-ರವಿ ಸಾವ್ಕರ್
ವಿಶ್ವ ಗ್ರಾಹಕದ ದಿನದ ವಿಶೇಷ ಲೇಖನ [15ನೇ ಮಾರ್ಚ್]
ಕೆಲ ತಿಂಗಳ ಹಿಂದೆ “ನಮ್ಮ ಮೆಟ್ರೋ” ವಿನ ಅಧಿಕಾರಿಗಳು ದೈನಂದಿನ ಎಲ್ಲ ವ್ಯವಹಾರಗಳಲ್ಲಿ ಕನ್ನಡವನ್ನು ಬಳಕೆ ಮಾಡುವುದಾಗಿ ಹೇಳಿದ್ದರು. ಹಾಗೆಯೇ ಹೊರಗುತ್ತಿಗೆ ಕೊಟ್ಟಿರುವ ಸೆಕ್ಯೂರಿಟಿ ಗಾರ್ಡ್ ಎಜೆನ್ಸಿ ನವರಿಗೆ ಕನ್ನಡ ಓದಲು ಬರೆಯಲು ಬರುವವರನ್ನು ಮಾತ್ರ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ನಿಯಮ ಹಾಕಿದೀವಿ ಅಂತ ಸಹ ಹೇಳಿದ್ದರು. ಮೆಟ್ರೋ ಅಧಿಕಾರಿಗಳ ಹೇಳಿಕೆಗಳ ತುಣುಕು ಹೀಗಿದೆ. ಇವರು ಎಷ್ಟರ ಮಟ್ಟಿಗೆ ತಮ್ಮ ನಿಯಮಗಳನ್ನು ತಾವೇ ಪಾಲಿಸುತ್ತಾ ಇದಾರೆ ಅಂತ ನೋಡೋಣ.
ನೆನ್ನೆ ಮೇಟ್ರೋದಲ್ಲಿ ಒಮ್ಮೆ ಹೋಗಿ ಬರೋಣವೆಂದು ಮನೆ ಮಂದಿಯೆಲ್ಲ ಹೋಗಿದ್ದೆವು. ಮೆಟ್ರೋ ದಲ್ಲಿ ಈಗಲಾದರೂ ಕನ್ನಡ ಬಾರದ ಸೆಕ್ಯೂರಿಟಿ ಗಾರ್ಡ್ ಗಳಿಂದ ಮುಕ್ತಿ ಸಿಕ್ಕಿರಬಹುದೇನೋ ಅಂದುಕೊಂಡಿದ್ದೆ. ಆದರೆ ಬಯ್ಯಪ್ಪನಹಳ್ಳಿಯಲ್ಲಿ ಸಿಕ್ಕ ಮೊದಲ ಸೆಕ್ಯೂರಿಟಿ ಗಾರ್ಡ್ ಹಿಂದಿಯಲ್ಲಿ ಮಾತಾಡಿಸಲು ಶುರು ಮಾಡಿದ. ಕನ್ನಡದಲ್ಲಿ ಮಾತಾಡಿಸಿದಾಗ ಕನ್ನಡ ತನಗೆ ಗೊತ್ತಿಲ್ಲವೆಂದು ಉತ್ತರ ಕೊಟ್ಟ. ಕೆಲ ದಿನಗಳ ಹಿಂದೆ ಇದೆ ರೀತಿಯ ಧೋರಣೆಯ ಉತ್ತರವನ್ನು ಮೆಟ್ರೋ ಸೆಕ್ಯೂರಿಟಿ ಗಾರ್ಡ್ ಗಳು ಖಾಸಗಿ ಕನ್ನಡ ವಾಹಿನಿಗಳಿಗೆ ಕೊಟ್ಟಿದ್ದನ್ನು ಇಲ್ಲಿ ನೆನೆಯಬಹುದು.
ಇದನ್ನು ನೋಡಿದರೆ ಗಾರ್ಡ್ ವೆಲ್ ಸೆಕ್ಯೂರಿಟಿ ಎಜೆನ್ಸಿ ಗೆ ಕನ್ನಡ ಬರುವವರನ್ನು ಮಾತ್ರ ಕೆಲಸಕ್ಕೆ ತೆಗೆದುಕೊಳ್ಳಬೇಕು ಅಂತ ಶರತ್ತನ್ನು ನಿಜವಾಗಲೂ ವಿಧಿಸಿದ್ದಾರ ಅಂತ ಅನುಮಾನ ಬರುತ್ತದೆ.ದಿನಕ್ಕೆ ಸಾವಿರಾರು ಜನರನ್ನು ತಪಾಸಣೆ ಮಾಡುವ ಇವರಿಗೆ ಕನ್ನಡವೇ ಗೊತ್ತಿರದಿದ್ದರೆ ಹೇಗೆ? ಬೆಂಗಳೂರಿನ ಮೆಟ್ರೋ ಸ್ಟೇಷನ್ ಒಳಗೆ ಹಿಂದಿ ಕಲಿತೆ ಕಾಲಿಡಬೇಕು ಎಂದರೆ ಹೇಗೆ?
ಸೆಕ್ಯೂರಿಟಿ ಗಾರ್ಡ್ ಗಳ ಅವಸ್ಥೆ ಹೀಗೆ . ಇನ್ನು ಪಾಸುಗಲ್ಲಿ ಎಷ್ಟು ಹಣ ಬಾಕಿ ಉಳಿದಿದೆ ಅಂತ ನೋಡೋಕೆ ಹೋದೆ. ಆ ಮಷಿನ್ ಬಳಿ ನನ್ನ ಮೆಟ್ರೋ ಕಾರ್ಡ್ ಅನ್ನು ತೋರಿಸಿದಾಗ ನನಗೆ ಅಚ್ಚರಿ ಕಾಡಿತ್ತು. ಎಲ್ಲವೂ ಹಿಂದಿ ಮಯ. ಮೆಟ್ರೋ ಬಳಸೋರು ಕೇವಲ ಹಿಂದಿ ಬಲ್ಲವರು ಮಾತ್ರ ಎಂದು ಇವರು ನಂಬಿದ ಹಾಗೆ ಇದೆ.
ನಮ್ಮ ಎಲ್ಲ ದೈನಂದಿನ ವ್ಯವಹಾರಗಳಲ್ಲಿ ಕನ್ನಡವನ್ನೇ ಬಳಸುತ್ತೇವೆ ಅಂತ ಹೇಳಿರುವುದು ಬರಿ ಸುಳ್ಳಿನ ಕಂತೆಯಷ್ಟೇ. ಬೆಂಗಳೂರಿನ ನಮ್ಮಮೆಟ್ರೋ ದಲ್ಲಿ ಎಲ್ಲ ಸೇವೆಗಳನ್ನು ಕನ್ನಡದಲ್ಲಿ ಕೊಡುವುದರ ಮಹತ್ತ್ವವನ್ನು ಇನ್ನಾದರೂ ಅರಿತು ಜವಾಬ್ದಾರಿಯಿಂದ ನಡೆಯಲಿ ಎಂದು ಇವರಿಗೆ ತಿಳಿಸೋಣ. ಈ ಬಗ್ಗೆ ಮೆಟ್ರೋ ಅಧಿಕಾರಿಗಳಿಗೆ ಈ ವಿಳಾಸಕ್ಕೆ ದೂರು ಕೊಡಬಹುದು
bmrcl@dataone.in.
* * * * * * *
ಚಿತ್ರಕೃಪೆ : ರವಿ ಸಾವ್ಕರ್
Like this:
Like ಲೋಡ್ ಆಗುತ್ತಿದೆ...
Related