ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 7, 2012

ಮಂಕು ತಿಮ್ಮನ ಕಗ್ಗ – ರಸಧಾರೆ (೨೨)

‍ನಿಲುಮೆ ಮೂಲಕ

– ರವಿ ತಿರುಮಲೈ

ಲೋಕಜೀವನ ಮಂಥನ

ಕೃತ್ರಿಮವೋ ಜಗವೆಲ್ಲ I  ಸತ್ಯತೆಯದೆಲ್ಲಿಹುದೋ?
ಕರ್ತೃವೆನಿಸಿದನೆ ತಾಂ ಗುಪ್ತನಾಗಿಹನು
ಚತ್ರವೀ ಜಗವಿದರೋಳಾರ ಗುಣವೆಂತಹುದೋ
ಯಾತ್ರಿಕನೆ, ಜಾಗರಿರೋ – ಮಂಕುತಿಮ್ಮ

ಕೃತ್ರಿಮ  =ಡಾ೦ಬಿಕತೆ, ನಾಟಕ, ಬೂಟಾಟಿಕೆ. ಕರ್ತೃವು = ಜಗತ್ತನ್ನು ಸೃಷ್ಟಿಮಾಡಿದ ಶಕ್ತಿ. ಗುಪ್ತ= ಅವ್ಯಕ್ತನಾಗಿ, ಅಮೂರ್ತನಾಗಿ, ಕಣ್ಣಿಗೆ ಕಾಣದೆ. ಯಾತ್ರಿಕ  = ಪಯಣಿಗ. ಜಾಗರಿರು- ಜಾಗ್ರತೆಯಾಗಿರು.

ಕ್ರುತ್ರಿಮವು  ಜಗವೆಲ್ಲ ಸತ್ಯತೆಯು ಎಲ್ಲಿಹುದೋ ? ಕರ್ತೃವೆನಿಸಿದವನು ತಾಂ ಗುಪ್ತನಾಗಿಹನು
ಚತ್ರವೀ ಜಗವಿದು ಇದರೊಳು ಯಾರ ಗುಣವೆಂತಹುದೋ ಯಾತ್ರಿಕನೆ ಜಾಗರಿರೊ ಮಂಕುತಿಮ್ಮ

ಹಿಂದಿನ ಐದು ಕಗ್ಗಗಳಲ್ಲಿ ವೇದಾಂತದ ಹಲವು ವಿಚಾರಗಳನ್ನು ನಮಗೆ ಅರುಹುತ್ತಾ, ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು, ಈ ಜಗತ್ತಿನ ಪ್ರಸ್ತಾಪ ಮಾಡುತ್ತಾರೆ. ಈ ಜಗತ್ತು ಕೃತ್ರಿಮವೆನ್ನುತ್ತಾರೆ. ಇದನ್ನು ಕೇವಲ ಮಾನವರಜಗತ್ತಿಗೆ ಅನ್ವಯಿಸಿಕೊಳ್ಳಬೇಕು. ಏಕೆಂದರೆ, ಗಿಡ, ಮರ, ಪಶು ಪಕ್ಷಿ ಮತ್ತು ಅನ್ಯ ಜೀವಿಗಳಲ್ಲಿ ಇಂದಿಗೂ ಕೃತ್ರಿಮತೆ ನಾವು ಕಾಣುವುದಿಲ್ಲ. ಈ ಕೃತ್ರಿಮತೆ ಏನಿದ್ದರೂ ಕೇವಲ ಮಾನವರಿಗೆ ಅನ್ವಯಿಸುತ್ತದೆ. “ಏಕೆ ಹೀಗೆ? ಮಾನವರಲ್ಲಿ ಮಾತ್ರ ಏಕೆ? ಮಾನವರು ಮೊದಲಿನಿಂದಲೂ ಹೀಗೇ ಇದ್ದಾರೆಯೇ ಅಥವಾ ಈ ಕೃತ್ರಿಮತೆ ಕಾಲಕ್ರಮೇಣ ಜನಮಾನಸದಲ್ಲಿ ಹೊಕ್ಕಿದೆಯೇ?” ಎಂಬುದನ್ನು ಯೋಚಿಸಿದಾಗ ನಮಗೆ ಕಾಣುವುದು ಹೀಗೆ . ಮಾನವಮೊದಲಿನಿಂದಲೂ ಕೃತ್ರಿಮನಲ್ಲ. ಪ್ರಕೃತಿಯ ಮಗುವಾಗಿ ಪ್ರಕೃತಿಯಲ್ಲಿ ಒಂದಾಗಿ ಅಲ್ಲೇ ಜೀವಿಸುತ್ತಿದ್ದ. ಅವನೂ ಸಹ ಮಿಕ್ಕೆಲ್ಲ ಪ್ರಾಣಿಗಳಂತೆ, ತನ್ನ ಆಹಾರ ಹುಡುಕುವುದು, ತನ್ನನ್ನು ತಾನು ರಕ್ಷಿಸಿಕೊಳ್ಳುವುದು ಮತ್ತು ತನ್ನ ಸಂತತಿಯನ್ನು ಬೆಳೆಸುವುದು, ಇಷ್ಟಕ್ಕೆ  ತನ್ನ ಚಟುವಟಿಕೆಗಳನ್ನು ಮಿತಗೊಳಿಸಿಕೊಂಡಿದ್ದ. ಮಾನವ ಕಾಲಕ್ರಮೇಣ ಸಂಗ ಜೀವಿಯಾದ. ಅಲೆಮಾರಿಯಾಗಿದ್ದ ಅವನು ಒಂದು ಕಡೆ ನೆಲೆನಿಲ್ಲಲು ಆರಂಭಿಸಿದ ದಿನದಿಂದ ಅಲ್ಪ ಅಲ್ಪವಾಗಿ ಇವನಲ್ಲಿ ಇದು ತನ್ನದು, ಇದು ತನಗೆ, ಇವರು ತನ್ನವರು ಎಂಬ ಮಮಕಾರದ ಭಾವಗಳು ಬಂದವು.  ಮುಕ್ತನಾಗಿದ್ದ ಮನುಷ್ಯ ತನ್ನ ಸುತ್ತ ಒಂದು ವೃತ್ತವನ್ನು ಎಳೆದುಕೊಂಡ. ಆ ವೃತ್ತದಲ್ಲಿ ಇರುವುದೆಲ್ಲ ತನ್ನದು ಎನ್ನುವ ಮಮಕಾರವನ್ನು ಬೆಳೆಸಿಕೊಂಡ. ಕ್ರಮೇಣ ಅವನ ಪರಿವಾರ ಬೆಳೆದಂತೆ, ಆ ವೃತ್ತವನ್ನೂ ದೊಡ್ದದಾಗಿಸುವ ಪ್ರಯತ್ನ. ಹೀಗೇ ಅವನಿಗೆ ವಸ್ತು ಸಂಚಯನ ಅಭ್ಯಾಸವಾಗಿಹೋಯಿತು. ಇಷ್ಟಿದ್ದರೆ ಇನ್ನಷ್ಟರಾಸೆ. . ” ಕಡಿಮೆ ಸಂಪನ್ಮೂಲಗಳಿಗೆ ಅಧಿಕ ಬೇಡಿಕೆಯಾದರೆ, ಪೈಪೋಟಿ ಬೆಳೆಯುತ್ತದೆ” ಎನ್ನುವುದು ಅರ್ಥಶಾಸ್ತ್ರದ ಸಿದ್ಧಾಂತ. ಆ ಸಿದ್ಧಾಂತದ ಪ್ರಕಾರ, ಮನುಷ್ಯ ಮನುಷ್ಯನ ಮಧ್ಯೆ ತೀವ್ರ ಪೈಪೋಟಿ. ಎಲ್ಲ ವಿಷಯದಲ್ಲೂ. ಅಲ್ಲಿ ಎಲ್ಲರೂ,  ಎಂದಿಗೂ ಮುಂಚೂಣಿಯಲ್ಲಿ ನಿಲ್ಲಲು ಸುಳ್ಳು, ಮೋಸ, ದಗಾ, ಎಲ್ಲವನ್ನೂ ತನ್ನ ಮನೋಭಾವದಲ್ಲಿ ಅಳವಡಿಸಿಕೊಂಡ. ಯಾರು ಹೆಚ್ಚು ಸುಳ್ಳನ್ನು, ಹೆಚ್ಚು ಸಮರ್ಪಕವಾಗಿ, ಸುಳ್ಳರೆಂದು ಬಯಲಾಗದೆ, ಹೆಚ್ಚು ಸಮಯಕ್ಕೆ ಹೇಳಬಲ್ಲವರೋ ಅವರೇ ಈ ಪೈಪೋಟಿಯಲ್ಲಿ ಗೆಲ್ಲುತ್ತಾ ಬಂದರು. ಗೆಲುವಿಗೆ
ಇದು ಒಂದು ಸೂಕ್ತ ಮಾರ್ಗವೆಂದು ಮನಗಂಡು ಅದನ್ನೇ ಅಭ್ಯಾಸಮಾಡಿ, ತಮ್ಮ ಸ್ವಾಭಾವವಾಗಿಸಿಕೊಂಡರು. ” ರುಚ” ವೆಂದರೆ ಮನದೊಳಗಿನ ಭಾವ. “ಸತ್ಯ” ವೆಂದರೆ ಆ ಮನದೊಳಗಿನ ಆ ಭಾವ ಹಾಗೇ, ಬದಲಾಗದೆ,  ವ್ಯಕ್ತವಾದರೆ ಅದು ಸತ್ಯ. ಆದರೆ ಇಂದು ರುಚದಲ್ಲೂ ಕುಟಿಲತೆ, ಸತ್ಯದಲ್ಲೂ ಕುಟಿಲತೆ. ಇದನ್ನೇ ಮಾನ್ಯ ಗುಂಡಪ್ಪನವರು ” ಕೃತ್ರಿಮವು ಜಗವೆಲ್ಲ ಸತ್ಯತೆಯೆದಲ್ಲಿಹುದೋ ”  ಎಂದರು

ಆದರೆ ಇವುಗಳನ್ನೆಲ್ಲ ಮತ್ತು ಎಲ್ಲ ಪ್ರಾಣಿಗಳನ್ನು ಸೃಷ್ಟಿಸಿದ ಆ ಸೃಷ್ಟಿಕರ್ತನೂ ಎಲ್ಲೋ ಗುಹ್ಯನಾಗಿಬಿಟ್ಟಿದ್ದಾನೆ ಎನ್ನುತ್ತಾರೆ, ಶ್ರೀ ಡಿ ವಿ. ಜಿ. ಅಂದರೆ ಮನುಷ್ಯರ ಮನಸ್ಸುಗಳಲ್ಲಿ ಆ ದೈವ ಭಕ್ತಿ, ಪರಮಾತ್ಮ ಸೃಷ್ಟಿಯಾದ ಈ ಜಗತ್ತನ್ನು ಪೂಜಾಭಾವದಿಂದ ನೋಡುವ ಪರಿ, ಎಲ್ಲವೂ  ಆ ಪರಮಾತ್ಮನ ಸೃಷ್ಟಿ, ಇದನ್ನು ನಾನು ದುರುಪಯೋಗಪಡಿಸಿಕೊಳ್ಳಬಾರದು, ಮತ್ತು ಅವನು ನಿರ್ಮಿಸದ ಲೋಕದಲ್ಲಿ ನಾನೂ ಎಲ್ಲರಂತೆ, ಹಾಗಾಗಿ ದುರಾಸೆ, ದುರ್ಭಾವ, ದುರಾಲೋಚನೆ, ಸುಳ್ಳು ಮೋಸ, ತಟವಟ ಇವೆಲ್ಲವೂ ಇರಬಾರದು,ಇದ್ದರೆ ನಾನು ಆ ದೈವದ ಅವಕೃಪೆಗೆ  ಪಾತ್ರನಾಗುತ್ತೇನೆಂಬ ಭಯ ಯಾವುದೂ ಇಲ್ಲದೆ ಸ್ವೇಚ್ಚಾ ಮನೋಭಾವ ಬೆಳೆಸಿಕೊಂಡಿರುವುದರಿಂದ, ಅವನ ಮನಸ್ಸಿನಲ್ಲಿ ಆ ದೈವವಿಲ್ಲದಿರುವುದರಿಂದ, ಆ “ಸೃಷ್ಟಿಕರ್ತನೂ ಎಲ್ಲೋ ಗುಹ್ಯನಾಗಿಬಿಟ್ಟಿದ್ದಾನೆ” ಎನ್ನುತ್ತಾರೆ ಮಾನ್ಯ ಗುಂಡಪ್ಪನವರು. ಆ ದೇವರು ನಮ್ಮೆಲ್ಲರ ಕಲ್ಪನೆಯೆಂತೆ ಇರುವನೋ ಇಲ್ಲವೋ ಎಂಬ ಜಿಜ್ಞಾಸೆ ಬೇಡ. ಆದರೆ ಒಂದು ಮಾತು ಸತ್ಯ. ಆ ದೈವವಿದೆ, ನಾವದರ ಅಧೀನ ಎಂಬ ಭಾವಗಳು, ಮಾನವರು ಸಂಸ್ಕಾರವನ್ನು ಬೆಳೆಸಿಕೊಳ್ಳಲು ಮತ್ತು ಅವರೇ ನಿರ್ಮಿಸಿಕೊಂಡ ಸಮಾಜದಲ್ಲಿ ಒಂದು ಸಂಯಮ ಮತ್ತು ಶಿಸ್ತು ಇರಲು ಕಾರಣವಾಗಿದೆ ಎಂದರೆ ಅದು ಒಳ್ಳೆಯದೇ ಅಲ್ಲವೇ. ಅಂತಹ ದೈವದಲ್ಲಿ ಇಂದು ಭಯ ಭಕ್ತಿಗಳು ಇಂದು ಕಾಣೆಯಾಗಿವೆ ಎನ್ನುವ ಅರ್ಥದಲ್ಲಿ  ” ಆ ಸೃಷ್ಟಿಕರ್ತನೂ ಎಲ್ಲೋ ಗುಹ್ಯನಾಗಿಬಿಟ್ಟಿದ್ದಾನೆ” ಎನ್ನುತ್ತಾರೆ ಮಾನ್ಯ ಗುಂಡಪ್ಪನವರು. ವಾಚಕರೆ ಇದರ ವಿಚಾರವನ್ನು ಎಲ್ಲರೂ ಮಾಡಲೇ ಬೇಕು. ಏಕೆಂದರೆ ಯಾವುದೋ ಇದ್ದರೆ ಸಮಾಜ ಒಳ್ಳೆಯ ಸಮಾಜವಾಗಿ ಪರಿವರ್ತನೆಗೊಳ್ಳುತ್ತದೆ ಎಂದು ಅರಿತರೆ, ನಮ್ಮ ಸಮಾಜ ಸುಧಾರಿಸಲು ಎಲ್ಲೋ ಒಂದು ಮಾರ್ಗವಿದೆ ಎಂದು ಅರಿತುಕೊಳ್ಳಬಹುದು. ಎಲ್ಲರೂ  ಅದನ್ನು ಸಾಧಿಸಲು ಪ್ರಯತ್ನಿಸಬೇಕು.

ಇನ್ನು ಈ ಸಮಾಜದಲ್ಲಿ  ಹೇಗಿರಬೇಕೆಂದು ಒಂದು ಎಚ್ಚರಿಕೆಯನ್ನು ನೀಡುತ್ತಾರೆ ಶ್ರೀ ಡಿ ವಿ. ಜಿ ಯವರು, ಇಂತಹ ವಿಚಿತ್ರವಾದ ಜಗತ್ತಿನಲ್ಲಿ ಯಾರ ಗುಣ ಹೇಗಿರುತ್ತೋ ತಿಳಿಯುವುದು ಕಷ್ಟ ಎನ್ನುತ್ತಾರೆ. ನಯ ವಂಚಕರಿರುವ ಈ ಜಗತ್ತಿನಲ್ಲಿ ಮೋಸಮಾಡುವವರು ಕಡಿಮೆಯಾದರೂ ಮೋಸಹೋಗುವವರ ಸಂಖ್ಯೆ ಅಧಿಕ. ಇಲ್ಲಿ ಒಂದು ವಿಷಯ ಹೇಳಬೇಕು. ಮೋಸಮಾಡಲು ಬುದ್ಧಿವಂತಿಕೆ ಬೇಕು. ” ಎಲ್ಲ ಬುದ್ಧಿವಂತರೂ ಮೋಸಗಾರರಲ್ಲ. ಆದರೆ ಎಲ್ಲ ಮೋಸಗಾರರೂ ಬುದ್ಧಿವಂತರು” ಎನ್ನುವುದು ಸತ್ಯವಾದ ಮಾತು. ಇಂತಹವರ ಸಂಖ್ಯೆ ಕಡಿಮೆಯಾದರೂ ಅವರ ಬಲೆಗೆ ಬೀಳುವ

ಜನರ ಸಂಖ್ಯೆ ಹೆಚ್ಚಾದ್ದರಿಂದ ಎಲ್ಲರೂ ಒಂದಲ್ಲ ಒಂದು ಬಾರಿ ಆ ಮೋಸದ ವಂಚನೆಯ ಕೃತ್ರಿಮತೆಯ, ತಟವಟದ ಜನರ ಬಲೆಯಲ್ಲಿ ಸಿಕ್ಕು ಕಷ್ಟಪಟ್ಟಿರುವವರೇ ಆಗಿರುತ್ತಾರೆ.  ಹಾಗಾಗಿ ನೀ ಜಾಗರೂಕನಾಗಿರು ಎಂದು ಎಚ್ಚರಿಕೆಯನ್ನು ನೀಡುತ್ತಾರೆ. ಹಾಗೇ ನೀಡುವಾಗ” ಯಾತ್ರಿಕನೆ ” ಎನ್ನುವ ಪದ ಪ್ರಯೋಗ ಮಾಡುತ್ತಾರೆ. ಹೌದು ನಾವೆಲ್ಲರೂ ಈ ಜಗತ್ತಿನಲ್ಲಿ ಜೀವನವೆನ್ನುವ ಪ್ರಯಾಣವನ್ನು ಮಾನವರೂಪದ ಈ ಮಣ್ಣಿನ ಬಂಡಿಯಲ್ಲಿ ಮಾಡುವ “ಪ್ರಯಾಣಿಕ”ರೇ, ಅಲ್ಲವೇ?

ಹಾಗಾಗಿ ಈ ಜಗತ್ತು ಕೃತ್ರಿಮತೆ, ಕುಟಿಲತೆ, ಸುಳ್ಳು ಮತ್ತು ಮೋಸದಿಂದ ತುಂಬಿದೆ. ದೈವಭಕ್ತಿಯು ನಶಿಸಿದೆ. ಇಲ್ಲಿ ನೀನು ಜಾಗರೂಕನಾಗಿರು ಎಂದು ಎಚ್ಚರಿಸುವ ಭಾವವೇ ಈ ಕಗ್ಗ. ಆದರೆ ಈ ಸ್ತಿತಿ  ಅ-ನಿವಾರ್ಯ( incurable ) ಅಲ್ಲ. ಎಲ್ಲರೂ ಮನಸ್ಸು ಮಾಡಿದರೆ ಸಾಧ್ಯ. ಇಲ್ಲಿ ಸುಳ್ಳು

ಕೃತ್ರಿಮತೆ, ಕುಟಿಲತೆ, ಸುಳ್ಳು ಮತ್ತು ಮೋಸಗಳ ಸ್ಥಾನದಲ್ಲಿ ಕರುಣೆ ಪ್ರೀತಿ ಪ್ರೇಮ ಸಹೃದಯತೆ ಮುಂತಾದ  ಭಾವಗಳನ್ನು ಬೆಳೆಸಿಕೊಂಡು ನಾವಿರುವ ಜಗತ್ತನ್ನು ಸುಂದರವನ್ನಾಗಿಸಲು  ನಾವೆಲ್ಲರೂ ಪ್ರಯತ್ನಪಡೋಣವೆಂದು  ಹೇಳುತ್ತಾ, ………………

ಇವುಗಳನ್ನೇ ಚಿಂತಿಸುತ್ತಾ ವಿಚಾರಮಾಡುತ್ತಾ ಸುಧಾರಣೆಯ ಮಾರ್ಗ ಹುಡುಕುತ್ತಾ. ನಾವು ಮುಂದಿನ ಕಗ್ಗಕ್ಕೆ ಹೋಗೋಣ.

ಇಂದಿನ ದಿನ ನಿಮಗೆಲ್ಲರಿಗೂ ಶುಭವಾಗಲಿ.

ನಮಸ್ಕಾರ

**************************************************************************

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments