ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 1, 2012

ಮಂಕು ತಿಮ್ಮನ ಕಗ್ಗ – ರಸಧಾರೆ (೧೫)

‍ರಾಕೇಶ್ ಶೆಟ್ಟಿ ಮೂಲಕ

– ರವಿ ತಿರುಮಲೈ

ಲೋಕಜೀವನ ಮಂಥನ

ಹಳೆಯ ಭಕ್ತಿ ಶ್ರದ್ಧೆಯಳಿಸಿಹೋಗಿದೆ ಮಾಸಿ I
ಸುಳಿದಿಲ್ಲವಾವ ಹೊಸ ದರ್ಶನದ ಹೊಳಪುಂ II
ಪಳಗಿದ್ದ ಮನೆ ಬಿದ್ದ ಕುಂಟ ಕುರುಡನ ತೆರದಿ I
ತಳಮಳಿಸುತಿದೆ ಲೋಕ – ಮಂಕುತಿಮ್ಮ II

ಹಳೆಯ  ಭಕ್ತಿ ಶ್ರದ್ಧೆಯು ಅಳಿಸಿಹೋಗಿದೆ ಮಾಸಿ. ಸುಳಿದಿಲ್ಲವು ಯಾವ ಹೊಸ ದರ್ಶನದ ಹೊಳಪು
ಪಳಗಿದ್ದ ಮನೆ ಬಿದ್ದ ಕುಂಟ ಕುರುಡನ ತೆರದಿ ತಳಮಳಿಸುತಿದೆ ಲೋಕ ಮಂಕುತಿಮ್ಮ

ಮಾಸು = ಅಳಿಸು , ದರ್ಶನ=ಸಿದ್ಧಾಂತದ ಹೊಸ ರೂಪ, ತೆರದಿ= ತರಹೆ, ತಳಮಳಿಸು= ಒದ್ದಾಡು, ಪರದಾಡು

ಈಗ್ಗೆ ಎಪ್ಪತ್ತು ವರ್ಷಗಳ ಕೆಳಗೇ ಗುಂಡಪ್ಪನವರಿಗೆ ಹೀಗೆ ಅನ್ನಿಸಿದ್ದರೆ, ಇಂದು ಅವರು ಏನನ್ನುತ್ತಿದ್ದರೋ ಏನೋ!

ಇರಲಿ, ಪುರಾತನ ಕಾಲದಿಂದಲೂ ಅನೂಚಾನವಾಗಿ ಜನಗಳಲ್ಲಿ ಇದ್ದ ದೇವರಲ್ಲಿ  ಭಕ್ತಿ ಮತ್ತು ಸಂಪ್ರದಾಯಗಳಲ್ಲಿ ಇದ್ದ ಶ್ರದ್ಧೆ ಈಗ ಅಳಿಸಿ ಹೋಗಿದೆ. ಇಲ್ಲಿ ಸಂಪ್ರದಾಯ ಎಂದರೆ ಹಿಂದಿನಿಂದ ಬಂದಿರುವ ನಡವಳಿಕೆ ಎಂದಷ್ಟೆ ಅರ್ಥ. ಜನರಲ್ಲಿ ಮತ್ತೆ ಈ ಭಕ್ತಿ ಮತ್ತು ಶ್ರದ್ಧೆಗಳನ್ನು ತರಲು ಯಾವ ಹೊಸ ಸಿದ್ಧಾಂತಗಳೂ ಪ್ರತಿಪಾದಿಸಲ್ಪಟ್ಟು ಪ್ರಚಾರಕ್ಕೆ ಬಂದಿಲ್ಲ. ಹಾಗಾಗಿ ಜನರೆಲ್ಲರೂ ಮೊದಲಿನಿಂದ ಬಂದದನ್ನು ಕಳೆದು ಕೊಂಡು ಹೊಸದಿಲ್ಲದೆ ಒಂದು ಅತಂತ್ರ ಸ್ಥಿತಿಯಲ್ಲಿದ್ದಾರೆ. ಯಾರ ಸಹಾಯವೂ ಇಲ್ಲದೆ ಸುಲಭವಾಗಿ  ಮತ್ತು ಚೆನ್ನಾಗಿ ಓಡಾಡಲು ಅಭ್ಯಾಸವಾಗಿರುವ ಮನೆ ಕುಸಿದು ಹೋದರೆ, ಆ ಮನೆಯಲ್ಲಿ ವಾಸಿಸುವ ಕುಂಟನಿಗೋ ಕುರುಡನಿಗೋ, ಪಾಪ ತಳಮಳಿಸುವ ಮತ್ತು ಪರದಾಡುವಂತೆ ಆಗುತ್ತದಲ್ಲವೇ?  ಹಾಗೆ ಆಗಿದೆ ಇಂದಿನ ಲೋಕದ ಪರಿಸ್ಥಿತಿ ಎನ್ನುತ್ತಾರೆ  ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಇಲ್ಲಿ ಭಕ್ತಿ ಎಂದರೆ ಪರಮಾತ್ಮನ ಮೇಲಿರುವ ಭಕ್ತಿ ಎಂದೇ ತಿಳಿಯಬೇಕಿಲ್ಲ. ಆದರೆ ನಾವು ಮಾಡುವ ಎಲ್ಲ ಕೆಲಸಗಳೂ ನಮ್ಮೊಳಗಿರುವ ಪರಮಾತ್ಮ ಸ್ವರೂಪೀ ಜೀವಾತ್ಮನು ತೃಪ್ತನಾಗುವುದಕ್ಕೆಅಂದರೆ ಆತ್ಮ ತೃಪ್ತಿಗೆ ,  ಎಂದುಕೊಂಡಾಗ, ಆ ಕೆಲಸದಲ್ಲಿ ಭಕ್ತಿ.  ಆ ಭಕ್ತಿ ಇದ್ದಾಗ, ಮಾಡುವ ಕೆಲಸದಲ್ಲಿ ಶ್ರದ್ಧೆ ಬರುತ್ತದೆ. ಹಾಗೆ ಭಕ್ತಿ ಮತ್ತು ಶ್ರದ್ಧೆ ಎರಡೂ ಇದ್ದಾಗ, ಮಾಡುವ ಕೆಲಸ ಸಮರ್ಪಕವಾಗಿದ್ದು ಅದರ ಫಲವೂ ಒಳ್ಳೆಯದಾಗಿರುತ್ತದೆ. ” ಹೇಗೆ ಮನವೋ ಹಾಗೆ ಭಾವ . ಹೇಗೆ ಭಾವವೋ ಹಾಗೆ ಕಾರ್ಯ. ಹೇಗೆ ಕಾರ್ಯವೋ ಹಾಗೆ ಫಲ.” ಹಾಗಾಗಿ ಮನಸ್ಸಿನಲ್ಲಿ ಭಕ್ತಿ ಮತ್ತು ಶ್ರದ್ಧೆಗಳು  ಬಹಳ ಮುಖ್ಯ. ಆದರೆ ಅದು ಈಗ ಮಾಸಿ ಹೋಗಿದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.

ಹೇಗೆ ಮಾಸಿಹೋಯಿತು? ಹಲವಾರು ಕಾರಣಗಳು.  ಕಾಲ ಬದಲಾದಂತೆ ಎಲ್ಲವೂ ಬದಲಾಗುತ್ತದೆ. ಆದರೆ ನಕಾರಾತ್ಮಕ ಬದಲಾವಣೆಯಾದರೆ ಅದು ಸರಿಯಲ್ಲ. ಆದ್ದರಿಂದಲೇ  ಮಾಸಿಹೋದದ್ದು. ಹಿರಿಯರು ಮನೆಗಳಲ್ಲಿ ಕಿರಿಯರಿಗೆ ಮಾರ್ಗ ದರ್ಶನ ಮಾಡಬೇಕು. ಅವರ ಅನುಭವ ಮತ್ತು ಜ್ಞಾನದ ಮೂಸೆಯಿಂದ ಕಿರಿಯರಿಗೆ ಜ್ಞಾನವನ್ನು ಎರಕ ಹೊಯ್ದಂಗೆ ಎರೆಯಬೇಕು. ಆದರೆ ನಮ್ಮಲ್ಲಿ ಕಾಲಕ್ರಮೇಣ ‘ಏನು’ ಮಾಡಬೇಕು ಎನ್ನುವುದನ್ನು ಮಾತ್ರ ಹೇಳುತ್ತಿದ್ದರು. ‘ಹೇಗೆ’ ಮಾಡಬೇಕು ಎನ್ನುವುದನ್ನು ಹೇಳುತ್ತಿದ್ದರು ಆದರೆ ‘ಏಕೆ’ ಮಾಡಬೇಕು ಎಂದು ಕೇಳಿದರೆ ಅದಕ್ಕೆ” ಬಂಡಾಯ” ವೆನ್ನುತ್ತಿದ್ದರು. “ಹೇಳಿದಷ್ಟು ಮಾಡೋ ತಲೆಹರಟೆ ” ಎನ್ನುತ್ತಿದ್ದರು. ಒಂದು ಅವರಿಗೆ ಹೇಳಲು ಗೊತ್ತಿರಲಿಲ್ಲ ಅಥವಾ ಹೇಳಬೇಕಾದ ವಿಷಯವೇ ಗೊತ್ತಿರಲಿಲ್ಲ ಅಥವಾ ಅವರಿಗೆ ಗೊತ್ತಿದ್ದ ವಿಷಯದ ಸಂಪೂರ್ಣ ಜ್ಞಾನವಿರಲಿಲ್ಲ.  ಒಂದು ಕೆಲಸ, ಆ ಕೆಲಸ ಮಾಡುವ ರೀತಿ ಮತ್ತು ಅದರ ಅಂತರ್ಯದ ಉದ್ಧ್ಯೇಶ  ಇವುಗಳನ್ನು ಅರಿಯುವುದು ಬಹಳ ಮುಖ್ಯ. ಇದು ಎಲ್ಲ ರೀತಿಯ ಕೆಲಸಗಳಿಗೂ ಅನ್ವಯವಾಗುತ್ತದೆ. ಅದನ್ನು ವಿವರಿಸದೆ ಮಾತ್ರ ಕೆಲಸವನ್ನಷ್ಟೇ ವಿವರಿಸಿ ಮಾಡಲು ಬಿಟ್ಟಾಗ, ಆ ಕೆಲಸದಲ್ಲಿ ಅವರಿಗೆ ತಿರಸ್ಕಾರ ಹುಟ್ಟಿ  ಮಾಡುವ  ಕೆಲಸದಲ್ಲಿ ಶ್ರದ್ಧೆ ಇರುವುದಿಲ್ಲ. ಶ್ರದ್ಧೆ ಇಲ್ಲದಿದ್ದರೆ ಭಕ್ತಿಯೂ ಹುಟ್ಟುವುದಿಲ್ಲ. ಹಿಂದಿನವರು ಮಾಡಿದ ತಪ್ಪು ಅದೇ.

ಅಂತರ್ಯದ ಭಾವ ಹೇಳಿಕೊಡುವುದು ಅಷ್ಟು ಸುಲಭವಲ್ಲ. ಮೊದಲು ಹೇಳಿಕೊಡುವವನಿಗೆ, ಆ ಭಾವ ಸಿದ್ಧಿಯಾಗಿರಬೇಕು. ಹೇಳಿಕೊಡುವ ಮತ್ತು ಎರಕ ಹೊಯ್ಯುವ ಕಲೆ ಸಿದ್ಧಿಯಾಗಿರಬೇಕು, ಮತ್ತು ಹೊಯ್ಯಬೇಕಾದ ಪಾತ್ರದ “ಪಾತ್ರತೆಯ” ಮತ್ತು ” ಯೋಗ್ಯತೆಯ”  ಅರಿವು ಅವನಿಗೆ ಇರಬೇಕು. ( transmitter ಮತ್ತು receiver ಎರಡೂ ಸರಿ ಇರಬೇಕು  ) ಇಬ್ಬರೂ ಒಬ್ಬರಿಗೊಬ್ಬರು ಸರಿ ಹೋದರೆ ಆಗ ಶುದ್ಧ ಸತ್ವ ಮನದೊಳಕ್ಕೆ ಇಳಿಯುತ್ತೆ. ಭಕ್ತಿ ಬರುತ್ತೆ ಮತ್ತು ಶ್ರದ್ಧೆ ಬೆಳೆಯುತ್ತೆ. ಅದನ್ನು ನಮ್ಮ ಹಳೆಯ ಗುರುಕುಲ ಪದ್ದತಿಯಲ್ಲಿ ಕಾಣ ಸಿಗುತ್ತಿತ್ತು.. ಒಟ್ಟಾರೆ ಹೇಳಬೇಕೆಂದರೆ ಇಂದು ಹಾಗೆ ಹೇಳಿಕೊಡುವವರಾಗಲೀ, ಕಲಿಯುವವರಾಗಲೀ ಇಲ್ಲ. ಇದನ್ನೇ  ಗುಂಡಪ್ಪನವರು ” ಮಾಸಿ ಹೋಗಿದೆ” ಎನ್ನುತ್ತಾರೆ. ಇದಕ್ಕೆ ಏನು ಪರಿಹಾರವೆಂದು ಎಲ್ಲರೂ ಯೋಚಿಸಬೇಕು.

ಹಾಗೆ ಮಾಸಿಹೋದದ್ದರಿಂದ ಏನಾಗಿದೆ ಎಂದರೆ, ಮೊದಲೇ ನಾವು ಬಲಹೀನರು. ತತ್ವದ  ಬಲವಿಲ್ಲದೆ ಸತ್ವಹೀನರು. ಸತ್ಯದ ಬಲವಿಲ್ಲದೆ  ಸತ್ವಹೀನರು .  ಯಾವುದೋ ಒಂದನ್ನು ಹಿಡಿದುಕೊಂಡು ಹೇಗೋ ಬದುಕುತ್ತಿದ್ದೆವು. ಈಗ ನಾವು ಹಿಡಿದಂತಾ ವಸ್ತುವೇ ಬಲಹೀನವಾಗಿ  ನಮ್ಮ ಅಸ್ತಿತ್ವವೇ ಅಲುಗಾಡುತ್ತಿದೆ. ಹಿಡಿದ ಕೊಂಬೆ ಮುರಿದರೆ, ಹಿಡಿಯಲು ಮತ್ತೊಂದು ಕೊಂಬೆ ಇದ್ದರೆ ಹಿಡಿದು
ತೂಗಾಡಬಹುದು. ಇಲ್ಲದಿದ್ದರೆ ಬೀಳುವುದೇ ದಾರಿ. ಚೆನ್ನಾಗಿ ಓಡಾಡಲು ಅಭ್ಯಾಸವಾಗಿರುವ ಮನೆ ಕುಸಿದು ಹೋದರೆ, ಆ ಮನೆಯಲ್ಲಿ ವಾಸಿಸುವ ಕುಂಟನಿಗೋ ಕುರುಡನಿಗೋ, ತೊಂದರೆಯಾಗಿ ಅವನು ತಡಬಡಾಯಿಸುವಂತೆ ನಾವೂ ಸಹ ನಮ್ಮ ಭಕ್ತಿ ಶ್ರದ್ಧೆಗಳನ್ನು ಕಳೆದು ಕೊಂಡು ಅತಂತ್ರದ ಸ್ಸ್ಥಿತಿಯಲ್ಲಿದ್ದೇವೆ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು.

ಹೋಗಲಿ ಹಳೆಯದನ್ನೇನೋ ಕಳೆದು ಕೊಂಡಿದ್ದೇವೆ, ಹೊಸದೇನಾದರೂ ಇದೆಯೋ ಅದನ್ನು ಹಿಡಿದುಕೊಳ್ಳೋಣವೆಂದರೆ ಅದೂ ಇಲ್ಲ. ನಮ್ಮ ದೇಶದಲ್ಲೇ ಅಲ್ಲ ಇಡೀ ಜಗತ್ತಿನ  ಪರಿಸ್ಥಿತಿಯೇ ಹೀಗಿದೆ. ಇದು ಎಲ್ಲರಿಗೂ ಗೊತ್ತಿರುವ ವಿಷಯವಾದುದರಿಂದ, ವಾಚಕರೆ, ಇದನ್ನು ಬೇರೆಯಾಗಿಯೇ ವಿಶ್ಲೇಷಣೆ ಮಾಡಿ ಚರ್ಚಿಸುವುದೇ ಒಳ್ಳೆಯದು ಎಂದು ನನಗನಿಸುತ್ತದೆ.  ನಮ್ಮ ಭಾರತೀಯ ಸಮಾಜದಲ್ಲಿ ಬೇರೆ ಯಾವ ದೇಶದಲ್ಲೂ ಸಿಗದಂತ ಅತ್ಯಮೂಲ್ಯವಾದ ಸಂಸ್ಕೃತಿ, ಪರಂಪರೆ, ಧರ್ಮಬೋದನೆ , ಎಲ್ಲವೂ ಇದೆ ಅದನ್ನು ಪುನರುಜ್ಜೀವನ ಗೊಳಿಸಿ ಮುಂದಿನ ಪೀಳಿಗೆಗೆ ಎರಕಹೊಯ್ಯಬೇಕಾದ ಉತ್ತರದಾಯತ್ವ ನಮ್ಮೆಲ್ಲರ ಮೇಲಿದೆ.  ಕನ್ನಡಿಯ ಮೇಲಿನ ಧೂಳನ್ನು ಒರೆಸಿ, ಶುದ್ಧಿಗೊಳಿಸಿ ಪ್ರತಿಬಿಂಬ ನಿಚ್ಚಳವಾಗಿ ಕಾಣುವಂತೆ ಮಾಡಬೇಕಾಗಿದೆ.

ಇಂತಹ ವಿಷಯಗಳನ್ನು ನಾವು ನಮ್ಮ ವಿಚಾರದ ಓರಗೆ ಹಚ್ಚಿ ನೋಡುತ್ತ ಮುಂದಿನ ಕಗ್ಗಕ್ಕೆ ಹೋಗೋಣವೆ?

ಇಂದಿನ ದಿನ ನಿಮಗೆಲ್ಲರಿಗೂ ಶುಭವಾಗಲಿ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments