-ನಟರಾಜು ಎಸ್ ಎಂ

ಜೂನ್ ತಿಂಗಳ ಸಂಜೆ ಏಳರ ಸಮಯ ಅನಿಸುತ್ತೆ. ನನ್ನ ಮೊಬೈಲ್ಗೆ ಒಂದು ಮೆಸೇಜ್ ಬಂದಿತ್ತು. “ನಿಮ್ಮ ತಂಗೀನ ಆಟೋದಲ್ಲಿ ನಿಮ್ಮ ತಾಯಿ ಆಸ್ಪತ್ರೆಗೆ ಕರೆದುಕೊಂಡು ಹೋದರು” ಅಂತ ಮೆಸೇಜ್ ಮಾಡಿದ್ದವರು ನಾವು ಬಾಡಿಗೆಗಿದ್ದ ಮನೆ ಓನರ್ ಅವರ ಚಿಕ್ಕ ಮಗಳು. ನಾನು ತಕ್ಷಣ ನಮ್ಮ ಮನೆಯ ಮೊಬೈಲ್ ನಂಬರ್ಗೆ ಫೋನ್ ಮಾಡಿದಾಗ ಅತ್ತಲಿನ ನನ್ನ ತಾಯಿಯ ದನಿ ಕಂಡು ನಾನು ಒಂದು ಕ್ಷಣ ನಡುಗಿದ್ದೆ.
“ಅಪ್ಪಾ ಹೊಟ್ಟೆ ನೋವು ಇಲ್ಲ ಏನೂ ಇಲ್ಲ ಸಾಯಂಕಾಲದಿಂದ ಒಂದೇ ಸಮನೆ ರಕ್ತ ಹೋಗ್ತಾ ಅದೆ ಅಂತ ಒಂದು ಆಸ್ಪತ್ರೆಗೆ ಕರಕೊಂಡ್ ಹೋಗಿದ್ದೆ. ಅಲ್ಲಿ ಆಗಲ್ಲ ಅಂತ ದೊಡ್ಡಾಸ್ಪತ್ರೆಗೆ ಬರೆದವ್ರೆ ಕಣಪ್ಪ ನಂಗ್ಯಾಕೋ ಭಯ ಆಗ್ತದೆ” ಅಂತ ನನ್ನ ತಾಯಿ ಅಳುತ್ತಾ ಇತ್ತು. “ಒಂದಷ್ಟು ಹೊತ್ತು ಬಿಟ್ಟು ಫೋನ್ ಮಾಡಪ್ಪ ಆ ಆಸ್ಪತ್ರೆಗೆ ಹೋಗ್ತಾ ಇದ್ದೀವಿ” ಅಂತ ಹೇಳಿ ನಮ್ಮ ತಾಯಿ ಫೋನಿಟ್ಟಿತ್ತು. ಈಗಾಗಲೇ ಒಂದು ಜೀವವನ್ನು ಕಳೆದುಕೊಂಡಿದ್ದ ನಾವು ನಮ್ಮ ಮನೆಯ ಮತ್ತೊಂದು ಜೀವ ಜೀವನ್ಮರಣದ ಮಧ್ಯೆ ಹೋರಾಡ್ತಾ ಇದೆ ಅಂತ ಗೊತ್ತಾದಾಗ ಯಾಕೋ ನಾನು ತುಂಬಾ ಗಾಬರಿಯಾಗಿದ್ದೆ. ಮತ್ತೆ ಒಂದರ್ಧ ಗಂಟೆ ಬಿಟ್ಟು ಮತ್ತೆ ಫೋನ್ ಮಾಡಿದಾಗ “ಈ ದೊಡ್ಡಾಸ್ಪತ್ರೆಯಲ್ಲೂ ಆಗಲ್ಲ ಅಂದುಬುಟ್ರು ಕಣಪ್ಪ. ಎರಡು ಮಕ್ಕಳವೆ. ದಿನ ತುಂಬಿಲ್ಲ, ರಕ್ತ ಜಾಸ್ತಿ ಹೋಗದೆ ತಕ್ಷಣ ಆಪರೇಷನ್ ಮಾಡ್ಬೇಕು ಇಲ್ಲ ಅಂದ್ರೆ ತಾಯಿ ಮಕ್ಕಳು ಮೂರು ಜೀವಕ್ಕೂ ತೊಂದ್ರೆ ಅಂತ ಹೇಳುದ್ರು” ಅಂತ ನಮ್ಮ ತಾಯಿ ಗುಳೋ ಅಂತ ಅಳುತ್ತಿತ್ತು. ಆಗ ನಾನಿದ್ದುದು ದೂರದ ಕಲ್ಕತ್ತದಲ್ಲಿ. ನಮ್ಮ ತಾಯಿ ಮಾತನಾಡುತ್ತಿದುದು ಹೆರಿಗೆಗೆ ದೊಡ್ಡಾಸ್ಪತ್ರೆ ಅಂತ ಕರೆಯಲ್ಪಡುವ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯ ಮುಂಭಾಗದಿಂದ.
“ಅಳಬ್ಯಾಡ ಸುಮ್ನಿರವ್ವ ಅಂತ ಹೇಳಿ ಯಾವ ಆಸ್ಪತ್ರೆಗೆ ಬರೆದುಕೊಟ್ಟಿದ್ದಾರೋ ಆ ಆಸ್ಪತ್ರೆಗೆ ಕರೆಕೊಂಡ್ ಹೋಗವ್ವ ನಾನು ಬೆಳಿಗ್ಗೆ ಅಲ್ಲೀರ್ತೆನೆ” ಅಂತ ಹೇಳಿದ್ದೆ. “ಆಯ್ತು ಕಣಪ್ಪ ಆ ಆಸ್ಪತ್ರೆಗೆ ಹೋದ ಮ್ಯಾಲೆ ಫೋನ್ ಮಾಡ್ತೀವಿ” ಅಂತ ಹೇಳಿತ್ತು ನಮ್ಮವ್ವ. ಒಂದಷ್ಟು ಹೊತ್ತು ಬಿಟ್ಟು ಮತ್ತೆ ಫೋನ್ ಮಾಡಿದಾಗ “ಮಗ ಇಪ್ಪತ್ತು ಸಾವಿರ ಕಟ್ಟುದ್ರೆ ಆಪರೇಷನ್ ಮಾಡ್ತೀವಿ ಇಲ್ಲ ಅಂದರೆ ನಿಮ್ಮ ಮಗಳನ್ನು ಕರೆಕೊಂಡು ಬ್ಯಾರೆ ಆಸ್ಪತ್ರೆಗೆ ಹೋಗಿ ಅಂತ ಹೇಳತ್ತಾವ್ರೆ” ಅಂತ ನಮ್ಮವ್ವ ಮತ್ತೆ ತನ್ನ ಆಕ್ರಂದನ ಶುರು ಮಾಡಿತ್ತು. ನಾನೆಲ್ಲೋ ದೂರದಲ್ಲಿದ್ದೆ. ನನ್ನ ತಾಯಿ ಜೊತೆ ನಾವಿರುವ ಬಡಾವಣೆಯಲ್ಲೇ ವಾಸಿಸುವ ನಮ್ಮೂರಿನ ಒಬ್ಬ ಅಕ್ಕನನ್ನು ಬಿಟ್ಟರೆ ಬೇರೆ ಇನ್ಯಾರು ಇರಲಿಲ್ಲ. ದೂರದ ಊರಿನಲ್ಲಿದ್ದ ನನ್ನ ತಂಗಿಯ ಯಜಮಾನರು, ಬೆಂಗಳೂರಿನಲ್ಲೆ ಇದ್ದ ಅವಳ ಭಾವ ಯಾರೂ ಇನ್ನೂ ಆಸ್ಪತ್ರೆಗೆ ಬಂದಿರಲಿಲ್ಲ. ಆ ವಿಚಿತ್ರ ಸಂಕಟದ ಸ್ಥಿತಿಯಲ್ಲಿ ಡಾಕ್ಟರ್ಗೆ ಫೋನ್ ಕೊಡವ್ವ ಅಂತ ಹೇಳಿದ್ದೆ. ಸಿಡುಕಾಡುತ್ತಲೇ “ಯಾರ್ರೀ ಅದು” ಅಂತ ಫೋನ್ ರಿಸೀವ್ ಮಾಡಿದ ಡಾಕ್ಟರ್ಗೆ ನನ್ನ ಪರಿಚಯ ಹೇಳಿ “ಬೆಳಿಗ್ಗೆ ನಾನು ಬರ್ತಾ ಇದ್ದೇನೆ ದಯವಿಟ್ಟು ಆಪರೇಷನ್ ಮಾಡಿ” ಅಂತ ಕೇಳಿಕೊಂಡಿದ್ದೆ. ನನ್ನ ಮಾತು ಕೇಳಿದರೋ ಇಲ್ಲವೋ ಆ ಡಾಕ್ಟರ್, “ನೋಡಿ ಎರಡು ಮಕ್ಕಳಿವೆ. ಜೊತೆಗೆ ದಿನ ತುಂಬಿಲ್ಲ. ಐಸಿಯೂ ನಲ್ಲಿ ಇಡಬೇಕಾಗುತ್ತೆ. ಖರ್ಚು ಜಾಸ್ತಿ ಆಗುತ್ತೆ. ಯೋಚಿಸಿ. ನಿಮ್ಮ ತಾಯಿ ಜೊತೆ ಮಾತಾಡಿ” ಅಂತ ಹೇಳಿ ಆ ಡಾಕ್ಟರ್ ಫೋನನ್ನು ನಮ್ಮ ತಾಯಿಗೆ ಕೊಟ್ಟಿದ್ದರು.
“ದುಡ್ಡು ಎಷ್ಟು ಇದ್ದಾದವ್ವ “ಅಂತ ಕೇಳಿದಾಗ “ಮೂರ್ನಾಲ್ಕು ಸಾವಿರ ಅದೆ” ಮಗ ಅಂದಿತ್ತು ನಮ್ಮವ್ವ. ಅಷ್ಟರಲ್ಲಿ ನಮ್ಮ ಅಣ್ಣನ ಸಮಾನರಾದ ನಮ್ಮೂರಿನವರು ಪಕ್ಕದ ಮನೆ ಅಂಕಲ್ ಹತ್ತಿರ ಒಂದಷ್ಟು ಹಣ ತೆಗೆದುಕೊಂಡು ಬಂದಿದ್ದರು. ಅವರು ತಮ್ಮ ಕೆಲಸ ಮುಗಿಸಿ ರಾತ್ರಿ ಆಸ್ಪತ್ರೆಗೆ ಬಂದಿದ್ದುದು ನನಗೆ ಸ್ವಲ್ಪ ನೆಮ್ಮದಿ ನೀಡಿತ್ತು. “ಅಣ್ಣಾ ಬೆಳಿಗ್ಗೆ ನಾನು ಬರ್ತಾ ಇದೇನೆ. ಅದೇನು ಬೇಕೋ ಎಲ್ಲ ಡಾಕ್ಟರ್ಗೆ ಮಾಡೋಕೆ ಹೇಳಿ” ಅಂತ ಅವರಿಗೆ ಹೇಳಿದ್ದೆ. “ಸರಿ ಆಮೇಲೆ ಫೋನ್ ಮಾಡಪ್ಪ” ಅಂತ ಹೇಳಿ ಫೋನಿಟ್ಟಿದ್ದರು. ದಿನ ತುಂಬೋಕೆ ಇನ್ನು ಇಪ್ಪತ್ತು ಮೂವತ್ತು ದಿನ ಇದ್ದುದರಿಂದ ಆಸ್ಪತ್ರೆಯ ಖರ್ಚಿಗಾಗಿ ನಾನು ಮನೆಗೆ ಹಣ ಕಳಿಸಿರಲಿಲ್ಲ.
ರಾತ್ರಿ ಹನ್ನೊಂದು ಹನ್ನೊಂದೂವರೆ ಸಮಯದಲ್ಲಿ ನಾನು ಮತ್ತೆ ರಾತ್ರಿ ಫೋನ್ ಮಾಡಿದಾಗ “ಆಪರೇಷನ್ಗೆ ಕರೆಕೊಂಡ್ ಹೋಗವ್ರೆ ಮಗ ಆಮೇಲೆ ಫೋನ್ ಮಾಡು” ಅಂದಿದ್ದರು ಆ ಅಣ್ಣ. ರಾತ್ರಿ ಹನ್ನೆರಡು ಗಂಟೆ ಸಮಯದಲ್ಲಿ ಆಪರೇಷನ್ ಮುಗಿದ ಮೇಲೆ “ಇನ್ನೂ ಹತ್ತು ಸಾವಿರ ಈಗಲೇ ಕಟ್ಟಿ ಇಲ್ಲ ಅಂದರೆ ತಾಯಿ ಮಕ್ಕಳು ಎಲ್ಲ ಕರೆದುಕೊಂಡು ಬೇರೆ ಆಸ್ಪತ್ರೆಗೆ ಹೋಗಿ” ಅಂತ ಡಾಕ್ಟ್ರು ಹೊಸ ರಾಗ ಶುರು ಮಾಡಿದ್ದರು. ಯೋಚಿಸಿ ಆಗ ರಾತ್ರಿ ಹನ್ನೆರಡು ದಾಟಿದೆ. ಅಷ್ಟರಲ್ಲಿ ನನ್ನ ತಂಗಿಯ ಯಜಮಾನರು ಹಾಗೂ ಭಾವ ಬಂದು ಒಂದಷ್ಟು ಹಣ ಕಟ್ಟಿದ ಮೇಲೆ “ಇಲ್ಲಾ ಪೂರ್ತಿ ಹಣ ಕಟ್ಟಿ” ಅಂತ ಡಾಕ್ಟರ್ ಮತ್ತೆ ಚಂಡಿ ಹಿಡಿದಿದ್ದರಂತೆ. ದೇವ್ರೆ ಈ ಪ್ರಪಂಚದಲ್ಲಿ ಜನ ಯಾರನ್ನು ನಂಬೋದಿಲ್ಲವೇ ಅಂತ ಅಂದುಕೊಳ್ಳುವಷ್ಟರಲ್ಲಿ ಈ ಡಾಕ್ಟರ್ ಹಾಗು ಅವರ ಸಿಬ್ಬಂದಿಯ ಈ ನಾಟಕವನ್ನು ದೂರದಿಂದ ನೋಡುತ್ತಿದ್ದ ಹೆಣ್ಣು ಮಗಳೊಬ್ಬರು ಐದು ಸಾವಿರ ರೂಪಾಯಿಗಳನ್ನು ನನ್ನ ತಾಯಿಯ ಕೈಗಿಟ್ಟು ಹೋಗಿ ಹಣ ಕಟ್ಟಿ ಅಂದಿದ್ದರಂತೆ. ನನ್ನ ದೊಡ್ಡಪ್ಪನ ಮಕ್ಕಳಿಗೆ ಫೋನ್ ಮಾಡಿದಾಗ ರಾತ್ರೋ ರಾತ್ರಿ ಅವರು ಬೆಂಗಳೂರಿನ ಯಾವುದೋ ಮೂಲೆಯಿಂದಲೋ ಆ ಆಸ್ಪತ್ರೆಗೆ ಬಂದು ದುಡ್ಡು ತರುವಷ್ಟರಲ್ಲಿ ಮಕ್ಕಳನ್ನು ತೀರ್ವ ನಿಗಾ ಘಟಕದಲ್ಲಿ ಇಡಲಾಗಿತ್ತು. ಇಷ್ಟೆಲ್ಲ ವಿಷಯಗಳನ್ನು ದೂರದ ಕಲ್ಕತ್ತದಲ್ಲಿ ಕುಳಿತು ಪ್ರತಿಸಲ ಫೋನ್ ಮಾಡಿ ತಿಳಿದುಕೊಳ್ಳುವಾಗ ನನಗೆ ಬದುಕು ಇಷ್ಟೊಂದು ವಿಚಿತ್ರವಾ ಅನಿಸಿತ್ತು.
ನನ್ನ ತಂಗಿಯನ್ನು ಕೊಟ್ಟಿರುವ ಊರು ನಗರಗಳಿಂದ ದೂರಾನೆ. ಅವಳ ಮುಟ್ಟು ನಿಂತಾಗ ಅವಳ ಊರಿನ ಹತ್ತಿರದ ಹೋಬಳಿಯಂತಹ ಊರಿನಲ್ಲಿರುವ ಆಸ್ಪತ್ರೆಯಲ್ಲಿ ಮೂತ್ರ ಪರೀಕ್ಷೆ, ರಕ್ತ ಪರೀಕ್ಷೆ ಇತ್ಯಾದಿಗಳನ್ನು ಮಾಡಿ ಅವಳು ಗರ್ಭವತಿ ಅನ್ನೋದನ್ನು ತಿಳಿಸಿದ್ದರು. ಒಂದೆರಡು ತಿಂಗಳುಗಳ ನಂತರ ಸ್ಕಾನಿಂಗ್ ಮಾಡಿಸಿ ಆಕೆ ಗರ್ಭವತಿ ಅನ್ನೋದನ್ನು ಖಾತರಿ ಪಡಿಸಿಕೊಂಡು ಆಸ್ಪತ್ರೆಯಿಂದ ಕಾರ್ಡ್ ಒಂದನು ಕೊಟ್ಟಿದ್ದರು. ಆ ಕಾರ್ಡಿನಲ್ಲಿ ಗರ್ಭವತಿ ಹಾರೈಕೆ ಕುರಿತ ಒಂದಷ್ಟು ವಿವರಗಳ ಜೊತೆಗೆ ಯಾವಾಗ ಯಾವ್ಯಾವ ಚುಚ್ಚುಮದ್ದುಗಳನ್ನು ಹಾಕಿಸಿಕೊಳ್ಳಬೇಕು ಅನ್ನೋ ವಿವರಗಳೂ ಅದರಲಿತ್ತು. ಅದರಂತೆಯೇ ನಿಯಮಿತವಾಗಿ ಚುಚ್ಚುಮದ್ದುಗಳನ್ನು ಹಾಗು ಇನ್ನಿತರ ಔಷದಿಗಳನ್ನು ಆ ಆಸ್ಪತ್ರೆಯವರು ಕೊಡುತ್ತಿದ್ದರು ಸಹ. ಆ ಕಾರ್ಡ್ ತೋರಿಸಿದರೆ ಯಾವ ಸರ್ಕಾರಿ ಆಸ್ಪತ್ರೆಯಲ್ಲಾಗಲಿ ಗರ್ಭವತಿಗೆ ನೀಡಬೇಕಾದ ಸಲಹೆ, ಚಿಕಿತ್ಸೆ ಹಾಗೂ ಚುಚ್ಚುಮದ್ದು ನೀಡುತ್ತಾರೆ ಅನ್ನೋದು ಆ ಆಸ್ಪತ್ರೆಯವರ ಮಾತಾಗಿತ್ತು.
ನನ್ನ ತಂಗಿ ನಮ್ಮ ಮನೆಗೆ ಹಾರೈಕೆಗಾಗಿ ಬಂದಾಗ ಅಲ್ಲೇ ಇದ್ದ ಸರ್ಕಾರಿ ಆಸ್ಪತ್ರೆಯವರು ಸಲಹೆ, ಔಷದಿ ಹಾಗೂ ಚುಚ್ಚುಮದ್ದು ಎಲ್ಲವನು ಒಳ್ಳೆಯ ರೀತಿಯಲ್ಲೇ ನೀಡಿದ್ದರು. ಎರಡು ಮಕ್ಕಳಿರೋದರಿಂದ “ದೊಡ್ಡಾಸ್ಪತ್ರೆಯಲ್ಲಿ ಕಾರ್ಡ್ ಒಂದನು ಮಾಡಿಸಿ ಯಾವುದಕ್ಕೂ ಇಟ್ಟುಕೊಳ್ಳಿ” ಅಂತ ಸಲಹೆ ಸಹ ನೀಡಿದ್ದರು. ಅವರ ಸಲಹೆಯಂತೆ ಆ ದೊಡ್ಡಾಸ್ಪತ್ರೆ ಎಂಬ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಕಾರ್ಡ್ ಒಂದನು ಮಾಡಿಸಿ ಆಗಿತ್ತು. ಸಣ್ಣ ಪುಟ್ಟ ಆಸ್ಪತ್ರೆಗಳಲ್ಲಿರುವ ಮಾನವೀಯತೆ, ರೋಗಿಗಳ ಬಗೆಗಿನ ಕಾಳಜಿ ದೊಡ್ಡಾಸ್ಪತ್ರೆಗಳಲ್ಲಿ ಇಲ್ಲ ಅಂತ ಒಂದಕ್ಷರ ಓದಲು ಬರದ ನಮ್ಮವ್ವನಿಗೆ ಆ ದೊಡ್ಡಾಸ್ಪತ್ರೆಗೆ ಕಾರ್ಡ್ ಮಾಡಿಸಲು ಹೋದಾಗಲೇ ಗೊತ್ತಾಗಿತ್ತು.
ನನ್ನ ತಂಗಿಯನ್ನು ಆ ಸ್ಥಿತಿಯಲ್ಲಿ ದೊಡ್ಡಾಸ್ಪತ್ರೆ ಅಂತ ಕರೆಯಲ್ಲಡುವ ಆಸ್ಪತ್ರೆಗೆ ಕರೆತಂದಾಗ ಕನಿಷ್ಟ ಪಕ್ಷ ರೋಗಿಯನ್ನು ಒಮ್ಮೆ ನೋಡದೆಯೇ ಖಾಸಗಿ ಆಸ್ಪತ್ರೆಗೆ ಬರೆದುಕೊಟ್ಟಿದ್ದಕ್ಕೆ ಅವರನ್ನು ಏನೆನ್ನಬೇಕೋ ತಿಳಿಯುತ್ತಿಲ್ಲ. ಆಸ್ಪತ್ರೆಗಳಲ್ಲಿ ಅದರಲ್ಲು ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಸವಲತ್ತುಗಳಿಲ್ಲದೆ ಮಕ್ಕಳು ಪ್ರಪಂಚವನ್ನು ಒಂದೆರಡು ಗಂಟೆ ನೋಡಿ ಕಣ್ಮುಚ್ಚುತ್ತಿವೆ. ಉದಾಹರಣೆಗೆ ಕೊಲ್ಕತ್ತದಲ್ಲಿ ಮಕ್ಕಳಿಗೆ ಅಂತಲೇ ಇರುವ ದೊಡ್ಡಾಸ್ಪತ್ರೆಯಲ್ಲಿ, ಕಡಿಮೆ ತೂಕವಿರುವ ಹಾಗು ಇನ್ನು ಕೆಲವು ಸಮಸ್ಯೆಗಳಿಂದ ಹುಟ್ಟೋ ನವಜಾತ ಶಿಶುಗಳ ಹಾರೈಕೆಗೆ ತೀರ್ವ ನಿಗಾ ಘಟಕಗಳಿಲ್ಲದೆ ಮಕ್ಕಳು ಸಾವನಪ್ಪುತ್ತಿರೋದು ಈಗಿನ ಸಾಮಾನ್ಯ ದೃಶ್ಯವಾಗುತ್ತಿದೆ. ಯಾವುದೇ ಸರ್ಕಾರವಾಗಲಿ ಆಸ್ಪತ್ರೆಗಳನ್ನು ದೊಡ್ಡಾಸ್ಪತ್ರೆ ಅಂತ ಬರೀ ಹೆಸರಿಗೆ ಕರೆದರೆ ಆಗದು. ಅಲ್ಲಿ ಚಿಕಿತ್ಸೆಗೆ ಬೇಕಾದ ಸವಲತ್ತಿನ ಜೊತೆಗೆ ಮಾನವೀಯತೆಯನ್ನು ಆಸ್ಪತ್ರೆಗಳ ಸಿಬ್ಬಂದಿಯಲ್ಲಿ ತುಂಬುವ ಕಾರ್ಯ ಕೈಗೊಳ್ಳಬೇಕು. ಖಾಸಗಿ ಆಸ್ಪತ್ರೆಯ ಡಾಕ್ಟರ್ ಹಾಗು ಸಿಬ್ಬಂದಿ ಸಹ ಹಣಕ್ಕಿಂತ ಮಾನವೀಯತೆ ಮುಖ್ಯ ಅನ್ನೋದನ್ನು ಅರಿಯಬೇಕಿದೆ.
* * * * * * * * *
ಚಿತ್ರಕೃಪೆ : mamabirth.blogspot.com
Like this:
Like ಲೋಡ್ ಆಗುತ್ತಿದೆ...
Related
ದಾದ ಇದಕ್ಕೆ ತುಂಬಾ ವಿರೋಧ ಮಾಡ್ತಾರೆ 😦 ಪುಟ್ಟ ಮಕ್ಕಳು ಪ್ರಪಂಚ ನೋಡಕ್ಕೆ ಮುಂಚೇನೆ ಸಾಯೋ ಸ್ಥಿತಿ ಬಾರದೆ ಇರ್ಲಿ, ವಾಣಿ ವಿಲಾಸ ಹೆಸರಿಗೆ ಮಾತ್ರ ವಿಲಾಸ, ದುಡ್ಡು ಕೊಡ್ಲಿಲ್ಲ ಅಂದ್ರೆ ತೋರಿಸ್ತಾರೆ ಕೈಲಾಸ, ನಿಮ್ಮ ಬರಹ ಮನ ಮುಟ್ಟುವಂತಿದೆ. ಆದರೆ ಕಡೆಗೆ ಏನಾಯ್ತು? ಮಕ್ಕಳು ಈಗ ?? ಕುತೂಹಲಕ್ಕೆ ಕೇಳ್ತಿದ್ದಾರೆ ಬೇಜಾರ್ ಮಾಡ್ಕೋಬೇಡಿ.. ಸಾಧ್ಯ ಆದ್ರೆ ತಿಳ್ಸಿ
ನಮ್ಮ ದೇಶದಲ್ಲಿರುವ ಜ್ವಲಂತ ಸಮಸ್ಯೆಗಿಡಿದ ಕೈಗನ್ನಡಿ ಈ ಲೇಖನ ಡಾ|| ನಟರಾಜುರವರೆ, ಮನಕಲಕುವಂತೆ ಮೂಡಿ ಬಂದಿದೆ.. ಮಾನವರಾಗಿ ಮನವೀಯತೆಯನ್ನು ಬದಿಗಿಟ್ಟ ಪೈಶಾಚಿಕ ಮನಸ್ಸುಗಳ ಗೋಮುಖವ್ಯಾಗ್ರ ಗಳ ನರ್ತನಕ್ಕೆ ಸಿಕ್ಕಿ ನರಳುವ ಹಸುಗೂಸುಗಳ ಆಕ್ರಂದನಕ್ಕೆ ಸಾಂತ್ವಾನ ನಿಮ್ಮೀ ಲೇಖನ.. ಎರಡು ವಿಷಯಗಳ ಪ್ರಸ್ತಾಪ ಲೇಖನದಲ್ಲಿದೆ.. ಒಂದು ಸರ್ಕಾರಿ ಆಸ್ಪತ್ರೆಗಳನ್ನು ಹೈಟೆಕ್ ಆಸ್ಪತ್ರೆಗಳ ಮಾದರಿಯಲ್ಲಿ ಅಭಿವೃದ್ದಿಪಡಿಸುತ್ತೇವೆ ಎಂದು ಬೊಂಬಡ ಬಜಾಯಿಸುವ ಸರ್ಕಾರಗಳು ಸ್ತ್ರಿ-ಸಾಮಾನ್ಯನ ಬದುಕನ್ನು ಇವರ ಭ್ರಷ್ಟಾಚಾರಕ್ಕೆ ಅಡವಿಟ್ಟುಕೊಂಡು ಆಸ್ಪತ್ರೆಗಳ ಗುಣಮಟ್ಟ ಇನ್ನೂ ಪಾತಾಳಕ್ಕೆ ಕುಸಿಯುವಂತೆ ಮಾಡುತ್ತಿದ್ದಾರೆ.. ಮತ್ತು ಎರಡನೆಯದು ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಗಳಿಗಿರುವ ಹಣದ ದಾಹ.. ಮಾನವೀಯತೆಗೆ ಅಲ್ಲಿ ಯಾವುದೇ ಬೆಲೆ ಇಲ್ಲ.. ಆ ಪುಟ್ಟ ಕಂದಮ್ಮಗಳ ಪ್ರಾಣಕ್ಕೂ ಯಾವುದೇ ಬೆಲೆ ಇಲ್ಲ.. ಹಣದ ರುದ್ರನರ್ತನಕ್ಕೆ ಮಾತ್ರ ಬೆಲೆ.. ಇದು ಒಂದು ಜಾಲದಂತೆ ಹರಡಿಕೊಂಡು ಹುಟ್ಟುವ ಮೊದಲೇ ಆ ಕಂದಮ್ಮಗಳ ಕತ್ತಿಸುಕುತ್ತಿದೆ.. ಈ ಸಮಸ್ಯೆಗಳನ್ನೆಲ್ಲಾ ನಿವಾರಿಸಿಕೊಂಡು ’ಹುಟ್ಟೋ ಮಕ್ಕಳು ಪ್ರಪಂಚವನ್ನು ನೋಡಲಿ’..
ಮಾನವೀಯತೆಯ ಗುಣವನ್ನು ಕಳೆದುಕೊಳ್ಳುತ್ತಿರುವ ನಮ್ಮ ವೈದ್ಯಕೀಯ ಲೋಕ… ಯಾಕೆ ಹೀಗೆ ಎಂದು ಕಾಡುವುದು ಮನದಲ್ಲಿ ಸುಖದ ಸುಪತ್ತಿಗೆಯನ್ನು ಅರಸುತ್ತಾ ಹೋಗಿ ಕಲಿತ ವಿದ್ಯೆಗೆ ಸ್ವಾರ್ಥರಹಿತ ಸೇವೆ ಸಲ್ಲಿಸುವ ಬದಲು ಹಣದ ವ್ಯಾಮೋಹಕ್ಕೆ ಬಲಿಯಾಗುತ್ತಿದ್ದಾರೆಯೇ ನಮ್ಮ ವೈದ್ಯರು ಎಂಬ ಭಾವ ಕಾಡುತ್ತಿದೆ. ವೈದ್ಯರಿಗೆ ತಮ್ಮ ಬದುಕು ಮಣ್ಣಲ್ಲಿ ಮಣ್ಣಾಗುವಾಗ, ಬದುಕು ಹಣ ಎಲ್ಲವೂ ಸೃಷ್ಟಿಯಲ್ಲಿ ಗೌಣ ಎನ್ನುವುದು ಅರಿಯದಾದರೇ ಇವರು… ಜೀವ ಉಳಿಸುವ ಕಾಯಕಕ್ಕೆ ಬಂದಾಗಲೇ ಇವರ ಅರಿವಿಗೆ ಬರಲಿಲ್ಲವೇ ಜೀವ ಉಳಿಸುವ ಬದಲು ಹಣಕ್ಕಾಗಿ ಜೀವ ತೆಗೆಯುವುದು ಯಾವ ವೃತ್ತಿಧರ್ಮವೆಂದು? ನಮ್ಮ ಸರ್ಕಾರವು ಸಹ ವೈದ್ಯಕೀಯ ಶಿಕ್ಷಣದಲ್ಲಿ ಡೋನೆಷನ್ ಹಾವಳಿ ತೆಗೆದು ಮೆರಿಟ್ ನಲ್ಲಿರುವವರಿಗೆ ಈ ಸೌಲಭ್ಯ ಒದಗಿಸಿ, ಮಾನವೀಯ ಗುಣವನ್ನು ಮೈದುಂಬಿಕೊಳ್ಳಲು ಸಹಕರಿಸುವಂತಾಗಬೇಕು. ಆಸ್ಪತ್ತೆಗಳು ದೇವರ ಮಡಿಲಲ್ಲಿ ನೊಂದ ಜೀವಗಳಿಗೆ ಚೈತನ್ಯ ನೀಡುವಂತಹ ಮನೋಭಾವ ಬೆಳೆಸುವತ್ತ ಸಾಗಬೇಕಾಗಿದೆ. ನಮ್ಮ ಶಿಕ್ಷಣ ವ್ಯವಸ್ಥೆಯೇ ಬದಲಾಗಬೇಕಾಗಿದೆ ಇಂದು…
its really sad… 😦