ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 3, 2012

1

ಮಂಕು ತಿಮ್ಮನ ಕಗ್ಗ – ರಸಧಾರೆ (೧೭)

‍ನಿಲುಮೆ ಮೂಲಕ

– ರವಿ ತಿರುಮಲೈ

ಲೋಕಜೀವನ ಮಂಥನ

ತಳಮಳವಿದೇನಿಳೆಗೆ? ದೇವದನುಜರ್ ಮಥಿಸೆ
ಜಳಧಿಯೊಳಾದಂತೆ ಸುಧೆಗೆ ಪೀಠಿಕೆಯೇಂ?
ಹಾಲಾಹಲವ ಕುಡಿವ ಗಿರೀಶನಿರ್ದೊಡೀ
ಕಳವಳವದೇತಕೆಲೋ? – ಮಂಕುತಿಮ್ಮ

ತಳಮಳವಿದೇನಿಳೆಗೆ= ತಳಮಳವಿದು + ಏನು + ಇಳೆಗೆ,   ದೇವಮನುಜರ್ =ದೇವದ   + ಅನುಜರ್
ಜಳಧಿಯೊಳಾದಂತೆ = ಜಲಧಿಯೊಳು + ಆದಂತೆ, ಗಿರೀಶನಿರ್ದೊಡೀ= ಗಿರೀಶನು + ಇರ್ದೊಡೆ, ಕಳವಳವದೇತಕೆಲೋ = ಕಳವಳವು + ಅದು+ ಏತಕೆ+ ಎಲೋ,

ದೇವದನುಜರ್ = ದೇವಲೋಕದ ಅಣ್ಣ ತಮ್ಮಂದಿರು , ಮಥಿಸೆ= ಕಡೆಯೆ, ಜಲಿಧಿ= ಸಮುದ್ರ, ಸುಧೆ= ಅಮೃತ, ಪೀಠಿಕೆ = ಭೂಮಿಕೆ, ಪ್ರಸ್ತಾವನೆ, ಹಾಲಾಹಲ= ವಿಷ, ಗಿರೀಶ= ಶಿವ

ತಳಮಳವದೇನು ಇಳೆಗೆ ? ದೇವದುಜರು ಮಥಿಸೆ ಜಲಧಿಯೊಳು ಆದಂತೆ, ಸುಧೆಗೆ ಪೀಠಿಕೆಯೇನು,
ಹಲಾಹಲವ ಕುಡಿಯಲು ಗಿರೀಶನಿರುವಾಗ ಕಳವಳವದು ಏತಕೆ ಎಲೋ ಮಂಕುತಿಮ್ಮ.

ಇಲ್ಲಿ ಒಂದು ಆಶಾಭಾವನೆಯನ್ನು ವ್ಯಕ್ತಪಡಿಸುತ್ತಾರೆ, ಶ್ರೀ ಗುಂಡಪ್ಪನವರು. ಆಗ ಎಲ್ಲೆಲ್ಲೂ ಅತಂತ್ರದ ಸ್ಥಿತಿ. ಹಳೆಯ ಭಕ್ತಿ ಶ್ರದ್ಧೆಗಳು ಸಶಿಸಿ ಹೊಸದು ಯಾವುದೋ ಇಲ್ಲದೆ, ಒಂದು ಅತಂತ್ರದ ಸ್ಥಿತಿ ಇದೆ. ಜನರೆಲ್ಲಾ ಕಳವಳ ಗೊಂಡು  ತಳಮಳಿಸುತ್ತಿದ್ದಾರೆ. ಅಂತ ಸ್ಥಿತಿಯಲ್ಲಿ ಇವರಿಗೊಂದು ಆಶಾಭಾವನೆ. ಅದನ್ನು ಅವರು ಈ ಕಗ್ಗದಲ್ಲಿ  ಸೂಚಿಸುತ್ತಾರೆ.

ಹಿಂದೆ,  ದೇವಲೋಕದಲ್ಲಿ ಅಮೃಥವನ್ನು ಪಡೆಯಲು  ಸಮುದ್ರ ಮಂಥನ ನಡೆಯಿತು. ಅದನ್ನು ನಡೆಸಿದವರು  ದೇವತೆಗಳು ಮತ್ತು ದಾನವರು. ಇವರನ್ನು ಗುಂಡಪ್ಪನವರು ಸೂಕ್ತವಾಗಿ “ದೇವಲೋಕದ ಅನುಜರ್” ಎಂದು ಸಂಬೋಧಿಸುತ್ತಾರೆ. ಏಕೆಂದರೆ ಪುರಾಣದ ಪ್ರಕಾರ ಈ ದೇವತೆಗಳು ಮತ್ತು ದಾನವರು ಇಬ್ಬರೂ ಕಶ್ಯಪ  ಬ್ರಹ್ಮನ ಮಕ್ಕಳು. ಹಾಗಾಗಿ ಅವರನ್ನು ಅಣ್ಣ ತಮ್ಮಂದಿರು ಎಂದಿದ್ದಾರೆ. ವಾಚಕರು ಈ ದೇವದಾನವರು ನಡೆಸಿದ ಅಮೃತ ಮಂಥನದ ಕಥೆಯನ್ನು ಬೇರೆಯಾಗಿ ಓದಬೇಕಾಗಿ ವಿನಂತಿ. ಆದರೆ ಆ ಮಂಥನದಲ್ಲಿ ಮೊದಲು ಹಾಲಾಹಲ ಅಂದರೆ ವಿಷದ ಉದ್ಭವವಾಯಿತಂತೆ. ಘನ ಘೋರ ವಿಷವನ್ನು ಲೋಕ ಕಲ್ಯಾಣಕ್ಕಾಗಿ  ಗಿರಿಜಾಪತಿ ಪರಮಶಿವನು ಕುಡಿದುಬಿಟ್ಟನಂತೆ. ಅದನ್ನು ಪಾರ್ವತಿ ಕಂಠದಲ್ಲೇ ತಡೆದದ್ದರಿಂದ ಅದು ಅಲ್ಲೇ  ನಿಂತು,  ಶಿವನು ನೀಲಕಂಠ ಮತ್ತು ವಿಷಕಂಠನಾದನಂತೆ.

ಹಿಂದಿನ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು  II  ಹಳೆ ಧರ್ಮ ಸತ್ತಿಹುದು ಹೊಸ ಧರ್ಮ ಹುಟ್ಟಿಲ್ಲ – ತಳಮಳಕೆ ಕಡೆಯೆಂದು – ಮಂಕು ತಿಮ್ಮ II  ಎಂದು ತಮ್ಮ ಕಳವಳವನ್ನು ವ್ಯಕ್ತಪಡಿಸುತ್ತಾರೆ. ಆ ಕಳವಳಕ್ಕೆ ಉತ್ತರವೆಂಬಂತೆ ಈ ಕಗ್ಗದಲ್ಲಿ ಈ ರೀತಿಯ ಕಳವಳ, ತಳಮಳಗಳು ಸಹಜ. ಒಂದು  ಉತ್ತಮವಾದ ವಸ್ತು ಈ ಪ್ರಪಂಚಕ್ಕೆ ಸಿಗಬೇಕಾದರೆ ಈ ರೀತಿಯ ಮಥನ ವಾಗಬೇಕು. ಇಲ್ಲಿ ದೇವದಾನವರ ಉಲ್ಲೇಖಮಾಡಿ ಮನುಷ್ಯನ ಅಂತರ್ಯದಲ್ಲಿರುವ
” ಒಳ್ಳೆಯ ಮತ್ತು ಕೆಟ್ಟ ” ಗುಣಗಳನ್ನು ಸೂಚ್ಯವಾಗಿಸುತ್ತಾರೆ.

ಮನುಷ್ಯನ ಮನಸ್ಸಿನಲ್ಲಿ ಒಳ್ಳೆಯದು ಕೆಟ್ಟದ್ದು ಎರಡೂ ಇರುತ್ತದೆ. ಪ್ರಮಾಣ ಮತ್ತು ಪರಿಮಾಣಗಳ ವ್ಯತ್ಯಾಸ ಅಷ್ಟೇ. ಯಾವುದು ಅಧಿಕವಾಗಿದ್ದರೆ ಅದರ ಪ್ರಾಬಲ್ಯ. ಆದರೆ ಒಂದು ವ್ಯಕ್ತಿಯಿಂದ ಮಹತ್ತರ ಕಾರ್ಯವಾಗಬೇಕಾದರೆ ಅಂತರ್ಯದಲ್ಲೂ ತಿಕ್ಕಾಟಗಳು ತುಮಲಗಳು ನಿರಂತರ ನಡೆಯಬೇಕು. ಸಮುದ್ರಮಥನದ ರೀತಿ. ನಮ್ಮ ಲೋಕದ ಮಹಾ ಮಹಿಮರೆಲ್ಲರಿಗೂ ಇಂಥಹ ಅನುಭವವಾಗಿದೆ. ಅವರ ಪ್ರಯತ್ನದಲ್ಲಿ ಅವರಿಗೆ ” ವಿಷದ” ರೂಪದಲ್ಲಿ ಬೇಕಾದಷ್ಟು ಕಷ್ಟಗಳು ಬಂದಿವೆ. ಆ ಮಹಾಮಹಿಮರೆಲ್ಲ ಅಂತಹ ಕಷ್ಟಗಳನ್ನೆಲ್ಲ ” ಪರಶಿವನು ಹಾಲಾಹಲವನ್ನು ಕುಡಿದಂತೆ ” ನುಂಗಿ ಲೋಕ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ತ್ಯಾಗಮಾಡಿದ್ದಾರೆ.  ಉದಾಹರಣೆಗೆ, ನಮ್ಮ ದೇಶಕ್ಕೆ ಚಾಣಕ್ಯ ವಿಷ್ಣು ಶರ್ಮನ ಕೊಡುಗೆ ಅಪಾರ. ಅಷ್ಟೇ ಕಷ್ಟ ನಿಷ್ಟೂರಗಳನ್ನು ಆಭವಿಸಿದ ಅವನು. ಹೀಗೆ, ಶಂಕರರು, ರಾಮಾನುಜರು, ಬಸವಣ್ಣನವರು, ನಮ್ಮ ದೇಶದ ಸ್ವಾತಂತ್ರ ಹೋರಾಟಗಾರರಾದ ಭಗತ್ ಸಿಂಗ್, ಚಂದ್ರಶೇಖರ್ ಅಜಾದ್, ರಾಜಗುರು, ಬೋಸ್ ಮುಂತಾದ ಅನೇಕ ವೀರರು ಸ್ವಾರ್ಥ ತೊರೆದು ಲೋಕಕಲ್ಯಾಣಕ್ಕಾಗಿ ಕಷ್ಟಗಳೆಂಬ ವಿಷವನ್ನು, ಪರಶಿವನಂತೆ ಕುಡಿದ ದೃಷ್ಟಾಂತಗಳು ನಮಗೆ ಹೇರಳವಾಗಿ ಸಿಗುತ್ತದೆ.

ಅದೇ ರೀತಿ ಇಂದು ಇರುವ ಪರಿಸ್ಥಿತಿಯೂ ಬದಲಾಗಿ ಇಂದಿರುವ ವಿಷ ಮತ್ತ ವಿಷಮ ಪರಿಸ್ಥಿತಿ ಕರಗಿ ಅಮೃತ ಹುಟ್ಟುವುದಕ್ಕೆ ಈ ರೀತಿಯ ತಿಕ್ಕಾಟವೇ, ತುಮುಲಗಳೇ, ತಳಮಳವೇ ಪೀಠಿಕೆಯೋ ಎಂದು ಕೇಳುತ್ತಾರೆ ಶ್ರೀ ಗುಂಡಪ್ಪನವರು. ಅಂದು ಪರ ಶಿವನು ” ವಿಷ”ವನ್ನು ಕುಡಿದು ಲೋಕಕಲ್ಯಾಣವನ್ನು ಮಾಡಿದಹಾಗೆ ಇಂದೂ ಯಾರಾದರೂ ಬರಬಹುದೆಂದು ಅವರ ಆಸೆ. ಅವರ ಅಶಾಭಾವಕ್ಕೆ ಒಂದು ನಮಸ್ಕಾರ.

ಆದರೆ ವಾಚಕರೆ, ವಿಚಾರ ಮಾಡಿ ನೋಡಿ. ಅಂದಿನ ಮಥನದಿಂದ  ಅಂದರೆ ಲೋಕದ ದ್ವಂದ್ವಗಳಿಂದ ಮತ್ತು ಆ ದ್ವಂದ್ವಗಳ ತಿಕ್ಕಾಟದಿಂದ, ತೊಳಲಾಟದಿಂದ ಇನ್ನೂ ಅಮೃತ ಬಂದೆ ಇಲ್ಲ. ಎಲ್ಲೆಲ್ಲೂ ವಿಷಮ ಸ್ಥಿತಿಯ ವಿಷದ ಧಾರೆ ಹರಿಯುತ್ತಿದೆ. ದ್ವೇಷಾಸೂಯೆಗಳ, ಭಾಷಾಸೂಯಗಳ, ಅಹಂಕಾರದ, ಜನಬಲದ ಮದ, ಧನಬಲದ ಮದ, ಅಧಿಕಾರ ಮದದ ವಿಷದ  ಗಾಳಿ ಎಲ್ಲೆಲ್ಲೂ ಹರಡಿದೆ. ಇಡೀ ಸಮಾಜ ಪ್ರೀತಿ ಕರುಣೆ ವಾತ್ಸಲ್ಯಗಳ ಕೊರತೆಯಿಂದ ಸೊರಗಿದೆ.  ಹಳೆಯ ಶ್ರದ್ಧೆ -ಭಕ್ತಿಗಳ ಮತ್ತು ಆಧುನೀಕತೆಯ, ಡಂಬ ತೋರಿಕೆಯ ಜೀವನದ ನಡುವೆಯ ಅಂತರ ಅಗಾಧವಾಗುತ್ತಿದೆ.

ಅಂದು ಅಂದರೆ ಈಗ್ಗೆ  ಎಂಬತ್ತು ವರ್ಷಗಳ ಹಿಂದೆ ಡಿ.ವಿ.ಜಿ.ಯವರು ಕಂಡ ಅಮೃತದ ಕನಸು ನನಸಾಗುವ ಕಾಲ ಬಂದೀತೆ ಎಂದರೆ, ನಾವು ಆಶಾಭಾವನೆಯನ್ನು ಎಂದಿಗೂ ಬಿಡಬಾರದು,ಇಂದಿನ ಯುವ ಪೀಳಿಗೆಗೆ ಮತ್ತು  ಮುಂದಿನ ಪೀಳಿಗೆಗೆ, ಹಿಂದಿನ ತತ್ವಗಳ ಸತ್ವವನ್ನು ತಿಳಿಸಿಕೊಡಬೇಕು. ಅವುಗಳ ಅರಿವು ಮೂಡಿಸಬೇಕು. ಬಹಳಷ್ಟು ಜನ ಆ ಪ್ರಯತ್ನದಲ್ಲಿ ಇದ್ದರೂ ಇಷ್ಟು ವಿಶಾಲವಾದ ದೇಶದಲ್ಲಿ ಆಧುನೀಕತೆಯ ಪೊಳ್ಳು ಸಂಸ್ಕೃತಿಯ ವ್ಯಾಪ್ತಿಯನ್ನು ಮುಟ್ಟಲು ಇನ್ನೂ ಸಾಧ್ಯವಾಗಿಲ್ಲ. ಶೀಘ್ರವೇ ಫಲ ಬೇಕಾದಲ್ಲಿ, ಸಮರೋಪಾದಿ ಕಾರ್ಯಗಳು ನಡೆದು ನಮ್ಮ ಭಾರತೀಯ ಅಸ್ಮಿತೆಯನ್ನು ಅರಿತುಕೊಳ್ಳಲು ಮತ್ತು ಕಾಪಾಡಲು ಎಲ್ಲರೂ ಪ್ರವೃತ್ತರಾಗಬೇಕು.  ಅದಕ್ಕೆ ನಾವು ನೀವು ಎಲ್ಲರೂ ಪ್ರಯತ್ನಪಟ್ಟು ನಮ್ಮ ಸುತ್ತು ಮುತ್ತಲಿನವರನ್ನೂ ಅದಕ್ಕೆ ಪ್ರೇರೇಪಿಸಿದರೆ ಅದು ಸಾಧ್ಯ.

ಅಂಥಹ ಪ್ರಯತ್ನವನ್ನು ಮಾಡುವ ಧೃಢ ಸಂಕಲ್ಪವನ್ನು ಮಾಡುತ್ತಾ ನಾವು ಮುಂದಿನ ಕಗ್ಗಕ್ಕೆ ಹೋಗುವ.

ಇಂದಿನ ದಿನ ನಿಮಗೆಲ್ಲರಿಗೂ ಶುಭವಾಗಲಿ.

ನಮಸ್ಕಾರ

**************************************************

1 ಟಿಪ್ಪಣಿ Post a comment
  1. valavi
    ಮಾರ್ಚ್ 1 2014

    ದೇವದನುಜರ್ = ದೇವಲೋಕದ ಅಣ್ಣ ತಮ್ಮಂದಿರು ಇದು ತಪ್ಪಾಗಿದೆ. ಇಲ್ಲಿ ದೇವ , ದನುಜರ್ ಅಂದರೆ ದೇವತೆಗಳು ರಾಕ್ಷಸರು ಎಂದು ಅರ್ಥ. ದನುಜ= ರಾಕ್ಷಸ ಇದು ಸರಿಯಾದ ಅರ್ಥವಾಗಿದೆ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments