ಕನ್ನಡಮ್ಮನ ಹೆಮ್ಮೆಯ ಪುತ್ರನೂ ಅಣ್ಣಾವರ ಮಗನೂ
– ಜಿ.ವಿ ಜಯಶ್ರೀ
ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ ಚಂದ್ರ ಮೇಲೆ ಬಂದ
ಮಿನುಗು ತಾರೆ ಅಂದ ನೋಡು ಎಂಥ ಚಂದ
ರಾತ್ರಿ ಆಯ್ತು ಮಲಗು ನನ್ನ ಪುಟ್ಟ ಕಂದ,
ಇದು ಎಂಬತ್ತರ ದಶಕದ ಹಾಡು. ತುಂಬಾ ಇಷ್ಟ ಪಟ್ಟು ಈಗಲೋ ಕೇಳುವಂತಹ ಸುಂದರ ಗೀತೆ.ಈ ಚಿತ್ರದಲ್ಲಿ ನಟಿಸಿದ ಪುನೀತ್ ರಾಜ್ ಕುಮಾರ್ ನಟನೆಯಷ್ಟೇ ಮನಸೆಳೆದ ಸಂಗತಿ ಅಂದ್ರೆ ಅವರು ಹಾಡಿದ ಈ ಹಾಡು .
ಮೊದಲಿನಿಂದ ವೀಕ್ಷಕ ದೇವರ ಮನ ಸೆಳೆದ ಕಲಾವಿದ ಪುನೀತ್. ಅವರ ಅಣ್ಣಂದಿರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಖುದ್ದು ಪುನೀತ್ ವಿಷಯದಲ್ಲಿ ತೋರುವ ಅಭಿಮಾನ ಅಪಾರ.
ಈತನ ಬಗ್ಗೆ ತಮಗೆ ತುಂಬಾ ಹೆಮ್ಮೆ ಇದೆ. ಅಪ್ಪಾಜಿಯ ನಂತರ ಬಣ್ಣ ಹಚ್ಚಿದ (ಪೂರ್ಣಿಮಾ ಸಹ ಹಚ್ಚಿದ್ದಾರೆ ) ಪುನೀತ್ ತಮಗೆ ಮಾದರಿ ಎನ್ನುವ ಮಾತು ಹೇಳಿರುವುದು ಅವರು ತಮ್ಮನ ಮೇಲೆ ಇಟ್ಟಿರುವ ಪ್ರೀತಿಯನ್ನು ಎತ್ತಿ ತೋರುತ್ತದೆ.
ಶಿವಣ್ಣ ಜೀ ಕನ್ನಡ ವಾಹಿನಿಯಲ್ಲಿ ಕಾರ್ಯಕ್ರಮ ನಡೆಸಿ ಕೊಟ್ಟಾಗ ಅಪಾರ ಸಂಖ್ಯೆಯ ವೀಕ್ಷಾಕಾಭಿಮಾನ ಹೊಂದಿದ್ದರು.ಆ ಕಾರ್ಯಕ್ರಮದ ಮೂಲಕ ಹೆಚ್ಚು ಗೊತ್ತಾದರೂ ಶಿವಣ್ಣ. ಕಾರಣ ಇಷ್ಟೇ ಸಿನಿಮಾದಲ್ಲಿ ಗಿಣಿಗೆ ಕಲಿಸಿದ ಪಾಠದಂತೆ ಡೈಲಾಗ್ ಹೇಳುವ ಶಿವಣ್ಣನಿಗಿಂತ ತನ್ನ ಹೃದಯದಿಂದ ಮಾತನಾಡಿದ ಶಿವಣ್ಣ ಇಷ್ಟ ಆಗಿತ್ತು.. ಮಾತಲ್ಲಿ ಯಾವುದೇ ರೀತಿಯ ನಾಟಕೀಯತೆ, ಕಲಿತ ಮಾತು ಇರದೇ ಸಾಮಾನ್ಯ ಮನೆಕನ್ನಡ ಮಾತಾಡಿ , ತಮ್ಮ ಸರಳತೆ, ವಿಶೇಷ ವ್ಯಕ್ತಿತ್ವ್ದದಿಂದ ಗೆದ್ದಿದ್ದರು.
ಪುನೀತ್ ರಾಜ್ ಕುಮಾರ್ ಅವರು ಬಾಲ ನಟರಾಗಿ ಮಿಂಚಿದ್ದ ಕಲಾವಿದ, ಆದರೆ ನಾಯಕನಟರಾಗಿ ವಜ್ರದಂತೆ ಹೊಳೆದಿದ್ದು ಅವರ ಪ್ರತಿಭೆಯ ಪ್ರಭೆಯ ವಿಶೇಷತೆ. ಸಾಮಾನ್ಯವಾಗಿ ಬಾಲ ನಟರು ಯಶಸ್ವಿ ನಾಯಕರಾಗಿರುವ ಉದಾಹರಣೆಗಳು ತುಂಬಾ ಕಡಿಮೆ. ಅಂತಹುದರಲ್ಲಿ ಪುನೀತ್ ನಾಯಕರಾದರೂ ಉತ್ತಮ ನಟರೂ ಅದರೂ ಪಕ್ಕಾ ಅಣ್ಣಾವರ ಮಗನಾದರು 🙂
ಆದರೆ ಎಂತಹ ಪ್ರತಿಭಾವಂತ ಕಲಾವಿದ ಆಗಿರಲಿ ನಾಟಕದಲ್ಲಿ ಅಂದ್ರೆ ರಂಗಭೂಮಿಯಲ್ಲಿ ಪಾತ್ರ ನಿರ್ವಹಿಸುವುದು ಜಾಸ್ತಿ ಕಷ್ಟ ಎನ್ನುವ ಅಭಿಪ್ರಾಯ ನನ್ನದು. ಅದಕ್ಕಾಗಿ ಸಿಕ್ಕಾಪಟ್ಟೆ ಹೋಮ್ವರ್ಕ್ ಮಾಡ ಬೇಕು.
ಹಿರಿತೆರೆಯಲ್ಲಿ ಮಿಂಚಿ ಮಿನುಗಿದರೂ ಕಿರುತೆರೆಯಲ್ಲಿ ಕಾರ್ಯಕ್ರಮ ನಿರ್ವಹಣೆ ಮಾಡುವುದು ಸುಲಭದ ಮಾತಲ್ಲ , ಇದು ಸಹ ನನ್ನ ಸ್ವಂತ ಅಭಿಪ್ರಾಯ. ಆ ಕೆಲಸ ಮಾಡ ಬೇಕಾದರೆ ಅದಕ್ಕಾಗಿ ತುಂಬಾ ವರ್ಕೌಟ್ ಮಾಡಿರ ಬೇಕು. ಮೇರು ನಟ ಪುನೀತ್ ಕನ್ನಡದ ಕೋಟ್ಯಾಧಿಪತಿಯಲ್ಲಿ ಮುಖ್ಯ ಪಾತ್ರ ಅಂದ್ರೆ ಅದರ ಪ್ರೆಸೆ೦ಟರ್ ಆಗುವ ಸುದ್ದಿ ಕೇಳಿದಾಗ ಬಿಡಿ ಎಲ್ಲರೂ ಕಾದರು. ಅತ್ಯುತ್ತಮ ನಟ ಪುನೀತ್, ಅಣ್ಣಾವ್ರ ಮಗ ಪುನೀತ್ …. ! ದೊಡ್ಡ ಪಟ್ಟಿ ಇದೆ, ಆ ಪುನೀತ್ ಅಭಿಮಾನಿಗಳು ಸಿಕ್ಕಾಪಟ್ಟೆ . ಫೇಸ್ಬುಕ್ ನಲ್ಲಿ ನೀವು ಒಮ್ಮೆ ಭೇಟಿ ಕೊಡಬೇಕು, ಸಾಕಷ್ಟು ಪಡ್ಡೆಗಳ ಹೆಸರು Puneeth Appufan (Jackie) ಇಂತಹ ಹೆಸರುಗಳು ಮಾತ್ರವಲ್ಲ ಅಪ್ಪು ಅನ್ನುವ ಹೆಸರು ಕಾಮನ್ ,ಅವರ ಹೆಸರೊಂದಿಗೆ ಅಪ್ಪು, ಪುನೀತ್, .. ಹೀಗೆ ಹಲವಾರು,.
ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುವ ಕನ್ನಡದ ಕೋಟ್ಯಾಧಿಪತಿಯಲ್ಲಿ ಈಗ ಪುನೀತ್ ಮುಖ್ಯ ಆಕರ್ಷಣೆ. ಅಮಿತಾಬ್ ಬಚ್ಚನ್ ಕಂಡ ಜನಕ್ಕೆ ಇವರ ಬಗ್ಗೆ ಇದ್ದ ಕುತೂಹಲ ಒಂದೇ ಶೋಗೆ ವಾಶ್ ಔಟ್ ಆಗಿದೆ. ಇಲ್ಲಿ ಬರುವ ಸಾಧಾರಣ, ಅಸಾಧಾರಣ ಸ್ಪರ್ಧಿಗಳು, ಸಾಮಾನ್ಯ ಗೃಹಿಣಿಯರು ಪ್ರತಿಯೊಬ್ಬರ ಜೊತೆ ಸಮಚಿತ್ತದಿಂದ ಇರುವ ಪುನೀತ್ ಅನೇಕ ಸರ್ತಿ ಸ್ಪರ್ಧಿಗಳ ಪ್ರಶ್ನಾವೈಖರಿಗೆ ತಾವೇ ದಂಗಾಗಿ ಹೋಗ್ತಾರೆ, ನಿಮ್ಮ ಮನೆಯಲ್ಲಿ ಎಷ್ಟು ಲೀಟರ್ ಹಾಲು ತರಿಸ್ತೀರಿ , ನಿಮ್ಮ ಮಕ್ಕಳ ವಯಸ್ಸೆಷ್ಟು, ನಿಮ್ಮ ಮಗಳ ಶಾಲೆಗೇ ನೀವು ಪೇರೆಂಟ್ಸ್ ಮೀಟಿಂಗ್ ಗೆ ಹೋಗ್ತೀರಾ ? ಎಲ್ಲವೂ ವೀಕ್ಷಕರಿಗೆ ಮಜಾ ನೀಡುವ ಸಂಗತಿಗಳು.
ಇವೆಲ್ಲದಕ್ಕೂ ಪುನೀತ್ ಥೇಟ್ ಡಾ. ರಾಜ್ ಅವರ ಶೈಲಿಯಲ್ಲಿ ಉತ್ರ ನೀಡುವ ರೀತಿ, ಅವರ ಬಾಡಿ ಲಾಂಗ್ವೇಜ್ , ಮುಗ್ಧತೆ ಅಪರಿಮಿತ ಖುಷಿ ನೀಡುತ್ತದೆ.
ಗೆದ್ದವರಿಗೆ ಮತ್ತಷ್ಟು ಗೆಲ್ಲಲಿ ಎಂದು ನೀಡುವ ಪ್ರೋತ್ಸಾಹ, ಸೋತವರಿಗೆ ಸಾಂತ್ವಾನ ಇವೆಲ್ಲ ಪ್ರತಿ ಎಪಿಸೋಡ್ ನಲ್ಲಿ ನಡೆಯುತ್ತಿರುತ್ತದೆ. ಆದರೆ … ಆದ್ರೆ…!
ಆದ್ರೆ … ಅನೇಕ ಸ್ಪರ್ಧಿಗಳು ಅದರಲ್ಲೂ ಕಡುಬಡವ ಸ್ಪರ್ಧಿಗಳು ಒಂದಷ್ಟು ಫೇರ್ ಅಮೌಂಟ್ ಗೆಲ್ಲುವ ಕನಸು ಹೊತ್ತು ಬಂದಿರುತ್ತಾರೆ, ಅವರು ಸಾಕಷ್ಟು ಪ್ರಯತ್ನ ಮಾಡಿಯೂ ಇರ್ತಾರೆ, ಆದರೆ ಅಂತಹವರಲ್ಲಿ ಕೆಲವರಿಗೆ ಹಣ ಗೆಲ್ಲುವ ಅವಕಾಶ ಬರುವುದೇ ಇಲ್ಲ, ಅಂದ್ರೆ ಆರಂಭಿಕ ಹಂತದಲ್ಲಿ ಅವರು ಸೋತು ಹೋದರೆ ನೀವು ನಂಬಲಾರಿರಿ ಪುನೀತ್ ಅಂತಹವರಿಗೆ ತಮ್ಮ ಸ್ವಂತ ಹಣ ನೀಡಿ ಕಳಿಸ್ತಾ ಇದ್ದಾರೆ. ಆರು ಲಕ್ಷ ,ಮೂರು ಲಕ್ಷ ಒಟ್ಟಾರೆ ಈ ಮೂಲಕ ಅಗತ್ಯ ಇರುವವವರಿಗೆ ಹಣದ ಸಹಾಯ ಮಾಡ್ತಾ ಇದ್ದಾರೆ. ಇವರ ಈ ವೈಖರಿ ಕಂಡು ಸುವರ್ಣ ಟೀಮ್ ದಂಗಾಗಿದ್ದಾರೆ. ಕೇವಲ ರೀಲ್ ನಲ್ಲಿ ಮಾತ್ರವಲ್ಲದೆ ರಿಯಲ್ನಲ್ಲೂ ಇಂತಹ ಹೃದಯವಂತಿಕೆ ಕಾಣುತ್ತಿರುವುದು ಅಪರೂಪ.ಆದರೆ ಅಪ್ಪು ಇದಕ್ಕೆ ಅಪವಾದ ಎನ್ನುತ್ತಿದ್ದಾರೆ ಈ ಕಾರ್ಯಕ್ರಮದ ಪಿಲ್ಲರ್ ಗಳಾದ ಅನೂಪ್ ಚಂದ್ರಶೇಖರ್ ಮತ್ತು ರಾಘವೇಂದ್ರ ..! ಪುನೀತ್ ಬಗ್ಗೆ ಹೇಳಲು ಇದಕ್ಕಿಂತ ದೊಡ್ಡ ಸಂಗತಿ ಇನ್ನೇನಿದೆ. ಆ ದೇವರು ನಿಮ್ಮನ್ನು ಸದಾ ಹಸಿರಾಗಿಟ್ಟಿರಲಿ ಎನ್ನುವುದೇ ನಮ್ಮ ಹಾರೈಕೆ 🙂
ಹೀಗೂ…ಊಂಟೇ..?!!! ಎನ್ನುವ ಉದ್ಗಾರ ನನ್ನ ಬಾಯಿಂದ ತಾನೇ ತಾನಾಗಿ ಬಂತು; ಪುನೀತ್ ಅವರ ದಾನಶೀಲತೆಯನ್ನು ನೋಡಿ. ಸಿಂಹದ ಹೊಟ್ಟೆಯಲ್ಲಿ ಸಿಂಹವೇ ಹುಟ್ಟುತ್ತೇ ಅಲ್ಲವೆ?
punit higiddaaraa!!!!!!parichaisiddakke dhanyavadagalu