ವಿಷಯದ ವಿವರಗಳಿಗೆ ದಾಟಿರಿ

ಜನವರಿ 30, 2012

10

ಪ್ರೀತಿಯ ಮಟ್ಟು ಸರ್, ನಿಮಗೊಂದು ಪ್ರೀತಿಯ ಬಹಿರಂಗ ಪತ್ರ.

‍ನಿಲುಮೆ ಮೂಲಕ

– ಪೂರ್ಣಚಂದ್ರ

(ಇತ್ತೀಚಿಗೆ ದಿನೇಶ್ ಅಮಿನ್  ಮಟ್ಟು ಅವರು ಬರೆದ ಬಹುಚರ್ಚಿತ ಲೇಖನಕ್ಕೆ ಪೂರ್ಣಚಂದ್ರ ಅವರು ಪ್ರತಿಕ್ರಿಯಯನ್ನು ಕಳುಹಿಸಿದ್ದಾರೆ. ಓದಿ..)

ಪ್ರೀತಿಯ ಮಟ್ಟು ಸರ್,

ನಿಮಗೊಂದು ಪ್ರೀತಿಯ ಬಹಿರಂಗ ಪತ್ರ.
ನಮಸ್ಕಾರಗಳು. ನನ್ನ ಪರಿಚಯ ನಿಮಗೆ ಇಲ್ಲ ಎಂದು ಕಾಣುತ್ತೆ. ಆದರೆ, ನಿಮ್ಮ ಪರಿಚಯ ನನಗೆ ೧೦ ವರ್ಷದ್ದು. ನಿಮ್ಮ ಅಂಕಣಗಳನ್ನು ಓದುತ್ತಾ ಬೆಳೆದವನು ನಾನು.

ವಿವೇಕಾನಂದರ ಬಗ್ಗೆ ನೀವು ಬರೆದ ಲೇಖನ ಓದಿದ ಬಳಿಕ, ನನಗನಿಸಿದ್ದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅನಿಸಿತು. ಅಷ್ಟರಲ್ಲಿಯೇ ವಿವೇಕಾನಂದರ ಪರ ಎಂದು ಭ್ರಮಿಸಿರುವ, ಭಾವಿಸಿಕೊಂಡಿರುವ ಬಲಪಂಥೀಯ ಮೂಲಭೂತವಾದಿಗಳು ನಿಮ್ಮ ವಿರುದ್ಧ ಕತ್ತಿ ಬೀಸಲಾರಂಭಿಸಿದರು.
ಇದಕ್ಕೆ ಪ್ರತಿಯಾಗಿ, ತಾವು ಮಟ್ಟು ಪರ(ವಿವೇಕನಂದ ಪರ ಅಲ್ಲ) ಎಂದು ಭ್ರಮಿಸಿರುವ ಎಡಪಂಥೀಯ ಹಾಗೂ ಪ್ರಗತಿಪರ ಮೂಲಭೂತವಾದಿಗಳು ಕೂಡ ತಮ್ಮ ಕತ್ತಿಗೆ ಸಾಣೆ ಹಿಡಿಯಲಾರಂಭಿಸಿದರು.

ಈ ಎರಡೂ ವರ್ಗದ ಮೂಲಭೂತವಾದಿಗಳು ಶಿವಮೊಗ್ಗ ಮತ್ತು ಬೆಂಗಳೂರಿನ ಬೀದಿಗಳಲ್ಲಿ, ನಿಮ್ಮ ಕಚೇರಿ ಎದುರು, ಬ್ಲಾಗ್‌ಗಳಲ್ಲಿ ಕತ್ತಿ ಬೀಸಾಡುವಾಗ ಮಧ್ಯೆ ಪ್ರವೇಶಿಸಲು ಭಯವಾಯಿತು. ಯಾರದ್ದಾದರೂ ಕತ್ತಿ ನನ್ನನ್ನೇ ತಿವಿದುಬಿಡಬಹುದು ಎಂದು ಸುಮ್ಮನಾದೆ. ಈಟಿ, ಭರ್ಜಿ, ಕತ್ತಿ ಗುರಾಣಿಗಳ ಅಬ್ಬರ ಕಡಿಮೆಯಾಗಿದೆ. ಹಾಗಾಗಿ ಇದು ಸೂಕ್ತ ಸಮಯ ಎಂದು ನನಗನಿಸಿದ್ದ ಕೆಲ ಸಂಗತಿಗಳನ್ನು ಹೇಳಲು ಪ್ರಯತ್ನಿಸುವೆ.

ವಿವೇಕಾನಂದರ ಕುರಿತು ನೀವು ಬರೆದಿರುವ ಬಹಳಷ್ಟು ಸಂಗತಿಗಳು ಹೊಸದೇನಲ್ಲ. ವಿವೇಕಾನಂದರ ಕುರಿತು ಹೆಚ್ಚು ಓದಿಕೊಂಡಿರುವವರಿಗೆ ಎಲ್ಲವೂ ಗೊತ್ತಿರುವ ಸಂಗತಿಗಳೇ ಆಗಿವೆ.

೧೪ನೇ ವಯಸ್ಸಿನಲ್ಲಿಯೇ ನರೇಂದ್ರನಿಗೆ ಉದರವಾಯು ರೋಗ ತಗಲಿ, ಆತ ಅಸ್ಥಿ ತುಂಬಿದ ಚರ್ಮದ ಮೂಟೆಯಂತಾಗಿ ಬಿಟ್ಟಿದ್ದ. ಇದೇ ಕಾರಣಕ್ಕಾಗಿ ಆತನ ತಂದೆ ಊರನ್ನೇ ಬದಲಿಸಿದ. ಬಾಣಸಿಗತನ ಕುಶಲಕಲೆಯಲ್ಲಿ ವಿವೇಕಾನಂದ ಅತಿ ನಿಪುಣ. ಜತೆಯಲ್ಲಿ ಆತ ಹೊಟ್ಟೆಬಾಕನೂ ಆಗಿದ್ದ. ಶಾಲೆಯಲ್ಲಿ ತುಂಟನಾಗಿದ್ದ. ರೋಗಪೀಡಿತನಾಗಿಯೇ ಸತ್ತ ಎಂಬುದು ಗೊತ್ತಿರುವ ವಿಷಯಗಳೇ. ಓದಿನಲ್ಲಿ ಹಿಂದಿದ್ದ ಎಂದು ಬರೆದಿದ್ದೀರಿ. ನಮಗೆಲ್ಲರಿಗೂ ಆತ ಗಣಿತದಲ್ಲಿ ಹಿಂದಿದ್ದ ಎಂಬುದಷ್ಟೇ ಗೊತ್ತಿತ್ತು. ಇಂಟರ್‌ಮೀಡಿಯೇಟ್, ಪದವಿಯಲ್ಲಿ ಇಂಗ್ಲಿಷ್‌ನಲ್ಲಿ ಡಲ್ ಆಗಿದ್ದ ಎಂಬುದು ಗೊತ್ತಿರಲಿಲ್ಲ. ಈ ವಿಷಯ ನಿಜಕ್ಕೂ ನನ್ನಂಥ ಡಲ್ ವಿದ್ಯಾರ್ಥಿಗಳಿಗೆ ಸಂತೋಷವಾಯಿತು. ಮಾಂಸ ತಿನ್ನುತ್ತಿದ್ದ, ಪಾರ್ಟಿಗಳಿಗೆ ಹೋಗುತ್ತಿದ್ದ ಎಂಬುದು ನಾವು ಓದಿರುವ ಸಂಗತಿಯೇ. ಈಶ್ವರ ಚಂದ್ರ ವಿದ್ಯಾಸಾಗರ ಅವರ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಬಿಟ್ಟ ಎಂದು ಕೇಳಿದ್ದೆವು. ಒಳ್ಳೆಯ ಶಿಕ್ಷಕನಾಗಿಲ್ಲದ ಕಾರಣಕ್ಕೆ ನೌಕರಿ ಬಿಟ್ಟ ಎಂದು ನೀವು ಬರೆದಿದ್ದೀರಿ. ಹೀಗೆ ಗೊತ್ತಿಲ್ಲದ ಸಂಗತಿಗಳ ಬಗ್ಗೆಯೂ ಬರೆದಿದ್ದೀರಿ. ಇವುಗಳಲ್ಲಿ ಅವರ ವ್ಯಕ್ತಿತ್ವಕ್ಕೆ ಊನವಾಗುವಂತಹದ್ದು ಏನೂ ಇಲ್ಲ.
ನೀವು ಬರೆಯದೇ ಇರುವ ಇನ್ನೂ ಕೆಲವು ವಿಷಯಗಳಿವೆ. ವಿವೇಕಾನಂದ ಕುಡಿತ ಶುರು ಮಾಡಿದ್ದರು ಇತ್ಯಾದಿ… ಅದೊಮ್ಮೊ ಯಾರೋ ಕೇಳಿದಾಗ-‘ಸಂಕಟದಿಂದ ಬಳಲುತ್ತಿರುವ ಮನುಷ್ಯನಿಗೆ ಕುಡಿತ ಒಂದಿಷ್ಟು ಸಮಾಧಾನ ತಂದುಕೊಟ್ಟರೆ, ಕುಡಿಯುವುದರಲ್ಲಿ ತಪ್ಪೇನಿದೆ ?’ ಎಂದಿದ್ದರಂತೆ.

ವಿವೇಕಾನಂದರ ಬಗ್ಗೆ  ಪುರಾವೆ ಇಲ್ಲದ ಹಲವು ಮಾತುಗಳನ್ನೂ ಕೇಳಿದ್ದೇವೆ. ಇದೆಲ್ಲದರ ಹೊರತಾಗಿಯೂ ಅವರನ್ನು ಒಪ್ಪಿದ್ದೇವೆ. ಸೋ, ನೀವು ಹೇಳಿದ ಕೆಲ ವಿಷಯಗಳ ಬಗ್ಗೆ ಆಕ್ಷೇಪವಿಲ್ಲ. ಆದರೆ, ಅದನ್ನು ನೀವು ಅನಾವರಣ ಮಾಡಿದ ರೀತಿ ಇದೆಯಲ್ಲ, ಅದು ಬೇಡವಾಗಿತ್ತೇನೋ ಅನಿಸಿತು.

ವಿವೇಕಾನಂದರನ್ನು ಆರಾಧಿಸುತ್ತಿರುವ ಪ್ರಾಮಾಣಿಕ ಮನಸ್ಸುಗಳಿಗೆ, ಅಂಧಾಭಿಮಾನಿಗಳಿಗೆ, ಮೂಲಭೂತವಾದಿಗಳಿಗೂ ಈ ಎಲ್ಲ ಸಂಗತಿಯನ್ನು ರುಚಿಸುವಂತೆಯೇ ನೀವು ಹೇಳಬಹುದಿತ್ತು.

ನೀವು ಈ ಹಿಂದೆಲ್ಲಾ ಅನೇಕ ಕಹಿ ಸತ್ಯಗಳನ್ನು, ಸಂಬಂಧಿಸಿದವರಿಗೆ ರುಚಿಸುವಂತೆ, ಚಿಕಿತ್ಸಕ ದೃಷ್ಟಿಯಲ್ಲಿಯೇ ಹೇಳಿದ್ದೀರಿ. ಆದರೆ ಅದೇಕೋ ವಿವೇಕಾನಂದರ ಬಗ್ಗೆ ಬರೆಯುವಾಗ, ನಿಮ್ಮೊಳಗೊಬ್ಬ ಉಗ್ರ ಪ್ರಗತಿಪರ ಲೇಖಕ ಕಾಣಿಸಿಕೊಂಡ ಬಿಟ್ಟ. ಹಾಗಾಗಿ ಭಾಷೆ ಕಟುವಾಯಿತು. ಅಕ್ಷರಗಳ ನಡುವೆ ಅಸಹನೆಯೂ ಸುಳಿಯಿತು. ಒಂದು ಕ್ಷಣ ಬಲಪಂಥೀಯರನ್ನು ವಿರೋಧಿಸುವ ಕಾರ್ಯಕರ್ತರಾಗಿಬಿಟ್ಟಿರಿ !

ಒಂದು ಹಂತದಲ್ಲಿ ನೀವು ವಿವೇಕಾನಂದರ ದೌರ್ಬಲ್ಯ-ಸಾಮರ್ಥ್ಯಗಳನ್ನು, ಇನ್ಯಾರಿಗೋ ತಿವಿಯಲು ಶಸ್ತ್ರವನ್ನಾಗಿ ಮಾಡಿಕೊಂಡಿರಿ ಎಂಬ ಅನುಮಾನವೂ ಕಾಡಿತು. ಆದರೆ, ಎರಡು ದಿನಗಳ ಬಳಿಕ ಪ್ರಕಟವಾದ ನಿಮ್ಮ ಸಮರ್ಥನಾ ಬರಹ ನಿಜಕ್ಕೂ ಸಮಾಧಾನ ತಂತು. ನೇರವಾಗಿ ಅಲ್ಲದಿದ್ದರೂ, ಪರೋಕ್ಷವಾಗಿ ಹೇಳುವುದನ್ನು ಮೃದುವಾಗಿ ಹೇಳಬಹುದಿತ್ತು ಎಂದು ಒಪ್ಪಿಕೊಂಡಿದ್ದೀರಿ. ಮೊದಲನೇ ದಿವಸವೇ ಇದನ್ನು ಮಾಡಿದ್ದರೆ, ನಿಮ್ಮ ಬರಹ ಲಂಕೇಶ್ ಅವರ ‘ಮೋಕ್ಷ ಹುಡುಕುತ್ತಾ ಪ್ರೀತಿಯ ಬಂಧನದಲ್ಲಿ…’ ಲೇಖನಕ್ಕೆ ಸರಿಸಾಟಿಯಾಗುತ್ತಿತ್ತು !

ಮೋಕ್ಷ ಹುಡುಕುತ್ತಾ ಜನರ ಪ್ರೀತಿಯ ಬಳಿ ಹೋದ ಬುದ್ದನನ್ನು ಲಂಕೇಶ್ ಸಾಮಾನ್ಯ ಮನುಷ್ಯರಂತೆಯೇ ಚಿತ್ರಿಸುತ್ತಾ, ಆತ ಅಸಾಮಾನ್ಯ ಜ್ಞಾನಿಯಾದ ಬಗೆಯನ್ನು ಮನೋಜ್ಞವಾಗಿ ಹೇಳಿದ್ದರು. ವಿವೇಕಾನಂದರ ಬರಹದ ಮೂಲಕ, ನೀವು ವಿವೇಕ ಹೇಳಬೇಕಿತ್ತು. ಬದಲಿಗೆ ಸಿಟ್ಟಿಗೆ ನಿಂತಿರಿ. ನನ್ನ ಪ್ರಕಾರ ನೀವು ಸ್ವಲ್ಪ ಎಡವಿದಿರೇನೋ… ?

ರಾಮಕೃಷ ಆಶ್ರಮದವರಿಗೆ, ಬಲಪಂಥೀಯರಿಗೆ ರುಚಿಸುವಂತೆ ಏಕೆ ಹೇಳಬೇಕಿತ್ತು ಎಂದು ನಿಮ್ಮ ಬೆಂಬಲಕ್ಕೆ ನಿಂತಿರುವ ಪ್ರಗತಿಪರ ಮಿತ್ರರು ಪ್ರಶ್ನಿಸಬಹುದು.
ವಾಸ್ತವವಾಗಿ ಇಂತಹ ಪ್ರಶ್ನೆಗೆ ಉತ್ತರವಾಗಲಿ ಎಂದೇ ಈ ಬಹಿರಂಗ ಪತ್ರ ಬರೆಯುತ್ತಿರುವುದು.

ಮಟ್ಟು ಸರ್, ನಿಮಗಿದು ಗೊತ್ತೋ, ಗೊತ್ತಿಲ್ಲವೋ ತಿಳಿಯದು. ನಿಮ್ಮ ಪ್ರತಿ ಸೋಮವಾರದ ಅಂಕಣ ಬರಹವನ್ನು ಓದಿ, ತಮ್ಮ ಚಿಂತನೆಯನ್ನು ವಿಸ್ತರಿಸಿಕೊಳ್ಳುವ ಹಾಗೂ ತಿದ್ದಿಕೊಳ್ಳುವ ಅಸಂಖ್ಯಾತ ಓದುಗರು ಇದ್ದಾರೆ. ನಾ ತಿಳಿದಂತೆ ಪಿ. ಲಂಕೇಶ್ ಅವರ ಟೀಕೆ-ಟಿಪ್ಪಣಿ ಬಳಿಕ, ಇಷ್ಟೊಂದು ವ್ಯಾಪಕತೆ ಪಡೆದ ಇನ್ನೊಂದು ಅಂಕಣ ಬರಹ ಇನ್ನೊಂದಿಲ್ಲ. ಹಾಗೆ ನೋಡಿದರೆ ಲಂಕೇಶ್ ಅಂಕಣವನ್ನು ಬಲಪಂಥೀಯರು ಓದುತ್ತಿರಲಿಲ್ಲ. ಲಂಕೇಶ್ ಕೂಡ ಅವರ ಬಗ್ಗೆ ಸದಾ ವಿಷಕಾರುತ್ತಿದ್ದರು. ಆದರೆ, ನಿಮ್ಮ ಅಂಕಣ ಬರಹವನ್ನು ಎಡ-ಬಲದ ಬೇಧ-ಭಾವವಿಲ್ಲದೇ ಎಲ್ಲರೂ ಓದುತ್ತಾರೆ ಮತ್ತು ಅದನ್ನು ಒಪ್ಪಿಕೊಳ್ಳುತ್ತಾರೆ. ಇದಕ್ಕೆ ಕಾರಣಗಳು ಹಲವು. ಮೊದಲನೆಯದು-ನಿಮ್ಮ ಬರಹಗಳ ಹಿಂದೆ ವ್ಯಾಪಕ ಓದು, ಅಧ್ಯಯನ ಇರುತ್ತೆ. ಹಾಗಾಗಿ ನೀವು ಬರೆದಿದ್ದೆಲ್ಲವೂ ಸತ್ಯವೇ ಆಗಿರುತ್ತದೆ.
ಎರಡನೆಯದು- ನಿಮ್ಮ ಬರಹಕ್ಕೆ ಸಿದ್ಧಾಂತಗಳ ಸೋಂಕಿಲ್ಲ,ತೀರಾ ಭಾರವೂ ಇಲ್ಲ. ಯಾವುದೇ ವಿಚಾರಧಾರೆಯನ್ನು, ಅಭಿಪ್ರಾಯವನ್ನು, ವ್ಯಕ್ತಿತ್ವವನ್ನು ಓದುಗರ ಮೇಲೆ ಹೇರುವುದಿಲ್ಲ. ಬದಲಿಗೆ ಅದು ಹೇಗಿದೆ ? ಹೇಗಿರಬೇಕಿತ್ತು ? ಏನಾಗಿದೆ ಎಂಬುದನ್ನು, ಅದರ ಶತೃ-ಮಿತ್ರರು ಒಪ್ಪುವಂತೆ ಹೇಳುತ್ತೀರಿ.
ಹಾಗಾಗಿಯೇ ನೀವು ಆಡ್ವಾಣಿ ಅವರಿಂದ ಹಿಡಿದು ಕುಮಾರಸ್ವಾಮಿವರೆಗೆ ಎಲ್ಲರಿಗೂ ಬುದ್ಧಿವಾದ ಹೇಳಬಲ್ಲಿರಿ. ಬಿಜೆಪಿಯ ಆಡ್ವಾಣಿ ಈ ದೇಶದ ಪ್ರಧಾನಿಯಾಗಬೇಕಿತ್ತು ಎಂದು ಬರೆದಾಗ, ಎಡಪಂಥೀಯರೂ ನಿಮ್ಮ ಅಭಿಪ್ರಾಯಕ್ಕೆ ತಲೆದೂಗಿದರು. ಕರ್ಮಠ ಕಾಮ್ರೇಡ್ ಪ್ರಕಾಶ್ ಕಾರಟ್ ದಂಪತಿಗಳ ವೈಚಾರಿಕ ನಿಷ್ಠೆ, ಪ್ರಾಮಾಣಿಕತೆ ಬಗ್ಗೆ ಬರೆದಾಗ ಕೇಶವಕೃಪದ ಗರ್ಭಗುಡಿ ಮಂದಿಯೂ ತಲೆದೂಗಿದರು. ಒಬ್ಬ ಪತ್ರಕರ್ತ ಎಲ್ಲದರ ಬಗ್ಗೆಯೂ, ಎಲ್ಲರ ಬಗ್ಗೆಯೂ ಸಿಹಿ-ಕಹಿಯಾಗಿ ಬರೆದು ಸೈ ಅನಿಸಿಕೊಳ್ಳಬೇಕು ಎಂಬುದಕ್ಕೆ ನೀವೇ ದೊಡ್ಡ ಉದಾಹರಣೆ.
ನಿಜವಾದ ಪತ್ರಕರ್ತ ಅನುಸರಿಸಬೇಕಾದ ಪತ್ರಿಕಾ ನೀತಿ ಇದು. ಡಿವಿಜಿ ಹೇಳಿದ್ದು ಇದನ್ನೇ. ಪತ್ರಕರ್ತ ಸಿದ್ಧಾಂತ ಬೋಧಿಸಬಾರದು. ಅವು ಹೇಗಿರಬೇಕು ಎಂದು ಹೇಳಬೇಕಷ್ಟೆ. ಡಿವಿಜಿ ರೂಪಿಸಿದ ಪತ್ರಿಕಾ ನೀತಿಯನ್ನು ಸದ್ಯ ಜಾರಿಯಲ್ಲಿ ಇಟ್ಟಿರುವವರು ನೀವು. ಹಾಗಾಗಿ ಕರ್ನಾಟಕದ ಎಲ್ಲ ಪತ್ರಕರ್ತರಿಗೂ, ಅಂಕಣ ಬರಹಗಾರರಿಗೂ ನೀವು ಬಹುದೊಡ್ಡ ಆದರ್ಶ.
ಈ ಕಾರಣಗಳಿಂದಲೇ ಮಟ್ಟು ಸರ್, ಹಾಗೆ ಬರೆಯಬಾರದಿತ್ತು ಅನಿಸಿದ್ದು !

ಈ ವಾದವನ್ನು ನಿಮ್ಮ ಪರವಾಗಿ ಬಾವುಟ ಹಿಡಿದಿರುವ ಪ್ರಗತಿಪರ ಮಿತ್ರರರು ಒಪ್ಪುವುದಿಲ್ಲ ಎಂದು ಗೊತ್ತು. ಏಕೆಂದರೆ ಅವರೆಲ್ಲರೂ ಒಂದು ವಿಚಾರವನ್ನು ಒಪ್ಪಿಕೊಂಡಿರುವ ಕಾರ್ಯಕರ್ತರು!.. ಇದು ಅವರೆಲ್ಲರ ಮಿತಿ. ಇನ್ನೂ ಕೆಲವರಿದ್ದಾರೆ, ಅವರಿಗೆ ಆರ್‌ಎಸ್‌ಎಸ್ ವಿರೋಧಿಸುವುದರ ಹಿಂದೆ ವೈಯಕ್ತಿಕ ಲಾಭವಿದೆ, ನಾವು ಪ್ರಗತಿಪರರು, ಜಾತ್ಯತೀತರು ಎಂದು ತೋರಿಸಿಕೊಳ್ಳುವ ಕಪಟತನವಿದೆ.

ವಿವೇಕಾನಂದರ ಕುರಿತು ನಿಮ್ಮ ಬರಹದ ಪರವಾಗಿ ಯಾರೆಲ್ಲಾ ಬ್ಲಾಗ್‌ಗಳಲ್ಲಿ, ಫೇಸ್‌ಬುಕ್‌ಗಳಲ್ಲಿ ಬರೆದಿದ್ದಾರೆ ಎಂಬುದನ್ನು ಸುಮ್ಮನೇ ಕಣ್ಣಾಡಿಸುತ್ತಿದ್ದೆ. ನನ್ನ ಪರಿಚಿತ ಹುಸಿ ಪ್ರಗತಿಪರ ಮಿತ್ರರೂ(ನಿಜದಲ್ಲಿ ಮಹಾನ್ ಜಾತಿವಾದಿಗಳು) ಹಾದು ಹೋದರು. ನಾನು ಬಲ್ಲಂತೆ ಅವರ‍್ಯಾರು ಇದುವರೆಗೂ ವಿವೇಕನಂದರನ್ನು ಓದಿಲ್ಲ. ಆದರೂ ನಿಮ್ಮ ಪರವಾಗಿ ಲೇಖನಿ ಹಿಡಿದು, ಬಲಪಂಥೀಯರನ್ನು ಕೊಳಕರು, ಹುಳುಕರು ಎಂದೆಲ್ಲಾ ಚೀರಾಡಿದ್ದಾರೆ.
ಇವರಿಗೆಲ್ಲಾ ನಿಮ್ಮ ಬಗ್ಗೆ ಪ್ರೀತಿ ಎನ್ನುವುದಕ್ಕಿಂತ, ಆರ್‌ಎಸ್‌ಎಸ್ ಬಗ್ಗೆ ಸಿಟ್ಟಿದೆ.
ಅಂತೆಯೇ ನಿಮ್ಮ ವಿರುದ್ಧ ಪ್ಲೇ ಕಾರ್ಡ್ ಹಿಡಿದ ಬಹಳಷ್ಟು ಮಂದಿಯೂ ವಿವೇಕಾನಂದರನ್ನು ಓದಿಲ್ಲ. ಇವರಿಗೆಲ್ಲಾ ನಿಮ್ಮ ವಿರುದ್ಧ ಎನ್ನುವುದಕ್ಕಿಂತ, ಪ್ರಜಾವಾಣಿ ಸಂಪಾದಕೀಯ ಧೋರಣೆ ವಿರುದ್ಧ ಸಿಟ್ಟಿದೆ. ಇಂತಹವರನ್ನು ಸರಿಪಡಿಸಲು ಆಗದು.
ಈ ಎರಡೂ ವರ್ಗದಲ್ಲೂ ಒಂದಿಷ್ಟು ಮಂದಿ ಪ್ರಾಮಾಣಿಕರು ಇರಬಹುದು. ಹೆಚ್ಚಿನಂಶ ನಕಲಿ ಜನ, ಕೊಳಕು ಜನ ತುಂಬಿಕೊಂಡಿದ್ದಾರೆ. ಅಂತಹವರ ಬಗ್ಗೆ ಎಚ್ಚರಿಕೆ ಇರಲಿ.

ಯಾವುದೇ ವಿಷಯವನ್ನು ಅತಿರೇಕದಲ್ಲಿ ಸ್ವೀಕರಿಸಿ, ಎರಡು ಧ್ರುವದಲ್ಲಿ ನಿಂತು ಕಾದಾಡುವವರು ಇರುವಂತೆಯೇ, ಮಧ್ಯದಲ್ಲಿ ನಿಂತು ವಿಷಯವನ್ನು ಗ್ರಹಿಸುವವರರು ಇರುತ್ತಾರೆ. ಹಾಗೆ ನೋಡಿದರೆ ಇಂತಹವರ ಸಂಖ್ಯೆ ಹೆಚ್ಚಿರುತ್ತೆ.
ವೈಯಕ್ತಿಕವಾಗಿ ನಾನು ಈ ವರ್ಗಕ್ಕೆ ಸೇರಿದವನು. ನಿಮ್ಮ ಅಭಿಮಾನಿಗಳು ಹೆಚ್ಚಿರುವುದು ಕೂಡ ಈ ವರ್ಗದಲ್ಲಿಯೇ.
ಹಾಗಾಗಿ ನೀವು ಯಾವುದೇ ಅತಿರೇಕಿಗಳ ಪರವಾಗಿ ಇಲ್ಲವೇ ವಿರುದ್ಧವಾಗಿ ನಿಲ್ಲಬೇಡಿ. ಅತಿರೇಕಿಗಳೆಂಬ ಉಭಯ ವರ್ಗದ ಅವಿವೇಕಿಗಳನ್ನು ಮರೆತು, ನಮಗಾಗಿ ಬರೆಯಿರಿ.

ವಿವೇಕಾನಂದರು ಹಿಂದೂ ಧರ್ಮದ ಅನಿಷ್ಟಗಳನ್ನು, ಕೊಳಕುಗಳನ್ನು ಹೇಳುತ್ತಲೇ, ಆ ಧರ್ಮದ ವೀರ ಸನ್ಯಾಸಿಯಾಗಿ, ಹಿಂದೂ ಧರ್ಮದ ವೇದಾಂತವನ್ನೂ ಜಗತ್ತಿಗೆ ಸಾರಿದರು.
ನಮಗೆ ಬೇಕಿರುವುದು ಇಂತಹ ವಿವೇಕಾನಂದ. ನೀವು ಕೂಡ ಅದೇ ವಿವೇಕಾನಂದರನ್ನೇ ಪ್ರತಿಪಾದಿಸಿದ್ದೀರಿ.
ಆದರೆ ಈಗ ನಿಮ್ಮ ವಿರುದ್ಧ ಹೋರಾಟ ಮಾಡುತ್ತಿರುವವರಿಗೆ ಹಿಂದೂ ಧರ್ಮದ ಶ್ರೇಷ್ಠತೆ ಸಾರಿದ ವಿವೇಕಾನಂದ ಮಾತ್ರ ಬೇಕು. ಅಂತೆಯೇ ನಿಮ್ಮ ಪರ ನಿಂತಿರುವ ಬಹಳಷ್ಟು ಮಂದಿಗೆ ಹಿಂದೂ ಧರ್ಮದ ಅನಿಷ್ಟ-ಕೊಳಕುಗಳನ್ನು ಹೇಳಿದ ವಿವೇಕಾನಂದ ಬೇಕು.
ನಮಗೆ ಈ ಇಬ್ಬರೂ ಬೇಡ.
ಸರ್ ಇನ್ನೊಂದು ವಿಷಯ.
ಗಾಂಧೀಜಿ ಬಗ್ಗೆ ಕೆಲವರು ಲಘುವಾಗಿ, ಕೀಳಾಗಿ ಬರೆದ ಸಂದರ್ಭ. ಪ್ರಾಮಾಣಿಕ ಗಾಂಧಿವಾದಿಗಳು ಆ ಲೇಖನದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು. ಆಗ ನನ್ನೊಂದಿಗೆ ಈ ವಿಷಯ ಕುರಿತು ಚರ್ಚಿಸಿದ ಗಾಂಧಿವಾದಿ ಹೇಳಿದ್ದು:
ಯಾವುದೇ ಮಹಾನ್ ವ್ಯಕ್ತಿತ್ವಗಳ ಖಾಸಗಿ ಬದುಕಿನ ದೌರ್ಬಲ್ಯಗಳ ಕುರಿತು ಆತನ ಸಮಕಾಲೀನ ಸಮಾಜ ಹೆಚ್ಚು ಚರ್ಚಿಸುತ್ತದೆ. ಆದರೆ ಆತನ ಜೀವಿತದ ಅವಧಿ ಬಳಿಕದ ಕಾಲಘಟ್ಟ, ವ್ಯಕ್ತಿಯ ಗುಣಗಳನ್ನಷ್ಟೇ ಗ್ರಹಿಸುತ್ತದೆ. ಗಾಂಧೀಜಿ ಒಳ್ಳೆ ಅಪ್ಪನಲ್ಲ, ಒಳ್ಳೆ ಗಂಡನಲ್ಲ ಎಂಬುದನ್ನು ಮುಖ್ಯವಾಗಿ ಚರ್ಚಿಸಬೇಕು ಏಕೆ ? ಪ್ರಮುಖವಾಗಿ ಚರ್ಚಿಸಲು, ಅವರನ್ನು ಅರಿಯಲು ಸಾಕಷ್ಟು ಸಂಗತಿಗಳು ಇವೆ. ನನಗೂ ಒಮ್ಮೊಮ್ಮೆ ಇದು, ಹೌದಲ್ಲವೇ ಅನಿಸುತ್ತದೆ.

* * * * * * * *

ಚಿತ್ರಕೃಪೆ : ಕಾಲಂ ೯

10 ಟಿಪ್ಪಣಿಗಳು Post a comment
 1. ಜನ 30 2012

  ವ್ಯಕ್ತಿ ಜೀವನ , ಸಾಮಾಜಿಕ ಮತ್ತು ವೈಯಕ್ತಿಕ ಬದುಕಿನ ನಡುವೆ ಇರುವ ಅಂತರಗಳ ಒಂದು ವಿಶೇಷ ವಿಚಾರ.. ಲೇಖಕರು ಅನೇಕ ಆಲೋಚನೆಗಳ ನಡುವಲ್ಲಿ ಬರೆದ ವಿಷಗಳು ಓದಿದ ನಂತರ ನಮ್ಮನ್ನು ಸಹ ಕೆಲ ಕ್ಷಣ ಆಳವಾದ ಆಲೋಚನೆಯಲ್ಲಿ ಮುಳುಗುವಂತೆ ಮಾಡಿತು.. ಮತ್ತೆ ಮೇಲೆ ತೇಲಿ ಬಂದು ನೋಡಿದಾಗ ಮತ್ತೊಂದು ಬಗೆಯ ಆಲೋಚನೆ .. ನೀವೇ ಓದಿ ನೋಡಿ.. ಏನೆಲ್ಲಾ ವಿಚಾರಗಳ ಕುರಿತು ಸರಿ ತಪ್ಪು ಮಾತುಗಳನ್ನು ಲೇಖಕರು ಹೇಳಿದ ಬಗೆ ತುಂಬಾ ವಿಚಾರ ಮಾಡುವಂತಹಾ ಮಾತುಗಳೇ ಆಗಿದ್ದು .. ಓದಲು ಒಳ್ಳೆಯ ಲೇಖನ.. 🙂

  ಉತ್ತರ
 2. s_jolad
  ಜನ 30 2012

  RSS navaru hige bahala cheMdavaagi matrugaLannu jodisuttaare. amin mattu badavara, backward class gala paravagi matadiddare. adarallenu tappilla.

  s_jolad

  ಉತ್ತರ
 3. ಶ್ರೀಕಾಂತ
  ಜನ 30 2012

  ಇದೆ ರೀತಿ ಕವನ ಬರಿತಾಯಿರಿ.

  ಉತ್ತರ
 4. ಶ್ರೀಕಾಂತ
  ಜನ 30 2012

  ಸುಪರ್

  ಉತ್ತರ
 5. vk
  ಜನ 30 2012

  ಹಸುವಿಗೆ ಜನರು ಗೌರವ ಕೊಡುವುದು… ಅದು ಏನು ತಿನ್ನುತ್ತದೆ, ಏನು ಕುಡಿಯುತ್ತದೆ, ಎಲ್ಲಿ ಮಲಗುತ್ತದೆ ಎನ್ನುವುದಕ್ಕ್ಲಲ್ಲ, ಅದು ಸಮಾಜಕ್ಕೆ ಏನು ಕೊಡುತ್ತದೆ ಎಂಬ ಕಾರಣಕ್ಕಾಗಿ ಮಾತ್ರ….

  ಉತ್ತರ
  • prakash
   ಡಿಸೆ 6 2015

   ಮಾಂಸ ತಿನ್ನುವವರೂ ಕೂಡ ಹಂದಿ ಮಾಂಸ ಯಾಕೆ ತಿನ್ನೊಲ್ಲ ಹೇಳಿ..ತಿಂದ್ರೂ ಛೀ…ಅನ್ನೊದೇಕೆ….ಅದು ಏನು ತಿನ್ನುತ್ತೆ,ಎನ್ ಕುಡಿಯುತ್ತೆ,ಎಲ್ಲಿ ಮಲಗುತ್ತೆ ಅಂತ ಗೊತ್ತಿರೊದ್ರಿಂದ ತಾನೆ? ಅದರ ಹಿನ್ನಲೆ ತಿಳಿದಿರೊದಕ್ಕೆ ತಾನೆ? ಸತ್ಯ ಏನೇ ಇದ್ರೂ ತಿಳಿದುಕೊಳ್ಳೊಣ…..ಆದ್ರೆ ಸತ್ಯ ಏನೆ ಇದ್ರೂ ಅದು ಅವರ ವ್ಯಯಕ್ತೀಕ….ಸ್ವಾಮಿ ವಿವೇಕಾನಂದರು ವಿಶ್ವಕಂಡ ಮಹಾನ್ ಸಂತ…ನಮಗೆಲ್ಲ ಆದರ್ಶ…ಸ್ವಾಭಿಮಾನದ ಸಂಕೇತ….I love Swami vivekananda…..

   ಉತ್ತರ
 6. vithalrao kulkarni malkhed
  ಜನ 30 2012

  ಧಿಮಂತ ವ್ಯಕ್ತಿ ಗಳಲ್ಲಿನ ಉತ್ತಮ್ ವಿಚಾರ ಗಳನ್ನೂ ನಾವು ಯಾವಾಗಲು ಆಯ್ದು ಕೊಳ್ಳಬೇಕೆ ವಿನ ..ಅವರ ದೌರ್ಬಲ್ಯ ಅಲ್ಲ…
  ಹಾಗಾದರೆ ಚರಿತ್ರೆಯ ಉದ್ದಕ್ಕೂ ಮಹಾನ ವ್ಯಕ್ತಿ ಗಳು ಅನೇಕ ದೌರ್ಬಲ್ಯ ಗಳನ್ನೂ ಹೊಂದಿದ್ದರು ಎಂಬುದು ಚರಿತ್ರೆ ಸಾರಿ ಸಾರಿ ಹೇಳುತ್ತದೆ…ಮಹಾತ್ಮಾ ಗಾಂಧಿ ಚಿಕ್ಕವರಿದ್ದಾಗ ಮೌಂಸ ತಿಂದರು..ಕದ್ದು ಸಿಗರೆಟ್ ಸೇದಿದರು..ಚಿಕ್ಕಪ್ಪನ ಕೈ ಕಡಗ ಕತ್ತರಿಸಿ ಕಳ್ಳತನ ಮಾಡಿದರು..ಎಂದು ನಾವೆಲ್ಲ ಓದಿಯೇ ಇದ್ದೇವೆ..ಅದೇ ರೀತಿ ನೆಹರು ಮಾನಿನಿ, ಮಧ್ಯ ವಿಷಯ ದಲ್ಲಿ ದೌರ್ಬಲ್ಯ ಹೊಂದಿದ್ದರು ಎಂಬುದು ಜಗತ್ತಿಗೆ ತಿಳಿದ ವಿಷಯ..ಹಾಗೆಂದ ಮಾತ್ರಕ್ಕೆ ಅವರ ವಿಚಾರಗಳನ್ನು ಸಾರ ಸಗಟವಾಗಿ ತಿರಸ್ಕರಿಸಬಹುದೇ…!? ಲೇಖನ ದಲ್ಲಿ ಲೇಖಕರಿಗೆ ವಿವೇಕಾನಂದ ರ ಗಿಂತ ಅವರನ್ನು ಹೈಜಾಕ್ ಮಾಡಿದವರ ಮೇಲೆ ಕೋಪ
  ಎಂಬಂತೆ ಕಾಣ ಬರುತ್ತದೆ…ಹಂಸ ಕ್ಷೀರ ನ್ಯಾಯ ದಂತೆ ಒಳ್ಳೆಯದನ್ನು ಮಾತ್ರ ಉತ್ತಮ ರಿಂದ ಅನುಕರಿಸಬೇಕೆ ವಿನ …ಅವರ ೩೦ ರೋಗ ದಿಂದ ನರಳುತ್ತಿದ್ದರು ಅದು ಇದು ಎಂಬ ಒಳ್ಳೆಯವಲ್ಲದ ವಿಚಾರ ಸತ್ತವರ ಬಗ್ಗೆ ಬರೆಯುದು ಭಾರತೀಯ ಲಕ್ಷಣವಂತೂ ಅಲ್ಲ…..
  ವಿವೇಕಾನಂದ ರನ್ನು ಹೈಜಾಕ್ ಮಾಡಿದ ಕೋಪಕ್ಕೆ..ಸಂಘ ವನ್ನು ನೆರವಾಗಿ ಜರಿಯಲು ಆಗದೆ ಲೇಖಕರು ವಿವೇಕಾನಂದ ರು ಒಬ್ಬ ಅಯೋಗ್ಯ ಎನ್ನುವ ಸಾಹಸಕ್ಕೆ ಇಳಿದಿದ್ದಾರೆ…ಹಾಗೇ ಬರೆಯುದಕ್ಕಿಂತ
  ಸಂಘ ದಲ್ಲೇ ಅದರ ಬೀಜದ ಕುಡಿ ಗಳಾದ ಡಾಕ್ಟರ ಜಿ ,ಗೊಲ್ವಕರ್ ಜಿ, ಬಾಳಾಸಾಹೇಬ , ಮುಂತಾದವರು..ಎಲ್ಲ ಕಾಯಿಲೆ ಹಾಗು ದೌರ್ಬಲ್ಯ ಹೊಂದಿದವರೇ ಆಗಿದ್ದರು ..ಡಾಕ್ಟರ ಜಿ ಅಂತು ಡಾಕ್ಟರ ಪದವಿ ಗಳಿಸಿವು
  ಯಾವುದೊ ಬೇನೆ ಇಂದ ಸಾವನ್ನು ಅಪ್ಪಿದ್ದರು.. ಬಾಳಾಸಾಹೇಬ ರು ಕೊಡ ಮದ್ಯ ವ್ಯಸನಿ ಯಾಗಿದ್ದರು..ಹೀಗಾಗಿ ಲೇಖಕ ರಿಗೆ ಸಂಘ ದ ಜನರಲ್ಲೇ ಅನೇಕ್ ವಿಕ ನೆಸ್ಸ್ ಗಳನ್ನೂ ಕಂಡು ಹಿಡಿದು ಬರೆಯ ಬೇಕಾಗಿತ್ತು..ಅದನ್ನು ಬಿಟ್ಟು..ಇನ್ ಡೈರೆಕ್ಟ್ ಆಗಿ ಸಂಘ ವನ್ನು ಜರಿಯಲು ವಿವೇಕಾನಂದ ರನ್ನು ಟೀಕಿಸುವ ಹುಚ್ಚು ಸಾಹಸ ಕ್ಕೆ ಇಳಿಯ ಬಾರದಾಗಿತ್ತು..

  ಕೊನೆ ಗೆ ಒಂದು ಪ್ರಶ್ನೆ ..ಒಂದು ವೇಳೆ ಸಂಘ ದವರು ವಿವೇಕಾನಂದ ರನ್ನು ಹೈಜಾಕ್ ಮಾಡಿರದಿದ್ದರೆ ಹೀಗೆ ವಿವೇಕಾನಂದ ರ ವಿರುದ್ದ ಲೇಖಕರು ಬರೆಯುತ್ತಿದ್ದರೆ..?

  ಉತ್ತರ
 7. ಜನ 31 2012

  ಅತ್ಯುತ್ತಮ ಲೇಖನ… ಭಹಳ ಧನ್ಯವಾದಗಳು….

  ಉತ್ತರ
 8. ಹರಿಪ್ರಸಾದ್ ಐ. ಎಸ್
  ಫೆಬ್ರ 1 2012

  ವಿವೇಕಾನಂದರನ್ನು ಬಿಡಿ ನಾವು ಈ ಸಮಾಜದಲ್ಲಿ ಬದುಕಬೇಕು ಹೇಗೆ??????
  ಅನ್ನುವುದರಬಗ್ಗೆ ಚಿಂತಿಸಿ
  ಯಾರದ್ದೇ ಆಗಲಿ ಆದರ್ಶಗಳಿದ್ದಲ್ಲಿ ಪಾಲಿಸಿ ತೋರಿಸೋಣ…………..
  ಈಗ ಸಮಾಜದಲ್ಲಿ ಕಾಣಸಿಗುವವರ ಬಗ್ಗೆ ಮಾತನಾಡುವ ಹಕ್ಕು ಪಡೆಯೋಣ

  ಉತ್ತರ
 9. ಉಷಾಕಟ್ಟೆಮನೆ
  ಫೆಬ್ರ 1 2012

  ತುಂಬಾ ಒಳ್ಳೆಯ ಲೇಖನ

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments