ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 4, 2012

ಮಂಕು ತಿಮ್ಮನ ಕಗ್ಗ – ರಸಧಾರೆ (೧೮)

‍ನಿಲುಮೆ ಮೂಲಕ

– ರವಿ ತಿರುಮಲೈ

ಲೋಕಜೀವನ ಮಂಥನ

ನದಿಯ ತೆರೆಯವೊಲುರುಳಿ ಹೊರಳುತಿರುವುದು ಜೀವ I
ಮೊದಲಿಲ್ಲ ಮುಗಿವಿಲ್ಲ ನಿಲುವಿಲ್ಲ ವದಕೆ II
ಬದುಕೇನು ಸಾವೇನು ಸೊದೆಯೇನು ವಿಷವೇನು? I
ಉದಕಬುದ್ಬುದವೆಲ್ಲ ! – ಮಂಕುತಿಮ್ಮ II

ತೆರೆಯವೊಲುರುಳಿ = ತೆರೆಯವೊಲು ಉರುಳಿ,     ಉದಕಬುದ್ಬುದವೆಲ್ಲ= ಉದಕ ಬುದ್ಬುದವು ಎಲ್ಲ.
ತೆರೆಯವೊಲು=ನದಿಯ ಅಲೆಯಂತೆ ,  ಮುಗಿವಿಲ್ಲ= ಕೊನೆಯಿಲ್ಲ, ನಿಲುವಿಲ್ಲ = ನಿಲುವು ಅಂದರೆ ಸ್ಥಿರತೆ,. ಸೊದೆಯೇನು= ಅಮೃತವೇನು, ಉದಕ= ನೀರು, ಬುದ್ಬುದ= ಗುಳ್ಳೆ

ನದಿಯ ತೆರೆಯಂತೆ ಉರುಳಿ ಹೊರಳುತಿದೆ ಜೀವ, ಮೊದಲಿಲ್ಲ , ಮುಗಿವಿಲ್ಲ ನಿಲುವಿಲ್ಲ ಅದಕೆ
ಬದುಕೇನು ಸಾವೇನು ಸೊದೆಯೇನು ವಿಷವೇನು ಉದಕದ ಬುದ್ಬುದವು  ಎಲ್ಲ ಮಂಕುತಿಮ್ಮ.

ವಾಚಕರೆ ಹಿಂದಿನ ಕಗ್ಗದಲ್ಲಿ ಈ ಹಳತು ಹೊಸತನದ ತಿಕ್ಕಾಟವನ್ನು  ಅಮೃತಕ್ಕಾಗಿ ನಡೆಯುವ ಸಮುದ್ರ ಮಂಥನಕ್ಕೆ ಹೋಲಿಸಿದರು ಮಾನ್ಯ ಡಿ.ವಿ.ಜಿ ಯವರು.ಆದರೆ ಇಂದಿನ ಕಗ್ಗದಲ್ಲಿ ಒಂದು ವೇದಾಂತದ ಮಾತನ್ನು ಸೂಚಿಸಿದ್ದಾರೆ. ಇಡೀ ಜೀವನವನ್ನು ಅವರು ಒಂದು ನದಿಯ ತೆರೆ ಅಥವಾ ಅಲೆಯಂತೆ ಎಂದಿದ್ದಾರೆ. ಒಂದು ನಿಮಿಷವೂ ಒಂದೇ ತೆರನಾಗಿ ಇರದ ನದಿಯ ತೆರೆಗೆ ಹೋಲಿಸಿದ್ದಾರೆ. ಹೌದು ಯಾರ ಜೀವನವೂ ಎಂದೂ ಒಂದೇ ತೆರನಾಗಿ ಇರುವುದಿಲ್ಲ.ಬದಲಾವಣೆಯಾಗುತ್ತಲೇ ಇರುತ್ತದೆ. ಅದಕ್ಕೆ ನಾನು ಅದನ್ನು kaleidoscopic ಲೈಫ್  ಎಂದು ಕರೆಯುತ್ತೇನೆ.  ಕೆಲಿಡೋಸ್ಕೊಪ್ ಎನ್ನುವುದು ನಾವು ಚಿಕ್ಕಂದಿನಲ್ಲಿ ಮೂರು ಬಿಳಿಯ ಗಾಜಿನ ಪಟ್ಟಿಗಳನ್ನು ತೆಗೆದುಕೊಂಡು ಮೂರನ್ನೂ ತ್ರಿಕೋನಾಕಾರದಲ್ಲಿ ಜೋಡಿಸಿ ಎಲ್ಲ ಬದಿಯಿಂದಲೂ ಬಂಧಿಸಿ ಒಂದು ಕೊನೆಯನ್ನು  ಮುಚ್ಚ್ಚಿ ಸುತ್ತಲೂ ಕಾಗದವನ್ನು ಸುತ್ತಿ ಬಿಡುತ್ತಿದ್ದೆವು. ತೆರೆದ ಬದಿಯಿಂದ ಒಡೆದ ಗಾಜಿನ ಬಳೆಯ ಚೂರುಗಳನ್ನು ಹಾಕಿದರೆ  ಒಂದು ಚಿತ್ತಾರ (ಡಿಸೈನ್) ಮೂಡುತ್ತಿತ್ತು. ಅದನ್ನು ತಿರುಗಿಸುತ್ತಾ ಹೋದಂತೆಲ್ಲ, ಬೇರೆಬೇರೆ ಚಿತ್ತಾರಗಳು ಮೂಡುತ್ತಿದ್ದವು. ಒಂದು ಬಾರಿ ಮೂಡಿದ ಚಿತ್ತಾರ ಮತ್ತೊಂದು ಬಾರಿಗೆ ಎಂದೂ ಬರುವುದಿಲ್ಲ. ಹಾಗೆಯೇ ನಮ್ಮ ಜೀವನಗಳು ಈಗ ಇದ್ದಂತೆ ಎಲ್ಲವೂ ಮತ್ತೆಂದಿಗೂ ಇರುವುದಿಲ್ಲ. ದಿನಕಳೆದಂತೆ ನಮ್ಮ ವಯಸ್ಸು ಒಂದು ದಿನ ಹೆಚ್ಚಾಗುತ್ತದೆ. ಒಂದು ದಿನ  ಇದ್ದ ಮನೋಭಾವ ಮತ್ತೊಂದು ದಿನ ಇರುವುದಿಲ್ಲ, ಒಂದು ಗಳಿಗೆ ಇದ್ದ ನಮ್ಮ ಯೋಚನಾ ವಿಧ ಮತ್ತೊಂದು ಗಳಿಗೆ ಇರುವುದಿಲ್ಲ. ಇದನ್ನೇ ಮಾನ್ಯ ಗುಂಡಪ್ಪನವರು ನಿಲುವಿಲ್ಲ ಎಂದರು.

ಇನ್ನು ನಾವು ಈಗ ಮನುಷ್ಯರಾಗಿ ಹುಟ್ಟಿದ್ದೇವೆ, ಹಿಂದೆ ಏನಾಗಿದ್ದೇವೋ ಮುಂದೆ ಏನಾಗುತ್ತೇವೆಯೋ ಗೊತ್ತಿಲ್ಲ. ನಮ್ಮ ಈ ಜೀವನ ಪ್ರಯಾಣ ಎಂದು ಮೊದಲಾಯಿತೋ ಗೊತ್ತಿಲ್ಲ. ಎಂದು ಮುಗಿಯುವುದೋ ಗೊತ್ತಿಲ್ಲ. ಪ್ರಶ್ನೆಗಳು  ಉದ್ಭವವಾಗಬಹುದು. ಉತ್ತರವೂ ಮಾತ್ರ ಸಿಗುವುದಿಲ್ಲ. ಇದಕ್ಕೇ,  ಮೊದಲಿಲ್ಲ ಕೊನೆಯಿಲ್ಲ ಎನ್ನುತ್ತಾರೆ ಶ್ರೀ ಗುಂಡಪ್ಪನವರು. ನಮ್ಮ ಸನಾತನ ವೇದಾಂತದ ಪ್ರಕಾರ ಒಂದು ಜೀವಿ ಮಾನವನಾಗಿ ಹುಟ್ಟಬೇಕಾದರೆ ಅದಕ್ಕೆ ಮೊದಲು ೮೪ ಲಕ್ಷ ಬಾರಿ ( ಏಸು ಕಾಯಂಗಳ ಕಳೆದು ೮೪ ಲಕ್ಷ ಜೀವರಾಶಿಯನ್ನು  ದಾಟಿ ಬಂದ ಈ ಶರೀರ ಎಂದು ಪುರಂಧರ  ದಾಸರ ಪದ. ) ಬೇರೆ ಬೇರೆ ದೇಹಗಳನ್ನು ಹೊಕ್ಕು ಹೊರಗೆ ಬಂದು ಮನುಷ್ಯನಾಗುತ್ತಾನೆ,  ಅಂದರೆ ಜೀವ  ಈ ಮನುಷ್ಯ ದೇಹವನ್ನು ಹೊಗುತ್ತಾನೆ. ನಾವು ಎಂದು ಈ ಮನುಷ್ಯ ದೇಹವನ್ನು ಹೊಕ್ಕೆವೋ  ಇದರಿಂದ ಮುಂದೆ ಏನೋ ಎನ್ನುವುದು ಗೊತ್ತಿಲ್ಲ. ಮತ್ತೆ ಈ ಜನ್ಮದ ನಮ್ಮ ಕರ್ಮಗಳು ಮುಂದಿನ ಜನ್ಮವನ್ನು ನಿರ್ಧರಿಸುತ್ತವೆ ಎಂದೂ ಹೇಳುತ್ತಾರೆ. ಇನ್ನೂ ಕೆಲವರು ಜೀವಿ ತಾನು ಏನಾಗಬೇಕು, ಎಲ್ಲಿಗೆ ಹೋಗಬೇಕು  ಎನ್ನುವುದನ್ನು ತಾನೇ ನಿರ್ಧರಿಸುತ್ತಾನೆ ಎನ್ನುತ್ತಾರೆ.  ಆ ನಿರ್ಧಾರಗಳು ನಮ್ಮ ಮನಸ್ಸು ಬುದ್ಧಿಗಳಿಗೆ ಗೊತ್ತಾಗುತ್ತವೆಯೋ ಇಲ್ಲವೋ,  ಎಲ್ಲವೂ ಅನಿಶ್ಚಯ. ಇದಕ್ಕೆ ಇರುವ ಆದಿಯೂ ಗೊತ್ತಿಲ್ಲ ಅಂತ್ಯವೂ ಗೊತ್ತಿಲ್ಲ.  ಇದನ್ನೇ ಗುಂಡಪ್ಪನವರು “ಮೊದಲಿಲ್ಲ ಮುಗಿವಿಲ್ಲ ನಿಲುವಿಲ್ಲ ವದಕೆ” ಎಂದರು.

ಬದುಕಿನ ಅರ್ಥ ಗೊತ್ತಿಲ್ಲ, ಅಥವಾ ನಮಗೆ ಗೊತ್ತಿರುವುದು ನಮ್ಮ ದೃಷ್ಟಿಕೋನವಷ್ಟೇ , ಸಮಗ್ರ ಸತ್ಯವಲ್ಲವಲ್ಲ.  ಸಾವಿನ ಅರ್ಥವಂತೂ ಗೊತ್ತಿಲ್ಲ. ಸಾವೆಂದರೆ ನಮಗೆ ಗೊತ್ತಿರುವುದು, ಒಂದು ವ್ಯಕ್ತಿ ಮೂರ್ಥರೂಪದಲ್ಲಿ ಶರೀರದಿಂದ  ಇರಲಾಗದ ಸ್ಥಿತಿಯೇ ಸಾವು. ನಾನು ಇದನ್ನು ರೂಪ ಬದಲಾವಣೆ ಎನ್ನುತ್ತೇನೆ. ಹಾಗಾಗಿ ಸಾವಿನ ಬಗ್ಗೆಯೂ ನಿಖರವಾದ ಅಭಿಪ್ರಾಯವಿಲ್ಲ. ಬದುಕೇ ನಿರ್ಧಿಷ್ಟವಲ್ಲ.  ಇನ್ನು ಬದುಕಿಗೆ ಸಂಬಂಧಿಸಿದ ಸುಖವೇನು( ಸೊದೆ=ಅಮೃತ ಅಂದರೆ ಸವಿ.ಆ ಸವಿಯನ್ನೇ ಸುಖ ಎಂದುಕೊಳ್ಳಬೇಕು   ) ವಿಷ(ದುಃಖ) ವೇನು? ಅದೂ ಅರ್ಥವಾಗುವುದಿಲ್ಲ. ಬದುಕೆಲ್ಲ ಒಂದು ಉದಕಬುದ್ಬುದ,ಅಂದರೆ ನೀರಿನ ಮೇಲಿನ ಗುಳ್ಳೆ ಎಂದು ಹೇಳುತ್ತಾರೆ ಗುಂಡಪ್ಪನವರು. “ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ” ಎಂದು ಪುರಂದರ ದಾಸರು “ಯಾರಿಗೆ ಯಾರುಂಟು ಎರವಿನ ಸಂಸಾರ “ಎಂಬ ಹಾಡಿನಲ್ಲಿ ಬರೆಯುತ್ತಾರೆ.  ಯಾವುದೂ ನಿರಂತರವಲ್ಲ, ನಿಶ್ಚಯವಿಲ್ಲ, ನಿಶ್ಚಯವಿದ್ದರೂ ನಮಗೆ ಅದರ ಅರಿವಿಲ್ಲ. ಅಂತಹ ಭಾವಗಳನ್ನೇ ವ್ಯಕ್ತಪಡಿಸುತ್ತಾರೆ  ಶ್ರೀ ಗುಂಡಪ್ಪನವರು.

ಇದು ವೇದಾಂತದ ಮಾತು. ಇದು ಸತ್ಯ. ಈ ಸತ್ಯದ ತಳಹದಿಯಲ್ಲೇ ನಮ್ಮ ಜೀವನ ಸಾಗಬೇಕು. ಆದರೆ  ನಾವು ” ಅಯ್ಯೋ ಜೀವನವೆಲ್ಲ ನಶ್ವರ, ಯಾವುದೂ ಶಾಶ್ವತವಲ್ಲ ನಾನೇಕೆ ಏನಾದರೂ ಮಾಡಬೇಕು” ಎಂದು ನಿರಾಸೆಯಭಾವ ತಳೆಯಬಾರದು. ಅದು ಬದುಕಿಗೆ ಮಾರಕ. ಬದುಕಿಗೆ ಪೂರಕವಾದ ಸದಾಶಾಭಾವನ್ನೇ ಇಟ್ಟುಕೊಂಡು ಜೀವನವನ್ನು ಸಾಗಿಸಬೇಕು. ” ಸದಶಾಭಾವವಷ್ಟೇ” ಇರಬೇಕು. ಎಲ್ಲವೂ ಯಾವುದೋ ಒಂದು ಪರಮ ಶಕ್ತಿಯ ಅಧೀನದಲ್ಲಿ ಮತ್ತು ಅದರ ಇಚ್ಚೆಯಂತೆ ನಡೆಯುತ್ತದೆ. ನಮ್ಮ ಪ್ರಮೇಯವಿದ್ದಂತೆ ಕಂಡರೂ ಇಲ್ಲದ ಮತ್ತು ಅದಕ್ಕೆ ತದ್ವಿರುದ್ಧವಾದ ಅನುಭವಗಳು ನಮಗೆ ಆಗುತ್ತವೆ. ಹಾಗಾಗಿ ನಾವು ಆ ಪರಮ ಶಕ್ತಿಯ ಅಧೀನದಲ್ಲಿರುವುದರಿಂದ ಅದಕ್ಕೆ ಡಿ.ವಿ.ಜಿ.ಯವರು ಹೇಳುವಂತೆ ” ಆ ವಿಚಿತ್ರಕೆ ಶರಣಾಗೋ ಮಂಕುತಿಮ್ಮ” ಎಂಬಂತೆ ಇರಬೇಕು ಆದರೆ ಜೀವನದಲ್ಲಿ ಇದ್ದರೂ   ಯಾವುದಕ್ಕೂ ಅಂಟದೆ ತಾವರೆ ಎಲೆಯ ಮೇಲಿನ ನೀರ ಹನಿಯಂತೆ ಇರಬೇಕು. ಇದ್ದರೆ ನೆಮ್ಮದಿ, ಸುಖ ಮತ್ತು ಆನಂದ. ಹೇಳುವುದು ಸುಲಭ ಆಚರಣೆ ಬಹಳ ಕಷ್ಟ . ಆದರೆ ಅಸಾಧ್ಯವಲ್ಲವಲ್ಲ. ಪ್ರಯತ್ನ ಪಡೋಣ ಎಂದೋ ಒಂದು ದಿನ ನಮಗೂ ಆ ಆನಂದದ ನೆಲೆ ಸಿಗಬಹುದು.

ಇಂಥಹ ಆಶಯಗಳನ್ನು ಇಟ್ಟುಕೊಂಡು ನಾವು ಮುಂದಿನ ಕಗ್ಗಕ್ಕೆ ಹೋಗೋಣವೆ?

ಇಂದಿನ ದಿನ ನಿಮಗೆಲ್ಲರಿಗೂ ಶುಭವಾಗಲಿ.

ನಮಸ್ಕಾರ

*******************************************************

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments