ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 6, 2012

ಮಂಕು ತಿಮ್ಮನ ಕಗ್ಗ – ರಸಧಾರೆ (೨೧)

‍ನಿಲುಮೆ ಮೂಲಕ

– ರವಿ ತಿರುಮಲೈ

ಲೋಕಜೀವನ ಮಂಥನ

ಹೊನ್ನೆಂದು ಜಗದಿ ನೀಂ ಕೈಗೆ ಕೊಂಡದನು ವಿಧಿ
ಮಣ್ಣೆನುವನ್, ಅವನವರ ಮಣ್ಣೆನುವೆ ನೀನು
ಬಿನ್ನವಿಂತಿರೆ ವಸ್ತು ಮೌಲ್ಯಗಳ ಗಣನೆಯೀ
ಪಣ್ಯಕ್ಕೆ ಗತಿಯನ್ತೋ? – ಮಂಕುತಿಮ್ಮ

ಹೊನ್ನು ಎಂದು ಜಗದಿ ನೀ೦  ಕೈಗೆ ಕೊಂಡದನು ವಿಧಿ ಮಣ್ಣೆನುವನು, ಅವನ ವರ ಮಣ್ಣೆನುವೆ ನೀನು
ಭಿನ್ನವು ಇಂತಿರೆ ವಸ್ತು ಮೌಲ್ಯಗಳ ಗಣನೆಯು ಈ ಪಣ್ಯಕ್ಕೆ ಗತಿಯೇನೋ ಮಂಕುತಿಮ್ಮ

ಹೊನ್ನು= ಚಿನ್ನ, ಜಗದಿ=ಜಗತ್ತಿನಲ್ಲಿ, ಭಿನ್ನ=ವ್ಯತ್ಯಾಸ, ಪಣ್ಯ= ವ್ಯಾಪಾರ.

ಯಾವುದನ್ನು ನೀನು ಚಿನ್ನ ಎಂದು ಕೈಗೆ ಎತ್ತಿಕೊಳ್ಳುತೀಯೋ, ಅದು ವಾಸ್ತವದಲ್ಲಿ ಚಿನ್ನವಾಗಿರದೆ, ಮಣ್ಣಂತೆ ನಿಷ್ಪ್ರಯೋಜಕವಾಗುತ್ತದೆ. ಆದರೆ ಕೆಲವು ಬಾರಿ ಬಯಸದೆ ಸಂದ ಭಾಗ್ಯವನ್ನು, ಆ ಪರಮಾತ್ಮನ  ಕರುಣೆಯಿಂದ ವರ ರೂಪದಲ್ಲಿ ಸಂದದ್ದು ನಿನಗೆ ನಿಷ್ಪ್ರಯೋಜಕವಾಗಿ ಕಾಣುತ್ತದೆ. ಹೀಗೆ ವಸ್ತುಗಳ ನಿಜರೂಪ ಗುರುತಿಸುವುದರಲ್ಲಿ ನಮಗೆ ವ್ಯತ್ಯಾಸವಾದರೆ ಈ ಜಗತ್ತಿನ ವ್ಯಾಪಾರ ನಡೆಯುವುದು ಹೇಗೆ ಎಂದು ಪ್ರಶ್ನಿಸುತ್ತಾರೆ ಮಾನ್ಯ ಗುಂಡಪ್ಪನವರು.

ನಮ್ಮ ಜೀವನಗಳಲ್ಲಿ ಇದು ಬಹಳ ಸತ್ಯವಾದ ಮಾತು. ನಮಗೆ ವಸ್ತುಗಳು ಬೇಕು. ವ್ಯಕ್ತಿಗಳು ಬೇಕು, ವಿಷಯಗಳು ಬೇಕು. ಆದರೆ ಆ ವಸ್ತು, ವ್ಯಕ್ತಿ, ವಿಷಯಗಳು ನಮಗೆ ಒಳಿತೋ ಇಲ್ಲವೋ ನಮಗೆ ಗೊತ್ತಿಲ್ಲ. ಎಷ್ಟೋಬಾರಿ ನಾವು ಇಷ್ಟಪಟ್ಟು ಆಯ್ದುಕೊಂಡದ್ದು  ನಮಗೆ ತೊಂದರೆಗಳಿಗೆ, ಮಾನಸಿಕ ಹಿಂಸೆಗೆ, ಕಾರಣವಾಗಬಹುದು. ಹೀಗೆ ಆಗಲಿಕ್ಕೆ ಕಾರಣವೇನು ಎಂದರೆ, ಅದಕ್ಕೆ “ವಿಧಿ”ಯನ್ನು ಕಾರಣರಾಗಿಸುತ್ತಾರೆ ಶ್ರೀ ಗುಂಡಪ್ಪನವರು. ಆದರೆ ಅದು ಹೀಗೂ ಇರಬಹುದು.  ನಾವು ಒಂದು

ವಸ್ತು, ವ್ಯಕ್ತಿ, ವಿಷಯವನ್ನು ಬೇಕು ಎಂದುಕೊಳ್ಳುವುದೇ ತಪ್ಪಿರಬಹುದು. ಅಥವಾ ನಮ್ಮ ಆಯ್ಕೆಯೇ ತಪ್ಪಾಗಿರಬಹುದು. ಹೊರನೋಟಕ್ಕೆ ಆ  ವಸ್ತು, ವ್ಯಕ್ತಿ, ವಿಷಯಗಳು ನಮಗೆ ಹಿತವಾಗಿಯೋ, ಸವಿಯಾಗಿಯೋ ಕಂಡರೂ ನಮ್ಮ ದೈಹಿಕ ಮತ್ತು ಮಾನಸಿಕ ಪ್ರಕೃತಿಗೆ ವಿರುದ್ಧವಾಗಿರಬಹುದು ಹಾಗಾಗಿ  ದೋಷ ನಮ್ಮ ಆಯ್ಕೆಯಲ್ಲಿದೆಯೇ ಹೊರತು ಆ ವಸ್ತು, ವ್ಯಕ್ತಿ, ವಿಷಯದಲ್ಲಿ ಇಲ್ಲ ಅಲ್ಲವೇ?. ಹಾಗಾದಾಗ “ಹೊನ್ನೆಂದು”  ನಾವು ವಸ್ತು, ವ್ಯಕ್ತಿ, ವಿಷಯಗಳನ್ನು ಆಯ್ಕೆಮಾಡಿದಾಗ, ಅದು ನಮಗೆ ಹಿತವಾಗಿಲ್ಲದೆ ನಿಶ್ಪ್ರಯೋಜಕವಾಗುವುದು ಎಂಬುದು ಇಲ್ಲಿನ ಅಂತರ್ಯ.

ಇನ್ನು ನಾವು ಬಯಸದೆ ಬಂದ, ಸಂದ ಮತ್ತು ಪಡೆದುಕೊಂಡ ವಸ್ತು, ವ್ಯಕ್ತಿ, ವಿಷಯಗಳು ನಮಗರಿವಿಲ್ಲದಂತೆಯೇ ನಮಗೆ ಹಿತವನ್ನು ಮಾಡುತ್ತಿರಬಹುದು.  ಇದರ ಅನುಭವ ನಮಗೆ ಬಹಳ ಬಾರಿ ಆಗಿರುತ್ತದೆ. ಆದರೆ ಅದು ನಾವು ಇಷ್ಟಪಟ್ಟು ಪಡೆದುಕೊಂಡಿಲ್ಲವಾದ್ದರಿಂದ ನಮಗೆ ಅದರ ಮಹತ್ವ ಅರ್ಥವಾಗುವುದಿಲ್ಲ. ” ಅವನದೇ ಕಣಪ್ಪ ಅದೃಷ್ಟ. ಹಿಂಗೆ ಅಂದ್ಕೊಂಡೆ ಇರ್ಲಿಲ್ಲ ಕಣಯ್ಯಾ. ಎಂಥ ಚಾನ್ಸು ನೋಡು” ಇಂತಹ ಮಾತುಗಳನ್ನು ನಾವು ಎಷ್ಟೋಬಾರಿ ಕೇಳಿರುತ್ತೇವೆ. ಅದೇ “ಅವನವರ” ಎಂದು ಶ್ರೀ ಗುಂಡಪ್ಪನವರು ಹೇಳುತ್ತಾರೆ.

ಹಾಗಾದರೆ ನಾವು ಇಷ್ಟಪಟ್ಟದ್ದೆಲ್ಲ  ಹಾಗೆ ಆಗುವುದೇ? ಎಂದರೆ ಇಲ್ಲ. ಎಲ್ಲ ಹಾಗಾಗುವುದಿಲ್ಲ. ಆದರೆ ಹೆಚ್ಚಿನ ಮಟ್ಟಿಗೆ ಹಾಗಾಗುತ್ತದೆ. ಮೇಲ್ನೋಟಕ್ಕೆ ಎಲ್ಲ ಸರಿಯಾಗಿದೆ ಎಂದು ನಾವು ಕಂಡರೂ , ಪ್ರತಿವ್ಯಕ್ತಿಯೂ, ತಾನು ಬಯಸಿದ್ದು, ತಾನು ಪಡೆದಿದ್ದು, ಅದರಿಂದ ತಾನು ಅನುಭವಿಸುವ ಕಷ್ಟ, ಸಂಕಟ, ಜಿಗುಪ್ಸೆ, ಇವುಗಳನ್ನು ತೋರ್ಪಡಿಸದೆ,  ಅಂತರ್ಯದಲ್ಲಿಅನುಭವಿಸುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಏಕೆಂದರೆ ನಾವು ನೀವು ಎಲ್ಲರೂ ಇದನ್ನು ಅನುಭವಿಸಿಯೇ ಇರುತ್ತೇವೆ. ಹಾಗಾದರೆ ನಾವು ಬಯಸುವುದೇ ಬೇಡವೇ ಎಂದು ವಿಚಾರಮಾಡಿದರೆ ನಮಗೆ ಸಿಗುವ ಉದಾಹರಣೆ ಹೇಗಿದೆ.

ಒಂದು ತಾಯಿ, ತನ್ನ ಮಗುವಿಗೆ ಏನು ಬೇಕು, ಯಾವುದು ಒಳ್ಳೆಯದು, ಯಾವುದರಿಂದ ಆ ಮಗುವಿಗೆ ಹಿತ ಆರೋಗ್ಯಕರ  ಎಂದೆಲ್ಲ ಅರಿತು ಸರಿಯಾದ ಸಮಯಕ್ಕೆ ಕೊಡುತ್ತಾಳೆ. ಆದರೆ ಆ ಮಗುವಿಗೆ ಅದು ಅರ್ಥವಾಗದೆ ಕಂಡ ಕಂಡದ್ದಕ್ಕೆಲ್ಲ ರಚ್ಚೆ ಮಾಡಿ, ಹಠಮಾಡುತ್ತದೆ. ನಮ್ಮ ಪರಿಸ್ಥಿತಿಯೂ  ಹಾಗೆ ಇದೆ. ನಮಗೆಲ್ಲರಿಗೆ ತಾಯಿಸ್ಥಾನದಲ್ಲಿರುವ ಆ ಪರಮಾತ್ಮ ನಮಗೆ ವಿಧಿ ಪ್ರಕಾರ, ಏನು, ಎಷ್ಟು, ಯಾವಾಗ, ಯಾರ ಮೂಲಕ, ನಮಗೆ ಹಿತವಾದದ್ದನ್ನು ಕೊಡಿಸಬೇಕೋ ಕೊಡಿಸುತ್ತಾನೆ.

ಅದ್ದನ್ನರಿಯದೆ ನಾವು ನಾವು ಬಯಸಿದ ವಸ್ತು ಸಿಗದೇ ಹೋದರೆ, ” ಅಯ್ಯೋ ದೇವರೇ ನನಗೇ ಯಾಕೆ ಹೀಗೆ” ಎಂದು ಆ ದೇವರನ್ನು ಬಯ್ಯುತ್ತ, ನಮ್ಮ ” ಹಣೆಬರಹಾನೆ ಇಷ್ಟು’ ಎಂದು  ನಮ್ಮನ್ನು ನಾವೇ ಹಳಿದುಕೊಳ್ಳುತ್ತಾ ಬದುಕುತ್ತೀವಿ.

ನೋಡಿ ಒಂದು ವಿಷಯ. ಒಂದು ನೆಮ್ಮದಿಯ ವಿಷಯ. ಆ ಪರಮಾತ್ಮನ ಉಕ್ತಿ” ನೀನು ನನಗೆ ಶರಣಾಗು. ನಾನು ನಿನ್ನ ಯೋಗಕ್ಷೇಮವನ್ನು ನೋಡಿಕೊಳ್ಳುತ್ತೇನೆ.” ಎಂದು ಹೇಳಿರುವಾಗ ಮತ್ತೇನು. ಮತ್ತೆ” ನೀ ಏನೂ ಕೇಳಬೇಡ, ಹಾಗೆ ನೀ ಏನು

ಕೇಳಿದರೂ ಕೊಡುವೆ.ಆದರೆ ನೀ ಹಾಗೆ ಕೇಳಿ ಪಡೆದುಕೊಂಡ ವಸ್ತುವಿನಿಂದ ಬರುವ ಎಲ್ಲ ನೋವು, ಸಂಕಟ, ಕಷ್ಟ, ಕಾರ್ಪಣ್ಯಗಳನ್ನೆಲ್ಲ ನೀನೇ ಅನುಭವಿಸಬೇಕು. ಆದರೆ ನೀ ನನ್ನನು ಏನೂ ಕೇಳದಿದ್ದರೆ, ನಿನಗೇನೂ ಸೂಕ್ತವೋ ,ಹಿತವೋ, ಅದನ್ನು

ನಾನೇ ನಿನಗೆ ಸರಿಯಾದ ಸಮಯಕ್ಕೆ ಕೊಡುವೆ. ಆಯ್ಕೆನಿನ್ನದು” ಎಂದಾಗ. ಮತ್ತೇಕೆ  ನಾವು ಕೇಳಬೇಕು?. ಹಾಗೆ ಕೇಳಬೇಕೆಂದರೆ ಆ ಪರಮಾತ್ಮನನ್ನೇ ” ನನ್ನ ಮನಸ್ಸಿಗೆ ನಿರಂತರವಾಗಿ ಬಾ” ಎಂದು ಕೇಳಬೇಕು, ಅಲ್ಲವೆ ವಾಚಕರೆ? .

ಇನ್ನು ಹೀಗೆ ನಮಗೆ ಬೇಡದ ಹಿತವಲ್ಲದ  ವಸ್ತು, ವ್ಯಕ್ತಿ, ವಿಷಯಗಳನ್ನು ಬಯಸಿ ಅದರಿಂದ ಪಡಬಾರದ ಕಷ್ಟಗಳನ್ನು ಪಡುವಾಗ, ಆ ವಿಧಿಯಿಂದ ಸಿಕ್ಕ ವಸ್ತುಗಳ ಬೆಲೆ ನಾವು ಅರಿಯದಾದಾಗ ಇಲ್ಲಿ ಜಗದ್ವ್ಯಾಪಾರದಲ್ಲಿ ವ್ಯತ್ಯಯ ಉಂಟಾಗದೇ

ಇನ್ನೇನು ಎನ್ನುವ ಅರ್ಥದಲ್ಲಿ ” ಬಿನ್ನವಿಂತಿರೆ ವಸ್ತು ಮೌಲ್ಯಗಳ ಗಣನೆಯೀ ಪಣ್ಯಕ್ಕೆ ಗತಿಯನ್ತೋ ” ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.

ಹಾಗಾಗಿ ವಾಚಕರೆ, ತಾಯಿ ಸ್ವರೂಪದ  ಆ ಪರಮಾತ್ಮನಲ್ಲಿ ಶರಣಾಗಿ ನಮ್ಮ ಆಸೆ ಆಕಾಂಕ್ಷೆಗಳನ್ನು ತೀರಿಸಿಕೊಳ್ಳಲು, ನಮ್ಮ ಆಯ್ಕೆಯ ಮೇಲೆ ಅಧಾರಪಡದೆ, ಎಲ್ಲವನ್ನೂ ಆ ಪರಮಾತ್ಮನಿಗೆ ಅರ್ಪಿಸಿ, ನಮಗೆ ಸಿಕ್ಕ ಕೆಲಸವನ್ನು ನಿಷ್ಠೆಯಿಂದ ಮಾಡಿಕೊಂಡುಹೋದರೆ, ನಮಗೇನು ಹಿತವೋ ಅದನ್ನು ಆ ಪರಮಾತ್ಮ ನೀಡುತ್ತಾನೆ, ಅದೇ ನನಗೆ ಹಿತ ಎಂದು ಅರಿತರೆ, ನಮಗೆ ಹಿತ. ಒಟ್ಟಾರೆ ಹೇಳುವುದಾದರೆ, ” ಅಹಂಕಾರ ” ಬಿಟ್ಟರೆ ಹಿತ ಎನ್ನುವ ಅರ್ಥದಲ್ಲಿದೆ ಈ ಕಗ್ಗದ ಅಂತರ್ಯ.

ಇವುಗಳನ್ನೇ ಚಿಂತಿಸುತ್ತಾ ವಿಚಾರಮಾಡುತ್ತಾ ನಾವು ಮುಂದಿನ ಕಗ್ಗಕ್ಕೆ ಹೋಗೋಣ.
ಇಂದಿನ ದಿನ ನಿಮಗೆಲ್ಲರಿಗೂ ಶುಭವಾಗಲಿ.
ನಮಸ್ಕಾರ

********************************************************

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments