ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 29, 2012

3

ಕುಲಾಂತರಿ ಚರ್ಚೆ: ಇನ್ನೊಂದು ಮುಖ

‍ನಿಲುಮೆ ಮೂಲಕ

– ಪ್ರಸನ್ನ ಆಡುವಳ್ಳಿ,ಧಾರವಾಡ

ಕುಲಾಂತರಿಗಳ ಬಗ್ಗೆ  “ಕನ್ನಡಪ್ರಭ”  ಪತ್ರಿಕೆಯಲ್ಲಿ ಶಾಂತು ಶಾಂತಾರಾಮ್ ಹಾಗೂ ಎಮ್ ಮಹದೇವಪ್ಪ ಅವರು ಬರೆದ ಬರಹ ಓದುಗರನ್ನು ದಾರಿತಪ್ಪಿಸುವಂತಿದೆಯೇ ವಿನಹಾ ಅವುಗಳ ಕುರಿತು ಸರಿಯಾದ ಮಾಹಿತಿಯನ್ನು ನೀಡುವಲ್ಲಿ ವಿಫಲವಾಗಿದೆ. ಕುಲಾಂತರಿಗಳನ್ನು ಅಭಿವೃದ್ದಿಯ ಹೆಸರಲ್ಲಿ, ಅಧಿಕ ಅಹಾರ ಉತ್ಪಾದನೆಯ ನೆಪದಲ್ಲಿ ರೈತರ ಹಾಗೂ ಗ್ರಾಹಕರ ಮೇಲೆ ಹೇರುವ ಪ್ರಯತ್ನದ ಒಂದು ಭಾಗವಾಗಿ ಈ ಬರಹಗಳು ಮೂಡಿಬಂದಿವೆಯಷ್ಟೇ.

ವಿಜ್ನಾನವು ಸತ್ಯ ಶೋಧನೆಯಿಂದ ರೂಪಗೊಳ್ಳುವುದೇ ವಿನಹ ಸಂಖ್ಯಾ ಬಲದಿಂದಲ್ಲ ಎಂಬ ಮಹದೇವಪ್ಪನವರ ಮಾತುಗಳು ಒಪ್ಪತಕ್ಕದ್ದೇ . ಆದರೆ ಬಿ.ಟಿ. ಬದನೆ ಕುರಿತ ಚರ್ಚೆ ಯಲ್ಲಿ ವಿಜ್ನಾನಿಗಳಿಗೆ ಸೂಕ್ತ ಕಾಲಾವಕಾಶ ಸಿಗಲಿಲ್ಲ ಎಂಬ ಮಾತು ಸತ್ಯಕ್ಕೆ ದೂರ. ತಾತ್ಕಾಲಿಕ ನಿಷೇಧ ಹೇರುವ ಮುನ್ನ ದೇಶದ ಹಲವೆಡೆಗಳಲ್ಲಿ ಪರ-ವಿರೋಧಗಳ ಬಗ್ಗೆ ಪರಿಸರ ಸಚಿವಾಲಯ ವಿಸ್ತೃತ ಚರ್ಚೆ ನಡೆಸಿತ್ತು. ಇಷ್ಟಲ್ಲದೇ  ದೇಶದ ಪ್ರತಿಷ್ಟಿತ ಆರು ವಿಜ್ನಾನ ಅಕಾಡೆಮಿಗಳಿಂದ ಅಭಿಪ್ರಾಯ ಕೇಳಿತ್ತು. ಆದರೆ ಅಲ್ಲಿನ ವಿಜ್ನಾನಿಗಳು ಕೊಟ್ಟ ಬೇಜಾವಾಬ್ದಾರಿಯುತ ವರದಿ ಎಲ್ಲರಿಂದ ಟೀಕೆಗೆ ಒಳಗಾಗಿದ್ದು ನೆನಪಿರಬಹುದು. ಎಲ್ಲದಕ್ಕೂ ವೈಜ್ನಾನಿಕ ಆಧಾರ ಕೇಳುವವರು ತಮ್ಮ ವರದಿಯ ಬಗ್ಗೆ ಏಕೆ ಚಕಾರ ಎತ್ತುವುದಿಲ್ಲ? ಅಲ್ಲೇಕೆ ಯಾವುದೇ ವೈಜ್ನಾನಿಕ ಆಧಾರ ನೀಡದೇ ತೀರ ಕಳಪೆ ಗುಣಮಟ್ಟದ ವರದಿ ಕೊಟ್ಟರು?

ಬಿ.ಟಿ. ಹತ್ತಿ ಬಂದ ಮೇಲೆ ಹತ್ತಿಯನ್ನು ಆಮದು ಮಾಡಿಕೊಳ್ಳುತ್ತಿದ್ದ ಭಾರತ ಹತ್ತಿ ರಫ್ತು ಮಾಡುವ ದೇಶವಾಯ್ತೆಂದು ಹೆಮ್ಮೆಯಿಂದ ಹೇಳುವವರು ಇತ್ತೀಚೆಗೆ ಹತ್ತಿಯ ಒಟ್ಟಾರೆ ಉತ್ಪಾದನೆ ಕಡಿಮೆಯಾಗಿದೆಯೆಂದು ಕೇಂದ್ರ ರಫ್ತು ನಿಷೇಧ ಮಾಡಲು ಹೊರಟಿದ್ದನ್ನೇಕೆ ಪ್ರಜ್ನಾಪೂರ್ವಕವಾಗಿ ಮರೆಮಾಚುತ್ತಾರೆ? ದೇಶದ ಶೇಕಡಾ 93ರಷ್ಟು ಭಾಗದಲ್ಲಿ ಬಿ.ಟಿ.ಹತ್ತಿಯನ್ನೇ ಬೆಳೆಯುತ್ತಿದ್ದರೂ ಹೀಗಾಗಿದ್ದೇಕೆ?!

ಸದ್ಯ ನಮ್ಮ ಮಾರುಕಟ್ಟೆಯಲ್ಲಿರುವ ಎಲ್ಲ ಕುಲಾಂತರಿ ತಳಿಗಳು ಖಾಸಗೀ ಕಂಪನಿಗಳಿಂದಲೇ ಬಂದವು. ಸರ್ಕಾರಿ ಸ್ವಾಮ್ಯದ ಸಂಸ್ತೆಗಳು ಇನ್ನೂ ಅಂಬೆಗಾಲಿಕ್ಕುತ್ತಿವೆಯಷ್ಟೆ. ಮೊನ್ಸಾಂಟೋ ಕಂಪನಿಯ ಬಿ.ಟಿ. ಜೀನನ್ನು ತೋರಿಸಿ ತಾವು ತಯಾರಿಸಿದ್ದೆಂದು ಹೇಳಿ ಸಿಕ್ಕಿಹಾಕಿಕೊಂಡ ಧಾರವಾಡ ಹಾಗೂ ದೆಹಲಿಯ ಕೃಷಿ ವಿಜ್ನಾನಿಗಳ ಪ್ರಕರಣವನ್ನು ಇಲ್ಲಿ ನೆನಪಿಸಿಕೊಂಡರೆ ತಪ್ಪಾಗಲಾರದು. ಹೀಗೇ ಆದರೆ ಇನ್ನೊಂದು ದಶಕ ಕಳೆದರೂ ಸರ್ಕಾರಿ ರಂಗದಿಂದ ಬಿ.ಟಿ. ಅಭಿವೃದ್ದಿ ಅನುಮಾನ. ಅಷ್ತರಲ್ಲಿ ಖಾಸಗೀ ಕಂಪನಿಗಳು ರೈತರನ್ನು ತಮ್ಮ ಕಪಿಮುಷ್ಟಿಯೊಳಗೆ ಹಿಡಿದಿರುವುದರಲ್ಲಿ ಅನುಮಾನವಿಲ್ಲ. ಇನ್ನು ರೈತರೇ ಇದರ ಬೀಜೋತ್ಪಾದನೆ ಮಾಡಿಕೊಳ್ಳಬಹುದೆಂಬ ಹಸಿ ಸುಳ್ಳನ್ನೇಕೆ ಹೇಳುತ್ತಾರೆಂಬುದು ಅರ್ಥವಾಗದು.

ವೈಜ್ನಾನಿಕ ಸಂಶೋಧನೆ ನಡೆಸಿ ಸುರಕ್ಷಿತ ಎಂದು ಸಾಬೀತಾದವುಗಳನ್ನು ಬಳಸಬಹುದೆನ್ನುತ್ತಲೇ ಸುರಕ್ಷತೆಗಾಗಿ ಯಾವ್ಯಾವ ಪರೀಕ್ಷೆ ಮಾಡಾಬೇಕೆಂದು ಸೂಚಿಸಿದ ಪುಷ್ಪ ಭಾರ್ಗವರ ಮೆಲೆ ಹರಿಹಾಯುವುದು ಪೂರ್ವಾಗ್ರಹವಲ್ಲದೇ ಮತ್ತೇನು?

ಹಸಿರು ಕ್ರಾಂತಿಯ ಗಡಿಬಿಡಿಯಲ್ಲಿ ನಾವು ಮಾಡಿದ ಅದ್ವಾನಗಳು ಈಗಷ್ಟೇ ಅರಿವಿಗೆ ಬರುತ್ತಿರುವಾಗ ಮತ್ತೊಂದು ಹಸಿರು ಕ್ರಾಂತಿ ಮಾಡುವ ಮುನ್ನ ಅದರಿಂದಾಗಬಹುದಾದ ಹಾನಿಕಾರಕ ಪರಿಣಾಮಗಳ ಬಗ್ಗೆ ಈಗಲೇ ಯೋಚಿಸಿ, ಸೂಕ್ತ ಸಂಶೋಧನೆ ನಡೆಸಿ ನಿವಾರಿಸಿಕೊಳ್ಳಬೇಕಿದೆ. ಕುಲಾಂತರಿಗಳ ಬಗ್ಗೆ ಇನ್ನೂ ವಿರೋಧಾಭಾಸ ಅಭಿಪ್ರಾಯಗಳು ವಿಜ್ನಾನಿಗಳಲ್ಲೆ ಇರುವಾಗ ಅವನ್ನು ಮಾರುಕಟ್ಟೆಗೆ ಬಿಡಬೇಕೆನ್ನುವುದರ ಹಿಂದೆ ಕಾರ್ಪೋರೇಟ್ ಲಾಬಿಯಿದೆಯೇ ಹೊರತು ಮತ್ತೇನಲ್ಲ.

ಕುಲಾಂತರಿ ಬೀಜಗಳನ್ನು ಮೊದಮೊದಲಿಗೆ ಕಡಿಮೆ ಬೆಲೆಗೆ ಮಾರಿ ಒಮ್ಮೆಗೆ ನಾಲ್ಕು ಪಟ್ಟು ಬೆಲೆ ಏರಿಸಿದರೆ ರೈತರ ಸ್ತಿತಿ ಏನಾಗಬೇಡ? ತನ್ನಲ್ಲಿದ್ದ ದೇಶಿ ತಳಿಗಳ ಬೀಜವನ್ನು ಕಳೆದುಕೊಂಡು ಬೇರೆ ದಾರಿಯಿಲ್ಲದೇ ಕಂಪನಿಗಳ ಬಾಗಿಲು ಬಡಿಯುವ ರೈತನ ಸ್ತಿತಿಯನ್ನು ಆಧುನಿಕ ವಸಾಹತುಶಾಹಿಯ ಪರಿಣಾಮ ಅನ್ನದೇ ವಿಧಿಯಿಲ್ಲ. ಡಾಲರ್ ಲೆಕ್ಕದಲ್ಲಿ ಸಂಬಳ ಎಣಿಸುವವರಿಗೆ ನಮ್ಮ ಸಣ್ಣ ಹಿಡುವಳಿದಾರರಿಗೆ 1000 ರೂಪಾಯಿಯೂ ದೊಡ್ದ ವೊತ್ತ ಎಂಬುದು ಅರ್ಥವಾಗುವುದಿಲ್ಲ.

ಎಲ್ಲದಕ್ಕೂ ವೈಜ್ನಾನಿಕ ಆಧಾರ ಕೇಳುವವರು ಬಿ.ಟಿ.ಯ ಹಾನಿಕಾರಕ ಅಂಶಗಳ ಬಗ್ಗೆ ಬೆಳಕು ಚೆಲ್ಲುವ ಸಂಶೋಧನಾ ಪ್ರಭಂಧಗಳನ್ನೇಕೆ ಮರೆಮಾಚುತ್ತಾರೆಂದು ಅರ್ಥವಾಗದು. ಮೊನಾರ್ಕ್ ಚಿಟ್ಟೆ, ಲೇಸ್ವಿಂಗ್ ಮೊದಲಾದ ನಿರಪಾಯಕಾರಿ ಕೀಟಗಳಿಗೆ ಬಿ.ಟಿ. ವಿಶಕಾರಿ ಎಂಬ ಬಗ್ಗೆ ಸಾಕಷ್ಟು  ವೈಜ್ನಾನಿಕ ಮಾಹಿತಿ ಇದೆಯಲ್ಲಾ?!
ಇನ್ನು ಶಾಂತು ಶಾಂತಾರಾಮರ ರೈತಪರ ಕಳಕಳಿ ಎಷ್ತಿದೆ ಅನ್ನೊದು ಗೊತ್ತಾಗಬೇಕಾದರೆ ಅವರೇ ಕೇರಳದಲ್ಲಿ ನಡೆದ ಸಮಾರಂಭವೊಂದರಲ್ಲಿ ನೀಡಿದ ಹೇಳಿಕೆಯನ್ನು ಗಮನಿಸಬೇಕು “if any of us are the seed companies or in the seed business, would we like our customers to approach us only once? Why wouldn’t we like our business to multiply? Wouldn’t it be economically viable for us to ensure that farmers buy seed from us every year? “  ಇದು ಅವರು ಮಾಡುತ್ತಿರುವ ಕಾರ್ಪೋರೆಟ್  ಲಾಬಿಯಲ್ಲದೇ ಮತ್ತೇನು?

ಇಷ್ಟಕ್ಕೂ ಶಾಂತಾರಾಮರು ಕೃಷಿ ಜೈವಿಕ ತಂತ್ರಜ್ನಾನದ ದೈತ್ಯ ಕಂಪನಿ ‘ಸಿಂಜೆಂಟಾ’ದ ಉದ್ಯೋಗಿಯಾಗಿದ್ದವರು. ಕುಲಾಂತರಿಗಳನ್ನೆ ಉಸಿರಾಡುತ್ತಿರುವ ಹನ್ನೆರೆಡು ಜಾಗತಿಕ ಕಂಪನಿಗಳ ಮುಖವಾಣಿಯಾದ ABLE-AG(Association of Biotech Lead Enterprices-Agriculture Group)ನ ಮುಖ್ಯಸ್ತರಾಗಿರುವವರು. ‘ಬಯಾಲಜಿಕ್ಸ್ ಇಂಟೆನ್ರ್ಯಾಶನಲ್’ ಎಂಬ ತಮ್ಮದೇ ಆದ ಸಂಸ್ತೆಯೊಂದನ್ನು ಕಟ್ಟಿಕೊಂಡು ಜೈವಿಕ ತಂತ್ರಜ್ನಾನ ಕಂಪನಿಗಳಿಗೆ ಸಲಹೆ ಕೊಡುತ್ತಿರುವವರು. ಅವರಿಗೆ ರೈತಪರ ಕಳಕಳಿಗಿಂತ ಕಾರ್ಪೋರೇಟ್ ಕಳಕಳಿಯೇ ಹೆಚ್ಚಾಗಿ ಇದ್ದಂತಿದೆ!

ಭಾರತೀಯ ಕೃಷಿಕ ಹಾಡುತ್ತ ಕುಣಿಯುತ್ತ ಸ್ತಳೀಯವಾಗಿ ಲಭ್ಯವಿದ್ದುದನ್ನೇ ಬಳಸಿಕೊಂಡು ಖುಶಿಯಿಂದ ಕೃಷಿ ಮಾಡಿದ್ದುಕೊಂಡವ. ಅಭಿವೃದ್ದಿಯ ಹೆಸರಲ್ಲಿ ಆತನಿಗೆ ದೇಶಕ್ಕೆಲ್ಲ ಅನ್ನವುಣಿಸುವ ಜವಾಬ್ದಾರಿ ಕೊಟ್ಟು, ಭೂಮಿ ಕಿತ್ತುಕೊಳ್ಳುತ್ತಾ ಈಗಾಗಲೆ ಸಾಕಷ್ಟು ಸಂಕಷ್ಟಗಳಿಗೆ ಈಡು ಮಾಡಿದ್ದೇವೆ. ಹೀಗೇ ಆದರೆ ಇನ್ನವನನ್ನು ಬಹುರಾಷ್ಟ್ರೀಯ ಕಂಪನಿಗಳ ಜೀತಕ್ಕಿಡುವ ದಿನಗಳೂ ದೂರವಿಲ್ಲ ಎನಿಸುತಿದೆ….

ಚಿತ್ರ ಕೃಪೆ : ಮಧುಭಟ್.ಬ್ಲಾಸ್ಪಾಟ್.ಕಾಂ

3 ಟಿಪ್ಪಣಿಗಳು Post a comment
 1. minchu
  ಮಾರ್ಚ್ 30 2012

  good article…

  ಉತ್ತರ
 2. ಗಂಜಾಂ ಪರಮೇಶ್
  ಮಾರ್ಚ್ 30 2012

  ಭಾರತ ಕೃಷಿ ಪ್ರಧಾನ ದೇಶ ಅನ್ನುತ್ತಾರೆ.ನಮಗಿಂತ ಪುಟ್ಟದಾ ಮರಳುಗಾಡಿನ ಇಸ್ರೇಲ್ ಸಾಧಿಸಿ ತೋರಿಸಿದ್ದನ್ನು ನೋಡುವುದು.ವರ್ಷಕ್ಕೊಂದು ಪ್ರವಾಸ ಮಾಡುವುದು ಇದೇ ಆಯಿತು.ಅನ್ನದಾತನ ಕಷ್ಟಕ್ಕೆ ಯಾರು ಇಲ್ಲ. ವಿಜ್ನಾನ ಕ್ಷೇತ್ರದಲ್ಲಿ ಆಸಕ್ತಿಯಿಲ್ಲದೆ ಹಣಕ್ಕಾಗಿ ಒಳತೂರಿಕೊಂಡ ಜನರಿಂದ ದೇಶಕ್ಕೆ ಈ ಗತಿ.

  ಬಹಳ ವಿವರವಾಗಿ ಚರ್ಚೆಯ ಇನ್ನೊಂದು ಮಗ್ಗುಲು ತೆರೆದಿದ್ದೀರಿ.ನಮ್ಮ ಜನಕ್ಕೆ ಇಂತ ಲೇಖನಗಳು ಆಸಕ್ತಿದಾಯಕವಲ್ಲ ಬಿಡಿ

  ಉತ್ತರ
 3. mahesh
  ಏಪ್ರಿಲ್ 3 2012

  ಕುಲಾಂತರಿಗಳ ಬಗ್ಗೆ ಒಳ್ಳೇ ಲೇಖನ. ಬರಹದ ಶೈಲಿಯೂ ಇಷ್ಟವಾಯ್ತು. ಇಂತಹ ಇನ್ನಷ್ಟು ಬರಹಗಳು ನಿಲುಮೆಯಲ್ಲಿ ಮೂಡಿಬರಲಿ…

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments