ಸಂಸ್ಕೃತಿ ಸಂಕಥನ – 24 – ಗತ ಕಥೆಯ ಚರಿತ್ರೆ
-ರಮಾನಂದ ಐನಕೈ
ನಾವು ದಿನನಿತ್ಯ ಒಂದಲ್ಲೊಂದು ಸಂದರ್ಭ ದಲ್ಲಿ ಉಲ್ಲೇಖಿಸುವ ಚರಿತ್ರೆ ಅಥವಾ ಹಿಸ್ಟರಿ ಅಂದರೆ ಏನು? ನಾವು ಪಠ್ಯಗಳ ಮೂಲಕ ಚರಿತ್ರೆಯ ಅಭ್ಯಾಸ ಮಾಡುವಾಗ ಹಲವು ವ್ಯಾಖ್ಯೆಗಳನ್ನು ಕಂಠಪಾಠ ಮಾಡಿದ್ದೇವೆ. ಚರಿತ್ರೆ ಅಂದರೆ ಒಂದು ವಿಜ್ಞಾನ. ಏಕೆಂದರೆ ಗತಕಾಲದ ಬಗ್ಗೆ ವೈಜ್ಞಾನಿಕ ವಾಗಿ ಅಧ್ಯಯನ ನಡೆಸಿ ಸೆರೆಹಿಡಿದ ವಾಸ್ತವವೇ ಹಿಸ್ಟರಿ. ಚರಿತ್ರೆ ಅಂದರೆ ಗತಕಾಲದ ರಾಜಕೀಯ. ಚರಿತ್ರೆ ಅಂದರೆ ಗತಕಾಲದ ಸಮಾಜವಿಜ್ಞಾನ. ಹೀಗೆ ಚರಿತ್ರೆಯನ್ನು ಒಂದು ವಸ್ತುನಿಷ್ಠ ವಿಷಯ ಎಂಬಂತೆ ಬಿಂಬಿಸಿಕೊಂಡು ಬಂದಿದ್ದೇವೆ.
ಈಗ ಆಧುನಿಕ ಯುಗದ ನಮ್ಮ ಮನಸ್ಥಿತಿ ಎಲ್ಲಿಗೆ ಬಂದಿದೆ ಎಂದರೆ ಎಲ್ಲ ಗತಕಾಲಕ್ಕೂ ಚರಿತ್ರೆ ಯನ್ನು ಕಟ್ಟಲಾಗುತ್ತಿದೆ. ಚರಿತ್ರೆಗೆ ಸಿಲುಕದ ಗತಕಾಲವನ್ನು ಅವಾಸ್ತವಿಕ ಅಥವಾ ಮೌಢ್ಯ ಎಂದು ಗೇಲಿ ಮಾಡುತ್ತೇವೆ. ಎಲ್ಲ ಗತಕಾಲವೂ ಏಕೆ ಚರಿತ್ರೆ ಯಾಗಲೇಬೇಕು ಎಂಬುದು ನಮ್ಮ ಮುಂದಿರುವ ಪ್ರಶ್ನೆ. ಇದನ್ನು ಅರ್ಥ ಮಾಡಿಕೊಳ್ಳಬೇಕಾದರೆ ನಾವು ಚರಿತ್ರೆ ಅಂದರೆ ಏನು? ಇದು ಯಾವಾಗ ಹುಟ್ಟಿತು ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ.
ಸಾವಿರಾರು ವರ್ಷಗಳ ಹಿಂದೆ ಪ್ರಾಚೀನ ಗ್ರೀಕರಲ್ಲಿ ಎರಡು ವಿಭಿನ್ನ ರೀತಿಯಲ್ಲಿ ಯೋಚಿಸು ವವರು ಒಟ್ಟಿಗೇ ಇದ್ದದನ್ನು ಕಾಣುತ್ತೇವೆ. ಮೊದಲನೆಯವರು ಗ್ರೀಕರ ಕಥೆಗಳನ್ನು ಹಾಗೂ ಪುರಾಣ ಗಳನ್ನು ಕಥಿಸುವ ಸನಾತನ ಸಂಪ್ರದಾಯಕ್ಕೆ ಸೇರಿದ ಲಾವಣಿಕಾರರಾಗಿದ್ದರು. ಅವರು ಕಥೆಗಳನ್ನು ಹೇಳಿಕೊಂಡು ಪಟ್ಟಣದಿಂದ ಪಟ್ಟಣಕ್ಕೆ ಸುತ್ತುತ್ತಿದ್ದರು. ಅವರು ಹೋದಲ್ಲೆಲ್ಲ ಜನರು ಸೇರುತ್ತಿದ್ದರು. ಅವರು ಹೋಮರನಂಥ ಕವಿಗಳ ಕಾವ್ಯವನ್ನು ಹಾಡುವದಷ್ಟೇ ಅಲ್ಲ, ಅವನ್ನು ವ್ಯಾಖ್ಯಾನಿಸುವಾಗ ತಮ್ಮ ಕಾಲದ ಸಾಮಾಜಿಕ ಸಮಸ್ಯೆಗಳಿಗೂ ಸ್ಪಂದಿಸುತ್ತಿದ್ದರು. ಮನುಷ್ಯರು ಮತ್ತು ದೇವತೆಗಳಿಬ್ಬರೂ ಅವರ ಕಥೆಗಳಲ್ಲಿದ್ದರು. ಲಾವಣಿಕಾರರು ಉತ್ಸಾಹದಿಂದ ಅಂಥ ಕಥೆಗಳನ್ನು ಹೇಳುತ್ತಿದ್ದರು. ಹಾಗೂ ಜನರೂ ಮುಗಿಬಿದ್ದು ಕೇಳುತ್ತಿದ್ದರು.
ಅದೇ ಕಾಲದಲ್ಲಿ ಗ್ರೀಕಿನಲ್ಲಿ ಮತ್ತೊಂದು ಗುಂಪೂ ಇತ್ತು. ಅವರನ್ನು ದಾರ್ಶನಿಕರೆಂದು ಕರೆಯು ತ್ತಾರೆ. ಅವರಲ್ಲಿ ಅತ್ಯಂತ ಸುಪ್ರಸಿದ್ಧನಾದವನೆಂದರೆ ಪ್ಲೇಟೋ, ಪ್ಲೇಟೋನಿಗೆ ಲಾವಣಿಕಾರರಾಗಲೀ ಅವರ ಕೆಲಸವಾಗಲೀ, ಹಿಡಿಸುತ್ತಿರಲಿಲ್ಲ. ಅವರು ಜನರ ಭಾವನೆಯನ್ನು ಉದ್ರೇಕಿಸಿ ಜನರನ್ನು ಅವೈಜ್ಞಾನಿಕ ವರ್ತನೆಗೆ ಹಚ್ಚುತ್ತಿದ್ದಾರೆಂದು ಪ್ಲೇಟೋ ಭಾವಿಸಿದ್ದ. ಮಕ್ಕಳಿಗೆ ಕಥೆಗಳನ್ನು, ಪುರಾಣಗಳನ್ನು ಹೇಳಿ ಶಿಕ್ಷಣ ನೀಡುವುದನ್ನು ಆತ ವಿರೋಧಿಸಿದ್ಧ. ಮಕ್ಕಳು ಭವಿಷ್ಯದ ನಾಗರಿಕರು. ಅಂಥವರಿಗೆ ಗತಾಕಾಲದ ಕುರಿತು ಸುಳ್ಳು ಹೇಳಿ. ಅದನ್ನು ತಿರುಚಿ, ಅತಿಶಯೋಕ್ತಿ ಮಾಡಿ ಹೇಳುವು ದಕ್ಕೆ ಆತನ ವಿರೋಧವಿತ್ತು. ಹಾಗಾಗೇ ಪ್ಲೇಟೋ ತನ್ನ ಕನಸಿನ ಆದರ್ಶ ಪ್ರಭುತ್ವದಲ್ಲಿ ಇಂಥ ಎಲ್ಲ ಕವಿಗಳನ್ನು ಲಾವಣಿಕಾರರನ್ನು ನಿಷೇಧಿಸಿ ಗಡಿ ಪಾರು ಮಾಡುವ ಕಾರ್ಯಕ್ರಮವನ್ನಿಟ್ಟುಕೊಂಡಿದ್ದ. ಅಷ್ಟೇ ಅಲ್ಲ, ಲಾವಣಿಕಾರರು ಕೇವಲ ಜನಪ್ರಿಯ ‘ಮಾತುಗಾರರು’ ಎಂದೂ ಉಪೇಕ್ಷಿಸಿದ್ದ.
ಹೀಗೆ ಗ್ರೀಕ್ ಅಥೆನ್ಸ್ ಪಟ್ಟಣದಲ್ಲಿ ಮೇಲಿನ ಎರಡೂ ಪ್ರವೃತ್ತಿಗಳೂ ಪರಸ್ಪರ ವಿರುದ್ಧವಾಗಿದ್ದವು. ಗ್ರೀಕರ ನಂತರ ಬಂದ ರೋಮನ್ನರೂ ಇದನ್ನೇ ಮುಂದುವರಿಸಿಕೊಂಡು ಬಂದರು. ಆದರೆ ಇವರಾರೂ ಚರಿತ್ರೆಯನ್ನು ಕಟ್ಟುವ ಕಲಸ ಮಾಡಲಿಲ್ಲ. ಪ್ಲೇಟೋ ಕೂಡಾ ಮಿಥ್ ಮತ್ತು ಚರಿತ್ರೆಗಳು ಪರಸ್ಪರ ವಿರುದ್ಧವಾದ ಕಲ್ಪನೆಗಳೆಂಬುದಾಗಿ ಪ್ರತಿಪಾದಿಸಿದ. ಭಾವನೆಗಳು ತರ್ಕಕ್ಕೆ ವಿರೋಧಿಯಾಗಿವೆ ಎಂದನು. ತತ್ವಶಾಸ್ತ್ರ ಎಂಬುದು ಮನುಷ್ಯನ ವಿವೇಚನಾಶಕ್ತಿಯನ್ನು ಬೆಳೆಸುತ್ತದೆಯೆಂಬುದು ಅವನ ನಂಬಿಕೆಯಾಗಿತ್ತೇ ವಿನಾ ಸತ್ಯ ಸುಳ್ಳುಗಳು ಅವನ ಜಿಜ್ಞಾಸೆಯಾಗಿರಲಿಲ್ಲ.
ಕೆಲವು ಶತಮಾನಗಳಷ್ಟು ನಂತರ ಯಹೂದ್ಯ ಜನಾಂಗವನ್ನು ನೋಡಿದರೆ ಬೇರೆ ರೀತಿಯಲ್ಲಿದೆ. ಯಹೂದಿಗಳಿಗೂ ಗತಕಾಲದ ಕುರಿತು ಒಂದು ಕಥೆಯಿತ್ತು. ಆದರೆ ಅವರು ಅದೊಂದು ಕಥೆಯೆಂಬಂತೆ ಭಾವಿಸಲಿಲ್ಲ. ಅಂದಿನ ಹಾಗೂ ಇಂದಿನ ಯಹೂದಿಗಳಿಗೆ ಅದೊಂದು ನಿಜವಾಗಿ ನಡೆದ ಸಂಗತಿ. ಅಂದರೆ ಅವರು ಗತಕಾಲದ ಕಥೆಯನ್ನು ಚರಿತ್ರೆಯೆಂಬುದಾಗೇ ನಂಬುತ್ತಾರೆ. ಯಹೂದಿಗಳಂತೆ ಕ್ರಿಶ್ಚಿಯನ್ನರೂ ಕೂಡ ತಮ್ಮ ಗತಕಾಲದ ಕಥೆಯು ಕೇವಲ ತಮ್ಮ ಚರಿತ್ರೆಯಷ್ಟೇ ಅಲ್ಲ, ಅದು ಸಮಸ್ತ ಮಾನವರ ಚರಿತ್ರೆ ಎಂಬುದಾಗಿ ನಂಬಿದ್ದರು. ತಮ್ಮ ಕಥೆಗಳೆಲ್ಲವೂ ನಿಜವಾಗಿಯೂ ಭೂಮಿಯ ಮೇಲೆ ಘಟಿಸಿವೆ ಎಂದು ನಂಬಿದ್ದರು.
ಆದರೆ ರೋಮಿನ ಬುದ್ಧಿಜೀವಿಗಳು ಇದನ್ನು ಒಪ್ಪಲಿಲ್ಲ. ಕ್ರೈಸ್ತರ ಗಾಡ್, ಡೆವಿಲ್ ಹಾಗೂ ನಝ ರೇತ್ನ ಯೇಸು ಮುಂತಾದ ಹೇಳಿಕೆಗಳು ಅವರಿಗೆ ಹಾಸ್ಯಾಸ್ಪದವಾಗಿ ಕಂಡುಬಂದವು. ಯಹೂದಿಗಳ ಮನುಕುಲದ ಚರಿತ್ರೆಯ ಕಥೆಯನ್ನು ಅವರೆಂದೂ ಒಪ್ಪಿಕೊಂಡಿರಲಿಲ್ಲ. ತಮ್ಮ ಗಾಡ್ ಕೇವಲ ಇಚ್ಚಾಶಕ್ತಿಯಿಂದಲೇ ಮನಸ್ಸಿಗೆ ತೋಚಿದ್ದನ್ನೆಲ್ಲ ಸೃಷ್ಟಿಸಿದವನು ಎಂದು ಸಾರುವ ಕ್ರಿಶ್ಚಿಯನ್ನರನ್ನು ಒಂದು ಗಾಂಪರ ಗುಂಪು ಎಂಬುದಾಗಿ ಪರಿಗಣಿಸಿದರು. ಯೇಸುವು ಒಬ್ಬ ಐಂದ್ರಜಾಲಿಕನಾಗಿದ್ದು ತಾನು ಸತ್ತಂತೇ ನಟಿಸಿ ಈ ಮಂದಮತಿಗಳನ್ನು ನಂಬಿಸಿದ್ದಾನೆ. ಏಕೆಂದರೆ ಒಬ್ಬನು ಸತ್ತಮೇಲೆ ವಾಪಸ್ ಬಂದದ್ದನ್ನು ಯಾರೂ ಕೇಳಿರಲಿಲ್ಲ ಎಂಬುದಾಗಿ ಕ್ರಿಶ್ಚಿಯನ್ ಕಥೆಯ ಸತ್ಯವನ್ನೇ ಸಂಶಯಿಸಿದರು.
ಇದರಿಂದ ಇಕ್ಕಟ್ಟಿಗೆ ಸಿಲುಕಿದ ಕ್ರಿಶ್ಚಿಯನ್ನರು ತಾವು ಹೇಳುತ್ತಿರುವುದು ‘ಸತ್ಯವಲ್ಲದೇ ಬೇರೇನೂ ಅಲ್ಲ’ ಎಂದು ಶಪಥ ಮಾಡುವ ನಿರ್ಬಂಧಕ್ಕೆ ಸಿಲುಕಿದರು. ತಮ್ಮದು ಕಥೆಯೂ ಅಲ್ಲ, ಪುರಾಣವು ಅಲ್ಲ, ಅದು ಚರಿತ್ರೆ. ಸಮಸ್ತ ಮಾನವ ಜನಾಂಗದ ಚರಿತ್ರೆ ಎಂದು ಸಾಬೀತು ಮಾಡಲು ಹೊರಟರು. ಈ ರೀತಿ ಕ್ರಿಶ್ಚಿಯಾನಿಟಿ ಪ್ರಥಮ ಬಾರಿಗೆ ಚರಿತ್ರೆ ಕಟ್ಟಲು ಪ್ರಯತ್ನ ಮಾಡಿತು. ಗತಕಾಲದ ಕಥೆ ಸತ್ಯಸುಳ್ಳುಗಳ ಜಿಜ್ಞಾಸೆಯಾಗಿ ಮುಂದೆ ಚರಿತ್ರೆಯಾಗಿ ರೂಪಗೊಂಡಿತು.
ಇಲ್ಲಿ ಮತ್ತೂ ಒಂದು ಸಂದಿಗ್ಧ ಎದುರಾಯಿತು. ಈ ಸೃಷ್ಟಿಯ ಕರ್ತ ಗಾಡ್. ಗಾಡ್ಗೆ ಒಂದು ಉದ್ದೇಶ ಇದೆ ನಿಜ. ಆದರೆ ಈ ಉದ್ದೇಶ ಯಾವುದು? ಈ ಉದ್ದೇಶ ಯಾರಿಗೂ ಗೊತ್ತಿಲ್ಲ. ಬೈಬಲ್ ಕೂಡ ಈ ಉದ್ದೇಶವನ್ನು ಹೇಳುವುದಿಲ್ಲ. ಹಾಗಿದ್ದಾಗ ಉದ್ದೇಶ ಗೊತ್ತಿಲ್ಲದೇ ಅದು ಹೇಗೆ ಚರಿತ್ರೆಯಾಗಲು ಸಾಧ್ಯ? ಅದಕ್ಕೆ ಸೇಂಟ್ಅಗಸ್ಟೈನ ಎಂಬುವನು ಒಂದು ಚರಿತ್ರೆಯ ಸೂತ್ರ ರೂಪಿಸಿದನು.
ಮೂಲದಲ್ಲಿ ಗಾಡ್ನ ಉದ್ದೇಶ ಗೊತ್ತಿತ್ತು. ಆದರೆ ಜನ ಮರೆತಿದ್ದಾರೆ. ಒಂದು ವಸ್ತುಸ್ಥಿತಿಯನ್ನು ಕೂಲಂಕಶವಾಗಿ ಪರಿಶೀಲಿಸಿದಾಗ ಮಾತ್ರ ಉದ್ದೇಶ ತಾನಾಗೇ ಗೊತ್ತಾಗುತ್ತದೆ. ಏಕೆಂದರೆ ಈ ಪ್ರಪಂಚದ ಘಟನಾವಳಿಗಳೆಲ್ಲ ಗಾಡ್ನ ಕೃತಿ. ಆದ್ದರಿಂದ ಅವುಗಳನ್ನು ಅಧ್ಯಯನ ಮಾಡಿದರೆ ಉದ್ದೇಶ ಗೊತ್ತಾಗುತ್ತದೆ. ಜೀವನದ ಅರ್ಥ ಏನು ಎಂದು ಅಧ್ಯಯನ ಮಾಡಿದರೆ ಜೀವನದ ಉದ್ದೇಶ ಗೊತ್ತಾಗುತ್ತದೆ. ಇತಿಹಾಸದ ಘಟನಾವಳಿಗಳಲ್ಲೆಲ್ಲ ದೇವರ ಉದ್ದೇಶ ಸಿಗುತ್ತದೆ. ಬೈಬಲ್ ಮಾತ್ರ ನಿಜವಾದ ಮನುಕುಲದ ಇತಿಹಾಸ ಅಥವಾ ಚರಿತ್ರೆ ಎಂದು ಸ್ಥಾಪಿಸಿದರು.
ಹದಿನಾರು-ಹದಿನೇಳನೇ ಶತಮಾನದ ಸುಧಾರಣಾ ಯುಗದಲ್ಲಿ ಕೆಥೋಲಿಕ್ರಿಗೆ ಸ್ಪಧರ್ಿಗಳಾಗಿ ಪ್ರೊ ಪ್ರೊಟೆಸ್ಟಾಂಟರು ಬಂದರು. ಅವರ ಜೊತೆಗೆ ಸೆಕ್ಯುಲರಿಸಂ ಬಂತು. ಆಧುನಿಕ ವಿಜ್ಞಾನ, ನಿಸರ್ಗ ವಿಜ್ಞಾನ ಮುಂತಾಗಿ ಅನೇಕ ವೈಜ್ಞಾನಿಕ ಅನ್ವೇಷಣೆಗಳಾದವು. ದೇವರ ಅಸ್ತಿತ್ವವನ್ನೂ ನಿರಾಕರಿಸುವ ಪ್ರಸಂಗಬಂತು. ಆಗ ಚರಿತ್ರೆಯಿಂದ ದೇವರನ್ನು ಬದಿಗಿಟ್ಟರು. ದೇವರ ಹೊರತಾಗಿಯೂ ಚರಿತ್ರೆ ಕಟ್ಟಲು ಸಾಧ್ಯ ಅಂದುಕೊಂಡರು. ಘಟನಾವಳಿಗಳನ್ನು ಅದು ಹೇಗಿದೆಯೋ ಹಾಗೆಯೇ ಅಧ್ಯಯನ ಮಾಡಬೇಕು. ಆಗ ಮಾತ್ರ ಚರಿತ್ರೆ ಆಗಲುಸಾಧ್ಯ. ಉಳಿದಿದ್ದೆಲ್ಲ ಕಟ್ಟುಕಥೆಗಳು ಅಂದರು.
ಅಗಸ್ಟೈನ್ ಬೈಬಲ್ಲೇ ನಿಜವಾದ ಇತಿಹಾಸ ಎಂದಿದ್ದನ್ನು ಪ್ರೊಟೆಸ್ಟಾಂಟರು ವಿರೋಧಿಸುತ್ತಾರೆ. ಪವಾಡಗಳ ಕುರಿತಾಗಿ ಇವರ ನಡುವೆ ಜಗಳ ಇತ್ತು. ಕ್ಯಾಥೋಲಿಕ್ ಚಚರ್್ ಈ ಪ್ರಪಂಚದಲ್ಲಿ ಪವಾಡಗಳು ನಡೆದಿವೆಯೆಂದು ನಂಬಿತ್ತು. ಕ್ಯಾಥೋಲಿಕರು ಇವತ್ತಿಗೂ ( ) ವೇಳೆಯಲ್ಲಿ ವೈನ್ ಮತ್ತು ಬ್ರೆಡ್ಗಳು ಕ್ರಿಸ್ತನ ಮಾಂಸ ಮತ್ತು ರಕ್ತಗಳಾಗಿ ಬದಲಾಗತ್ತವೆಯೆಂಬುದಾಗಿ ನಂಬುತ್ತಾರೆ. ಇದನ್ನು ಪ್ರೊಟೆಸ್ಟಾಂಟರು ನಂಬುವುದಿಲ್ಲ. ಪ್ರೊಟೆಸ್ಟಾಂಟ್ ಥಿಯಾಲಜಿಯ ಪ್ರಕಾರ ಮನುಷ್ಯನ ಗತಕಾಲವನ್ನು ಕ್ಯಾಥೋಲಿಕರ ರೀತಿಯಲ್ಲಿ ಅಭ್ಯಸಿಸಬಾರದು. ಮನುಷ್ಯನ ಗತಕಾಲವೂ ಮನುಷ್ಯ ಸಾಧ್ಯವಾದ ಕಾರ್ಯಗಳನ್ನು ಮಾತ್ರವೇ ಒಳಗೊಂಡಿರಬೇಕು. ಮನುಷ್ಯನ ಚರಿತ್ರೆಯಲ್ಲಿ ಅತಿಮಾನುಷವಾದ ಯಾವ ಘಟನೆಗಳೂ ನಡೆಯುವಂತಿಲ್ಲ. ಮನುಕುಲದ ಚರಿತ್ರೆಯು ಮನುಷ್ಯರು ಭ್ರಷ್ಟರಾಗುತ್ತ ಸಾಗಿದ್ದನ್ನು ದಾಖಲಿಸಬಹುದು. ಅದು ಅವರ ಪತನ ಹಾಗೂ ದೋಷಗಳ ಕಥೆಯಾಗಿದೆ. ಮನುಷ್ಯರ ಗತಕಾಲವು ಮನುಷ್ಯ ಮಾತ್ರರ ಸಾಧನೆಗಳ ಸತ್ಯ ದಾಖಲೆಗಳು ಆಗಿರಬೇಕು. ಗತಕಾಲದ ಕುರಿತ ಕಥೆಗಳು ಮನುಷ್ಯನ ಏಳ್ಗೆಯ ದಾರಿಯನ್ನು ತೋರಿಸಲು ಸಾಧ್ಯವಿಲ್ಲ. ಅಂಥ ಕಥೆಗಳು ಕೇವಲ ಸುಳ್ಳುಗಳನ್ನು ಹೇಳಿ ದಾರಿ ತಪ್ಪಿಸುತ್ತವೆ, ಮುಂತಾದ ಅಭಿಪ್ರಾಯಗಳು ಹುಟ್ಟಿಕೊಂಡವು.
ಆದ್ದರಿಂದ ಗಾಡ್ನ ಕೃಪೆಯೇ ಸತ್ಯವಾದ ರಿಲಿಜನ್. ಅದು ಮಾತ್ರವೇ ಮನುಷ್ಯನ ಗತ, ವರ್ತಮಾನ ಹಾಗೂ ಭವಿಷ್ಯದ ತೊಳಲಾಟದಿಂದ ನಮ್ಮನ್ನು ಹೊರಗೆಳೆಯಬಹುದು. ಸುಖವೆಂದ ರೇನು ಹಾಗೂ ಅದನ್ನು ಪಡೆಯುವುದು ಹೇಗೆಂಬುದನ್ನು ತಿಳಿಸುವುದು ಸತ್ಯವಾದ ರಿಲಿಜನ್ನಿನ ಕೆಲಸವಾಗಿದೆ. ಎನ್ಲೈಟನ್ಮೆಂಟ್ ಚಿಂತಕರು ಮನುಷ್ಯನ ಗತಕಾಲದ ಕುರಿತ ಈ ಥಿಯಾಲಜಿಯ ನಿಲುವನ್ನೇ ಪುನರುತ್ಪಾದಿಸಿದರು.
ಚರಿತ್ರೆ ಅಂದರೆ ಗತಕಾಲದ ಕುರಿತು ಬರೆದ ಸತ್ಯ ಸಂಗತಿಯಾಗಿರಬೇಕು. ಸುಳ್ಳು ಬರೆದರೆ ಅದು ಚರಿತ್ರೆಯೂ ಅಲ್ಲ, ನಾಗರಿಕತೆ ಲಕ್ಷಣವೂ ಅಲ್ಲ. ಸತ್ಯಕತೆಯನ್ನು ಬರೆಯುವುದು ಮಾತ್ರ ನಾಗರಿಕತೆಯ ಲಕ್ಷಣ. ಆದ್ದರಿಂದ ಇಂದು ನಾವು ಚರಿತ್ರೆ ಎಂಬುದರ ಕುರಿತು ಯಾವರೀತಿಯ ತಿಳುವಳಿಕೆ ಪಡೆದಿದ್ದೇವೋ ಅವೆಲ್ಲವೂ ಪಾಶ್ಚಾತ್ಯರ ಕಲ್ಪನೆಗಳು. ಮನುಷ್ಯನ ಗತಕಾಲದ ಅಧ್ಯಯನದ ಕುರಿತ ನಮ್ಮ ಕಲ್ಪನೆಗಳೇನಿವೆಯೋ, ಅದನ್ನು ಹೇಗೆ ಮಾಡಲೇಬೇಕೆಂದು ನಂಬಿದ್ದೇವೆಯೋ, ಇವೆಲ್ಲವುಗಳ ಬೇರುಗಳು ಪ್ರೊಟೆಸ್ಟಾಂಟ್ ಕ್ರಿಶ್ಚಿಯಾನಿಟಿಯೊಳಗೆ ಆಳವಾಗಿವೆ. ಇದೇ ಇಂದಿನ ಚರಿತ್ರೆಯ ಲಕ್ಪ್ಷಣಗಳಾಗಿವೆ.
* * * * * * * * *
ಚಿತ್ರಕೃಪೆ : harappa.com