ವಿಷಯದ ವಿವರಗಳಿಗೆ ದಾಟಿರಿ

ಜನವರಿ 26, 2012

1

ಪ್ರಜಾಪ್ರಭುತ್ವದ ಶಿಕ್ಷಣ

‍ನಿಲುಮೆ ಮೂಲಕ

-ರಾವ್ ಎವಿಜಿ

ಪ್ರಜಾಪ್ರಭುತ್ವ ಒಂದು ಸುಂದರ ಪರಿಕಲ್ಪನೆ ಎಂಬುದರ ಕುರಿತಾಗಲಿ, ನಮಗೆ ತಿಳಿದಿರುವ ಪ್ರಭುತ್ವದ ನಮೂನೆಗಳ ಪೈಕಿ ಅತ್ಯಂತ ಶ್ರೇಷ್ಠವಾದದ್ದು ಎಂಬುದರ ಕುರಿತಾಗಲಿ ಯಾವ ಸಂಶಯವೂ ನನಗಿಲ್ಲವಾದರೂ ನಮಗೆ, ಅರ್ಥಾತ್ ಈ ಕರ್ಮಭೂಮಿಯ ಪ್ರಜೆಗಳಿಗೆ ಪ್ರಜಾಪ್ರಭುತ್ವ ಪದ್ಧತಿಯನ್ನು ಅಳವಡಿಸಿಕೊಳ್ಳಲು ಅಗತ್ಯವಾದ ಅರ್ಹತೆ ಇದೆಯೇ ಎಂಬುದರ ಕುರಿತು ಸಂಶಯ ಇದೆ. ನನಗೆ ತಿಳಿದ ಮಟ್ಟಿಗೆ ಪ್ರಜಾಪ್ರಭುತ್ವದ ಯಶಸ್ಸು ಪ್ರಜೆಗಳ, ಅರ್ಥಾತ್  ಮತದಾರನ ವಿವೇಕವನ್ನು ಆಧರಿಸಿರುತ್ತದೆ.

  • ಹಣ, ಹೆಂಡ. ಸೀರೆ ಮೊದಲಾದವನ್ನು ಧಾರಾಳವಾಗಿ ಕೊಡುವವರನ್ನೇ ಆಗಲಿ ಚುನಾವಾಣೆಯಲ್ಲಿ ಗೆದ್ದು ಬಂದರೆ ಉಚಿತವಾಗಿ ‘ಕಲರ್’ಟಿವಿ,’ಮಿಕ್ಸಿ’ ನಗಣ್ಯ ಅನ್ನಬಹುದಾದಷ್ಟು ಕಡಿಮೆ ಬಡ್ಡಿಯ ಸಾಲ ಮುಂತಾದವನ್ನು ಕೊಡುವುದಾಗಿ ಭರವಸೆ ನೀಡುವ ಮಂದಿಯನ್ನು ಆಯ್ಕೆ ಮಾಡುವ ನಾವು ವಿವೇಕಿಗಳೇ?
  • ನಮ್ಮ ಮತದವ, ನಮ್ಮ ಜಾತಿಯವ, ನಮ್ಮ ಊರಿನವ ಎಂಬ ಕಾರಣಕ್ಕಾಗಿ ನಾಯಕನನ್ನು ಆಯ್ಕೆ ಮಾಡುವ ನಾವು ವಿವೇಕಿಗಳೇ ?
  • ತನ್ನ ಕ್ಷೇತ್ರವನ್ನು ಚುನಾವಣಾ ಸಮಯದಲ್ಲಿ ಮಾತ್ರ ಜ್ಞಾಪಿಸಿಕೊಳ್ಳುವ ವ್ಯಕ್ತಿಯನ್ನು ಪುನಃ ಪುನಃ ಆಯ್ಕೆ ಮಾಡುವ ನಾವು ವಿವೇಕಿಗಳೇ?
  • ನಾವು ಆಯ್ಕೆ ಮಾಡಿದವ ನಿಶ್ಚಿತ ಆದಾಯದ ಮೂಲಗಳು ಇಲ್ಲದೇ ಇದ್ದಾಗ್ಯೂ ನಿಗೂಢ ರೀತಿಯಲ್ಲಿ ಅತ್ಯಲ್ಪ ಅವಧಿಯಲ್ಲಿ ಕೋಟ್ಯಾಧಿಪತಿ ಆಗುವುದಷ್ಟೇ ಅಲ್ಲ ಆತನ ನಿಕಟ ಸಂಬಂಧಿಗಳು, ಅನುಯಾಯಿಗಳು ಮುಂತಾದವರೂ ನಾವು ನೋಡುತ್ತಿದ್ದಂತೆಯೇ ಅತ್ಯಲ್ಪ ಅವಧಿಯಲ್ಲಿ ಸಿರಿವಂತರಾಗುವ ಪವಾಡವನ್ನು ನೋಡಿಯೂ ಪುನಃ ಆತನನ್ನೇ ಆಯ್ಕೆ ಮಾಡುವ ನಾವು ವಿವೇಕಿಗಳೇ?
  • ಗೂಂಡಾಗಳನ್ನೂ ಕಳವು ಕೊಲೆ ದರೋಡೆ ಮುಂತಾದವನ್ನು ಸಿಕ್ಕಿಹಾಕಿಕೊಳ್ಳದೇ ಮಾಡುವಷ್ಟು ಚಾಣಾಕ್ಷರಾದವರನ್ನು ನಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡುವ ನಾವು ವಿವೇಕಿಗಳೇ? ಜನಪ್ರತಿನಿಧಿ ಸ್ವಜನಪ್ರತಿನಿಧಿಯಾಗುವದನ್ನು ನೋಡಿಯೂ ಪುನಃ ಅವನನ್ನೇ ಆಯ್ಕೆ ಮಾಡುವ ನಾವು ವಿವೇಕಿಗಳೇ?
  • ವಿಧಾನ/ಲೋಕ ಸಭೆಗಳಲ್ಲಿ ನಾವು ಆಯ್ಕೆ ಮಾಡಿದವ ಇನ್ನೊಂದು ಪಕ್ಷದವರ ಹುಳುಕುಗಳನ್ನು ಹುಡುಕುವುದೇ ತಮ್ಮ ಪರಮ ಕರ್ತವ್ಯ ಎಂಬಂತೆ ವರ್ತಿಸುವುದನ್ನೂ ಚರ್ಚೆಯ ಹೆಸರಿನಲ್ಲಿ ವೈಯಕ್ತಿಕ ನಿಂದೆ ಅಥವ ಪರಸ್ಪರ ದೋಷಾರೋಪಣೆ (ಕೆಲವೊಮ್ಮೆ ದೈಹಿಕವಾಗಿ ಹೊಡೆದಾಡುವುದರಲ್ಲಿ) ಮಾಡುವುದರಲ್ಲಿಯೇ ಕಾಲಕಳೆಯುವುದನ್ನೂ ಯಾವುದೋ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಗದ್ದಲವೆಬ್ಬಿಸಿ ಕಾರ್ಯಕಲಾಪ ನಡೆಯದಂತೆ (ಕೆಲವೊಮ್ಮೆ ದಿನಗಟ್ಟಲೆ ಕಾಲ) ಮಾಡುವುದನ್ನೂ ಎಷ್ಟೋ ವಿಧೇಯಕಗಳನ್ನು ಯಾವ ಚರ್ಚೆಯೂ ಇಲ್ಲದೇ ಅಂಗೀಕರಿಸುವುದನ್ನೂ ನೋಡಿಯೂ ಅವರನ್ನೇ ಪುನಃ ಆಯ್ಕೆ ಮಾಡುವ ನಾವು ವಿವೇಕಿಗಳೇ?
  • ‘ಜನಪ್ರತಿನಿಧಿ’ ಎಂಬ ಹಣೆಪಟ್ಟಿ ಹಾಕಿಕೊಂಡಿದ್ದರೂ ‘ಜನ’ ಆತನನ್ನು ಭೇಟಿ ಮಾಡಬೇಕಾದರೆ ‘ಭಗೀರಥ ಪ್ರಯತ್ನ’ ಮಾಡಬೇಕಾದ ಪರಿಸ್ಥಿತಿ ಏಕೆ?

ನನಗೆ ತಿಳಿದ ಮಟ್ಟಿಗೆ ನಮ್ಮ ‘ಪ್ರತಿನಿಧಿ’ಯನ್ನು ಆಯ್ಕೆ ಮಾಡುವುದರೊಂದಿಗೆ ಪ್ರಜಾಪ್ರಭುತ್ವದಲ್ಲಿ ನಮ್ಮ ಜವಾಬ್ದಾರಿ ಮುಗಿಯುವುದಿಲ್ಲ. ಆ ‘ಪ್ರತಿನಿಧಿ’ಗೆ ನಮ್ಮ, ಅರ್ಥಾತ್ ‘ಜನಾಭಿಪ್ರಾಯ’ವನ್ನು ತಿಳಿಸುವ ವ್ಯವಸ್ಥೆ, ‘ಜನಾಭಿಪ್ರಾಯಕ್ಕೆ’ ‘ಜನಪ್ರತಿನಿಧಿ’ ಮನ್ನಣೆ ನೀಡಲೇ ಬೇಕಾದಂತೆ ಮಾಡುವ ವ್ಯವಸ್ಥೆಯೂ ಇರಬೇಕು. ನಮ್ಮ ದೇಶದಲ್ಲಿ ಇದಕ್ಕೆಂದೇ ಸ್ಥಾಪಿತವಾಗಿರುವ ಗ್ರಾಮ ಸಭೆ, ಗ್ರಾಮಪಂಚಾಯತ್ ಇವೇ ಮೊದಲಾದ ಅನೇಕ ಸಂಸ್ಥೆಗಳು ‘ಜನರ ಅವಿವೇಕ’ದಿಂದಾಗಿ ಪ್ರಜಾಪ್ರಭುತ್ವವನ್ನು ಅಣಕಿಸುವ ಪ್ರಹಸನ ಪ್ರದರ್ಶಿಸುವ ಸಂಸ್ಥೆಗಳಾಗಿವೆ. ಕೆಲವೊಮ್ಮೆ ‘ಬಹುಮತ’ದ ಮುಖೇನ ಅಭಿವ್ಯಕ್ತಿಗೊಳ್ಳುವ ಬಹುಜನಾಭಿಪ್ರಾಯ (ನಮ್ಮ ದೇಶದಲ್ಲಿ ಆಗುತ್ತಿರುವಂತೆ) ಯುಕ್ತವಾದದ್ದು ಆಗಿಲ್ಲದಿರುವ ಸಾಧ್ಯತೆಯೂ ಇದೆ. ಯುಕ್ತ ಶಿಕ್ಷಣದ ಕೊರತೆ, ದೂರದರ್ಶಿತ್ವ ಇಲ್ಲದ (ರಾಜಕೀಯ, ಮತೀಯ ಮುಂತಾದ) ನಾಯಕರ ಕೊರತೆ ಇದ್ದಾಗ ಈ ಸ್ಥಿತಿ ಸೃಷ್ಟಿಯಾಗುತ್ತದೆ ಎಂಬುದು ನನ್ನ ನಿಲುವು.

ನನಗೆ ತಿಳಿದ ಮಟ್ಟಿಗೆ ‘ಪ್ರಜಾಪ್ರಭುತ್ವ’ದ ಪರಿಕಲ್ಪನೆ ನಮಗೆ, ಅರ್ಥಾತ್ ಈ ಕರ್ಮಭೂಮಿ/ಧರ್ಮಭೂಮಿಯ ವಾಸಿಗಳಿಗೆ ಸಂಪೂರ್ಣ ಅಪರಿಚಿತವಾದದ್ದು. ನಮ್ಮ ಇತಿಹಾಸ ಪುರಾಣಗಳನ್ನು ಅವಲೋಕಿಸಿ. ಪ್ರಜಾಹಿತೈಷಿಯೋ ಪ್ರಜಾಪೀಡಕನೋ – ಯಾರೋ ಒಬ್ಬರ ಆಳ್ವಿಕೆಯಲ್ಲಿ ಬದುಕುವುದು ಮಾತ್ರ ನಮಗೆ ಗೊತ್ತು, ಅದೇ ನಮ್ಮ ಪರಂಪರೆ. ‘ಅಪ್ಪಣೆ ಮಹಾಪ್ರಭು’ ಸಂಸ್ಕೃತಿಯವರು ನಾವು. ‘ಮನೆಯಲ್ಲಿ ಮನೆಯ ಯಜಮಾನನ ತೀರ್ಮಾನವೇ (ಅದು ಏನೇ ಆಗಿರಲಿ) ಅಂತಿಮ, ಅದನ್ನು ಯಾರೂ ಪ್ರಶ್ನಿಸುವಂತಿಲ್ಲ’ ಸಂಪ್ರದಾಯದವರು ನಾವು. ಇಂದು ‘ಪ್ರಜಾಪ್ರಭುತ್ವ’ದ ಹೆಸರಿನಲ್ಲಿ  ಈ ಸಂಪ್ರದಾಯವನ್ನೇ ಮುಂದುವರಿಸುತ್ತಿದ್ದೇವೆ. ‘ಮುಕ್ತಚರ್ಚೆ’ಯ ಹೆಸರಿನಲ್ಲಿ ಗಂಟೆಗಟ್ಟಲೆ’ಚರ್ಚೆ’ ಮಾಡಿ ‘ಇಲ್ಲಿ ನಡೆದ ಚರ್ಚೆಯನ್ನು ಆಧರಿಸಿ ಅಂತಿಮ ನಿರ್ಣಯವನ್ನು ಸಿದ್ಧಪಡಿಸಿ ಸಂಬಂಧಿಸಿದವರಿಗೆ ರವಾನಿಸುವ ಅಧಿಕಾರವನ್ನು ಹಿರಿಯರಾದ ನಿಮಗೇ ಕೊಟ್ಟಿದ್ದೇವೆ, ತೀರ್ಮಾನವನ್ನು ವರಿಷ್ಠರಿಗೆ ಬಿಟ್ಟಿದ್ದೇವೆ. ಹಿರಿಯರು ಹೇಗೆ ಹೇಳುತ್ತಾರೋ ಹಾಗೆ, ತಜ್ಞರ ಸಮಿತಿಯ ತೀರ್ಮಾನಕ್ಕೆ ನಾವು ಬದ್ಧ’ ಇವೇ ಮುಂತಾದ ಹೇಳಿಕೆಗಳ ಧ್ವನಿತಾರ್ಥ ‘ನಮ್ಮನ್ನು ನಾವು ಆಳಿಕೊಳ್ಳಲಾರೆವು, ನಮ್ಮನ್ನು ನಾವು ನಿಯಂತ್ರಿಸಿಕೊಳ್ಳಲು ಅಸಮರ್ಥರು’ ಎಂದೇ ನನ್ನ ಅಭಿಪ್ರಾಯ. ಬಹುಶಃ ಆತ್ಮವಂಚನೆ ಮಾಡಿಕೊಳ್ಳುವುದರಲ್ಲಿ ನಾವು ನಿಸ್ಸೀಮರೋ ಏನೋ?  ಇದಕ್ಕೆ ಇನ್ನೂ ಒಂದು ಉದಾಹರಣೆ ಕೊಡುತ್ತೇನೆ. ಕೆಲವು ಸಂದರ್ಭಗಳಲ್ಲಿ ಸರ್ಕಾರ ಯಾವುದೋ ಒಂದು ‘ನೀತಿ’ ರೂಪಿಸಿ ಅದನ್ನು ಜನತೆಯ ಮುಂದಿಟ್ಟು ದೇಶದಾದ್ಯಂತ ಅದರ ಸಾಧಕಬಾಧಕಗಳ ಕುರಿತಾದ ‘ಚರ್ಚೆ’ಗೆ ‘ಮುಕ್ತ’ ಅವಕಾಶ ಒದಗಿಸುವುದುಂಟು. ಈ ಮುಖೇನ ಜನಾಭಿಪ್ರಾಯ ಸಂಗ್ರಹಿಸಿದ ಬಳಿಕವೇ ‘ನೀತಿ’ಗೆ ಅಂತಿಮ ರೂಪು ಕೊಡುವುದಾಗಿಯೂ ಘೋಷಿಸಿರುತ್ತದೆ. ಇಂಥ ‘ಮುಕ್ತಚರ್ಚೆ’ಯನ್ನು ಸಂಘಟಿಸುವ ಜವಾಬ್ದಾರಿಯನ್ನು ಸಂಬಂಧಿಸಿದ ಸರ್ಕಾರೀ ಇಲಾಖೆಯ ಅಧಿಕಾರಿಗಳಿಗೆ, ‘ಸರ್ಕಾರೀ ಮಾನ್ಯತೆ ಪಡೆದ ಸರ್ಕಾರೀ ಅನುದಾನ ಕೃಪಾಪೋಷಿತ ವಿಶ್ವಾಸಾರ್ಹ (ಯಾರಿಗೆ ಎಂದು ಕೇಳಬೇಡಿ) ಸ್ವಯಂಸೇವಾ ಸಂಘಟನೆಗಳಿಗೆ’ ಸರ್ಕಾರ ವಹಿಸಿರುತ್ತದೆ. ಇಂಥ ‘ಮುಕ್ತ ಚರ್ಚಾಗೋಷ್ಠಿ’ಗಳಲ್ಲಿ ಸರ್ಕಾರ ಅಪಾರ ಗೌರವ ಇಟ್ಟಿರುವ ‘ತಜ್ಞ’ರು (ಅರ್ಥಾತ್, ಸರ್ಕಾರದ ಮನದ ಇಂಗಿತವನ್ನು ಅರಿತು ಅದನ್ನು ಜನತೆ ಅಂಗೀಕರಿಸುವಂತೆ ಮಾಡಬಲ್ಲವರು) ಮತ್ತು ‘ಆಹ್ವಾನಿತ’ ಆಸಕ್ತರು ಪ್ರಮುಖ ಪಾತ್ರವಹಿಸುತ್ತಾರೆ. ‘ನೀತಿ’ಯ ಕ್ಷುಲ್ಲಕ ಅಂಶಗಳಲ್ಲಿ ತುಸು ಬದಲಾವಣೆ ಸೂಚಿಸಿ ಕೆಲವು ಅನುಷ್ಠಾನಗೊಳಿಸಲಾಗದ ಸಲಹೆಗಳನ್ನೂ ಸೇರಿಸಿ ಪ್ರಮುಖ ಅಂಶವನ್ನು ಯಥಾವತ್ತಾಗಿ ‘ಸಭೆ’ ಅವಿರೋಧವಾಗಿ ಒಪ್ಪುವಂತೆ ಮಾಡಬಲ್ಲ ಚತುರರು ಇವರಾಗಿರುತ್ತಾರೆ. ದೇಶದಾದ್ಯಂತ ನಡೆದ ಇಂಥ ಚರ್ಚಾಗೋಷ್ಠಿಗಳಿಂದ ಸಂಗ್ರಹಿಸಿದ ‘ಜನಾಭಿಪ್ರಾಯ’ವನ್ನು ಗಮನದಲ್ಲಿ ಇರಿಸಿಕೊಂಡು ಅಂತಿಮ ‘ನೀತಿ’ಯನ್ನು ರೂಪಿಸುವ ಪ್ರಹಸನವೂ ಬಲು ಯಶಸ್ವಿಯಾಗಿ ಜರಗುತ್ತದೆ. ಇದನ್ನೆಲ್ಲ ನೋಡಿದ ನಂತರ ನಾವು ಈಗಿರುವ ಸ್ಥಿತಿಯಲ್ಲಿ ಪ್ರಜಾಪ್ರಭುತ್ವ ನಮ್ಮ ಜಾಯಮಾನಕ್ಕೆ ಒಗ್ಗುವಂಥದ್ದಲ್ಲ ಎಂದು ನನಗೆ ಅನ್ನಿಸತೊಡಗಿದೆ.

ಆದರೂ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಿಡಬಾರದು ಅನ್ನುವವನು ನಾನು. ಅದನ್ನು ಯಶಸ್ವಿಗೊಳಿಸಲು ಕೆಲವು ಕ್ಷಿಪ್ರ ಫಲದಾಯಕ ತಂತ್ರಗಳನ್ನು (ಯುಕ್ತ ಕಾನೂನು ರೂಪಣೆ, ಯುಕ್ತ ಜಾಹೀರಾತುಗಳ ಸುರಿಮಳೆ ಇತ್ಯಾದಿ) ಮತ್ತು ಸುದೀರ್ಘ ಕಾಲಾನಂತರ ಫಲ ನೀಡುವ ‘ಶಿಕ್ಷಣ’ ಎಂಬ ಪ್ರಬಲ ಅಸ್ತ್ರವನ್ನು ಉಪಯೋಗಿಸ ಬೇಕು ಎಂಬುದು ನನ್ನ ಅಭಿಮತ.

‘ಪ್ರಜಾಪ್ರಭುತ್ವ ವ್ಯವಸ್ಥೆಯ ಬಲ ಸಂವರ್ಧನೆಗಾಗಿ ನೀಡುವ ಶಿಕ್ಷಣ’ವು ಸೈದ್ಧಾಂತಿಕ ತಳಹದಿಯ ಮೇಲೆ ರೂಪಿಸಿದ ಪ್ರಾಯೋಗಿಕ ಶಿಕ್ಷಣವಾಗಿರಬೇಕೇ ವಿನಾ ಪ್ರಜಾಪ್ರಭುತ್ವದ ಅರ್ಥ, ಲಕ್ಷಣಗಳು, ಪ್ರಜೆಗಳ ಮತ್ತು ಪ್ರಜಾಪ್ರತಿನಿಧಿಗಳ ಹಕ್ಕುಬಾಧ್ಯತೆಗಳ ಮಾಹಿತಿ ಒದಗಿಸುವ ಸೈದ್ಧಾಂತಿಕ ಶಿಕ್ಷಣ ಆಗಿರಕೂಡದು (ಈಗ ಇದೂ ಸಮರ್ಪಕವಾಗಿ ಆಗುತ್ತಿಲ್ಲ ‘ಜನರಿಂದ ಜನರಿಗಾಗಿ ಜನರ ಸರ್ಕಾರವೇ–‘ಉಕ್ತಿಯನ್ನು ಕಂಠಸ್ಥ ಮಾಡುವುದು ಶಿಕ್ಷಣವಲ್ಲ). ಈ ಶಿಕ್ಷಣ ಪ್ರಾಥಮಿಕ ಹಂತದಿಂದಲೇ ಆರಂಭವಾಗ ಬೇಕು., ಪ್ರತಿನಿಧಿಗಳಾಗ ಬಯಸುವವರು ಪ್ರಚಾರ ಮಾಡಬೇಕಾದದ್ದು ಹೇಗೆ, ಇವರ ಪೈಕಿ ನಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ ಅನುಸರಿಸಬೇಕಾದ ಮಾನದಂಡವೇನು, ಚುನಾವಣಾ ಪ್ರಕ್ರಿಯೆ ಜರಗುವ ವಿಧಾನ, ಅಭ್ಯರ್ಥಿಗಳು ಸೋಲುಗೆಲುವುಗಳನ್ನು ಸ್ವೀಕರಿಸ ಬೇಕಾದ ರೀತಿ, ಗೆದ್ದ ಅಭ್ಯರ್ಥಿಯ ಕರ್ತವ್ಯಗಳು, ಅನರ್ಹರನ್ನು ಆಯ್ಕೆ ಮಾಡಿದರೆ ಆಗುವ ದುಷ್ಪರಿಣಾಮಗಳು, ಚರ್ಚೆಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಭಾವೋದ್ವೇಗಕ್ಕೆ ಒಳಗಾಗದೇ ಇತರರನ್ನು ಹೀಗಳೆಯದೇ ಮಂಡಿಸುವುದು ಹೇಗೆ, ಮಂಡನೆಯಾದ ಅಭಿಪ್ರಾಯಗಳ ಸಾಧಕಬಾಧಕಗಳನ್ನು ವಿಷಯನಿಷ್ಠವಾಗಿ ವಿಮರ್ಶಿಸುವುದು ಹೇಗೆ ಇವೇ ಮೊದಲಾದ ಸುಸಂಗತ ಅಂಶಗಳಿಗೆ ಸಂಬಂಧಿಸಿದಂತೆ ಪ್ರಾಯೋಗಿಕ ಅನುಭವ ಮತ್ತು ಸೈದ್ಧಾಂತಿಕ ಚರ್ಚೆಗಳ ಹಿತಮಿತವಾದ ಮಿಶ್ರಣ ಈ ಶಿಕ್ಷಣ ಆಗಿರಬೇಕು. ಈಗ ಕೆಲವು ಶಾಲೆಗಳಲ್ಲಿ ಶಾಲಾ ಸರ್ಕಾರ ಎಂಬ ಚಟುವಟಿಕೆಯ ಮುಖೇನ, ಕೆಲವು ಶಾಲೆಗಳಲ್ಲಿ ಶಾಲಾ ನಾಯಕ ಹಾಗೂ ತರಗತಿ ನಾಯಕರನ್ನು ಚುನಾವಣೆ ಮೂಲಕ ಆಯ್ಕೆ ಮಾಡುವುದರ ಮುಖೇನ ಪ್ರಜಾಪ್ರಭುತ್ವದ ಅನುಭವ ಒದಗಿಸುವ ಪ್ರಯತ್ನಗಳು ಆಗುತ್ತಿವೆ. ಪ್ರತಿನಿಧಿಯನ್ನು ಆಯ್ಕೆ ಮಾಡುವುದಷ್ಟೇ ನಮ್ಮ ಜವಾಬ್ದಾರಿ ಎಂಬ ಮನೋಧರ್ಮ ಬೆಳೆಯಲು ಇದೇ ಕಾರಣ ಎಂಬ ಗುಮಾನಿ ನನ್ನದು. ಶಿಕ್ಷಕರ ಗೈರುಹಾಜರಿಯಲ್ಲಿ ತರಗತಿಯ ಶಿಸ್ತು ಕಾಯ್ದುಕೊಳ್ಳುವುದು, ಶಿಸ್ತು ಉಲ್ಲಂಘಿಸದವರು ಯಾರೆಂಬುದನ್ನು ಶಿಕ್ಷಕರಿಗೆ ತಿಳಿಸುವುದು, ಈ ಶಾಲೆಗಳಲ್ಲಿ ಶಿಕ್ಷಕರ ಆಜ್ಞಾನುಸಾರ ಶಾಲಾ ಸಮಾರಂಭಗಳನ್ನು ಸಂಘಟಿಸುವುದು ಮುಂತಾದವು ಪ್ರಜಾಪ್ರಭುತ್ವ ರೀತಿಯ ಚುನಾವಣೆಯ ಮುಖೇನ ಆಯ್ಕೆ ಆದವರ ಪ್ರಮುಖ ಕರ್ತವ್ಯಗಳಾಗಿವೆ. ಯಾವುದೇ ಸಂದರ್ಭದಲ್ಲಿ ಅಭಿಪ್ರಾಯ ಸಂಗ್ರಹಣೆ, ಒಗ್ಗೂಡಿ ತೀರ್ಮಾನಿಸುವಿಕೆ ಮುಂತಾದ ಪ್ರಜಾಪ್ರಭುತ್ವದ ಯಶಸ್ಸಿಗೆ ಅತ್ಯಾವಶ್ಯಕವಾದ ಕುಶಲತೆಗಳ ಅನುಭವ ಇವರಿಗೆ ಆಗುವುದೇ ಇಲ್ಲ. ಸ್ವಯಂಆಡಳಿತ ಅಂದರೆ ಸ್ವೇಚ್ಛಾಚರದ ಆಡಳಿತ ಅಲ್ಲ ಎಂಬ ಅರಿವು ಮೂಡಿಸುವ ಪ್ರಯತ್ನಗಳೇ ಆಗಿಲ್ಲ. ಅಂದ ಮೇಲೆ, ಇವರು ಬೆಳೆದು ಪ್ರೌಢರಾದ ಬಳಿಕ ಪ್ರಜಾಪ್ರಭುತ್ವದಲ್ಲಿ ಜವಾಬ್ದಾರೀಯುತವಾಗಿ ಪಾಲ್ಗೊಳ್ಳುವುದು ಹೇಗೆ ಸಾಧ್ಯ?

ಪ್ರಜಾಪ್ರಭುತ್ವದಲ್ಲಿ ಜವಾಬ್ದಾರೀಯುತ ಪ್ರಜೆಯಾಗಲು ಅಗತ್ಯವಾದ ಪ್ರಾಯೋಗಿಕ ತರಬೇತಿಯನ್ನು ಸಹಪಠ್ಯ ಚಟುವಟಿಕೆಗಳ ಮುಖೇನ ಕೊಡಲು ಖಂಡಿತ ಸಾಧ್ಯ, ಸರ್ಕಾರಕ್ಕೆ ಮತ್ತು ಶಿಕ್ಷಕರಿಗೆ ಈ ಕುರಿತಾದ ಬದ್ಧತೆ ಇದ್ದರೆ. ೬೦ ರ ದಶಕದಲ್ಲಿ ನಾನು ಪ್ರೌಢಶಾಲಾ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದಾಗ ಈ ಕುರಿತು ಮಾಡಿದ ಕೆಲವು ಪ್ರಯೋಗಗಳು ನೀಡಿದ ಫಲಿತಾಂಶವನ್ನು ಆಧರಿಸಿ ಇದು ಸಾಧ್ಯ ಎಂದು ಧೈರ್ಯವಾಗಿ ಹೇಳಬಲ್ಲೆ. ಶಾಲಾ ಶಿಕ್ಷಣದ ಸುಧಾರಣೆಯ ಗುರಿ ಹಾಕಿಕೊಂಡಿರುವ ಸಂಸ್ಥೆಗಳು ಈ ನಿಟ್ಟಿನಲ್ಲಿ ಈಗಲೂ ಕ್ರಿಯಾಶೀಲರಾಗದೆ ಇದ್ದರೆ ಪ್ರಜಾಪ್ರಭುತ್ವದ ಹೆಸರಿನಲ್ಲಿ ನಮ್ಮನ್ನು ಇನ್ನೂ ಶೋಷಿಸುತ್ತಾರೆ ನಾವೇ ಆಯ್ಕೆ ಮಾಡಿದವರು.

* * * * * * *

ಚಿತ್ರಕೃಪೆ : blogs.edweeks.org

1 ಟಿಪ್ಪಣಿ Post a comment
  1. Ananda Prasad
    ಜನ 26 2012

    ಪ್ರಜಾಪ್ರಭುತ್ವ ದಿನಕ್ಕೆ ನಿಮ್ಮ ಲೇಖನ ಹಾಗೂ ಚಿಂತನೆ ಒಪ್ಪುವಂಥದ್ದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಯೋಗ್ಯತೆಗನುಗುಣವಾಗಿ ಪ್ರಭುತ್ವ ರೂಪುಗೊಳ್ಳುತ್ತದೆ. ಊಳಿಗಮಾನ್ಯ ವ್ಯವಸ್ಥೆಯಿಂದ ನಾವು ಇನ್ನೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬದಲಾಗಿಲ್ಲ. ಚುನಾವಣೆಗಳಲ್ಲಿ ಯೋಗ್ಯ ಆಯ್ಕೆಗೆ ಅವಕಾಶಗಳೇ ಇಲ್ಲ ಎಂಬುದು ಇಂದು ಸಾಮಾನ್ಯ ದೂರು. ಇದು ನಿಜ. ಪಕ್ಷಗಳ ದೃಷ್ಟಿಯಿಂದ ನೋಡಿದಾಗ ಯೋಗ್ಯ ಪಕ್ಷಗಳು ಇಂದು ಚುನಾವಣಾ ಕಣದಲ್ಲಿ ಇಲ್ಲ ಎಂಬುದೇ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಸುಧಾರಣೆಗೊಳ್ಳದಿರಲು ಪ್ರಧಾನ ಕಾರಣ. ಪಕ್ಷಗಳು ಸ್ಪಷ್ಟವಾದ ಸೈದ್ಧಾಂತಿಕ ಧೋರಣೆಯನ್ನು ಹೊಂದಿಲ್ಲ. ರಾಜಕೀಯ ಪಕ್ಷಗಳಲ್ಲೇ ಅಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲ. ಇದರಿಂದಾಗಿ ಅನುವಂಶೀಯ ಆಡಳಿತ ಬರುತ್ತಿದ್ದು ಹಿಂದಿದ್ದ ರಾಜರ ಅನುವಂಶೀಯ ಆಡಳಿತಕ್ಕಿಂತ ಇಂದಿನ ಆಡಳಿತ ಬಹಳ ಭಿನ್ನವಾಗೇನೂ ಇಲ್ಲ. ಇದನ್ನೆಲ್ಲಾ ಪ್ರಶ್ನಿಸಿ ಸುಧಾರಣೆಗೆ ಒತ್ತಾಯ ತರುವ ಕೆಲಸ ನಮ್ಮ ದೇಶದಲ್ಲಿ ನಡೆಯುತ್ತಾ ಇಲ್ಲ. ಇದನ್ನೆಲ್ಲಾ ಮಾಡಬೇಕಾದರೆ ವ್ಯಾಪಕ ಪ್ರವಾಸ, ಜನಸಂಪರ್ಕ, ಪ್ರಭಾವಿ ಸಂವಹನ ಸಾಮರ್ಥ್ಯ ಇತ್ಯಾದಿ ಬೇಕಾಗುತ್ತದೆ. ಜನ ತಮ್ಮ ಉದ್ಯೋಗ, ಕುಟುಂಬ ಪಾಲನೆ ಜವಾಬ್ದಾರಿ ಬಿಟ್ಟು ಇಂಥದ್ದಕ್ಕೆಲ್ಲ ಹೋಗಲು ಆಗುವುದಿಲ್ಲ. ಹೀಗಾಗಿ ಇಂಥ ಕಾರ್ಯಗಳ ನೇತೃತ್ವ ವಹಿಸಿಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ. ಆದರೆ ಈ ಕುರಿತು ಸುಲಭವಾಗಿ ಇಂದು ಜಾಗೃತಿ ಮೂಡಿಸಲು ಮಾಧ್ಯಮ ನೆರವಾಗಬಲ್ಲದು, ಆದರೆ ಅದನ್ನು ನಮ್ಮ ಮಾಧ್ಯಮಗಳು ಮಾಡುತ್ತಿಲ್ಲ. ಉದಾಹರಣೆಗೆ ಟಿವಿ ಮಾಧ್ಯಮ ಇಂದು ಹಳ್ಳಿ ಹಳ್ಳಿಗಳನ್ನೂ ಡಿ.ಟಿ.ಎಚ್. ಮೂಲಕ ತಲುಪಿದೆ. ಈ ಮಾಧ್ಯಮದ ಮೂಲಕ ಜಾಗೃತಿ ಕೆಲಸ ಮಾಡಲು ಅಸಾಧ್ಯವೇನೂ ಅಲ್ಲ. ಆದರೆ ಟಿವಿ ಮಾಧ್ಯಮ ನಿಯಂತ್ರಿಸುತ್ತಿರುವ ಮಾರುಕಟ್ಟೆ ಶಕ್ತಿಗಳಿಗೆ ಇಂಥದ್ದೆಲ್ಲ ಬೇಕಾಗಿಲ್ಲ. ತಪ್ಪಿಯೂ ನಮ್ಮ ಟಿವಿ ಮಾಧ್ಯಮದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೇಗೆ ಸುಧಾರಣೆ ಮಾಡಬಹುದು ಎಂಬ ಬಗ್ಗೆ ಚರ್ಚೆ, ಜನ ಜಾಗೃತಿ ಕಾರ್ಯಕ್ರಮವಾಗಲಿ ಪ್ರಸಾರ ಆಗುವುದಿಲ್ಲ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments