ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 1, 2012

ಬಜೆಟ್ಟಿನ ಸಮಯ

‍ನಿಲುಮೆ ಮೂಲಕ

– ರಾಘವೇಂದ್ರ ಗುಡಿ

ಇನ್ನೇನು ದೂರ ಇಲ್ಲ. ತುಂಬಾ ಸನಿಹದಲ್ಲಿದೆ. ಇನ್ನು ಕೆಲವು ದಿನಗಳು ಕಳೆದರೂ ಸಾಕು ಅನೇಕರಿಗೆ ನಗಲು, ಉಣ್ಣಲು, ಮಲಗಲು, ನೆಂಟರಿಷ್ಟರ ಮನೆಗೆ ಹೋಗಲು ಕೂಡ ಸಮಯವಿರುವುದಿಲ್ಲ! ಅನೇಕರಿಗೆ ರಾತ್ರಿ ನಿದ್ರೆ ಇರುವುದಿಲ್ಲ; ಕೆಲವರಿಗೆ ಇದ್ದಕ್ಕಿದ್ದಂತೆ ದಾನ ಮಾಡುವ ಗುಣ ಹುಟ್ಟುವುದು! ಹಲವರಿಗೆ ತಮಗೂ ಮನೆಯಿದೆ, ಮಡದಿ ಇದ್ದಾಳೆ, ಮಕ್ಕಳು ಇವೆ, ಹಾ ತನ್ನ ಮೇಲೆ ಇವರೆಲ್ಲರೂ ಅವಲಂಬಿಸಿದ್ದಾರೆ, ತನಗೂ ಜವಾಬ್ದಾರಿ ಇದೆ, ಆರೋಗ್ಯವಿದೆ ಅನಾರೋಗ್ಯವೂ ಬರಬಹುದು ಎಂಬುವುದೆಲ್ಲ ನೆನಪಾಗುವ ಸಮಯ!! ನೆನಪಾಗದಿದ್ದರೂ ಅಷ್ಟೇ ಹೋಯಿತು, ತೆರಿಗೆಯನ್ನು ಉಳಿಸಲು ಏನು ಮಾಡಬೇಕು ಎಂಬುವುದೊಂದೆ ಚಿಂತೆ. ಹಾ ಈಗ ಅರ್ಥವಾಗುತ್ತಿದೆಯಾ? ಹಾ ಹೌದು ಮಾರಾಯ್ರೆ ನಿಮ್ಮ ಊಹೆ ನಿಜ, ಮಾರ್ಚ ಬರುತ್ತಿದೆ, ಆದಾಯ ತೆರಿಗೆ ಕಟ್ಟಲು, ಉಳಿಸಲು ಕೊನೆ ಅವಕಾಶ! ಬಹುಷಃ ಈಗ ಅನೇಕರಿಗೆ ಸೆಕ್ಷನ್ ೮೦ಅ, ೮೦ಆ, ೮೦ಉ ಎಂಬವವು ಇವೆ ಎಂಬುವುದು ನೆನಪಾಗುತ್ತಿರುತ್ತೆ. ಇನ್ನು ಕೆಲವು ದಂಡಪಿಂಡ, ಧೂರ್ತ, ಪುಂಡ, ೪೨೦ಗಳು ಅನೇಕ ಇನ್ಸುರೆನ್ಸ್ ಎಜೆಂಟ್‌ಗಳನ್ನು, ಎನ್‌ಜಿಓಗಳನ್ನು ಸಂಪರ್ಕಿಸಿ ನಿಮಗೂ ಸ್ವಲ್ಪ ಹಣವನ್ನು ಕೊಡುತ್ತೇನೆ ನನಗೆ ದಯಮಾಡಿ ಖೊಟ್ಟಿ ರಸೀದಿಗಳನ್ನು ಕೊಡಿ (ಆದಾಯ ತೆರಿಗೆ ಇಲಾಖೆಗೆ ನೀಡಿ, ತೆರಿಗೆ ವಿಮುಕ್ತಿಯನ್ನು ಪಡೆಯಲು) ಎಂದು ಹಲ್ಲು ಗಿಂಜುತ್ತಾ ’ಸೆಟ್ಟಿಂಗ್’ ಮಾಡಲು ಎಡತಾಕಲೂ ಶುರುಮಾಡಬಹುದು. ಇದು ಕೇವಲ ಜನರಿಗೆ ಅಥವ ಸಂಸ್ಥೆಗಳಿಗೆ ಮಾತ್ರವಲ್ಲ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೂ ಸಂಧಿಕಾಲ, ಲವಲವಿಕೆಯ ಕಾಲ!

ಕಳೆದ ಬಾರಿಯ ಬಜೆಟ್ ಪುಸ್ತಕವನ್ನು ಜೋಪಾನವಾಗಿ ಎತ್ತಿ, ಹಿಡಿದಿರುವ ಧೂಳು, ಗೆದ್ದಲುಗಳನ್ನು ಮೃದುವಾಗಿ ಕೊಡವಿ, ಕೆಮ್ಮುತ್ತಾ ಅದನ್ನು ಮೊದಲ ಬಾರಿಗೆ ತೆರೆದು ಅದರಲ್ಲಿರುವ ಕಳೆದ ವರ್ಷದ ಹೊಸ ಯೋಜನೆಗಳ ಆಶ್ವಾಸನೆಗಳನ್ನು ನೆನಪು ಮಾಡಿಕೊಂಡು ಮತ್ತೊಮ್ಮೆ ಭವ್ಯ ಭಾರತದ ದಿವ್ಯ ಪ್ರಜೆಗಳಿಗೆ ಹಳೆ ಬಟ್ಟೆಯಿಂದ ತಯಾರಿಸಿದ ಹೊಸ ಟೊಪ್ಪಿಗೆಯನ್ನು ಹಾಕುವ ಬಗೆಯನ್ನು ಹುಡುಕುವ ಪರ್ವಕಾಲವಿದು!!

ಹೌದು, ಇನ್ನೇನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಜೆಟ್ಟುಗಳು ಸಮೀಪಿಸುತ್ತಿವೆ. ಇವುಗಳ ಕುರಿತಂತೆ ಏನೇನೋ, ಗಾಳಿ ಸುದ್ದಿಗಳು, ಸುಂದರ ಸುಳ್ಳುಗಳು, ಭ್ರಮನಿರಸಗಳೂ, ಅನುದಾನವನ್ನು ಕೋರುವ ಲಾಬಿಗಳು, ಪ್ರತಿಭಟನೆಗಳು, ಟೀಕೆಗಳು, ದೋಷಣೆಗಳು, ಆರೋಪ ಪ್ರತ್ಯಾರೋಪಗಳು, ಬ್ಲ್ಯಾಕ್‌ಮೇಲ್ ತಂತ್ರಗಳು ಶುರು ಆಗುವ ಸಂಕ್ರಾಂತಿ ಇದು. ಮಾತೆತ್ತಿದರೆ ಲಕ್ಷ ಕೋಟಿಗಳು, ಒಂದು ರೂಪಾಯಿಯಲ್ಲಿ ಪೈಸೆ ಲೆಕ್ಕದ ಉದಾಹರಣೆಗಳು, ಆಯವ್ಯಯ ಲೆಕ್ಕಗಳು, ಹೊಸ ಸಾಲದ ಶೂಲಗಳು, ಹಳೆ ಬಾಕಿಯ ರಗಳೆಗಳು, ನಮಗೆ ಉತ್ಪಾದನೆಯ ಮೇಲೆ ತೆರಿಗೆ ವಿನಾಯಿತಿ ನೀಡಿ, ನಮಗೆ ಕನಿಷ್ಠ ಮಿತಿಯಲ್ಲಿ ವಿನಾಯಿತಿ ನೀಡಿ ಎಂಬಂತಹ ಮನವಿಗಳ ಮಹಾಪೂರ ಅರ್ಥ ಸವಿವರುಗಳ ಮೇಜಿಗೆ ಲಗ್ಗೆ ಹಾಕುವ ಬೇಸಿಗೆಯ ಆರಂಭವಿದು.

ಇದೇ ಸಮಯದಲ್ಲಿ ಭಾರತದ ಕಟ್ಟ ಕಡೆಯ ವ್ಯಕ್ತಿಗೂ ಕೆಲವು ಬಯಕೆಗಳಿವೆ, ಹಂಬಲಗಳಿವೆ, ಸ್ವಲ್ಪ ನಿರೀಕ್ಷೆ ಇದೆ, ನಿಮ್ಮಲ್ಲಿ ಮನವಿ ಇದೆ. ಮುಂದಿನದು ಅವನ ಮನದಾಳ…

ನನಗೆ ಲಕ್ಷದ ಲೆಕ್ಕ ಗೊತ್ತಿಲ್ಲ; ಅದೇನೋ ಅಂತಾರಲ್ಲ ಜಿಡಿಪಿ ಅಂತ, ಅದರ ಗೊಡವೆ ನನಗೆ ಬೇಕಿಲ್ಲ. ನೀವು ಯಾರಿಗೆ ತೆರಿಗೆ ವಿನಾಯಿತಿ ನೀಡಬೇಕೋ ಬಿಡಬೇಕೋ ಅದರ ಕುರಿತು ನಾನು ಮಾತನಾಡುವುದಿಲ್ಲ; ನನ್ನ ಮಾತು ನಿಮ್ಮ ಕೋಟೆಯನ್ನು ಬೇಧಿಸಿ ನಿಮ್ಮ ಕಿವಿಯನ್ನು ತಲುಪುವುದಿಲ್ಲ. ಆದರೂ ಅಪ್ಪಿ ತಪ್ಪಿ ನಿಮ್ಮ ಕಿವಿಗೆ ಮುಟ್ಟಬಹುದು ಎಂಬ ದೂರದ ಆಸೆ.

ನಾನು ಮೊದಲೇ ಹೇಳಿದಂತೆ ಭವ್ಯ ಭಾರತದ ಕಟ್ಟಕಡೆಯ ಹಳ್ಳಿಯ ಕಟ್ಟ ಕಡೆಯ ಪ್ರಜೆ ನಾನು. ನನಗೆ ಹಸಿವಾದಾಗ ಹೊಟ್ಟೆಗೆ ಅನ್ನ ಬೇಕು. ನಾನು ದುಡಿಯುತ್ತೇನೆ ಹಾಗಂತ ೧೦೦ ರೂಪಾಯಿಗಳನ್ನು ಕೊಟ್ಟು ಎಣ್ಣೆಯನ್ನು (ತಪ್ಪು ತಿಳಿಯಬೇಡಿ, ನಾನು ಹೇಳುತ್ತಿರುವುದು ನೀವು ಕುಡಿಯುವ ’ಎಣ್ಣೆ’ ಅಲ್ಲ), ೩೬ ರೂಪಾಯಿಗಳನ್ನು ಕೊಟ್ಟು ಸಕ್ಕರೆಯನ್ನು, ೪೫ ರೂಪಾಯಿಗಳನ್ನು ಕೊಟ್ಟು ಬೆಲ್ಲವನ್ನು, ೩೦ ರೂಪಾಯಿಗಳನ್ನು ಕೊಟ್ಟು ಹಾಲನ್ನು, ೧೫ ರೂಪಾಯಿಗಳನ್ನು ಕೊಟ್ಟು ತೆಂಗಿನ ಕಾಯಿಯನ್ನು, ಮುಂತಾದ ಅನೇಕ ದಿನಸಿ ಪದಾರ್ಥಗಳನ್ನು ಖರೀದಿಸುವ ಶಕ್ತಿ ಇಲ್ಲ ಆದರೂ ನಾನು ಮೊದಲೇ ಕೇಳಿದ್ದೇನೆ ನನಗೆ ಹೊಟ್ಟೆ ತುಂಬ ಊಟ ಬೇಕು.

ನಾನೂ ಮನುಷ್ಯನೆಂದ ಮೇಲೆ, ನನಗೂ ತಲೆ ಮೇಲೊಂದು ಸೂರು ಬೇಕೆಂಬ ಆಸೆ, ನೀವೆ ಹೇಳಿ ಎಷ್ಟು ದಿನ ನಾನು ಬಿಸಿಲು, ಮಳೆ ಚಳಿಗೆ ಬರಿ ಮೈಯಲ್ಲಿ ಉತ್ತರವನ್ನು ಕೊಡಲಾದೀತು, ನಾನೇನೋ ಗಂಡಸು ಹೇಗಾದರೂ ತಡೆದುಕೊಂಡೇನು, ಆದರೆ ನನ್ನ ಮಡದಿ ಹೇಗೆ ಬಾಳಿಯಾಳು? ಹೇಗೆ ತಡೆದಾಳು? ಹೌದು ಸ್ವಾಮಿ ನಾನು ಮನುಷ್ಯನಲ್ಲವೇ? ನನಗೂ ಮಡದಿಯಿದ್ದಾಳೆ ಮುದ್ದಾದ ಮಕ್ಕಳಿವೆ. ಇನ್ನೇನು ಅವು ಶಾಲೆಗೆ ಹೋಗುವ ವಯಸ್ಸನ್ನು ಮುಟ್ಟುತ್ತಲಿವೆ. ನನಗೂ ಒಂದು ಕನಸಿದೆ ನನ್ನ ಮಕ್ಕಳಾದರೂ ನನ್ನಂತೆ ಕಷ್ಟ ಪಡದೇ ಚೆನ್ನಾಗಿ ಅವರು ಬಯಸುವವರೆಗೆ ಓದಿ, ಉತ್ತಮವಾದ ನೌಕರಿಯನ್ನು ಹಿಡಿಯಬೇಕು ಎಂಬುವುದು. ಆದರೆ, ನನ್ನ ದುಡಿಮೆಯಲ್ಲಿ ಎಲ್ಲರ ಹೊಟ್ಟೆಯನ್ನೇ ತುಂಬುವುದು ಕಷ್ಟವಾಗಿರುವಾಗ, ಅವರ ಓದಿಗೆಲ್ಲಿಂದ ದುಡ್ಡು ತರಲಿ? ನನ್ನ ಮಕ್ಕಳಿಗೆ ಉಚಿತ ಶಿಕ್ಷಣ ಬೇಕು, ಅವರು ಬಯಸುವವರೆಗೂ. ಹಾ ಇನ್ನೊಂದು ವಿಷಯ, ಶಾಲೆ ಎಲ್ಲಿದೆ? ಇರುವ ಶಾಲೆಯನ್ನೂ ಇವರು ಮಕ್ಕಳು ಬರಲ್ಲ ಎಂದು ಮುಚ್ಚಿದ್ದಾರೆ. ಇರಲಿ ಹೇಗಾದರೂ ಸಂಭಾಳಿಸಿಕೊಂಡು ಪಕ್ಕದ ಊರಿಗೆ ಮಕ್ಕಳನ್ನು ಶಾಲೆಗೆ ಕಳಿಸಲು ನಾನು ಸಿದ್ಧನಿದ್ದೇನೆ, ಆದರೆ ವಾಹನದ ಖರ್ಚನ್ನು ಭರಿಸಲು ನಮ್ಮಿಂದ ಸಾಧ್ಯವೇ? ಅದೇನೋ ಅಂತಾರಲ್ಲ ಡಿಸೆಲ್, ಪೆಟ್ರೋಲ್‌ಗಳ ಬೆಲೆ ಜಾಸ್ತಿಯಾದ ಕಾರಣ ಇವುಗಳ ಟಕೇಟ್ ಬೆಲೆಯೂ ಜಾಸ್ತಿಯಂತೆ. ಹೀಗಾಗಿ ಪೆಟ್ರೋಲ್, ಡಿಸೆಲ್ ಮುಂತಾದವುಗಳ ಬೆಲೆಯನ್ನು ನಿಯಂತ್ರಿಸಿ, ನಮಗೂ ಬಸ್ಸುಗಳನ್ನು ಹತ್ತುವ ಭಾಗ್ಯವನ್ನು ಕಲ್ಪಿಸಿ ಕೊಡುತ್ತಿರಾ?

ನಾವೂ ಮನುಷ್ಯರೆಂದ ಮೇಲೆ ನಮಗೂ ಖಾಯಿಲೆ ಕಸಾಲೆಗಳು ಬರುವುವುದು ಸಹಜವಲ್ಲವೇ? ಅಂದಮೇಲೆ ನಮ್ಮೂರಿನ ದನದ ಕೊಟ್ಟಿಗೆಗೂ ಕಡೆಯಾದ ಸರ್ಕಾರಿ ಆಸ್ಪತ್ರೆಯನ್ನು ಶುದ್ಧೀಕರಿಸಿ ಪುಣ್ಯಕಟ್ಟಿಕೊಳ್ಳುತ್ತೀರಾ?

ನೀವು ನಂಬುತ್ತೀರೋ ಇಲ್ಲವೋ ಗೊತ್ತಿಲ್ಲ, ನಾನು ನನ್ನ ಹೆಂಡತಿ ದಿನಪೂರ್ತಿ ಮೈ ಮುರಿದು ದುಡಿದರೂ, ನಮ್ಮ ಸಂಪಾದನೆ ೧೫೦ ರೂಪಾಯಿಗಳನ್ನು ಮೀರುವುದಿಲ್ಲ, ಸ್ವಲ್ಪ ಹೆಚ್ಚಿಗೆ ಕೊಡಿ ಎಂದು ನಮ್ಮ ಜಮೀನಿನ ಮಾಲಿಕರನ್ನು ಕೇಳಿದರೆ, ಪಾಪ ಅವರಾದರೂ ಹೇಗೆ ಕೊಟ್ಟಾರು? ಅವರು ಬೆಳೆದ ಬೆಲೆಗೆ ಸರಿಯಾದ ಬೆಲೆಯೇ ಸಿಗುವುದಿಲ್ಲ. ಆದರೆ ಮಾರುಕಟ್ಟೆಯಲ್ಲಿ ಮಾತ್ರ ಬೆಲೆ ಕಡಿಮೆಯಾದ ಉದಾಹರಣೆಯೇ ಇಲ್ಲ! ಅಂದರೆ ಬೆಳೆದ ನಮಗೂ ಪ್ರತಿಫಲನವಿಲ್ಲ, ಗ್ರಾಹಕರಿಗೂ ಲಾಭವಿಲ್ಲ. ಹಾಗಿದ್ದರೆ ಮಧ್ಯವರ್ತಿಗಳ ಹಿಡಿತ ಹೇಗಿರಬೇಕು. ಈ ಎಲ್ಲ ತೊಂದರೆಗಳಿಂದ ಬಾಧ್ಯರಾದ ನಮ್ಮ ರೈತ ಮಿತ್ರರೇ ಆತ್ಮಹತ್ಯೆಗೆ ಶರಣಾಗುತ್ತಿರುವಾಗ, ಕೂಲಿಯವರಾದ ನಮ್ಮ ಗತಿ ಹೇಗಿರಬೇಡ? ಇನ್ನಾದರೂ ರೈತರ, ಅಂದರೆ ನಮ್ಮ ಬಾಳಿಗೆ ಹೊಸರೂಪವನ್ನು ಕಲ್ಪಿಸಿ ಕೊಡಬಲ್ಲಿರಾ ನೀವು? ಬರೀ ಸಾಲವನ್ನು ನೀಡಿ ಮನ್ನಾ ಮಾಡುವುದರಲ್ಲಿಯೇ ಕಾಲು ಎಳೆಯುವುದರ ಬದಲು, ಕಾಲ ಕಳೆಯುವ ಬದಲು?

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments