ಈ ಪ್ರೀತಿ…!!
– ಸುಷ್ಮಾ ಮೂಡಬಿದ್ರಿ
ಇಬ್ಬರ ಮದ್ಯದಲ್ಲೂ ನೀರವ ಮೌನ…ಆಗತಾನೆ ಹೊರಗೆ ಮಳೆ ತಣ್ಣಗೆ ಆರಂಭವಾಗಿ, ಭೋರ್ಗರೆಯುತ್ತಾ ಸುರಿಯಲಾರಂಭಿಸಿತು. ಬೀಸಿ ಬಂದ ಗಾಳಿಗೆ ಕಿಟಕಿ ಪರದೆಗಳೆಲ್ಲಾ ನೃತ್ಯವಾಡುತ್ತಿತ್ತು…ಕಿಟಕಿಯಿಂದ ಹೊರಗೆ ದೂರದ ಅದ್ಯಾವ ಬಿಂದುಗೋ ದೃಷ್ಟಿ ಹಾಯಿಸುತ್ತಾ ನಿಂತಿದ್ದ..ಮೆಲ್ಲಗೆ “ಸುಂಜೂ….”ಎಂದೆ..ರಭಸದ ಮಳೆ ಸದ್ದಿಗೋ ಏನೋ ಕೇಳಿಸಿಲ್ಲವೆಂಬಂತೆ ನಿಂತೇ ಇದ್ದ ಅಂವ..ಮೌನ ಮುರಿಯಲಾಗಲಿಲ್ಲ ನನ್ನಿಂದ..ಶೂನ್ಯದೆಡೆಗಿನ ಅವನ ನೋಟ ಕದಲಿಸಲಾಗಲಿಲ್ಲ..ಹತ್ತಿರ ಬಂದು ನಿಂತೆ..ಈಗ ನೋಡಿದ..ಕಂಗಳು ಕಾಂತಿಹೀನ ಅನಿಸಿತು.
“ಮಾತಡೋಲ್ಲವಾ….”ಎಂದೆ..
ಮತ್ತೇ ದೃಷ್ಟಿ ಬದಲಿಸಿದ…ಈ ಬಗೆಯ ಮೌನ ಸಹಿಸಲಾಗಲಿಲ್ಲ…
“ಪ್ಲೀಸ್..”ಎಂದ ನನ್ನ ಕಣ್ಣಲ್ಲಿ ನೀರಾಡಿತ್ತು…
ಅದೇನನಿಸಿತೋ..”ಸುಶೀ..”ಕರೆದ…ಹ್ಞು0 ಗುಟ್ಟಿದೆ…
“B.com ಗೂ ಇಂಜಿನೀಯರಿಂಗಿಗೂ ಆಗಿಬರೋಲ್ಲವಾ..” ಮೊದಲ ಪ್ರಶ್ನೆ…
ಏನೆಂದು ಉತ್ತರಿಸ್ಯೇನು ನಾನು?!
“ಬಿಟ್ಟೋದ್ಲು ಕಣೇ…”ಅವನ ದುಃಖದ ಕಟ್ಟೆ ಒಡೆದಿತ್ತು…ಅಲ್ಲೇ ಕುಸಿದು ಬಿಕ್ಕತೊಡಗಿದ್ದ…ಸಮಾದಾನಿಸಬಹುದಾದ ಯಾವ ಮಾತುಗಳೂ ತುಟಿಯಿಂದಾಚೆ ಬರಲಿಲ್ಲ..ಅವನ ದುಃಖಕ್ಕೆ ನನ್ನದೂ ಕಣ್ಣಹನಿ ಸೇರಿತಷ್ಟೇ..
ಅವಳು ಮತ್ತು ಅವಳ ಪ್ರೀತಿಯನ್ನೇ ಉಸಿರಾಗಿಸಿಕ್ಕೊಂಡವನಂತೆ ಪ್ರೀತಿಸಿಕ್ಕೊಳ್ಳುತ್ತಿದ್ದ..ಅವಳೂ ಅಷ್ಟೇ..ಅವನೆಂದರೆ ಜೀವ…ಇಂಥ ಪ್ರೀತಿಯಲ್ಲಿ ಇಬ್ಬರಿಗೂ ಹೆಮ್ಮೆ! ಪರಸ್ಪರ ಕಾಳಜಿ..ಪ್ರತಿದಿನ ಪ್ರತಿಕ್ಷಣ ಸಂತೋಷಗಳನ್ನು ಕೂಡಿಕ್ಕೊಳ್ಳುತ್ತಿದ್ದರು..ಈ ಸಂತೋಷಗಳಲ್ಲಿ ನಾನೂ ಇದ್ದೆ…ಸಂಭ್ರಮಿಸಿದ್ದೆ…
ಆಗಿನ್ನೂ ಈ ಪ್ರೀತಿಯ(?) ಮೊದಲು….
ನಾವುಗಳು ಆಗ ೧೦ನೆಯ ಕ್ಲಾಸು..ಆಗಲೇ ಇವರದ್ದೊಂದು ಪ್ರೀತಿ ಹುಟ್ಟಿಬಿಟ್ಟಿತ್ತು..! ಅವಳ ಮುಂದೆ ಇವ ಚೀಟಿ ಹಿಡಿದು ನಿಂತಿದ್ದ…ಸ್ವಲ್ಪ ದಿನ ಕಾಯಿಸಿ..ಸತಾಯಿಸಿ..ಅಂತೂ ಕಡೆಗೊಂದು ದಿನ ಒಪ್ಪಿ ಬಿಟ್ಟಿದ್ಲು..ಇವನಿಗೋ ಜಗತ್ತನ್ನೇ ಗೆದ್ದಂತಹ ಸಂಭ್ರಮ..ಸಡಗರ..ಅಲ್ಲಿಯವರೆಗೆ ಪ್ರೀತಿ ಪ್ರೇಮ ಅನ್ನುತ್ತಿದ್ದವರ ಮುಖದ ಮೇಲೆ ಬೆವರಿಳಿಸಿ ಬಿಡುತ್ತಿದ್ದ ನಾನೂ ಈ ಗೆಳೆಯನ ಸಂಭ್ರಮಕ್ಕೆ ಅಡ್ಡಿ ಬರಲು ಇಚ್ಛಿಸಲಿಲ್ಲ..ಹೀಗೆ ಮೊದಲಾಯಿತು..
ಪ್ರತಿದಿನ ಕಂಗಳಲ್ಲೇ ಮಾತು..ತುಟಿಯಲ್ಲಿ ಕಿರುನಗೆ..ಕ್ಲಾಸು ಬಿಟ್ಟೊಡನೆ ಗಲ್ಲಿ ಗಲ್ಲಿ ಸುತ್ತಿ ಇಬ್ಬರು ಜೊತೆಯಾಗಿ ಬಸ್ ಸ್ಟ್ಯಾಂಡ್ ತನಕ ನಡೆದೇ ಹೋಗಿ ಬಸ್ ಹಿಡಿಯೋದು…ಬಸ್ ನಲ್ಲಿ ಹಿಂಬಾಗಿಲಲ್ಲಿ ನೇತಾಡುತ್ತಾ ಇವಳ ಕಡೆ ಸ್ಮೈಲ್ ಮಾಡೋದು..ನಗು..ಮಾತು..ಹರಟೆ…ಡೈರಿ ಮಿಲ್ಕ್ ನ ಹಂಚಿ ತಿನ್ನೋದರಲ್ಲಿ ಅದೇನೋ ಸುಖ..ಇಂತಿಪ್ಪ ಪ್ರೀತಿಯ ಸುದ್ದಿ ಮೇಷ್ಟ್ರನ್ನ ತಲುಪಿತ್ತು..ಈ ಮದ್ಯ ಇವನದು ಒಂದು ಸಬ್ಜೆಕ್ಟ್ ಕೂಡ ಹೋಗಿತ್ತು…
ಮೇಷ್ಟ್ರು ಇಬ್ಬರನ್ನ ಕೂಡಿಸಿಕ್ಕೊಂಡು ಬುದ್ದಿ ಹೇಳಿದ್ದು, ಇನ್ನು ಹಸಿ ಹಸಿ ನೆನಪು..
ಇವನಂತೂ ಕ್ಲಾಸ್ ಗೆ ಬಂದು ಹಾರಾಡಿಬಿಟ್ಟಿದ್ದ..ಇವರ ಪ್ರೀತಿಗೆ ಈಗಿಂದಾನೆ ಅಡ್ಡಿ ಶುರುವಾಯ್ತು ಅಂದು ಬಿಟ್ಟಿದ್ದ…!!
ಅಂತು ಇಂತೂ ಎಸ್ ಎಸ್ ಎಲ್ ಸಿ ಮುಗಿಯಿತು ..ಇವನ ಕೈಯಲ್ಲಿ ಮೊಬೈಲು ಬಂತ್ತು..ಅವಳಪ್ಪನ ಮೊಬೈಲು ಅಪ್ಪ ಮನೇಲಿ ಇರೋವಾಗ ಅವಳದೇ ಕೈಲಿರುತ್ತಿತ್ತು..
ಪ್ರೀತಿ ಎಸ್ಎಂಎಸ್ ನಲ್ಲಿ ಮುಂದುವರೆಯಿತು..
ಪಿಯುಸಿ ನ ಎಲ್ಲಿ ಸೇರಬೇಕು?ಯಾವ ಸಬ್ಜೆಕ್ಟ್?ಎಂಬ ಗೊಂದಲ..
ಅವಳು ನಾನೂ ಸೈನ್ಸ್ ಆರಿಸಿಕ್ಕೊಂಡು ಬಿಟ್ಟಿದ್ವಿ..ನಾನು “ನೀನೂ ಇದಿಕ್ಕೆ ಬಾರೋ..”ಅಂದಿದ್ದೆ..ಇವನಿಗೆ ನಮ್ಮ ಕ್ಲಾಸ್ ಬೇಕಿತ್ತು..ಬಟ್ ಸೈನ್ಸ್ ಬೇಡ..ಒಂದೇ ಕಾಲೇಜ್…ಅವನು ಕಾಮೆರ್ಸ್ ತಗೊಂಡು ಬಿಟ್ಟ…
ನನಗೆ ಇವರಿಬ್ಬರು ಬಹಳನೇ ಎನ್ನುವಷ್ಟು ಸ್ನೇಹಿತರು..ಹೀಗೆ ಸ್ನೇಹ ಪ್ರೀತಿ ಸಾಗುತ್ತಿರಬೇಕಾದರೆ..
ಅದೊಂದು ದಿನ..ಹುಡುಗಿ ಅಳುತ್ತಿದ್ದಳು..”ಏನಯ್ತೆ…”ಎನ್ನುವಷ್ಟರಲ್ಲಿ ತಬ್ಬಿಕ್ಕೊಂಡು ಅಳಹತ್ತಿದಳು..ಮೊದಲ ಬಾರಿ ಅವಳ ಬಾಯಿಂದ..”I cant move with him anymore..” ಎಂಬ ಮಾತು ಬಂದಿತ್ತು..ನನಗೋ ಏನಾಯ್ತು ಎಂದು ತಿಳಿಯದೆ ಗರ ಬಡಿದ ಅನುಭವ…
“ಸುಶ್..ನಾನು ಅನುಷಾ, ಶೈಲು ಜೊತೆ ಹೋಗಬಾರದಂತೆ…ಅವರ್ಗೆ ಊರಲ್ಲೆಲ್ಲ ಬಾಯ್ ಫ್ರೆಂಡ್ಸ್ ಅಂತೆ ..ಅಂತೋರ ಸಹವಾಸ ನಾನು ಮಾಡ್ಬರ್ದಂತೆ..ಹೀಗೆಲ್ಲ ಖಡಾಖಂಡಿತ ಹೇಳಿಬಿಟ್ಟಿದ್ದಾನೆ..ಇವನಿಗಾಗಿ ನನ್ನೆಲ್ಲ ಸ್ನೇಹಿತೇರ್ನ ಬಿಡ್ಲಾ ಹೇಳು..?ನಾನೇನು ಅವನ ಪ್ರಾಪರ್ಟಿನಾ?”ಅವಳ್ನ ಹೇಗೋ ಸಮಾದಾನ ಮಾಡಿ, “ಇರು ನಾನು ಮಾತಾಡ್ತೀನಿ” ಅಂದು ಇವನತ್ರ ಬಂದ್ರೆ,
ಇಂವ “ಸುಶೀ..ಅನುಷಾ,ಶೈಲು ಕ್ಯಾರೆಕ್ಟೆರ್ ಸರಿ ಇಲ್ಲಾ ಕಣೇ..ಇವಳ್ನ ಅವರುಗಳ ಜೊತೆ ನೋಡಿ ಯಾವಾನಾದ್ರ ಇವಳ ಬಗ್ಗೆ ಏನಾದ್ರು ಬ್ಯಾಡ್ ಒಪಿನಿಒನ್ ಹೇಳಿದ್ರೆ ಅಷ್ಟೇ ಮತ್ತೇ…!! ಅದನ್ನ ಹೇಳಿದ್ರೆ ಹೀಗಾಡ್ತಾಳೆ ನೋಡು…” ಇವನ ಕಂಪ್ಲೇಂಟು .
ಇನ್ನೊಂದು ಸರ್ತಿ ಇವಳು “ಹುಡುಗರ ಜೊತೆ ಮಾತಾಡಬೇಡ…ಜೀನ್ಸ್ ಹಾಕಬೇಡ ಅಂತಾನೆ ..ನಂಗೆ ಪ್ರಪೋಸ್ ಮಾಡಿದ ಅಂತ ಜೆಒಸಿ ಸತೀಶ್ಗೆ ಹೊಡೆದಾಕಿ ಬಿಟ್ಟಿದಾನೆ..ನಾನೇನ್ ರೌಡಿನ ಲವ್ ಮಾಡ್ತಾ ಇದ್ದಿನ ?ನಾನೇ ಅವನ್ನ reject ಮಾಡಿದ್ಮೇಲೆ ಇವನದೇನು ಮದ್ಯ ಹೀರೋಯಿಸಂಮ್ಮು?”
ಇಂವ ” ಮಾತಾಡಿದ ಹುಡುಗರೆಲ್ಲ ಇವಳ್ನ ಲವ್ ಮಾಡು ಅಂದ್ರೆ?! ಅದಿಕ್ಕೆ ಹುಡುಗ್ರನ್ನ ಮಾತಾಡಿಸ್ಬೇಡ ಅಂದೇ..ಇನ್ನು ಆ ಸತೀಶ ನನ್ ಹುಡ್ಗಿಗೆ ಕಣ್ನ್ ಹಾಕಿದಾನೆ..ಲುಚ್ಚ..ಅವಂಗೆ ಕೊಟ್ಟಿರೋದು ಕಡ್ಮೇನೆ ಆಯಿತು…”
ತುಂತುರು ಸೋನೆಯಂತೆ ಹರಿತ ಇದ್ದ ಅವರ ಪ್ರೀತಿಯಲ್ಲಿ ಅಪಸ್ವರ ಎದ್ದಿದ್ದು ಈ ಥರದ ಸಣ್ಣ ಪುಟ್ಟ ಪೋಸಿಸಿವ್ ನೆಸ್ ನಿಂದ …ಕೆಲವೊಂದು ಬಾರಿ ಇವರಿಬ್ಬರನ್ನ ಸಮಾದಾನಿಸುವಲ್ಲಿ ನಾನು ಹೈರಾಣಗಿದ್ದೇನೆ ..ಇಷ್ಟಾಗಿಯೂ ಕಡೆಗೊಮ್ಮೆ ಜಗಳ ಸಾರೀ ಯಲ್ಲಿ ಅಂತ್ಯಗೊಂಡು ಒಂದಾಗಿದ್ದೇವೆ…ಮೂವರು ಸೇರಿ ನಕ್ಕಿದ್ದೇವೆ, ಹರಟಿದ್ದೇವೆ…
ಇವನ ಗುಜರಿ ಸೈಕಲ್ ಮುಂದೆ ಅವಳಪ್ಪನ ಕಾರೇ ಮರೆತು ಹೋಗುತ್ತಿತ್ತು..ಕರಿಯ ಮುಖವು ಕೂಡ ಸುಂದರವಾಗಿ ಕಾಣುತ್ತಿತ್ತು..ಇಷ್ಟ ಪಡುತ್ತಿದ್ದಳು…ಮೆಚ್ಚುತ್ತಿದ್ದಳು..
ಜಗಳದ ಮದ್ಯೆನೂ ಒಬ್ಬರಿಗೊಬ್ಬರು ಎನ್ನುವಂತೆ ಇದ್ದರು..ಇವನು ಕುಂತಲ್ಲಿ ನಿಂತಲಿ ಅವಳನ್ನ ಕಣ್ತುಂಬಿಕ್ಕೊಳ್ಳುತ್ತ ಪ್ರೀತಿಸ್ತ ಇದ್ದ..ನೈಟ್ ಕಾಲಿಂಗ್ ಫ್ರೀ ಆಫರ್ ಸದ್ದಿಲ್ಲದೇ ಇವನ ಮೊಬೈಲ್ ನಲ್ಲಿ activate ಆಗಿತ್ತು..
ಇಷ್ಟಿಲ್ಲದೆ ಹೇಳುತ್ತರ…?! “love is blind’ ಅಂತ?
ಹೀಗೆಲ್ಲ ಇದ್ದ ಪ್ರೀತಿ ಅಂತ್ಯವಾಯಿತಾ?!
ಸಂಜು ಮತ್ತೇ ನನ್ನ ಕೇಳಿದ “ನನಗ್ಯಾಕೆ ಹೀಗಾಯ್ತು?ಈ ಪ್ರೀತಿಯೆಲ್ಲ ಸುಳ್ಳ?”
ಹದಿನಾರರ ಪ್ರೀತಿ…ಸುಳ್ಳೇನ್ನಲೇ..! ಕಣ್ಣಲ್ಲೇ ಸಾಂತ್ವನ ಹೇಳಲು ನೋಡಿದೆ..ಹೊರಗೆ ಭೋರ್ಗರೆವ ಮಳೆಗೂ..ಇವನೊಳಗೆ ಭೋರ್ಗರೆವ ಭಾವದಲೆಗಳಿಗೂ ನನಗಾವ ವ್ಯತ್ಯಾಸಾನು ಕಾಣಲಿಲ್ಲ..ವಯಸ್ಸು ಸಣ್ಣದಾದರೂ ಭಾವುಕತೆ ಸಣ್ಣದಾಗಿರಲ್ಲಿಲ್ಲ..ತೀರಾ ಸಣ್ಣವರಿರೋವಾಗ ಸಿಕ್ಕ ವಸ್ತು ದಕ್ಕದೇ ಹೋದರೆ ಇನ್ನೊಂದು ಕೊಡಿಸುವೆನೆಂದು ಸಮಾನಿಸಬಹುದು..ಈ ಹೊತ್ತು ದೊಡ್ಡವನೂ ಅಲ್ಲದ ಸಣ್ಣವನೂ ಅಲ್ಲದ ಹುಡುಗಾ..!
ಹೇಗೆಂದು…ಏನೆಂದು ಹೇಳಲಿ? ನನ್ನೊಳಗೆ ಭಯ…ಸಾಂತ್ವನದ ನುಡಿಗಳು ಕೂಡ ಅವನ್ನನ್ನ ಇನ್ನಷ್ಟು ಕುಸಿದುಕ್ಕೊಂಡು ಬಿಟ್ಟರೆ?!
ಅವನ್ನೆಲ್ಲ ಮಾತುಗಳಿಗೆ ಕಿವಿಯಾಗಿ ಬಿಡುವುದಷ್ಟೇ ಎಂದು ನಿರ್ಧರಿಸಿದ್ದೆ..
ಅನ್ಯಮನಸ್ಕ ನಾಗಿ ಬಿಡುತ್ತಿದ್ದ ಅವನ್ನ ಕಂಡು ಅವನಮ್ಮ “ನಿನ್ನ ಮಾತು ಕೇಳ್ತಾನೆ…” ಎಂದು ನನ್ನ ಕರೆಸಿದ್ದರು..ನನಗೂ ತೀರದ ಗೊಂದಲ..
“ಪಿಯುಸಿ ಇದ್ದಾಗ ಅಷ್ಟೆಲ್ಲ ಪ್ರೀತಿಸಿಕ್ಕೊಂಡ ಅವಳ ಪ್ರೀತಿ ಇಂಜೀನಿಯರಿಂಗ್ ಗೆ ಸೇರಿಕ್ಕೊಂಡ ಮೇಲೆ ಬದಲಾಯಿತ..?! ನಿಜಕ್ಕೂ…B.com ಗೂ ಇಂಜಿನೀಯರಿಂಗಿಗೂ ಆಗಿಬರೋಲ್ಲವಾ..?!”
ಆಗಿ ಬರದ ಕಾರಣಕ್ಕೆ ಇರಬೇಕು.ಇವ ಬೇರೆ ಹುಡುಗಿಗೆ ಪ್ರಪೋಸ್ ಮಾಡಿದ್ದಂತೆ..! ಸುಳ್ಳೇ ಸುಳ್ಳು ನೆವ ಹೇಳಿ ಎದ್ದು ಹೋಗಿದ್ದಳು.ಅಲ್ಲಿಗೆ ಇವನ ಹ್ರದಯ ಒಡೆದಿತ್ತು..ಮೊಬೈಲ್ ಸ್ವಿಚೆಡ್ ಆಫ್ ಎಂದು ಸಾರಿ ಸಾರಿ ಹೇಳುತ್ತಿತ್ತು.. ಒಂಟಿಯಾಗಿ ಒಂಟಿತನನ ಜೊತೆ ಮಾಡ ಹೊರಟ್ಟಿದ್ದ..ಈ ಹೊತ್ತಿಗೆ ನಾ ಬಂದಿದ್ದೆ..ಅವನೊಳಗಿನ ದುಃಖ ಕಣ್ಣಿರಾಗಿತ್ತು..
ಮೌನ ಎಲ್ಲವನ್ನು ಅರ್ಥ ಮಾಡಿಕ್ಕೊಳ್ಳುತ್ತಿತ್ತು..ಮತ್ತೇ ನಮ್ಮಿಬ್ಬರ ಮದ್ಯೆ ಮಾತಿರಲಿಲ್ಲ..ಹಾಗೆ ಸುಸ್ತಾದವನಂತೆ ಭುಜದ ಮೇಲೆ ಒರಗಿದ್ದ..ನಿನ್ನೆಲ್ಲ ನೋವುಗಳಿಗೆ ನಾನಿದ್ದೇನೆ ಕಣೋ ಎಂಬಂತೆ ಸ್ನೇಹಿತನ ಕೈಯೊಳಗೆ ಕೈ ಸೇರಿಸಿದ್ದೆ…
ಇದಾಗಿ ಕೆಲವು ತಿಂಗಳುಗಳು ಉರುಳಿರಿದರೂ ಹುಡುಗಿಯ ಪತ್ತೆಯಿಲ್ಲ….ನಂಬರ್ ಚೇಂಜ್ ಮಾಡಿದಾಳೆ…ಸಂಜು-ನಾನು ಫ್ರೆಂಡ್ಸ್ ಅನ್ನೋ ಕಾರಣಕ್ಕೆ ನನಗೂ ನಂಬರ್ ಕೊಟ್ಟಿಲ್ಲ..ಅಲ್ಲಿಗೆ ನನ್ನ ಅವಳ ಸ್ನೇಹನೂ ಮುರಿದು ಬಿದ್ದಂತೆ…!!
ಸಂಜು ಮಾತ್ರ ಅದೇನೋ ಬದಲಾಗಿಲ್ಲ…!
“ಶಾಲಿ ಸುದ್ದಿ ಇದೆಯಾ..?ನಂಬರ್ ಸಿಗ್ತಾ…?” ಅಂತ ಒಮ್ಮೆ ಕುಕ್ಕುಲಾತಿಯಿಂದ…
“ಹೇ..ಅವ್ಳು ಹೋದ್ರೆ ಹೋಗ್ಲೇ..ಅವಳ್ನ, ಅವಳ ಇಂಜಿನಿರಿಂಗ್ ನ, ಅವಳಪ್ಪನ ಕಾರ್ ನ ಮೀರಿ ನಿಲ್ತೇನೆ ನೋಡ್ತಿರೆ…” ಎಂದು ಆವೇಶದಿಂದ..
“ಹನುಮಾನ್ ಗುಡಿಲಿ ಸಿಕ್ಕಿದಳು..ನೋಡಿನೂ ನೋಡದಂಗೆ ಹೋದ್ಲು..ಮುಖದಲ್ಲಿ ಒಂದು ಸಣ್ಣ ನಗೂನು ಬರದೆ ಹೋಗೊವಂಥ ತಪ್ಪೇನೆ ಮಾಡಿದ್ದೇನೆ ನಾನು?” ಅನ್ತೊಮ್ಮೆ ದುಃಖದಿಂದ ಹೇಳುತ್ತಲೇ ಇದ್ದಾನೆ..
ಅವಳಿಂದ, ಅವಳ ನೆನಪಿಂದ ಹೊರಬಂದಿದ್ದಿನಿ ಎಂದು ಹೇಳುಹೆಳುತ್ತಲೇ ಅವಳ ನೆನಪಿಗೆ ಜಾರಿ ಬಿಡುತ್ತಾನೆ….ಕಣ್ಣಿರಾಗುತ್ತಾನೆ…
ಇಷ್ಟರ ಮದ್ಯೆ ನನಗೆ ಪ್ರಶ್ನೆಯಾಗಿ ಉಳಿದ್ದಿದ್ದು ಅವಳು….ಬ್ರೇಕ್ ಅಪ್ ಗೆ ಅವಳ ಕಾರಣ..?!
ಇದಿರಬಹುದಾ ಅದಿರಬಹುದಾ ಎಂದು ಯೋಚಿಸಿ ಯೋಚಿಸಿ ಚಿಟ್ಟಾಗಿಗಿದ್ದೇನೆ..!!
* * * * * * *
ಚಿತ್ರಕೃಪೆ : ಅಂತರ್ಜಾಲ
ತುಂಬಾ ಚೆಂದದ ನಿರೂಪಣೆ ಸುಷ್ಮ, ನನ್ನ ಪ್ರಕಾರ ಎಲ್ಲರಿಗಿಂತಲೂ ಮೀರಿ ನಿಂತದ್ದು ನಿಮ್ಮೊಳಗಿನ ಸ್ನೇಹಮಯಿ.. 🙂 ಪ್ರೀತಿ ಸುಂದರವೂ ಹೌದು, ಮಧುರಾನುಭೂತಿಯೂ ಹೌದು ಅಷ್ಟೇ ಸೂಕ್ಷ್ಮವಾದ ಭಾವಗಳ ಹಂದರವೂ ಹೌದು.. ಕೆಲವೊಮ್ಮೆ ಪೋಷಕರು ವಿಧಿಸುವ ಎಲ್ಲಾ ಕಷ್ಟಗಳಿಗೂ ಅಚಲವಾಗಿ ನಿಲ್ಲುವ ಪ್ರೀತಿ, ಕೆಲವೊಮ್ಮೆ ಗೊತ್ತಿಲ್ಲದೆ ಹೊರಬರುವ ಒಂದೇ ಒಂದು ಕೊಂಕು ಮಾತು ಹೂವನ್ನು ಬಾಡಿಸುವ ವಿಷ ಗಾಳಿಯಾಗುತ್ತದೆ.. ಪ್ರೀತಿ ಒಬ್ಬ ಮನುಷ್ಯನನ್ನು ಗಟ್ಟಿಗೊಳಿಸುವುದೇ ವಿನಃ ಒಡೆಯುವುದಿಲ್ಲ, ಆದ್ದರಿಂದ ಜೀವನದಲ್ಲಿ ಅನುಭವಿಸಿದ ಈ ಎಲ್ಲಾ ನೋವುಗಳನ್ನೂ ಕೇವಲ ಅನುಭವಗಳೆಂದು ಭಾವಿಸಿ ಆ ಹುಡುಗನಿಗೆ ತನ್ನ ಜೀವನವನ್ನು ಹಸನುಗೊಳಿಸಿಕೊಳ್ಳುವಂತೆ ತಿಳಿ ಹೇಳಿ.. ಜೀವನ ಹಸನಾದರೆ ಹಿಂದಿನ ನೆನಪುಗಳು ಭೂತಾಕಾರವಾಗಿ ಕಾಡವು.. ಇನ್ನು ಪ್ರೀತಿ ಒಡೆಯಲು ಅತಿಯಾದ ಪೊಸ್ಸೆಸಿವ್’ನೆಸ್ ಮತ್ತು ಎಲ್ಲಾ ವಿಷಯಗಳಲ್ಲಿಯೂ ತನ್ನ ಪ್ರೇಮಿಯಿಂದಾಗುವ ಅತಿಯಾದ ಮೂಗುತೂರಿಸುವಿಕೆ ಇರಬಹುದು, ಅವರ ಪ್ರೀತಿಯನ್ನು ಉಳಿಸಿಕೊಳ್ಳಲಾಗದ ಅಪ್ರಬುದ್ಧತೆ ಕಾಡಿರಬಹುದು, ಇಲ್ಲವೆ ಆ ಪ್ರೀತಿಯನ್ನು ಉಳಿಸಿಕೊಳ್ಳುವ ಭಾಗ್ಯ ಅವರಿಬ್ಬರಿಗೂ ಇಲ್ಲದಿರಬಹುದು.. ತುಂಬಾ ಯೋಚಿಸುವುದು ಕೇವಲ ಸಮಯದ ವ್ಯರ್ಥವಾಗಬಹುದು.. ’ಜೀವನದಲ್ಲಿ ನಡೆಯುವ ಎಲ್ಲಾ ತಿರುವುಗಳನ್ನೂ ಅಪಘಾತಗಳೆಂದುಕೊಂಡರೆ ಅದು ಯಾತಾನಾಮಯವಾಗಿ ಉಳಿಯುತ್ತದೆ, ಅದನ್ನು ಘತಿಸಿದ ಒಂದು ಘಟನೆಯೆಮ್ದುಕೊಂಡರೆ ಮರೆತು ಮುನ್ನಡೆಯಬಹುದು..” ಇದು ನಿಜವಾದ ಘಟನೆಯಿಂದ ಪ್ರೇರಿತವಾದ ಲೇಖನವಾಗಿದ್ದರೆ ಅವನಿಗೆ ಶುಭವಾಗಲಿ.. 🙂 ಚೆಂದದ ಲೇಖನ, ಹರೆಯದ ಕನಸು ಮತ್ತು ಭಾವಗಳನ್ನು ತುಂಬಾ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದೀರಿ, ಹಿಡಿಸಿತು.. ಶುಭವಾಗಲಿ.. 🙂
ನನ್ನ ಬರಹವನ್ನು ಮೆಚ್ಚಿ..
ನಿಮ್ಮಲ್ಲಿ ಪ್ರಕಟಿಸಿರುವುದಕ್ಕೆ …
ನನಗೆ ತುಂಬಾ ಸಂತಸವಾಗುತ್ತಿದೆ..
ನಿಮ್ಮ ಪ್ರೋತ್ಸಾಹ ಹೀಗೆ ನಿರಂತರವಾಗಿರಲಿ…
ಆನಂದಪೂರ್ವಕ ಧನ್ಯವಾದಗಳು ನಿಲುಮೆ
ಹಾಗೆಯೇ ಪ್ರಸಾದ್, ಇದು ನಿಜವಾದ ಕತೆ ಯಿಂದ ಪ್ರೇರಿತವಾದ ಬರಹ…. ಇನ್ನೂ ಹಳೆಯದೇ ಗುಂಗಿನಲ್ಲಿರುವ ನನ್ನ ಸ್ನೇಹಿತನಿಗೆ ಸ್ನೇಹಸ್ಪರ್ಶಿ ಮಾತನ್ನಾಡಿದ್ದಿರಿ .. ಬರಹಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಿರಿ…. ಧನ್ಯವಾದಗಳು….