ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 19, 2012

ಭಕ್ತಿ ಆಂದೋಲನದ ಪರಿಪ್ರೇಕ್ಷ್ಯದಲ್ಲಿ ‘ನಳಚರಿತ್ರೆ’

‍ನಿಲುಮೆ ಮೂಲಕ

-ಡಾ| ಜಿ. ಭಾಸ್ಕರ ಮಯ್ಯ

ಭಾಗ – 1

ಭಕ್ತಿ ಆಂದೋಲನವು ಶ್ರೀನಗರದಿಂದ ಕನ್ಯಾಕುಮಾರಿಯ ತನಕ ಹಾಗೂ ಗುಜರಾತಿನಿಂದ ಬಂಗಾಲದ ತನಕ ವ್ಯಾಪಿಸಿತ್ತು. ಇದು ಈ ದೇಶದ ಮಧ್ಯಯುಗದ ಅತೀ ದೊಡ್ಡ ಜನಾಂದೋಲನ.

ಸಂತರೆಂದರೆ ಯಾರು? ಕೆಲವರು ನಿರ್ಗುಣ ಪಂಥದ ಸಾಧುಗಳನ್ನು ಸಂತರೆನ್ನುತ್ತಾರೆ.ಸಂಸಾರ ತ್ಯಾಗ ಮಾಡಿದವರಿಗೆ ಮಾತ್ರ ಸಂತರೆನ್ನುವುದು ತಪ್ಪು ಕಲ್ಪನೆ. ಏಕೆಂದರೆ, ಎಷ್ಟೋ ಜನ ಸಂತರು ಗೃಹಸ್ಥರಿದ್ದರು. ಅಂತೆಯೇ ಸಂತರಲ್ಲಿ ಹಿಂದೂ-ಮುಸ್ಲಿಂ ಭೇದ ಕೂಡಾ ತಪ್ಪು. ಏಕೆಂದರೆ ಇಸ್ಲಾಂ ಮತದ ರೂಢಿವಾದದ ವಿರುದ್ಧ ಸಿಡಿದೆದ್ದ ಸಾವಿರಾರು ಮುಸ್ಲಿಂ ಸಂತರಿದ್ದರು. ಸಂತರೆಂದರೆ ಕೇವಲ ಗಂಡಸರೆಂದರೆ ಅದೂ ತಪ್ಪು. ಏಕೆಂದರೆ, ಮೀರಾ, ಅಕ್ಕಮಹಾದೇವಿ, ತಾಜ್, ಸಂಕವಿ ಯಂತವರು ಗಣನೀಯವಾಗಿ ಸಿಗುತ್ತಾರೆ.

ಅಂದರೆ ಸಂತರಲ್ಲಿ ಸನ್ಯಾಸಿ ಗೃಹಸ್ಥ, ಹಿಂದೂ, ಮುಸ್ಲಿಂ, ಗಂಡು-ಹೆಣ್ಣು, ನಿರ್ಗುಣವಾದಿ, ಸಗುಣವಾದಿ ಎಲ್ಲರೂ ಸೇರುತ್ತಾರೆ.

ಇವರು ಲೋಕಧರ್ಮ ಸಂಸ್ಥಾಪಕರು. ಪುರೋಹಿತರು ಮತ್ತು ಮೌಲ್ವಿಗಳ ಭಾಷೆ, ಸಂಸ್ಕೃತ ಮತ್ತು ಅರಬಿಯಾಗಿತ್ತು. ಆದರೆ, ಸಂತರು ಜನಭಾಷೆಯಲ್ಲಿ ಬರೆದರು.

ಇವರ ಸಾಮಾಜಿಕ ಆಧಾರ ಯಾವುದು?
ಅವರು ನೇಕಾರರು, ಬಡಗಿಗಳು, ಕೃಷಿಕರು, ಕೂಲಿಗಾರರು, ವ್ಯಾಪಾರಿಗಳು ಇತ್ಯಾದಿ ನಾನಾ ಶ್ರಮ ಆಧಾರಿತ ವೃತ್ತಿಯಲ್ಲಿರುವವರು.

ಇದು ಭಾರತೀಯ ಪರಿಪ್ರೇಕ್ಷ್ಯದ ಕೇವಲ ಒಂದು ಆಕಸ್ಮಿಕ ಘಟನೆ ಅಲ್ಲ, ಬದಲಿಗೆ ದೇಶದ ಆರ್ಥಿಕ,ಸಾಮಾಜಿಕ ಪರಿಸ್ಥಿತಿಗಳ ಅನಿವಾರ್ಯ ಉತ್ಪನ್ನ. ಆದ್ದರಿಂದಲೇ ಇದು ಒಂದು ಭಾಷೆಗಾಗಲೀ, ಒಂದು ಪ್ರದೇಶಕ್ಕಾಗಲೀ ಸೀಮಿತವಾಗಿರಲಿಲ್ಲ. ಅಂತೆಯೇ ಸಂತ ಸಾಹಿತ್ಯದ ಉಗಮವನ್ನು ಭಾರತೀಯ ಜೀವನದ ತನ್ನದೇ ಪರಿಸ್ಥಿತಿಗಳಲ್ಲಿ ಆರ್ಥಿಕ,ಸಾಮಾಜಿಕ ಪರಿಸ್ಥಿತಿಗಳಲ್ಲಿ ಹುಡುಕಬೇಕೇ ಹೊರತು ಬೌದ್ಧ ಅಥವಾ ಇಸ್ಲಾಂ ಮತಗಳ ಹಿನ್ನೆಲೆಯಲ್ಲಿ ಅಲ್ಲ.

ಭಾರತೀಯ ಪರಿಸ್ಥಿತಿಗಳೆಂದರೆ – ಪಾಳೇಗಾರಿ ಪರಿಸ್ಥಿತಿಗಳ ಹ್ರಾಸ-ಇಳಿಮುಖ. ಅದರಲ್ಲಿ ಕಾಣಿಸಿಕೊಂಡ ದೌರ್ಬಲ್ಯ.ಕೆಲವು ಚರಿತ್ರೆಕಾರರ ಪ್ರಕಾರ ಪಾಳೇಗಾರಿ ಶಕ್ತಿಗಳು ಆ ಕಾಲದಲ್ಲಿ ಪ್ರಬಲವಾಗಿದ್ದವು. ಆದರೆ ಈ ಪರಿಕಲ್ಪನೆ ತಪ್ಪು ಏಕೆಂದರೆ 15, 16, 17ನೇಯ ಶತಮಾನದಲ್ಲಿ ಈ ದೇಶದಲ್ಲಿ ವ್ಯಾಪಾರದ ದೊಡ್ಡ ದೊಡ್ಡ ಮಂಡಿಗಳು ಬೆಳೆದು ಬಂದಿದ್ದವು. (ಅತೀ ದಕ್ಷಿಣದ ಬಸರೂರು, ಬಾರ್ಕೂರು, ಶಾಂಭವೀ ನದಿಗಳ ಬಂದರುಗಳು ಸಣ್ಣ ಉದಾಹರಣೆಯಾದರೆ ಕಂಭಾತ್, ಹೂಗ್ಲಿ, ನಾಗಪಟ್ಟಣ ಇತ್ಯಾದಿ ದೊಡ್ಡ ಬಂದರುಗಳು) ಅಂತೆಯೇ ಹಲವಾರು ನಗರಗಳು ವ್ಯಾಪಾರ ಮತ್ತು ಸಾಂಸ್ಕೃತಿಕ ಕೇಂದ್ರಗಳಾಗಿದ್ದವು. ಕಬ್ಬಿಣ ಮತ್ತು ಹತ್ತಿ ದೊಡ್ಡ ಪ್ರಮಾಣದಲ್ಲಿ ತಯಾರಾಗುತ್ತಿದ್ದವು. ಸಾಮಾಜಿಕ ಜೀವನದ ಮೇಲೆ ವ್ಯಾಪಾರಿಗಳ ಹಿಡಿತ ಬಲವಾಗಿತ್ತು. ಸಾಮಂತರಿಗೆ ಪಾಳೇಗಾರರಿಗಿಂತ ವ್ಯಾಪಾರಿಗಳ ಸಹಾಯ ಅಗತ್ಯವಾಗಿತ್ತು. ಸಮಾಚಾರ, ಸಂಪರ್ಕ ಸಾಧನ ವ್ಯವಸ್ಥೆ-ವ್ಯಾಪಾರಿಗಳ ಕೈಯಲ್ಲಿದ್ದು ಪಾಳೇಗಾರಿ ಶಕ್ತಿಗಳನ್ನು ದುರ್ಬಲಗೊಳಿಸಿತ್ತು.

ಸಂತರ ಲೋಕಧರ್ಮ ಪಾಳೇಗಾರಿ ವ್ಯವಸ್ಥೆಯನ್ನು ದೃಢಗೊಳಿಸುವುದಲ್ಲ; ಬದಲಿಗೆ ಅದನ್ನು ದುರ್ಬಲಗೊಳಿಸುವುದಾಗಿತ್ತು. ಪಾಳೇಗಾರಿ ವ್ಯವಸ್ಥೆಯಲ್ಲಿ ಅವರು ಸಶಕ್ತರಾಗಿದ್ದರೆ ಅವರಿಗೆ ಪುರೋಹಿತಶಾಹಿಯ ಬೆಂಬಲವಿತ್ತು. ಅದು ದುರ್ಬಲವಾಗುತ್ತಿರುವ ಸಾಮಾಜಿಕ ಪರಿಸ್ಥಿತಿಗಳಲ್ಲಿ ಸಂತರು ಈ ಏಕಸ್ವಾಮ್ಯವನ್ನು ಒಡೆಯಲು ಪ್ರಯತ್ನಿಸಿದರು. ಇಷ್ಟೆಲ್ಲಾ ಪರಿಕರಾತ್ಮಕವಾದ ಒಂದು ತಳಮಳದ ಸ್ಥಿತಿಯಿದ್ದರೂ ಭಾರತದ ಹಳ್ಳಿ ಹಳ್ಳಿಗಳಲ್ಲೂ ಮೂಢನಂಬಿಕೆಗಳು ತಾಂಡವವಾಡುತ್ತಿದ್ದವು ಎಂಬುದನ್ನು ಮರೆಯಬಾರದು.

ಮಧ್ಯಕಾಲೀನ ಭಾರತದಲ್ಲಿ ಸಾಮಾಜಿಕ ಹೋರಾಟವು ಧಾರ್ಮಿಕ ಸ್ವರೂಪದಲ್ಲಿ ಏಕಿತ್ತೆಂದರೆ ಜನತೆ ಅಸಂಗಟಿತರಾಗಿದ್ದರು.ರಾಜಕೀಯ ಹಾಗೂ ವರ್ಗ ಪ್ರಜ್ನೆ ಬೆಳೆದಿರಲಿಲ್ಲ.

ಸಂತ ಕವಿಗಳಲ್ಲಿ ಒಂದು ಸುಸಂಗತವಾದ ದೃಷ್ಟಿಕೋನವಿರಲಿಲ್ಲ. ಅವರ ದೃಷ್ಟಿಕೋನಗಳಲ್ಲಿ ಹಲವಾರು ಅಸಂಗತಿಗಳಿದ್ದವು. ಒಂದೆಡೆ ಅವರು ಜಗತ್ತನ್ನು ಮಿಥ್ಯೆ, ಬ್ರಹ್ಮ, ಪರಲೋಕ ಸತ್ಯವೆಂದರೆ ಇನ್ನೊಂದೆಡೆ ಅವರು ಪ್ರಕೃತಿ, ಸಾಮಾಜಿಕ ಜೀವನದ ಮತ್ತು ಮಾನವೀಯ ಸಂಬಂಧಗಳ ಆಳವಾದ ಪ್ರೀತಿಯನ್ನು ಅಭಿವ್ಯಕ್ತಿಸುತ್ತಿದ್ದರು. ಈ ಅಸಂಗತಿಗೆ ಕಾರಣ:-

ವರ್ಗಯುಕ್ತ ಸಮಾಜದಲ್ಲಿ ಶಾಸಕ ವರ್ಗದ ಪ್ರಭಾವ (ಖಿhe ಡಿuಟiಟಿg iಜeಚಿs oಜಿ ಣhe soಛಿieಣies ಚಿಡಿe ಟಿoಣhiಟಿg buಣ ಣhe iಜeಚಿs oಜಿ ಣhe ಡಿuಟiಟಿg ಛಿಟಚಿss: ಒಚಿಡಿx) ಈ ದರ್ಶನ ಜನತೆಗೆ ಈ ಜಗತ್ತು ಮಿಥ್ಯೆ, ದೇವರೇ ಎಲ್ಲದಕ್ಕೂ ಕಾರಣ, ಭಾಗ್ಯವಾದ, ಪುನರ್ಜನ್ಮ ಎಲ್ಲರನ್ನೂ ನಂಬಿಸುತ್ತದೆ. ಅದು ಈ ಜಗತ್ತಿನಲ್ಲಿ ಸುಖವಾದ ಬದುಕಿಗೆ ಹೋರಾಡುವುದನ್ನು ವ್ಯರ್ಥವೆಂದೆನ್ನುತ್ತದೆ.

ಇದರ ಪರಿಣಾಮ: ಸಂತ ಸಾಹಿತ್ಯದಲ್ಲಿ ನಕಾರಾತ್ಮಕ ಮತ್ತು ಸಕಾರಾತ್ಮಕ ಎರಡೂ ಅಂಶಗಳು ಪ್ರತಿಫಲಿಸಿವೆ. ಇವುಗಳಲ್ಲಿ ಯಾವುದೇ ಒಂದನ್ನು ವೈಭವೀಕರಿಸುವುದು ಅತ್ಯಂತ ಅವೈಜ್ನಾನಿಕ ತಿಳುವಳಿಕೆ.

ಸಮಸ್ಯೆ ಮತ್ತು ಚರ್ಚೆ:
1.    ಆಯಾಯ ಯುಗದಲ್ಲಿ ಗತಿಶೀಲವಾದ ಸಾಮಾಜಿಕ ಶಕ್ತಿಗಳಿಂದ ಉಂಟಾಗುವ ಸಾಂಸ್ಕೃತಿಕ ಇತಿಹಾಸದಲ್ಲಿ ನಾವು ಸರಿಯಾಗಿ ತಿಳಿದುಕೊಳ್ಳದಿದ್ದರೆ ನಾವು ಆಯಾಯ ಯುಗದ ಸಾಹಿತ್ಯವನ್ನು ಅರ್ಥ ಮಾಡುಕೊಳ್ಳುವಲ್ಲಿ ವಿಫಲರಾಗುತ್ತೇವೆ. ಮರಾಠಿ ಸಂತ ಕವಿಗಳು ಎರಡು ಸಮುದಾಯಗಳಿಂದ ಬಂದಿದ್ದರು. ಒಂದು-ಬ್ರಾಹ್ಮಣ. ಇನ್ನೊಂದು ಬ್ರಾಹ್ಮಣೇತರ. ಈ ಎರಡೂ ಸಮುದಾಯಗಳಲ್ಲಿ ಮಾನವ ಧರ್ಮದ ಸಮಾನಾಂಶಗಳಿದ್ದವು. ಅಂತೆಯೇ ದೃಷ್ಟಿಕೋನಗಳಲ್ಲಿ ಭೇದವಿತ್ತು. ಬ್ರಾಹ್ಮಣೇತರ ಸಂತ ಕವಿಗಳ ದೃಷ್ಟಿ ಹೆಚ್ಚು ಪ್ರಜಾಸತ್ತಾತ್ಮಕವೂ, ಮಾನವೀಯವೂ ಆಗಿತ್ತು. ಇದಕ್ಕೆ ಕಾರಣವಿತ್ತು. ಕೆಳ ಜಾತಿಯ ಸಂತರು ಸನಾತನಿಗಳ ದೌರ್ಜನ್ಯಕ್ಕೆ ಒಳಗಾಗಿದ್ದರು. ಉದಾ: ಜ್ನಾನೇಶ್ವರನ ಜೀವನ ಯಾತನಾಮಯವಾಗಿತ್ತು. ಆತನ ಸುಪ್ರಸಿದ್ಧ ಗ್ರಂಥ 300 ವರ್ಷಗಳ ಕಾಲ ಮುಚ್ಚಿಡಲ್ಪಟ್ಟಿತ್ತು. ಆದರೆ ಇದಕ್ಕೆಲ್ಲಾ ಏಕಮುಖ ಬ್ರಾಹ್ಮಣ್ಯದ ಶೋಷಣೆಯನ್ನು ಕಟಕಟೆಯಲ್ಲಿ ನಿಲ್ಲಿಸುವುದು ಅವೈಜ್ನಾನಿಕವಾಗುತ್ತದೆ. ಏಕೆಂದರೆ ಪ್ರಭುತ್ವ ಆ ಕಾಲದಲ್ಲಿ ಯಾವುದೇ ಒಂದು ವರ್ಣದ ಕೈಯಲ್ಲಿರಲಿಲ್ಲ. ಇವತ್ತಿನ ಫ್ಯಾಶನೆಬಲ್ ಬುದ್ಧಿಜೀವಿಗಳು ಹೇಳುವಂತೆ ಸನಾತನಿಗಳು ಕೇವಲ ಬ್ರಾಹ್ಮಣರಾಗಿರಲಿಲ್ಲ. ವರ್ಗಶಕ್ತಿಯನ್ನು ಜಾತಿಗೆ ಅಂಟಿಸುವ ರೋಗ ಆಧುನಿಕ ಪೂವ್ರಾಗ್ರಹ ಪೀಡಿತ; ಮಧ್ಯಮವರ್ಗದ ಶುಷ್ಕ ಹಾಗೂ ಪರೋಕ್ಷವಾಗಿ ಜನವಿರೋಧಿ ಧೋರಣೆ.

2.    ಭಕ್ತಿ ಆಂದೋಲನ ದಕ್ಷಿಣ ಭಾರತದ ಕೊಡುಗೆ. ಇದನ್ನು ಮಾಡಿದವರು ಶಾಸ್ತ್ರಕಾರರಲ್ಲ; ಬದಲಿಗೆ ಆಳ್ವಾರ್ ಸಂತರು. ಇವರು ಮಹಾರಾಷ್ಟ್ರದ ಬಡಜನತೆಯ ಮೇಲೆ ಅತ್ಯಧಿಕ ಪ್ರಭಾವವನ್ನು ಬೀರಿದರು. ರಾಜಕೀಯವಾಗಿ ಜನತೆಯು ಹಿಂದೂ-ಮುಸ್ಲಿಂ ಎರಡೂ ಬಗೆಯ ಪಾಳೇಗಾರರಿಂದ ತುಳಿತಕ್ಕೊಳಗಾಗಿತ್ತು. ಸಂತರ ಮಾನವತಾವಾದಿ ವಾಣಿ ಆ ಬಡ ಜನತೆಗೆ ಶಕ್ತಿ ನೀಡಿತು. ಕೀರ್ತನ, ಗಾಯನ ಅವರ ಜೀವನದಲ್ಲಿ ರಸಸಂಚಾರವನ್ನುಂಟು ಮಾಡಿತು.

ಉತ್ತರ ಭಾರತದಲ್ಲಿ ನಿರ್ಗುಣವಾದಿ ಭಕ್ತಿ ಆಂದೋಲನದಲ್ಲಿ ಶೋಷಿತಜನರ ಪಾತ್ರ ಪ್ರಬಲವಾಗಿತ್ತು. ಕಬೀರನು ಮನುಷ್ಯ ಸತ್ಯದ ಕ್ರಾಂತೀಕಾರಿ ಘೋಷಣೆ ಮಾಡಿದ್ದ. ಮೂಢನಂಬಿಕೆ ಮತ್ತು ಜಾತಿವಾದದ ವಿರುದ್ಧ ಕಬೀರ ರಣಕಹಳೆ ಊದಿದ್ದ.

ಕೃಷ್ಣಭಕ್ತಿ ಒಂದು ಬಗೆಯ ಭಾವಾವೇಶದ ವ್ಯಕ್ತಿವಾದ. ಮಹಾರಾಷ್ಟ್ರದಲ್ಲಿ ಸುಗುಣ ಭಕ್ತಿಗೆ ಪ್ರಾಧಾನ್ಯ. ಸಂತ ತುಕಾರಾಮನ ಕೃಷ್ಣ ವಿಠೋಬಾ ಒಬ್ಬ ಸಾರ್ವಜನೀನ ಆರಾಧ್ಯ. ಮೀರಾ ಕೃಷ್ಣ ಭಕ್ತಿಯಲ್ಲಿ ಲೋಕಮರ್ಯಾದೆಯನ್ನು ತ್ಯಜಿಸಿದಳು. ಅದಕ್ಕಿಂತ ಬಹಳ ಹಿಂದೆಯೇ ಅಕ್ಕಮಹಾದೇವಿ ಲೋಕದ ಮರ್ಯಾದೆ ತ್ಯಜಿಸಿದಳು. ಇಲ್ಲೆಲ್ಲಾ ಯಾವ ಶಕ್ತಿಗಳು ಕೆಲಸ ಮಾಡಿವೆ? ಯಾವ ಐತಿಹಾಸಿಕ ಪರಿಸ್ಥಿತಿಗಳು ಕಾರಣ ಎಂಬುದನ್ನು ನೋಡುವ ಅಧ್ಯಯನ ಮಾಡುವ ಗೊಡವೆಗೆ ಹೋಗದೆ ಬ್ರಾಹ್ಮಣ ದ್ವೇಷವನ್ನು ಕಾರುವ ಈ ಬ್ರಾಹ್ಮಣ ದ್ವೇಷೀ ಜಾತಿವಾದಿದೃಷ್ಟಿಯು ಸಾಹಿತ್ಯ ಮತ್ತು ಇತಿಹಾಸವನ್ನು ಅರ್ಥಮಾಡಿಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲವಾಗಿ ಸಂಘಪರಿವಾರದ ಪರ್ಯಾಯ ದೃಷ್ಟಿಕೋನವಾಗಿ ಮಾರ್ಪಡುತ್ತದೆ.

3.    ಹೇಗೆ ನಿಮ್ನ ವರ್ಗೀಯ ಭಕ್ತಿ ಭಾವನೆಯು ಒಂದು ಆರ್ಥಿಕ ಸಾಮಾಜಿಕ ಪರಿಸ್ಥಿತಿಯಿಂದ ಹುಟ್ಟಿಕೊಂಡಿತೋ ಅದು ಅಂತೆಯೇ ಇನ್ನೊಂದು ಸಾಮಾಜಿಕ ಪರಿಸ್ಥಿತಿಯಲ್ಲಿ ಕೊನೆಗೊಂಡಿತು. ಉದಾ: ಮಹಾರಾಷ್ಟ್ರದಲ್ಲಿ ಅದು ಒಂದು ರಾಷ್ಟ್ರೀಯ ಜಾತಿಯನ್ನು ಹುಟ್ಟು ಹಾಕಿತು. ಪಂಜಾಬಿನಲ್ಲಿ ಸಿಖ್ ಒಂದು ಹೊಸ ಜಾತಿಯಾಯಿತು. ಆಯಾಯ ಸಮುದಾಯಗಳು ತಮ್ಮ ತಮ್ಮ ಕಾಲದ ಶಾಸಕ ವರ್ಗದೊಂದಿಗೆ ಹೋರಾಡಿದವು. ಭಕ್ತಿಕಾಲದ ಸಂತರನ್ನು ಬಿಟ್ಟು ಮಹಾರಾಷ್ಟ್ರೀಯ ಭಾವನೆಯನ್ನು ಕಲ್ಪಿಸುವುದು ಸುಲಭವಲ್ಲ. ಅಂತೆಯೇ ಸಿಖ್ ಗುರುಗಳನ್ನು ಬಿಟ್ಟು ಸಿಖ್ಜಾತಿ ಸಮುದಾಯವನ್ನು ಕಲ್ಪಿಸಲಾಗದು.

ಸಾರಾಂಶವೆಂದರೆ: ಭಕ್ತಿ ಆಂದೋಲನದ ಗರ್ಭದಲ್ಲಿ ರಾಜಕೀಯವಿತ್ತು; ವರ್ಗ ಸಂಘರ್ಷವಿತ್ತು. ಹಾಗೂ ಅದರ ಉದ್ದೇಶ ಹಾಗೂ ಹೋರಾಟ ತತ್ಕಾಲೀನ ಪಾಳೇಗಾರಿ ಶೋಷಕ ವರ್ಗ ಮತ್ತು ಅದನ್ನು ಸಮರ್ಥಿಸುವ ಬುದ್ಧಿ ಜೀವಿಗಳ ಚಿಂತನದ ವಿರುದ್ಧವಿತ್ತು.

4.    ಅಧುನಿಕ ಸಂಘಟಿತ ರೈತ ಕಾರ್ಮಿಕ ವರ್ಗದ ಹೋರಾಟ ಜ್ವಾಜ್ವಲ್ಯಮಾನವಾಗುವ ಮುಂಚೆ ಇತಿಹಾಸದಲ್ಲಿ ವರ್ಗ ಸಂಘರ್ಷ ನಡೆಯುತ್ತಲ್ಲೇ ಇತ್ತು. (ಊisಣoಡಿಥಿ is ಟಿoಣhiಟಿg buಣ ಣhe hisಣoಡಿಥಿ oಜಿ ಛಿಟಚಿss sಣಡಿuggಟes) ಆದರೆ ಅದು ತೀವ್ರವಾಗಿ ವ್ಯಕ್ತವಾದ ಕಾಲವೇ ಭಕ್ತಿಯುಗ. ದೇಶದೆಲ್ಲೆಡೆ ಅದು ಭಿನ್ನ ಭಿನ್ನ ಕಾಲದಲ್ಲಿ ಸಂಭವಿಸಿದ್ದರೂ, ಒಂದಕ್ಕೊಂದು ಪೂರಕವಾಗಿ ಸÀರಪಟಾಕೆಯಂತೆ ನಡೆಯಿತು. ಪಟಾಕಿ ಟುಸ್ ಎಂದಾಗ ವರ್ಗ ಶಕ್ತಿಗಳು ಪ್ರಭಲಿಸಿದವು. ಕ್ರಿಸ್ತ ಗುಲಾಮರನ್ನು ಪ್ರಭಾವಿಸಿದ್ದ. ಆಗ ರೋಮನರು ಅವನನ್ನು ಶಿಲುಬೆಗೇರಿಸಿದರು. ಆದರೆ ಕ್ರಿಸ್ತನ ವಿಚಾರಗಳು ಜನರ ಮನ ಹೊಕ್ಕಾಗ ತಾವು (ರೋಮನರು) ಸ್ವತಃ ಕ್ರಿಶ್ಚನ್ನರಾದರು ಹಾಗೂ ಏಸು ಕ್ರಿಸ್ತನ ಸಂದೇಶಗಳ ಬೆನ್ನು ಮೂಳೆಯನ್ನು ಮುರಿದರು. ಇದೇ ಪರಿಸ್ಥಿತಿ ಭಾರತದಲ್ಲೂ ನಡೆಯಿತು. ಇದನ್ನು ಬುದ್ಧ, ಮಹಾವೀರ, ಬಸವಣ್ಣ, ಆಂಡಾಳ, ಕಬೀರ್ ಎಲ್ಲರ ಹೋರಾಟಗಳ ಪರಿಣಾಮದಲ್ಲೂ ಗಮನಿಸಬಹುದು.

ಹೀಗೆ ಪ್ರಖರಭಕ್ತಿ ಆಂದೋಲನದ ಶಕ್ತಿಯನ್ನು ನಿರ್ವೀರ್ಯಗೊಳಿಸಲಾಯಿತು. ಅದರ ದಂತಗಳನ್ನು ಕಿತ್ತು ಹಾಕಲಾಯಿತು. ಶೋಷಿತ ವರ್ಗದ ಪರಾಭವ ಇತಿಹಾಸದ ನಿಯತಿಯಾಗಿತ್ತು. ಅಂತಹ ಪರಾಭವದ ಪತನೋನ್ಮುಖ ಪರಿಸ್ಥಿತಿಗಳ ಮಹಾನ್ ವಾರೀಸುದಾರರು ದಾಸ ಸಾಹಿತಿಗಳು-ದಾಸ ಸಾಹಿತ್ಯದ ಈ ಪ್ರಕಾರದ ಮಹಾಪ್ರತಿಭಾವಂತ ಕವಿ ಕನಕದಾಸ.

ಕನಕದಾಸರ ವರ್ಗಚಾರಿತ್ರ್ಯ:
ಸಾಮಾನ್ಯವಾಗಿ ವಚನ ಪರಂಪರೆ ಮತ್ತು ದಾಸ ಪರಂಪರೆಗಳೆರಡೂ ಜಾತಿ ವ್ಯವಸ್ಥೆಗೆ ವಿರುದ್ಧವಾಗಿ ಬಂಡೆದ್ದ ಪ್ರಚ್ಛನ್ನ ವರ್ಗ ಹೋರಾಟವೆಂದು ಕೆಲವರು ಬಿಂಬಿಸುತ್ತಾರೆ. ಅದು ಸಂಪೂರ್ಣ ಸರಿ. ವಚನ ಪರಂಪರೆಯನ್ನು ಪ್ರಚ್ಛನ್ನ ವರ್ಗ ಸಂಘರ್ಷವೆಂದು ಕರೆಯಬಹುದು. ಆದರೆ ಅದರ ಅವನತಿಯ ಕಾಲದ ವರ್ಗಶಕ್ತಿಗಳು ಮೇಲುಗೈ ಸಾಧಿಸಿ ಕ್ರಾಂತಿಯ ಹಲ್ಲುಗಳನ್ನು ಮುರಿದು ಹುಸಿಕ್ರಾಂತಿಯ ವಾತಾವರಣವನ್ನು ಸೃಷ್ಟಿಸಿದ್ದು ದಾಸ ಸಾಹಿತ್ಯದ ದುರಂತ. ಇದನ್ನು ಕನ್ನಡ ಮತ್ತು ಸಂಸ್ಕøತಿ ಪ್ರಕಟಿಸಿದ ‘ಕನಕದಾಸರ ಕೀರ್ತನೆಗಳು ಮತ್ತು ಮುಂಡಿಗೆಗಳು’ ಪುಸ್ತಕದ ಸಂಪಾದಕ ಸುಧಾಕರ ಅವರು ಸೂಕ್ಷ್ಮವಾಗಿ ಗುರುತಿಸಿದ್ದಾರೆ:-

“ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹನ್ನೆರಡನೆಯ ಶತಮಾನದ ವಚನ ಸಾಹಿತ್ಯ ಹಾಗೂ ಹದಿನಾರನೆಯ ಶತಮಾನದ ಹರಿದಾಸ ಸಾಹಿತ್ಯ ಹೆಚ್ಚು ಜನಸಂಮುಖವಾದಂಥವು. ಆದರೆ ವಚನ ಸಾಹಿತ್ಯದ ಸ್ವಸ್ಥತೆ, ಸಮಗ್ರತೆ, ವ್ಯಾಪಕತೆ ದಾಸಸಾಹಿತ್ಯಕ್ಕೆ ದಕ್ಕಲಿಲ್ಲ ಎಂಬುದು ಸತ್ಯ. ಏಕೆಂದರೆ ಅಲ್ಲಿ ಜಾತಿಗಿಂತ ನೀತಿ ಮುಖ್ಯವಾಯಿತು. ಇಲ್ಲಿ ನೀತಿಗಿಂತ ಜಾತಿ ಮುಖ್ಯವಾಯಿತು. ಅಲ್ಲಿ ಎಲ್ಲ ವರ್ಗ ವರ್ಣಗಳ ಜನರಿಗೂ ಮುಕ್ತ ಅವಕಾಶ ಇಲ್ಲ. ಹೀಗಾಗಿ ವಚನ ಸಾಹಿತ್ಯದಲ್ಲಿ ನಾನಾ ವರ್ಗ ವರ್ಣಗಳ ವಚನಕಾರರು ಕಂಡುಬಂದರೆ ಹರಿದಾಸ ಸಾಹಿತ್ಯದಲ್ಲಿ ಒಂದೇ ವರ್ಗ ವರ್ಣಗಳ ಕೀರ್ತನಕಾರರು ಕಂಡು ಬರುತ್ತಾರೆ.”

ಪ್ರತಿಯೊಬ್ಬ ಕವಿಯು ಒಂದಲ್ಲೊಂದು ವರ್ಗದ ಉತ್ಪನ್ನವಾಗಿರುತ್ತಾನೆ. ಭಕ್ತಿಯುಗವು ಜಾತಿವಿಭಕ್ತ ಸಮಾಜವಾಗಿತ್ತು. ಅದರಲ್ಲೂ ಕನಕದಾಸ ಪುರಂದರದಾಸರು ಪಾಳೇಗಾರಿ ಯುಗದ ಕ್ರಾಂತಿಕಾರಿ ಹೋರಾಟಗಳು ನೆಲಕಚ್ಚಿದ ಪ್ರಬಲ ವರ್ಗಶಕ್ತಿಗಳು ಪುನಃ ಹೆಡೆಯೆತ್ತಿ ನಿಂತ ಕಾಲವಾಗಿತ್ತು. ಇದರಿಂದಾಗಿಯೇ ದಾಸ ಸಾಹಿತ್ಯದಲ್ಲಿ ಶೂದ್ರ ಕವಿಗಳು ಅಪರಾದವೆಂಬಂತೆ ಇವರಿಬ್ಬರೇ ಕಾಣಿಸಿಕೊಳ್ಳುತ್ತಾರೆ. ಆದರೆ ಇವರು ಆeಛಿಚಿಜeಟಿಣ ಯುಗದ ಪ್ರತಿನಿಧಿಗಳಾಗಿದ್ದರಿಂದ ಇವರನ್ನು ಕೇವಲ ಶೂದ್ರರು ಎಂಬ ಹಿನ್ನೆಲೆಯಷ್ಟೇ ನೋಡಲಾಗದು.

ಕನಕದಾಸರನ್ನು ತೆಗೆದುಕೊಂಡರೆ ಅವರ ತಂದೆ ಬೀರಪ್ಪ ಬಾಡನು ಬಂಕಾಪುರದ ಸುತ್ತಲ ಪ್ರದೇಶಕ್ಕೆ ನಾಡಗೌಡ, ಮಾಂಡಲಿಕ ಅಥವಾ ದಂಡನಾಯಕನಾಗಿದ್ದವನು. ಈತನೂ 1509ರಲ್ಲಿ ಕೃಷ್ಣದೇವರಾಯನಿಂದ ಕಾಗಿನೆಲೆ ಪ್ರದೇಶಕ್ಕೆ ದಂಡನಾಯಕನಾಗಿ ನೇಮಿಸಲ್ಪಟ್ಟ. ಈತನನ್ನು ಯೋಧನೆಂದು ಹೇಳಲಾಗುತ್ತದೆ. ದೇವಸ್ಥಾನವನ್ನು ಕಟ್ಟಿದ ಖ್ಯಾತಿ ಬೇರೆ ಕನಕದಾಸನಿಗಿದೆ! ಈತನ ಓದು ಕೂಡಾ ವಿಶಾಲವಾದುದು. ಸಂಸ್ಕೃತಸಾಹಿತ್ಯದಲ್ಲಿ ಇಷ್ಟೊಂದು ಪಾಂಡಿತ್ಯವನ್ನು ಪಡೆಯುವುದು ಆ ಕಾಲದ ಸಾಮಾನ್ಯ ಶೂದ್ರನೊಬ್ಬನಿಗೆ ಸಾಧ್ಯವಿಲ್ಲ. ಈ ಎಲ್ಲಾ ಕಾರಣಗಳಿಂದ ಕನಕದಾಸರ ವರ್ಗ ಹಿನ್ನೆಲೆಯು ಅವರ ಕೃತಿಗಳಲ್ಲಿ ಪ್ರತಿಬಿಂಬಿಸಲ್ಪಡುವುದು ಸ್ವಾಭಾವಿಕವೇ ಆಗಿತ್ತು.

ಭಾಗ – 2
ಉಪಸಂಹಾರ
ಇಲ್ಲಿ ಒಂದು ಮಾತನ್ನು ಒಪ್ಪಿಕೊಳ್ಳಬಹುದು. ಭಕ್ತ-ಸಂತ ಭಾರತೀಯ ಜನತೆಯ ಪ್ರೇಮ, ತಿರಸ್ಕಾರ, ಆಸೆ-ಆಕಾಂಕ್ಷೆಗಳ ಕನ್ನಡಿ. ಅದು ಹೃದಯದ ಸುಕೋಮಲ ಭಾವನೆಗಳ ಪ್ರತೀಕ. ಇವಾವುವೂ ಅತೀಂದ್ರಯವಲ್ಲ. ಇಷ್ಟನ್ನು ಕನಕದಾಸರು ತಮ್ಮ ನಳ ಚರಿತ್ರೆಯಲ್ಲಿ ಅಭಿವ್ಯಕ್ತಿಸಿರುತ್ತಾರೆ ಎಂಬುದನ್ನು ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡರೂ “ಭಕ್ತಿ ಪಂಥದ ಕಾವ್ಯ ಜನತೆಯ ನೋವಿನ ಚಿತ್ರಣ ಮಾತ್ರವಲ್ಲ, ಅದು ಅವರು ಅದುಮಿಟ್ಟುಕೊಂಡ ಆಕ್ರೋಶವೂ ಹೌದು” ಎಂಬ ನನ್ನ ಮಾತು ಕನಕದಾಸರ ನಳಚರಿತ್ರೆಗೆ ಅನ್ವಯಿಸುವುದಿಲ್ಲ. ಸಾಹಿತ್ಯ ಇಲ್ಲಿ ಸಾಪೇಕ್ಷವಾಗಿ ಸ್ವಾಧೀನವಾಗಿಲ್ಲ. ಅದು ನಿರಪೇಕ್ಷವಾಗಿ ಗೊಡ್ಡು ಪರಂಪರೆಗೆ ಜೋತು ಬಿದ್ದಿದೆ. ಹಿಂದಿಯ ತುಳಸೀದಾಸರ ಉದ್ದೇಶ ರಾಮಭಕ್ತಿಯ ಆಧಾರದಲ್ಲಿ ಭಿನ್ನ ಭಿನ್ನ ಮತದವರನ್ನು ಒಗ್ಗೂಡಿಸುವುದಲ್ಲದೆ, ಜನತೆಯ ನೋವಿಗೆ ದನಿಯಾಗುವುದಾಗಿದ್ದರೆ ಅವರ ಸಮಕಾಲೀನನಾದ ಕನಕದಾಸರಿಗೆ ಅಂಥ ಯಾವುದೇ ಬದ್ಧತೆ ಕಾಣಿಸುವುದಿಲ್ಲ. ನಾನು ಈ ಮುಂಚೆ ಅಂದುಕೊಂಡಂತೆ ನಳನ ಕತೆ ಮಧ್ಯಕಾಲದ ನಿಷೇಧದ ವಿರುದ್ಧ ಪ್ರಬಲ ದಂಗೆಯ ರೂಪದಲ್ಲಿ ಪ್ರಕಟವಾಗುವುದಿಲ್ಲ. ಬದಲಿಗೆ ಪರಮ ಪ್ರತಿಗಾಮೀ ರೂಪದಲ್ಲಿ ಪ್ರಕಟವಾಗುತ್ತದೆ.

ಒಂದು ಬಾರಿ ಭಕ್ತಿ ಆಂದೋಲನದಲ್ಲಿ ಬ್ರಾಹ್ಮಣರ ಪ್ರಭಾವ ಗಟ್ಟಿಯಾಯಿತೆಂದರೆ ವರ್ಣಾಶ್ರಮ ಧರ್ಮದ ಪುನರುಜ್ಜೀವನಕ್ಕೆ ಯಾವ ತೊಡಕು ಉಂಟಾಗುವುದಿಲ್ಲ. ಕನಕದಾಸರು ನಳ ಚರಿತ್ರೆಯಲ್ಲಿ ಮಾಡಿದ್ದು ಇದೇ ಪುನರುಜ್ಜೀವನದ ಮಹಾ ಕೈಕಂರ್ಯವನ್ನು. ಅಷ್ಟೆ.

* * * * * * * * *

ಚಿತ್ರಕೃಪೆ : http://trifter.com

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments