ವಿಷಯದ ವಿವರಗಳಿಗೆ ದಾಟಿರಿ

ಜನವರಿ 30, 2012

3

ಸಂಸ್ಕೃತಿ ಸಂಕಥನ – 20 – ಬುದ್ಧನನ್ನು ಹೈಜಾಕ್ ಮಾಡಿದ ಪ್ರೊಟೆಸ್ಟಾಂಟರು

‍ನಿಲುಮೆ ಮೂಲಕ

-ರಮಾನಂದ ಐನಕೈ

ಎಲ್ಲರಿಗೂ ಅಚ್ಚರಿಯಾಗಬಹುದು. ಪ್ರೊಟೆಸ್ಟಾಂಟರು ಹೇಗೆ ಮತ್ತು ಏಕೆ ಬುದ್ಧಿಸಂನ್ನು ಹೈಜಾಕ್ ಮಾಡಿದರು ಎಂಬುದು. ಇಲ್ಲಿ ಹೈಜಾಕ್ ಅಂದರೆ ಅಪಹರಣ ಎಂಬ ಅರ್ಥವಲ್ಲ. ಪ್ರೊಟೆ ಸ್ಟಾಂಟರು ಬುದ್ಧಿಸಂನ್ನು ಹೇಗೆ ತಮ್ಮ ಸಮರ್ಥನೆ ಗಾಗಿ ಬಳಸಿಕೊಂಡರು ಎಂಬುದು. ಇದರ ಹಿಂದೆ ಸ್ವತಃ ಭಾರತೀಯರಿಗೆ ಅರ್ಥವಾಗದ ಹಲವು ರಹಸ್ಯಗಳಿವೆ. ಈ ರಹಸ್ಯಗಳನ್ನು ಬಾಲಗಂಗಾಧರರು ಸ್ವಾರಸ್ಯವಾಗಿ ಭೇದಿಸುತ್ತಾರೆ.

ಸಮಕಾಲೀನ ಭಾರತೀಯ ಚಿಂತಕರಿಗೆ ಬುದ್ಧಿಸಂ ಕುರಿತಾಗಿ ಒಂದು ಪೂರ್ವಗ್ರಹಿತ ಅಭಿ ಪ್ರಾಯಗಳಿವೆ. ಬುದ್ಧಿಸಂ ಮಾನವೀಯತೆಗಾಗಿ ಹೋರಾಡುತ್ತಿದೆ. ಇದು ಸಮಾಜದಲ್ಲಿನ ಅನಿಷ್ಟ ವನ್ನು ವಿರೋಧಿಸಿದೆ. ಯಜ್ಞಯಾಗಾದಿಗಳನ್ನು ಧಿಕ್ಕರಿಸಿದೆ. ಪ್ರಾಣಿ ಬಲಿ ವಿರೋಧಿಸಿ ಅಹಿಂಸಾ ತತ್ವ ಮೆರೆದಿದೆ. ಈ ಮೂಲಕ ಹಿಂದೂ ಯಿಸಂನ್ನು ವಿರೋಧಿಸಿದೆ. ಭಾರತದ ಜಾತಿ ವ್ಯವಸ್ಥೆಯನ್ನು ವಿಮರ್ಶಿಸಿದೆ. ಇಲ್ಲಿನ ವರ್ಣಾ ಶ್ರಮವನ್ನು ವಿರೋಧಿಸಿದೆ. ಇಲ್ಲಿನ ಪುರೋಹಿತ ಶಾಹಿಯನ್ನು ಹಾಗೂ ಬ್ರಾಹ್ಮಣರನ್ನು ವಿರೋಧಿಸಿದೆ. ಹಾಗಾಗಿ ಇದೊಂದು ವಿಶ್ವಮಾನ್ಯವಾದ ರಿಲಿಜನ್. ಬುದ್ಧಿಸಂ ಸಮಾಜದಲ್ಲಿನ ತರತಮ ವನ್ನು ಸಹಿಸುವುದಿಲ್ಲ. ಮನುಷ್ಯರ ಏಳ್ಗೆಗಾಗಿ ಹಂಬಲಿಸುತ್ತದೆ ಇತ್ಯಾದಿ. ಈ ಕಾರಣಕ್ಕಾಗೆ ನಮ್ಮ ದೇಶದ ದಲಿತ ಚಿಂತಕರೆಲ್ಲ ಬುದ್ಧಿಸಂ ಕಡೆಗೆ ಆಕರ್ಷಿತರಾದರು. ಅಂಬೇಡ್ಕರರು ಕೂಡ ಬುದ್ಧಿಸಂಗೆ ಮತಾಂತರ ಹೊಂದಿದ್ದು ಈ ಆಕರ್ಷಣೆಯಿಂದ. ನಿಜವಾಗಿಯೂ ಇದು ನಿಜವೆ? ಭಾರತೀಯ ಸಂಸ್ಕೃತಿಯೊಂದಿಗೆ ಬುದ್ಧಿಸಂ ವಿರೋಧವಾಗಿಯೇ ನಡೆದುಕೊಂಡು ಬಂದಿ ದೆಯೇ? ನಿಜವಾಗಿಯೂ ಬುದ್ಧ ವರ್ಣಾಶ್ರಮ ದಿಂದ ಹೊರಗುಳಿದು ವರ್ಣಾಶ್ರಮ ಪದ್ಧತಿಯನ್ನು ವಿರೋಧಿಸಿದನೇ? ಈಗ ನಾವು ವಿಸ್ಮೃತಿಯಿಂದ ಸ್ಮೃತಿಗೆ ಬರಬೇಕಾಗಿದೆ.

ಪಠ್ಯಪುಸ್ತಕಗಳ ಇತಿಹಾಸದ ಪ್ರಕಾರ ಭಾರತ ದಲ್ಲಿ ದೀರ್ಘಕಾಲದಿಂದ ಎರಡು ಸಂಪ್ರದಾಯ ಗಳು ಅಸ್ತಿತ್ವದಲ್ಲಿದ್ದವು. ಶ್ರಮಣ ಮತ್ತು ಬ್ರಾಹ್ಮಣ ಎಂಬುದು ಈ ಎರಡು ಸಂಪ್ರದಾಯಗಳು. ಶ್ರಮ ಣರು ಈ ಸಂಸಾರದಿಂದ ಹೊರಗುಳಿದು ಸತ್ಯದ ಹುಡುಕಾಟದಲ್ಲಿ ತೊಡಗಿಕೊಂಡಿರುವವರು. ಅದಕ್ಕಾಗೇ ಅವರು ಸಾಂಸಾರಿಕ ಜೀವನವನ್ನು ತ್ಯಜಿಸುವ ಆಯ್ಕೆ ಮಾಡಿಕೊಂಡರು. ಬಾಲಗಂಗಾ ಧರರ ಭಾಷೆಯಲ್ಲಿ ಶ್ರಮಣರು ‘ಜಗತ್ತನ್ನು ತ್ಯಜಿಸಿ ದವರು’ ಎನ್ನಬಹುದು. ಹಾಗಂತ ಈ ವಿರಕ್ತಿ ಯಾವುದೇ ಪ್ರತಿಭಟನೆಯ ಚಳವಳಿ ಅಲ್ಲ. ಅಥವಾ ಅವರೆಲ್ಲ ಒಂದು ಸಾಮಾಜಿಕ ವ್ಯವಸ್ಥೆ ಯನ್ನು ತಿರಸ್ಕರಿಸಿದವರೂ ಅಲ್ಲ. ಅವರಿಗೆ ಮೋಕ್ಷ ಸಾಧನೆಗಾಗಿ ಸಾಂಸಾರಿಕ ಜೀವನವನ್ನು ತ್ಯಜಿಸ ಬೇಕಾದ ನಿರ್ಬಂಧವಿತ್ತು. ಅಂತಹ ಗುಂಪು ಜೈನ ಸಂಪ್ರದಾಯವಾಗಿ ಬೆಳೆದುಬಂತು. ಹಾಗೂ ಬಹಳ ನಂತರದಲ್ಲಿ ಬೌದ್ಧ ಸಂಪ್ರದಾಯವಾಗಿ ಬೆಳೆ ಯಿತು. ಜೊತೆಗೆ ಬ್ರಾಹ್ಮಣ ಸಂಪ್ರದಾಯದ ಮತ್ತೊಂದು ಗುಂಪು ಸಾಂಸಾರಿಕ ಜೀವನದತ್ತ ಮುಖಮಾಡಿ ಕಾಲಾಂತರದಲ್ಲಿ ವಿಧಿವಿಧಾನಗಳ ರಚನೆಯನ್ನು ವಿಸ್ತಾರವಾಗಿ ಬೆಳೆಸಿತು.

ಸಂಸಾರ ತ್ಯಾಗವನ್ನು ಆಯ್ಕೆ ಮಾಡಿಕೊಂಡ ಕಾರಣದಿಂದ ಶ್ರಮಣರು ವರ್ಣ ವ್ಯವಸ್ಥೆಯಿಂದ ಹೊರಗಿದ್ದರೇ ವಿನಾ ಅವರು ವರ್ಣದಿಂದ ಹೊರ ಹಾಕಲ್ಪಟ್ಟವರಲ್ಲ. ಅವರು ವರ್ಣ ವ್ಯವಸ್ಥೆಯ ಜಗತ್ತಿಗೆ ಸೇರಿರಲಿಲ್ಲ ಅಷ್ಟೇ. ವರ್ಣ ವ್ಯವಸ್ಥೆಯನ್ನು ವಿರೋಧಿಸಲಿಕ್ಕಾಗಿ ಹೊರಗುಳಿದವರಲ್ಲ. ಕಾಲಾಂತರ ದಲ್ಲಿ ಶ್ರಮಣರೂ ಸಂಸಾರದತ್ತ ಅಭಿಮುಖರಾಗಿ ಅದರಲ್ಲೇ ತಮ್ಮ ಅನುಯಾಯಿಗಳನ್ನು ಒಟ್ಟು ಹಾಕಲು ಪ್ರಾರಂಭಿಸಿದರು. ಈ ಬೆಳವಣಿಗೆಯಿಂ ದಾಗಿ ಸಾಂಸಾರಿಕರ ಎದುರು ಎರಡು ಸಾಧ್ಯತೆಗಳು ಹುಟ್ಟಿಕೊಂಡವು. ಒಬ್ಬನು ಸಂಸಾರ ತ್ಯಾಗ ಮಾಡಿ ಭಿಕ್ಷುವಾಗಬೇಕಿತ್ತು ಅಥವಾ ಸಂಸಾರದಲ್ಲಿ ಬ್ರಾಹ್ಮಣ ನಂತೆ, ರಾಜನಂತೆ ಇತ್ಯಾದಿಯಾಗಿ ಮುಂದುವರಿ ಯಬೇಕಾಗಿತ್ತು. ಹೀಗೆ ಈ ಎರಡೂ ಸಂಪ್ರದಾಯ ಗಳು ಭಾರತದಲ್ಲಿ ಸಮಾಂತರವಾಗಿ ಬೆಳೆದುಬಂದ ದ್ದನ್ನು ನಾವು ಕಾಣಬಹುದು.

ಹೀಗಿದ್ದಾಗ ಇವೆರಡೂ ಪರಸ್ಪರ ವಿರೋಧಿಗಳು ಎಂಬ ಅಭಿಪ್ರಾಯ ಅಥವಾ ಇತಿಹಾಸ ಎಲ್ಲಿಂದ ಪ್ರಾರಂಭವಾಯಿತು? ಇದು ಕಳೆದ 150 ವರ್ಷ ಗಳಿಂದೀಚೆಗೆ ಬೆಳೆದುಬಂದ ಕಥೆ. ಯುರೋಪಿನ ವರು ಈ ಕಥೆಗಳನ್ನು ಕಟ್ಟಿದರು. ಇಂದಿಗೂ ಕೂಡಾ ಈ ಕಥೆಗಳು ಯುರೋಪಿನ ಲೈಬ್ರರಿಗಳಲ್ಲಿವೆಯೇ ವಿನಾ ನಮ್ಮ ಅನುಭವಗಳಲ್ಲಿಲ್ಲ. ಹಾಗಾದರೆ ಅವರಿಗೆ ಇಂಥ ಕಥೆಗಳನ್ನು ಬರೆಯುವ ಅನಿವಾರ್ಯತೆ ಏಕೆ ಬಂತು? ಮುಖ್ಯವಾಗಿ ಐರೋಪ್ಯರ ತಪ್ಪು ತಿಳು ವಳಿಕೆ ಹಾಗೂ ಪ್ರೊಟೆಸ್ಟಾಂಟರ ಸಮರ್ಥನಾ ತಂತ್ರ.

ಪ್ರಾಶ್ಚಾತ್ಯ ಕ್ರಿಶ್ಚಿಯಾನಿಟಿಯ ಪಲ್ಲಟಗಳನ್ನು ಈಗಾಗಲೇ ನಾವು ಸ್ವಲ್ಪಮಟ್ಟಿಗೆ ಗುರುತಿಸಿದ್ದೇವೆ. ಅದರಲ್ಲಿ ಮುಖ್ಯವಾಗಿ ಕೆಥೋಲಿಕ್ ಕ್ರಿಶ್ಚಿಯಾನಿಟಿಯನ್ನು ವಿರೋಧಿಸಿ ಸುಧಾರಣೆಯಾಗಿ ಹುಟ್ಟಿ ಕೊಂಡಿದ್ದು ಪ್ರೊಟೆಸ್ಟಾಂಟ್ ಕ್ರಿಶ್ಚಿಯಾನಿಟಿ. ಪ್ರೊಟೆ ಸ್ಟಾಂಟರು ಕ್ರಿಶ್ಚಿಯನ್ ರಿಲಿಜನ್ನಿನ ಪುನರ್ಪರಿಶೀಲನೆ ಮಾಡಿದರು. ಆಗ ಕೆಥೋಲಿಕರ ಮೇಲೆ ಪ್ರಹಾರ ಮಾಡಿದರು. ಕೆಥೋಲಿಕರು ರಿಲಿಜನ್ನಿನ ಅವನತಿಗೆ ಕಾರಣರಾಗಿದ್ದಾರೆ ಎಂದರು. ಅದಕ್ಕೆ ಹಲವಾರು ಕಾರಣಗಳನ್ನು ನೀಡಿದರು. ಕೆಥೋಲಿಕರು ನಿಜವಾದ ರಿಲಿಜನ್ನನ್ನು ಪಾಲಿಸುತ್ತಿಲ್ಲ. ಸಮಾಜದಲ್ಲಿ ಶ್ರೇಣೀಕರಣ ಸ್ಥಾಪಿಸಿದ್ದಾರೆ. ಪ್ರೀಸ್ಟ್ಹುಡ್ ಮೂಲಕ ಅಧಿಕಾರ ಚಲಾಯಿಸುತ್ತಿದ್ದಾರೆ. ಈ ಪ್ರೀಸ್ಟ್ಗಳು ಮಧ್ಯ ವರ್ತಿಗಳಾಗಿ ಜನರಿಗೆ ನಿಜವಾದ ಗಾಡ್ ಸಿಗದಂತೆ ನೋಡಿಕೊಳ್ಳುತ್ತಿದ್ದಾರೆ. ಕ್ರಿಶ್ಚಿಯಾನಿಟಿ ಸಾಂಸ್ಥೀಕರಣ ಗೊಂಡು ಚರ್ಚ್ಗಳ ದಬ್ಬಾಳಿಕೆ ಹೆಚ್ಚಾಗಿದೆ. ಪ್ರೀಸ್ಟ್ ಗಳು ಸಮಾಜದ ಮುಖ್ಯವಾಹಿನಿಯಲ್ಲಿ ನಿಂತು ಅಧಿಕಾರ ಅನುಭವಿಸುತ್ತಿದ್ದಾರೆ ಹಾಗೂ ವ್ಯವಸ್ಥೆಯನ್ನು ಕಟ್ಟುತ್ತಿದ್ದಾರೆ. ಹೀಗೆ ಪ್ರೊಟೆಸ್ಟಾಂಟರು ರಿಲಿಜನ್ ಎಂಬುದು ಸತ್ಯ ಮತ್ತು ಸುಳ್ಳುಗಳ ಜಿಜ್ಞಾಸೆ ಎಂಬಂತೆ ವ್ಯಾಖ್ಯಾನಿಸಿ ಕೆಥೋಲಿಕರನ್ನು ಸದೆಬಡಿದರು.

ಈ ಪ್ರೊಟೆಸ್ಟಾಂಟಿಸಂನ ನೇತೃತ್ವ ವಹಿಸಿದವನು ಮಾರ್ಟಿನ್ ಲೂಥರ್. ಅದಕ್ಕಾಗೇ ಅವನಿಗೆ ಜಗತ್ತಿನ ಮಹಾನ್ ಸುಧಾರಣಾವಾದಿ ಎಂಬ ಕೀರ್ತಿ ಬಂತು. ಅನಿಷ್ಟಗಳಿಂದ ಸಮಾಜವನ್ನು ಹಾಗೂ ಪತನ ಕ್ಕೊಳಗಾದ ಕ್ರಿಶ್ಚಿಯಾನಿಟಿಯನ್ನು ಪುನರ್ಪರಿಶೀಲಿಸಿ ಸುಧಾರಣೆಗೆ ಒಳಪಡಿಸಿದ ಕೀರ್ತಿ  ಅವನದ್ದು.  ಪ್ರೊಟೆಸ್ಟಾಂಟಿಸಂ ಅನ್ನುವುದು ಒಂದು ರೀತಿಯ ಆಧುನಿಕ ಚಿಂತನೆಯ ಫಲ. ಇವರು ಜಗತ್ತಿನ ಎಲ್ಲ ರಾಷ್ಟ್ರಗಳನ್ನೂ ಇದೇ ದೃಷ್ಟಿಯಿಂದ ನೋಡತೊಡಗಿ ದರು. ರಿಲಿಜನ್ ಹೊಂದಿದವರಿಗೆ ಒಂದು ನಂಬಿಕೆ ಇದೆ. ಗಾಡ್ ಮನುಷ್ಯರಿಗೆ ಶುದ್ಧವಾದ ರಿಲಿಜನ್ ನೀಡಿದ್ದಾನೆ. ಆದರೆ ಕಾಲಾಂತರದಲ್ಲಿ ಈ ಶುದ್ಧವಾದ ರಿಲಿಜನ್ ಯಾವುದೋ ಕಾರಣಕ್ಕೆ ಭ್ರಷ್ಟಗೊಂಡು ಅವನತಿಯ ಹಾದಿ ಹಿಡಿಯುತ್ತದೆ. ಆವಾಗ ಯಾವು ದಾದರೂ ಯುಗಪುರುಷನೊಬ್ಬ ಅವತರಿಸಿ ಈ ಪತನಗೊಂಡ ರಿಲಿಜನ್ನನ್ನು ಶುದ್ಧಗೊಳಿಸುತ್ತಾನೆ. ಹಾಗಾಗಿಯೇ ಅವರಿಗೆ ಮಾರ್ಟಿನ್ ಲೂಥರ್ ಯುಗಪುರುಷ.

ಇಂಥ ಐರೋಪ್ಯರು ಭಾರತಕ್ಕೆ ಬಂದಾಗ ಈ ದೇಶ ಅವರಿಗೆ ಅರ್ಥವಾಗ ಲಿಲ್ಲ. ಏಕೆಂದರೆ ರಿಲಿಜನ್ನೇ ಇಲ್ಲದ ಸಂಪ್ರ ದಾಯಗಳ ನಾಡು ಇದು. ಹಾಗಾಗಿ ಅವರ ಗ್ರಹಿಕೆಗಳಿಗೆ ತುಂಬ ತೊಂದರೆಯಾಗಲು ಪ್ರಾರಂಭವಾಯಿತು. ಇದನ್ನು ನಿವಾರಿಸಿ ಕೊಳ್ಳಲು ಭಾರತಕ್ಕೊಂದು ಸಮಾಜವಿಜ್ಞಾನ ಬರೆಯಲು ಪ್ರಾರಂಭಿಸಿದರು. ಭಾರತದ ಆಚಾರ-ವಿಚಾರಗಳು, ಮೂರ್ತಿ ಪೂಜೆ, ವರ್ಣಾ ಶ್ರಮ ಮುಂತಾದ ವೈವಿಧ್ಯತೆಗಳು ಅವರಿಗೆ ಪತನ ಗೊಳ್ಳುತ್ತಿರುವ ರಿಲಿಜನ್ನಿನ ಲಕ್ಷಣಗಳಾಗಿ ಕಂಡವು. ಆಗ ಪತನಗೊಳ್ಳುತ್ತಿರುವ ಕೆಥೋಲಿಕ್ ಸಮಾಜದ ಲಕ್ಷಣಗಳನ್ನು ಇಲ್ಲಿಯೂ ಹುಡುಕಿದರು. ಅವಾಸ್ತವಿಕ ವಾಗಿ ತಾಳೆ ಮಾಡಿದರು. ಈ ಹಂತದಲ್ಲೇ ಅವರು ಬುದ್ಧಿಸಂ ಕುರಿತಾಗಿ ಅಧ್ಯಯನ ನಡೆಸಿದ್ದರು. ಮೂಲತಃ ಬುದ್ಧ ಶ್ರಮಣ ಸಂಪ್ರದಾಯದವ ನಾದ್ದರಿಂದ ಭಾರತೀಯ ಸಮಾಜ ವ್ಯವಸ್ಥೆಯ ಕುರಿತಾದ ಅವನ ಅಭಿಪ್ರಾಯ ಬೇರೆಯೇ ಇತ್ತು. ಬುದ್ಧ ನಿಜವಾದ ಬ್ರಾಹ್ಮಣ್ಯದ ಕುರಿತು ಚರ್ಚಿಸು ತ್ತಿದ್ದ. ವರ್ಣಾಶ್ರಮದ ಬಗ್ಗೆ ವಿವರ ನೀಡುತ್ತಿದ್ದ. ಯಜ್ಞಯಾಗಾದಿಗಳನ್ನು ವಿರೋಧಿಸಿದ್ದ. ಪ್ರಾಣಿ ಬಲಿ ನಿಷೇಧಿಸಿದ್ದ. ಇದರ ಜೊತೆಗೆ ಬುದ್ಧಿಸಂನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಅವರಿಗೆ ಬುದ್ಧ ಭಾರತೀಯ ಸಮಾಜವನ್ನು ವಿರೋಧಿಸುತ್ತಿದ್ದಂತೆ ಕಂಡುಬಂತು. ಜಾತಿ ವ್ಯವಸ್ಥೆ, ಪುರೋಹಿತಶಾಹಿ, ಯಜ್ಞಗಳು, ವಿಧಿವಿಧಾನಗಳು, ಮಡಿಮೈಲಿಗೆ ಮುಂತಾದವುಗಳ ಬಗ್ಗೆ ಬುದ್ಧ ವಿಮರ್ಶೆ ಮಾಡಿದ್ದ ರಿಂದ ಅವನು ಇವುಗಳನ್ನು ವಿರೋಧಿಸುತ್ತಿದ್ದಾ ನೆಂದು ಗ್ರಹಿಸಿದರು. ಹಾಗೂ ಬುದ್ಧಿಸಂ ಅನ್ನುವುದು ತರತಮ ಇಲ್ಲದ ಒಂದು ಆದರ್ಶ ವ್ಯವಸ್ಥೆ ಎಂದು ಗ್ರಹಿಸಿದರು.

ಈ ಕಾರಣದಿಂದ ಯುರೋಪಿನಲ್ಲಿ ಮಾರ್ಟಿನ್ ಲೂಥರ್ ಮಾಡಿದ್ದನ್ನೇ ಇಲ್ಲಿ ಬುದ್ಧ ಮಾಡುತ್ತಿದ್ದಾ ನೆಂದು ನಂಬಿದರು. ಕ್ಯಾಥೋಲಿಕ್ ಪ್ರೀಸ್ಟ್ಹುಡ್ ವಿರುದ್ಧ ಪ್ರೊಟೆಸ್ಟಾಂಟಿಸಂ ಏನೇನು ಮಾಡಿತೋ ಭಾರತದಲ್ಲಿ ಬುದ್ಧನೂ ಅದನ್ನೇ ಮಾಡಿದನೆಂಬ ಕಥೆ ಕಟ್ಟಿದರು. ಬುದ್ಧಿಸಂನ್ನು ಭಾರತದ ಪ್ರೊಟೆಸ್ಟಾಂಟಿಸಂ ಹಾಗೂ ಬುದ್ಧ ಭಾರತದ ಮಾರ್ಟಿನ್ ಲೂಥರ್ ಎಂದು ವೈಭವೀಕರಿಸಿದರು. ಪ್ರೊಟೆಸ್ಟಾಂಟರ ಕೆಥೋಲಿಕ್ ವಿರುದ್ಧದ ಪ್ರತಿಭಟನೆಗೆ, ಹಿಂದೂ ಯಿಸಂ ವಿರುದ್ಧವಾಗಿ ಬುದ್ಧಿಸಂನ ಪ್ರತಿಭಟನೆ ಎಂಬುದಾಗಿ ಗ್ರಹಿಸಿದರು.

ಪ್ರೊಟೆಸ್ಟಾಂಟ್ ಪ್ರಭಾವಿತ ಭಾರತೀಯ ಚಿಂತ ಕರೂ ಕೂಡ ಇದೆ ವಾದವನ್ನು ಮೈಗೂಡಿಸಿಕೊಂ ಡರು. ಹಾಗಾಗಿ ಅವರಿಗೆ ಬುದ್ಧ ಮನುಷ್ಯತ್ವದ ಪ್ರತೀಕವಾಗಿ ಕಂಡುಬಂದ. ಬ್ರಾಹ್ಮಣ್ಯವನ್ನು ತೊರೆ ಯಬೇಕೆಂಬ ಅಪಕ್ವ ಕಲ್ಪನೆಯ ಬ್ರಾಹ್ಮಣರಿಗೆ ಹಾಗೂ ಬ್ರಾಹ್ಮಣರ ಬಗ್ಗೆ ಅಸಹನೆಯಿದ್ದ ಮಧ್ಯಮ ಹಾಗೂ ಕೆಳವರ್ಗದವರಿಗೆ ಬುದ್ಧ ಹೀರೋ ಆದ. ಇಂದು ಅಂಬೇಡ್ಕರ್ ಕೇವಲ ದಲಿತರ ನಾಯಕ ಎಂದು ಕೊಂಡಾಡುವುದೂ ಇದೇ ತಿಳುವಳಿಕೆಯ ಮೇಲೆ. ಭಾರತೀಯ ಸಮಾಜವಿಜ್ಞಾನ ಎಷ್ಟು ಕಲ ಬೆರಿಕೆಯಾಗಿದೆಯೆಂದರೆ ಸ್ವತಃ ಅಂಬೇಡ್ಕರರಿಗೇ ಈ ತಿಳುವಳಿಕೆ ಇದ್ದಲ್ಲಿ ಅಚ್ಚರಿಯಿಲ್ಲ.

ಇಲ್ಲಿ ಇನ್ನೊಂದು ಸೂಕ್ಷ್ಮವೂ ಇದೆ. ಯುರೋಪಿನಲ್ಲಿ ಶೀಘ್ರವಾಗಿ ಅನೇಕ ಕ್ರಾಂತಿಕಾರಕ ಬೆಳವಣಿಗೆಗಳಾದವು. ವಿಜ್ಞಾನ ಹಾಗೂ ತಂತ್ರಜ್ಞಾನ ಅಭಿವೃದ್ಧಿಯಾಗಿ ಜನರ ನಂಬಿಕೆಯನ್ನೇ ಬುಡ ಮೇಲು ಮಾಡಿದವು. ಔದ್ಯಮಿಕ ಕ್ರಾಂತಿ ಆಯಿತು. ಆಧುನಿಕತೆ ಬೆಳೆದು ನೀತಿ ಅನೀತಿಯ ಕಲ್ಪನೆ ಬೇರೆ ರೀತಿಯಲ್ಲಿ ಅರಳಿ ವ್ಯಕ್ತಿ ಸ್ವಾತಂತ್ರ್ಯದ ಚಳವಳಿ ಪ್ರಾರಂಭವಾಯಿತು. ಸೆಕ್ಯುಲರಿಸಂ ಕೂಡ ಹೊಸ ಹೊಸ ತಿರುವು ಪಡೆಯಿತು. ಈ ಹಂತದಲ್ಲಿ ಮುಂದುವರಿದ ಚಿಂತಕರು ಪ್ರೊಟೆಸ್ಟಾಂಟಿಸಂನ ಯೋಗ್ಯತೆಯ ಕುರಿತಾಗೇ ಪ್ರಶ್ನಿಸತೊಡಗಿದರು. ಪ್ರೊಟೆಸ್ಟಾಂಟರ ಕಥೆಗಳನ್ನು ಟೀಕಿಸಿದರು. ಆಗ ಪ್ರೊಟೆಸ್ಟಾಂಟರಿಗೆ ತಮ್ಮನ್ನು ಇನ್ನೂ ಸಮರ್ಥಿಸಿ ಕೊಳ್ಳುವ ಅನಿವಾರ್ಯತೆ ಎದುರಾಯಿತು.

ಆಗ ಪ್ರೊಟೆಸ್ಟಾಂಟರು ರಿಲಿಜನ್ನೋದ್ಧಾರಕರ ಕಥೆಯನ್ನು ದೊಡ್ಡದು ಮಾಡಿದರು. ಪ್ರತಿ ರಿಲಿ ಜನ್ ಕೂಡ ಪತನವಾದಾಗ ಒಬ್ಬ ಮಹಾಪುರುಷ ಬಂದು ಅವರನ್ನು ಉದ್ಧಾರ ಮಾಡುತ್ತಾನೆ. ಭಾರತ ದಲ್ಲಿ ಅಂತಹ ಮಹಾಪುರುಷನೇ ಬುದ್ಧ ಎಂದು ಉದಾಹರಿಸುವ ಮೂಲಕ ಬರೀ ಯುರೋಪಿನಲ್ಲಿ ಮಾತ್ರವಲ್ಲ ಜಗತ್ತಿನ ಎಲ್ಲೆಡೆಯಲ್ಲೂ ಇದು ಸಂಭವಿ ಸುತ್ತದೆ ಎಂದು ತೋರಿಸುವುದು ಅವರಿಗೆ ಮಹತ್ವದ್ದಾಗಿತ್ತು. ಆಗ ಬುದ್ಧನನ್ನು ತಮ್ಮ ಸಮರ್ಥನೆಗೆ ಹೈಜಾಕ್ ಮಾಡಿಕೊಂಡರು. ಬುದ್ಧನ ಸುತ್ತಲೂ ಮಾರ್ಟಿನ್ ಲೂಥರನ ಕಥೆ ಬರೆದರು.

ಈ ಮೂಲಕ ಕಳೆದ ಮೂರು ಸಾವಿರ ವರ್ಷ ಗಳ ಹಿಂದಿನಿಂದಲೇ ಬುದ್ಧಿಸಂ ಸಮಾಜ ವ್ಯವಸ್ಥೆ ಯನ್ನು ರಿಪೇರಿ ಮಾಡುವಲ್ಲಿ ತೊಡಗಿತ್ತು ಎನ್ನುತ್ತ ಬುದ್ಧನನ್ನು ಬಳಸಿಕೊಳ್ಳುತ್ತ ಬಂದರು. ಆದರೆ ಇದು ಐರೋಪ್ಯರ ತಿಳುವಳಿಕೆ ಮಾತ್ರ. ಭಾರತದಲ್ಲಿ ಈ ರೀತಿಯ ಪರಿಸ್ಥಿತಿಯನ್ನು ನಾವು ಕಾಣಲಾರೆವು. ಯುರೋಪಿನ ಕಥೆಗೂ ಇಲ್ಲಿನ ಆಚರಣೆಗೂ ವ್ಯತ್ಯಾಸ ಕಾಣುತ್ತದೆ. ಇದೂ ಕೂಡ ಆಧುನಿಕರಿಗೆ ಗೊಂದಲವಾಗೇ ಕಾಣುತ್ತದೆ. ಏಕೆಂದರೆ ಪ್ರೊಟೆಸ್ಟಾಂಟರು ಇಡೀ ಬುದ್ಧಿಸಂನ್ನು ವೈಜ್ಞಾನಿಕವಾದ ಸಿದ್ಧಾಂತದ ತರಹ ಬೆಳೆಸಿದ್ದಾರೆ. ಆದರೆ ಇದು ಕೇವಲ ಬುದ್ಧಿಸಂನ ಹಿಂದಿರುವ ಪ್ರೊಟೆಸ್ಟಾಂಟ್ ಥಿಯಾಲಜಿ ಮಾತ್ರ.

ಈ ಗೊಂದಲದಿಂದ ತಪ್ಪಿಸಿಕೊಳ್ಳಲು ಇತ್ತೀಚೆಗೆ ಫಿಲಾಸಫಿಕಲ್ ಬುದ್ಧಿಸಂ ಹಾಗೂ ಪಾಪ್ಯುಲರ್ ಬುದ್ಧಿಸಂ ಎಂಬ ಪ್ರಭೇದ ಮಾಡಿ ವರ್ಣಿಸುವ ಪದ್ಧತಿಯೂ ಇದೆ. ಮುಂದಿನ ವಾರ ಬುದ್ಧ ಬ್ರಾಹ್ಮಣರ ವಿರೋಧಿಯಾಗಿದ್ದನೇ ಎಂಬುದರ ಬಗ್ಗೆ ವಿಚಾರ ಮಾಡೋಣ.

* * * * * * * *

ಚಿತ್ರಕೃಪೆ : ಅಂತರ್ಜಾಲ

3 ಟಿಪ್ಪಣಿಗಳು Post a comment
  1. ravish
    ಜನ 30 2012

    sadhyategaLa bagge esthadarU matadabahudu ramanand. adare nija enu anta idariMda gottagalla.

    ravish chintamani

    ಉತ್ತರ
  2. M Maravanthe
    ಜನ 30 2012

    ಮುಚ್ಚಿದ ಮನ ತೆರೆಸುವಂತಃ ಲೇಖನ

    ಉತ್ತರ
  3. ಜನ 31 2012

    ಐತಿಹಾಸಿಕ ಆಧಾರಗಳಿರಿವುದನ್ನ ಕಥೆ ಎಂದು ತಳ್ಳಿಹಾಕುತ್ತಾ, ನೀವು ಹೇಳುತ್ತಿರುವ ಈ ಕಥೆಗೆ ಏನು ಆಧಾರ?

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments