ಮಂಕು ತಿಮ್ಮನ ಕಗ್ಗ – ರಸಧಾರೆ (೨೦)
– ರವಿ ತಿರುಮಲೈ
ಲೋಕಜೀವನ ಮಂಥನ
ಕಂಡ ದೈವಕ್ಕೆಲ್ಲ ಕೈಯ ಮುಗಿದೇನಹುದು? I
ಚಂಡಚತುರೋಪಾಯದಿಂದಲೇನಹುದು ? II
ತಂಡುಲದ ಹಿಡಿಯೊಂದು ತುಂಡುಬಟ್ಟೆಯದೊಂದು I
ಅಂಡಲೆತವಿದಕೇನೋ? – ಮಂಕುತಿಮ್ಮ II
ಚಂಡ= ಉಗ್ರ, ಚತುರೋಪಾಯ = ನಾಲ್ಕು ವಿಧವಾದ ಉಪಾಯಗಳು, ಮುಗಿದೇನಹುದು = ಮುಗಿದು ಏನು ಅಹುದು= ಮುಗಿದರೆ ಏನಾಗುತ್ತದೆ.
ತಂಡುಲ=ಅಕ್ಕಿ, ಅಂಡಲೆತ= ಸುಮ್ಮನೆ ಸುತ್ತಾಟ.
ಅಂದಿನ ಮತ್ತು ಇಂದಿನ ವಾಸ್ತವಿಕ ಚಿತ್ರಣವನ್ನು ನಮಗೆ ಗುಂಡಪ್ಪನವರು ಕೊಟ್ಟಿದ್ದಾರೆ ಈ ಕಗ್ಗದಲ್ಲಿ. ನಮ್ಮಲ್ಲಿ ಅನೇಕ ದೇವರುಗಳು. ಆ ದೇವರುಗಳ ಸಂಖ್ಯೆ ಎಷ್ಟಿದೆಯಂದರೆ ಎಣಿಸಲೂ ಸಾಧ್ಯವಿಲ್ಲ. ಒಂದುಕಡೆ ತಿರುಪತಿ ತಿಮ್ಮಪ್ಪನಾದರೆ, ಇನ್ನೊಂದು ಕಡೆ, ಬದರಿಯ ಬದರೀನಾಥ, ಒಂದುಕಡೆ ಮಧುರೆಯ ಮೀನಾಕ್ಷಿಯಾದರೆ, ಇನ್ನೊಂದುಕಡೆ ಕಾಶಿಯ ವಿಶಾಲಾಕ್ಷಿ, ಒಂದುಕಡೆ ಪೂರಿಯ ಜಗನ್ನಾಥನಾದರೆ ಇನ್ನೊಂದುಕಡೆ ತಿರುವನಂತಪುರದ ಅನಂತಪದ್ಮನಾಭ, ಒಂದುಕಡೆ ವಿನಾಯಕನಾದರೆ, ಇನ್ನೊಂದುಕಡೆ ಷಣ್ಮುಖ, ಹೀಗೇ ಬರೆಯುತ್ತಹೋದರೆ ಪಟ್ಟಿ ಬಹಳ ಉದ್ದ ಆದೀತು. ದೇಶ ಕಾಲ ಸಂಧರ್ಭಕ್ಕನುಗುಣವಾಗಿ ನಮಗೆ ನಾವು ಪೂಜಿಸುವ ದೇವತೆಗಳು ಬದಲಾಗುತ್ತ ಹೋಗುತ್ತಾರೆ. ಇದನ್ನೇ ಗುಂಡಪ್ಪನವರು “ಕಂಡ ದೈವಕ್ಕೆಲ್ಲ” ಎಂದಿರಬೇಕು.
ಆದರೆ ಇದು ಸರಿಯೇ ಅಲ್ಲವೇ ಎಂದು ಸ್ವಲ್ಪ ವಿಶ್ಲೇಷಿಸೋಣವೇ? ಭಾರತೀಯರಾದ ನಮಗೆ ಎಲ್ಲವೂ ದೈವವೇ? ಗಿಡ ಮರ ಬಳ್ಳಿ ನದಿ ಗುಡ್ಡ ಬೆಟ್ಟ, ಆಕಾಶ ಸೂರ್ಯ ಚಂದ್ರ ಎಲ್ಲ ಗ್ರಹಗಳು, ಪಕ್ಷಿ ಮೀನು ಪ್ರಾಣಿಗಳು ಎಲ್ಲವೂ ದೇವರೇ. ಅಷ್ಟೇ ಅಲ್ಲ ಎಲ್ಲದರಲ್ಲೂ ದೈವವನ್ನು ಕಾಣುವ ಸಂಸ್ಕೃತಿ ನಮ್ಮದು. ಅವುಗಳನ್ನೆಲ್ಲ ಕಾಪಾಡುವ ಕಾರಣದಿಂದ ಅವುಗಳಿಗೆಲ್ಲ ದೈವತ್ವವನ್ನು ಆರೋಪಿಸಿದ್ದಾರೆ ನಮ್ಮ ಪೂರ್ವಜರು. ಒಂದು ರೀತಿಯಲ್ಲಿ ಇದು ಒಳ್ಳೆಯದೇ ಅಲ್ಲವೇ ವಾಚಕರೆ? ಆದರೆ ವ್ಯಕ್ತಿ ಆಂತರ್ಯದಲ್ಲಿಬೆಳೆಯುತ್ತಾ ಹೋದಂತೆಲ್ಲ ಅನೇಕದಿಂದ ಏಕಕ್ಕೆ ಬರುವುದೇ ಅಧ್ಯಾತ್ಮಸಾಧನೆಯ ಗುರಿ. ಆಕಾರದಿಂದ ನಿರಾಕಾರಕ್ಕೆ ಬರುವುದೇ ಎಲ್ಲ ಸಾಧನೆಯ ಫಲ.
ಆದರೆ ನಾವು ಏಕೆ ಈ ದೈವಕ್ಕೆ ಕೈ ಮುಗಿಯುತ್ತೇವೆ? ಇದಕ್ಕೆ ನನ್ನ ಅರಿವಿನ ಪರಿಮಿತಿಯಲ್ಲಿ ವಿವರಿಸುತ್ತೇನೆ. ನಮಗೆ ಆಸೆಗಳುಂಟು. ಆಸೆಗಳು ನಾವು ಈ ಬದುಕಿಗೆ ಅಂಟಿಕೊಂಡಿರುವುದರಿಂದ ಉಂಟು. ಈ ಆಸೆಯ ಪಕ್ಕ ಪಕ್ಕದಲ್ಲೇ ಒಂದು ಭಯವೂ ಉಂಟು. ಮಾನವರಿಗೆ ಎರಡು ರೀತಿಯ ಭಯಗಳುಂಟು. ಒಂದು ತನ್ನಲ್ಲಿರುವ ವಸ್ತು, ವಿಷಯ ಅಥವಾ ವ್ಯಕ್ತಿ ಯನ್ನು ಕಳೆದುಕೊಳ್ಳುವ ಭಯ. ಎರಡು, ತಾನು ಆಸೆ ಪಟ್ಟ ವಸ್ತು, ವ್ಯಕ್ತಿ, ವಿಷಯಗಳು ಸಿಗದೆಹೋಗುವ ಭಯ. ಮಾನವನ ಎಲ್ಲ ಭಯಗಳನ್ನೂ ಈ ಎರಡು ಅಂದರೆ ಎರಡೇ ವಿಭಾಗಗಳಲ್ಲಿ ಸೇರಿಸಬಹುದು. ಮೂರನೆಯದು ನನಗೆ ಗೋಚರಿಸುತ್ತಿಲ್ಲ.
ಆದರೆ ಈ ಭಯ ಸಹಜವಾದದ್ದೇ. ಮನುಷ್ಯನಿಗೆ ತನ್ನ ಜೀವನದಲ್ಲಿ ತನಗೆ ಸಂಬಂಧಿಸಿದ ಎಲ್ಲ ವ್ಯಕ್ತಿ, ವಿಷಯ ಮತ್ತು ವಸ್ತುವಿನ ಮೇಲೆ ಮಮಕಾರವಿರುತ್ತದೆ. ಈ ಮಮಕಾರವೇ ಈ ಭಯಕ್ಕೆ ಕಾರಣ.
ಈ ವ್ಯಕ್ತಿ, ವಿಷಯ ಮತ್ತು ವಸ್ತುಗಳು ಹಲವಿಧದಲ್ಲಿ ಇರಬಹುದು, ತನ್ನವರು, ಅವರಿಗೆ ಸಂಬಂಧಿಸಿದ ವಿಷಯಗಳಾದ, ಆರೋಗ್ಯ, ವಿದ್ಯೆ, ಪರಸ್ಪರ ಸಂಬಂಧಗಳು ವಿವಾಹಕ್ಕೆ, ಪ್ರೇಮಕ್ಕೆ, ಉದ್ಯೋಗ, ಹಣಕಾಸು, ಹೀಗೆ ಹತ್ತು ಹಲವಾರು ವಿಷಯಗಳಿಗೆ ನಾವು ಅಂಟಿಕೊಂಡಿರುತ್ತೇವೆ. ಅವುಗಳಲ್ಲಿ ಇರುವುದು ಕಳೆದು ಹೋಗುವ ಭಯ ಅಥವಾ ಬಯಸಿದ್ದು ಆಗದೆ ಹೋಗಬಹುದಾದ ಭಯ. ಕಳೆದು ಹೋಗುವುದು ಏಕೆ? ಬಯಸಿದ್ದು ಆಗದೆ ಹೋಗುವುದು ಏಕೆ? ಎಂದು ಖಚಿತವಾಗಿ ನಮಗೆ ಅರಿಯದಾದಾಗ ಮತ್ತು ಸಂಶಯಗಳಿದ್ದಾಗ, ನಮಗರಿಯದ ಯಾವುದೋ ಶಕ್ತಿ ಅಥವಾ ನಮ್ಮನ್ನು ಕಾಯುವ ಯಾವುದೋ ಶಕ್ತಿಗೆ ನಾವು ಕೈಮುಗಿದು, ಬೇಡುವುದೋ ಅಥವಾ ಶರಣಾಗುವುದೋ ಮಾಡುತ್ತೇವೆ. ಅದನ್ನೇ ಗುಂಡಪ್ಪನವರು ” ಆ ವಿಚಿತ್ರಕೆ ಶರಣಾಗೋ ” ಎನ್ನುತ್ತಾರೆ.
ಭಾರತೀಯರಾದ ನಮಗೆ ಎಲ್ಲವೂ ದೇವರೇ ಆದ್ದರಿಂದ, ಇಷ್ಟೊಂದು ಬಗೆಬಗೆಯ ದೇವರುಗಳು ನಮ್ಮಲ್ಲಿ, ಹಣಕ್ಕೊಬ್ಬ, ಗುಣಕ್ಕೊಬ್ಬ, ವಿದ್ಯೆಗೊಬ್ಬ, ಆರೋಗ್ಯಕ್ಕೊಬ್ಬ, ಪಾಪನಾಶನಕ್ಕೊಬ್ಬ, ಪರಮಾರ್ಗಕ್ಕೊಬ್ಬ. ಮತ್ತು ಈ ದೇವತೆಗಳನ್ನು ಒಲಿಸಿಕೊಳ್ಳಲು ಹಲವಾರು ವಿಧಾನಗಳು. ದರ್ಶನ, ಅರ್ಚನೆ, ಅಭಿಷೇಕ, ದಾನ,ಧ್ಯಾನ, ಭಜನೆ, ಆನ್ನ ಸಂತರ್ಪಣೆ, ಸಮಾರಾಧನೆ, ಪರೋಪಕಾರದ ಕೆಲಸಗಳು, ಹೋಮ, ಹವನ, ಯಜ್ಞ, ಯಾಗಾದಿಗಳು, ಹೀಗೆ ನಮಗೆ ತೋಚಿದ್ದು, ಮತ್ತು ಪರರಿಂದ ಸೂಚಿಸಲ್ಪಟ್ಟ, ಸಾಮ, ದಾನ , ಬೇಧ, ದಂಡದಂತ ಚತುರೋಪಾಯಗಳನ್ನೂ ಉಪಯೋಗಿಸಿ, ನಮ್ಮ ಕಾರ್ಯ ಸಾಧನೆಗೆ ಆ ದೇವರನ್ನು ಸದಾಕಾಲ ಒಲಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಇದು ಒಂದು ಮಾನಸಿಕ ಸ್ವಯಂ ಚಿಕಿತ್ಸೆ. ನಮ್ಮ ಮನಸ್ಸುಗಳಲ್ಲಿ ಉದ್ಭವಿಸುವ ಹಲವಾರು ಪ್ರಶ್ನೆ ಮತ್ತು ಸಂದೇಹಗಳಿಗೆ ನಾವೇ ಕಂಡುಕೊಳ್ಳುವ ಸಮಾದಾನ.
ಇದು ಅಧ್ಯಾತ್ಮ ಪ್ರಯಾಣದ ಒಂದು ಸ್ತರ. ಅವರವರ ಮಟ್ಟಿಗೆ ಸರಿ. ಆದರೆ ಗುಂಡಪ್ಪನವರು ” ತಂಡುಲದ ಹಿಡಿಯೊಂದು ತುಂಡುಬಟ್ಟೆಯದೊಂದು” ಒಂದು ಹಿಡಿ ಅಕ್ಕಿಗಾಗಿ, ಹೊಟ್ಟೆ ತುಂಬಿಸಿಕೊಳ್ಳಲು,ಗೇಣುದ್ದ ಬಟ್ಟೆಗಾಗಿ, ಮೈಮುಚ್ಚಲು ಮನುಷ್ಯ ಇಷ್ಟೆಲ್ಲಾ ಮಾಡಬೇಕೆ, ಎಂಬ ಭಾವದಲ್ಲಿ ಒಂದು ವೈರಾಗ್ಯದ ವಿಷಯವನ್ನು ಪ್ರಸ್ತಾಪ ಮಾಡುತ್ತಾರೆ. ಆದರೆ ವೈರಾಗ್ಯವು ಅನುಭವದಿಂದ ಮಾತ್ರ ಬರಲು ಸಾಧ್ಯ. ಅಂತಹ ಅನುಭವನ್ನ್ನು ಕೊಡುವುದೇ ಜೀವನ. ಅಂತ ಅನುಭವಗಳನ್ನು ಪಡೆದು ಅನುಭವಿಸಿ, ಇಲ್ಲಿ ಯಾವುದರಿಂದಲೂ ಏನೂ ಆಗುವುದಿಲ್ಲ, ನಾನು ಇಲ್ಲಿನವನಲ್ಲ, ನನ್ನ ಮೂಲ ಬೇರೆ ಇದೆ, ” ಅಲ್ಲಿದೆ ನಮ್ಮ ಮನೆ. ನಾನೇಕೆ ಬಂದೆ ಸುಮ್ಮನೆ” ಎಂದು ಪುರಂದರದಾಸರು ಹೇಳುವಹಾಗೆ, ನಮಗೆ ಈ ಪ್ರಪಂಚದಿಂದ ಏನೂ ಆಗಬೇಕಾಗಿಲ್ಲವೆಂಬ “ನಿಜ” ವೈರಾಗ್ಯದ ಭಾವ ಮನದಲ್ಲಿ ಸ್ಥಿರವಾಗಿ ಮೂಡಿದರೆ…………….. ಆದರೆ ಕೆಲವರು ಹೀಗೂ ಯೋಚನೆ ಮಾಡುತ್ತಾರೆ, ಆ ವೈರಾಗ್ಯ ಬೇಕೆ? ಈ ಜೀವನದಾಚಿನದು ಏನೋ ಗೊತ್ತಿಲ್ಲ. ಗೊತ್ತಿಲ್ಲದ ವಿಷಯದಲ್ಲಿ ಆಸಕ್ತಿ ತೋರಿ, ಇರುವುದನ್ನು ಬಿಡುವುದು ಸರಿಯಲ್ಲ. ಬದುಕಿರುವ ತನಕ ಬದುಕನ್ನು ಅನುಭವಿಸಿ ಬದುಕಬೇಕು, ಎನ್ನುತ್ತಾರೆ.
ಏನಾದರಾಗಲಿ ಒಂದು ಕಡೆ ಈ ಜಗತ್ತು ಮತ್ತು ಸಂಸಾರದಲ್ಲಿ ರಕ್ತಿ ಇನ್ನೊಂದುಕಡೆ ವಿರಕ್ತಿ. ಯಾವುದು ಬೇಕೋ ಅದನ್ನು ಆಯ್ದುಕೊಳ್ಳಲು ಎಲ್ಲರಿಗೂ ಸಂಪೂರ್ಣ ಸ್ವಾತಂತ್ರ್ಯ. ನಮ್ಮ ನಮ್ಮ ವಿಚಾರಗಳು ನಮಗೆ ಸಂತೋಷ ನೀಡಬೇಕು ಅಷ್ಟೇ.
ಇವುಗಳನ್ನೇ ಚಿಂತಿಸುತ್ತಾ ವಿಚಾರಮಾಡುತ್ತಾ ನಾವು ಮುಂದಿನ ಕಗ್ಗಕ್ಕೆ ಹೋಗೋಣ.
ಇಂದಿನ ದಿನ ನಿಮಗೆಲ್ಲರಿಗೂ ಶುಭವಾಗಲಿ.
ನಮಸ್ಕಾರ
******************************************************
ಭಟ್ಟಿ ಇಳಿಸುವಿಕೆ ಬಹಳ ಚನ್ನಾಗಿ ನಡೆಯುತ್ತಿದೆ.
copy – paste ಮಾಡಲೇ ಬೇಕು ಅಂತ ಇದ್ರೆ, ದಯವಿಟ್ಟು ಎಲ್ಲಿಂದ copy ಮಾಡಿದೀರಿ ಅನ್ದನ್ನಡ್ರೋ ಹೇಳಿ.
ಮೂಲ ಇಲ್ಲಿದೆ :
https://kaggarasadhaare.wordpress.com/category/%E0%B2%AE%E0%B2%82%E0%B2%95%E0%B3%81%E0%B2%A4%E0%B2%BF%E0%B2%AE%E0%B3%8D%E0%B2%AE%E0%B2%A8-%E0%B2%95%E0%B2%97%E0%B3%8D%E0%B2%97-%E0%B2%B0%E0%B2%B8%E0%B2%A7%E0%B2%BE%E0%B2%B0%E0%B3%86/page/259/