ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 5, 2012

1

ಗುಂಡು ಬಿಡದ ಬಂದೂಕುಗಳ ನಡುವೆ!

‍ನಿಲುಮೆ ಮೂಲಕ

– ಸಂತೋಷ್ ಆಚಾರ್ಯ

೧೯೫೯ರಲ್ಲಿ ಜನರಲ್ ತಿಮ್ಮಯ್ಯ ಭಾರತ ಚೀನಾ ಯುದ್ಧದ ಸಾಧ್ಯತೆ ಮತ್ತು ಅದಕ್ಕೆ ಬೇಕಾದ ತಯಾರಿಯನ್ನು ಮಾಡಲು ಒಪ್ಪಿಗೆ ಕೇಳಿದಾಗ ಆಗಿನ ರಕ್ಷಣಾ ಮಂತ್ರಿಯಾಗಿದ್ದ ಕೃಷ್ಣ ಮೆನನ್ ಅದನ್ನು ನಿರಾಕರಿಸಿದ್ದರು. ಇದರಿಂದ ಕುಪಿತಗೊಂಡ ಜನರಲ್ ರಾಜೀನಾಮೆಯನ್ನು ಎಸೆದಿದ್ದರು. ಜನರಿಂದ ಸರ್ಕಾರ ಎನ್ನುವ ಅರ್ಥದ ಪ್ರಜಾಪ್ರಭುತ್ವ ಶುರುವಾದ ಹೊತ್ತಲ್ಲೇ ಜನರು ಬದಲಿಸಬಯಸುವ ಸರ್ಕಾರದ ನೀತಿಗಳನ್ನು ಬದಲಿಸುವ ಅನುಮತಿ ಆಗಲೇ ಇರಲಿಲ್ಲ. ನೆಹರೂ ರಾಜೀನಾಮೆಗೆ ಒಪ್ಪದೇ ಅವರನ್ನು ಅವರ ಅವಧಿ ಮುಗಿಯುವ ತನಕ(೧೯೬೧) ಇಟ್ಟುಕೊಂಡಿದ್ದು ಮತ್ತು ಭಾರತ ಯುದ್ಧದಲ್ಲಿ(೧೯೬೨) ಹೀನಾಯವಾಗಿ ಸೋತದ್ದು ಈಗ ಕೇವಲ ಇತಿಹಾಸ! ನೆಹರೂ ಚಾಣಾಕ್ಷತನದಿಂದ ವರ್ತಿಸಿದ್ದರೆ ಯುದ್ಧವನ್ನು ತಪ್ಪಿಸಬಹುದಿತ್ತು ಎಂದು ಈಗಲೂ ಎಷ್ಟೋ ಜನ ಹೇಳುತ್ತಾರೆ. ತನ್ನ ತಂತ್ರವನ್ನು ಒಪ್ಪಲಿಲ್ಲವೆಂದು ರಾಜೀನಾಮೆ ಎಸೆದು ಸರ್ಕಾರದಿಂದ ದೂರ ಸರಿಯುವುದಕ್ಕೂ ತಾನು ಮಾಡಿದ್ದು ಸರಿ ಎಂದು ಅದಕ್ಕಾಗಿ ಸರ್ಕಾರಕ್ಕೆ ಕೇರೇ ಎನ್ನದೆ ಅದನ್ನು ಕೋರ್ಟಿಗೆಳೆಯುವುದಕ್ಕೂ ಎಷ್ಟು ವ್ಯತ್ಯಾಸಗಳನ್ನು ನಾವು ಗುರುತಿಸಬಹುದು?
ತನ್ನ ಕಾರ್ಯಾವಧಿಯ ಕೊನೆಯ ವರ್ಷದಲ್ಲಿ ಇಂತಹಾ ಅಗ್ನಿಪರೀಕ್ಷೆ ಜನರಲ್ ವಿ.ಕೆ ಸಿಂಗ್‍ಗೆ ಬೇಕಿತ್ತೇ ಎಂದು ಸಾಮಾನ್ಯವಾಗಿ ಅನಿಸುವುದು ಸಹಜ. ಆದರೆ ಸ್ವಲ್ಪವೂ ಕ್ರಮಬದ್ಧತೆಯಿಂದ ನಿರ್ವಹಿಸದ ಸರ್ಕಾರಿ ಕಚೇರಿಗಳಿಗೆ ಇದು ಮುಖದ ಮೇಲೆ ಹೊಡೆದ ಕಪಾಳಮೋಕ್ಷ. ರಕ್ಷಣಾ ಮಂತ್ರಾಲಯದ ಮುಂದೆ ಭೂ ಸೇನೆಯ ಸಮಸ್ಯೆಗಳು ಗುಡ್ಡಗಟ್ಟುತ್ತಿವೆ. ಜನರಲ್ ವಯಸ್ಸಿನ ಸಮಸ್ಯೆಯಿಂದ ಶುರುವಾಗಿ ಲಂಚದ ಕೇಸು, ಟ್ರಕ್ಕುಗಳಲ್ಲಿ ನಡೆದ ಭ್ರಷ್ಟಾಚಾರ, ಲೀಕಾದ ಪತ್ರ ಹೀಗೆ ವಿ.ಕೆ ಸಿಂಗ್ ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸುತ್ತಿದ್ದಾರೆ. ಈ ನಡುವೆ ತಮ್ಮ ಸ್ವಾರ್ಥಕ್ಕಾಗಿ ತಾವೇ ಪತ್ರವನ್ನು ಲೀಕ್ ಮಾಡಿದ್ದಾರೆ ಎಂದೂ ಹೇಳಲಾಗುತ್ತಿದೆ. ಇಳಿ ವಯಸ್ಸಿನ ಮಾನಸಿಕ ಸ್ಥಿತಿಗಳನ್ನು ನೋಡುವುದಾದರೆ ಅಲ್ಲಗಳೆಯಬಹುದಾದ ವಿಚಾರವೇನೂ ಅಲ್ಲ. ಆದರೂ ಮೊದಲು ಕಮಾಂಡೋ ಆಗಿದ್ದ ಜನರಲ್ ಹೀಗೆ ಮಾಡಬಹುದೇ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ವಿ.ಕೆ ಸಿಂಗ್ ಒಬ್ಬ ಹೋರಾಟಗಾರ. ನೇರವಾಗಿ ವಿಷಯಗಳನ್ನು ನಿಭಾಯಿಸುವ ನಿಷ್ಠುರ ವ್ಯಕ್ತಿ. ಅವರ ಮೇಲೆ ಆಪಾದನೆ ಹೊರಿಸುವ ಮೊದಲು ಮನಸ್ಸು ಕೂಡ ಎಲ್ಲೋ ಒಪ್ಪಲು ನಿರಾಕರಿಸುತ್ತದೆ.

ಮುಖ್ಯವಾಗಿ ಇದು ಎರಡೂ ಕಡೆಯಿಂದ ಆದ ತಪ್ಪು. ಇದರೆಲ್ಲದರಲ್ಲಿ ಸರ್ಕಾರದ ತಪ್ಪು ಎಷ್ಟಿದೆಯೋ ಅಷ್ಟು ಜನರಲ್‍ದೂ ಇದೆ. ವಯಸ್ಸಿನ ಸಮಸ್ಯೆಯನ್ನು ಯಾವಾಗಲೋ ಬಗೆಹರಿಸಬಹುದಿತ್ತು. ಲಂಚ ಕೊಡಲು ಆಮಿಷ ನೀಡಲಾಗಿದೆ ಎಂದಾಗ ಲಂಚದ ಆಮಿಷ ಒಡ್ಡಿದಾಗಲೇ ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬಹುದಿತ್ತು. ಹೊಸ ಟ್ರಕ್ ತೆಗೆದುಕೊಳ್ಳುವುದರಲ್ಲಿ ನಡೆದ ಭ್ರಷ್ಟಾಚಾರ ಜನರಲ್ ಕಣ್ಣು ತಪ್ಪಿ ಆದದ್ದಲ್ಲ. ಈ ಬಗ್ಗೆ ಜನರಲ್ ರಕ್ಷಣಾ ಮಂತ್ರಾಲಯಕ್ಕೆ ಮೊದಲೇ ಹೇಳಿದ್ದೇನೆ ಎಂದಿದ್ದಾರೆ. ಆದರೂ ಭೂ ಸೇನೆಯ ಉನ್ನತ ಅಧಿಕಾರಿಯಾಗಿ ಕ್ರಮ ಕೈಗೊಳ್ಳಬಹುದಿತ್ತು. ಆದರೆ ಎಲ್ಲವನ್ನೂ ಅದುಮಿಟ್ಟುಕೊಂಡು ಈಗ ಎಲ್ಲವನ್ನೂ ಒಂದೇ ಸಲ ಹೊರ ಹಾಕುವುದರ ಇಂಗಿತವಂತೂ ಅರ್ಥವಾಗುತ್ತಿಲ್ಲ. ಅದರ ಮೇಲೆ ಪರಿಸ್ಥಿತಿಯನ್ನು ಇನ್ನೂ ಹಾಳು ಮಾಡುವಂತೆ ಸೋರಿದ ಗೌಪ್ಯ ಪತ್ರ. ಒಂದು ನಿರ್ದಿಷ್ಟಾವಧಿಯಲ್ಲಿ ಸೇನೆಯ ಪ್ರತಿ ಮುಖಂಡರು ಪ್ರಧಾನಿಗೆ ಸದ್ಯದ ಪರಿಸ್ಥಿತಿಗಳ ಬಗ್ಗೆ ಪತ್ರವನ್ನು ಬರೆಯುತ್ತಾರೆ. ಈ ಪತ್ರ ಸೋರಿ ದೇಶದ ಭೂಸೇನೆಯ ಸದ್ಯದ ಪರಿಸ್ಥಿತಿಯನ್ನು ಬಯಲು ಮಾಡಿದ್ದು ದುರಂತ. ವಿದೇಶಿ ಸ್ಪೈಗಳಿಗೆ ಇದು ಗೊತ್ತಿರಬಹುದಾದ ವಿಷಯವೇ ಆದರೂ ಇದೆಲ್ಲಾ ಜನಸಾಮಾನ್ಯನಿಗೆ ಹೊಸದು. ಸೇನೆ ಎಂದರೆ ಎದೆಯುಬ್ಬಿಸುವ ನಮ್ಮ ಎದೆಗಳೆಲ್ಲ ಸಂಕುಚಿತವಾದದ್ದು ಸುಳ್ಳೇನಲ್ಲ. ಆದರೂ ಇದನ್ನು ಹಾಟ್ ಕೇಕಿನಂತೆ ಮಾಧ್ಯಮಗಳು ಹಂಚಿಕೊಂಡದ್ದೂ ಇನ್ನೊಂದು ಗಂಭೀರವಾದ ದುರಂತ. ಎಲ್ಲಿ ದೇಶದ ಸಮಗ್ರತೆಯನ್ನು ಕಾಪಾಡಬೇಕೋ ಅಲ್ಲಿ ವಿ.ಕೆ ಸಿಂಗ್‍ನ್ನು ಅಪರಾಧಿ ಎಂಬಂತೆ ಬಿಂಬಿಸುತ್ತಾ ಮತ್ತು ಸೋರಿದ ಪತ್ರದ ಮಾಹಿತಿಯನ್ನು ಬಹಿರಂಗ ಪಡಿಸುವ ಉದ್ದೇಶವಂತೂ ಅರ್ಥವಾಗುವ ಹಾಗಿಲ್ಲ.

ನಮ್ಮ ದೇಶದ ಅರಾಜಕತೆಯ ಇನ್ನೊಂದು ಮುಖ್ಯ ಅಂಶವೆಂದರೆ ನಾವು ನಮ್ಮ ಆದ್ಯತೆಗಳನ್ನು ಪಟ್ಟಿ ಮಾಡಿಕೊಳ್ಳುವುದರಲ್ಲಿ ಎಡವುತ್ತೇವೆ. ಲೋಕ್ ಪಾಲ್ ಮಸೂದೆಯಲ್ಲಿಯೂ ಅದರ ವಿಷಯಗಳನ್ನು ಬಿಟ್ಟು ಅದರಲ್ಲಿನ ಮೀಸಲಾತಿಯ ಬಗ್ಗೆ ಹೆಚ್ಚು ಚರ್ಚೆ ನಡೆದು ಅದು ಹಾಸ್ಯಾಸ್ಪದವಾದರೆ ಸದ್ಯದ ಪರಿಸ್ಥಿತಿಯಲ್ಲೂ ಪ್ರಧಾನಿಗೆ ಬರೆದ ಪತ್ರ ಲೀಕಾದ ಕುರಿತು ಹೆಚ್ಚು ಚರ್ಚೆ ನಡೆಯುತ್ತಿದೆ. ಒಂದು ರಹಸ್ಯವಾಗಿರಬೇಕಾದ ಪತ್ರ ಹೀಗೆ ಲೀಕಾಗುವುದರ ದೇಶದ ಭದ್ರತಾ ದೃಷ್ಟಿಯಿಂದ ಇದು ಅಪಾಯಕಾರಿಯಾದ ಸ್ಥಿತಿ ಹೌದು ಆದರೂ ಅದರ ಅಂಶಗಳ ಬಗ್ಗೆ ಯಾಕೆ ಗಮನ ಹರಿಸಬಾರದು. ಇನ್ನೂ ಎಲ್ಲೂ ಉಪಯೋಗಿಸದ ಬೋಫೋರ್ಸ್ ಹೊವಿಟ್ಝರುಗಳನ್ನು ನಾವಿನ್ನೂ ಬಳಸುತ್ತಿದ್ದೇವೆ. ನಮ್ಮಲ್ಲಿ ಅತ್ಯಾಧುನಿಕ ಆಯುಧಗಳಿಲ್ಲ. ಇದ್ದಕ್ಕಿದ್ದಂತೆ ಯಾರಾದರೂ ನಮ್ಮ ಮೇಲೆ ಧಾಳಿ ಮಾಡಿದರೆ ಅದನ್ನು ಸಕ್ಷಮವಾಗಿ ಎದುರಿಸುತ್ತೇವೆ ಎಂಬ ಕೆಚ್ಚಿದ್ದರೂ ತಯಾರಿಯಿಲ್ಲದೆ ಅದು ಸಾಧ್ಯವೂ ಇಲ್ಲ. ಈ ನಡುವೆ ಸುಧಾರಣೆಯ ಹೆಸರಿನಲ್ಲಿ, ನೈತಿಕತೆಯ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ಬರುವ ಪ್ರತಿ ವ್ಯಕ್ತಿಗಳೂ ರಾಜಕೀಯ ಪ್ರಭಾವಕ್ಕೊಳಗಾಗುತ್ತಾ ಜನರ ಕಣ್ಣುಗಳಲ್ಲಿ ಗೊಂದಲವನ್ನೂ ಭಯವನ್ನೂ ಜಿಗುಪ್ಸೆಯನ್ನೂ ಸೃಷ್ಟಿಸುತ್ತಾರೆ. ಎಲ್ಲವನ್ನೂ ಕಾಯ್ದುಕೊಂಡು ರಾಜಕೀಯ ಬಣ್ಣ ಹಚ್ಚುತ್ತಾ ಮೆರೆದಾಡುವ ಪಟ್ಟಭದ್ರ ಹಿತಾಸಕ್ತಿಗಳು ಕೊನೆಗೂ ಗೆಲ್ಲುತ್ತಾರೆ, ಇದಕ್ಕೆ ಅಣ್ಣಾ ಹಜಾರೆ ಮುಂದಾಳತ್ವದಲ್ಲಿ ನಡೆದ ಲೋಕ್ ಪಾಲ್ ಚಳುವಳಿಯೇ ಜ್ವಲಂತ ಉದಾಹರಣೆ. ಸದ್ಯದ ಪರಿಸ್ಥಿತಿಯಲ್ಲಿ ಜನರಲ್ ಖಳನಾಯಕನಂತೆ ಗೋಚರಿಸಿದರೂ ನಿರ್ಣಯಕ್ಕೆ ಬರುವ ಮುನ್ನ ನಾವೆಲ್ಲರೂ ಪುನಃ ಯೋಚಿಸಬೇಕಾಗಿದೆ. ತಿಮ್ಮಯ್ಯರಂತೆ ಜನರಲ್ ತಾವೂ ರಾಜೀನಾಮೆ ಎಸೆದರೆ ಅವರಿಗೆ ಗೌರವ ಸಿಗುತ್ತದೆಯೇ ಅಥವಾ ತಾವು ನಂಬಿದ ಮೌಲ್ಯಗಳ ಕುರಿತು ಹೋರಾಟ ಮಾಡುವುದರಿಂದ ಅವರು ಗೆಲ್ಲುತ್ತಾರೆಯೇ!

ಗೊಂದಲಗೂಡಿನಲ್ಲಿ ಪ್ರತಿಯೊಬ್ಬ ಮನುಷ್ಯನೂ ಇಬ್ಬಾಯಿಯವನಂತೆ ಕಂಡು ಪ್ರತಿ ಭ್ರಷ್ಟ ಮನಸ್ಸುಗಳ ನಡುವೆ ಹೋರಾಡುವ ಒಬ್ಬ ನೈತಿಕ ಹೋರಾಟಗಾರನೂ ಏನೋ ರಹಸ್ಯ ಉದ್ದೇಶವಿಟ್ಟುಕೊಂಡು ನಡೆಯುತ್ತಿರುವಂತೆ ಕಾಣುತ್ತದೆ. ಸತ್ಯ ಮಿಥ್ಯಗಳ ನಡುವೆ ಎರಡೂ ಕಡೆಯಲ್ಲಿ ಅಸ್ತಿತ್ವವನ್ನು ಕಂಡುಕೊಳ್ಳುವ ತುಡಿತದಲ್ಲಿ ನೈತಿಕತೆ, ಪ್ರಾಮಾಣಿಕತೆಗಳೆಲ್ಲವೂ ನಗೆಪಾಟಲಿಗೆ ಈಡಾಗುತ್ತವೆ. ನಮ್ಮ ಯೋಚನೆಗಳು ಯಾವ ಗೊಂದಲದ ಸ್ಥಿತಿಗೆ ಹೂಳಲ್ಪಟ್ಟಿವೆ ಎಂದರೆ ಸತ್ಯ ಮಿಥ್ಯಗಳ ವ್ಯತ್ಯಾಸವನ್ನು ಗುರುತಿಸಲಾರದ ಮಟ್ಟಿಗೆ ಬದಲಾಗಿದ್ದೇವೆ. ನಿಂಜಾ ಯುದ್ಧಗಳಲ್ಲಿ ಬರುವ ’ಗೆನ್ ಜುತ್ಸು’ ಎಂಬ ಪ್ರಕಾರವೊಂದಿದೆ. ವ್ಯಕ್ತಿಯನ್ನು ಭ್ರಮೆಗೆ ಸಿಲುಕಿಸಿ ಭ್ರಮೆಯಲ್ಲಿ ಅವನನ್ನು ಶಿಕ್ಷಿಸಿ ಅದೇ ಸ್ಥಿತಿಯಲ್ಲಿ ಉಳಿಸಿಕೊಳ್ಳುವ ಪ್ರಕಾರ. ನಾವೆಲ್ಲರೂ ಅದರ ಶಿಕಾರಿಗಳಾಗಿ ಬಿಟ್ಟಿದ್ದೇವೆ. ಇಲ್ಲಿ ಯಾರೋ ನಮ್ಮ ಯೋಚನೆಯನ್ನು ನಿಯಂತ್ರಿಸುತ್ತಾರೆ. ಯಾರೋ ನಮ್ಮ ಕಾರ್ಯವನ್ನು ನಿರ್ದೇಶಿಸುತ್ತಾರೆ. ಯಾರು ಸಿಕ್ಕರೂ ಅವಕಾಶಕ್ಕೆ ಕಾದವರಂತೆ ಬಟ್ಟೆಗೆ ಕೈ ಹಾಕುವ ಮಾಧ್ಯಮವೂ, ದೇಶ ಲೂಟಿಯಾಗಿ ಮುಳುಗಿ ಹೋದರೂ ಜನರ ಬಗ್ಗೆ ಕೇರೆನ್ನದ ಸರ್ಕಾರವೂ, ದೇಶವೇ ತನ್ನ ಕೈಯಲ್ಲಿ ಆಡುವ ಗೊಂಬೆಯಂತೆ ಎಂದು ಆಟವಾಡುವ ಬ್ಯೂರೋಕ್ರಸಿಯೂ, ಇದ್ದದರಲ್ಲಿ ಒಮ್ಮೆ ಆಚೆ ಒಮ್ಮೆ ಈಚೆ ಓಲಾಡಿ ತ್ರಿಶಂಕುಗಳಾಗುವ ನಾವುಗಳೂ.. ಎಲ್ಲಾ ಸುಳಿಗೆ ಸಿಕ್ಕ ತರಗೆಲೆಗಳಂತೆ ಆಗಿ ಬಿಟ್ಟಿದ್ದೇವೆ. ಇದರಲ್ಲಿ ಯಾರು ಯಾರನ್ನೋ ಯಾರು ಯಾರೋ ನಿಯಂತ್ರಿಸುತ್ತಾ ಪ್ರಜಾ ಪ್ರಭುತ್ವವೆಂಬ ವ್ಯವಸ್ಥೆ ಅಸ್ತಿತ್ವಕ್ಕಾಗಿ ಪರದಾಡದಿದ್ದರೆ ಸಾಕು!

1 ಟಿಪ್ಪಣಿ Post a comment
  1. ಜನ 17 2014

    great indian army. and soldeirs but govt. dnot support properly using weapons..

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments