ಕಾನೂನಿನಂಗಳ ೧ : ಕಾನೂನಿನ ಸ್ವರೂಪ
– ಉಷಾ ಐನಕೈ ಶಿರಸಿ
ಪ್ರತೀ ಮನುಷ್ಯ ಹುಟ್ಟುವಾಗಲೇ ಆತನಿಗೆ ಅರಿವಿಲ್ಲದೇ ಹಲವಾರು ರೀತಿಯ ಕಾನೂನು ವ್ಯಾಪ್ತಿಗೆ ಸೇರಿಬಿಡುತ್ತಾನೆ. ಅದನ್ನು ಬೇಕಾದರೆ ಧರ್ಮ ಅನ್ನೋಣ. ನೈಸರ್ಗಿಕ ಕಾನೂನು ಅನ್ನೋಣ ಅಥವಾ ಪ್ರಭುತ್ವ ನಿಗದಿಪಡಿಸಿದ ಕಾನೂನು ಎಂದು ಕರೆಯೋಣ. ಒಟ್ಟಿನಲ್ಲಿ ಮನುಷ್ಯನಿಗೆ ಕಾನೂನಿನ ಆಶ್ರಯ ಬೇಕೇಬೇಕು. ಏಕೆಂದರೆ ಮನುಷ್ಯ ಸಂಘಜೀವಿ. ಅಷ್ಟೇ ಅಲ್ಲ, ಜೀವಿಗಳಲ್ಲೇ ಅತ್ಯಂತ ವಿಶಿಷ್ಟವಾದ ಮೆದುಳನ್ನು ಹೊಂದಿದ ಬುದ್ಧಿವಂತ ಈ ಮನುಷ್ಯ. ಇಂಥ ಮನುಷ್ಯರು ಸಾಮೂಹಿಕವಾಗಿ ಬಾಳಬೇಕಾದರೆ ಅದಕ್ಕೊಂದು ಚೌಕಟ್ಟು ಬೇಕು. ನಿಯಮಾವಳಿ ಬೇಕು. ಮಾರ್ಗದರ್ಶಿ ತತ್ವಗಳು ಬೇಕು. ಇದರಿಂದ ಇಡೀ ಸಮುದಾಯ ಆರೋಗ್ಯಕರವಾಗಿ ಪ್ರಗತಿಯತ್ತ ಸಾಗಲು ಸಾಧ್ಯ. ಹೀಗೆ ಮನುಷ್ಯ ಸಮೂಹವನ್ನು ನಿಯಂತ್ರಿಸಲು, ಚಾಲನೆಗೆ ತರಲು ಸೃಷ್ಟಿಸಿಕೊಂಡ ಚೌಕಟ್ಟನ್ನೇ ನಾವು ಕಾನೂನು ಎನ್ನಬಹುದು.
ಕಾನೂನು ಮನುಷ್ಯನಿಗೆ ಹಕ್ಕನ್ನು ನೀಡುತ್ತದೆ. ಹಕ್ಕಿಗೆ ಪ್ರತಿಯಾಗಿ ಕೆಲವು ಕರ್ತವ್ಯಗಳನ್ನು ಸೂಚಿಸುತ್ತದೆ. ಈ ಹಕ್ಕು ಮತ್ತು ಕರ್ತವ್ಯಗಳೇ ಮನುಷ್ಯನ ಆತ್ಮಗೌರವ, ಸದ್ವಿನಯ, ಪರೋಪಕಾರ, ಸಹಬಾಳ್ವೆ ಮುಂತಾದ ಮೌಲ್ಯಗಳನ್ನು ಸೃಷ್ಟಿಸುತ್ತವೆ ಮತ್ತು ನಿರ್ದೇಶಿಸುತ್ತವೆ.
ಕಾನೂನು ಎಂದರೆ ಏನು ಎನ್ನುವ ಪ್ರಶ್ನೆಗೆ ನಿಖರವಾದ ಒಂದು ವ್ಯಾಖ್ಯೆಯನ್ನು ಕೊಡುವುದು ಕಷ್ಟ. ಕಾನೂನು ಅನ್ನುವ ಪದ ಸರಳವಾಗಿ ಕಂಡರೂ ಅದರ ಅರ್ಥವ್ಯಾಪ್ತಿ ಬಹುವಿಸ್ತಾರವಾಗಿದೆ. ಹಾಗಾಗಿ ಮನುಷ್ಯನ ಹಕ್ಕು ಮತ್ತು ಕರ್ತವ್ಯಗಳ ಮೂಲಕವೇ ಕಾನೂನುಗಳನ್ನು ಅರ್ಥೈಸಿಕೊಳ್ಳುತ್ತ ಹೋಗಬೇಕು.
ಭಾರತೀಯ ಸಂಸ್ಕೃತಿಗೆ ಸುಮಾರು ಎರಡು ಸಾವಿರ ವರ್ಷಗಳಿಗಿಂತ ಹೆಚ್ಚಿನ ಪರಂಪರೆ ಇದೆ. ಹಾಗಾಗಿ ಕಾಲದಿಂದ ಕಾಲಕ್ಕೆ ಕಾನೂನಿನ ಪರಿಕಲ್ಪನೆಗಳು ಬದಲಾಗುತ್ತ ಬಂದಿವೆ. ಇದನ್ನೆಲ್ಲ ಕ್ರೋಢೀಕರಿಸಿ ಕಾನೂನು ಮತ್ತು ನ್ಯಾಯದ ಕುರಿತು ವ್ಯಾಖ್ಯಾನ ನೀಡುವುದೇ ನ್ಯಾಯಶಾಸ್ತ್ರ. ಇಡೀ ಭಾರತೀಯ ಕಾನೂನು ಪ್ರಪಂಚಕ್ಕೆ ಸದ್ಯ ಈ ನ್ಯಾಯಶಾಸ್ತ್ರವೇ ಆಧಾರವಾಗಿದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ನಮ್ಮ ದೇಶದಲ್ಲಿ ಕಾನೂನಿನ ಸ್ವರೂಪ ಕಾಲಕಾಲಕ್ಕೆ ಬದಲಾದ ಚಿತ್ರಣ ಕಣ್ಣಿಗೆ ಕಾಣುತ್ತದೆ. ಎಲ್ಲಕ್ಕಿಂತ ಪೂರ್ವದಲ್ಲಿ ನಮ್ಮ ಸಂಪ್ರ ದಾಯ ಮತ್ತು ಪದ್ಧತಿಗಳೇ ನಮಗೆ ಕಾನೂನುಗಳಾಗಿದ್ದವು. ಜೀವನದ ನಿರ್ಣಾಯಕ ಕ್ಷಣಗಳಲ್ಲಿ ನಮ್ಮ ಪೂರ್ವಜರು ತೆಗೆದುಕೊಂಡ ನಿರ್ಣಯಗಳು ರೂಢಿಯಾಗಿ ಪಾಲನೆಯಲ್ಲಿ ಬಂದು ಅಂತಿಮವಾಗಿ ಸಂಪ್ರದಾಯದ ಸ್ವರೂಪ ತಾಳಿ ದವು. ಈ ಸಂಪ್ರದಾಯ ಮತ್ತು ಪದ್ಧತಿಗಳೇ ಕಾನೂನಿನ ಸ್ವರೂಪದಲ್ಲಿ ಕೆಲಸ ಮಾಡುತ್ತ ಬಂತು. ಇದರ ಜೊತೆಗೆ ಧರ್ಮದಿಂದ ಬಂದ ನಿಯಮಾವಳಿಗಳು, ದೇವರ ನಂಬಿಕೆಯಿಂದ ಹುಟ್ಟಿಕೊಂಡ ಕಟ್ಟುಪಾಡುಗಳು ಎಲ್ಲವೂ ನೈಸರ್ಗಿಕ ನ್ಯಾಯದ ಕವಲುಗಳಾಗಿವೆ.
ಅಂತೆಯೇ ಒಂದು ಸಮುದಾಯದ ಗಣ್ಯ ವ್ಯಕ್ತಿಗಳು ಆಯಾ ಸಂದರ್ಭಕ್ಕೆ ತಕ್ಕಂತೆ ನಿರ್ಧರಿಸಿದ ನಿಯಮಾವಳಿಗಳನ್ನು ಆ ಸಮುದಾಯ ಕಾನೂನಿನಂತೆ ಅನುಸರಿಸಿಕೊಂಡು ಬಂತು. ಅವುಗಳೇ ಆ ಸಮುದಾಯದ ಕಾನೂನುಗಳಾದವು. ಇದನ್ನು ನ್ಯಾಸ್ತ್ರ ‘ಸಕಾರಾತ್ಮಕ ಕಾನೂನು’ (Positive law)ಎಂದು ವಿವರಿಸುತ್ತದೆ. ಜೊತೆಗೆ ಈ ಹಿಂದೆ ನಿರ್ಣಯಿಸಲ್ಪಟ್ಟ ಅನೇಕ ನ್ಯಾಯ ನಿರ್ಣಯಗಳನ್ನಾಧರಿಸಿ ಪ್ರಸ್ತುತ ಸಮಸ್ಯೆಗೆ ನ್ಯಾಯ ನೀಡುವ ಪದ್ಧತಿ ಬಂತು. ಅದೇ ಒಂದು ಪ್ರತ್ಯೇಕ ಕಾನೂನಿನ ಶಾಖೆಯಾಯಿತು. ಇದನ್ನು ‘ರಿಸ್ಟ್ರಿಕ್ಟೆಡ್ ಲಾ’ (Restricted law) ಎಂದು ಕರೆಯಲಾಗುತ್ತದೆ.
ಇಂದಿನ ವರ್ತಮಾನದ ಬದುಕಿನಲ್ಲಿ ನಮಗೆ ಕಾಣುತ್ತಿರುವ ಕಾನೂನುಗಳೆಲ್ಲ ಆಧುನಿಕ ಕಾನೂನುಗಳು ಎನ್ನಲಾಗುತ್ತದೆ. ಇದು ಪ್ರಭುತ್ವ ನಿರ್ಣಯಿಸಿದ ಕಾನೂನುಗಳು. ಮೇಲಿನ ಎಲ್ಲ ಕಾನೂನುಗಳನ್ನು ಆಧಾರವಾಗಿಟ್ಟುಕೊಂಡು ರಚಿಸಲ್ಪಟ್ಟ ಕಾನೂನು ಇದು. ಒಂದರ್ಥದಲ್ಲಿ ಭಾರತೀಯ ಸಂವಿಧಾನವೇ ಒಂದು ಕಾನೂನು. ಆಧುನಿಕ ಕಾನೂನು ಒಂದು ಲಿಖಿತ ಕಾನೂನು. ಇಂದು ನಮ್ಮ ಮುಂದಿರುವ ಎಲ್ಲ ಕಾನೂನುಗಳೂ ಹೆಚ್ಚು ಕಮ್ಮಿ ಬ್ರಿಟಿಶ್ ವಸಾಹತುಶಾಹಿ ಕಾಲದಲ್ಲಿ ಪುನರ್ರಚಿಸಲ್ಪಟ್ಟ ಕಾನೂನುಗಳು. ಈ ಕಾನೂನುಗಳಿಗೆ ವಿವಿಧ ಶಾಖೆಗಳು ಮತ್ತು ಸ್ಪಷ್ಟತೆಗಳನ್ನು ನಾವು ಗಮನಿಸುತ್ತೇವೆ. ಉದಾಹರಣೆಗೆ ಭಾರತೀಯ ದಂಡ ಸಂಹಿತೆ, ಸಿವಿಲ ಪ್ರಕ್ರಿಯಾ ಸಂಹಿತೆ, ಆಸ್ತಿ ವಿಭಜನೆಗೆ ಸಂಬಂಧ ಪಟ್ಟಂತೆ ಹಿಂದೂ ಲಾ. ಹೀಗೆ ಬೇರೆ ಬೇರೆ ಶಾಖೆಗಳಡಿಯಲ್ಲಿ ವಿಭಿನ್ನವಾದ ನ್ಯಾಯ ನಿರ್ಣಯಗಳನ್ನು ನೀಡಲಾಗುತ್ತಿದೆ.
ಕಾನೂನಿನ ಉದ್ದೇಶ ಒಂದೇ ಆಗಿದ್ದರೂ ಸಹ ಅದರ ಸ್ವರೂಪ ಅಂತಿಮ ಸತ್ಯ ಅಲ್ಲ. ಬದಲಾದ ಕಾಲದಲ್ಲಿ ಕಾನೂನಿನ ಸ್ವರೂಪ ಕೂಡ ಅವಶ್ಯಕತೆಗನುಗುಣವಾಗಿ ಬದಲಾಗುತ್ತಲೇ ಇರುತ್ತವೆ. ಅದಕ್ಕೆ ನಮ್ಮ ಸಂಸ್ಕೃತಿಯ ಸಾವಿರಾರು ವರ್ಷಗಳ ಪರಂ ಪರೆಯೇ ಉದಾಹರಣೆ. ಕಾಲಕ್ಕೆ ತಕ್ಕಂತೆ ಹೊಸ ಹೊಸ ಕಾನೂನುಗಳು ಹುಟ್ಟಿಕೊಳ್ಳುತ್ತವೆ. ಇದ್ದ ಕಾನೂನುಗಳು ತಿದ್ದುಪಡಿಗೊಳಗಾಗುತ್ತವೆ. ಇದಕ್ಕೆ ನಮ್ಮ ಆಧುನಿಕ ಲಿಖಿತ ಕಾನೂನುಗಳೇ ಜ್ವಲಂತ ಸಾಕ್ಷಿ. ಕಾಲದಿಂದ ಕಾಲಕ್ಕೆ ನ್ಯಾಯದ ಪರಿಭಾಷೆ ಕೂಡ ಬದಲಾಗುವುದನ್ನು ನಾವು ಗಮನಿಸುತ್ತೇವೆ. ಹೀಗಾಗಿ ಕಾನೂನು ಮನುಷ್ಯನ ಜೀವನಕ್ಕೆ ಒಂದು ಅಗತ್ಯವಾದ ಸಂಗತಿ ಎಂಬುದು ಸಾಬೀತಾಗುತ್ತದೆ.
ಪ್ರತಿಯೊಂದು ಹಕ್ಕಿಗೆ ಪ್ರತಿಯಾಗಿ ಮತ್ತೊಂದು ಕರ್ತವ್ಯ ಇರುತ್ತದೆ ಎಂಬುದು ಕಾನೂನಿನ ತರ್ಕ. ಇದರ ಹಿನ್ನೆಲೆಯಲ್ಲೇ ‘ನ್ಯಾಯ’ ಎನ್ನುವುದು ನಿರ್ಣಯಿಸಲ್ಪಡುವುದು. ಈ ಹಕ್ಕು ಮತ್ತು ಕರ್ತವ್ಯಗಳನ್ನು ಗುರುತಿಸುವುದು ಅತ್ಯಂತ ಸೂಕ್ಷ್ಮವಾದ ವಿಷಯ. ಕಾನೂನು ಇಂಥ ಸೂಕ್ಷ್ಮಗಳನ್ನು ಬಿಡಿಸಲು ಸಹಾಯ ಮಾಡುತ್ತದೆ. ಹಕ್ಕು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳು. ಹಾಗಾಗಿ ಕಾನೂನು ಒಬ್ಬ ಮನುಷ್ಯ ಇವೆರಡನ್ನೂ ಒಟ್ಟಾರೆಯಾಗಿ ಸ್ವೀಕರಿಸುವ ಅನಿವಾರ್ಯತೆ ಸೃಷ್ಟಿಸುತ್ತದೆ. ಇಂದಿಗೂ ಕೂಡ ಹಕ್ಕು ಮತ್ತು ಕರ್ತವ್ಯದ ವಿಷಯದಲ್ಲಿ ಸದಾ ನಾವು ಗೊಂದಲದಲ್ಲಿಯೇ ಇದ್ದೇವೆ. ಅನೇಕ ಸಂದರ್ಭದಲ್ಲಿ ಕಾನೂನು ಕೂಡ ಪ್ರಶ್ನಾರ್ಥಕವಾಗೇ ನಿಲ್ಲುತ್ತದೆ. ಉದಾಹರಣೆಗೆ ಒಬ್ಬ ವಯಸ್ಸಾದ ತಂದೆ ತಾನು ತನ್ನ ಮಗನ ಪಾಲನೆ ಪೋಷಣೆ ಮಾಡುವುದು ಕರ್ತವ್ಯ ಎಂದು ಭಾವಿಸುತ್ತಾನೆ. ಹಾಗೆಯೇ ವಯಸ್ಸಿಗೆ ಬಂದ ಮಗ ಕೂಡ ಅಪ್ಪನಿಂದ ನೆರವು ಪಡೆಯುವುದು ತನ್ನ ಹಕ್ಕು ಎಂದು ಭಾವಿಸುತ್ತಾನೆ. ಇಲ್ಲೇ ಇರುವುದು ಧರ್ಮ ಸೂಕ್ಷ್ಮ. ನಿಜವಾಗಿಯೂ ವಯಸ್ಸಿಗೆ ಬಂದ ಮಗನಿಂದ ಆಸರೆ ಪಡೆಯುವುದು ತಂದೆಯ ಹಕ್ಕು. ಹಾಗೇ ತಂದೆಯನ್ನು ಪೋಷಿಸುವುದು ಮಗನ ಕರ್ತವ್ಯ. ಇಂಥ ಸಂದರ್ಭದಲ್ಲಿ ಕಾನೂನುಗಳು ಸಂಪೂರ್ಣ ನ್ಯಾಯ ನೀಡುವಲ್ಲಿ ಸಂದಿಗ್ಧಕ್ಕೊಳಗಾಗುತ್ತವೆ. ಆಗ ಕಾನೂನಿನ ಮಿತಿಗಳೂ ಕಾಣುತ್ತವೆ. ಈ ಕಾರಣಕ್ಕಾಗೇ ಕಾನೂನುಗಳನ್ನು ಸಾರ್ವಕಾಲಿಕ ಸತ್ಯ ಎಂದು ಸ್ವೀಕರಿಸದೇ ಇರುವುದು.
ಇಷ್ಟಾಗಿಯೂ ನಮ್ಮ ಆಧುನಿಕ ಬದುಕು ಹೆಜ್ಜೆ ಹೆಜ್ಜೆಗೆ ಕಾನೂನಿಗೆ ಮುಖಾಮುಖಿಯಾಗುತ್ತದೆ. ನಿತ್ಯ ಬದುಕಿನ ಜೀವನಾವಶ್ಯಕ ಸಂಗತಿಗಳೆಲ್ಲ ಕಾನೂನಿನ ಚೌಕಟ್ಟಿನಲ್ಲೇ ನಿರ್ಧರಿಸಲ್ಪಡುತ್ತದೆ. ಹಾಗಾಗಿ ಇಂದಿನ ಕಾಲದಲ್ಲಿ ಪ್ರತಿಯೊಬ್ಬರೂ ಕೂಡ ಕನಿಷ್ಟ ಕಾನೂನಿನ ಜ್ಞಾನವನ್ನು ಹೊಂದಿರಬೇಕಾಗುತ್ತದೆ. ಈ ದೇಶದ ಪ್ರತಿಯೊಬ್ಬ ಪ್ರಜೆಗೆ ಕಾನೂನಿನ ಜ್ಞಾನ ಇದ್ದೇ ಇರುತ್ತದೆ ಎಂದು ಪ್ರಭುತ್ವ ನಂಬುತ್ತದೆ. ಅದಕ್ಕಾಗೇ ಕಾನೂನಿನ ಅಜ್ಞಾನ ಕ್ಷಮ್ಯವಲ್ಲ ಎಂದು ನ್ಯಾಯಶಾಸ್ತ್ರ ಹೇಳುತ್ತದೆ. ದೇಶದ ಪ್ರತಿಯೊಬ್ಬ ಪ್ರಜೆಯೂ ಕಾನೂನನ್ನು ಅರಿತಿರ ಬೇಕಾದದ್ದು ಕರ್ತವ್ಯ. ಆ ಕಾರಣಕ್ಕಾಗೇ ಶಿಕ್ಷಣದ ಮುಖಾಂತರ, ಮಾಧ್ಯಮಗಳ ಮುಖಾಂತರ, ಸರಕಾರಿ ಕಾರ್ಯಕ್ರಮಗಳ ಮೂಲಕ ಕಾನೂನಿನ ಅರಿವು ಮತ್ತು ಜಾಗೃತಿ ಶಿಬಿರಗಳ ಮೂಲಕ ಜನಸಾಮಾನ್ಯರಿಗೆ ಕಾನೂನಿನ ತಿಳುವಳಿಕೆ ನೀಡುವ ಪ್ರಯತ್ನ ನಡೆಯುತ್ತಲೇ ಇದೆ. ಹಾಗೆಯೇ ಬಡವ -ಶ್ರೀಮಂತ, ಅಕ್ಷರಸ್ಥ-ಅನಕ್ಷರಸ್ಥ ಎಂಬ ಭೇದ -ಭಾವವಿಲ್ಲದೇ ಎಲ್ಲರೂ ಕಾನೂನಿಗೆ ತಲೆಬಾಗಲೇ ಬೇಕು. ಕಾನೂನನ್ನು ಅವಲಂಬಿಸಲೇಬೇಕು. ಸರಳವಾಗಿ ಹೇಳಬೇಕಾದರೆ ಹುಟ್ಟಿದಾಗ ಜನ್ಮ ದಾಖಲೆಯಿಂದ ಹಿಡಿದು ಸತ್ತಾಗ ಮರಣ ದಾಖಲೆಯ ವರೆಗೆ ಕಾನೂನಿಗೆ ಪ್ರಮಾಣವಾಗುವ ಅವಶ್ಯಕತೆ ನಮ್ಮ ಎದುರಿಗಿದೆ.
ವರ್ತಮಾನದ ಕಾನೂನಿನಲ್ಲಿ ನೂರಾರು ಶಾಖೆಗಳಿವೆ. ಪ್ರತಿನಿತ್ಯ ಒಂದಲ್ಲ ಒಂದು ಕಾನೂನಿಗೆ ಮೊರೆಹೋಗುವ ಅನಿವಾರ್ಯತೆ ನಮ್ಮೆದುರಿಗಿದೆ. ಹಾಗಾಗಿ ಪ್ರತಿಯೊಬ್ಬರೂ ಕಾನೂನಿನ ಜ್ಞಾನವನ್ನು ಹೊಂದಿರಬೇಕಾಗುತ್ತದೆ. ಇಲ್ಲವಾದಲ್ಲಿ ನಮ್ಮವರಿಂದಲೇ, ನಮ್ಮ ಹಿತೈಷಿಗಳಿಂದಲೇ ನಾವು ಅನ್ಯಾಯಕ್ಕೀಡಾಗಬೇಕಾದ ಪ್ರಸಂಗ ಎದುರಾಗುತ್ತದೆ. ಆದ್ದರಿಂದ ಕಾನೂನಿನ ಇತಿಮಿತಿಗಳೇನು, ಕಾನೂನಿನ ಶಕ್ತಿ ಏನು, ಕಾನೂನಿನ ದೌರ್ಬಲ್ಯ ಏನು, ಕಾನೂನಿನ ಸದುಪಯೋಗ ಮತ್ತು ದುರುಪಯೋಗ ಮುಂತಾದ ಎಲ್ಲ ಮಜಲುಗಳನ್ನು ಅರಿತುಕೊಂಡಾಗ ಮಾತ್ರ ನಿಜವಾದ ಕಾನೂನನ್ನು ಅನುಭವಿಸಲು ಸಾಧ್ಯ.
*******