ಮಂಕು ತಿಮ್ಮನ ಕಗ್ಗ – ರಸಧಾರೆ (೧೪)
– ರವಿ ತಿರುಮಲೈ
ಲೋಕಜೀವನ ಮಂಥನ
ಒಂದೇ ಗಗನವ ಕಾಣುತೊಂದೆ ನೆಲವನು ತುಳಿಯು I
ತೊಂದೆ ಧಾನ್ಯವನುಣ್ಣುತೊಂದೆ ನೀರ್ಗುಡಿದು II
ಒಂದೇ ಗಾಳಿಯನುಸಿರ್ವ ನರಜಾತಿಯೋಳಗೆಂತು I
ಬಂದುದೀ ವೈಷಮ್ಯ? – ಮಂಕುತಿಮ್ಮ ಈ
ಉಣ್ಣು = ತಿನ್ನು,ಉಸಿರ್ವ= ಉಸಿರಾಡುವ , ನರಜಾತಿ = ಮಾನವ ಜನಾಂಗ. ವೈಷಮ್ಯ = ದ್ವೇಷ . ಎಂತು- ಹೇಗೆ.
ಒಂದೇ ಆಕಾಶವ ಕಾಣುತ, ಒಂದೇ ನೆಲವನ್ನು ತುಳಿಯುತ ಒಂದೇ ಧಾನ್ಯವನ್ನು ಉಣ್ಣುತ ಒಂದೇ ಗಾಳಿಯನು ಉಸಿರಾಡುವ ಮಾನವಜಾತಿಯ ಒಳಗೆ ಈ ದ್ವೇಷ ಹೇಗೆ ಬಂತು ಎಂದು ತಮಗೆ ತಾವೇ ಪ್ರಶ್ನಿಸುತ್ತ
ಈ ವಿಚಾರವನ್ನು ಓದುಗರ ಮುಂದಿಟ್ಟಿದ್ದಾರೆ, ಶ್ರೀ ಗುಂಡಪ್ಪನವರು.
ಈ ಜಗತ್ತಿನಲ್ಲಿರುವ ಮಾನವರೆಲ್ಲರಿಗೂ, ಮಾನವರಿಗಷ್ಟೇ ಏನು ಸಕಲ ಜೀವಿ ಸಂಕುಲಕ್ಕೂ ತಲೆಯ ಮೇಲಿನ ಆಕಾಶ ಒಂದೇ. ಇರುವ ಭೂಮಿಯೂ ಒಂದೇ, ಎಲ್ಲರೂ ತಿನ್ನುವುದು ಒಂದೇ ರೀತಿಯ ಆಹಾರ, ಕುಡಿಯುವ ನೀರಿಗೂ ಒಂದೇ ಮೂಲ, ಹಾಗಿದ್ದರೂ ಏಕೆ ಈ ವೈಷಮ್ಯ, ಈ ದ್ವೇಷ ಎಂಬ ಪ್ರಶ್ನೆ ಕಾಲಾನುಕಾಲಕ್ಕೆ ಎಲ್ಲ ಚಿಂತಕರ ಮನಗಳಲ್ಲೂ ಸುಳಿದು, ಉತ್ತರ ಕಂಡು ಕೊಳ್ಳಲು ಪ್ರಯತ್ನ ಆಗಿದೆ.
ಆದರೆ ವಿಚಿತ್ರವೇನೆಂದರೆ, ಅನಾದಿ ಕಾಲದಿಂದಲೂ ಮನುಷ್ಯರ ಗುಂಪುಗಳ ನಡುವೆ, ಒಂದು ದೇಶ ಮತ್ತು ಮತ್ತೊಂದು ದೇಶದ ನಡುವೆ, ಅಣ್ಣ ತಮ್ಮಂದಿರ ನಡುವೆ, ಎರಡು ಊರಿನ ನಡುವೆ ಹೀಗೆ ಎರಡು ಗುಂಪುಗಳ ನಡುವೆ ಉದ್ಭವವಾಗುವ ದ್ವೇಷ, ದ್ವೇಷದಿಂದ ಆವೇಶ, ಇವೆರಡರ ಫಲವಾಗಿ ಜಗಳ ಹೊಡೆದಾಟಕ್ಕೆ ಮೂಲ ಕಾರಣವೇ, ಶ್ರೀ ಗುಂಡಪ್ಪನವರು ಉಲ್ಲೇಖಿಸಿದ, ನೀರು ನೆಲಗಳೇ ಅಲ್ಲವೇ? ಇವುಗಳಿಗಾಗಿಯೇ ಜಗತ್ತಿನ ಎಲ್ಲ ಹೋರಾಟಗಳೂ ನಡೆದಿವೆ. ಇಂದು ನಮ್ಮ ದೇಶದ ನ್ಯಾಯಾಲಯಗಳಲ್ಲಿ ಹೂಡಲ್ಪಡುವ ಕಟ್ಟಳೆಗಳಲ್ಲಿ ೯೦ ಪ್ರತಿಶತ ಭೂಮಿಗೆ ಸಂಬಂಧಿಸಿದುವೆ ಆಗಿರುತ್ತೆ.
“ಇಷ್ಟಿದ್ದರೆ ಮತ್ತಷ್ಟರಾಸೆ” ನಮ್ಮ ಜೀವಿಕೆಗೆ ಎಷ್ಟು ಬೇಕೋ ಅಷ್ಟನ್ನು ಪಡೆದು ಹೊಂದಿ ಕಾಯ ಕರ್ಮ ಮಾಡಿ ಜೀವಿಸುವುದು ಸರಿಯಾದ ಕ್ರಮ. ಆದರೆ ಮಾನವನ ಆಸೆಗೆ ಗಗನವೇ ಮಿತಿ. ಅದಕ್ಕೊಂದು ಹಿಂದೆ ನಾ ಕೇಳಿದ ಕಥೆಯನ್ನು ಹೇಳಬೇಕು. ಒಬ್ಬನಿಗೆ ಬಹಳ ಬಹಳ ಭೂಮಿ ಬೇಕೆನ್ನಿಸಿತಂತೆ. ಅವನ ತಪಸ್ಸಿಗೆ ಮೆಚ್ಚಿ ದೇವರು ಏನು ವರಬೇಕೆಂದಾಗ, “ನನಗೆ ಹೆಚ್ಚು ಭೂಮಿ ಬೇಕು” ಎಂದನಂತೆ. ” ನೋಡು ನೀ ನಿಂತಿರುವ ಜಾಗದಿಂದ ಇಂದು ಸಂಜೆಯವರೆಗೆ ಎಷ್ಟುದೂರ ಓಡಿ, ಎಷ್ಟು ಭೂಮಿಯನ್ನು ಕ್ರಮಿಸಿ ಮತ್ತೆ ಸೂರ್ಯಾಸ್ತಮಾನದ ವೇಳೆಗೆ ನೀ ಈಗ ನಿಂತಿರುವ ಜಾಗಕ್ಕೆ ಬಂದು ಸೇರಿದರೆ, ನೀ ಎಷ್ಟು ಭೂಮಿಯನ್ನು ಉಪಕ್ರಮಿಸಿರುತ್ತೀಯೋ ಅದನ್ನೆಲ್ಲ ನಿನಗೆ ಕೊಡುತ್ತೇನೆ” ಎಂದನಂತೆ ಆ ದೇವರು. ಮಾನವರ ಬಲಹೀನತೆ ಆ ದೇವರಿಗೇ ಗೊತ್ತಿಲ್ಲವೇ. ಕೊಟ್ಟದ್ದೂ ಅವನೇ ತಾನೇ? ಸರಿ ಇವ ಓಡಿದ, ಓಡಿದ. ಓಡಿ ಓಡಿ ಇನ್ನೂ ಸ್ವಲ್ಪ ಮುಂದೆ ಹೋಗುವ, ಇನ್ನೂ ಸ್ವಲ್ಪ ಮುಂದೆ ಹೋಗುವ, ಎಂದು ಓಡಿ ಓಡಿ ಮಧ್ಯಾನ್ಹದ ತನಕ ಓಡಿದ. ” ಅಯ್ಯೋ ಹಿಂತಿರುಗಬೇಕಲ್ಲ ಎಂದು ಯೋಚನೆ ಮಾಡಿ ಮತ್ತೆ ಸ್ವಸ್ಥಾನ ಸೇರಲು ಮೊದಲಿಟ್ಟ. ಆರಂಭದ ಹುಮ್ಮಸ್ಸು ಮತ್ತು ಶಕ್ತಿ ಕುಂದಿತ್ತು. ಬರುತ್ತಾ ಬರುತ್ತಾ ಬಹಳ ಸುಸ್ತಾಗಿ ಕುಸಿದ. ಇನ್ನೇನು ತಾ ಶುರುಮಾಡಿದ ಸ್ಥಳ “ಅಗೋ, ಅಲ್ಲಿ ಕಾಣುತ್ತಿದೆ” ಎನ್ನುವಾಗ ಆ ಸೂರ್ಯ ಮುಳುಗಿಯೇ ಬಿಟ್ಟ. ಆ ದೇವರೂ ಮಾಯವಾಗಿಬಿಟ್ಟ. ಇವನಿಗೆ ಉಳಿದಿದ್ದು ಏನು ಬರೀ ಶ್ರಮ. ಪಶ್ಚಾತ್ತಾಪ.
ಹೀಗೆ ನಾವು ಮಾಡುವ ಕೆಲಸ, ವಸ್ತು, ವ್ಯಕ್ತಿ, ವಿಷಯಗಳನ್ನು ಬಯಸುವಾಗ, ನಮ್ಮ ಮಿತಿಗಳನ್ನು ಅರಿತುಕೊಂಡರೆ ಸುಖ ಇಲ್ಲದಿದ್ದರೆ? ಇಲ್ಲದಿದ್ದರೆ, ನಮಗೆ ಸಿಗಲಿಲ್ಲವೆಂದು ಕೋಪ, ನಮಗಿಂತ ಪರರಿಗೆ ಅಧಿಕವಾಗಿ ಸಿಕ್ಕಿದೆ ಎಂದು ಅಸೂಯೆ, ಸಿಕ್ಕರೆ ಮತ್ತಷ್ಟರ ಲೋಭ, ಅಧಿಕವಾಗಿ ಸಿಕ್ಕರೆ ಮದ, ಸಿಕ್ಕದ್ದು ನಾನಲ್ಲೇ ಇರಬೇಕೆನ್ನುವ ಮೋಹ ಹೇಗೆ ಎಲ್ಲವೂ ಅಂಟಿಕೊಳ್ಳುತ್ತದೆ. ಜೀವನವೇ ನರಕವಾಗುತ್ತದೆ .
ಒಂದೇ ಭೂಮಿ ಒಂದೇ ಆಕಾಶ ಈ ಭೂಮ್ಯಾಕಾಶಗಳ ಸಂಬಂಧವನ್ನು ಎಲ್ಲರೂ ಒಂದೇ ರೀತಿಯಲ್ಲಿ ಹೊಂದಿರುವಾಗ ಏಕೆ ಈ ವೈಷಮ್ಯವೆಂದರೆ, ಜಾತಿ, ಮತ, ಭಾಷೆ, ಪ್ರಾಂತ, ದೇಶಗಳ ಎಲ್ಲೆಗಳನ್ನು ಹಾಕಿ ಕೊಂಡು ಮಾನವರು ಅದನ್ನು ದಕ್ಕಿಸಿಕೊಳ್ಳಲು, ಕಾಪಾಡಲು ಮತ್ತು ತಮ್ಮ ಆಧಿಕ್ಯವನ್ನು ಸಾರಲು, ಸ್ಥಿರಪಡಿಸಲು ಮಾಡುವ ನಿರಂತರ ಹೋರಾಟದ ಫಲವೇ ಈ ದ್ವೇಷಾಸೂಯೆಗಳ ವಿಷ ವೃತ್ತ. ತೃಪ್ತಿಗೆ ಒಂದು ಎಲ್ಲೆ ಅಥವಾ ಮಿತಿ ಹಾಕಿಕೊಂಡರೆ ಎಲ್ಲರಿಗೂ ಸುಖ ಇಲ್ಲದಿದ್ದರೆ ಎಲ್ಲರಿಗೂ ಹಿಂಸೆ ಮತ್ತು ಈ ಬಾಳೇ ನರಕ ಸದೃಶ. ಈ ಜಗತ್ತಿನ ಮಾನವರೆಲ್ಲ ಒಂದೇ. ಈ ಎಲ್ಲ ಭೂಮಿ ಆಕಾಶ ನೀರು ಎಲ್ಲವನ್ನೂ ಪರಮಾತ್ಮ ಎಲ್ಲರ ಉಪಯೋಗಕ್ಕಾಗಿ ನಿರ್ಮಿಸಿದ್ದಾನೆ. ಇದು ಯಾವುದೋ ನಮ್ಮ ಸ್ವಂತವಾಗಲು ಸಾಧ್ಯವೇ ಇಲ್ಲ. ಏಕೆಂದರೆ ಈ ಭೂಮಿಯೇ ನಮಗೆ ಸ್ವಂತ, ನಿರಂತರ ಮತ್ತು ಶಾಶ್ವತವಲ್ಲದಿದ್ದಮೇಲೆ, ಈ ಭೂಮಿಯ ಮೇಲಿನ ವಸ್ತುಗಳು ಹೇಗೆ ಸ್ವಂತವಾಗಲು ಸಾಧ್ಯ. ಅಂತಕನೊಬ್ಬ ಬಾಳಿನಂಚಲ್ಲಿ, ಕಾದಿಲ್ಲವೇ ಇದಕ್ಕೆಲ್ಲ ಒಂದು ಅಂತ್ಯ ಹಾಡಲು.
ಇಂತಹ ಪ್ರವೃತ್ತಿಯಿಂದ ನಿರಂತರ ದ್ವೇಷಾಸೂಯಗಳ ವಿಷ ವೃತ್ತದಲ್ಲಿ ನಾವು ಬೀಳುವುದು ಬೇಡ. ಹಾಗೆ ಬಿದ್ದವರನ್ನು ಬಿಡಿಸುವ ಪ್ರಯತ್ನ ಮಾಡುತ್ತಾ ನಾವು ಮುಂದಿನ ಕಗ್ಗಕ್ಕೆ ಹೋಗೋಣ ಬನ್ನಿ.
ನಮಸ್ಕಾರ