ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 24, 2012

7

ಮೂಲಭೂತವಾದಿಗಳ ಮನಸ್ಸುಗಳು ಬದಲಾಗಲಿ ….

‍ನಿಲುಮೆ ಮೂಲಕ

(ಇತ್ತೀಚೆಗೆ ನಿಧನರಾದ ಸಚಿವ ಡಾ|| ವಿ.ಎಸ್. ಆಚಾರ್ಯ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮೌಲ್ವಿಯೊಬ್ಬರು ಆಚಾರ್ಯರ ಭಾವಚಿತ್ರಕ್ಕೆ ಹೂ ಹಾಕಿದನ್ನು ಕೆಲವರು ವಿರೋಧಿಸಿದ್ದರು. ಈ ವಿಷಯವನ್ನು ಚರ್ಚಿಸಿ, ಉತ್ತರ ನೀಡಿದ ವಿಕೆ ನ್ಯೂಸ್ ಬಳಗ ಲೇಖನವೊಂದನ್ನು ಬರೆದಿದತ್ತು. ಆ ಲೇಖನಕ್ಕೆ ಸಾಮಾಜಿಕ ಸಾಮರಸ್ಯದ ಮಹತ್ವ ಇರುವುದರಿಂದ ನಿಲುಮೆಯಲ್ಲಿ ಮರುಪ್ರಕಟಿಸಲಾಗಿದೆ. ವಿಕೆ ನ್ಯೂಸ್ ನ ವಿಚಾರವೇ ನಿಲುಮೆಯ ನಿಲುವೂ ಆಗಿದೆ. ವಿಕೆ ನ್ಯೂಸ್ ನಲ್ಲಿ ಪ್ರಕಟವಾದ ಬರಹ ಮತ್ತು ಕ.ರ.ವೇ ನಲ್ನುಡಿಯ ಸಂಪಾದಕರಾದ ಶ್ರೀ ದಿನೇಶ್ ಕುಮಾರ್ ಅವರ ಫೇಸ್ ಬುಕ್ ವಾಲ್ನಲ್ಲಿ ಈ ಕುರಿತು ನಡೆದ ಚರ್ಚೆ ಮತ್ತು ಪ್ರತಿಕ್ರಿಯೆಗಳನ್ನು ನಿಲುಮೆಯ ಓದುಗರಿಗಾಗಿ ಪ್ರಕಟಿಸಲಾಗಿದೆ – ನಿಲುಮೆ) 

ಇತ್ತೀಚೆಗೆ ನಿಧನರಾದ ಕರ್ನಾಟಕದ ಸಚಿವ ವಿ.ಎಸ್. ಆಚಾರ್ಯ ಅವರಿಗೆ  ದೇಶದ ವಿವಿಧೆಡೆ ಮತ್ತು ಗಲ್ಫ್ ರಾಷ್ಟ್ರಗಳಲ್ಲಿಯೂ ಶ್ರದ್ದಾಂಜಲಿ ಸಭೆ ನಡೆದವು . ಈ ಮೂಲಕ ಅಗಲಿದ ನಮ್ಮ ರಾಜ್ಯದ ಸಚಿವರಿಗೆ ಶ್ರದ್ದಾಂಜಲಿ ಸಲ್ಲಿಸುವ ಕೆಲಸವನ್ನು ವಿವಿಧ ಸಂಘಟನೆಗಳು ಮಾಡಿದವು . ಉಡುಪಿ ಹಾಗೂ ಮಂಗಳೂರಿನಲ್ಲೂ ಬೃಹತ್ ಸಭೆ ನಡೆದು ವಿ.ಎಸ್. ಆಚಾರ್ಯ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಈ ಸಭೆಯಲ್ಲಿ ಸಮಾಜದ ವಿವಿಧ ವರ್ಗಗಳ ನಾಗರೀಕರು , ಸರ್ಕಾರಿ ಅಧಿಕಾರಿಗಳು , ವಿವಿಧ ಧರ್ಮಗಳ ಮುಖಂಡರು ಪಾಲ್ಗೊಂಡಿದ್ದರು .

ಈ ಪೈಕಿ ಮುಸ್ಲಿಂ ಸಮುದಾಯದಿಂದ ಮುಸ್ಲಿಂ ಧರ್ಮಗುರುಗಳಾದ ಎಸ್.ಕೆ.ಎಸ್.ಎಸ್.ಎಫ್ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಪುತ್ತೂರಿನ ಕಲ್ಲೇಗ ದಾರಿಮಿ ಮತ್ತು ಎಸ್.ಎಸ್.ಎಫ್ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ , ರಾಜ್ಯ ವಕ್ಫ್ ಮಂಡಳಿ ಸದಸ್ಯರೂ ಆದ ಶಾಫಿ ಸಆದಿ ನಂದಾವರ ಸಹ ಭಾಗವಹಿಸಿ ಅಗಲಿದ  ಮಂತ್ರಿಗಳಿಗೆ ಶ್ರದ್ದಾಂಜಲಿ  ಸಲ್ಲಿಸಿದ್ದರು. ಭಾರತೀಯ ಸಂಸ್ಕೃತಿಯಲ್ಲಿ ಈ ರೀತಿ ಶ್ರದ್ದಾಂಜಲಿ ಕಾರ್ಯಕ್ರಮಗಳನ್ನು ಬಹಳ ಹಿಂದಿನಿಂದಲೂ ಆಯೋಜಿಸಲಾಗುತ್ತಿದೆ. ಆದರೆ ಈ ಶ್ರದ್ದಾಂಜಲಿ ಸಭೆಯಲ್ಲಿ ಮುಸ್ಲಿಂ ಧರ್ಮಗುರುಗಳು ಭಾಗವಹಿಸಿದ ಕಾರಣ ಮುಂದಿಟ್ಟುಕೊಂಡು ಕೆಲ ಮೂಲಭೂತವಾದಿ ಮನಸ್ಸುಗಳು ಸಾಮಾಜಿಕ ತಾಣಗಳಲ್ಲಿ ಈ ಧರ್ಮಗುರುಗಳ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ . ಇದಕ್ಕಾಗಿ ಈ ಕುರಿತು ಇಲ್ಲಿ ಬರೆಯಬೇಕಾಗಿದೆ.

ಅಂದ ಹಾಗೆ ಇಸ್ಲಾಮಿನಲ್ಲಿ ಮೂರ್ತಿ ಪೂಜೆ ಅಥವಾ ವ್ಯಕ್ತಿ ಪೂಜೆಗೆ ಅವಕಾಶವಿಲ್ಲ. ಇಲ್ಲಿ ಈ ಸಮಾರಂಭದಲ್ಲಿ ಭಾಗವಹಿಸಿ ಮುಸ್ಲಿಂ ಧರ್ಮಗುರುಗಳು ಆಚಾರ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ್ದನ್ನೇ ಪೂಜೆ ಮಾಡಿದ ರೀತಿ ಬಿಂಬಿಸುವ ಪ್ರಯತ್ನಗಳನ್ನು ಮಾಡಿ ಇದರ ಲಾಭ ಪಡೆಯಲು ಕೆಲವರು ಯತ್ನಿಸಿರುವುದು ಮಾತ್ರ ಅತ್ಯಂತ ದುರದೃಷ್ಟಕರವಾದ  ಬೆಳವಣಿಗೆ ಎನ್ನಬಹುದು . ಇಲ್ಲಿ ನಿಧನರಾಗಿರುವುದು ನಮ್ಮ ರಾಜ್ಯದ ಒಬ್ಬ ಮಂತ್ರಿ . ಅವರಿಗೆ ಸರ್ಕಾರಿ ನೀತಿ ನಿಯಮದಂತೆ ಅಂತಿಮ ವಂದನೆ ಸಲ್ಲಿಸಿ ಅಂತ್ಯಕ್ರಿಯೆ ನಡೆಸಲಾಗಿದೆ. ಅದೇ ರೀತಿ ಸಂಪ್ರದಾಯದಂತೆ ಶ್ರದ್ದಾಂಜಲಿ ಸಭೆಯನ್ನೂ ಅಲ್ಲಲ್ಲಿ ಆಯೋಜಿಸಲಾಗಿದೆ . ಈ ಸಭೆಗಳಲ್ಲಿ ವಿವಿಧ ಪ್ರಮುಖ ಧರ್ಮಗಳ ಮುಖಂಡರು ಪಾಲ್ಗೊಂಡು ಸಚಿವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ .

ಆದರೆ ಆ ಸಮಯದಲ್ಲಿ ಭಾರತೀಯ ಸಂಸ್ಕೃತಿ , ಸಂಪ್ರದಾಯದಂತೆ ಸಚಿವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ್ದಾರೆ. ಅಂದ ಮಾತ್ರಕ್ಕೆ ಇಲ್ಲಿ ಇಸ್ಲಾಂ ಪ್ರತಿಪಾದಿಸುವ ಏಕ ದೇವಾರಾಧನೆಗೆ ಯಾವುದೇ ರೀತಿಯಲ್ಲಿ ಧಕ್ಕೆ ಬರಲಾರದು . ಆದರೆ ಇದನ್ನೇ ಮುಂದಿಟ್ಟು ಕೊಂಡು ಕೆಲ ವಿಕೃತ ಮನಸ್ಸುಗಳು ಈ ಬಗ್ಗೆ ಅಪಪ್ರಚಾರ ನಡೆಸುತ್ತಿರುವುದು ನಿಜಕ್ಕೂ ಶೋಭೆ ತರುವಂತಹದ್ದಲ್ಲ. ಸಭೆಯಲ್ಲಿ ಭಾಗವಹಿಸಿದ ದಾರಿಮಿಯವರನ್ನು ಅವರು ಕೆಲಸ ಮಾಡುತ್ತಿರುವ ಸ್ಥಳದಿಂದ ಕಿತ್ತು ಹಾಕಬೇಕೆಂಬ ಕೂಗು ಸಹ ಆ ಪರಿಸರದಲ್ಲಿ ಎಬ್ಬಿಸಲಾಗಿದೆ . ಇವೆಲ್ಲಾ ನೋಡಿದರೆ ಎಲ್ಲೋ ಕೆಲ ಮೂಲಭೂತವಾದಿ ಮನಸ್ಸುಗಳು ಇನ್ನೂ ಸಮಾಜದ ಮುಖ್ಯವಾಹಿನಿಗೆ ಬರಲು ಬಾಕಿಯಿರುವುದು ಸ್ಪಷ್ಟವಾಗಿ ಮನದಟ್ಟಾಗುತ್ತಿದೆ. ಇಂತಹ ಮೂಲಭೂತವಾದಿ ಮನಸ್ಸುಗಳು ಬದಲಾಗಬೇಕಿದೆ. ಹಾಗೆ ಬದಲಾದಾಗ ಮಾತ್ರ ಸಾಮರಸ್ಯದ ಸಮಾಜ ನಿರ್ಮಾಣವಾಗಲು ಸಾಧ್ಯ .

========================

ನಲ್ನುಡಿಯ ಸಂಪಾದಕರಾದ ದಿನೇಶ್ ಕುಮಾರ ಅವರ ಫೇಸ್ ಬುಕ್ ವಾಲ್ ನಲ್ಲಿ ಪ್ರಸ್ತಾಪಿತವಾದ ಕೆಲವು ಉತ್ತಮ ಕಾಮೆಂಟುಗಳು

ಡಾ.ವಿ.ಎಸ್.ಆಚಾರ್ಯ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಮುಸ್ಲಿಂ ಮುಖಂಡರ ವಿರುದ್ಧ ಕೆಲ ಧಾರ್ಮಿಕ ಕಟ್ಟರ್ ವಾದಿಗಳು ಕಿಡಿಕಿಡಿಯಾಗಿದ್ದಾರೆ. ಇದರ ವಿರುದ್ಧ ವಿಕೆ ನ್ಯೂಸ್ ಪ್ರಕಟಿಸಿದ ಮೂಲಭೂತವಾದಿಗಳ ಮನಸ್ಸು ಬದಲಾಗಲಿ ಎಂಬ ಲೇಖನಕ್ಕೆ ನಿರೀಕ್ಷೆಯಂತೆ ಕೆಲ ಮುಸ್ಲಿಂ ಮೂಲಭೂತವಾದಿಗಳ ವಿರೋಧ ಎದ್ದಿದೆ. ಅಶ್ರಫ್ ಮಂಜ್ರಾಬಾದ್ ಮತ್ತು ಗೆಳೆಯರು ನಡೆಸುವ ವಿಕೆ ನ್ಯೂಸ್ ದಮನಿತರ ದನಿಯಾಗಿ ಕಾರ್ಯ ನಿರ್ವಹಿಸುತ್ತ ಬಂದಿದೆ. ಆ ಗೆಳೆಯರಿಗೆ ನನ್ನ ಮತ್ತು ನನ್ನಂತೆ ಯೋಚಿಸುವ ಎಲ್ಲರ ಬೆಂಬಲವೂ ಇದೆ. ದಬ್ಬಾಳಿಕೆಯಿಂದ, ದೌರ್ಜನ್ಯದಿಂದ ಯಾರ ಧ್ವನಿಯನ್ನೂ ಕಿತ್ತುಕೊಳ್ಳಲಾಗದು. ಕಾಲ ಬದಲಾದಂತೆ ಧರ್ಮಗಳೂ ಪರಿಷ್ಕಾರಗೊಳ್ಳಬೇಕು. ಇಲ್ಲವಾದಲ್ಲಿ ಅವು ಕೊಳೆಯುತ್ತವೆ, ಅನುಸರಿಸುವ ಮನಸ್ಸುಗಳೂ ಕೊಳೆಯುತ್ತವೆ. ಆಯಾಯ ಧರ್ಮಗಳ ಕೊಳೆಯನ್ನು ಆಯಾ ಧರ್ಮದ ಅನುಯಾಯಿಗಳೇ ತೊಳೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಒಟ್ಟು ಸಮಾಜವೇ ಕೊಳೆಯುತ್ತದೆ. ವಿಕೆ ನ್ಯೂಸ್ ಬಳಗದ ವಿರುದ್ಧ ಹರಿಹಾಯುತ್ತಿರುವವರ ಮನಸ್ಸು ತಿಳಿಯಾಗಲಿ, ಇದು ನನ್ನ ಹಾರೈಕೆ. ಹಾಗೆಯೇ ಅಬ್ದುಲ್ ಹಮೀದ್, ಅಶ್ರಫ್ ಮಂಜ್ರಾಬಾದ್ ಅವರಿಗೆ ನನ್ನ ನೈತಿಕ ಬೆಂಬಲವಿರುತ್ತದೆ. ನಿಮ್ಮ ಬೆಂಬಲವೂ ಅವರಿಗಿರಲಿ ಎಂಬುದು ನನ್ನ ಮನವಿ.

ಮಹಮದ್ದೀಯರಲ್ಲಿ ಸಂಪೂರ್ಣ ಸಮತ್ವವಿರಬೇಕು, ಸಹೋದರ ಭಾವವಿರಬೇಕು ಎಂಬುದನ್ನು ಮಹಮ್ಮದರು ತಮ್ಮ ಜೀವನದಲ್ಲಿ ತೋರಿದರು. ಅಲ್ಲಿ ಜನಾಂಗ, ಜಾತಿ, ಬಣ್ಣ, ಲಿಂಗ ಇವುಗಳ ವ್ಯತ್ಯಾಸವೇ ಇಲ್ಲ. ಇಸ್ಲಾಂ ತಮ್ಮ ತನ್ನ ಮತಾನುಯಾಯಿಗಳನ್ನೆಲ್ಲ ಸಮದೃಷ್ಟಿಯಿಂದ ನೋಡುವುದು. ಸೋದರತ್ವ, ಸಮಾನತೆಯೇ ಇಸ್ಲಾಂ ಧರ್ಮದ ತಿರುಳು… ಹೀಗೆ ಹೇಳಿದವರು ಸ್ವಾಮಿ ವಿವೇಕಾನಂದರು. ಕುರಾನ್ ಅಕ್ಷರಶಃ ಆಚರಣೆಗೆ ಬರುವುದಾದರೆ ಅದು ಹೇಳುವ ಸಮತ್ವ ಆಚರಣೆಗೆ ಬರಬೇಕು. ಯಾಕೆ ಒಂದು ಹೊತ್ತಿಗೂ ಗತಿಯಿಲ್ಲದ ಕೋಟ್ಯಂತರ ಮುಸ್ಲಿಮ್ ನಾಗರಿಕರಿರುವ ಸಂದರ್ಭದಲ್ಲೇ ಅತಿಶ್ರೀಮಂತರೂ ಈ ಸಮುದಾಯದಲ್ಲಿ ಇದ್ದಾರೆ. ಯಾಕೆ ಅವರು ತಮ್ಮ ಹಣವನ್ನು ದರಿದ್ರರಿಗೆ ಹಂಚುತ್ತಿಲ್ಲ. ಜನಾಬ್ ಹಾಫೀಜರಂಥವರು ಯಾಕೆ ಈ ವಿಷಯಗಳಲ್ಲಿ ಪವಿತ್ರ ಕುರಾನ್ ಉಲ್ಲೇಖಿಸುವುದಿಲ್ಲ. ಯಾಕೆ ಅವರು ಈ ವಿಷಯಗಳಲ್ಲಿ ಜಾಹೀಲು ಆಗಿಬಿಡುತ್ತಾರೆ?

– ದಿನೇಶ್ ಕುಮಾರ್, ಕ.ರ.ವೇ ನಲ್ನುಡಿ

ಕುಂದಾಪುರದಲ್ಲಿ ನಮ್ಮದೊಂದು ‘ಸಹಮತ’ ಎಂಬ ಹೆಸರಿನ ಸಂಘಟನೆ ಇದೆ. ‘ಶಾಂತಿ, ಸಮಾನತೆ ಮತ್ತು ಸಾಮರಸ್ಯಕ್ಕಾಗಿ’ ಎಂಬುದು ಅದರ ಧ್ಯೇಯ ವಾಕ್ಯ. ಪ್ರತಿ ವರ್ಷ ನಾವು ಸೌಹಾರ್ದ ದೀಪಾವಳಿ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತೇವೆ. ದೀಪಾವಳಿಯ ನೆವದಲ್ಲಿ ಊರಿನ ವಿವಿಧ ಸಮುದಾಯದ ಜನರು ಒಂದೆಡೆ ಸೇರಿ ಬೆಳಕಿನ ಹಬ್ಬವನ್ನು ಆಚರಿಸುವುದು, ಅತಿಥಿಗಳು ಸಹಬಾಳ್ವೆ ಮತ್ತು ಸಾಮರಸ್ಯದ ಕುರಿತು ಆಡುವ ಮಾತುಗಳನ್ನು ಕೇಳುವುದು, ವಿವಿಧ ಸಮುದಾಯಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಡುವುದು ಇತ್ಯಾದಿ ಅಲ್ಲಿ ನಡೆಯುತ್ತದೆ. ಒಮ್ಮೆ ಈ ಸೌಹಾರ್ದ ದೀಪಾವಳಿಗೆ ಸ್ಥಳಿಯ ಮಸೀದಿಯ ಧರ್ಮಗುರುವೊಬ್ಬರನ್ನು ಕರೆದಿದ್ದೆ. ಬೆಳಕಿನ ಹಬ್ಬವನ್ನು ದೀಪಬೆಳಗಿಸಿ ಉದ್ಘಾಟಿಸುವುದಿತ್ತು. ಮುಖ್ಯ ಅತಿಥಿಯಾಗಿದ್ದ ಕನ್ನಡದ ಬರಹಗಾರ್ತಿಯೋರ್ವರು, ಸ್ಥಳೀಯ ಚರ್ಚ್ನ ಪಾದ್ರಿ ಮತ್ತು ಮೌಲ್ವಿಯವರು ಒಟ್ಟಾಗಿ ದೀಪಬೆಳಗಿಸಬೇಕೆಂಬುದು ನಮ್ಮ ಆಶಯವಾಗಿತ್ತು. ಆದರೆ ಮೌಲ್ವಿಯವರು ದೀಪ ಬೆಳಗಲು ನಿರಾಕರಿಸಿದರು, ಮಾತ್ರವಲ್ಲ ಇತರರು ದೀಪ ಬೆಳಗುವಾಗ ಫೋಟೋ ತೆಗೆಯುವ ಸಮಯದಲ್ಲೂ ಅವರು ತಮ್ಮ ಮುಖ ಬಾರದಂತೆ ಬಹಳ ಎಚ್ಚರ ವಹಿಸುತ್ತಿದ್ದುದು ನನಗೆ ಕಂಡುಬಂತು.
ನನ್ನ ಪ್ರಶ್ನೆ ಇಷ್ಟೆ. ಸ್ವಾಮಿ, ನೀವು ಮನೆಯಲ್ಲಿ ದೀಪ ಬೆಳಗುವುದೇ ಇಲ್ಲವಾ? ಕರೆಂಟ್ ಬರುವ ಮುಂಚೆ ಬುಡ್ಡಿ ದೀಪಗಳನ್ನು ನೀವೆಂದೂ ಹಚ್ಚಲಿಲ್ಲವೆ? ಈಗಲೂ ಕರೆಂಟ್ ಹೋದಾಗ ಚಿಮಣಿ, ಮೊಂಬತ್ತಿಗಳನ್ನು ಬೆಳಗುವುದಿಲ್ಲವೆ? ಕರೆಂಟ್ ದೀಪಗಳನ್ನು ಬೆಳಗಲು ಸ್ವಿಚ್ ಅದುಮುವುದಿಲ್ಲವೆ? ಹೀಗೆಲ್ಲ ಇರುವಾಗ ಒಂದು ದೀಪ ಬೆಳಗಿಸಿ ಉದ್ಘಾಟನೆ ಮಾಡಿದ್ದರೆ ಅದೇನು ದೊಡ್ಡ ಪ್ರಳಯವಾಗುತ್ತಿತ್ತು? ಇಂಥವರನ್ನೆಲ್ಲ ಕಟ್ಟಿಕೊಂಡು ಏನು ಸೌಹಾರ್ದದ ಮಾತಾಡುವುದು? ಯಾವ ಸಹಬಾಳ್ವೆಯ ಸಂದೇಶ ನೀಡುವುದು? ಯಾವಾಗ ಇವರು ಸುಧಾರಿಸುವುದು?

– ಶಶಿಧರ್ ಹೆಮ್ಮಾಡಿ

ಆಚಾರ್ಯರ ಫೋಟೋಗೆ ಹೂವು ಹಾಕಿದ್ದು ‘ಧರ್ಮ ವಿರೋಧಿ’ಯಾಗುವುದು ಹಾಗೆಯೇ ದೀಪ ಹಚ್ಚುವುದಿಲ್ಲ ಎಂದು ಹೇಳುವುದು ಎರಡೂ ಒಂದಲ್ಲ. ಈ ಎರಡನ್ನೂ ಭಿನ್ನವಾಗಿ ಕಾಣುವ ಅಗತ್ಯವಿದೆ. ಆಚಾರ್ಯರ ಫೋಟೋಗೆ ಒಬ್ಬರು ಹೂವು ಹಾಕುವ ಕ್ರಿಯೆ ಧರ್ಮವಿರೋಧಿಯೆನ್ನುವುದರ ಹಿಂದೆ ಇರುವುದು ಈ ಕ್ರಿಯೆ ಮೂರ್ತಿ ಪೂಜೆಗೆ ಸಮಾನ ಎಂಬುದು. ಹೂಹಾಕುವ ಕ್ರಿಯೆ ಪೂಜೆಯೆಂದೋ ಅರ್ಚನೆಯೆಂದೋ ಆರಾಧನೆಯೆಂದೋ ಭಾವಿಸದಿದ್ದರೆ ಅಥವಾ ಅಂಥದ್ದೊಂದು ಸಂಕಲ್ಪ ಹೂ ಹಾಕುವವನಲ್ಲಿ ಇಲ್ಲವಾದರೆ ಸಮಸ್ಯೆಯಿಲ್ಲ.ಇನ್ನು ಹೂ ಹಾಕುತ್ತಿರುವ ಫೋಟೋ ನೋಡಿ ಅವರು ಧರ್ಮ ವಿರೋಧಿ ಕಾರ್ಯ ಮಾಡಿದರು ಎಂದು ಯಾರಾದರೂ ವಿವಾದ ಸೃಷ್ಟಿಸಲು ಹೊರಟಿದ್ದರೆ ಅದನ್ನು ನಿರ್ಲಕ್ಷಿಸುವುದು ಮೇಲು. ಅವರಿಗೆ ಧರ್ಮದ spirit ಬೇಕಾಗಿಲ್ಲ. ಅಂಥವರನ್ನು ಯಾರಿಗೂ ತಿದ್ದಲು ಸಾಧ್ಯವಿಲ್ಲ. ಕರ್ಮಶಾಸ್ತ್ರದ ಚರ್ಚೆ ಮಾಡುತ್ತಾ ಕಾಲ ಕಳೆಯುವ ಈ ಮಂದಿಯನ್ನು ಛೇಡಿಸಿ ಮಣಿಸಬೇಕೇ ಹೊರತು ಅವರೊಂದಿಗೆ ಗಂಭೀರ ಚರ್ಚೆಗೆ ಇಳಿಯುವುದರಲ್ಲಿ ಯಾವ ಅರ್ಥವೂ ಇಲ್ಲ. ಇನ್ನು ಯಾರೋ ಒಬ್ಬರು ಮೌಲ್ವಿ ದೀಪ ಬೆಳಗಿಸಲು ಒಪ್ಪಲಿಲ್ಲ ಎಂದಾದರೆ ಸಮಸ್ಯೆ ಮೌಲ್ವಿಯದ್ದಲ್ಲ- ಅವರನ್ನು ಕರೆದವರದ್ದು! ಒಬ್ಬ ವೈಯಕ್ತಿಕವಾಗಿ ತಾನು ದೀಪ ಬೆಳಗಿಸುವ ಮೂಲಕ ಧರ್ಮ ಬಾಹಿರವಾದ ಕ್ರಿಯೆಯೊಂದನ್ನು ಮಾಡುತ್ತಿದ್ದೇನೆ ಎಂದು ಭಾವಿಸುತ್ತಿದ್ದರೆ ಅವನನ್ನು ದೀಪ ಬೆಳಗಿಸಬೇಕೆಂದು ಒತ್ತಾಯಿಸುವುದು ಸರಿಯಲ್ಲ. ‘ಸಹಮತ’ ಮುಂದಿನ ಸಾರಿ ದೀಪ ಬೆಳಗಿಸಲು ಒಪ್ಪುವ ಮೌಲ್ವಿಯೊಬ್ಬರನ್ನು ಕರೆಯಬಹುದು. ಇಸ್ಲಾಮಿನಲ್ಲಿ ಪೌರೋಹಿತ್ಯಕ್ಕೆ ಸ್ಥಾನವೇ ಇಲ್ಲದಿರುವುದರಿಂದ ದೀಪ ಬೆಳಗಿಸಿಯೂ ತಮ್ಮ ಇಸ್ಲಾಮ್ ಉಳಿಸಿಕೊಳ್ಳುವ ಬಹಳ ಮಂದಿ ಕುಂದಾಪುರದಲ್ಲೇ ಇದ್ದಾರೆ ಅವರನ್ನು ಕರೆಯುವ ನನ್ನ ಸಲಹೆಗೆ ಶಶಿಧರ್ ಅವರ ಸಹಮತವಿದೆ ಎಂದು ಭಾವಿಸುತ್ತೇನೆ.

ಪ್ರಿಯ ಇಮ್ತಿಯಾಝ್, ಹೂವು ಹಾಕುವ ಕ್ರಿಯೆ ಮೂರ್ತಿ ಪೂಜೆಗೆ ಎಡೆ ಮಾಡಿಕೊಡಬಹುದು ಎಂಬ ನಿಮ್ಮ ವಾದ ತಾನೇ. ಹಾಗಿದ್ದರೆ ಮದುವೆಯಾಗಬಾರದು-ಏಕೆಂದರೆ ಅದು ಡೈವೋರ್ಸ್‌ಗೆ ಎಡೆ ಮಾಡಿಕೊಡಬಹುದು. ಹಾಗೆಯೇ ಊಟ ಮಾಡಬಾರದು-ಅಜೀರ್ಣಕ್ಕೆ ಎಡೆ ಮಾಡಿಕೊಡಬಹುದು. ಮಾತನಾಡಬಾರದು-ಅದು ಯಾರದ್ದಾದರೂ ಮನಸ್ಸನ್ನು ನೋಯಿಸಬಹುದು….ನಷ್ಟವಿಲ್ಲದ ಧಾರ್ಮಿಕ ಕ್ರಿಯೆ ಅಂದರೆ ಏನು ಎಂದು ನನಗೆ ಅರ್ಥವಾಗಲಿಲ್ಲ. ಇನ್ನು ಗುಲ್ಲೆಬ್ಬಿಸಿದ್ದು ಯಾರು? ಒಬ್ಬನ ಇಚ್ಛೆಗೆ ವಿರುದ್ಧವಾಗಿ ಏನನ್ನಾದರೂ ಮಾಡಿಸುವುದು ಈ ನೆಲದ ಕಾನೂನಿನ ಪ್ರಕಾರ ತಪ್ಪು. ರಾಷ್ಟ್ರಗೀತೆ ಹಾಡುವುದನ್ನೂ ಕೂಡಾ ಕಡ್ಡಾಯಗೊಳಿಸಲು ಸಾಧ್ಯವಿಲ್ಲ ಎಂದು ಜೆಹೋವಾನ ಸಾಕ್ಷಿಗಳು ಸಂಘಟನೆಯ ವಿರುದ್ಧದ ಪ್ರಕರಣವೊಂದರಲ್ಲಿ ಸರ್ವೋಚ್ಛ ನ್ಯಾಯಲಯ ಹೇಳಿದೆ. ಆದರೆ ಯಾರಾದರೂ ಒಬ್ಬ ಸ್ವ ಇಚ್ಛೆಯಿಂದ ಏನನ್ನಾದರೂ ಮಾಡಿದರೆ ಧಾರ್ಮಿಕ ಕಾರಣಗಳನ್ನು ಮುಂದೊಡ್ಡಿ ಅದನ್ನು ವಿರೋಧಿಸುವುದೂ ತಪ್ಪೇ. ಇದು ಮಾತ್ರ ಇಸ್ಲಾಮ್, ಇಂಥ ಆಚರಣೆಗಳು ಮಾತ್ರ ಇಸ್ಲಾಮ್ ಎಂದು ಯಾರು ತೀರ್ಮಾನಿಸಬೇಕು? ಆಸ್ತಿಕ ವಾದವನ್ನೇ ಮುಂದಿಡುವುದಾದರೆ ಅದನ್ನು ತೀರ್ಮಾನಿಸಬೇಕಾಗಿರುವುದು ಅಲ್ಲಾಹ್. ಅವನು ಎಲ್ಲವನ್ನೂ ಕಾಣುವವನೂ ಅರಿಯವವನೂ ಆಗಿದ್ದಾನೆ. ಸರಿಯಿಲ್ಲದೇ ಇರುವುದನ್ನು ತಡೆಯಲೂ ಅವನು ಶಕ್ತನೇ. ಅಲ್ಲಾಹುವಿಗೆ ನಮ್ಮ ಸಹಾಯದ ಅಗತ್ಯವಿಲ್ಲ. ಈಗ ಸಹಾಯ ಬೇಕಿರುವುದು ನಮಗೆ. ನಮ್ಮ ಮನಸ್ಸುಗಳನ್ನು ಶುದ್ಧಗೊಳಿಸಿಕೊಳ್ಳಲು. ನಮ್ಮ ಗ್ರಹಿಕೆಗಳನ್ನು ವಿಶಾಲಗೊಳಿಸಲು ನಮ್ಮ ಬದುಕನ್ನು ಹಸನುಗೊಳಿಸಲು. ಅವನಂತೂ ಯಾರದ್ದೋ ಫೋಟೋಕ್ಕೆ ಹೂ ಹಾಕಿದ ಇಸ್ಲಾಮಿನ ಅನುಯಾಯಿಯನ್ನು ಖಂಡಿತಾ ನರಕಕ್ಕೆ ಕಳುಹಿಸಲಾರ ಎಂಬುದು ನನ್ನ ನಂಬಿಕೆ.

ಮೊಹಮ್ಮದ್ ಹಫ಼ೀಜ್, ಇಂಥದ್ದೇ ಇಸ್ಲಾಮ್ ಎಂಬುದನ್ನು ಹೇಳುವುದಕ್ಕೆ ಯಾರಿಗಾದರೂ ಅರ್ಹತೆ ಇದೆಯೇ..? ಶರೀಯಾ ಕಾನೂನನ್ನು ವ್ಯಾಖ್ಯಾನಿಸುವುದಕ್ಕೆ ಸಂಬಂಧಿಸಿದಂತೆ ಭಿನ್ನ ವಿಚಾರಧಾರೆಗಳಿವೆ-ಸಾಮಾನ್ಯರ ನಡುವೆ ಅಲ್ಲ, ವಿದ್ವಾಂಸರ ನಡುವೆ ಕೂಡಾ- ಇಜ್ತಿಹಾದ್ ಮತ್ತು ಇಜ್ಮಾದ ಹಾದಿಯನ್ನು ಬಿಟ್ಟು ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಳ್ಳುವ ಪ್ರವೃತ್ತಿಯಿಂದ ಇಸ್ಲಾಮಿನ ಸಂದೇಶವೇ ಮರೆತು ಕರ್ಮಶಾಸ್ತ್ರದ ಪ್ರಶ್ನೆಗಳಷ್ಟೇ ಮುಖ್ಯವಾಗುತ್ತಿವೆ. ಒಂದು ಮಾತಂತೂ ನಿಜ. ನಾವು ಮನುಷ್ಯರು ಅಲ್ಲಾಹುವನ್ನೂ ಆತನ ಸಂದೇಶಗಳನ್ನೂ ನಮ್ಮ ಮಟ್ಟಕ್ಕೆ ಇಳಿಸಿಕೊಂಡು ಗ್ರಹಿಸುತ್ತಿದ್ದೇವೆ. ಕ್ಷಮಾಶೀಲನೂ ಎಲ್ಲವನ್ನೂ ಅರಿತವನೂ ಆದ ಅವನಿಗಷ್ಟೇ ಎಲ್ಲವೂ ತಿಳಿದಿರುವುದು. ಇನ್ಯಾರಿಗಾದರೂ ನಿಮಗೆ ತಿಳಿದಿಲ್ಲ ಆದ್ದರಿಂದ ನಿಮ್ಮೊಂದಿಗೆ ಚರ್ಚಿಸುವುದಿಲ್ಲ ಎಂದು ಹೇಳುವುದು ಇಸ್ಲಾಮಿನ ಮೂಲ ತತ್ವಕ್ಕೇ ಮಾಡುವ ಅವಮಾನ.

– ಎನ್.ಎ ಮೊಹಮ್ಮದ್ ಇಸ್ಮಾಯಿಲ್, ಪ್ರಜಾವಾಣಿ ದೈನಿಕ

ನಾನು ನೂರಾರು ದೇವಸ್ಥಾನಗಳಿಗೆ ಹೋಗಿದ್ದೇನೆ. ಅದೇ ರೀತಿ ಮಸೀದಿಗಳಿಗೂ ಹೋಗಿ ಹಬ್ಬಹರಿದಿನಗಳವೇಳೆ ಟೊಪ್ಪಿಹಾಕಿ ನಮಾಜ್ ಮಾಡಿದ್ದೇನೆ. ಚರ್ಚ್ ಗಳಿಗೆ ಹೋಗಿ ಕ್ಯಾಂಡಲ್ ಕಚ್ಚಿದ್ದೇನೆ. ಬೌದ್ಧಮಂದಿರಗಳಲ್ಲಿ ಪ್ರಾರ್ಥನೆ ಮಾಡಿದ್ದೇನೆ.ನಾವೆಲ್ಲಿ ಇರುತ್ತೇವೋ ಅಲ್ಲಿಯ ಆಚರಣೆಗಳಲ್ಲಿ ಮನಸ್ಸಿಗೆ ಒಪ್ಪೋದನ್ನು ಮಾಡೋದರಲ್ಲಿ ತಪ್ಪಿಲ್ಲ ಅನಿಸಿದೆ ನನಗೆ ವೈಯುಕ್ತಿಕವಾಗಿ.ಹಿಂದೂ ಸಂಪ್ರದಾಯದಂತೆ ಮುಸಲ್ಮಾನರಲ್ಲೂ ಮದುವೆ..ದರ್ಗಾಪೂಜೆ…ಸಾವಿನ ಸಂದರ್ಭದಲ್ಲಿ ಕಫಾನ್..ಮಸೀದಿವತಿಯಿಂದ ಆಚರಿಸುವ ಸಭೆ ಸಮಾರಂಭಗಳಲ್ಲೂ ಹೂವನ್ನು ಬಳಸುತ್ತಾರೆ. ನನಗೆ ಅರಿವಿದ್ದಂತೆ ಮುಸಲ್ಮಾನರಲ್ಲೂ ಮದುವೆ ಸಂದರ್ಭ ಹೂ ಮುಡಿಸುವ ಶಾಸ್ರಕೂಡ ಬಹುಮುಖ್ಯವಾದದ್ದು. ನನ್ನೂರಿನವರೇ ಆದ ಜಾನಪದ ಜಂಗಮ ಎಸ್ ಕೆ ಕರೀಂಖಾನ್ ನಿಧನದ ಬಳಿಕ ಆಯೋಜಿಸಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಹಿಂದೂ ಮುಸಲ್ಮಾನ ಕ್ರೈಸ್ತ ಬೌಧ್ಧ ಇವ್ಯಾವ ಹಂಗೂ ಇಲ್ಲದೇ ಎಲ್ಲರೂ ಪುಷ್ಪ ನಮನ ಸಲ್ಲಿಸಿಯೇ ಶ್ರದ್ದಾಂಜಲಿ ಅರ್ಪಿಸಿದ್ದೇವೆ. ಪುಷ್ಪನಮನದ ಶ್ರದ್ದಾಂಜಲಿ ದೊಡ್ಡ ಸಂಗತಿಯೇ ಅಲ್ಲ.

– ಜ್ನಾನೇಂದ್ರ ಕುಮಾರ್

ದೇವಸ್ಥಾನದ ಮುಂದೆ, ಚರ್ಚುಗಳ ಮುಂದೆ, ಮಸೀದಿಗಳ ಮುಂದೆ ಹೊಟ್ಟೆ ಹಸಿವಿಗೆ ಬೇಡಲು ಕುಳಿತ ಪರಿತ್ಯಕ್ತರು, ಅಂಗವಿಕಲರು, ಬಡವರು, ರೋಗಿಗಳು, ಅಶಕ್ತರು.. ಇವರ ಪಾಲಿಗೆ ಜಗತ್ತಿನ ಎಲ್ಲ ಧರ್ಮಗಳೂ ಸತ್ತು ಹೋಗಿವೆ. ಹೊಟ್ಟೆ ಹಸಿವಷ್ಟೇ ಅವರ ಧರ್ಮ. ಹಸಿವು ಅನ್ನೋ ಮೂಲಧರ್ಮವನ್ನ ಮಾತಾಡಿಸದ ಎಲ್ಲ ಧರ್ಮಗಳು ಇನ್ನೇನು ಸಾಧನೆ ಮಾಡುತ್ತವೋ ನನಗಂತೂ ಗೊತ್ತಿಲ್ಲ. ಯಾರದ್ದೋ ಫೋಟೋಗೆ ಇನ್ಯಾರೋ ಹಾರ ಹಾಕಿದರು, ಯಾವುದೋ ಪ್ರತಿಮೆಗೆ ಚಪ್ಪಲಿಹಾರ ಹಾಕಿದರು, ಪ್ರತಿಮೆ ಭಗ್ನಗೊಳಿಸಿದರು ಎನ್ನುವ ಕ್ಷುಲ್ಲಕ ತಕರಾರುಗಳು ಹಸಿದ ಹೊಟ್ಟೆಯ ಜನರ ಬಡತನವನ್ನು ಯಾವತ್ತೂ ಅರ್ಥ ಮಾಡಿಕೊಳ್ಳುವುದಿಲ್ಲ. ಅದನ್ನು ಕಟ್ಟಿಕೊಂಡು ಯಾವ ಧರ್ಮದವರಿಗೆ ಏನುಪಯೋಗ. ಧರ್ಮ ಅದು ಹಿಂದೂವಾಗಲೀ ಮುಸ್ಲಿಂ ಆಗಲೀ ಕ್ರಿಶ್ಚಿಯನ್ ಆಗಲೀ.. ಎಲ್ಲವೂ ಧರ್ಮಗುರುಗಳ ಪಾದ್ರಿಗಳ ಪುರೋಹಿತರ ಹೊಟ್ಟೆಪಾಡಿನ ಬ್ಯುಸಿನೆಸ್ ಆಗಿ ಕುಳಿತಿವೆ. ಈ ಬ್ಯುಸಿನೆಸ್ ಸೆಂಟರ್ ಗಳಲ್ಲಿ ಹಸಿದ ಹೊಟ್ಟೆಯ ಹರಿದ ಬಟ್ಟೆಯ, ರೋಗರುಜಿನದ ಬಡವರಿಗೆ ಯಾವತ್ತೂ ಪ್ರವೇಶವಿಲ್ಲ.. ಇದಪ್ಪ ಇವತ್ತಿನ ಎಲ್ಲ ಧರ್ಮಗಳು ತಲುಪಿರೋ ಸ್ಥಿತಿ. ಮಾನವತೆಯನ್ನು ಬಿಟ್ಟು ಕಟ್ಟರ್ ಕಾನೂನುಗಳನ್ನು ಮಾತನಾಡುವುದು ಅಸಹ್ಯದ ಪರಮಾವಧಿ.

– ದಯಾನಂದ್ ಟಿ.ಕೆ

ಬಹುಶ ಎಲ್ಲ ಧರ್ಮಗಳ ತಿರುಳು ಮಾನವೀಯತೆ ,ಶಾಂತಿ ಸಹನೆ ಯನ್ನು ಎತ್ತಿ ಹಿಡಿಯುವುದು, ಹುಳುಕುಗಳು ,ಒಪ್ಪಿಕೊಳ್ಳಲು ಸಾಧ್ಯವಿಲ್ಲದ ಅಸಹನೀಯ ಆಚರಣೆಗಳು ಎಲ್ಲ ಧರ್ಮದಲ್ಲೂ ಇಂದಿಗೂ ಜಾರಿಯಲ್ಲಿವೆ ,ಕೆಲವನ್ನು ಸಂಪ್ರದಾಯ ,ಕಟ್ಟುಪಾಡುಗಳ ಹೆಸರಿನಲ್ಲಿ ಪೋಷಿಸಿಕೊಂಡು ಬಂದಿದ್ದರೆ ,ಇನ್ನು ಕೆಲವನ್ನು ಸ್ಥಾಪಿತ ಹಿತಾಸಕ್ತಿಗಳು ಅತ್ಯಂತ ಜಾಣತನದಿಂದ ನೀರೆರೆದು ಪೋಷಿಸುತ್ತಿವೆ . ಬಿಸಿಲಲ್ಲಿ ಬಾಯಾರಿ ಬಂದವನಿಗೆ ಮೊದಲು ನೀರು ಕೊಡಬೇಕು.ಅದು ನಿಜವಾದ ಧರ್ಮ, ಬಹುಶ ಅದೇ ಧರ್ಮ . ಅದು ಬಿಟ್ಟು ನೀನು ಹಿಂದುವಾ ? ಮುಸಲ್ಮಾನನ ? ಕ್ರಿಶ್ಚಿ ಯನ್ನಾ ? ಎಂದು ಕೇಳಿ ನೀರು ಕೊಡುವುದು ಕೌರ್ಯವೆನಿಸುತ್ತದೆ . ನಮ್ಮ ದೈನಂದಿನ ಅಗತ್ಯಗಳನ್ನು ಮೀರಿ ಯಾವ ಧರ್ಮವು ಇಲ್ಲ ,ನಮ್ಮ ನಿತ್ಯದ ಬದುಕಿಗೆ ಪೂರಕವಾಗಿ ಧರ್ಮ ಇರಬೇಕೆ ಹೊರತು ಅದನ್ನು ಮೈಗೆಲ್ಲ ಮೆತ್ತಿಕೊಂಡರೆ ಬದುಕು ಸಹನೀಯವಾಗುತ್ತದೆ ಅಷ್ಟೇ ..

ಶ್ರೇಷ್ಟತೆಯ ವ್ಯಸನಕ್ಕೆ ಬಿದ್ದ ಸನಾತನಿ ಮನಸುಗಳು ಮಾತ್ರ ಧರ್ಮವನ್ನು ಮುಂದಿಟ್ಟುಕೊಂಡು ಲಾಭಾದಾಯಕ ವ್ಯವಹಾರವನ್ನಾಗಿ ಮಾಡಿ ಕೊಳ್ಳಬಲ್ಲರು .ನಮ್ಮಲ್ಲಿ ಸಾರ್ವಜನಿಕವಾಗಿ ಅಸಹ್ಯ ಹುಟ್ಟಿಸುವ ಹಲವಾರು ಆಚರಣೆಗಳಿಗಿಂತ ಹೂ ಇಡುವುದು ,ದೀಪ ಬೆಳಗುವುದು ಎಷ್ಟೋ ಉತ್ತಮವಾದುದು ,ಅಷ್ಟಕ್ಕೂ ಕೆಲವು ಸಂದರ್ಭ ,ಸಮಾರಂಭಗಳಲ್ಲಿ ಅದೊಂದು ಕ್ರಮ ಅಷ್ಟೇ …

-ಗುರುರಾಜ್

* * * * * * * *

ಚಿತ್ರಕೃಪೆ :vk news

Read more from ಲೇಖನಗಳು
7 ಟಿಪ್ಪಣಿಗಳು Post a comment
 1. Nowfal Ahmad
  ಫೆಬ್ರ 24 2012

  ನಿಮ್ಮ ಮನಸ್ಸು ಯಾವಾಗ ಬದಲಾಗುತ್ತೆ ನಿಲುಮೆ ಬಳಗದವರೇ..???

  ಉತ್ತರ
 2. ಸಿದ್ಧರಾಜು
  ಫೆಬ್ರ 24 2012

  ಯಾಕೆ, ನಿಮಗೆ ಲೇಖನ ಓದಿ ಬೇಜಾರಾಯ್ತಾ ನೌಫಾಲು?

  ಸಿದ್ಧರಾಜು ಅಡಿಕೇರಿ

  ಉತ್ತರ
 3. sandesh swaroop
  ಫೆಬ್ರ 24 2012

  nilumeya manassina bagge chinte nimageke gouravanvita nowaff ravare?? Lekhanada begge abhipraya tilisuva ichche iddare tilisi, and nilume team article tumba chennagide, neevu badalago avashyakate illa, munduvarisi..

  ಉತ್ತರ
 4. M Maravanthe
  ಫೆಬ್ರ 24 2012

  ಅಲ್ಪಸಂಖ್ಯಾತರ ಭಾವನೆಗೆ(ಮತ) ಬೆಲೆಕೊಟ್ಟು ಎಲ್ಲಾ ಸಮಾರಂಭಗಳಲ್ಲಿ ಹೂ ಮತ್ತು ದೀಪವನ್ನು ನಿಷೇಧಿಸ ಬೇಕು. ಎನ್ನುವ ಹೋರಾಟವನ್ನು ಕೈಗೆತ್ತಿಗೊಳ್ಳಲು ನಮ್ಮ ಬುದ್ದಿ ಜೀವಿ ಬಂದುಗಳು ಚಿಂತಿಸಬಹುದು. ಏನಂತೀರಿ?

  ಉತ್ತರ
 5. ನಿಶಾಂತ್ ಕುಮಾರ್
  ಫೆಬ್ರ 25 2012

  ಅತ್ಯುತ್ತಮ ಲೇಖನ …. ಗೆಳೆಯರೇ

  ಉತ್ತರ
 6. ಮಾರ್ಚ್ 5 2012

  eE Vishayadalli nilumeya nilumege namma olume ide. naavu nimmondigiddeve.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments