನದ ಬುನಾದಿ ಹಾಕಬಹುದು. ಅನುಕರಣ ಯೋಗ್ಯ ಜೀವಂತ ಮಾದರಿ ಒದಗಿಸದೆ ಇದ್ದರೆ ಈ ತಂತ್ರಗಳು ನಿರೀಕ್ಷಿತ ಫಲ ನೀಡುವುದಿಲ್ಲ.
೩. ಅಪೇಕ್ಷಿತ ಮೌಲ್ಯ ವರ್ತನೆಯ ರೂಪದಲ್ಲಿ ಪ್ರಕಟವಾದಾಗಲೆಲಲ್ಲ ಹಿತಕರ ಅನುಭವ ಆಗುವಂತೆ ಮಾಡಬೇಕು. ಅನೇಕ ಸಲ ಅಂತಸ್ಥ ಉತ್ತಮ ಮೌಲ್ಯ ವರ್ತನೆಯ ರೂಪದಲ್ಲಿ ಪ್ರಕಟವಾದಾಗ ಕಹಿ ಅನುಭವ ಆದರೆ ಆ ಮೌಲ್ಯಕ್ಕೆ ಇರುವ ಬದ್ಧತೆ ಕ್ಷೀಣಿಸುತ್ತದೆ. ನಾವೇಕೆ ಯಾವಾಗಲೂ ಸತ್ಯವನ್ನೇ ನುಡಿಯುವುದಿಲ್ಲ? ಮಾಡುತ್ತಿರುವುದು ತಪ್ಪು ಎಂದು ತಿಳಿದಿದ್ದರೂ ಏಕೆ ಮಾಡುತ್ತೇವೆ? ಇಂಥ ಪ್ರಶ್ನೆಗಳಿಗೆ ಆತ್ಮಾವಲೋಕನದ ಮೂಲಕ ಉತ್ತರ ಅನ್ವೇಷಿಸಿಕೊಂಡರೆ ಈ ಹೇಳಿಕೆಯ ಸತ್ಯತೆ ನಿಮಗೇ ತಿಳಿಯುತ್ತದೆ.
೪. ಅಪೇಕ್ಷಿತ ಮೌಲ್ಯಗಳು ದೃಢವಾಗಿ ಬೇರೂರುವಂತೆ ಮಾಡಲು ಆಗಿಂದಾಗ್ಗೆ ಯುಕ್ತ ಅನುಭವಗಳನ್ನು ಒದಗಿಸಬೇಕು. ಮೌಲ್ಯಗಳು ಅಂತಸ್ಥವಾಗಲು ಒಂದು ಅನುಭವ ಸಾಕಾಗುವುದಿಲ್ಲ. ಇದು ಮಂದಗತಿಯಲ್ಲಿ ಅನೇಕ ಅನುಭವಗಳ ಮುಖೇನ ಜರಗುವ ಪ್ರಕ್ರಿಯೆ. ಎಂದೇ, ಈ ಮುನ್ನ ಹೆಸರಿಸಿದ ತಂತ್ರಗಳ ಜೊತೆಗೆ ಪಾತ್ರಾಭಿನಯ (ರೋಲ್ ಪ್ಲೆ) ತಂತ್ರವನ್ನೂ ಇದಕ್ಕಾಗಿ ಸಾಧ್ಯವಿರುವಷ್ಟು ಹೆಚ್ಚು ಸಂಖ್ಯೆಯಲ್ಲಿ ಪ್ರಯೋಗಿಸ ಬೇಕು.
ಈ ‘ಮಾಡಬೇಕಾದವು’ಗಳ ಪಟ್ಟಿಯಲ್ಲಿ ನಮೂದಿಸಿದ ೧ ನೆಯದ್ದನ್ನು ಮಾಡದೆ ಉಳಿದವುಗಳನ್ನು ಮಾಡುವುದರಿಂದ ನಿರೀಕ್ಷಿತ ಫಲ ದೊರೆಯುವುದಿಲ್ಲ ಅನ್ನುವುದಕ್ಕೆ ಇಂದಿನ ಸಮಾಜದ ಆಗುಹೋಗುಗಳೇ ಪುರಾವೆ.
* * * * * * *
ಚಿತ್ರಕೃಪೆ : t3.gstatic.com
ಉತ್ತಮ ಲೇಖನ. ಮೌಲ್ಯಗಳ ಬಗ್ಗೆ ಮೊದಲು ದೇಶದ ಆಡಳಿತವನ್ನು, ಆಗುಹೋಗುಗಳನ್ನು ನಿರ್ಧರಿಸುವ ರಾಜಕಾರಣಿಗಳು ಹಾಗೂ ಧಾರ್ಮಿಕ ನಾಯಕರು ಅಳವಡಿಸಿಕೊಳ್ಳದಿದ್ದರೆ, ಬರೀ ಉಪದೇಶವನ್ನೇ ನೀಡಿದರೆ ಪ್ರಯೋಜನ ಆಗಲಾರದು. ಮೇಲೆ ಸುರಿದ ನೀರು ಕೆಳಗೆ ಬರುವಂತೆ ಸಮಾಜದಲ್ಲಿ ಗಣ್ಯ ಎನಿಸಿರುವ ವ್ಯಕ್ತಿಗಳು ಮೌಲ್ಯವನ್ನು ತಮ್ಮ ಜೀವನ ಶೈಲಿಯಲ್ಲೇ ಅಳವಡಿಸಿಕೊಂಡರೆ ಅದು ಇಡೀ ಸಮಾಜಕ್ಕೆ ಮಾದರಿಯಾಗುತ್ತದೆ. ಅಂಥ ಪರಿಸ್ಥಿತಿ ಇಲ್ಲದೆ ಪಾಠದಲ್ಲಿ ಮೌಲ್ಯಗಳನ್ನು ಅಳವಡಿಸುವುದರಿಂದ ಪ್ರಯೋಜನ ಆಗುವುದಿಲ್ಲ. ರಾಜ್ಯದಲ್ಲಿ ಮಠಾಧಿಪತಿಗಳು ಭ್ರಷ್ಟರನ್ನು ಬೆಂಬಲಿಸಿ ನಿಂತಿರುವಾಗ ಮೌಲ್ಯಗಳ ಬಗ್ಗೆ ಮಾತಾಡುವುದು ಬಹಳ ದೊಡ್ಡ ವ್ಯಂಗ್ಯ.
ಉತ್ತಮ ಲೇಖನ. ನಮ್ಮಲ್ಲಿ I DO, DO WHAT I TELL ಎಂದು ಆಗಿದೆ. ಇದು DO WHAT I DO ಎಂದಾದರೆ ಮಕ್ಕಳಲ್ಲಿ ಉತ್ತಮ ಮೌಲ್ಯಗಳು ಬೆಳೆಯುವುದಲ್ಲದೆ ಪೋಷಕರು ಸಹ ತಮ್ಮ ನಡೆ-ನುಡಿಗಳಲ್ಲಿ ಎಚ್ಚರವಹಿಸುತ್ತಾರೆ.