ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 2, 2012

ಬೆಳೆ ಬೆಳೆಸಿದರಷ್ಟೆ ನೆಲದ ಒಡೆತನ

‍ನಿಲುಮೆ ಮೂಲಕ

–  ಟಿ.ಎಂ.ಕೃಷ್ಣ

ಆಹಾರ ಧಾನ್ಯಗಳ ಬೆಲೆ ಒಂದೇ ಸಮನೆ ಗಗನಕ್ಕೇರುತ್ತಲೇ ಇದೆ. ಜನಸಾಮಾನ್ಯರೇನು- ಅಷ್ಟೋ ಇಷ್ಟೋ ಸ್ಥಿತಿವಂತರೇ ಜೀವನ ನಿರ್ವಹಿಸಲು ಸಾಧ್ಯವಾಗದಂತಾಗಿದೆ. ಕೆಳ, ಮದ್ಯಮ ವರ್ಗದವರು ತರಗೆಲೆಗಳಂತೆ ತತ್ತರಿಸತೊಡಗಿದ್ದಾರೆ. ಮುಂದುವರಿದ(?) ಮನುಷ್ಯನ ಅಗತ್ಯಗಳು ಅಗಣಿತವಾಗಿರಬಹುದಾದರೂ, ಮೂಲಭೂತ ಅಗತ್ಯವಾದ ಅನ್ನಾಹಾರಗಳ ಲಭ್ಯತೆ ಕಠಿಣವಾದರೆ ಏನಿದ್ದರೂ, ಯಾವುದೇ ತಂತ್ರಜ್ಞಾನವಿದ್ದರೂ ಅವೆಲ್ಲಾ ಅಪ್ರಸ್ತುತವಾಗಿಬಿಡುತ್ತವೆ. (ಚಿನ್ನದ ಕತ್ತಿ ಇದೆಯೆಂದು ಕುತ್ತಿಗೆ ಕೊಯ್ದುಕೊಳ್ಳಲಾದೀತೆ?)

ಅಗತ್ಯವಸ್ತುಗಳು ಕೈಗೆಟುಕದಂತಾಗಿರುವ ಈ ಸಂದರ್ಭದಲ್ಲಿ ಸರ್ಕಾರದ ಕಡೆ ಕೈ ತೋರಿಸುವುದು ಅನಿವಾರ್ಯವಾದರೂ, ಆಯಕಟ್ಟಿನ ಜಾಗಕ್ಕೆ ಕೈತೋರಿಸದಿರುವುದು ನಮ್ಮಲ್ಲಿನ ಪ್ರಜ್ಞಾವಂತರ ಪ್ರಜ್ಞೆಯ ಅವನತಿಯನ್ನು ಸೂಚಿಸುತ್ತದೆ. ಕುರಿಗಳು ಹಳ್ಳಕ್ಕೆ ಬಿದ್ದಂತೆ ಪ್ರತಿಯೊಬ್ಬರೂ ಪ್ರಸ್ತಾಪಿಸುತ್ತಿರುವುದು ಮಳೆ ಅಭಾವ, ಬೆಳೆನಷ್ಟ, ವ್ಯಾಪಾರಿಗಳು ಸೃಷ್ಟಿಸುತ್ತಿರುವ ಕೃತಕ ಅಭಾವ, ಸರ್ಕಾರ ಸರಿಯಾಗಿ ನಿರ್ವಹಿಸುತ್ತಿಲ್ಲ, ಜನಸಂಖ್ಯೆಯ ಹೆಚ್ಚಳ ಇತ್ಯಾದಿ…ಈ ಎಲ್ಲ ಕಾರಣಗಳಿಗೆ ನಿದರ್ಶನಗಳಿದ್ದರೂ, ಅವೆಲ್ಲಾ ತಾತ್ಕಾಲಿಕ ಅವ್ಯವಸ್ಥೆಗಳೇ ಹೊರತು ಮೂಲಭೂತ ಸತ್ಯಗಳಲ್ಲವೇ ಅಲ್ಲ.

ಇವತ್ತು ಸಕಲ ಸಮುದಾಯಗಳೂ ಕಿಕ್ಕಿರಿದಿರುವ ಬೆಂಗಳೂರಿನಂಥ ಬೃಹತ್ ನಗರದ ಪ್ರತಿಯೊಬ್ಬರೂ ಅಂಗಡಿಯಲ್ಲಿ ಕೊಂಡೇ ತಿನ್ನಬೇಕಾದಂತಹ ಅನಿವಾರ್ಹತೆಯಿದೆ. ಆದರೂ ಅದೇ ಬೆಂಗಳೂರಿನ ಹೊರ ವಲಯದ ಹಲವಾರು ಕಿಲೋಮೀಟರುಗಳ ಸುತ್ತಳತೆಯ, ಹಲವಾರು ಲಕ್ಷ ಎಕರೆ ಭೂಮಿ, ಹಲವಾರು ವರ್ಷಗಳಿಂದ ಬಂಜೆಯಾಗಿದೆ. (ನೆನಪಿಡಿ: ಬೆಂಗಳೂರು ಮತ್ತು ಸುತ್ತ-ಮುತ್ತ ಉತ್ತಮ ಮಳೆಯಾಗುತ್ತದೆ)  ಒಂದೆರಡು ವರ್ಷದ ಹಿಂದೆ  ಈ ಬಂಜೆ ನೆಲ (ಬಂಜರಲ್ಲ) ನಗರದಿಂದ ಹೊರಕ್ಕೆ ಒಂದೈದತ್ತು ಕಿಲೋಮೀಟರುಗಳ ತನ ಕ ವ್ಯಾಪಿಸಿತ್ತು. ಈಗ ಅದರ ವ್ಯಾಪ್ತಿ ೪೦ರಿಂದ ೫೦ಕಿ.ಮೀ ತನಕ ಸೋಂಕು ರೋಗದಂತೆ ವ್ಯಾಪಿಸಿದೆ.

ಕುಲಗೆಟ್ಟ ವ್ಯವಸಾಯ ಪದ್ದತಿಯಿಂದ ರೈತರು ಕೈಸುಟ್ಟುಕೊಳ್ಳುತ್ತಿರುವ ಸಂದರ್ಭದಲ್ಲೇ ನೆಲದ ಬೆಲೆ ಗಗನಕ್ಕೇರಿ, ಕೃಷಿಕರು ಕನಸಿನಲ್ಲಿಯೂ ಕಾಣದ ಕೋಟಿಗಳು ಅವರ ಕಾಲಬುಡಕ್ಕೆ ಬಂದು ಬೀಳುತ್ತಿದ್ದರೆ ಕೃಷಿ ಎಂಬುದು ಕಾಲ ಕಸವಾಯಿತು. ಸಾಲದ ಸುಳಿಗೆ ಸಿಕ್ಕ ಮತ್ತು ವಿವೇಚನೆಯಿಲ್ಲದ ರೈತರು ಕಾಂಚಾಣ ಕೈಲಿಡಿದು ಬಂದ ಕುಭೇರರ ಕಪಿಮುಷ್ಟಿಗೆ ಎಳ್ಳು ಜೀರಿಗೆ ಬೆಳೆವ ನೆಲವನ್ನೊಪ್ಪಿಸಿದರು. ಬರೀ ನೆಲಕ್ಕೇನೇ ಬೆಲೆ ಜ್ವರದಂತೆ ಏರುತ್ತಿದ್ದರೆ, ಕೈ ಕೆಸರು ಮಾಡಿಕೊಳ್ಳಲಿಚ್ಛಿಸದ ಇನ್ನುಳಿದ ಗಡವ ರೈತರು ನೆಲವನ್ನತ್ತ ಮಾರಿಯೂ ಬಿಡದೆ, ವ್ಯವಸಾಯವನ್ನೂ ಮಾಡದೆ ಬೆಲೆ ಮತ್ತಷ್ಟು ದ್ವಿಗುಣಗೊಂಡನಂತರ ಬಿಕರಿ ಮಾಡಲು ನೆಲವನ್ನು ಕಾಂಪೌಂಡುಗಳಿಂದ ಸಿಂಗರಿಸಿ ಕಾದು ಕುಳಿತರು. ಈ ಪರಿಸ್ತಿತಿ ಬೆಂಗಳೂರು ನಗರಕ್ಕಷ್ಟೇ ಸೀಮಿತವಾಗದೆ ಎಲ್ಲ ನಗರ, ಪಟ್ಟಣಗಳಿಗಷ್ಟೇ ಅಲ್ಲದೆ ತಾಲ್ಲೂಕು ಕೇಂದ್ರಗಳಿಗೂ ವ್ಯಾಪಿಸಿ ಕೃಷಿ ಭೂಮಿ ಶಾಪಗ್ರಸ್ತವಾಯಿತು. ಕೃಷಿಕರು ಪೇಟೆಗಳ ಕೂಲಿಗಳಾಗತೊಡಗಿದರು. ರಾಸಾಯನಿಕ ಕೃಷಿಯೆಂಬ ರಾಕ್ಷಸನ ದಾಳಿಗೀಡಾದ ಅಪ್ಪಟ ಗ್ರಾಮಾಂತರ ಪ್ರದೇಶಗಳಲ್ಲಿ ಕೂಡ ಇವತ್ತು ಉಳುಮೆ ಕಾಣದ ನೆಲವೇ ಅಧಿಕವಾಗಿರುವುದನ್ನು ನೋಡಬಹುದು.

ನೆಲಕ್ಕೆ ಬೆಲೆ ಬಂದರೆ ನೆಲದೊಡೆಯ ಮತ್ತು ಮದ್ಯವರ್ತಿಗಳು ಕುಭೇರರಾಗಬಹುದೇ ಹೊರತು, ಪುಕ್ಕಟೆಯಾಗಿ ಬೀಳುವ ಮಳೆ, ಗಾಳಿ, ಸೂರ್ಯನ ಬೆಳಕು ಮತ್ತು ಮಣ್ಣಿನ ಸಂಯೋಜನೆಯಿಂದ ಸಮಾಜಕ್ಕೆ ದಕ್ಕುತ್ತಿದ್ದ ಸಂಪನ್ಮೂಲ ನಾಸ್ತಿಯಾಗುತ್ತದೆ. ಇಂಥ ವಿಷಮ ಬೆಳವಣಿಗೆಯನ್ನು ಸರ್ಕಾರ ಎಂಬ ವ್ಯವಸ್ಥೆ ನಿಯಂತ್ರಿಸಬೇಕು. ಆಗ ಅದು ಅಭಿವೃದ್ಧಿ ಎನಿಸಿಕೊಳ್ಳುತ್ತದೆ. ಆದರೆ ನಮ್ಮ ನಾಗರೀಕರು ಅಭಿವೃದ್ಧಿ ಎಂದ ತಕ್ಷಣ ರಸ್ತೆಗಳು, ಚರಂಡಿಗಳ ದುರಸ್ತಿಯೆಂದೇ ತಿಳಿದಿದ್ದಾರೆ. ಗ್ರಾಮಾಂತರ ಪ್ರದೇಶಗಳಲ್ಲಾದರೆ ಸಾಲ ಮನ್ನಾ, ಉಚಿತ ವಿದ್ಯುತ್ ಮತ್ತು ಕೆಲವು ರಿಯಾಯಿತಿಗಳೆಂಬ ಭಿಕ್ಷೆಗಳನ್ನು ಅಭಿವೃದ್ಧಿಯೆಂದು ಭಾವಿಸಿದ್ದಾರೆ. ಇಂಥ ಮೂರ್ಖ ಪ್ರಜೆಗಳಿಂದ ಆಯ್ಕೆಯಾದ ಪ್ರತಿನಿಧಿಗಳು ಅದನ್ನಷ್ಟೇ ಪರಿಗಣಿಸಿ ಮತಪೆಟ್ಟಿಗೆಗೆ ಸಿಂಗಾರ ಮಾಡಿಕೊಳ್ಳುತ್ತಾರೆ.

ಸರ್ಕಾರ ಎಂಬ ವ್ಯವಸ್ಥೆಗೆ ಇಚ್ಛಾಶಕ್ತಿ ಇದ್ದರೆ ಒಂದೇ ಒಂದು ಸರಳ ಆದರೆ ದಿಟ್ಟ ನಿರ್ಧಾರದಿಂದ ಈ ವಿಷಯ ಬೆಳವಣಿಗೆಯನ್ನು ಈಗಲೂ ಮಟ್ಟಹಾಕಬಹುದು. ದೇವರಾಜ ಅರಸು ಆಡಳಿತಾವಧಿಯಲ್ಲಿ ಉಳುವವನೇ ಹೊಲದೊಡೆಯ ಎಂಬ ಕಾನೂನನ್ನು ಜಾರಿಗೊಳಿಸಿ ಸತ್ಪಾತ್ರರಿಗೆ ನೆಲ ದಕ್ಕುವಂತೆ ಮಾಡಲಾಯಿತು. ಆ ಮೂಲಕ ಆಗಿನ ಸಾಮಾಜಿಕ ಅಸಮಾನತೆಯನ್ನು ಸ್ವಲ್ಪ ಮಟ್ಟಿಗೆ ನಿವಾರಿಸಲಾಯಿತು. ಆದರೆ ಈಗ ರಂಗೋಲಿ ಕೆಳಗೆ ನುಸುಳಿರುವ ಅಮಾನವೀಯ ಅಸಮಾನತೆ ಮತ್ತು ಹಸಿವನ್ನು ಹೋಗಲಾಡಿಸಬೇಕಾದರೆ ಬೆಳೆ ಬೆಳೆಸುವವನೇ ನೆಲದೊಡೆಯ ಅಥವಾ ಬೆಳೆ ಬೆಳೆಸಿದರಷ್ಟೇ ನೆಲದ ಒಡೆತನ ಎಂಬ ಕಾನೂನನ್ನು ಜಾರಿಗೆ ತರಬೇಕಾದ ತುರ್ತು ಅಗತ್ಯವಿದೆ. ಸಮಾಜ ಸುಧಾರಣೆಯೆಂಬುದನ್ನು ಬಿಡಿ ಬಿಡಿಯಾಗಿ ನೋಡ ಹೊರಟರೆ ಅದಕ್ಕೆ ಆದ್ಯಂತ್ಯಗಳೇ ಇರುವುದಿಲ್ಲ. ಅಂಗೈಯಗಲದಷ್ಟು ಭೂಮಿಯನ್ನು ಬಂಜೆಗೊಳಿಸದಷ್ಟು ಮಾನವಶಕ್ತಿ ಮತ್ತು ನೈಸರ್ಗಿಕ ಸಂಪನ್ಮೂಲಗಳು ಇಲ್ಲಿದ್ದರೂ, ಅನ್ನಾಹಾರಗಳ ಅಭಾವವನ್ನೆದುರಿಸುವುದೆಂದರೆ ಅದು ಪ್ರಜೆಗಳ ಮತ್ತು ಪ್ರಜಾಪ್ರತಿನಿಧಿಗಳ ಸ್ವಯಂಕೃತಾಪರಾಧವಲ್ಲದೆ ಬೇರೇನೂ ಅಲ್ಲ.

ಸಮಾನತೆ, ಸಾಮಾಜಿಕ ನ್ಯಾಯ, ಸಮಗ್ರ ಅಭಿವೃದ್ಧಿ, ನಿರುದ್ಯೋಗ ನಿವಾರಣೆ ಮುಂತಾದ ಜನಪರ ಮೌಲ್ಯಗಳೆಲ್ಲಾ ಈ ಒಂದು ಆದೇಶ ಜಾರಿಯಿಂದ ಸಾಧ್ಯವಾಗುತ್ತದೆ. ನಗರೀಕರಣವೆಂಬ ನರಕಕೂಪಗಳ ವಿಸ್ತರಣೆಗೆ ಕಡಿವಾಣ ಬೀಳಲಿದೆ. ಈ ಆದೇಶದ ಜೊತೆಗೆ ಸುಸ್ಥಿರ ಕೃಷಿಯ ತಳಹದಿಯ ಮೇಲೆ ಸಮಗ್ರ ಕೃಷಿ ನೀತಿಯನ್ನು  ರೂಪಿಸಿ, ನೆಲವನ್ನೆಲ್ಲ ಹಸಿರುಮಯಗೊಳಿಸಲು ಸರಕಾರ ಸಹಕರಿಸಿದರೆ ಹಲವು ಸಂಭವನೀಯ ನೈಸರ್ಗಿಕ ವಿಕೋಪಗಳು ನಿಯಂತ್ರಣಕ್ಕೆ ಬರುವುದರೊಂದಿಗೆ ಸಮೃದ್ಧಿ ಸಾಧ್ಯವಾಗುತ್ತದೆ.

ಈಗಿನ ಭೂ ಒಡೆಯರಾದರೂ ಬೆಳೆ ಬೆಳೆಸಬಹುದು, ಬೆಳೆಸಲಾಗದಿದ್ದರೆ ಬೆಳೆಯುವವರಿಗೆ ಬಿಟ್ಟುಕೊಡಬಹುದು. ಹೇಗಾದರೂ ಸರ್ವರಿಗೂ ಇಲ್ಲಿನ ಸಂಪನ್ಮೂಲದ ಸಾಧ್ಯತೆಗಳು ದಕ್ಕುತ್ತವೆ. ಇದರಿಂದ ಯಾರಿಗಾದರೂ ಅಸಮಾದಾನವಾಗುವುದಾರೆ ಅದು ಭೂ ಮಾರಿಕೊಳ್ಳಲು ಕುಳಿತಿರುವ ರಾಕ್ಷಸರಿಗೆ, ರಿಯಲ್ ಎಸ್ಟೇಟ್ ಕುಳಗಳೆಂಬ ದಳ್ಳಾಳಿಗಳಿಗೆ, ನೆಲದ ಮೇಲೆ ನರಕ ನಿರ್ಮಿಸುವವರಿಗೆ ಅಂದರೆ ಒಟ್ಟಾರೆ ನರ ರಾಕ್ಷಸರಿಗಷ್ಟೇ ಹೊರತು ಮನುಷ್ಯರಿಗಲ್ಲ.

ನಗರಗಳ ಅಂಚಿನವರೆಗೆ ನೆಲ ಹಸಿರಾಗಿ, ಅದು ರಿಯಲ್ ಎಸ್ಟೇಟ್ ಕುಳಗಳ ಕಪಿ ಮುಷ್ಟಿಯಿಂದ ಪಾರಾದರೆ, ನಗರಗಳ ಬಾಡಿಗೆ ಗೂಡುಗಳೊಳಗೆ ಬವಣೆ ಪಡುತ್ತಿರುವ ಮತ್ತು ಸೂರಿಲ್ಲದ ಲಕ್ಷಾಂತರ ಜನರಿಗೆ ನಿವೇಶನ ಕೈಗೆಟುಕಿ  ಸ್ವಂತ ಮನೆಯ ಕನಸು ಕೂಡ ನನಸಾಗುತ್ತದೆ. ಹೇಳುತ್ತಾ ಹೊದರೆ ಮುಗಿಯಲಾರದಷ್ಟು ಸಕಾರಾತ್ಮಕ ಅಂಶಗಳನ್ನು ಕಟ್ಟಿಕೊಡಬಲ್ಲ ಬೆಳೆ ಬೆಳೆಸಿದರಷ್ಟೇ ನೆಲದೊಡೆಯನೆಂದು ಸರ್ಕಾರ ಆದೇಶ ಹೊರಡಿಸಿ ಜಾರಿಗೊಳಿಸಿದ್ದಾದರೆ ಅದಕ್ಕಿಂತಲೂ ಜನಪರ ನಿಲುವು ಬೇರೇನೂ ಇಲ್ಲ.

ಸದ್ಯದಲ್ಲಿ ಮತ್ತು ಭವಿಷ್ಯದಲ್ಲಿ ಆಹಾರ ಧಾನ್ಯಗಳ ಅಭಾವಕ್ಕೆ ನಮ್ಮ ಶಿಕ್ಷಣ ಪದ್ಧತಿ ಕೂಡ ಗುರುತರ ಸೇವೆಯನ್ನು ಸಲ್ಲಿಸುತ್ತಿದೆ! ಮುಂದಿನ ಪ್ರಜೆಗಳನ್ನು ತಯಾರಿಸುತ್ತಿರುವ ಶಿಕ್ಷಣ ಪದ್ಧತಿಯಲ್ಲಿ ಹಣ ಸಂಪಾದನೆಯ ಮಾರ್ಗಗಳನ್ನು ಅಳವಡಿಸಲಾಗಿದೆಯೇ ಹೊರತು ಅನ್ನ ಸಂಪಾದನೆಯನ್ನು ನಿಕೃಷ್ಟವಾಗಿ ಪರಿಗಣಿಸಿರುವುದನ್ನು ಕಾಣಬಹುದು. ತಂತ್ರ, ಮಂತ್ರ, ಲೆಕ್ಕಾಚಾರ, ಚಾತುರ್ಯ ಮುಂತಾದ ನೈಸರ್ಗಿಕ ನಿಯಮಾವಳಿಗಳನ್ನು ಅಧಿಗಮಿಸುವ ದರೋಡೆಯನ್ನೇ ಶಿಕ್ಷಣವೆಂದು ಪ್ರಧಾನವಾಗಿ ಭಾವಿಸಲಾಗಿದೆ. ಪೇಟೆಯ ಎಳೆಯರಿಗೆ ತಾವು ತಿನ್ನುವ ಪದಾರ್ಥಗಳು ಮರದಲ್ಲಿ ಬಿಡುತ್ತವೋ, ಗಿಡದಲ್ಲಿ ಬಿಡುತ್ತವೋ ಗೊತ್ತೇ ಇಲ್ಲ. ಸರಕು, ಸಾಮಾಗ್ರಿಗಳಂತೆ ಕಾರ್ಖಾನೆಗಳಲ್ಲಿ ತಯಾರಾಗುತ್ತವೆಂದೇನಾದರೂ ಭಾವಿಸಿದರೆ ಆಶ್ಚರ್ಯಪಡುವಂತದ್ದೇನೂ ಇಲ್ಲ. ನೆಲದ ಸೌಲಭ್ಯವಿಲ್ಲದ ಪೇಟೆಗಳಲ್ಲಿ ಕೂಡ ತಾರಸಿಯ ಮೇಲೆ ಕುಂಡಗಳಲ್ಲಿ ತರ ತರದ ತರಕಾರಿ, ಹಣ್ಣು, ಹೂವುಗಳನ್ನು ಬೆಳೆಯುವ ಸಾಧ್ಯತೆಗಳಿರುವಾಗ ಪ್ರಾಥಮಿಕ ಶಿಕ್ಷಣದಿಂದಲೇ ಸಸ್ಯ ಪ್ರೀತಿಯನ್ನು ಕ್ರಿಯಾತ್ಮಕವಾಗಿ ಪರಿಗಣಿಸಬೇಕಾದ ಅಗತ್ಯ ಅತ್ಯಗತ್ಯವಾಗಿರಬೇಕಿತ್ತು. ಶಾಲೆಗಳಲ್ಲಿ ವಾರದ ಒಂದಿಡೀ ದಿನ ಮಕ್ಕಳಿಗೆ ಮರ-ಗಿಡ, ಬೆಳೆ-ಬಿತ್ತುಗಳನ್ನು ಬೆಳೆಸುವ ವಿಧಾನಗಳನ್ನು ಕಲಿಸಿದರೆ ಅದರ ದೂರಗಾಮಿ ಪರಿಣಾಮಗಳು ಅವರ ಭವಿಷ್ಯಕ್ಕೇನೆ ಬೆಳಕಾಗುತ್ತಿದ್ದವು.

ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಶ್ರೇಷ್ಟ ಎಂಬುದು ಹಳೆಯ ಮಾತು. ಆದರೆ ಅದು ಅಂದಿಗೂ, ಇಂದಿಗೂ, ಎಂದೆಂದಿಗೂ ಶ್ರೇಷ್ಟವಾದದ್ದೇ. ನಮ್ಮ ಬಹುಜನರ ಜೀವನಾದಾರ, ಎಲ್ಲರ ಆಹಾರ ಈ ವಿದ್ಯೆಯಿಂದ ಮಾತ್ರ ದಕ್ಕುವಂಥದ್ದು. ಇಂಥ ಶ್ರೇಷ್ಟ ವಿದ್ಯೆಯನ್ನು ಇವತ್ತು ಕನಿಷ್ಟ ಮಟ್ಟಕ್ಕಿಳಿಸಿರುವ ನಮ್ಮ ವ್ಯವಸ್ಥೆ ಗುರುತರ ಅಪರಾಧವನ್ನೇ ಎಸಗಿದೆ. ಇವತ್ತು ಶಿಕ್ಷಣದಲ್ಲಿ ಶಿಖರಪ್ರಾಯವಾಗಿರಬೇಕಿದ್ದ, ಉನ್ನತ ಗೌರವಾದರಗಳಿಗೆ ಪಾತ್ರವಾಗಬೇಕಾಗಿದ್ದ ಮೇಟಿ ವಿದ್ಯೆಯ ಒಂದು ತುಣುಕೂ ಕೂಡ ಪ್ರಾಥಮಿಕ ಶಿಕ್ಷಣದ ಪಠ್ಯದಲ್ಲಾಗಲೀ, ಚಟುವಟಿಕೆಗಳಲ್ಲಾಗಲೀ ಸ್ಥಾನ ಪಡೆದಿಲ್ಲ. ಇದು ಅನ್ನ ದೇವರಿಗೆ ಎಸಗುತ್ತಿರುವ ಅನ್ಯಾವಲ್ಲದೆ ಬೇರೇನೂ ಅಲ್ಲ. ಉನ್ನತ ಶಿಕ್ಷಣದಲ್ಲಿ ಕೃಷಿ ವಿಜ್ಞಾನ ಒಂದು ಭಾಗವಾಗಿದೆಯಾದರೂ, ಅದು ಕೃಷಿಕರನ್ನು ಕೃಷಿಯಿಂದ ವಿಮುಖರನ್ನಾಗಿಸುವಲ್ಲಿ ಶ್ರಮಿಸುತ್ತಿದೆಯಷ್ಟೆ! ಇವತ್ತು ಮೆಡಿಕಲ್, ಇಂಜಿನಿಯರಿಂಗ್ ಎಂಬ ರೋಗ ಮತ್ತು ಯಂತ್ರ ವಿಜ್ಞಾನಗಳು ಗಳಿಸಿಕೊಂಡಿರುವ ಅಗ್ರಪಟ್ಟವನ್ನು ನೋಡಿದರೆ ನಮ್ಮ ವ್ಯವಸ್ಥೆ ಎಷ್ಟೊಂದು ರೋಗಗ್ರಸ್ತವಾಗಿದೆ ಮತ್ತು ಎಷ್ಟೊಂದು ಯಾಂತ್ರಿಕವಾಗಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಕೃಷಿಯ ಮತ್ತು ಮರಗಿಡಗಳ ಶ್ರೇಷ್ಟತೆ, ಜೇಷ್ಟತೆ, ಅವುಗಳನ್ನು ಬೆಳೆಸುವ ಅಗತ್ಯ ಮತ್ತು ಸುಸ್ಥಿರ ವಿಧಾನಗಳನ್ನು ಎಳೆಯರ ಅರಿವಿಗೇ ತರದಂತಿರುವ ಜುಟ್ಟಿಗೆ ಮಲ್ಲಿಗೆ ಶಿಕ್ಷಣ ಪದ್ಧತಿಯಿಂದ ಮತ್ತು ಕೃಷಿಯನ್ನು ಕೀಳಾಗಿ ಪರಿಗಣಿಸುತ್ತಿರುವ ನಮ್ಮ ನವ ಪುರೋಹಿತಶಾಹಿ ವರ್ಗದಿಂದಾಗಿಯೇ ಇವತ್ತು ಕೃಷಿಕರ ನವ ಪೀಳಿಗೆಯನ್ನು ಗ್ರಾಮಾಂತ್ರ ಪ್ರದೇಶಗಳಿಂದ ಹೊರದೂಡಲಾಗುತ್ತಿದೆ. ಈ ಎಲ್ಲ ಅನಿಷ್ಟ ಕಾರಣಗಳು ಮುಂದೆ ದುಪ್ಪಟ್ಟಾಗಲಿರುವ ಜನಸಂಖ್ಯೆಯ ಬಾಯಿಗೆ ಮಣ್ಣಾಕಲಿವೆ.

ಶಿಕ್ಷಣದಲ್ಲಿ ಕೃಷಿಗೆ ಅಗ್ರಸ್ಥಾನ ಮತ್ತು ಬೆಳೆ ಬೆಳೆಸಿದರಷ್ಟೇ ನೆಲದ ಒಡೆತನ ಈ ಎರಡು ಸಂಹಿತೆಗಳು ಕಡ್ಡಾಯವಾಗಿ ಅನುಷ್ಟಾನಕ್ಕೆ ಬರದಿದ್ದರೆ ಅಭಿವೃದ್ಧಿ ಎಂಬುದಕ್ಕೆ ಅರ್ಥವೇ ಇರುವುದಿಲ್ಲ. ರಸ್ತೆಗಳು, ಸಾರಿಗೆ ಸಂಪರ್ಕ, ತಂತ್ರಜ್ಞಾನ, ಯಂತ್ರೋಪಕರಣಗಳ ಪ್ರಸ್ತುತತೆಗೆ ಅರ್ಥ ಪ್ರಾಪ್ತವಾಗಬೇಕಾದರೆ-ಅದೂ ಭಾರತದಲ್ಲಿ- ಕೃಷಿ ನಿರ್ಲಕ್ಷಕ್ಕೊಳಗಾಗಬಾರದು. ಆಹಾರ ಧಾನ್ಯಗಳಿಗೆ ಅಭಾವವುಂಟಾಗಬಾರದು. ತಲೆಗಿಂತ ತುರುಬೇ ದೊಡ್ಡದಾರೆ ಅದು ಅಸಹ್ಯ, ಅಸಹಜ, ಅಸ್ವಾಭಾವಿಕ ಮತ್ತು ಅನಿಷ್ಟಗಳ ಹುಟ್ಟಿಗೆ ಕಾರಣವಾಗುತ್ತದೆಂಬುದನ್ನು ಪ್ರಜೆಗಳು, ಪ್ರಜಾಪ್ರತಿನಿಧಿಗಳು ಆದಷ್ಟು ಬೇಗ ಗ್ರಹಿಸಬೇಕಾಗಿದೆ.

ಕರ್ನಾಟಕದಲ್ಲಾಗಬಹುದು, ಇಡೀ ಭಾರತಲ್ಲೇ ಆಗಬಹುದು ವ್ಯವಸಾಯದಲ್ಲಿ ನೀರಾವರಿಗೆ ಸೀಮಿತ ಅವಕಾಶಗಳಿವೆ. ಮಳೆಯಾಶ್ರಯದಲ್ಲೇ ಅಧಿಕವಾಗಿ ಕೃಷಿ ಸಾಧ್ಯವಾಗಬೇಕಿದೆ. ಅದು ಸಾಧ್ಯವೂ ಕೂಡ. ರಾಸಾಯನಿಕ ಕೃಷಿ ವಿಧಾನಗಳಿಂದ ರೋಸಿಹೋದ ಅನೇಕ ಕೃಷಿಕರು ಇವತ್ತು ಸಾವಯುವ ಮತ್ತು ಸಹಜ ಕೃಷಿ ವಿಧಾನಗಳನ್ನು ಅಳವಡಿಸಿಕೊಂಡು ಅದ್ಭುತಗಳನ್ನು ಮಾಡಿ ತೋರಿಸಿದ್ದಾರೆ. ಸರಳವೂ, ಸುಸ್ಥಿರವೂ, ಕಾರ್ಯಸಾಧ್ಯವಾಗುವಂತವೂ ಆದ ನಿಸರ್ಗ ಸ್ನೇಹಿ ವಿಧಾನಗಳಿಂದ ನಮ್ಮ ನೆಲ ಜಲವನ್ನು ದುಡಿಸಿಕೊಳ್ಳಬೇಕಾಗಿದೆ. ಆ ಮಾರ್ಗದಲ್ಲಿ ಕೃಷಿಯನ್ನು, ಕೃಷಿಕರನ್ನು ಹುರಿಗೊಳಿಸಬೇಕಾದ ಯುದ್ಧದೋಪಾದಿಯ ಕಾರ್ಯ ಸರ್ಕಾರದಿಂದ ಸಾಧ್ಯವಾಗಬೇಕು. ನಮ್ಮ ನೆಲ-ಜನಗಳ ಸದುಪಯೋಗ ಬಹಳ ನಿರ್ಲಕ್ಷಕ್ಕೀಡಾಗಿರುವುದನ್ನು ಪ್ರಾಥಮಿಕವಾಗಿ ನಾವೆಲ್ಲರೂ ಅರಿತು, ಮೊದಲು ಈ ಮಣ್ಣಿನ ಮನುಷ್ಯರಂತೆ ನಮ್ಮ ನಡತೆಯನ್ನು ಕೂಡ ತಿದ್ದಿಕೊಳ್ಳುವುದು ಬಹು ಅಗತ್ಯವಾಗಿದೆ. ಹತ್ತಿರುವ ರೆಂಬೆಯನ್ನೇ ಕತ್ತರಿಸಿಕೊಳ್ಳುತ್ತಿರುವ ನಮ್ಮ ಮೂರ್ಖತನದ ಅರಿವು ನಮಗೇ ಆಗಬೇಕಾಗಿದೆ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments