– ರಾಕೇಶ್ ಶೆಟ್ಟಿ

ಕಾಶ್ಮೀರದಲ್ಲಿ ಕಲ್ಲೊಂದು ಬಿದ್ದ ಮರುಕ್ಷಣದಲ್ಲೇ ಮಂಡಿಯೂರಿ ಕ್ಯಾಮೆರ ಹಿಡಿದು ಜಗತ್ತಿಗೆ ಸಾರುವ ಮಾಧ್ಯಮಗಳು,ತಡವಾಗಿಯಾದರೂ ಪ್ರತಿಕ್ರಿಯಿಸುವ ಕೇಂದ್ರ ಸರ್ಕಾರ,ಅಥವಾ ಇನ್ನುಳಿದ ಯಾವುದೆಂದರೆ ಯಾವುದೇ ರಾಜಕೀಯ ಪಕ್ಷಗಳು,ಕಳೆದ ವರ್ಷ ಅಲ್ಲಿನ ಪ್ರತ್ಯೇಕವಾದಿ ಹೋರಾಟಗಾರು ಇಡಿ ರಾಜ್ಯವನ್ನ ೨-೩ ತಿಂಗಳು ದಿಗ್ಭಂದನದಲ್ಲಿಟ್ಟು, ಜನ ಸಾಮಾನ್ಯರು ದಿನ ನಿತ್ಯದ ಅಗತ್ಯ ವಸ್ತುಗಳಿಗೆ ಪರದಾಡುತಿದ್ದರೂ ಸಹ, ಆ ‘ನತದೃಷ್ಟ ರಾಜ್ಯ’ಕ್ಕೂ ನಮಗೂ ಯಾವ ಸಂಬಂದವೇ ಇಲ್ಲ ಅನ್ನುವಂತೆ ಕುಳಿತಿದ್ದರು.ಭಾರತದ ಆ ನತದೃಷ್ಟ ರಾಜ್ಯದ ಹೆಸರು ‘ಮಣಿಪುರ’.ಈಶಾನ್ಯ ಭಾರತದ ಸಪ್ತ ಸಹೋದರಿ ರಾಜ್ಯಗಳಲ್ಲೊಂದಾದ ಮಣಿಪುರವನ್ನ ನೆಹರೂ ಭಾರತದ ಮುಕುಟ ಮಣಿ ಅಂದಿದ್ದರಲ್ಲ ಅದೇ ಮಣಿಪುರ…! ಆ ಮಣಿಪುರದ ರಕ್ತ ಸಿಕ್ತ ಅಧ್ಯಾಯದ ಬಗ್ಗೆ ಮುಂದೊಮ್ಮೆ ಬರೆಯುವೆ.
ಇಂದು ‘ವಿಶ್ವ ಮಹಿಳಾದಿನ’, ಬೇರೆ ಬೇರೆ ದೇಶದ ಮಹಿಳೆಯರನ್ನ ನೆನಪಿಸಿಕೊಳ್ಳುವ ಮಾಧ್ಯಮಗಳ ಕಣ್ಣಿಗೆ, ಮಣಿಪುರದ (ಭಾರತದ) ಉಕ್ಕಿನ ಮಹಿಳೆ ಇರೋ ಚಾನು ಶರ್ಮಿಲ ಕಾಣಿಸುವುದಿಲ್ಲ. ಇರಲಿ ಬಿಡಿ ದೊಡ್ಡವರ ಪತ್ರಿಕೆಗಳು ತಣ್ಣಗಿರಲಿ,ಆ ಮಹಿಳೆಯ ಹೋರಾಟದ ಚಿತ್ರಣವನ್ನ ದಾಖಲಿಸುವ ಪುಟ್ಟ ಪ್ರಯತ್ನ ನನ್ನದು.ಈ ಹಿಂದೆಯೇ ಈಕೆಯ ಬಗ್ಗೆ ಬರೆದಿದ್ದೆ,ಆಕೆಯ ಹೋರಾಟದ ಬದುಕು ನಮಗೆಲ್ಲ ಸ್ಪೂರ್ತಿಯಾಗಲಿ.
ಅದು ೨೦೦೦ದ ನವೆಂಬರ್ ೧ ರ ದಿನ.ಮಣಿಪುರದ ‘ಮಾಲೋಂ’ ಎಂಬಲ್ಲಿ ಬಸ್ಸಿಗಾಗಿ ಕಾಯುತಿದ್ದ ಹತ್ತು ಜನರನ್ನ ಅಸ್ಸಾಂ ರೈಫಲ್ಸ್ ಯೋಧರು ಗುಂಡಿಕ್ಕಿ ಕೊಂದರು. ಕೆಲ ದಿನಗಳ ಹಿಂದೆ ಅಸ್ಸಾಂ ರೈಫಲ್ಸ್ ಯೋಧರ ಮೇಲೆ ನಡೆದ ದಾಳಿಯ ಶಂಕಿತರು ಇವರು ಅನ್ನುವುದು ಭದ್ರತಾ ಪಡೆಯವರ ಸಮಜಾಯಿಷಿ.ಆದರೆ ಅವರು ಬಸ್ಸಿಗೆ ಕಾಯುತ್ತ ನಿಂತಿದ್ದ ಮುಗ್ದ ಮಣಿಪುರಿಗಳು ಅನ್ನುವುದು ಅಲ್ಲಿನ ಜನರ ವಾದ.ಹಾಗೆ ಸತ್ತವರಲ್ಲಿ ೬೮ರ ಹೆಣ್ಣುಮಗಳು ಇದ್ದಳು, ೧೮ ರ ಹೆಣ್ಣುಮಗಳು ಇದ್ದಳು.ಆ ಹದಿನೆಂಟರ ಹೆಣ್ಣು ಮಗಳ ಹೆಸರು ‘ಸಿನಂ ಚಂದ್ರಮಣಿ’ ಆಕೆ ೧೯೮೮ರ ರಾಷ್ಟ್ರೀಯ ಮಕ್ಕಳ ಶೌರ್ಯ ಪ್ರಶಸ್ತಿ ವಿಜೇತೆ!.ಮರು ದಿನ ಜನ ಬೀದಿಗಿಳಿದರು ತನಿಖೆಗೆ ಆಗ್ರಹಿಸಿದರು ಏನು ಪ್ರಯೋಜನವಾಗಲಿಲ್ಲ.
ಇದನ್ನೆಲ್ಲಾ ನೋಡಿ ರೋಸಿ ಹೋಗಿ ಭದ್ರತಾ ಪಡೆಗಳಿಗೆ ನೀಡಿರುವ ಈ ವಿವಾದಾತ್ಮಕ AFSP (Armed Forces Special Powers Act) ಅನ್ನು ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಆಮರಣಾಂತ ಉಪವಾಸಕ್ಕಿಳಿದ ಯುವತಿಯೇ ‘ಇರೊಂ ಚಾನು ಶರ್ಮಿಳ‘ ಆಗ ಅವಳ ವಯಸ್ಸು ೨೮!
೨೦೦೦ದ ನವೆಂಬರ್ ೪ ರಂದು ಉಪವಾಸ ಸತ್ಯಾಗ್ರಹ ಆರಂಭಿಸಿದ ಆಕೆಯನ್ನ , ನವೆಂಬರ್ ೬ ರಂದು,ಆತ್ಮ ಹತ್ಯೆ ಯತ್ನದ ಕೇಸಿನಲ್ಲಿ ಬಂದಿಸಿಲಾಯಿತು.ಬೇಡಿಕೆ ಈಡೇರುವವರೆಗೂ ಉಪವಾಸ ಅಂತ್ಯಗೊಳಿಸುವುದಿಲ್ಲ ಎಂದು ಬಿಗಿ ಪಟ್ಟು ಹಿಡಿದಿರುವ ಇವಳಿಗೆ ಈಗ ವೈದ್ಯರು ದ್ರವರೂಪದ ಆಹಾರವನ್ನ ಮೂಗಿಗೊಂದು ನಳಿಕೆಯ ಮೂಲಕ ಕೊಡುತಿದ್ದಾರೆ (ಒಮ್ಮೆ ಯೋಚಿಸಿ,ಜ್ವರ ಬಂದರೆ ಒಂದು ಸೂಜಿ ಚುಚ್ಚಿಸಿಕೊಳ್ಳುವ ನೋವಿಗೆ ಅಳುಕುವ ನಾವು!ಹತ್ತು ವರ್ಷದಿಂದ ಇಂತ ಯಾತನೆಯನ್ನ ಸಹಿಸಿಕೊಂಡು ತಾನು ನಂಬಿರುವ ಸಿದ್ದಾಂತಕ್ಕೆ ಬದ್ದಳಾಗಿರುವ ಅವಳು!),ಆಕೆ ಅದೆಂತ ಗಟ್ಟಿಗಿತ್ತಿಯೆಂದರೆ ಅವಳ ಉಪವಾಸಕ್ಕೆ ಹತ್ತು ವರ್ಷವಾಯಿತು,ದೈಹಿಕವಾಗಿ ಕುಗ್ಗಿ ಹೋಗಿದ್ದಳಾದರು ಮಾನಸಿಕವಾಗಿ ಆಕೆಯಿನ್ನೂ ಗಟ್ಟಿ! ಅವಳ ಧ್ಯೇಯ,ಉದ್ದೇಶದಿಂದ ಹಿಂದೆ ಸರಿದಿಲ್ಲ. ೨೦೦೫ರಲ್ಲಿ ಈಕೆಯ ಹೆಸರನ್ನು ನೊಬೆಲ್ ಪ್ರಶಸ್ತಿಗಾಗಿ ಹೆಸರಿಸಲಾಗಿತ್ತು. ಈಕೆಯನ್ನ ಬೆಂಬಲಿಸಿ ಇಂದು ಬೆಂಗಳೂರಿನಲ್ಲಿ ಮಹಾತ್ಮರ ಪ್ರತಿಮೆಯ ಬಳಿ ಉಪವಾಸ ಸತ್ಯಾಗ್ರಹ ನಡೆಯುತ್ತಿದೆ.ಪ್ರಧಾನಿ,ರಾಷ್ಟ್ರಪತಿ ಎಲ್ಲರಿಗು ಖುದ್ದಾಗಿ ಪತ್ರ ಬರೆದಿದ್ದಾಳೆ ಪ್ರಯೋಜನವಾಗಿಲ್ಲ!
ಹೌದು! ಇಷ್ಟೆಲ್ಲಾ ಆದರೂ ನಮ್ಮ ಘನ ಸರ್ಕಾರಗಳು ಏನು ಮಾಡಿದವು ಅನ್ನುವುದೇ ಮುಂದಿನ ಪ್ರಶ್ನೆ?.೨೦೦೦ದಿಂದ ಆಕೆಯ ಪ್ರತಿಭಟನೆ ಶುರುವಾಯಿತಾದರೂ ಸರ್ಕಾರ ನಿದ್ದೆಯಿಂದ ಏಳಲು ಮತ್ತೊಮ್ಮೆ ‘ಮನೋರಮಾ ದೇವಿ’ ಎಂಬಾಕೆಯ ಪ್ರಾಣ ಹೋಗಬೇಕಾಯಿತು,ನಾರಿಯರನ್ನ ಪೂಜಿಸುವ ದೇಶದಲ್ಲಿ ತಾಯಂದಿರು ಬೆತ್ತಲೆ ಪ್ರತಿಭಟನೆ ಮಾಡಿ, ನಮ್ಮನ್ನ ಬೇಕಾದರೆ ಆಪೋಶನ ತೆಗೆದುಕೊಳ್ಳಿ.ನಮ್ಮ ಹೆಣ್ಣು ಮಕ್ಕಳನ್ನ ಬಿಡಿ ಅಂತ ಬೇಡಿಕೊಂಡರು 😦 . ಆ ನಂತರ ಎಚ್ಚೆತ್ತು ಸುಪ್ರಿಂ ಕೋರ್ಟಿನ ಜಸ್ಟಿಸ್ ಜೀವನ ರೆಡ್ಡಿಯವರ ಆಯೋಗ ಸ್ಥಾಪಿಸಲಾಯಿತು.ಆಯೋಗ ವರದಿ ನೀಡಿದೆ ಮತ್ತೆ ಅದು as usual ಮೂಲೆ ಸೇರಿದೆ.ಸರ್ಕಾರ AFSP ಯನ್ನ ಹಿಂತೆಗೆದುಕೊಳ್ಳಲು ತಯಾರಿಲ್ಲ. ಭದ್ರಾತಾ ದೃಷ್ಟಿಯಿಂದ ಅದು ಸರಿ ಇರಬಹುದು,ಆದರೂ ಮಾನವೀಯ ದೃಷ್ಟಿಯಿಂದ ಆ ಜನರ ಪಾಡನ್ನ ಒಮ್ಮೆ ಅರ್ಥ ಮಾಡಿಕೊಳ್ಳಬೇಕಲ್ಲವೇ? ಒಂದು ಕಡೆ ಪ್ರತ್ಯೇಕವಾದಿಗಳು,ಇನ್ನೊಂದು ಕಡೆ ಭದ್ರತಾ ಪಡೆಗಳು ಹಾಗು ಸರ್ಕಾರ ನಡುವೆ ಸಿಕ್ಕ ಮಣಿಪುರಿಗಳ ಪಾಡು ದೇವರಿಗೆ ಪ್ರೀತಿ!
ಹಿಂದೆ ಖಲಿಸ್ತಾನ್ ಚಳುವಳಿಯಲ್ಲೂ ಸರ್ಕಾರ ಅತಿರೇಖಕ್ಕೆ ಹೋಗುವವರೆಗೂ ಕಣ್ಮುಚ್ಚಿ ಕುಳಿತಿತ್ತು.ಆಮೇಲೆ ಅದಕ್ಕೆ ತೆತ್ತ ದಂಡ ಮರೆತೆವಾ?ಸಿಕ್ಕ ಸಿಕ್ಕ ಕಡೆ ಸೈನ್ಯ ನುಗ್ಗಿಸಿದರೆ ಏನು ಆಗುತ್ತದೆ ಅನ್ನುವುದನ್ನ ಇತಿಹಾಸ ಹೇಳಿ ಕೊಟ್ಟಿದೆ ಅದನ್ನ ಮರೆತೆವಾ? ಅಷ್ಟಕ್ಕೂ ಗುಂಡಿಗೆ ಎದೆಯೋಡ್ದುವವರು ಸಾಮನ್ಯ ಜನ,ಸೈನಿಕರು.ನಾಯಕರೆನಿಸಿಕೊಂಡವರು ಹಿಂದಿನಿಂದ ನಿಂತು ನೋಡುವವರಲ್ಲವೇ ಅಷ್ಟಾಗಿ ಬಿಸಿ ತಟ್ಟುವುದಿಲ್ಲ ಬಿಡಿ.ನಮ್ಮ ಸರ್ಕಾರಗಳೇಕೆ ಹೀಗೆ? ೨೦೦೦ದ ಆಸು ಪಾಸಿನಲ್ಲಿ ಪಶ್ಚಿಮ ಘಟ್ಟದಲ್ಲಿ ನಕ್ಸಲರು ಕಾಣಿಸಿ ಕೊಳ್ಳುವವರೆಗೂ ಕುದುರೆಮುಖದ ಹೋರಾಟದತ್ತ ತಿರುಗಿಯೂ ನೋಡುತ್ತಿರಲಿಲ್ಲ,ಈಗ ನಕ್ಸಲ್ ನಿಗ್ರಹ ಪಡೆ ಬಂದಿದೆ. ಅಂದೇ ಆ ಹೋರಾಟದ ಬಗ್ಗೆ ಗಮನ ಹರಿಸಿದ್ದರೆ, ಹಿತ ರಕ್ಷಕರ ಸೋಗಿನಲ್ಲಿ ಬಂದ ನಕ್ಸಲರಿಗೆ ಜಾಗವೇ ಇರುತ್ತಿತ್ತಾ?, ಅಸ್ತ್ರಗಳನ್ನ ಕೆಳಗಿಟ್ಟು ಬನ್ನಿ ಅನ್ನುವ ಸರ್ಕಾರಗಳಿಗೆ ಇರೋಮ್ ಅಂತವರು ಮಾಡುವ ಅಹಿಂಸಾತ್ಮಕ ಹೋರಾಟದ ಬೆಲೆ ಗೊತ್ತಾಗುವುದು ಯಾವಾಗ? ಉಗುರಿನಿಂದ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡು, ಕಡೆಗೆ ಬೆಟ್ಟ ಅಗೆದು ಇಲಿ ಹಿಡಿಯುವ ಕೆಲಸವನ್ನ ಇನ್ನಾದರೂ ಕೈ ಬಿಡಲಿ ಈ ಸರ್ಕಾರಗಳು.ಚಿಕ್ಕ ಪುಟ್ಟ ಕಿಡಿಗೇಡಿ ಕೃತ್ಯಗಳನೆಲ್ಲ ದೊಡ್ಡದಾಗಿ ಮಾಡಿ ಅಬ್ಬರಿಸಿ ಬೊಬ್ಬಿಡುವ ಕೆಲ ಮಾಧ್ಯಮಗಳಿಗೆ ಇಂತವರು ಕಾಣುವುದಿಲ್ಲ,ಅಷ್ಟಕ್ಕೂ ಅವಳೇನು ಮಂತ್ರಿಯು ಅಲ್ಲ, ಇಲ್ಲ ಶ್ರೀಮಂತರ ಮಗಳು ಅಲ್ಲ.ತೀರ ಅವಳ ಹಿಂದೆ ಯಾವ ರಾಜಕೀಯ ಪಕ್ಷಗಳು ಇಲ್ಲ, ಧರ್ಮಗಳು ಇಲ್ಲ! ಅವಳು ಸಾಮನ್ಯ ಮಣಿಪುರಿ ಬುಡಕಟ್ಟಿನ ಮಗಳು! ಅರ್ಧ ದಿನ ಉಪವಾಸ ಕುಳಿತಿದ್ದ ಕರುನಾ ನಿಧಿಯಂತವರ ಬಗ್ಗೆ ವರದಿಯಾಗುತ್ತದೆ, ಇನ್ನ ಕೆಲ ರಾಜಕಾರಣಿಗಳು ಉಪವಾಸ ಅಂತ ಮಾಡುವ ನಾಟಕಗಳು ರೆಕ್ಕೆ ಪುಕ್ಕ ಕಟ್ಟಿಕೊಂಡು ಹಾರಾಡುತ್ತವೆ.
ಮಾಧ್ಯಮಗಳೇ ತನ್ನ ಧ್ಯೇಯ,ನಂಬಿಕೆಗಾಗಿ ಬಡಿದಾದುತ್ತಿರುವ ಇಂತವರನ್ನು ನೋಡಿ ಪ್ಲೀಸ್.
ಇನ್ನ ನಾವು! ನಿಜ ಹೇಳಿ,ನಮ್ಮಲ್ಲಿ ಅದೆಷ್ಟು ಜನರಿಗೆ ಈಶಾನ್ಯ ಭಾರತದ ಬಗ್ಗೆ ಗೊತ್ತು? ನಮಗೆ ಗೊತ್ತಿರುವುದೊಂದೇ ಕಾಶ್ಮೀರ! ಅದು ಬಿಟ್ಟರೆ ಮಂದಿರ,ಮಸೀದಿ,ಚರ್ಚು! ಇಷ್ಟೇ ನಾ? ಆ ಜೀವಗಳಿಗೆ ಬೆಲೆ ಇಲ್ವಾ? ರಸ್ತೆಯಲ್ಲಿ ಅವರನ್ನ ಕಂಡಾಕ್ಷಣ ’ಚಿಂಗಿ’ ಅನ್ನುವ ನಮಗೆ ಅವರು ಭಾರತೀಯರು ಅನ್ನುವುದು ಗೊತ್ತಿಲ್ಲವೇ? ಯೋಚಿಸಬೇಕಾದ ಕಾಲ ಬಂದಿದೆ. ಇತ್ತೀಚಿಗೆ ಚೀನಿಗಳು ಅರುಣಾಚಲ ನಮ್ಮದು ಅಂದಾಕ್ಷಣ ಮೈ ಕೊಡವಿ ಎದ್ದ ಸರ್ಕಾರಕ್ಕೆ, ಅರುಣಾಚಲ ಎಂಬ ರಾಜ್ಯವಿರುವುದು ಭಾರತದಲ್ಲೇ ಅಂತ ತೋರಿಸಲು ಅವರೇ ಬರಬೇಕಾಯಿತು! ಅರುಣಾಚಲ ನಮ್ಮ ಅವಿಭಾಜ್ಯ ಅಂಗ, ಮಣಿಪುರ,ನಾಗಲ್ಯಾಂಡ್ ನಮ್ಮದು ಅನ್ನುವ ಸರ್ಕಾರಕ್ಕೆ, ಅಲ್ಲಿರುವ ನಮ್ಮವರ ಪಾಡು ಗೊತ್ತಿಲ್ಲವೇ? ನಮ್ಮದು ಅಂತ ಬೋಬ್ಬಿಡುವವರು ನಮ್ಮವರಿಗಾಗಿ ಏನು ಮಾಡಿದ್ದೇವೆ? ಏನು ಮಾಡುತಿದ್ದೇವೆ ಅನ್ನುವುದನ್ನು ಹೇಳಬೇಕಾಗಿದೆ. ಮಣಿಪುರದ ರಕ್ತ ಸಿಕ್ತ ಅಧ್ಯಾಕ್ಕೆ ಕೆಲ ತಿಂಗಳ ಹಿಂದೆ ಇಬ್ಬರು ಯುವಕರ ಹಾಗು ಒಬ್ಬ ತುಂಬು ಗರ್ಭಿಣಿಯ ಬಲಿ ಸೇರ್ಪಡೆಯಾಯಿತು.ಅಂದಿನಿದ ತನಿಖೆಗೆ ಆಗ್ರಹಿಸಿ ಬಂದ್ ಆಗಿರುವ ಶಾಲಾ ಕಾಲೇಜುಗಳು ಇನ್ನು ತೆರೆಯುತ್ತಿಲ್ಲ,ಅಂದ ಮೇಲೆ ಅಲ್ಲಿ ಸರ್ಕಾರವಿದೆಯ? ಇದ್ದರು ಏನು ಮಾಡುತ್ತಿದೆ? ಆಡಳಿತ ನಡೆಸಲು ಸಾಧ್ಯವಾಗದಿದ್ದರೆ, ಅದನ್ನ ಒಂದು ರಾಜ್ಯವಾಗಿ ನಡೆಸಿಕ್ಕೊಳ್ಳಲು ಸಾಧ್ಯವಾಗದಿದ್ದರೆ ಇನ್ಯಾವ ಪುರುಷಾರ್ಥಕ್ಕಾಗಿ ಅದನ್ನ ಭವ್ಯ ಭಾರತದ ಅವಿಭಾಜ್ಯ ಅಂಗವೆನ್ನಬೇಕು?
ಇಂತ ಗಲಭೆ ಪೀಡಿತ ರಾಜ್ಯಗಳನ್ನ ಶಾಂತಿಯ ಹಳಿಗೆ ತರಲು ಅಲ್ಲೊಂದು ಜನಪರ ಸರ್ಕಾರವಿರಬೇಕು,ಆದರೆ ಮಣಿಪುರದಲ್ಲಿರುವ ಕಾಂಗ್ರೆಸ್ಸ್ ಸರ್ಕಾರಕ್ಕೆ ಜನಪರ ಒಲವಿರುವಂತೆ ಕಾಣುತ್ತಿಲ್ಲ.ಕೆಲವು ಮಣಿಪುರಿ ಗೆಳೆಯರು ಹೇಳುವ ಪ್ರಕಾರ ಅಲ್ಲಿ ಭ್ರಷ್ಟಾಚಾರದ್ದೆ ಕಾರುಬಾರು, ಇನ್ನೆಲ್ಲಿಯ ಶಾಂತಿ?
ಗಾಂಧೀ ಜಯಂತಿಯಂದು ಮಹಾತ್ಮನ ಗುಣಗಾನ ಮಾಡಿ,ನಮ್ಮದು ಅಹಿಂಸೆ,ಶಾಂತಿಗೆ ಬೆಲೆ ಕೊಡುವ ದೇಶ ಎನ್ನುವ ಮಾಹಾನ್ ನಾಯಕರೇ, ಇದೆ ಅಹಿಂಸೆ,ಶಾಂತಿಯ ಸಿದ್ದಾಂತ ನಂಬಿ ಹತ್ತು ವರ್ಷದಿಂದ ಹೋರಾಡುತ್ತಿರುವ ಆ ಹೆಣ್ಣು ಮಗಳ, ಮತ್ತೊಂದಿಷ್ಟು ಮುಗ್ದ ಜನರ ಕಡೆಯೂ ಒಮ್ಮೆ ದೃಷ್ಟಿ ಹಾಯಿಸಿ.ಇಲ್ಲ ಬಂದೂಕಿನಿಂದಲೇ ಪರಿಹಾರವೆಂದರೆ ‘ಕಣ್ಣಿಗೆ ಕಣ್ಣು ಎಂಬ ಸಿದ್ದಾಂತ ಜಗತ್ತನ್ನೇ ಕುರುಡಾಗಿಸುತ್ತದೆ!’ ಅನ್ನುವ ಮಹಾತ್ಮರ ಮಾತನ್ನ ನೆನಪಿಡಿ!
(ಚಿತ್ರ ಕೃಪೆ : e-spectrum.blogspot.com)
Like this:
Like ಲೋಡ್ ಆಗುತ್ತಿದೆ...
Related
ಒಟ್ಟಿನಲ್ಲಿ ನಮ್ಮ ದೇಶದ ರಾಷ್ಟ್ರಪತಿಯೇ ಹೆಣ್ಣಾದರೂ, ಹೆಣ್ಣನ್ನು ನಡೆಸಿಕೊಳ್ಳುವ ಬಗೆಯಲ್ಲಂತೂ ಇಲ್ಲಿ ಯಾವುದೇ ಬದಲಾವಣೆ ಆಗಿಲ್ಲ, ಅಥವಾ, ಅದು ಇನ್ನೂ ಅಧೋಗತಿಗಿಳಿದಿದೆ. ಯಾವುದೇ ನಗರದಲ್ಲಿ ಇಂದು ಒಂದು ವರ್ಷದ ಹೆಣ್ಣು ಮಗುವಿನಿಂದ ಹಿಡಿದು ೬೦-೭೦ ವರ್ಷದ ವೃದ್ಧೆಯವರೆಗೂ ಯಾರಾದರೂ ಸ್ವತಂತ್ರವಾಗಿ, ನಿರ್ಭಯವಾಗಿ, ಯಾವುದೇ ಹೊತ್ತಿನಲ್ಲೂ ಓಡಾಡಲು ಸಾಧ್ಯವೇ? ಯಾವುದೇ ಶಾಲೆಯಲ್ಲಾಗಲಿ, ಆಸ್ಪತ್ರೆಯಲ್ಲಾಗಲಿ, ಕಚೇರಿ, ಯಂತ್ರಗಾರಗಳಲ್ಲಾಗಲೀ, ವಿಶ್ವವಿದ್ಯಾಲಯಗಳಲ್ಲಾಗಲೀ ಹೆಣ್ಣಿಗೆ ಸುರಕ್ಷೆ ಇದೆಯೇ?
ಹೆಸರಿಗೆ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವವಿದೆ. ಆದರೆ ಈಗ ಆಡಳಿತದಲ್ಲಿರುವ ಸರ್ಕಾರಕ್ಕೆ ಸ್ವಲ್ಪ ಇರುಸು ಮುರುಸಾದರೂ, ತನ್ನ ಪ್ರಜೆಗಳನ್ನೇ ಆರೋಪಿಸಲು, ಬಂಧಿಸಲು, ಮರಣ ದಂಡನೆಯನ್ನೇ ವಿಧಿಸಲೂ ಕೂಡ ಹಿಂದುಮುಂದು ನೋಡುವುದಿಲ್ಲ. ಈ ಪರಿಸ್ಥಿತಿಯನ್ನು ನಮ್ಮ ಜನ ಮತ್ತೆಷ್ಟು ದಿನ ಸಹಿಸುತ್ತಾರೆ?
ಉತ್ತಮ ಲೇಖನ. ಪ್ರಸ್ತುತ ಸ್ಥಿತಿಗೆ ಕನ್ನಡಿ ಹಿಡಿವಂತಿದೆ. ರಾಷ್ಟ್ರಪತಿ ಹೆಣ್ಣಾದರೂ ಆಕೆಗೆ ಅಸ್ತಿತ್ವವೇ ಇಲ್ಲ. ಇನ್ನೊಬ್ಬರ ಕೈಗೊಂಬೆಯಂತೇ ವರ್ತಿಸುವ ರಾಷ್ಟ್ರಪತಿ, ಪ್ರಧಾನಿ, ಮುಖ್ಯಂತ್ರಿ, ರಾಜ್ಯಪಾಲ- ಇಂತಹವರ ಸುಪರ್ದಿಯಲ್ಲಿ ಸ್ತ್ರಿಯರೇಕೆ.. ಯಾರೂ ಸುರಕ್ಷಿತರಲ್ಲ. ಎಲ್ಲವೂ ಭ್ರಷ್ಟಮಯವಾಗಿದೆ. ಯಾರು ಸತ್ತರೂ, ಹೋದರೂ ನಾವು ಚೆನ್ನಾಗಿದ್ದರೆ ಸಾಕೆಂಬ ಧೋರಣೆ ಎಲ್ಲಡೆ… 😦
ರಾಕೇಶ್
ಉತ್ತಮ ಲೇಖನ . ಮತ್ತು ಒಳ್ಳೆಯ ಮಾಹಿತಿ.
ರಾಕೇಶ್..
ಸರ್ಕಾರ ಇದಕ್ಕೆ ಸ್ಪಂದಿಸುತ್ತಿರುವ ರೀತಿ ನೋಡಿದ್ರೆ..ನೀವು ಇನ್ನೊಂದು ಐದು ವರುಷ ಬಿಟ್ಟು ‘ಇದು ಭರತವರ್ಷ : ಆ ಹೆಣ್ಣು ಮಗಳ ಹೋರಾಟಕ್ಕೆ ಹದಿನೈದು ವರ್ಷ!’ ಬರೆಯಬೇಕಾಗಿ ಬರುತ್ತದೆಯೇನೊ!..ಹಾಗಾಗದಿರಲಿ, ಈ ಹೆಣ್ಣುಮಗಳ ಹೋರಾಟಕ್ಕೆ ನ್ಯಾಯ ದೊರಕಲಿ ಎಂದು ಹಾರೈಸೋಣ.
ಇರೋ ಚಾನೂ ಶರ್ಮಿಲಾ ರವರು ದಯವ್ವಿಟ್ಟು ಉಪವಾಸ ಕೈ ಬಿಡಲಿ.
ಇಂದು ದೇಶದೆಲ್ಲೆಡೆ ವ್ಯಾಪಿಸಿರುವ ದೇಶವಿರೋಧಿಗಳನ್ನು ಮಟ್ಟ ಹಾಕಲು ಜೀವದ ಹಂಗು ತೊರೆದು ಶ್ರಮಿಸುತ್ತಿರುವ ಸೈನಿಕರ ರಕ್ಷಣೆಯ ದೃಶ್ಠಿಯಿಂದ ತಂದಿರುವ AFSP ಕಾನೂನನ್ನು ಒಂದೆರಡು ಕೆಟ್ಟ ಘಟನೆಗಳ ನೆಪದಲ್ಲಿ ರದ್ದು ಪಡಿಸಲು ಒತ್ತಾಯಿಸುವದು ಖಂಡಿತವಾಗಿಯೂ ಸರಿಯಲ್ಲ.
ನಮ್ಮೆಲ್ಲರ ನೆಮ್ಮದಿಗಾಗಿ ದಿನ ನಿತ್ಯ ಸಾವಿನ ದವಡೆಯಲ್ಲಿ ಬದುಕುತ್ತಿರುವ ಸೈನಿಕರ ಬಗ್ಗೆ ನಮ್ಮ ಕಾಳಜಿ ಸದಾ ಸಕಾರಾತ್ಮಕವಾಗಿರಬೇಕಾಗಿದೆ. ಒಂದು ಚಿಂತನೆಯನ್ನು ಪ್ರತಿಪಾದಿಸಲು ಇನ್ನೊಂದು ಚಿಂತನೆಯನ್ನು ಮಣ್ಣುಪಾಲು ಮಾಡುವುದು ಸರಿಯಲ್ಲ. ಆ ಅಕ್ಕ ದೇಶಭಕ್ತ ಸೈನಿಕರ ಅನಿವಾರ್ಯತೆಯನ್ನು ಮನಗಾಣಲಿ. ಅದಕ್ಕಾಗಿ ಅನ್ನ ಸತ್ಯಾಗ್ರಹವನ್ನು ಕೊನೆಗೊಳಿಸಲಿ.
prathiyobba bharathiyaru e lekhana odi idakke spandisi i mahileya horatakke bembala kodi.
Girija S