ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 2, 2012

3

ನೇತಾಜಿ ಕಣ್ಮರೆ – ಒಂದು ವಿಶ್ಲೇಷಣೆ

‍ನಿಲುಮೆ ಮೂಲಕ

-ಆನಂದ್ ಪ್ರಸಾದ್

ನೇತಾಜಿ ಸುಭಾಷ್ ಚಂದ್ರ ಬೋಸ್ ಭಾರತ ಕಂಡ ಅಪ್ರತಿಮ, ಧೀಮಂತ ನಾಯಕ.  ನಾಯಕತ್ವದ  ಎಲ್ಲ ಗುಣಗಳೂ ಮೇಳೈಸಿದ್ದ ಅಪ್ರತಿಮ ಸೇನಾನಿ.  ಹೀಗಾಗಿ ನೇತಾಜಿಯವರ ಕಣ್ಮರೆಯನ್ನು  ಇಂದಿಗೂ ನಂಬಲು ನಮ್ಮ ದೇಶದ ಎಷ್ಟೋ ಜನ ಸಿದ್ಧರಿಲ್ಲ.  ನೇತಾಜಿಯವರು ೧೯೪೫ರ ಆಗಸ್ಟ್ ೧೮  ರಂದು ತೈಹೊಕು (ಇಂದಿನ ತೈವಾನ್ ದೇಶದಲ್ಲಿ) ಎಂಬಲ್ಲಿ ನಡೆದ ವಿಮಾನ ಅಪಘಾತದಲ್ಲಿ  ಮೃತರಾದರು ಎಂದು ಹೇಳಲಾಗುತ್ತಿದೆ.  ಇದನ್ನು ಎಷ್ಟೋ ಜನ ನಂಬುವುದಿಲ್ಲ.  ಹೀಗಾಗಿ ಈ  ರಹಸ್ಯವನ್ನು ಭೇದಿಸಲು ಎನ್.ಡಿ.ಎ. ಆಡಳಿತಾವಧಿಯಲ್ಲಿ ಸಮಿತಿ ನೇಮಕ ಮಾಡಲಾಗಿತ್ತು.  ಆ  ಸಮಿತಿ ನೇತಾಜಿ ವಿಮಾನ ಅಪಘಾತದಲ್ಲಿ ಸತ್ತಿಲ್ಲ, ಆ ದಿನ ಯಾವುದೇ ವಿಮಾನ ಅಪಘಾತ ನಡೆದ  ದಾಖಲೆ ಲಭ್ಯವಿಲ್ಲ ಎಂದು ಹೇಳಿತು.  ನೇತಾಜಿಯವರು ರಶಿಯಕ್ಕೆ ಹೋಗಿ ಅಲ್ಲಿ ಬಂಧಿಯಾಗಿ  ಸೈಬೀರಿಯಾದಲ್ಲಿ ಸೆರೆವಾಸದಲ್ಲಿ ಸತ್ತರು ಎಂದು ಇನ್ನೊಂದು ವದಂತಿಯೂ ಇದೆ.  ಹೀಗಾಗಿ  ರಶಿಯಕ್ಕೂ ಆ ಸಮಿತಿ ತನಿಖೆಗಾಗಿ ಹೋಗಿ ಅಲ್ಲಿ ಸರಿಯಾದ  ಸಹಕಾರ ಸಿಗದೇ ವಾಪಸಾಯಿತು ಎಂದು  ಹೇಳಲಾಯಿತು.  ರಷಿಯದಲ್ಲಿ ರಾಯಭಾರಿಯಾಗಿದ್ದ, ನಂತರ ಭಾರತದ ರಾಷ್ಟ್ರಪತಿಯಾಗಿದ್ದ  ರಾಧಾಕೃಷ್ಣನ್ ಅವರು ಸೆರೆವಾಸದಲ್ಲಿದ್ದ ನೇತಾಜಿಯವರನ್ನು ಭೇಟಿ ಮಾಡಿದ್ದರು, ಆದರೆ  ನೇತಾಜಿಯವರ ಬಿಡುಗಡೆಯ ಬಗ್ಗೆ ಅಂದಿನ ಸರ್ಕಾರ ಕಾಳಜಿ ವಹಿಸಲಿಲ್ಲ ಎಂಬ ವದಂತಿಯೂ ಇದೆ.   ಇದೆಲ್ಲ ನಂಬಿಕೆಗೆ ಅರ್ಹ ಎನಿಸುವುದಿಲ್ಲ ಏಕೆಂದರೆ ರಾಧಾಕೃಷ್ಣನ್ ಅವರು ಬೋಸರ ಭೇಟಿ  ಮಾಡಿದ್ದಿದ್ದರೆ ಅದನ್ನು ಮುಚ್ಚಿಡುತ್ತಿರಲಿಲ್ಲ ಏಕೆಂದರೆ ರಾಧಾಕೃಷ್ಣನ್ ಒಬ್ಬ  ತತ್ವಜ್ಞಾನಿ ಹಾಗೂ ಪ್ರಾಧ್ಯಾಪಕರಾಗಿದ್ದವರು.

ಬೋಸರ ಕಣ್ಮರೆಯ ವಿಷಯದಲ್ಲಿ ಹೆಚ್ಚು ನಂಬಿಕೆಗೆ ಅರ್ಹವಾಗಿರುವುದು ಅವರು ೧೯೪೫ರ  ಆಗಸ್ಟ್ ೧೮ರಂದು ವಿಮಾನ ಅಪಘಾತದಲ್ಲಿ ಗಾಯಗೊಂಡು ಸತ್ತರು ಎಂಬುದು.  ಈ ಅಪಘಾತ ನಡೆದಾಗ  ಬೋಸರು ಪಯಣಿಸುತ್ತಿದ್ದ ವಿಮಾನದಲ್ಲಿ ಹಬೀಬುರ್ ರೆಹಮಾನ್ ಎಂಬ ನೇತಾಜಿಯ ಸಹವರ್ತಿಯೂ  ಪ್ರಯಾಣಿಸುತ್ತಿದ್ದರು ಮತ್ತು ಅವರು ಆ ಅಪಘಾತದಲ್ಲಿ ಗಾಯಗೊಂಡು ಬದುಕಿ ಉಳಿದಿದ್ದರು  ಮತ್ತು ಅವರು ೧೯೭೮ರವರೆಗೆ ಬದುಕಿದ್ದರು ಎಂದು ತಿಳಿದು ಬರುತ್ತದೆ.  ಸ್ವಾತಂತ್ರ್ಯಾನಂತರ  ಹಬೀಬುರ್ ರೆಹಮಾನ್  ಪಾಕಿಸ್ತಾನಿ ಪ್ರಜೆಯಾದರು.  ಬ್ರಿಟಿಷರ ದಾರಿ ತಪ್ಪಿಸುವ ಸಲುವಾಗಿ  ಬೋಸರು ವಿಮಾನ ಅಪಘಾತದಲ್ಲಿ ಮೃತರಾದರು ಎಂದು ಕಥೆ ಕಟ್ಟಲಾಯಿತು ಎಂಬುದು ಕೆಲವರ  ನಂಬಿಕೆ.  ಇದು ನಿಜವೇ ಆಗಿದ್ದರೆ ವಿಮಾನ ಅಪಘಾತದಲ್ಲಿ ಬದುಕಿ ಉಳಿದ ನೇತಾಜಿ ಸಹವರ್ತಿ  ಹಬೀಬುರ್ ರೆಹಮಾನ್ ಅವರು ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರವಾದರೂ ತಾವು ಬ್ರಿಟಿಷರ  ದಾರಿ ತಪ್ಪಿಸುವ ಸಲುವಾಗಿ ವಿಮಾನ ಅಪಘಾತದ ಕಥೆ ಕಟ್ಟಿದ್ದು ಎಂದು ಹೇಳಬೇಕಾಗಿತ್ತು.   ಆದರೆ ಅವರು ಆ ಬಗ್ಗೆ ಏನೂ ಹೇಳಿಲ್ಲ.  ವಿಮಾನ ಅಪಘಾತ ನಡೆದ ದಿನಗಳು ಎರಡನೆಯ ಮಹಾಯುದ್ಧದ  ದಿನಗಳಾದುದರಿಂದ ಮತ್ತು ಅವರು ಪಯಣಿಸುತ್ತಿದ್ದ ವಿಮಾನ ಒಂದು ಸಣ್ಣ ಮಿಲಿಟರಿ ವಿಮಾನ  ಆದುದರಿಂದ ಈ ಕುರಿತ ದಾಖಲೆ ಇಟ್ಟಿರುವ ಸಾಧ್ಯತೆ ಇಲ್ಲ. (ನೇತಾಜಿಯವರು ಅಪಘಾತಕ್ಕೀಡಾದ  ಸನ್ನಿವೇಶದ ಚಿತ್ರಣ ನೋಡಲು ಈ ಲಿಂಕ್ ಸಹಾಯಕ)

ಬೋಸರು ರಶಿಯಕ್ಕೆ ಹೋಗಿರಬಹುದಾದ ವಿಚಾರದ ಬಗ್ಗೆ ವಿಶ್ಲೇಷಿಸುವುದಾದರೆ  ರಷಿಯ ಎರಡನೇ ಮಹಾಯುದ್ಧದಲ್ಲಿ ಜಪಾನಿಗೆ ಎದುರಾಗಿ ಹೋರಾಡಿದ ಬ್ರಿಟಿಷರ ಪಾಳಯದಲ್ಲಿದ್ದ  ಒಂದು ರಾಷ್ಟ್ರ.  ಇಂಥ ಬ್ರಿಟಿಷರ ಮಿತ್ರ ರಾಷ್ಟ್ರವಾಗಿ ಎರಡನೇ ಮಹಾಯುದ್ಧದಲ್ಲಿ  ಭಾಗವಹಿಸಿದ ರಷಿಯಕ್ಕೆ ಹೋಗುವ ಅಪಾಯಕ್ಕೆ ಬೋಸರು ಹೋಗಿರುವ ಸಾಧ್ಯತೆ ಇಲ್ಲ  ಎನಿಸುತ್ತದೆ.  ಒಂದು ವೇಳೆ ಹೋಗಿದ್ದರೂ ಅವರು ಅಲ್ಲಿ ಬಂಧಿಯಾಗುವ ಕೆಲಸವೇನೂ  ಮಾಡಿಲ್ಲವಾದುದರಿಂದ ಅವರನ್ನು ಬಂಧಿಯಾಗಿಟ್ಟು ರಶಿಯಕ್ಕೆ ಏನೂ ಪ್ರಯೋಜನ ಇಲ್ಲ.   ಬಂಧಿಯಾಗಿಟ್ಟಿದ್ದರೆ  ಬೋಸರನ್ನು ಬ್ರಿಟಿಷರಿಗೆ ಒಪ್ಪಿಸುತ್ತಿತ್ತು ಎನಿಸುತ್ತದೆ.    ನೇತಾಜಿವರ ಪುತ್ರಿ ಅನಿತಾ ಬೋಸರು ತನ್ನ ತಂದೆಯ ಕಣ್ಮರೆಯ ವಿಷಯದಲ್ಲಿ ವಿಮಾನ  ಅಪಘಾತದಲ್ಲಿ ಅವರು ಸತ್ತಿರಬಹುದು ಎಂಬ ಅಂಶದಲ್ಲಿ ಸತ್ಯ ಇರಬಹುದು ಎಂದು ಹೇಳುತ್ತಾರೆ.  (ಈ ಲಿಂಕಿನಲ್ಲಿ ಅನಿತಾ ಬೋಸರ ಅಭಿಪ್ರಾಯ ಇದೆ )

ಕೆಲವರು ೧೯೮೫ರವರೆಗೆ ಉತ್ತರ ಪ್ರದೇಶದ ಫೈಜಾಬಾದ್ನಲ್ಲಿ ಬದುಕಿದ್ದ ಭಗವಾನ್ಜಿ  ಎಂಬ  ಸನ್ಯಾಸಿಯೊಬ್ಬರು ಸುಭಾಷರಾಗಿದ್ದರು ಎಂದು ನಂಬುತ್ತಾರೆ.  ಆ ಸನ್ಯಾಸಿ ಕೆಲವು  ಸಂದರ್ಭಗಳಲ್ಲಿ ತಾನೇ ಸುಭಾಷ್ ಚಂದ್ರ ಬೋಸ್ ಎಂದು ಹೇಳಿಕೊಂಡಿದ್ದರಂತೆ.  ಸುಭಾಷರ  ವ್ಯಕ್ತಿತ್ವವನ್ನು ನೋಡಿದ ಯಾವುದೇ ಪ್ರಜ್ನಾವಂತನೂ ಇದನ್ನು ನಂಬಲು ಸಾಧ್ಯವಿಲ್ಲ  ಏಕೆಂದರೆ ಸ್ವಾತಂತ್ರ್ಯಾನಂತರದ ಭಾರತದಲ್ಲಿ ನಡೆಯುತ್ತಿದ್ದ ಅನ್ಯಾಯಗಳನ್ನು ನೋಡಿಕೊಂಡು  ಸುಭಾಶರಂಥ ಸೇನಾನಿ ತೆಪ್ಪಗೆ ಕುಳಿತುಕೊಳ್ಳುತ್ತಿದ್ದರು ಎಂದರೆ ಅದು ನಂಬಲಸಾದ್ಯ.   ಸುಭಾಷರು ಸ್ವಾತಂತ್ರ್ಯಾನಂತರ ಭಾರತದಲ್ಲಿ ಬದುಕಿದ್ದುದೇ ಆಗಿದ್ದರೆ ಅನ್ಯಾಯದ ವಿರುದ್ಧ  ಸಿಡಿದೆದ್ದು ಉತ್ತಮ ದೇಶ ನಿರ್ಮಾಣಕ್ಕಾಗಿ ಭಾರೀ ಹೋರಾಟವನ್ನೇ ಕಟ್ಟುತ್ತಿದ್ದರು  ಎಂಬುದರಲ್ಲಿ ಸಂಶಯವಿಲ್ಲ.

* * * * * * * * * *

ಚಿತ್ರಕೃಪೆ : ಅಂತರ್ಜಾಲ

3 ಟಿಪ್ಪಣಿಗಳು Post a comment
 1. Ananda Prasad
  ಮಾರ್ಚ್ 2 2012

  ಎನ್.ಡಿ. ಎ. ಆಡಳಿತಾವಧಿಯಲ್ಲಿ ನೇತಾಜಿ ಕಣ್ಮರೆ ತನಿಖೆಗಾಗಿ ನೇಮಿಸಿದ ಮುಖರ್ಜಿ ಆಯೋಗ ತೈವಾನಿಗೆ ಭೇಟಿ ನೀಡಿ ತನಿಖೆ ನಡೆಸಿ ೧೯೪೫ ಅಗಸ್ಟ್ ೧೮ ರಂದು ಯಾವುದೇ ವಿಮಾನ ಅಪಘಾತ ನಡೆದ ದಾಖಲೆ ಲಭ್ಯವಿಲ್ಲ ಹಾಗೂ ನೇತಾಜಿಯವರ ಮರಣದ ದಾಖಲೆ ಪತ್ರ ಲಭ್ಯವಿಲ್ಲ ಹೀಗಾಗಿ ವಿಮಾನ ಅಪಘಾತವೇ ನಡೆದಿಲ್ಲ ಎಂಬ ನಿರ್ಧಾರಕ್ಕೆ ಬಂತು. ಆದರೆ ಮುಖರ್ಜಿ ಆಯೋಗ ಒಂದು ಮಹತ್ವದ ಅಂಶವನ್ನು ಕಡೆಗಣಿಸಿದೆ. ೧೯೪೫ ರ ಅಗಸ್ಟ್ ವರೆಗೆ (ಎರಡನೇ ಮಹಾಯುದ್ಧದಲ್ಲಿ ಸೋಲುವವರೆಗೆ) ತೈವಾನ್ ಜಪಾನಿನ ಅಧೀನದಲ್ಲಿತ್ತು. ಎರಡನೇ ಮಹಾಯುದ್ಧದಲ್ಲಿ ಸೋತ ನಂತರ ಜಪಾನ್ ಅಲ್ಲಿಂದ ನಿರ್ಗಮಿಸಿತು. ಹೀಗೆ ನಿರ್ಗಮಿಸುವಾಗ ಎಲ್ಲ ದಾಖಲೆಗಳನ್ನು ನಾಶ ಮಾಡಿಯೇ ನಿರ್ಗಮಿಸಿರಬಹುದು ಎಂದು ನೇತಾಜಿಯವರ ಇಂಡಿಯನ್ ನ್ಯಾಷನಲ್ ಆರ್ಮಿಯಲ್ಲಿ ಸೇವೆ ಸಲ್ಲಿಸಿದ ಲಕ್ಷ್ಮಿ ಸೆಹಗಲ್ ಹೇಳುತ್ತಾರೆ. ಯುದ್ಧದ ಸಮಯದಲ್ಲಿ ನಡೆದಿರಬಹುದಾದ ಅಪರಾಧಗಳನ್ನು ಮುಚ್ಚಿಹಾಕಲು ಜಪಾನಿನ ಸೇನೆ ಎಲ್ಲ ದಾಖಲೆ ಪತ್ರಗಳನ್ನು ನಾಶಮಾಡುವ ಪ್ರವೃತ್ತಿ ಇತ್ತೆಂದು ಲಕ್ಷ್ಮಿ ಸೆಹಗಲ್ ಹೇಳಿದ್ದಾರೆ. ಹೀಗಾಗಿ ಮುಖರ್ಜಿ ಆಯೋಗ ತೈವಾನಿನಲ್ಲಿ ಹೋಗಿ ವಿಮಾನ ಅಪಘಾತದ ದಾಖಲೆಗಾಗಿ ಹುಡುಕಿದರೆ ಅದು ಸಿಗುವ ಸಂಭವವೇ ಇಲ್ಲ. ಇದನ್ನೇ ಆಧಾರಿಸಿ ವಿಮಾನ ಅಪಘಾತ ನಡೆದೇ ಇಲ್ಲ ಎಂದು ಹೇಳುವುದು ಸಮಂಜಸವಾಗುವುದಿಲ್ಲ.
  ಕೆಲವರು ಜಪಾನಿನಲ್ಲಿ ಇಂದೂ ಇರುವ ನೇತಾಜಿಯವರದ್ದೆಂದು ಹೇಳಲಾಗುವ ಚಿತಾಭಸ್ಮದ ಎಲುಬುಗಳಿಂದ ಡಿ.ಎನ್.ಎ. ಪಡೆದು ಅದನ್ನು ನೇತಾಜಿ ಕುಟುಂಬದ ಸದಸ್ಯರ ಡಿ.ಎನ್.ಎ. ಯೊಂದಿಗೆ ಹೋಲಿಸಿ ಚಿತಾಭಸ್ಮ ನೇತಾಜಿ ಅವರದ್ದು ಹೌದೋ ಅಲ್ಲವೋ ಎಂದು ನೋಡಬಹುದಲ್ಲ ಎಂದು ಸವಾಲು ಹಾಕುತ್ತಾರೆ. ಆದರೆ ಅವರು ಒಂದು ಅಂಶವನ್ನು ಕಡೆಗಣಿಸುತ್ತಾರೆ. ಹೆಣವನ್ನು ಸುಡುವಾಗ ಉಂಟಾಗುವ ನೂರಾರು ಡಿಗ್ರಿ ಉಷ್ಣತೆಯಲ್ಲಿ ಎಲುಬಿನಲ್ಲಿ ಇರಬಹುದಾದ ಡಿ. ಎನ್. ಎ. ಸಂಪೂರ್ಣ ನಾಶವಾಗುತ್ತದೆ. ಹೀಗಾಗಿ ಅಂಥ ಎಲುಬಿನಿಂದ ಡಿ. ಎನ್. ಎ. ಪಡೆಯಲು ಸಾಧ್ಯವಿಲ್ಲ ಎಂದು ಮುಖರ್ಜಿ ಆಯೋಗದ ವಿಚಾರಣೆಗೆ ಹೈದರಾಬಾದಿನ ಸಿಸಿಎಂಬಿ ಪ್ರಯೋಗಾಲಯ ಉತ್ತರ ನೀಡಿದೆ. ಅದೇ ರೀತಿ ಮುಖೆರ್ಜಿ ಆಯೋಗ ವಿದೇಶಗಳ ಅತ್ಯಾಧುನಿಕ ಪ್ರಯೋಗಾಲಯಗಳಲ್ಲಿ ಈ ಕುರಿತು ವಿಚಾರಿಸಿ ಅವರಿಂದಲೂ ಇದು ಸಾಧ್ಯವಿಲ್ಲ ಎಂಬ ಉತ್ತರ ಪಡೆದಿದೆ. ಈ ವಿವರಗಳು ಮುಖರ್ಜಿ ಆಯೋಗದ ವರದಿಯಲ್ಲಿ ಪ್ರಸ್ತಾಪವಾಗಿದೆ.

  ಉತ್ತರ
 2. niranjan
  ಮಾರ್ಚ್ 2 2012

  satyada halavu mukhagaLa anaavaraNa
  thanku

  ಉತ್ತರ
 3. Kumar
  ಮಾರ್ಚ್ 2 2012

  > ಸುಭಾಷರ ವ್ಯಕ್ತಿತ್ವವನ್ನು ನೋಡಿದ ಯಾವುದೇ ಪ್ರಜ್ನಾವಂತನೂ ಇದನ್ನು ನಂಬಲು ಸಾಧ್ಯವಿಲ್ಲ
  > ಏಕೆಂದರೆ ಸ್ವಾತಂತ್ರ್ಯಾನಂತರದ ಭಾರತದಲ್ಲಿ ನಡೆಯುತ್ತಿದ್ದ ಅನ್ಯಾಯಗಳನ್ನು ನೋಡಿಕೊಂಡು ಸುಭಾಶರಂಥ ಸೇನಾನಿ
  > ತೆಪ್ಪಗೆ ಕುಳಿತುಕೊಳ್ಳುತ್ತಿದ್ದರು ಎಂದರೆ ಅದು ನಂಬಲಸಾದ್ಯ.
  ಸುಭಾಷರಂತೆಯೇ ಅಪ್ರತಿಮ ಸ್ವಾತಂತ್ರ್ಯ ಸೇನಾನಿಯಾಗಿದ್ದ, ಬ್ರಿಟಿಷರನ್ನು ಓಡಿಸಲು ಸಶಸ್ತ್ರ ಕ್ರಾಂತಿಯಿಂದಲೇ ಸಾಧ್ಯವೆಂದು ನಂಬಿ ಅದೇ ದಾರಿಯಲ್ಲಿ ನಡೆದಿದ್ದ ಅರವಿಂದ ಘೋಷ್ ಅವರ ಜೀವನವನ್ನು ಅವಲೋಕಿಸಿದರೆ…….ಸುಭಾಷರೂ ಸಹ ಆಧ್ಯಾತ್ಮದ ದಾರಿ ಹಿಡಿದಿರಲಾರರು ಎಂಬುದನ್ನು ತೆಗೆದುಹಾಕಲು ಸಾಧ್ಯವಿಲ್ಲ.

  ಸುಭಾಷರು ಬ್ರಿಟಿಷರ ಮೇಲೆ ಯುದ್ಧ ಮಾಡಲು ಸೈನ್ಯವನ್ನು ತಂದಾಗ, ಅದನ್ನು ಬ್ರಿಟಿಷರಿಗಿಂತ ಹೆಚ್ಚಾಗಿ ವಿರೋಧಿಸಿದ್ದು ಜವಹರಲಾಲ್ ನೆಹರೂ ಅವರು!
  ಸುಭಾಷರ ಕಣ್ಮರೆಗೆ ಸಂಬಂಧಿಸಿದಂತೆ ಪಂಡಿತ್ ನೆಹರೂ ಸೇರಿದಂತೆ ಕಾಂಗ್ರೆಸ್ಸಿನ ಯಾವ ನಾಯಕರೂ ಉತ್ಸಾಹ ತೋರಲಿಲ್ಲ ಎನ್ನುವುದು ಖೇದಕರ ಸಂಗತಿ.
  ಸ್ವಾತಂತ್ರ್ಯ ಬಂದ ನಂತರದಲ್ಲಿ ನೆಹರೂ ಸರಕಾರವು “ಸೇನಾ ಠಾಣೆಗಳಲ್ಲಿ ಹಾಕಿರುವ ಸುಭಾಷರ ಭಾವಚಿತ್ರಗಳನ್ನು ಕೂಡಲೇ ತೆಗೆದು ಹಾಕಬೇಕು” ಎಂಬ ಸೂಚನೆ ನೀಡಿದ್ದು
  ಅನೇಕ ಅನುಮಾನಗಳನ್ನು ಉಂಟುಮಾಡುತ್ತದೆ.

  ಏನೇ ಇರಲಿ, ಸುಭಾಷರು ಬ್ರಿಟಿಷರ ಮೇಲೆ ನಡೆಸಿದ ಯುದ್ಧ ಮತ್ತು ನಂತರದಲ್ಲಿ ನಡೆದ INA ಸೈನಿಕರ ವಿಚಾರಣೆ ಹಾಗೂ ಅದರಿಂದಾಗಿ ಭಾರತೀಯ ನೌಕಾಪಡೆ/ಸೈನ್ಯಗಳಲ್ಲಿ ಎದ್ದ ಧಂಗೆಗಳು ಭಾರತಕ್ಕೆ ಸ್ವಾತಂತ್ರ್ಯ ಬರಲು ಪ್ರಮುಖ ಕಾರಣಗಳಾದವು.
  ಆದರೆ, ಸ್ವಾತಂತ್ರ್ಯಾನಂತರ ಬಂದ ಸರಕಾರಗಳು ಇತಿಹಾಸದ ಪಠ್ಯಗಳಲ್ಲಿ ಈ ಸತ್ಯಗಳನ್ನು ಬರೆದಿಲ್ಲದಿರುವುದು ಮತ್ತು “ಕಾಂಗ್ರೆಸ್ಸಿನ ’ಅಹಿಂಸಾ’ ಹೋರಾಟದಿಂದ ’ಮಾತ್ರ’ ಸ್ವಾತಂತ್ರ್ಯ ಬಂದದ್ದು” ಎಂದು ಹೇಳಿರುವುದೂ ದುಃಖದ ಸಂಗತಿಯೇ.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments