ಮಧುರ ಪಿಸುಮಾತಿಗೆ, ಅದರ ತುಸು ಪ್ರೀತಿಗೆ
– ಪ್ರಸಾದ್.ಡಿ.ವಿ
ಜನವರಿ ೧, ಸದಾ ನನ್ನ ನೆನಪಿನಲ್ಲುಳಿಯುವ ದಿನ. ಅದು ನವ ವಸಂತದ ಆರಂಭವೆಂಬ ಕಾರಣಕ್ಕೆ ಮಾತ್ರವಲ್ಲ. ನನ್ನ ಜೀವನದಲ್ಲಿನ ಒಂದು ಅನಿರೀಕ್ಷಿತ ತಿರುವು, ಒಂದು ಸುಮಧುರ ಯಾತನೆಯಾಗಿ ಉಳಿದ ಕಾರಣದಿಂದ. “ಆತ(?)” ನನ್ನ ಜೀವನದಲ್ಲಾಡಿದ ಆಟವನ್ನು ನಾನೆಂದಿಗೂ ಮರೆಯುವಂತಿಲ್ಲ..! ಇಂದು ಆ ಕ್ಷಣವನ್ನು ನಿಮ್ಮ ಮುಂದೆ ಬಿಚ್ಚಿಡುತ್ತಿದ್ದೇನೆ.
ನನ್ನ ಕ್ಯಾಂಟೀನ್ ಪುರಾಣದಲ್ಲಿ “ನಾನು ನಿನ್ನನ್ನು ನನ್ನ ಜೀವದ ಗೆಳೆಯನೆಂದು ತಿಳಿದಿದ್ದೇನೆಯೇ ಹೊರತು ನಲ್ಲನಾಗಿ ಅಲ್ಲ” ಎಂದು ಆಕೆ ನನ್ನ ಪ್ರೀತಿಗೆ ಅಲ್ಪವಿರಾಮವಿಟ್ಟಿದ್ದಳು..! ನನಗೋ ಅದ್ಯಾವುದಕ್ಕೂ ಹೊಂದಿಕೊಳ್ಳಲಾಗದೆ ಸ್ನೇಹಕ್ಕೆ ಪ್ರೀತಿಯನ್ನು ತ್ಯಾಗ ಮಾಡಿದ ಅಮರ ಪ್ರೇಮಿಯಾಗಿದ್ದೆ. ಆನಂತರದಲ್ಲಿ ಆಕೆ ಮತ್ತೊಂದು ಕತೆ ಹೇಳಲು ಶುರುವಚ್ಚಿದ್ದಳು. ನಾನು ಒಬ್ಬ ಹುಡುಗನನ್ನು ಪ್ರೇಮಿಸಿದ್ದೇನೆ, ಆತನನ್ನು ನನ್ನ ಜೀವದ ಗೆಳೆಯನಾದ ನಿನಗೆ ಪರಿಚಯಿಸಬೇಕೆಂದು ಹೇಳಿದಳು.ನನಗೋ ಹೃದಯದಲ್ಲಿ ಹೇಳಿಕೊಳ್ಳಲೂ, ತಾಳಿಕೊಳ್ಳಲೂ ಆಗದ ತಳಮಳ. ನನ್ನವಳೆಂದು ತಿಳಿದವಳು ನನ್ನೆದುರಿಗೆ ಮತ್ತೊಬ್ಬನನ್ನು ಪ್ರೀತಿಸುವುದು ಸಹಿಸಲಾಗದ ನೋವನ್ನು ನೀಡಿತ್ತು, ನಿದ್ರೆ ಬಿಟ್ಟ ಉದಾಹರಣೆಗಳೂ ಉಂಟು. ಇವೆಲ್ಲವುಗಳ ನಡುವೆಯೇ ಆಕೆ ಮತ್ತು ಆಕೆಯ ಮನೆಯವರೊಂದಿಗೆ ನಿಮಿಷಾಂಬಾ ದೇವಿಯ ದರ್ಶನವೂ ಆಗಿತ್ತು. ಅವಳ ಕುಟುಂಬದ ಎಲ್ಲ ಸದಸ್ಯರೂ ನನಗೆ ತುಂಬಾ ಹಿಡಿಸಿದ್ದರು ಆಕೆ ಅಂದು ನನ್ನೊಂದಿಗೆ ಏನನ್ನೋ ಹೇಳಲು ಚಡಪಡಿಸಿದ್ದಳು, ನಾನು ಆ ನಿಮಿಷಾಂಬಾ ದೇವಿಗೆ ನನ್ನ ಪ್ರೀತಿಯನ್ನು ‘ನಮ್ಮ ಪ್ರೀತಿಯಾಗಿ’ ಮಾಡೆಂದು ಅರ್ಜಿ ಹಾಕಿದ್ದೂ ಆಗಿತ್ತು.
ಅಂದು ಡಿಸೆಂಬರ್ 31ರ ಸಂಜೆ , ಆಕೆಯೊಂದಿಗೆ ಮೊಬೈಲ್ ನಲ್ಲಿ ಒಂದು ಗಂಟೆಯ ಸಂಭಾಷಣೆಯಾಗಿತ್ತು. ಅದು ನನ್ನ ಪ್ರೀತಿಯ ಸುಮಧುರ ನೆನಪುಗಳಲ್ಲೊಂದು. ಅವಳ ಜೀವನದ ನೂರಾರು ಕನಸುಗಳ ಬಗ್ಗೆ, ನಮ್ಮ ಗೆಳೆತನದ ಬಗ್ಗೆ, ನಾನು ಆಕೆಯ ಜೀವನದಲ್ಲಿ ಬಂದ ನಂತರ ಆದ ಬದಲಾವಣೆಗಳ ಬಗ್ಗೆ, ಅವಳ ಹುಚ್ಚು ಕಲ್ಪನೆಗಳ ಬಗ್ಗೆ ನಲಿವಿನಂತೆ ಉಲಿದಿದ್ದಳು. ನನಗಂತೂ ಅವಳ ಮಾತು ಕೇಳುವುದೇ ಸಿರಿ. ಹಾಗೆ ಆಗಸದಲ್ಲಿ ತೇಲುತಿದ್ದವನಿಗೆ ತಂತಿ ಬೇಲಿಯಾಗಿತ್ತು ಅವಳ ಕಡೆಯ ಮಾತು “ನನ್ನವನು ನಿನ್ನನ್ನು ಆದಷ್ಟು ಬೇಗ ಭೇಟಿಯಾಗಬೇಕಂತೆ”. ನಾನು ಹೌಹಾರಿಬಿಟ್ಟಿದ್ದೆ!! ನಾನು ತುಂಬಾ ಬ್ಯುಸಿಯಾಗಿದ್ದೇನೆ ಪರೀಕ್ಷೆಗೆ ತಯಾರಿ ನಡೆಯುತ್ತಿದೆ, ಹಾಗೆ-ಹೀಗೆ ಎಂದು ಚೋಡಿದ್ದೆ. ನಿಜವಾದ ಕಾರಣವೇನೆಂದರೆ ನಾನು ಆಕೆಯ ಧ್ಯಾನದಲ್ಲಿಯೇ ಮುಳುಗಿ ಹೋಗಿದ್ದೆ. ಆತ ಮೋಹನನಾಗಿ ಬಂದು ನನ್ನವಳನ್ನು “ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನಿನ್ನನು(!)” ಎಂಬಂತೆ ನನ್ನಿಂದ ದೂರಕ್ಕೆ ಸರಿಸಿ ಬಿಟ್ಟರೆ? ಎಂಬ ಭಯ. ಸರಿ ಏನೋ ಸಬೂಬು ಹೇಳಿ ಸಂಭಾಷಣೆ ತುಂಡರಿಸಿದ್ದೆ.
ಅಂದು ರಾತ್ರಿ ಮನೆಯಲ್ಲಿ ಕೇಕ್ ಕತ್ತರಿಸಿ ವರ್ಷದಾರಂಭದ ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ ನಾನು ಮೊಬೈಲ್ ಹಿಡಿದು ಶತಪಥ ಹಾಕುತ್ತಿದ್ದೆ. ಕಡೆಗೆ ಆ ಕಡೆಯಿಂದ ಕರೆ ಬರದಾದಾಗ ತಾಳಲಾರದೆ ನಾನೇ ಫೋನಾಯಿಸಿದೆ, “ನಾನೂ ನಿನಗೇ ಪ್ರಯತ್ನಿಸುತ್ತಿದ್ದೆ ಕಣೋ, ಆದರೆ ನೆಟ್ ವರ್ಕ್ ಪ್ರಾಬ್ಲಮ್, ನಾಳೆ ಸಿಗು, ಮಾತನಾಡಬೇಕು” ಉಲಿಯಿತು ಅವಳ ಧ್ವನಿ. ಇದ್ದ ಕೋಪವೆಲ್ಲ ಮಾಯವಾಗಿ “ಹೌದಾ, ಸರಿ ಅದೋಗ್ಲಿ ಬಿಡೆ, ಹ್ಯಾಪಿ ನ್ಯೂ ಇಯರ್, ನಾಳೆ ಸಿಗುತ್ತೇನೆ” ಎಂದ್ಹೇಳಿ ಸಂಪರ್ಕ ಕಡಿದು ಮನೆಯವರ ಸಂಭ್ರಮಾಚರಣೆಯಲ್ಲಿ ಮುಳುಗಿಹೋದೆ.
ಜನವರಿ 1 ರಂದು ಆಕೆಯನ್ನು ಭೇಟಿಮಾಡುವ ಸಂಭ್ರಮ. ಕ್ಲೀನ್ ಆಗಿ ಶೇವ್ ಮಾಡಿ, ಟ್ರಿಮ್ ಆಗಿ ಅಪ್ಪ ಕೊಡಿಸಿದ್ದ ಹೊಸ ಬಟ್ಟೆ ತೊಟ್ಟು ಮನೆಯಿಂದ ಹೊರಟೆ. ಕಾಲೇಜ್ ತಲುಪಿ, ನಾನಿಲ್ಲಿದ್ದೇನೆ ಎಂದು ಆಕೆಯ ಮೊಬೈಲಿಗೊಂದು ಸಂದೇಶ ರವಾನಿಸಿದೆ. ಆಕೆ ಎದುರಿನಲ್ಲೇ ಪ್ರತ್ಯಕ್ಷ! ನನ್ನ ಎದೆಬಡಿತ ಅವಳಿಗೂ ಕೇಳಿಸಬಹುದೆಂದು ಹೆದರಿಬಿಟ್ಟೆ. ಆಕೆಯೋ ಅಪ್ಸರೆಯಂತೆ ಕಂಗೊಳಿಸುತ್ತಿದ್ದಳು. ಕ್ಯಾಂಪಸ್ ನ ಪಾರ್ಕಿನಲ್ಲಿನ ಬೆಂಚ್ ಮೇಲೆ ಕುಳಿತು ಹರಟೆ ಶುರುವಚ್ಚಿದೆವು. ಅದು-ಇದು ಮಾತನಾಡುತ್ತಾ ಸಾಗಿತ್ತು ನಮ್ಮ ಮಾತುಕತೆ. ಹಾಗೆ ಸಾಗಿದ್ದ ಸಂಭಾಷಣೆ ಆಕೆಯ ಪ್ರೀತಿಯೆಡೆಗೆ ಹೊರಳಿತು. “ಇಂದು ನೀನು ಅವನನ್ನು ಭೇಟಿ ಮಾಡು, ಅವನು ಮೈಸೂರಿಗೆ ಬಂದಿದ್ದಾನಂತೆ, ನಾನಿನ್ನೂ ಅವನಿಗೆ ವಿಷ್ ಕೂಡ ಮಾಡಿಲ್ಲ, ಬೈಸಿಕೊಳ್ಳಬೇಕೇನೋ? ತಾಳು ಅವನಿಗೆ ಕಾಲ್ ಮಾಡಿ ಇಲ್ಲಿಗೆ ಬರಲು ಹೇಳುತ್ತೇನೆ”. ಎಂದಾಕೆ ಒಂದೇ ಸ್ವರದಲ್ಲಿ ಉಸುರಿದಾಗ ನನ್ನ ಹೃದಯ ದಸಕ್ಕೆಂದಿತು. ನಾನು ಪ್ರತಿಕ್ರಿಯಿಸುವ ಮೊದಲೆ ಅವನ ನಂಬರ್ ಗೆ ಡಯಲ್ ಮಾಡಿಯೇ ಬಿಟ್ಟಳು. ಹೃದಯ ತನ್ನ ಬಡಿತ ಹೆಚ್ಚಿಸಿತು, ಎಲ್ಲಿ ಒಡೆದು ಹೋಗುವುದೋ ಎಂದು ಭಯಪಟ್ಟೆ. “ರಿಂಗ್ ಆಗ್ತಿದೆ, ತೆಗೀತಾನೇ ಇಲ್ಲ… ಕಾಲರ್ ಟ್ಯೂನ್ ಚೆನ್ನಾಗಿದೆ ಕೇಳು” ಎಂದು ನನ್ನ ಕಿವಿಗಿಟ್ಟಳು. ನನ್ನ ಕೈ ನಡುಗುತ್ತಿತ್ತು, ಮೈ ಬೆವರುತ್ತಿತ್ತು. “ಮಧುರ ಪಿಸುಮಾತಿಗೆ” ಎಂಬ ಬಿರುಗಾಳಿ ಸಿನೆಮಾದ ಸಾಂಗ್ ಕೇಳಿಸುತ್ತಿತ್ತು. ತಟ್ಟನೆ ಹೃದಯ ನಿಂತಂತಾಯ್ತು..!
ಅಯ್ಯೋ ಇದು ನನ್ನದೇ ಕಾಲರ್ ಟ್ಯೂನ್, ನನ್ನ ಮೊಬೈಲ್ ಎತ್ತಿ ನೋಡಿದೆ. ಸೈಲೆಂಟ್ ಮೋಡ್ ನಲ್ಲಿದ್ದ ಫೋನ್ ಹಾಗೆಯೇ ಜುಂಯ್ ಜುಂಯ್ ಎಂದು ವೈಬ್ರೇಟ್ ಆಗ್ತಿತ್ತು. ಅವಳ ಮೊಬೈಲ್ ಅನ್ನು ಅವಳ ಕೈಗಿಟ್ಟು ಒಂದು ಕ್ಷಣ ಮೌನವಾಗಿ ಕುಳಿತುಬಿಟ್ಟೆ. ಅವಳು “ವಿಷ್ ಯು ಹ್ಯಾಪಿ ನ್ಯೂ ಇಯರ್” ಎಂದು ನನ್ನ ಕಿವಿಯಲ್ಲುಸುರಿದಳು. ನೂರಾರು ಭಾವಗಳಲ್ಲಿ ಮನ ತೋಯಿಸಿ ಹೋದಂತೆನಿಸಿತು. ಅಬ್ಬಾ! ಎಷ್ಟು ಜಾಣೆಯವಳು, ನನಗೀಗಲೂ ಮೈ ರೋಮಾಂಚನವಾಗುತ್ತದೆ. ನಾನವಳಿಗೆ ಪ್ರೇಮ ನಿವೇದಿಸಿಕೊಂಡ ಕ್ಯಾಂಟೀನ್ ಪುರಾಣ ನೆನಪಾಗುತ್ತದೆ. ಬರೋಬ್ಬರಿ ಎರಡು ತಿಂಗಳುಗಳ ನಂತರ ನನ್ನ ಅವಳು ನಮ್ಮ ಪ್ರೇಮಕ್ಕೆ ಅಧಿಕೃತ ಮುದ್ರೆಯೊತ್ತಿದ್ದಳು! ನನ್ನ ಮುಖದ ಭಾವಗಳನ್ನರಿಯಲು ಓರೆಗಣ್ಣಿನಲ್ಲಿ ನನ್ನ ಮೇಲೆ ದೃಷ್ಠಿ ನೆಟ್ಟ ಅವಳೆಡೆಗೆ ಮುಗುಳುನಗೆ ಬೀರಿ ಸ್ವಲ್ಪ ಹತ್ತಿರಕ್ಕೆ ಸರಿದು ಕುಳಿತೆ. ಒಮ್ಮೆಲೇ ಅಪ್ಪಿ ಮುದ್ದಿಸಬೇಕೆಂಬ ಭಾವೋತ್ಕಟತೆ. ಎಂದೂ ಸಭ್ಯತೆಯ ಎಲ್ಲೆ ಮೀರದ ನಾನು, ಅವಳ ಕೈಯನ್ನು ನನ್ನ ಕೈಯಲ್ಲಿಟ್ಟುಕೊಂಡು ನೇವರಿಸಲಷ್ಟೆ ಶಕ್ತನಾದೆ. ಹಿಡಿದ ಕೈಯನ್ನು ಎಂದೂ ಬಿಡೆನು ಎಂದು ಕಣ್ಣಿನಲ್ಲಿಯೇ ಸಂದೇಶ ರವಾನಿಸಿದೆ. ಅವಳು ಹಿಡಿತವನ್ನು ಬಿಗಿಗೊಳಿಸಿದಳು. ಅಕ್ಕ-ಪಕ್ಕದಲ್ಲಿದ್ದ ಕಣ್ಣುಗಳು ನಮ್ಮನ್ನೇ ನೋಡುತ್ತಿವೆ ಎಂದೆನಿಸುತ್ತಿತ್ತು ನನಗೆ. ಆದರೂ ಹಾಗೇ ಕೈಹಿಡಿದು ಕುಳಿತೆವು. ಹತ್ತು ನಿಮಿಷ ನೆಲೆಸಿದ್ದ ನಿರ್ಮಲ ಮೌನದಲ್ಲಿ ಹೃದಯಗಳೆರಡೂ ಕಣ್ಣುಗಳೊಳಗಿಳಿದು ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಳ್ಳುತ್ತಿದ್ದವು.
ಸ್ವಲ್ಪ ಸಮಯದ ನಂತರ ಕೈಹಿಡಿದೇ ಅವಳ PG ಯೆಡೆಗೆ ಹೆಜ್ಜೆ ಹಾಕಿದೆವು, ಮುಂದೆ ಹೀಗೆಯೇ ಸಪ್ತಪದಿ ತುಳಿದೇವು ಎಂಬ ಕನಸಲ್ಲಿ.
ಇಂದು ಆಕೆ ನನ್ನೊಂದಿಗಿಲ್ಲ, ಯಾವ ಕ್ಷುದ್ರಶಕ್ತಿಯ ಕಣ್ಣು ಬಿತ್ತೋ ಗೊತ್ತಿಲ್ಲ., ಆದರೆ ಅವಳೊಂದಿಗೆ ಅವಳ ನೆನಪುಗಳು ಮಧುರ ಮತ್ತು ಶಾಶ್ವತ..!
* * * * * *
ಚಿತ್ರಕೃಪೆ : silverlovely.com
ನಮಸ್ಕಾರ ಪ್ರಸಾದ್,
ಈ ಜಗತ್ತಿನಲ್ಲಿ ಎಲ್ಲರೂ ಲಕ್ಕಿ ಆಗಿರೋಲ್ಲ. ತಾವು ಬಯಸಿದ ಪ್ರೇಯಸಿಯನ್ನು ಪಡೆದವರೇ ಲಕ್ಕಿ ಪೀಪಲ್.
ನಿಮ್ಮ,
Sammi
Super Sir……………….
ಅಧ್ಬುತ ನಿರೂಪಣೆ ಪ್ರಸಾದ್. ನಿಲುಮೆಗೆ ಸ್ವಾಗತ ನಿಮ್ಮಿಂದ ಇನ್ನೂ ಹೆಚ್ಚು ಹೆಚ್ಚು ಲೇಖನಗಳನ್ನು ನಿರೀಕ್ಷಿಸುತ್ತೇವೆ
ಇತ್ತೀಚಿನ ದಿನದಲ್ಲಿ ಪ್ರೀತಿ ಮಾಡೋ ಎಲ್ಲ ಹುಡುಗರ ಕಥೆ ಇದೇ ರೀತಿ ಇದೆ ಸರ್. ಲವ್ವಲ್ಲಿ ಕಣ್ಣಿರು ಕಂಪಲ್ಸರಿ ಸರ್, ಬರವಣಿಗೆ ಮನ ಮುಟ್ಟುವಂತಿದೆ. ಧನ್ಯವಾದಗಳು ಬರವಣಿಗೆಗೆ. ” ಅನುಭವ ಸವಿಯಲ್ಲ ಅದರ ನೆನಪುಗಳೇ ಸವಿ”.
ನಾವು ಹುಟ್ಟಿದ ಮೇಲೆ ಪ್ರೀತಿ ಹುಟ್ಟುತ್ತೆ. ಆದರೆ ನವುಒಂದಿನಾ ಸಾವನ್ನಪ್ಪುತ್ತೇವೆ ಆದರೇ ಪ್ರೀತಿಗೇ ಸಾವೇ ಇಲ್ವಾ ?
I like this story but ending sentance given one feel very sad….
ಇದು ನಿಲುಮೆಯಲ್ಲಿ ನನ್ನ ಮೊದಲ ಲೇಖನ, ಅದಕ್ಕೆ ಇಷ್ಟು ಪ್ರೀತಿಯಿಂದ ಪ್ರತಿಕ್ರಿಯೆ ನೀಡಿ ಪ್ರೋತ್ಸಾಹಿಸಿದ ಎಲ್ಲಾ ಸಹೃದಯ ಮಿತ್ರರಿಗೆ ನನ್ನ ನಲ್ಮೆಯ ಧನ್ಯವಾದಗಳು.. ನಾವು ಪ್ರೀತಿಯನ್ನು ಕಳೆದುಕೊಳ್ಳಲು ಅನೇಕ ಕಾರಣಗಳಿರುತ್ತವೆ.. ಪ್ರೀತಿಯಲ್ಲಿನ ಸೂಕ್ಷ್ಮತೆಯನ್ನು ಗ್ರಹಿಸಲಾಗದ್ದಕ್ಕೋ, ಪ್ರೀತಿ ಕಾಮದ ಹೊಂಚು ಹಾಕಿದ್ದಕ್ಕೋ, ಒಬ್ಬರು ಮತ್ತೊಬ್ಬರನ್ನು ಅರ್ಥಮಾಡಿಕೊಳ್ಳದೆ ಆಗುವ ಅನರ್ಥಗಳಿಂದಾಗಿಯೋ, ದುಡುಕು ಮನಸ್ಸಿನ ದುರ್ಬಲ ಮನಸ್ಥಿತಿಯಿಂದಾಗಿಯೋ, ಅಪ್ಪ ಅಮ್ಮನ ಅತಿಯಾದ ಮೂಗು ತೂರಿಸುವಿಕೆಯಿಂದಾಗಿಯೋ, ಇಲ್ಲವೇ ಕೆಲವೊಮ್ಮೆ ಕಾರಣವಿಲ್ಲದೆ ಪ್ರೀತಿ ಒಡೆದು ಹೋಗುತ್ತದೆ ಅದಕ್ಕೆ ಉಳಿಯುವ ಧೃಡತೆ ಇರಲಿಲ್ಲ ಎಂಬುದಕ್ಕಿಂತ ಅದನ್ನು ಉಳಿಸಿಕೊಳ್ಳುವ ಭಾಗ್ಯ ಆ ಪ್ರೇಮಿಗಳಿಗೆ ಇರಲಿಲ್ಲ ಎಂಬುದೇ ಸತ್ಯ.. ಅಂತಹದ್ದೇ ಕಾರಣವಿಲ್ಲದೆ ಒಡೆದ ಪ್ರೀತಿ ನನ್ನದು.. ಅಂತಹ ಸುಮಧುರ ನೆನಪನ್ನು ಅಚ್ಚಹಸಿರಾಗಿಸಿಕೊಳ್ಳುವ ಒಂದು ಸಣ್ಣ ಪ್ರಯತ್ನವೇ ಈ ನನ್ನ ಲೇಖನ ’ಮಧುರ ಪಿಸುಮಾತಿಗೆ, ಅದರ ತುಸು ಪ್ರೀತಿಗೆ’.. ಅದನ್ನು ಮೆಚ್ಚಿ, ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು..:))) ನನ್ನನ್ನು ನಿಲುಮೆಗೆ ಪರಿಚಯಿಸಿದ ಪವನ್ ರವರಿಗೆ ನಲ್ಮೆಯ ಧನ್ಯವಾದಗಳು..:)))
ಲೇಖನದ ಶೈಲಿ ಬೊಂಬಾಟ್ ಪ್ರಸಾದ್ 🙂
ತುಂಬು ಮನದ ಧನ್ಯವಾದಗಳು ರಾಕೇಶ್ ಶೆಟ್ಟಿಯವರೆ..:-) 🙂
my eyes almost filled with tears … dont worry whatever the prob in the end u’ll be back together ….awsome writing and i like the way u expressed it …i wish u a full of happy story for the next one ….
ಜನಾರ್ಧನ್ ನಿಮ್ಮ ಪ್ರತಿಕ್ರಿಯೆಗೆ ನನ್ನಲ್ಲಿ ಮಾತುಗಳಿಲ್ಲ.. ನಿಮ್ಮ ಹಾರೈಕೆಗೆ ಮನಸ್ಸು ತುಂಬಿ ಬಂತು.. ತುಂಬು ಮನಸ್ಸಿನ ಧನ್ಯವಾದಗಳು ನಿಮಗೆ.. 🙂
ಪ್ರಸಾದ್ ನಿಮ್ಮ ಲೇಖನ ಚೆನ್ನಾಗಿದೆ …….ಹೀಗೆಯೇ ಮುಂದುವರೆಸಿ ಶುಭವಾಗಲಿ..!!!
ತು೦ಬಾ ಚೆನ್ನಾಗಿದೆ ಲೇಖನ, ಇದು ಹುಡುಗರ ಮತ್ತು ಹುಡುಗಿಯರ ಪ್ರೀತಿಗೆ ಇರುವ ವ್ಯತ್ಯಾಸ ಅಷ್ತೆ
ನನ್ನ ಪ್ರೀತಿಯಲ್ಲೂ ಇಂತದ್ದೇ ತಿರುವು ಬಾರಬಾರದೆ ಎಂದೆನಿಸುತ್ತಿದೆ. ತುಂಬಾ ಚೆನ್ನಾಗಿದೆ 🙂
ನಿಮ್ಮೆಲ್ಲರ ಪ್ರತಿಕ್ರಿಯೆಗೆ ಧನ್ಯವಾದಗಳು ಸಹೃದಯರೆ.. 🙂 ನಿಮ್ಮೆಲ್ಲರ ಪ್ರೋತ್ಸಾಹವೇ ನನಗೆ ಶ್ರೀರಕ್ಷೆ.. 🙂 🙂
don t worry dear friend you will get her back:>,