ಮಂಕು ತಿಮ್ಮನ ಕಗ್ಗ – ರಸಧಾರೆ (೧೬)
– ರವಿ ತಿರುಮಲೈ
ಲೋಕಜೀವನ ಮಂಥನ
ಇಳೆಯ ಬಿಟ್ಟಿನ್ನುಮೆತ್ತಲುಮೈದದ ಪ್ರೇತ I
ವಲೆವಂತೆ ಲೋಕ ತಲ್ಲಣಿಸಿಹುದಿಂದು II
ಹಳೆಧರ್ಮ ಸತ್ತಿಹುದು ಹೊಸ ಧರ್ಮ ಹುಟ್ಟಿಲ್ಲ II
ತಳಮಳಕೆ ಕಡೆಯೆಂದು – ಮಂಕು ತಿಮ್ಮ II
ಇಳೆಯ ಬಿಟ್ಟಿನ್ನುಮೆತ್ತಲುಮೈದದ = ಇಳೆಯ+ ಬಿಟ್ಟು + ಇನ್ನು+ ಎತ್ತಲುಂ+ಐದದ, ಪ್ರೇತವಲೆವಂತೆ= ಪ್ರೇತವು + ಅಲೆವಂತೆ, ಕಡೆಯಂದು= ಕಡೆ+ ಎಂದು
ಇಳೆ = ಭೂಮಿ, ಎತ್ತಲುಂ= ಯಾವಕಡೆಗೂ, ಐದದ=ಸೇರದ, ಪ್ರೇತ= ಮರಣಾನಂತರದ ಪ್ರಯಾಣದಲ್ಲಿ ಇರುವ ಆತ್ಮದ ಸ್ಥಿತಿ. ತಲ್ಲಣಿಸಿಹುದು + ಒದ್ದಾಡುತ್ತಿದೆ.
ಈ ಭೂಮಿಯನ್ನು ಬಿಟ್ಟು ಎತ್ತಲೂ ಸೇರದ ಪ್ರೇತದಂತೆ ಲೋಕ ತಲ್ಲಣಿಸುತ್ತಿದೆ. ಹಳೆ ಧರ್ಮ ಸತ್ತಿದೆ. ಹೊಸ ಧರ್ಮ ಹುಟ್ಟಿಲ್ಲ ತಳಮಳಕೆ ಕಡೆ ಎಂದು ಮಂಕುತಿಮ್ಮ ಎಂದು ತಮ್ಮನ್ನು ತಾವೇ ಪ್ರಶ್ನಿಸುತ್ತಾ ಅದೇ ಪ್ರಶ್ನೆಯನ್ನು ನಮ್ಮ ಮುಂದಿಡುತ್ತಾರೆ.
ಭಾರತ ದೇಶವು ಅನ್ಯ ದೇಶದವರ ಆಕ್ರಮಣಕ್ಕೆ ಬಲಿಯಾಗಿ, ಹಾಗೆ ಬಂದ ಆಕ್ರಮಣಕಾರರು ಈ ದೇಶದಲ್ಲೇ ನೆಲೆಯೂರಿ ನಿಂತಾಗ, ಅವರ ನಂಬಿಕೆಗಳು ವಿಶ್ವಾಸಗಳು ಅಚಾರ ವಿಚಾರಗಳು ಉಡುಗೆ ತೊಡಿಗೆಗಳ ಶೈಲಿ ಹೀಗೆ ಎಲ್ಲವೂ ನಮ್ಮ ದೇಶದ ಸಂಸ್ಕೃತಿಯ ಮೇಲೆ ತನ್ನ ಪರಿಣಾಮವನ್ನು ಬೀರುತ್ತ, ಕಾಲಕ್ರಮದಲ್ಲಿ ಇಲ್ಲಿನ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿ ನೆಲೆ ನಿಂತಿತು. ಆಗ ಅದರದು ಬೇರೆಯೇ ರೂಪ. ಆ ರೂಪ ಹಳೆಯದನ್ನು ಬಿಡಲಾಗದೆ, ಹೊಸದನ್ನು ಸಂಪೂರ್ಣ ಅಳವಡಿಸಿಕೊಳ್ಳಲಾಗದೆ ಒಂದು ಹೊಸರೂಪವನ್ನೇ ತಾಳಿತು. ಆದರೆ ಆ ಹೊಸರೂಪದಲ್ಲೂ ಒಂದು ತಳಮಳ, ಒಂದು ಚಡಪಡಿಕೆ ಇತ್ತು. ಅತ್ತ ಹಳೆಯದನ್ನು ಬಿಟ್ಟರೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಭಯ, ಇತ್ತ ಹೊಸದರ ಹೊಸತನದ ಮೋಜು. ಇವೆರಡರ ರೂಪವೇ ಒಂದು ಎಡಬಿಡಂಗಿ ಸ್ವರೂಪ. ಇಂದು ನಾವು ಇರುವುದೇ ಅಂತಹ ಸ್ಥಿತಿಯಲ್ಲಿ. ಇದನ್ನು ಶ್ರೀ ಗುಂಡಪ್ಪನವರು ” ಈ ಭೂಮಿಯನ್ನು ಬಿಟ್ಟು ಎತ್ತಲೂ ಸೇರದ ಪ್ರೇತದಂತೆ ” ಎಂದು ಹೇಳುತ್ತಾರೆ. ಇದು ಒಂದು ಉಪಮೆ ಅಷ್ಟೇ. ಸನಾತನದಲ್ಲಿ ಅಂತಹ ನಂಬಿಕೆ ಉಂಟು. ಅನ್ಯರಲ್ಲೂ ಬೇರೆ ಬೇರೆ ರೂಪದಲ್ಲಿ ಆ ನಂಬಿಕೆ ಉಂಟು. ಆದರೆ ತಮ್ಮನ್ನು ತಾವು ಪ್ರಗತಿಪರರು ಅಥವಾ ಬುದ್ಧಿಜೀವಿಗಳು ಎಂದು ಅಂದುಕೊಂಡಿರುವ ಕೆಲವರು, ಇದರ ಸೂಕ್ತತೆಯನ್ನು ಮತ್ತು ಪ್ರಸ್ತುತತೆಯನ್ನು ಪ್ರಶ್ನಿಸುತ್ತಾರೆ. ಹಾಗೆ ಪ್ರಶ್ನೆ ಮಾಡುವ, ಅಲ್ಲಗೆಳೆಯುವ ಮತ್ತು ಟೀಕಿಸುವ ಹಕ್ಕು ಅವರಿಗೆ ಉಂಟು.
ಹಾಗೆ ಹಳೆಯದನ್ನು ಬಿಟ್ಟೂ ಬಿಡದ ಹಂಗೆ, ಹೊಸದನ್ನು ಹಿಡಿದೂ ಹಿಡಿಯದ ಹಂಗೆ ಇಂದಿನ ಸಮಾಜದಲ್ಲಿ ಎಲ್ಲರೂ ಇದ್ದಾರೆ. ಅದಕ್ಕೆ ಹಲವಾರು ಕಾರಣಗಳು. ವಿಧ್ಯಾಭ್ಯಾಸದ ಕ್ರಮ ಬದಲಾವಣೆ, ಹೊಸ ಹೊಸ ಸಾಧನಗಳು ಮತ್ತು ಮಾಹಿತಿ ತಂತ್ರಜ್ಞಾನದ ಸ್ಫೋಟ, ಜಾಗತೀಕರಣ, ಹೀಗೆ ಹತ್ತು ಹಲವಾರು. ಹಿಂದೆ ಇದ್ದದ್ದು ಇಂದು ಇಲ್ಲ. ಇಂದು ಇರುವುದು ಮುಂದಿರುವುದಿಲ್ಲ. ಅಂತಹ ಸ್ಥಿತಿಯಲ್ಲಿ ಜನರು ಯಾವುದೇ ಒಂದು ನಿರ್ಧಿಷ್ಟತೆಯಲ್ಲಿ ಇರದೇ ಒಂದು ಅತಂತ್ರದ ಸ್ಥಿತಿಯಲ್ಲಿದ್ದಾರೆ ಎಂದು ಮಾನ್ಯ ಗುಂಡಪ್ಪನವರ ಹೇಳುತ್ತಾರೆ. ಭಾಷೆ, ಜೀವನದ ಶೈಲಿ, ಉದ್ಯೋಗ, ಸಂಪಾದನೆ ಎಲ್ಲವೂ ಇಂದಿನ ಜನಾಂಗದ ಮೇಲೆ ಪರಿಣಾಮ ಬೀರಿದೆ. ಇಂದು ನಾವು ಹೊಸದಾಗಿ ಕಾಣುತ್ತಿರುವ ಹೊಸ ವಿಧ್ಯಮಾನವೇನಲ್ಲ. ನಮ್ಮ ಭಾರತೀಯ ಇತಿಹಾಸದಲ್ಲೇ ಬೇರೆ ಬೇರೆ ಸಮಯಗಳಲ್ಲಿ ಇಂತಹ ಅತಂತ್ರ ಸ್ಥಿತಿಗಳನ್ನು ನೋಡಬಹುದು. ಅಂದಿನ ಭೌಗೋಲಿಕ, ರಾಜಕೀಯ, ಸಾಂಸ್ಕೃತಿಕ ಮತ್ತು ಆರ್ಥಿಕ ಸ್ಥಿತಿಗಳು ಅಂದಿಗೆ, ಅಂದಿನ ಸ್ಥಿತಿಗೆ ಕಾರಣವಾಗುತ್ತದೆ.
ಚಾಣಕ್ಯನಂತಹ ಮುತ್ಸದ್ಧಿಗಳು ಬಂದಾಗ ಏನೋ ಒಂದು ರೀತಿಯ ಕಲರವ ಉಂಟಾಗಿ ಸ್ವಲ್ಪ ಬದಲಾವಣೆಗಳನ್ನು ಕಾಣಬಹುದು. ಆದರೆ ಸ್ವಾಭಾವಿಕವಾಗಿ ಮಾನ್ಯ ಡಿ.ವಿ.ಜಿ ಯವರು ಹೇಳಿದಂತೆ ಮತ್ತೆ ಅದೇ ಅತಂತ್ರ ಸ್ಥಿತಿಗೆ ಒಗ್ಗಿ ಹೋಗುತ್ತದೆ ಇಡೀ ಸಮಾಜ. ಆದರೆ ಇಂತಹ ಪ್ರತಿಪಾದನೆಗಳಿಗೆ, ಕೆಲವು ವ್ಯಕ್ತಿಗಳು ಅಪವಾದವಾಗಿ ಭಿನ್ನವಾಗಿರಬಹುದು. ಶುದ್ಧ ಸತ್ವದಲ್ಲಿ ಯಾವುದು ಪುರಾತನವೋ ಯಾವುದು ಸನಾತನವೋ ಅದನ್ನು ಪಾಲಿಸುತ್ತಿರಬಹುದು. ಆದರೆ ಒಟ್ಟಾರೆ ಸಮಾಜವನ್ನು ನೋಡಿದಾಗ ಎಲ್ಲೋ ಏನೋ ಸರಿಯಿಲ್ಲ ಎನ್ನುವ ಭಾವನೆ ಬರುತ್ತದೆ. ಅದನ್ನೇ ಡಿ.ವಿ.ಜಿ ಯವರು ” ಲೋಕ ತಲ್ಲಣಿಸಿಹುದಿಂದು” ಎಂದರು.
ಆದರೆ ನಾವು ನೋಡಬೇಕಾದದ್ದು ಏನೆಂದರೆ, ಇದು ಸರಿಯೇ ಎಂದು. ಬದಲಾವಣೆಯೇ ಪ್ರಪಂಚದ ಮೂಲ ಗುಣವಾದ್ದರಿಂದ ಇದು ಸರಿ. ಅಸ್ತಿತ್ವವನ್ನು ಕಳೆದುಕೊಳ್ಳುವುದರಿಂದ ಇದು ಸರಿಯಿಲ್ಲ. ಹಾಗಾಗಿ ಏನು ಮಾಡಬೇಕು. ಡಿ.ವಿ.ಜಿ ಯವರೆ ಮುಂದೆ ಯಾವುದೋ ಕಗ್ಗದಲ್ಲಿ ಹೇಳುತ್ತಾರೆ” ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು ಹೊಸ ಯುಕ್ತಿ ಹಳೆ ತತ್ವ…..” ಎಂದು. ಅಂದರೆ ನೈಸರ್ಗಿಕವಾದ ಮತ್ತು ಸ್ವಾಭಾವಿಕವಾದ ಬದಲಾವಣೆ ಬೇಕು ಮತ್ತು ಆಗಬೇಕು. ಆದರೆ ಹೊಸತನ್ನು, ಹಳೆಯ ಮತ್ತು ಕಾಲದಲ್ಲಿ ಪರಿಕಿಸಿ ನಿರೂಪಿಸಲ್ಪಟ್ಟು ಸರ್ವಕಾಲಕ್ಕೂ ಅನ್ವಯವಾಗುವಂತಾ ಸಿದ್ಧಾಂತಗಳ ( theories ) ಆಧಾರದಮೇಲೆ ಹೊಸತು ಪಲ್ಲವಿಸ ಬೇಕು. ಆಗ ಹಳತು ಅಂತರ್ಯದಲ್ಲಿ ಉಳಿದು ಹೊಸತು ಪಲ್ಲವಿಸಿ ಬೆಳೆದು ಹಳೆಯದಕ್ಕೆ ಹೊಳಪ್ಪಿತ್ತಂತೆ ಆಗುತ್ತದೆ. ಹೊಸತು, ಆ ಹೊಳಪಿನ ಬೆಳಕಲ್ಲಿ ಸುಂದರವಾಗಿ ಕಾಣುತ್ತದೆ. ಆಗ ಎರಡೂ ಸಮನ್ವಯಗೊಂಡು ಒಂದು ಹೊಸ ನೆಲೆ ಸಿಕ್ಕಂತಾಗುತ್ತದೆ.
ಆದರೆ ವಿಷಾದವೇನೆಂದರೆ ಇಂದು ಯಾರಿಗೂ ಹಳೆಯದು ಬೇಡ. ಅದರ ಅರ್ಥ ಬೇಡ. ಅದರ ಸತ್ವ ಬೇಡ. ಅದನ್ನು ಗೊಡ್ಡು ಸಂಪ್ರದಾಯ ಎಂದು ಮೂದಲಿಸುವ, ಜರಿಯುವ, ನೇಪಥ್ಯಕ್ಕೆ ಸರಿಸುವ ಇಂದಿನ ಜನಾಂಗವು ಸತ್ಯವಾಗಲೂ ಗುಂಡಪ್ಪನವರು ಹೇಳಿದಂತೆ “ಎತ್ತಲೂ ಸೇರದ ಪ್ರೇತದಂತೆ ಲೋಕ ತಲ್ಲಣಿಸುತ್ತಿದೆ”.ಅಂತರ್ಪಿಶಾಚಿಗಳ ತರಹೆ ಇದ್ದಾರೆ.
ಎಲ್ಲರಲ್ಲೂ ಹಳೆಯ ಸತ್ವಯುತವಾದ ಸಿದ್ಧಾಂತಗಳ, ಸಂಸ್ಕೃತಿಯ, ಸಂಸ್ಕೃತಿಯನ್ನು ಒಳಗೊಂಡ ಭಾಷೆ, ಸಾಹಿತ್ಯ, ಕಲೆ ಮುಂತಾದವುಗಳನ್ನು ಪುರುಜ್ಜೀವನ ಮಾಡಲು ಒಂದು ಪ್ರಾಮಾಣಿಕ ಪ್ರಯತ್ನ ನಡೆಯಬೇಕು. ಅಂತಹ ಪ್ರಯತ್ನ ಎಲ್ಲ ಅಯಾಮಗಳಿಂದಲೂ ಒಂದೇ ಸಲಕ್ಕೆ ಒಂದು ಸ್ಫೋಟದಂತೆ ಆದಾಗ ಒಂದು ಸಕಾರಾತ್ಮಕವಾದ ಬದಲಾವಣೆಯನ್ನು ನಾವು ನೋಡಬಹುದು. ನಮ್ಮ ಭಾರತೀಯತೆಯನ್ನು, ಸಂಸ್ಕೃತಿಯನ್ನು ಉಳಿಸಬೇಕಾದರೆ ಅಂತಹ ಪ್ರಯತ್ನ ಅಗತ್ಯ.
ಬನ್ನಿ ಮಿತ್ರರೇ, ನಾವೂ ಅಂತಹ ಪ್ರಯತ್ನದಲ್ಲಿ ನಮ್ಮನ್ನು ನಾವೇ ತೊಡಗಿಸಿಕೊಳ್ಳೋಣ. ಅಂತಹ ವಿಚಾರಮಾಡುತ್ತಾ ಮುಂದಿನ ಕಗ್ಗಕ್ಕೆ ಹೋಗೋಣ.
ಇಂದಿನ ದಿನ ನಿಮಗೆಲ್ಲರಿಗೂ ಶುಭವಾಗಲಿ.
******************************************************