ಮಂಕು ತಿಮ್ಮನ ಕಗ್ಗ – ರಸಧಾರೆ (೧೦)
– ರವಿ ತಿರುಮಲೈ
ಏನು ಪ್ರಪಂಚವಿದು! ಏನು ಧಾಳಾಧಾಳಿI
ಏನದ್ಭುತಾಪಾರಶಕ್ತಿ ನಿರ್ಘಾತ! II
ಮಾನವನ ಗುರಿಯೇನು? ಬೆಲೆಯೇನು?ಮುಗಿವೇನು? I
ಏನರ್ಥವಿದಕೆಲ್ಲ? – ಮಂಕುತಿಮ್ಮ II
ಏನದ್ಭುತಾಪಾರಶಕ್ತಿ ನಿರ್ಘಾತ = ಏನು ಅದ್ಭುತ + ಅಪಾರ+ ಶಕ್ತಿ , ನಿಘಾತ = ಹೊಡೆತ.
ಇಲ್ಲಿಯವರೆಗೆ ಬಂದ ೯ ಕಗ್ಗಗಳಲ್ಲಿ, ಮೊದಲ ಮೂರು ಕಗ್ಗಗಳಲಿ, ಶ್ರೀ ಗುಂಡಪ್ಪನವರು, ಆ ಪರಮಾತ್ಮನೆಂದೆನಿಸಿಕೊಂಡ, ಪರಮ ಶಕ್ತಿಗೆ ನಮಿಸುತ್ತಾ, ಮುಂದಿನ ಕಗ್ಗಗಳಲ್ಲಿ ಮನುಷ್ಯನ
ಜೀವನದ ಮತ್ತು ಸೃಷ್ಟಿಯ ವಿಚಿತ್ರಗಳನ್ನು ಬರೆದಿದ್ದಾರೆ. ಈ ಸಮಯಕ್ಕೆ ನಾ ಹಿಂದೆ ಹೇಳಿದಂತೆ ಎರಡನೇ ಮಹಾ ಯುದ್ಧ ಆರಂಭವಾಗಿ ಎಲ್ಲೆಲ್ಲೂ ಹಾಹಾಕಾರ ದಾಳಿಗಳು. ಇವಗಳನ್ನು ಕಂಡು ಅಂದಿನ ಸಮಯಕ್ಕೆ ಅವರ ಅನುಭೂತಿ ಏನಿತ್ತು ಎಂಬುದು ಇಂದಿನ ಮತ್ತು ಮುಂದಿನ ಕೆಲವು ಕಗ್ಗಗಳಲ್ಲಿ ಕಾಣಬಹುದು.
ಈ ಪ್ರಪಂಚಕ್ಕೆ ಏನಾಗಿದೆ? ಏಕೆ ಈ ಮುತ್ತಿಗೆಗಳು? ಏನು ಈ ಹೊಡೆತಗಳು ಮತ್ತು ಆ ಹೊಡೆತಗಳ ಹಿಂದಿನ ಅಪಾರ ಶಕ್ತಿ ಏನು ?ಮಾನವನ ಗುರಿಯೇನು? ಇದಕ್ಕೆಲ್ಲ ಬೆಲೆಯೇನು?
ಇದಕ್ಕೆಲ್ಲ ಅಂತ್ಯವೇನು? ಮತ್ತು ಇದಕ್ಕೆಲ್ಲ ಏನು ಅರ್ಥ ಎಂಬ ಬಾವಗಳನ್ನು ವ್ಯಕ್ತ ಪಡಿಸುತ್ತಾ ಅಂದು ನಡೆಯುತ್ತಿದ್ದ ಪ್ರಾಪಂಚಿಂಕ ವಿಧ್ಯಮಾನಗಳನೆಲ್ಲ ಒಟ್ಟುಗೂಡಿಸಿ ಹಲವು
ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತಾರೆ.
ಯಾರೋ ಒಬ್ಬ ಸರ್ವಾಧಿಕಾರಿಯ ಅಧಿಕಾರ ದಾಹ, ಅಧಿಕಾರವನ್ನು ವಿಸ್ತರಿಸುವ ಮಹತ್ವಾಕಾಂಕ್ಷೆ ಮತ್ತು ಅಹಂಕಾರವನ್ನು ತಣಿಸುವ ದಾಹಕ್ಕೆ ಬಲಿಯಾದದ್ದು ಇಡೀ ವಿಶ್ವ. ಒಂದು
ರಾಷ್ಟ್ರ ಮತ್ತೊಂದು ರಾಷ್ಟ್ರದಮೇಲೆ ದಾಳಿ. ಆ ರಾಷ್ಟ್ರಕ್ಕೆ ಕೆಲವು ಮತ್ತು ಈ ರಾಷ್ಟ್ರಕ್ಕೆ ಕೆಲವು ರಾಷ್ಟ್ರಗಳು ಸಹಾಯಕ್ಕೆ ನಿಲ್ಲುತ್ತವೆ. ಆಗ ಆ ಎರಡು ರಾಷ್ಟ್ರಗಳು ಮತ್ತು ಆ ರಾಷ್ಟ್ರಗಳ
ಸಹಾಯಕ್ಕೆ ನಿಂತ ಬೇರೆ ರಾಷ್ಟ್ರಗಳ ಎಲ್ಲ ಸೈನಿಕರೂ ಹೊಡೆದಾಡುತ್ತಾರೆ. ಯಾರೋ ಯಾರ ಮೇಲೋ ದಾಳಿ. ದಾಳಿಗೊಳಗಾದ ರಾಷ್ಟ್ರಕ್ಕಾಗಲೀ ದಾಳಿಮಾಡಿದ ರಾಷ್ಟ್ರಕ್ಕಾಗಲೀ ದಾಳಿಯ
ಕಾರಣವೇ ಗೊತ್ತಿಲ್ಲ. ಹೊಡೆದಾಡುವುದು, ಪಾಪ ಮುಗ್ದ ಸೈನಿಕರು. ಕೇವಲ ಜೀವಿಕೆಗಾಗಿ.