ವಿಷಯದ ವಿವರಗಳಿಗೆ ದಾಟಿರಿ

ಜನವರಿ 18, 2012

7

ಸಂಕ್ರಮಣದ ಹಾದಿಯಲ್ಲಿ ನಿಲುಮೆ…

‍ನಿಲುಮೆ ಮೂಲಕ

“ ನೂರು ಮತದ ಹೊಟ್ಟ ತೂರಿ

ಎಲ್ಲ ತತ್ವದ ಎಲ್ಲೆ ಮೀರಿ

ನಿರ್ದಿಗಂತವಾಗಿ ಏರಿ

ಓ ನನ್ನ ಚೇತನ ಆಗು ನೀ ಅನಿಕೇತನ…

ರಸ ಋಷಿ ಕುವೆಂಪು ಅವರ ಈ ನುಡಿಗಳೆ ನಮಗೆ ಸ್ಪೂರ್ತಿ. ಯಾವುದೇ ಜಾತಿ, ಮತ, ತತ್ವಗಳಿಗೆ ಗಂಟು ಬೀಳದೆ, ಎಡ-ಬಲ ಪಂಥೀಯರ ನಡುವೆ ಸಿಕ್ಕಿಕೊಳ್ಳದೆ, ಯಾವುದೇ ಮತ್ತು ಯಾರದೇ ಮರ್ಜಿಗೇ ಬೀಳದೆ ಅನ್ನಿಸಿದ್ದನ್ನು ನೇರವಾಗಿ ಹೇಳುವ, ಆ ಮೂಲಕ ಯಾವ ಗುಂಪಿಗೂ ಸೇರದೆಯೆ ಸ್ವತಂತ್ರವಾಗಿ ಯೋಚಿಸುವ ಬಯಕೆ ನಮ್ಮದು. ಅಷ್ಟಕ್ಕೂ ’ಸತ್ಯ’ ಅನ್ನುವುದು ಎಡ-ಬಲ ಪಂಥದ ಆಸ್ತಿಯೇನು ಅಲ್ಲವಲ್ಲ. ಅದು ಈ ಇಬ್ಬರ ನಡುವೆಯು ಸಿಲುಕದೆ ತನ್ನ ಪಾಡಿಗದು ಯಾವುದೋ ಮೂಲೆಯಲ್ಲಿ ನಿರ್ಲಿಪ್ತವಾಗಿರುತ್ತದೆ. ಅದನ್ನ ಹುಡುಕುವ ಮುಗ್ಧ ಆಸೆ ನಮ್ಮದು.ನೊಂದ ಜೀವಗಳಿಗೆ ದನಿಯಾಗುವ ಬಯಕೆ ನಮ್ಮದು… ”

ಮೇಲಿನ ಮಾತುಗಳು ’ನಿಲುಮೆಯ ನಿಲುವಿನಲ್ಲಿ’ ನಾವು ಬರೆದುಕೊಂಡಿರುವುದು. ನಿಲುಮೆ ಶುರುವಾದ ವರುಷದ ಅವಧಿಯಲ್ಲಿ ಮೇಲಿನ ಮಾತುಗಳಿಗೆ ನ್ಯಾಯ ಸಲ್ಲಿಸಿದ್ದೇವೆ ಅನ್ನುವ ಭಾವನೆ ನಮ್ಮದು.ಇದುವರೆಗೂ ನಿಲುಮೆಗೆ ಕಳಿಸಲ್ಪಟ್ಟ ಲೇಖನಗಳನ್ನು, ನಾವು ನಮ್ಮ ವಾದ,ನಂಬಿಕೆ,ಅಭಿಪ್ರಾಯಕ್ಕೆ ವಿರುದ್ಧವಾಗಿದೆ ಅನ್ನುವ ಕಾರಣಕ್ಕೆ ಪ್ರಕಟಿಸದೇ ತಡೆ ಹಿಡಿದವರಲ್ಲ.ವಿಭಿನ್ನ ಸಂಸ್ಕೃತಿ,ಆಚಾರ,ವಿಚಾರ,ನಂಬಿಕೆಗಳನ್ನುನ ಗೌರವಿಸಬೇಕು ಅನ್ನುವುದು ಕೇವಲ ನಮ್ಮ ಮಾತಲ್ಲ,ಅದನ್ನ ನಿಲುಮೆ ಶುರುವಾದ ವರುಷದ ಅವಧಿಯಲ್ಲಿ ಕಾರ್ಯಗತಗೊಳಿಸಿದ್ದೇವೆ ಕೂಡ. ಆದರೆ ಒಂದು ಮಾತು ನಿಜ.ಕೆಲವೊಂದು ಲೇಖನಗಳು ಯುನಿಕೋಡ್ನಲ್ಲಿರದ ಕಾರಣ, ಇನ್ನು ಕೆಲವು ಸಾಂಧರ್ಭಿಕ ಲೇಖನಗಳನ್ನ ನಾವು ನೋಡುವಷ್ಟರಲ್ಲೇ ತಡವಾಗಿದ್ದರಿಂದ ಕೆಲವು ಪ್ರಕಟವಾಗಿಲ್ಲ.ಹಾಗೇಯೇ ತೀರಾ ವೈಯುಕ್ತಿಕ ಮಟ್ಟಕ್ಕಿದ್ದವು ಅನ್ನಿಸಿದ ಒಂದೆರಡು ಲೇಖನಗಳನ್ನ ಆಯಾ ಲೇಖಕರ ಗಮನಕ್ಕೆ ತಂದು ಅಳಿಸಿ ಹಾಕಿದ್ದೇವೆ.(ನಿಲುಮೆ ನಮ್ಮ ಹವ್ಯಾಸದ ಭಾಗವಾಗಿರುವುದರಿಂದ, ಕೆಲವೊಮ್ಮೆ ಕೆಲಸದ ಒತ್ತಡದಲ್ಲಾಗುವ ತಪ್ಪುಗಳಿವು, ಮನ್ನಿಸಿ).ಇವಿಷ್ಟು ಕಾರಣ ಬಿಟ್ಟರೆ ನಮಗೆ ಕಳಿಸಲ್ಪಟ್ಟ ಎಲ್ಲ ಲೇಖನಗಳನ್ನು ನಾವು ಪ್ರಕಟಿಸಿದ್ದೇವೆ.

ಇನ್ನು, ಕೆಲವು ಲೇಖನಗಳಿಂದಾಗಿ, ಕೆಲವರು ನಮ್ಮನ್ನು ಬಲಪಂಥೀಯರನ್ನಾಗಿಯೂ ಮಾಡಿದರು. ಆದರೆ ಎಡಪಂಥೀಯರನ್ನಾಗಿ ಮಾಡಿದ್ದು ಸ್ವಲ್ಪ ಕಡಿಮೆಯೇ ಅನ್ನಬಹುದು.ಇದಕ್ಕೂ ನಾವೇನು ಕಾರಣರಲ್ಲ. ಮೇಲೆ ಹೇಳಿದ ಹಾಗೆ ಬಂದಿದ್ದನ್ನೆಲ್ಲಾ ಯಾವುದೇ ಫಿಲ್ಟರ್ ಇಲ್ಲದೆ ನಿಮ್ಮ ಮುಂದೆ ಇಡುತ್ತಲೇ ಬಂದಿದ್ದೇವೆ. ಇನ್ನೂ ನಮ್ಮನ್ನ ಯಾವ ಪಂಥಕ್ಕೆ ಸೇರಿಸಬೇಕು ಅನ್ನುವುದು ನಿಮಗೇ ಬಿಟ್ಟದ್ದು.  ಇದ್ದಿದ್ದು ಇದ್ದ ಹಾಗೇ ಹೇಳಿದ್ದರಿಂದಾಗಿಯೇ, ಕೆಲವು ಜನರ ಪಾಲಿಗೆ ನಾವು ಅಸ್ಪೃಷ್ಯರು ಆಗಿದ್ದೇವೆ, ಹಾಗೆಯೇ ಹಲವು ಜನರ ಸ್ನೇಹವು ನಮಗೆ ಸಿಕ್ಕಿದೆ. ಆ ಮಟ್ಟಿಗಿನ ತೃಪ್ತಿಯು ನಮಗಿದೆ. ಕೆಲವು ಬ್ಲಾಗುಗಳು ನಾವು ಅವರ ಬಗ್ಗೆ ಪ್ರೀತಿಯಿಂದ ಮಾತಾಡಿದ್ದನ್ನು ಪ್ರಕಟಿಸಿದರು. ನೇತ್ಯಾತ್ಮಕ ಅಂಶಗಳನ್ನು ಹೇಳಿದಾಗ ಮನಿಸಿಕೊಂಡಿದ್ದು ಉಂಟು. ಅದು ಅವವರ ಭಕುತಿಗೆ ಬಿಟ್ಟ ವಿಷಯ.ಇನ್ನು, ಇದುವರೆಗೂ ನಿಲುಮೆ ತಂಡದಲ್ಲಿ ಯಾರ್ಯಾರು ಇದ್ದಾರೆ ಅನ್ನುವುದು ಬಹಳಷ್ಟು ಜನರಿಗೆ ಗೊತ್ತಿರಬಹುದು, ಗೊತ್ತಿಲ್ಲದೆಯೂ ಇರಬಹುದು.ಯಾವುದೇ ಹಿಡನ್ ಅಜೆಂಡವನ್ನೇನು ಇಟ್ಟುಕೊಂಡು ಮುಖ ಮುಚ್ಚಿಕುಳಿತಿರುವವರು ನಾವಲ್ಲ. ಅಷ್ಟಕ್ಕೂ ನಿಲುಮೆ ನಡೆಯುತ್ತಿರುವುದು ಕೇವಲ ನಮ್ಮಿಂದ ಅಲ್ಲ,ಅದಕ್ಕೆ ಕಾರಣ ನಾವು ಮೊದಲೇ ಹೇಳಿದಂತೆ ನಮ್ಮ ಲೇಖಕರ ಬಳಗ ಮತ್ತು ಓದುಗ ಮಿತ್ರರು.ಇವರೇ ಮುಖ್ಯವಾದಾಗ ನಾವು ನಮ್ಮ ಹೆಸರು ಹೇಳಿಕೊಂಡು ಓಡಾಡುವುದು ತೋರಿಕೆಯಾಗಬಹುದು ಅನ್ನುವ ಕಾರಣಕ್ಕಾಗಿ ಮಾತ್ರ. ನಿಲುಮೆಯ ಓದುಗರು ಅಪೇಕ್ಷಿಸಿದರೆ ಸದಸ್ಯರ ಪಟ್ಟಿಯನ್ನು ಖಂಡಿತ ನಿಮ್ಮ ಮುಂದೆ ಇಡುತ್ತೇವೆ. ಹೆಸರು ಹೇಳಿಕೊಳ್ಳದೆ ಇರುವುದು ಕೇವಲ ಮುಜಗರದ ವಿಷಯಕ್ಕಾಗಿ. ನಾವು ಮಾಡುತ್ತಿರುವ ಚಿಕ್ಕ ಕೆಲಸಕ್ಕೆ ದೊಡ್ಡ ಪ್ರಚಾರ ಬೇಡ ಎಂಬ ಕಾರಣಕ್ಕಾಗಿ.

ಇನ್ನು ಕಮೆಂಟುಗಳನ್ನೂ ಮಾಡರೇಟ್ ಮಾಡುವುದರಲ್ಲೂ ನಮಗೆ ನಂಬಿಕೆಯಿಲ್ಲ. ನಿಲುಮೆಯಲ್ಲಿ ’ವಾಕ್ ಸ್ವಾತಂತ್ರ್ಯ’ವಿದೆ.ಹಾಗಂದ ಮಾತ್ರಕ್ಕೆ ನಾವು ಕಮೆಂಟುಗಳಿಗೆ ಕತ್ತರಿ ಪ್ರಯೋಗ ಮಾಡಿಲ್ಲವೆಂದಲ್ಲ.ಅಸಭ್ಯ ಭಾಷೆ ಬಳಸಲ್ಪಟ್ಟ ಬಹುತೇಕ ಎಲ್ಲ ಪ್ರತಿಕ್ರಿಯೆಗಳನ್ನೂ ತೆಗೆದುಹಾಕಿದ್ದೇವೆ, ಹಾಕುತ್ತಲೂ ಇರುತ್ತೇವೆ. ಸ್ವಾತಂತ್ರ್ಯವನ್ನ ಸ್ವೇಚ್ಚಾಚಾರ ಮಾಡಿಕೊಳ್ಳಲು ಬಿಡುವುದೂ ಇಲ್ಲ.

ವರ್ಲ್ಡ್‌ಪ್ರೆಸ್ ಡಾಟ್ ಕಾಮ್‌ನಲ್ಲಿ ಆರಂಭವಾದ ನಿಲುಮೆ ಮಕರ ಸಂಕ್ರಮಣದ ಸುಸಂದರ್ಭದಲ್ಲಿ ನಿಲುಮೆಯು ನಿಲುಮೆ.ನೆಟ್ ಎಂಬ ಹೆಸರಿನೊಂದಿಗೆ ವೆಬ್‌ಸೈಟ್ ಆಗಿ ರೂಪುಗೊಂಡಿದೆ. ಕನ್ನಡ ಯುವ ಸಮುದಾಯದ ವೈಚಾರಿಕ, ಸಾಹಿತ್ಯಿಕ, ರಾಜಕೀಯ ಮತ್ತು ಸಾಂಸ್ಕೃತಿಕ ವಿಚಾರಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ವೇದಿಕೆಯ ರೂಪದಲ್ಲಿ ನಿಮ್ಮ ಮುಂದೆ ನಿಂತಿದ್ದೇವೆ. ಜನರ ಗಮನಸೆಳೆದು ನಾಡಿನ ಅನೇಕ ಮಹತ್ವದ ವಿಷಯಗಳನ್ನು ಚರ್ಚಿಸುವಲ್ಲಿ, ಚಿಂತನೆಗಳನ್ನು ರೂಪಿಸುವಲ್ಲಿ ಇನ್ನೂ ಸಕ್ರಿಯವಾಗಿ ಪಾಲ್ಗೊಳ್ಳುವ ಆ ಮೂಲಕ ಸಮಾಜದ ಧನಾತ್ಮಕ ಮೌಲ್ಯಗಳನ್ನು ವೃದ್ಧಿಸುವಲ್ಲಿ ತನ್ನದೇ ಕೊಡುಗೆಗಳನ್ನು ನೀಡುವ ಮತ್ತು ಯಾವುದೇ ಪಂಥ,ವಾದ,ವಿಚಾರಗಳಿಗೆ ಅಂಟಿಕೊಳ್ಳದೇ ಎಲ್ಲ ನಿಲುವಿನ ವಿಚಾರಗಳಿಗೂ ಸಮಾನ ಪ್ರಾತಿನಿಧ್ಯ ನೀಡುತ್ತೇವೆ ಅನ್ನುವುದು ಓದುಗ ದೊರೆಗಳಿಗೆ ನಿಲುಮೆಯ ವಾಗ್ಧಾನ.

ನಿಲುಮೆಗೆ ನಾಡಿನ ಹಿರಿಯರು, ಗಣ್ಯರು ತಮ್ಮ ಸಲಹೆ, ಸಹಕಾರಗಳನ್ನು ನೀಡುತ್ತಾ ಬಂದಿದ್ದಾರೆ. ಅಷ್ಟರಮಟ್ಟಿಗೆ ನಿಲುಮೆಯು ಬೆಳೆದುನಿಂತಿದೆ. ಆದರೆ ತಲುಪಬೇಕಾದ ಗಮ್ಯವು ಇನ್ನೂ ಬಹಳ ದೂರದಲ್ಲಿದೆ.

ಇದೆಲ್ಲ ಹೇಳಿದ ಮೇಲೆ ನಿಮ್ಮ ಬಗ್ಗೆ ಹೇಳದಿದ್ದರೆ ಅದು ಅಪೂರ್ಣ. ನೀವು ನಮ್ಮ ಬೆನ್ನಿಗೆ ನಿಂತವರು. ನಿಮ್ಮಗಳ ಪ್ರೋತ್ಸಾಹ ನಿಲುಮೆಯನ್ನು ಈ ಮಟ್ಟಕ್ಕೆ ಬೆಳೆಸಿದೆ. ಹಿರಿಯರ ಮಾರ್ಗದರ್ಶನ ಕಿರಿಯರ ಪ್ರೀತಿ ಎರಡು ನಿಲುಮೆಯನ್ನು ಸಾಕಷ್ಟು ಪ್ರೋತ್ಸಾಹಿಸಿವೆ. ಅದಕ್ಕೆ ನಿಲುಮೆ ನಿಮಗೆ ಚಿರರುಣಿ. ಹಾಗೆ ಮತ್ತೊಮ್ಮೆ ನಿಮ್ಮನ್ನು ನಿಲುಮೆ ಭಿನ್ನವಿಸುವುದು ಏನೆಂದರೆ ಹೇಗೆ ನಿಲುಮೆಯನ್ನು ಇನ್ನಷ್ಟು ಜನರಿಗೆ ತಲುಪಿಸಬಹುದು ಎಂಬ ನಿಮ್ಮ ಅಭಿಪ್ರಾಯಕ್ಕಾಗಿ. ಇದರಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಏನು ಎಂಬ ಪ್ರೀತಿಯ ಒತ್ತಾಯಕ್ಕಾಗಿ. ನಿಮ್ಮಗಳ ಪ್ರೀತಿಯೇ ನಿಲುಮೆಯ ಹರುಷ.ನಿಲುಮೆಯ ಸಂಕ್ರಮಣದ ಸಂಭ್ರಮದಲ್ಲಿ ನೀವೂ ಪಾಲ್ಗೊಳ್ಳಿ. ನಿಲುಮೆಯ ಬಗ್ಗೆ ನಿಮ್ಮ ಅನಿಸಿಕೆ, ಅಭಿಪ್ರಾಯ, ಟೀಕೆ ಟಿಪ್ಪಣಿಗಳನ್ನ(nilume+feedback@sify.com ಗೆ) ಕಳಿಸಿಕೊಡಿ. ಸಹ್ಯ ಭಾಷೆಯಲ್ಲಿರುವ ಟೀಕೆ-ಟಿಪ್ಪಣಿಗಳನ್ನೂ, ಪ್ರೀತಿಯ ಮಾತುಗಳನ್ನೂ ಎಲ್ಲವನ್ನು ನಾವು ಇಲ್ಲೇ ಪ್ರಕಟಿಸುತ್ತೇವೆ.

ನಿಮ್ಮೊಲುಮೆಯ,

ನಿಲುಮೆ

7 ಟಿಪ್ಪಣಿಗಳು Post a comment
  1. ಜನ 18 2012

    ಶುಭಾಶಯಗಳು

    ಉತ್ತರ
  2. ಜನ 18 2012

    ಶುಭಾಶಯಗಳು ನಿಲುಮೆಗೆ, ಮುಂದೆ ಹೀಗೆ ಅಭಿವೃದ್ಧಿಯಾಗಿ ಎತ್ತರೆತ್ತರಕ್ಕೆ ಬೆಳೆಲಿ ಎಂದು ಆಶಿಸುತ್ತೇವೆ 🙂

    ಉತ್ತರ
  3. ಜನ 18 2012

    ನಿಜಕ್ಕೂ ಅತ್ಯಂತ ಸಂತೋಷಕರ ವಿಚಾರ..!
    ತುಂಬಾ ದಿನದಿಂದ ನಿಲುಮೆಯ ಬೆಳವಣಿಗೆಯ ಬಗ್ಗೆ ಗಮನಿಸುತ್ತಾ ಬಂದು, ಇಂದು ಈ ಮಟ್ಟಿಗೆ ಬೆಳವಣಿಗೆಯ ಹೆಜ್ಜೆ ಇಟ್ಟಿರುವುದು ತುಂಬಾ ಸಮಾಧಾನಕರ ವಿಷಯ. ನಿಲುಮೆ ಚೆನ್ನಾಗಿ ಬೆಳೆಯಲಿ. ಎಲ್ಲಾ ತತ್ವದ ಎಲ್ಲೆ ಮೀರಿ ನಿಲ್ಲಲಿ. ಅದನ್ನ ಎಲ್ಲರೂ ಅರ್ಥ ಮಾಡಿಕೊಂಡು ಬೆಂಬಲಿಸಲಿ. ಇನ್ನೂ ಹೆಚ್ಚಿನ, ಉತ್ತಮೋತ್ತಮ ಬರಹಗಳು ನಿಲುಮೆಯಿಂದ ಹೊರಹೊಮ್ಮಲಿ. ಇನ್ನೂ ಅನೇಕ ಹೊಸತು ನಿಲುಮೆಯಿಂದ ಬರಲಿದೆ ಎಂಬ ವಿಚಾರ, ನಿಜಕ್ಕೂ ಉತ್ತೇಜನಕಾರಿ. ಕನ್ನಡಿಗರಿಗೆ, ನಿಲುಮೆ ಎಲ್ಲಾ ರೀತಿಯಲ್ಲಿ ಬೆಂಬಲವಾಗಿ ನಿಲ್ಲಲಿ.

    ನಿಮ್ಮೊಲವಿನ,
    ಸತ್ಯ.. 🙂

    ಉತ್ತರ
  4. ಜನ 18 2012

    ನಿಲುಮೆ.ನೆಟ್ ಗೆ ಸ್ವಾಗತ. ನಿಮ್ಮ ಪ್ರಯತ್ನ ನಿಜಕ್ಕೂ ಅಭಿನ೦ದನೀಯ. ತಮ್ಮ ಸಾಹಸದಿ೦ದ ಕನ್ನಡಕ್ಕೆ ಹೊಸ ಸಾಹಿತ್ಯ ಹೂರಣ ದೊರೆತಿದೆ. ನಿಮ್ಮೊ೦ದಿಗೆ ನಾವು ಎ೦ದೆ೦ದೂ ಇದ್ದೇವೆ. ‘ನಿಲುಮೆ’ಯ ನಿಲುವು ಶ್ಲಾಘನೀಯ. ಶುಭಾಶಯಗಳು
    …….ಅರೆಹೊಳೆ

    ಉತ್ತರ
  5. ಜನ 18 2012

    ನಿಲುಮೆಯ ಪ್ರತಿ ಹೆಜ್ಜೆಯಲ್ಲೂ ಯಶಸ್ಸು ಕಾಣಲಿ, ಕೆಲವೇ ವರ್ಷಗಳಲ್ಲಿ ಕನ್ನಡದ ಬ್ಲಾಗಿಗರಿಗೆ ಪರ್ಯಾಯ ಹಾಗೂ ಚಿಂತನಾಶೀಲ ಉಡುಗೊರೆಗಳನ್ನು, .ನೆಟ್ನ ಸಹಯೋಗವನ್ನು ಹೊಂದಿಸಲು ಸಹಕರಿಸಿದ ಸಮಸ್ತ ನಿಲುಮೆಯ ತಂಡಕ್ಕೆ ಹಾರ್ದಿಕ ಅಭಿನಂದನೆಗಳು

    ಉತ್ತರ
  6. ಪುಷ್ಪರಾಜ್ ಚೌಟ
    ಜನ 19 2012

    ಅಂತರ್ಜಾಲ ತಾಣದಲ್ಲಿ ಕನ್ನಡದ ಸುಮವಾಗಿ, ಎಲ್ಲ ತತ್ವದ ಎಲ್ಲೆ ಮೀರಿ ವಿಜ್ರಂಭಿಸುತ್ತಿರುವ ನಿಲುಮೆ ಉತ್ತರಾಯಣ ಪುಣ್ಯಕಾಲದಲ್ಲಿ ಹೊಸದೊಂದು ದಿಕ್ಕಿನತ್ತ ದಿಟ್ಟ ಹೆಜ್ಜೆ ಇಟ್ಟಿದ್ದು ಕಂಡು ಖುಶಿಯಾಯ್ತು. ಉತ್ತರೋತ್ತರ ಯಶಸ್ಸು ನಿಲುಮೆ ತಂಡದ್ದಾಗಲಿ. ಶುಭವಾಗಲಿ.

    ಉತ್ತರ
  7. ಅಜೇಯಕುಮಾರ
    ಜನ 19 2012

    ನನಗೆ ನಿಲುಮೆಯ ಈ ಕೆಲಸವನ್ನು ನೋಡಿ ಸಂತೋಷವಾಗಿದೆ. ನಿಲುಮೆ ನಿಲ್ಲದೆ ಕೆಲಸಮಾಡಲಿ ಎಂದು ಆಶಿಸುತೇನೆ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments