ಸಂಸ್ಕೃತಿ ಸಂಕಥನ – 19 – ವಿಚಾರಕ್ಕೂ ಆಚಾರಕ್ಕೂ ಏನು ಸಂಬಂಧ ?
-ರಮಾನಂದ ಐನಕೈ
ನಮ್ಮೂರಿನಲ್ಲಿ ಒಬ್ಬರು ವಿಚಾರವಂತರಿದ್ದಾರೆ. ನಿಜವಾಗಲೂ ಅವರು ಚಿಂತಕರೆ, ನಾವೆಲ್ಲ ತಮಾಷೆಗಾಗಿ ಅವರನ್ನು ಸೆಕ್ಯುಲರ್ ಚಿಂತಕರು ಎಂದು ಕರೆಯುತ್ತೇವೆ. ಯಾವತ್ತೂ ವೇದಿಕೆಯ ಮೇಲೆ ಅವರು ನಾಸ್ತಿಕತೆಯ ಕುರಿತಾಗಿ ಮಾತನಾಡುತ್ತಾರೆ. ದೇವರುಗಳನ್ನು ಟೀಕಿಸುತ್ತಾರೆ. ಗ್ರಾಮೀಣ ಜನರ ಆಚಾರಗಳು ಮೌಢ್ಯವೆಂದು ಗುರುತಿಸುತ್ತಾರೆ. ಹೊರಗೆ ಬಂದಾಗ ಹೆಂಡ, ಸಿಗರೇಟುಗಳೆಲ್ಲ ಅವರ ಆಪ್ತ ಸಂಗಾತಿಗಳು. ಆದರೆ ಆ ವ್ಯಕ್ತಿ ಅವರ ಊರಿನಲ್ಲಿ ಒಬ್ಬ ಪೂಜಾರಿ. ಮನೆಯಲ್ಲಿ ಕರ್ಮಠ ಆಸ್ತಿಕರು. ಜಪ-ತಪ, ಮಡಿ-ಮೈಲಿಗೆ ಮುಂತಾದವುಗೆಳೆಲ್ಲವೂ ಅವರ ನಿತ್ಯಕರ್ಮಗಳು. ಜ್ಯೋತಿಷ್ಯ, ಶಕುನ ಮುಂತಾದವುಗಳೆಲ್ಲದರಲ್ಲೂ ಪ್ರವೀಣರು. ಶನಿವಾರ ಅವರ ಮನೆ ಮುಂದೆ ಜನರ ಸರದಿ ಇರುತ್ತದೆ. ಈ ವ್ಯಕ್ತಿಯನ್ನು ನಾವು ಯಾವ ರೀತಿ ಅರ್ಥೈಸೋಣ? ಸಾರ್ವಜನಿಕವಾಗಿ ಅವರು ವ್ಯಕ್ತಪಡಿಸುವ ವಿಚಾರಗಳು ನಿಜವೇ ಇರುತ್ತದೆ. ವೈಯಕ್ತಿಕವಾಗಿ ಅವರು ವ್ಯಕ್ತಪಡಿಸುವ ವಿಚಾರಗಳು ನಿಜವೇ ಇರುತ್ತದೆ. ವೈಯಕ್ತಿಕವಾದ ಅವರ ಆಚರಣೆಯೂ ಶುದ್ಧವಾಗಿರುತ್ತದೆ. ಇವೆರಡರಲ್ಲಿ ಯಾವುದು ತಪ್ಪು ಅನ್ನಲು ಸಾಧ್ಯ? ಇದೇ ಭಾರತದ ಆಧುನಿಕ ವಿಚಾರವಾದಿಗಳ ಸಮಸ್ಯೆ.
ವಿಜ್ಞಾನಿಯೊಬ್ಬರು ದೇವರ ಫೋಟೋ ಪೂಜಿಸುವುದು, ದೇವಸ್ಥಾನಕ್ಕೆ ಹೋಗುವುದು ಹಾಸ್ಯಾಸ್ಪದ ಅನಿಸುತ್ತದೆ. ಲಕ್ಷ್ಮೀ ಪೂಜೆಯ ದಿನ ಕಂಪ್ಯೂಟರಿಗೆ ಬಿಳಿಪಟ್ಟೆ ಎಳೆದು ಪೂಜಿಸಿದರೆ ನಗು ಬರುತ್ತದೆ. ಸೂರ್ಯ, ಚಂದ್ರ ಭೂಮಿಯ ಪರ್ಯಟನದಿಂದಾಗಿ ಗ್ರಹಣವಾಗುತ್ತದೆ ಎಂಬ ವೈಜ್ಞಾನಿಕ ಸತ್ಯ ನಮಗೆ ಗೊತ್ತಿದೆ. ಆದರೂ ಉಪವಾಸ ಇರುತ್ತೇವೆ. ದೇವರನ್ನು ಮುಳುಗಿಸಿಬಿಡುತ್ತೇವೆ. ಮನೆಯ ಬಿಟ್ಟು ರಸ್ತೆಗೇ ಬರುವುದಿಲ್ಲ. ಗ್ರಹಣದ ನಂತರ ಸ್ನಾನ ಮಾಡುತ್ತೇವೆ. ಯಾಕೆ? ತಿಳಿದಿರುವುದೊಂದು ಮಾಡುವುದೊಂದು, ಹೇಳುವುದೊಂದು ಮಾಡುವುದೊಂದು. ಇದನ್ನೇ ಸೋಗಲಾಡಿತನ ಎಂದು ಟೀಕಿಸುತ್ತೇವೆ.
ಇಲ್ಲಿ ಗಮನಿಸಬೇಕಾದ ಇನ್ನೊಂದು ಸಂಗತಿ ಅಂದರೆ ಇಂಥ ವಿಚಾರಗಳು, ಪ್ರಶ್ನೆಗಳು ವಿದ್ಯಾವಂತರಲ್ಲೇ ಹೆಚ್ಚು ಉದ್ಭವಿಸುತ್ತವೆ. ಗ್ರಾಮೀಣ ಭಾಗದ ಸಂಪ್ರದಾಯಗಳಲ್ಲಿ ಬದುಕುತ್ತಿದ್ದವರು ಇದನ್ನು ಸಹಜವಾಗಿ ಸ್ವೀಕರಿಸಿಬಿಡುತ್ತಾರೆ. ಅವರು ಸಂಪ್ರದಾಯಗಳನ್ನು ಆಚರಿಸುತ್ತಾರೆಯೇ ವಿನಾ ಪ್ರಶ್ನಿಸುವುದಿಲ್ಲ. ಸಂಪ್ರದಾಯಗಳನ್ನು ಪ್ರಶ್ನಿಸುವವರನ್ನೂ ಅವರು ಪ್ರಶ್ನಿಸಲಾರರು. ಜನರ ಆಚಾರ ಮತ್ತು ವಿಚಾರಗಳ ಮಧ್ಯದ ಭಿನ್ನತೆ ವಿಚಾರವಂತರಿಗೆ ಮಾತ್ರ ಹೆಚ್ಚು ಕಾಣಲು ಕಾರಣವೇನು?
ಎಲ್ಲಕ್ಕಿಂತ ಮುಖ್ಯವಾಗಿ ಇಂಥ ಪ್ರಶ್ನೆಗಳು ಯಾರಿಗೆ ಏಕೆ ಉದ್ಭವಿಸುತ್ತವೆ? ಇದು ಅರ್ಥವಾಗಬೇಕಾದರೆ ಬಾಲಗಂಗಾಧರರ ಬರಹಗಳನ್ನು ಓದಬೇಕು. ಅವರು ಪ್ರಾಚೀನ ರೋಮಿನ ಚಿತ್ರಣವನ್ನು ಯಥಾವತ್ತಾಗಿ ಇಡುತ್ತಾರೆ. ರೋಮ್ ಸಂಸ್ಕೃತಿಗೂ ನಮ್ಮ ಸಂಸ್ಕೃತಿಗೂ ಕೆಲವು ಹೋಲಿಕೆಗಳು ಕಾಣುತ್ತವೆ. ಇಲ್ಲಿನ ಅನೇಕ ಪಂಡಿತರ ವಿಚಾರಗಳಿಗೂ ಆಚಾರಗಳಿಗೂ ಸಾಮ್ಯತೆ ಇಲ್ಲದ್ದನ್ನು ನಾವು ಕಾಣುತ್ತೇವೆ.
ರೋಮಿನ ಸಂಪ್ರದಾಯಿಕ ವಿಧಿಗಳಿಗೆ ರಿಲಿಜಿಯೋ ಎಂದು ಕರೆಯುತ್ತಿದ್ದರು. ಇದನ್ನೇ ಕ್ರಿಶ್ಚಿಯಾನಿಟಿ ಸಂಸ್ಕರಿಸಿಕೊಂಡು ರಿಲಿಜನ್ ಎಂದು ಕರೆಯಿತು. ರೋಮಿನ ಅನೇಕ ಸುಪ್ರಸಿದ್ಧ ಚಿಂತಕರು ದೇವತೆಗಳನ್ನು ನಂಬಿರಲಿಲ್ಲ. ಆದರೂ ರಿಲಿಜನ್ನಿನ ಆಚರಣೆಗಳಲ್ಲಿ ಭಾಗವಹಿಸಿದ್ದರು. ಅದಕ್ಕೆ ಚಿಂತಕ ಸಿಸೆರೊನನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಸಿಸಿರೊನು ತನ್ನ (De Natura Deorum (On the Nature of the Gods))ನಲ್ಲಿ ರಿಲಿಜನ್ನನ ಉಗಮದ ಕುರಿತು ಮಂಡಿಸಿದ ಸಾಮಾಜಿಕ, ಮನಃಶಾಸ್ತ್ರೀಯ ಹಾಗೂ ಜ್ಞಾನ ಸಂಬಂಧೀ ಪರಿಕಲ್ಪನೆಗಳನ್ನು ಅದಕ್ಕೂ ಚೆನ್ನಾಗಿ ಇಂದಿನವರೆಗೆ ಯಾರೂ ಮಂಡಿಸಿಲ್ಲ. ವಿಪರ್ಯಾಸವೆಂದರೆ 18ನೇ ಶತಮಾನದ ಜ್ಞಾನಯುಗದಲ್ಲಿ ರಿಲಿಜನ್ನಿನ ವಿರುದ್ಧ ವಾಗ್ದಾಳಿಯನ್ನು ನಡೆಸಿದ ಐರೋಪ್ಯ ಚಿಂತಕರು ಬಳಸಿದ ವಾದಗಳೆಲ್ಲ ಸಿಸೆರೊನ ಈ ಏಕೈಕ ಕೃತಿಯನ್ನು ಆಧರಿಸಿದ್ದು. ಇಷ್ಟೆಲ್ಲ ಕ್ರಾಂತಿಕಾರಿ ಚಿಂತಕನಾದ ಸಿಸೆರೊ ತಾನೇ ಸ್ವತಃ ಒಬ್ಬ ಪೂಜಾರಿಯಾಗಿದ್ದ. ಶಕುನಗಳ ಕುರಿತು ಸಂಶಯ ಹಾಗೂ ಟೀಕೆಗಳನ್ನು ಮಾಡುತ್ತಿದ್ದ. ಆತನು ಗಣರಾಜ್ಯದಲ್ಲಿ ಶಕುನಕ್ಕೆ ಸಂಬಂಧಿಸಿದ ಸಮೀತಿಯ ಸದಸ್ಯನೂ ಆಗಿದ್ದನು. ಚಿಂತಕ ಪ್ಲುಟಾರ್ಕ್ ಕೂಡಾ ತನ್ನ ಇಳಿವಯಸ್ಸಿನಲ್ಲಿ ಪೂಜಾರಿಯಾಗಿದ್ದು ದೈವೀಶಿಕ್ಷೆ ಹಾಗೂ ಅನ್ಯಲೋಕದ ಭಯಾನಕತೆಯ ಕುರಿತು ಪ್ರಬಂಧಗಳನ್ನು ರಚಿಸುತ್ತಿದ್ದನು. ಅದೇ ರೀತಿ ಗ್ರೀಸಿನ ಎಪಿಕ್ಯೂರಸ್ ಅವನ ಅನುಯಾಯಿಯಾದ ಲ್ಯೂಕ್ರಿಶಿಯಸ್ ಎಲ್ಲರೂ ದೇವರುಗಳನ್ನು ವಿಮರ್ಶಿಸುತ್ತಲೂ ದೇವತೆಗಳನ್ನು ಪೂಜಿಸುತ್ತಲೇ ನಡೆದವರು.
ಈ ಪ್ರಾಚೀನ ಚಿಂತಕರ ಮಾತು ಮತ್ತು ಕೃತಿಯ ನಡುವಿನ ಅಂತರವು ಇಂದಿನವರ ದೃಷ್ಟಿಗೆ ಕುತೂಹಲಕಾರಿಯಾಗಿ ಸೋಗಲಾಡಿತನವಾಗಿ ಕಾಣಿಸುವುದು ಸಹಜ. ಮನುಷ್ಯರಿಗೆ ಈ ರೀತಿಯ ಮಾತು ಮತ್ತು ಕೃತಿಯ ನಡುವೆ ಂತರ ಇರಬಾರದೆಂಬ ದೃಷ್ಟಿಕೋನ ಎಲ್ಲಿಂದ ಬಂತು? ಬಾಲಗಂಗಾಧರರ ಪ್ರಕಾರ ಈ ದೃಷ್ಟಿ ಯುರೋಪಿನ ಜ್ಞಾನೋದಯ ಯುಗದ ಚಿಂತಕರದ್ದು.
ಕ್ರಿಶ್ಚಿಯನ್ ರಿಲಿಜನ್ನಿನ ಪ್ರಕಾರ ಪ್ರತಿಯೊಂದು ಕ್ರಿಯೆಯೂ ನಂಬಿಕೆ ಹಾಗೂ ಉದ್ದೇಶಗಳನ್ನಾಧರಿಸಿಯೇ ಇರುತ್ತದೆ. ಗಾಡ್ ರಿಲಿಜನ್ ಕೊಟ್ಟಿದ್ದಾರೆ. ಈ ರಿಲಿಜನ್ನಿನ ಡಾಕ್ಸ್ರಿನ್ಗಳನ್ನು ನಂಬಿ ಆಚರಿಸಬೇಕು. ಅಂದರೆ ಗಾಡ್ನನ್ನು ಹಾಗೂ ರಿಲಿಜನ್ನನ್ನು ಯಾರೂ ಪ್ರಶ್ನಿಸುವ ಹಾಗಿಲ್ಲ. ಅಂದರೆ ನಮ್ಮ ಆಚರಣೆಗಳು ನಂಬಿಕೆಗಳನ್ನಾಧರಿಸಿ ಇರಬೇಕು. ರೋಮಿನ ರಿಲಿಜಿಯೋಕ್ಕಿಂತ ಕ್ರಿಶ್ಚಿಯನ್ನರ ರಿಲಿಜನ್ನೇ ಶ್ರೇಷ್ಠವೆಂದು ಪ್ರತಿಷ್ಠಾಪಿಸಿದ್ದು ಈ ನಂಬಿಕೆಯನ್ನಾಧರಿಸಿ ಆಚರಣೆಗಳು ಇರಬೇಕೆಂಬ ವಾದದ ಮೇಲೆ.
ಜ್ಞಾನೋದಯ ಯುಗದ ಚಿಂತಕರು ರೋಮನ್ನರೆ ಈ ವಿಷಯವಾಗಿ ವಾಗ್ದಾಳಿ ನಡೆಸಿದರು. ಅವರಲ್ಲಿ ಸೋಗಲಾಡಿತನ ಇತ್ತು. ಅವರು ಹೇಳುವುದೊಂದು ಮಾಡುವುದೊಂದು. ಇದಕ್ಕೆ ಅಲ್ಲಿನ ಸಮಾಜವೂ ಬೆಂಬಲ ನೀಡಿತ್ತು. ಮಾಂಟೆಸ್ಕ್ಯೊ ರೋಮಿನ ಈ ವಿರೋಧಾಭಾಸವನ್ನು ರಾಜಕೀಯ ಪ್ರತಿಭೆ ಎಂದು ಕರೆಯುತ್ತಾನೆ. ರೋಮಿನ ಸಾಮ್ರಾಟರು ಜನಸಮುದಾಯದ ಲಾಭವನ್ನು ಪಡೆಯಲು ಉದ್ದೇಶಪೂರ್ವಕವಾಗಿ ಈ ವಿರೋಧಾಭಾಸಗಳನ್ನು ಬೆಂಬಲಿಸಿದರು ಅನ್ನುತ್ತಾನೆ. ಅಂದಿನ ವಿಚಾರವಂತರೂ ಕೂಡ ಈ ರೀತಿಯಲ್ಲಿ ಜನರ ಅಜ್ಞಾನದ ಉಪಯೋಗ ಮಾಡಿಕೊಂಡರು. ಏಕೆಂದರೆ ವಿಚಾರವಂತರ ಬರಹಗಳು ಯಾರಿಗೂ ಅರ್ಥವಾಗುವುದಿಲ್ಲವಾಗಿತ್ತು. ಹಾಗಾಗಿ ಅವರ ಆಚರಣೆ ಮಾತ್ರ ಸತ್ಯ ಅನಿಸುತ್ತಿತ್ತು. ಇದನ್ನು ಸೋಗಲಾಡಿತನ ಎಂದು ಕರೆದರು.
ಜ್ಞಾನೋದಯದ ಚಿಂತಕರಿಗೆ ಈ ರೀತಿ ವಿರೋಧಾಭಾಸವೆಂದು ಕಾಣಲು ಮುಖ್ಯ ಕಾರಣ ಅವರ ರಿಲಿಜನ್ನಿನ ನಂಬಿಕೆ. ರಿಲಿಜನ್ನು ನಂಬಿಕೆಗೂ ಆಚರಣೆಗೂ ತಾಳೆ ಹಾಕುತ್ತದೆ. ಜ್ಞಾನೋದಯದ ಚಿಂತಕರು ರಿಲಿಜನ್ನನ್ನು ತಿರಸ್ಕರಿಸಿ ಮುಂದೆ ಬಂದವರು. ಸೆಕ್ಯುಲರಿಸಂ ಅನ್ನುವುದು ರಿಲಿಜನ್ನನ್ನು ತಿರಸ್ಕರಿಸಿ ವಿಜ್ಞಾನ ಹಾಗೂ ಮಾನವವಾದ ಬೆಳೆದ ಮೇಲೆ ಈ ರೀತಿಯ ಚಿಂತನೆ ಪ್ರಾರಂಭವಾದದ್ದು. ಆದರೆ ಜ್ಞಾನೋದಯ ಚಿಂತಕರು ಸೆಕ್ಯುಲರಿಸಂ ಹೆಸರಿನಲ್ಲಿ ರಿಲಿಜನ್ನನ್ನು ತಿರಸ್ಕರಿಸಿದರೂ ಕೂಡ ಅವರ ಯೋಚನಾ ಕ್ರಮ ಮಾತ್ರ ಹಳೆಯ ಚೌಕಟ್ಟಿನಲ್ಲೇ ಮುಂದುವರಿದಿದ್ದು ಅವರ ದೊಡ್ಡ ಮಿತಿ ಎಂದು ಗುರುತಿಸುತ್ತಾರೆ ಬಾಲಗಂಗಾಧರರು.
ಪ್ರಾಚೀನ ರೋಮನ್ನರಿಗೆ ಮಾತ್ರ ತಮ್ಮದು ವಿರೋಧಾಭಾಸ ಅನಿಸಲೇ ಇಲ್ಲ. ಏಕೆಂದರೆ ಅವರ ಪ್ರಕಾರ ಆಚರಣೆ ಅನ್ನುವುದು ನಂಬಿಕೆಯನ್ನು ಆಧರಿಸಿ ಇಲ್ಲ. ಆಚರಣೆಗಳು ಹಿಂದಿನವರನ್ನು ನೋಡಿ ಕಲಿಯುವುದು, ಜಿಜ್ಞಾಸೆ ಬೇರೆ ಆಚರಣೆ ಬೇರೆ. ಸಂಪ್ರದಾಯಗಳಲ್ಲಿ ವಿಚಾರ ಅನ್ನುವುದೇ ಬೇರೆ, ಆಚರಣೆ ಅನ್ನುವುದೇ ಬೇರೆ. ವಿಚಾರಗಳು ತಲೆಮಾರಿನಿಂದ ತಲೆಮಾರಿಗೆ ತಿದ್ದುತ್ತ ಹೋಗುತ್ತಿರುತ್ತಾರೆ. ಸಂಪ್ರದಾಯಗಳಲ್ಲಿ ಜನರು ಆಚರಣೆಗಳನ್ನು… ಮಾಡಿಕೊಳ್ಳುವ ಸ್ವಾತಂತ್ರ್ಯ ಇರುತ್ತದೆ. ಹಿಂದಿನವರಿಂದ ಬಂದಿದ್ದರಲ್ಲಿ ಅಗತ್ಯವಾದದ್ದನ್ನು ಆಯ್ಕೆ ಮಾಡಿ ಮುಂದಿನವರಿಗೆ ಕಳುಹಿಸುವುದು.
ಆದ್ದರಿಂದ ಸಂಪ್ರದಾಯಗಳನ್ನು ಆಚರಿಸುವವರಿಗೆ ಅದರ ಆಚರಣೆ ಮಾತ್ರ ಮುಖ್ಯವಾಗುತ್ತದೆ. ಈ ಆಚರಣೆಗಳ ಕುರಿತು ಮುಕ್ತವಾಗಿ ವಿಮರ್ಶಿಸುತ್ತಲೇ ಅದನ್ನು ಆಚರಿಸುವ ಸ್ವಾತಂತ್ರ್ಯ ಅವರಿಗಿರುತ್ತದೆ. ಹಾಗಾಗಿ ಸಂಪ್ರದಾಯಗಳಲ್ಲಿ ಜಿಜ್ಞಾಸೆ ಬೇರೆ ಮತ್ತು ಆಚರಣೆ ಬೇರೆಯಾಗಿರುತ್ತದೆ. ಆಚರಣೆಯ ಹಿಂದೆ ನಂಬಿಕೆ ಇರದಿದ್ದರೆ ಅದು ಅಪ್ರಾಮಾಣಿಕವಲ್ಲ. ಏಕೆಂದರೆ ಅದು ಒಂದು ಸಂಸ್ಕೃತಿ ನಂಬಿದ ನೀತಿ. ಪ್ರಾಚೀನ ರೋಮ್ ಹಾಗೂ ಪ್ರಸ್ತುತ ಭಾರತೀಯ ಸಂಸ್ಕೃತಿಯಲ್ಲಿ ಈ ನೀತಿ ಇದೆ. ಹಾಗಾದರೆ ಆಚರಣೆಯ ಹಿಂದೆ ನಂಬಿಕೆ ಇರಲೇಬೇಕೆಂಬುದು ಯಾರು ಹಾಕಿಕೊಟ್ಟ ನೀತಿ? ಇದು ಕೂಡಾ ಗಾಡ್ ಹೇಳಿದನೆಂಬ ಕ್ರಿಶ್ಚಿಯನ್ನರ ಕಲ್ಪನೆ ಅಲ್ಲವೇ? ಅದನ್ನೇ ಸತ್ಯ ಎಂದು ಹೇಳಿಕೊಳ್ಳಲು ಯಾವ ಪ್ರಮಾಣ ಇದೆ? ಇದು ಆತ್ಮಸಾಕ್ಷಿಗೆ ಸಂಬಂಧಪಟ್ಟ ವಿಚಾರವಾದ್ದರಿಂದ ಚರ್ಚೆಗೆ ನಿಲುಕಲಾರದು.
ಜ್ಞಾನೋದಯದ ಚಿಂತಕರು ನಂಬಿಕೆ ಇಲ್ಲದೇ ಆಚರಿಸುವುದು ಸೋಗಲಾಡಿತನ ಎಂದರು. ಅವರಿಂದ ಪ್ರಭಾವಿತರಾದ ನಮಗೆ ಅದೇ ಸತ್ಯ ಅನಿಸುತ್ತದೆ. ಕ್ರಿಶ್ಚಿಯನ್ ರಿಲಿಜನ್ನನ್ನೇ ಉದಾಹರಣೆಗೆ ತೆಗೆದುಕೊಳ್ಳುವ, ವಾರಕ್ಕೊಮ್ಮೆ ಮಾಡಿದ ತಪ್ಪನ್ನು ದೇವರೆದುರಿಗೆ ಒಪ್ಪಿಕೊಂಡರೆ ಮುಗಿಯಿತೇ? ಮುಂದೆ ಆತ ತಪ್ಪನ್ನೇ ಮಾಡಲಾರನೆ? ಇದೇಕೆ ನಮಗೆ ಸೋಗಲಾಡಿತನ ಎಂದು ಅನಿಸುವುದಿಲ್ಲ? ನಮ್ಮ ಸಂಪ್ರದಾಯದಲ್ಲಿ ದೇವರಿಗೆ ಕೈಮುಗಿಯುವಾಗ ‘ಒಳ್ಳೆಯದು ಮಾಡಪ್ಪ’ ಎಂದಷ್ಟೇ ಕೇಳಿಕೊಳ್ಳುತ್ತೇವೆ. ನಾನು ಮಾಡಿದ ತಪ್ಪನ್ನೆಲ್ಲ ಕ್ಷಮಿಸು ಎಂದು ಯಾವತ್ತೂ ಕೇಳಿಕೊಳ್ಳುವುದಿಲ್ಲ. ಇದು ನಮ್ಮ ಸಂಸ್ಕೃತಿ ಹಾಗೇನಾದರೂ ತಪ್ಪನ್ನು ಕ್ಷಮಿಸು ಎಂದು ಕೇಳಿಕೊಂಡರೆ ಅದು ಪ್ರಾಶ್ಚಾತ್ಯ ಪ್ರಭಾವವೇ ವಿನಾ ನಮ್ಮ ಸಂಸ್ಕೃತಿಯ ಪ್ರೇರಣೆ ಇಲ್ಲ.
ಭಾರತೀಯರಿಗಾಗಲೀ, ಪ್ರಾಚೀನ ರೋಮನ್ನರಿಗಾಗಲೀ ನಂಬಿಕೆಯಿಲ್ಲದೇ ಆಚರಣೆ ಮಾಡುವುದು ಇಬ್ಬಂದಿತನ ಅನಿಸುವುದಿಲ್ಲ. ರಿಲಿಜನ್ನಿನಲ್ಲಿದ್ದವರಿಗೆ ಮಾತ್ರ ಇದು ಇಬ್ಬಂದಿತನ ಅನಿಸುತ್ತದೆ. ಏಕೆಂದರೆ ಅದು ರಿಲಿಜನ್ನಿನ ನಿರ್ದೇಶಿತ ಚೌಕಟ್ಟು ಯುರೋಪಿನ್ನರಿಗೆ ಭಾರತೀಯರ ಆಚರಣೆಗಳೇ ಅರ್ಥವಾಗಲಿಲ್ಲ. ಇವರ ನಂಬಿಕೆಗಳನ್ನು ಕಂಡುಕೊಳ್ಳಲಿಕ್ಕಾಗೇ ಅವರು ಮಾನವಶಾಸ್ತ್ರ (ಅಂತ್ರೋಪಾಲಜಿ) ಹುಟ್ಟುಹಾಕಿದರು. ಯುರೋಪಿಯನ್ನರು ಎಲ್ಲ ಸಂಸ್ಕೃತಿಯನ್ನೂ ತಮ್ಮ ದೃಷ್ಟಿಕೋನದಲ್ಲೇ ನೋಡಿದರು. ಹಾಗೂ ಅವುಗಳ ಕುರಿತಾದ ಒಂದು ಸಾಮಾನ್ಯವಾದ ಅಭಿಪ್ರಾಯ ಹುಟ್ಟುಹಾಕಿದರು. ಆದ್ದರಿಂದ ಅವರಿಗೆ ಮಾತ್ರ ಅನ್ಯ ಸಸ್ಕೃತಿಗಳ ಕುರಿತಾಗಿ ಇಂಥ ಪ್ರಶ್ನೆಗಳು ಉದ್ಭವವಾಗುತ್ತವೆ. ಭಾರತೀಯ ವಿಚಾರವಂತರೂ ಕೂಡ ನಮ್ಮ ಸಂಸ್ಕೃತಿಯ ಕುರಿತಾಗಿ ಇಂಥ ಪ್ರಶ್ನೆಗಳನ್ನು ಕೇಳಲು ಕಲಿತಿದ್ದೇ ಅವರಿಂದ.
ಯಾವುದೇ ಸಂಪ್ರದಾಯವಾದಿಗಳಿಗೆ ಸಂಪ್ರದಾಯಗಳ ಕುರಿತು ಇಂಥ ಪ್ರಶ್ನೆಗಳು ಉದ್ಭವವಾಗಲು ಸಾಧ್ಯವಿಲ್ಲ. ಜ್ಞಾನೋದಯ ಯುಗದ ಪಶ್ಚಿಮದ ವಿಚಾರವಾದಿಗಳು ಹಾಗೂ ಅವರಿಂದ ಪ್ರಭಾವಿತರಾದವರಿಗೆ ಮಾತ್ರ ಇಂಥ ಸಮಸ್ಯೆ ಇದೆ. ಆಚರಣೆ ಇರುವುದು ಆಚರಿಸಲಿಕ್ಕೆ ಹಾಗೂ ವಿಚಾರ ಇರುವುದು ಮಾಡಲಿಕ್ಕೆ ಎಂದು ಸರಳವಾಗಿ ಗ್ರಹಿಸಿಕೊಂಡು ಬಂದ ಜನ ನಾವು. ಎರಡನ್ನು ತಳುಕು ಹಾಕುವ ಸ್ವಭಾವ ನಮ್ಮದಲ್ಲ. ವಿಚಾರದಂತೆ ಆಚಾರ ಇರಬೇಕೆಂಬುದು ನಮಗೆ ಹೊರಗಿನಿಂದ ಪ್ರಭಾವಿತವಾದ ನಂಬಿಕೆ ಅದು ವಿಚಾರವಂತರಿಗೆ ಮಾತ್ರ ಏಳುವ ಪ್ರಶ್ನೆ. ಆಚರಣೆ ಮಾಡುವವರಿಗೆ ಇದು ಪ್ರಶ್ನೆಯೇ ಅಲ್ಲ.
ಇದನ್ನು ಅರಿತುಕೊಂಡರೆ ಭಾರದಲ್ಲಿ ಮಾನಸಿಕವಾಗಿ ನೆಮ್ಮದಿಯಿಂದ ಬದುಕುವುದು ಎಷ್ಟು ಸುಲಭ ಅಲವ್ಲವೇ?
* * * * * * * *
ಚಿತ್ರಕೃಪೆ : http://mohebban.burjalsaheb.com
ವೃತ್ತಿ ಜೀವನದಲ್ಲಿ ವೃತ್ತಿಧರ್ಮ ಪಾಲನೆ, ನಿಜ ಜೀವನದಲ್ಲಿ ಸ್ವಭಾವಸಿದ್ಧ ಧರ್ಮಪಾಲನೆ