ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 23, 2012

ಮಂಕು ತಿಮ್ಮನ ಕಗ್ಗ – ರಸಧಾರೆ (೭)

‍ನಿಲುಮೆ ಮೂಲಕ

– ರವಿ ತಿರುಮಲೈ

ಏನು ಜೀವನದರ್ಥ?

ಬದುಕಿಗಾರ್ ನಾಯಕರು, ಏಕನೋ ಅನೇಕರೋ?
ವಿಧಿಯೋ ಪೌರುಷವೋ ಧರುಮವೋ ಅಂಧಬಲವೋ?
ಕುದುರುವುದೆಂತು ಈಯವ್ಯವಸ್ಥೆಯ ಪಾಡು?
ಅದಿಗುದಿಯೆ ಗತಿಯೇನೋ? – ಮಂಕುತಿಮ್ಮ

ಬದುಕಿಗಾರ್= ಬದುಕಿಗೆ=ಯಾರ್,  ಧರುಮವೋ= ಧರ್ಮವೋ, ಅಂಧಬಲವೋ= ಅಂಧ ಶ್ರದ್ಧೆಯೋ,  ಈಯವ್ಯವಸ್ಥೆಯ = ಈ + ಅವ್ಯವಸ್ಥೆಯ, ಅದಿಗುದಿ = ಸಂದೇಹ ಅಥವಾ ತಳಮಳ.

ಈ ಬದುಕಿಗೆ ಯಾರು ನಾಯಕರು? ಒಬ್ಬನೇ ಒಬ್ಬನೋ ಅಥವಾ ಅನೇಕರಿದ್ದಾರೆಯೋ? ಅಥವಾ ಈ ಬದುಕಿಗೆ ನಾಯಕ, ವಿಧಿಯೋ,ಧರ್ಮವೋ,ಅಥವಾ ಅಂಧ ಶ್ರದ್ಧೆಯೋ? ಹಿಂದಿನ ಕಗ್ಗದಲ್ಲಿ ಉಲ್ಲೇಖಿಸಿರುವ ಅವ್ಯವಸ್ಥೆ ಸರಿಯಾಗುವುದೋ ಇಲ್ಲವೋ? ಅಥವಾ ಇವೆಲ್ಲರದರ ವಿಚಾರದ ತಳಮಳದಲ್ಲಿಯೇ ನಾವು ಯಾವಾಗಲೂ ಇರಬೇಕೆ?  ಈ ರೀತಿಯ ಪ್ರಶ್ನೆಗಳನ್ನು ಸನ್ಮಾನ್ಯ ಡಿ ವಿ ಗುಂಡಪ್ಪನವರು ತಮ್ಮನ್ನೇ ತಾವು ಕೇಳಿಕೊಳ್ಳುತ್ತಾ, ಓದುಗರ ಮುಂದೆ ಪ್ರಸ್ತಾಪಿಸುತ್ತಾರೆ.

ಈ ರೀತಿಯ ಸಂದೇಹಗಳು ಎಲ್ಲ ಕಾಲಕ್ಕೂ ಎಲ್ಲ ವಿಚಾರವಂತರಿಗೂ ಮನದಲ್ಲಿ ಉದ್ಭವವಾಗುತ್ತದೆ. ” ಕಿಮೇಕಂ ದೈವತಂ ಲೋಕೆ?  ಕಿಂ ವಾಪ್ಯೇಕಂ ಪರಾಯಣಂ?  ಸ್ತುವನ್ತಃ ಕಂಕಮರ್ಚಂತಃ ಪ್ರಾಪ್ನುಯುರ್ಮಾನವಾಃ ಶುಭಂ? ಕೋ ಧರ್ಮಃ ಸರ್ವ ಧರ್ಮಾಣಾಂ ಭವತಃ ಪರಮೌ ಮತಃ ? ಕಿಂ ಜಪನ್ಮುಚ್ಯತೇರ್ಜ೦ತುರ್ ಜನ್ಮ ಸಂಸಾರ ಬಂಧನಾತ್ ” ಇವು ಮಹಾಭಾರತದಲ್ಲಿ ಧರ್ಮರಾಯನು ಭೀಷ್ಮರು ಶರ  ಶಯ್ಯೆಯಲ್ಲಿರುವಾಗ, ಸಂಜೆ ನಡೆಯುವ ಸತ್ಸಂಗದಲ್ಲಿ ಕೇಳುವ ಪ್ರಶ್ನೆ. ಒಬ್ಬನೇ ದೇವನಾರು? ಎಲ್ಲಕ್ಕಿಂತ ಮಿಗಿಲಾದ ಧರ್ಮವಾವುದು? ಎಂಬ ಸಂದೇಹಗಳು ಧರ್ಮರಾಯನಿಗೇ ಬರುವುದಾದರೆ, ಇನ್ನು ನಮಗೆ  ಎಂತಹ ಸಂದೇಹಗಳು ಬರಬೇಕು ಹೇಳಿ?    ಇದು ಸಹಜ. ಈ ಸೃಷ್ಟಿಯ ರಹಸ್ಯವನ್ನು ಛೇಧಿಸಲು ಅಷ್ಟು  ಸುಲಭವೇ?

ದೇವನೊಬ್ಬ ನಾಮ ಹಲವು ಎಂಬ ಮಾತು ಎಲ್ಲರಿಗೂ ಗೊತ್ತಿರುವುದೇ. ಆದರೆ ಆ ದೇವನಾರು? ಮೂರ್ತರೂಪದಲ್ಲಿಹನೆ ಅಥವಾ ಅಮೂರ್ಥನೆ ಅಂದರೆ ಆಕಾರ ಉಂಟೆ  ಇಲ್ಲವೇ? ಆ ಜಗತ್ತಿಗೆ ಮತ್ತು ಜಗತ್ತಿನ ಜೀವಿಗಳಿಗೆ ಅವನು ನಾಯಕನೇ? ಧರ್ಮಕ್ಕೆ ನಮ್ಮಲ್ಲಿ ಬಹಳ ಪ್ರಾಧಾನ್ಯವಿದೆ. ಧರ್ಮವೆಂದರೆ ಒಂದು ವಸ್ತುವಿನ ಸ್ವಭಾವ ಎನ್ನುವ ಅರ್ಥವೂ ಇದೆ. ಹಾಗೆಯೆ ಧರ್ಮಕ್ಕೆ ಬೇರೆ ಬೇರೆಯವರು ಬೇರೆ ಬೇರೆ ರೀತಿಯಲ್ಲಿ ವ್ಯಾಕ್ಯಾನ ಮಾಡಿದ್ದಾರೆ .ಹಾಗಾಗಿ ಜಗತ್ತಿನಲ್ಲಿ ಇಷ್ಟೊಂದು ಭಿನ್ನ ಭಿನ್ನ ಮತಗಳು.  ಅಂತ ಧರ್ಮವೇ ಈ ಜಗತ್ತಿನ ನಾಯಕನೇ ? ವಿಧಿ ಎಂದರೆ ಪೂರ್ವ ನಿಯಮಿತ ಕ್ರಮ ಎಂದು ಅರ್ಥ. ಮೊದಲೇ ವಿಧಿಸಿದ ಬಗೆ. ಹಣೆಯ ಬರಹವೆಂದೂ ಅನ್ನುತ್ತಾರೆ. ನಮ್ಮ ಬದುಕನ್ನು ನಡೆಸುವುದು ಈ ಹಣೆಯ ಬರಹವೇ ? ಯಾವುದಾದರೂ ಆಗಲಿ ಅಥವಾ ಇರಲಿ, ಈ  ಜಗತ್ತಿನ ಅಸಮತೆ, ಅಸಮಾನತೆ, ವೈಚಿತ್ರ್ಯ, ಅಥವಾ ಅವ್ಯವಸ್ಥೆಯು ಸರಿಯಾಗುವ ಬಗೆ ಇದೆಯೋ ಇಲ್ಲವೋ ? ಅಥವಾ ಇದನ್ನು ಅರಿಯುವ ಮತ್ತು ನಿರ್ಧರಿಸುವ ತಳಮಳದಲ್ಲಿಯೇ ನಾವು ಎಂದಿಗೂ ಇರಬೇಕೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ
ದೇವರನ್ನೇ ನಂಬುವ, ದೇವರನ್ನು ಮತ್ತು ಧರ್ಮವನ್ನು ನಂಬುವ (ಇಲ್ಲಿ ಧರ್ಮ ಬೇರೆಯಲ್ಲ ದೇವರು ಬೇರೆಯಲ್ಲ ಎಂಬ ವಾದ ಮಾಡುವವರೂ ಉಂಟು) ದೇವರನ್ನು ಮತ್ತು ವಿಧಿಯನ್ನುಎಂದರೆ ಹಣೆಬರಹವನ್ನೇ ನಂಬುವ ಮತ್ತು ತಮ್ಮ ಸ್ವಶಕ್ತಿಯನ್ನೇ ನಂಬುವ ಎಲ್ಲ ರೀತಿಯ ಜನರು ಜಗತ್ತಿನ ಎಲ್ಲೆಡೆಯಲ್ಲೂ, ಎಲ್ಲ ಮತಗಳಲ್ಲೂ ಇದ್ದಾರೆ.  ಕಾರಣವೇ ತಿಳಿಯದ,  ಈಜಗತ್ತಿನ ಅಸಮಾನತೆ ಜಗತ್ತಿನಲ್ಲಿ ಎಲ್ಲೆಲ್ಲೂ ಇದೆ ಅಲ್ಲವೆ ಇದು ಏಕೆ ಹೀಗೆ,  ಇದು ಸರಿಯಾಗುವುದೋ ಇಲ್ಲವೋ ಎನ್ನುವ ನೆನೆಗುದಿಯಲ್ಲೇ ಮಾನವರು ಬದುಕು ದೂಡುತ್ತಿದ್ದಾರೆ. ಇಂತಹ ಭಾವಗಳನ್ನೇ ವ್ಯಕ್ತಪಡಿಸುತ್ತಾರೆ ಮಾನ್ಯ ಗುಂಡಪ್ಪನವರು.

ಇಂತಹ    ಸಂದೇಹಗಳು ನಮ್ಮ ನಿಮ್ಮ ಮತ್ತು ಸಕಲರಲ್ಲೂ ಉಂಟಾಗುತ್ತದಲ್ಲವೇ?

ಮಿತ್ರರೇ  ಬನ್ನಿ ನಾವು ನೀವು ಎಲ್ಲರೂ ಇಂತಹ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಲು , ವಿಚಾರ ಮಾಡುವ, ವಿಚಾರ ಮಾಡುತ್ತಾ ಮಾಡುತ್ತಾ ಮುಂದಿನ ಕಗ್ಗಕ್ಕೆ ಹೋಗುವ.

ಇಂದಿನ ದಿನ ನಿಮಗೆಲ್ಲರಿಗೂ ಶುಭವಾಗಲಿ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments