ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 19, 2012

2

ನಮ್ಮ ಕ್ಷೀರಪಥದಲ್ಲಿ ಹಲವು ಶತಕೋಟಿ ವಾಸಯೋಗ್ಯ ಗ್ರಹಗಳಿವೆಯಂತೆ!

‍ನಿಲುಮೆ ಮೂಲಕ

 – ವಿಷ್ಣುಪ್ರಿಯ

ನಮ್ಮ ಕ್ಷೀರಪಥದಲ್ಲಿ ಕನಿಷ್ಠವೆಂದರೂ ೧೬೦ ಶತಕೋಟಿ ಕೆಂಪು ಕುಬ್ಜ ನಕ್ಷತ್ರಗಳಿವೆ. ಈ ನಕ್ಷತ್ರಗಳ ಸುತ್ತ ಕನಿಷ್ಠ ಒಂದು ಸೂಪರ್ ಅರ್ಥ್ ಪರಿಭ್ರಮಿಸುತ್ತಿದ್ದರೂ ೧೬೦ ಶತಕೋಟಿ ಸೂಪರ್‌ಅರ್ಥ್‌ಗಳು ನಮ್ಮ ಕ್ಷೀರಪಥದಲ್ಲಿರಬೇಕು. ಅಥವಾ ಶೇ.೪೦ರಷ್ಟೇ ಕೆಂಪು ಕುಬ್ಜ ಸೂರ್ಯರು ಸೂಪರ್ ಅರ್ಥ್ ಹೊಂದಿರುವುದು ಎಂಬ ವಾದವನ್ನು ಪರಿಗಣಿಸಿದರೂ ೬೪ ಶತಕೋಟಿ ಸೂಪರ್ ಅರ್ಥ್‌ಗಳು ನಮ್ಮ ಕ್ಷೀರಪಥದಲ್ಲಿರಬೇಕು.

ಭೂಮಿಯನ್ನೊಳಗೊಂಡ ನಮ್ಮ ಸೌರಮಂಡಲ ಇರುವಂಥ ಕ್ಷೀರಪಥ ಗೆಲಾಕ್ಸಿಯಲ್ಲಿ ವಾಸಯೋಗ್ಯವಾಗಿರುವ ಗ್ರಹಗಳಿರಬಹುದೇ? ಬಾಹ್ಯಾಕಾಶದಾಚೆಗೆ ಸಾವಿರಾರು ಕೋಟಿ ಮೈಲಿಗಳ ದೂರದವರೆಗೆ ಎಲ್ಲಿಯಾದರೂ ಜೀವಾಸ್ತಿತ್ವಕ್ಕೆ ಅನುಕೂಲವಾಗುವಂಥ ಪ್ರದೇಶವಿದೆಯೇ ಎಂಬ ಹುಡುಕಾಟ ತಾರಕಸ್ಥಾಯಿ ತಲುಪಿರುವ ಈ ಹೊತ್ತಿನಲ್ಲಿ ಇಂಥದ್ದೊಂದು ಪ್ರಶ್ನೆ ಅಚ್ಚರಿ ಎನ್ನಿಸುವುದಿಲ್ಲ. ಕ್ಷೀರಪಥದೊಳಗೇ ವಾಸಯೋಗ್ಯ ಗ್ರಹಗಳು ಖಂಡಿತವಾಗಿಯೂ ಇರಬಹುದು ಎಂಬ ಉತ್ತರವೇ ಸಿಗುತ್ತದೆ. ಆದರೆ ಈ ಪ್ರಶ್ನೆಯ ಬೆನ್ನಿಗೇ ಎಷ್ಟು ಗ್ರಹಗಳು, ಆಕಾಶಕಾಯಗಳು ವಾಸಯೋಗ್ಯ ಪ್ರದೇಶಗಳನ್ನು ಹೊಂದಿರಬಹುದು? ಎಂಬ ಇನ್ನೊಂದು ಪ್ರಶ್ನೆ ಎಸೆದರೆ ಬಹುಶಃ ಅದಕ್ಕೆ ನಿಖರವಾದ ಉತ್ತರವನ್ನು ಕೊಡುವುದಕ್ಕೆ ಪರಿಣತ ವಿಜ್ಞಾನಿಗಳಿಂದಲೂ ಸಾಧ್ಯವಾಗದು.

ಒಂದು ದೃಷ್ಟಿಗೆ ಯಾವುದೋ ಒಂದು ಆಕಾಶಕಾಯ ಜಾವಾಸ್ತಿತ್ವ ಪೋಷಣೆಗೆ ಯೋಗ್ಯವಾಗಿದೆ ಎಂದು ಕಂಡುಬಂದರೂ ಅದರಲ್ಲಿರುವ ನೂರಾರು ಸಮಸ್ಯೆಗಳು ‘ಅದು ವಾಸಯೋಗ್ಯ’ ಎಂಬ ವಾದವನ್ನು ತಳ್ಳಿಹಾಕುತ್ತವೆ. ಆದರೂ ಒಂದು ಅಚ್ಚರಿಯ ಅಂಶ ಇದೀಗ ಐರೋಪ್ಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಎಸ್‌ಒ ನಡೆಸಿರುವ ಸಂಶೋಧನೆಯಿಂದ ಬಯಲಾಗಿದೆ. ಇಎಸ್‌ಒದ ಹಾರ್ಪ್ಸ್ ಪ್ಲಾನೆಟ್ ಫೈಂಡರ್ ಕಂಡುಕೊಂಡಿರುವ ಪ್ರಕಾರ ನಮ್ಮ ಕ್ಷೀರಪಥದಲ್ಲಿ ಹಲವು ಶತಕೋಟಿ ಆಕಾಯಕಾಯಗಳು ಜೀವಾಸ್ತಿತ್ವ ಪೋಷಣೆಗೆ ಯೋಗ್ಯವಾಗಿವೆಯಂತೆ. ಕ್ಷೀರಪಥದಲ್ಲಿರುವ ಶೇ.೮೦ರಷ್ಟು ಸೂರ್ಯರ (ನಕ್ಷತ್ರಗಳ) ಸುತ್ತ ಪರಿಭ್ರಮಿಸುತ್ತಿರುವ ಹಲವು ಶತಕೋಟಿ ಗ್ರಹಗಳು ವಾಸಯೋಗ್ಯ ವಲಯದಲ್ಲಿಯೇ ಇವೆ. ಈ ಕಾಯಗಳಲ್ಲಿ ಜೀವಾಸ್ತಿತ್ವ ಇರಬಹುದೇ ಎಂಬ ಬಗ್ಗೆ ವಿಜ್ಞಾನಿಗಳ ತಂಡ ಸಂಶೋಧನೆ ನಡೆಸಲು ಮುಂದಾಗಿದೆ.

ಪ್ರಥಮ ಸಾಧನೆ
ಕೆಂಪು ಕುಬ್ಜ ನಕ್ಷತ್ರಗಳ ಸುತ್ತ ಪರಿಭ್ರಮಿಸುತ್ತಿರುವ ಆಕಾಶಕಾಯಗಳನ್ನು ಇದೇ ಪ್ರಥಮ ಬಾರಿಗೆ ನೇರವಾಗಿ ಅಧ್ಯಯನಕ್ಕೆ ಒಳಪಡಿಸಲಾಗಿದೆ. ಚಿಲಿಯಲ್ಲಿನ ಲಾ ಸಿಲ್ಲಾ ತಾರಾಲಯದಲ್ಲಿರುವ ೩.೬ ಮೀಟರ್ ಉದ್ದದ ದೂರದರ್ಶಕದ ಮೂಲಕ ಈ ಆಕಾಶಕಾಯಗಳ ಅಧ್ಯಯನ ನಡೆಸಲಾಗಿದೆ. ಕ್ಷೀರಪಥದಲ್ಲಿರುವ ಒಟ್ಟು ಕೆಂಪು ಕುಬ್ಜ ನಕ್ಷತ್ರಗಳ ಪೈಕಿ ಶೇ.೪೦ರಷ್ಟು ನಕ್ಷತ್ರಗಳ ಸುತ್ತ ಖಂಡಿತವಾಗಿಯೂ ಸೂಪರ್ ಅರ್ಥ್ ಪರಿಭ್ರಮಿಸುತ್ತಿದೆ. ಇಲ್ಲಿ ನೀರು ಜಲರೂಪದಲ್ಲಿಯೇ ಇದ್ದು, ಗ್ರಹದ ಮೇಲ್ಭಾಗದಲ್ಲಿಯೇ ಹರಿಯುತ್ತಿರುವ ಸಾಧ್ಯತೆಗಳು ನಿಚ್ಚಳವಾಗಿವೆ ಎನ್ನುತ್ತಾರೆ ಕ್ಸೇವಿಯರ್ ಬಾನ್‌ಫಿಲ್ಸ್. ನಮ್ಮ ಕ್ಷೀರಪಥದಲ್ಲಿ ೪೦೦ ಶತಕೋಟಿಗೂ ಅಧಿಕ ಸೂರ್ಯರು (ನಕ್ಷತ್ರಗಳು) ಇದ್ದಾರೆ. ಈ ಪೈಕಿ ಕನಿಷ್ಠವೆಂದರೂ ೧೬೦ ಶತಕೋಟಿ ಕೆಂಪು ಕುಬ್ಜ ನಕ್ಷತ್ರಗಳಿವೆ. ಈ ನಕ್ಷತ್ರಗಳ ಸುತ್ತ ಕನಿಷ್ಠ ಒಂದು ಸೂಪರ್ ಅರ್ಥ್ ಪರಿಭ್ರಮಿಸುತ್ತಿದ್ದರೂ ೧೬೦ ಶತಕೋಟಿ ಸೂಪರ್‌ಅರ್ಥ್‌ಗಳು ನಮ್ಮ ಕ್ಷೀರಪಥದಲ್ಲಿರಬೇಕು. ಅಥವಾ ಶೇ.೪೦ರಷ್ಟೇ ಕೆಂಪು ಕುಬ್ಜ ಸೂರ್ಯರು ಸೂಪರ್ ಅರ್ಥ್ ಹೊಂದಿರುವುದು ಎಂಬ ವಾದವನ್ನು ಪರಿಗಣಿಸಿದರೂ ೬೪ ಶತಕೋಟಿ ಸೂಪರ್ ಅರ್ಥ್‌ಗಳು ನಮ್ಮ ಕ್ಷೀರಪಥದಲ್ಲಿರಬೇಕು.

ಜೀವಾತ್ಮಗಳು ಸಿಡಿದು ಒಂದು ಪ್ರದೇಶಕ್ಕೆ ಬಂದು ಬೀಳುತ್ತವೆ. ಅಲ್ಲಿ ವಿಕಾಸ ಹೊಂದುತ್ತಾ ಜೀವಲೋಕದ ಏಳ್ಗೆಯಾಗುತ್ತದೆ ಎಂಬುದು ವೇದ, ಉಪನಿಷತ್ತುಗಳಲ್ಲಿ ಉಲ್ಲೇಖವಾಗಿರುವಂಥ ಅಂಶ. ಇಲ್ಲಿ ಸಿಡಿಯುವುದು ಎಂಬ ಶಬ್ದ ಸ್ವಲ್ಪ ವಿಶಾಲವಾದ ಅರ್ಥದಲ್ಲಿ ಪರಿಗಣಿಸುವುದು ಸೂಕ್ತವೆನಿಸುತ್ತದೆ. ಒಂದು ಕೋಣೆಯಲ್ಲಿ ೧೦ ಜನ ಉಳಿದುಕೊಳ್ಳುವುದಕ್ಕೆ ಸಾಧ್ಯವಿದೆ ಎಂದಾದರೆ, ಆ ಕೋಣೆಯಲ್ಲಿ ೧೨ ಜನರನ್ನು ತಾಳಿಕೊಳ್ಳಬಹುದು. ೧೫ ಜನ ಆ ಕೋಣೆಯೊಳಗೆ ನುಗ್ಗಿದರೆ? ಒಂದಷ್ಟು ಜನ ಹೊರ ಹೋಗಲೇಬೇಕಾಗುತ್ತದೆ. ಅದೇ ರೀತಿ ಭೂಮಿಯಲ್ಲಿ ಎಷ್ಟು ಸಾಧ್ಯವೋ ಅದಕ್ಕೂ ಅಧಿಕ ಜನರು ಈಗ ವಾಸಿಸುತ್ತಿದ್ದಾರೆ. ಇನ್ನಷ್ಟು ಜನ ಇಲ್ಲಿ ಉಳಿದುಕೊಳ್ಳುವುದಕ್ಕೆ ಸಾಧ್ಯವಾಗದೇ ಬೇರೆ ವಸಾಹತುಗಳನ್ನು ಹುಡುಕಿಕೊಂಡು ಹೊರಟರು ಎಂದಿಟ್ಟುಕೊಳ್ಳಿ. ಈ ವಲಸೆ ಏಕಮುಖವಾಗಿ ಮುಂದುವರೆದು, ಮುಂದೊಂದು ದಿನ ಯಾವ ಸ್ಥಳಕ್ಕೆ ವಲಸೆ ಹೋಗಿರುತ್ತೇವೆಯೋ ಅಲ್ಲಿಯೇ ಜೀವ ವಿಕಾಸ ಶುರುವಾಗಿರುತ್ತದೆ. ಈ ರೀತಿ ಕಿರಿದಾದ ಜಾಗವನ್ನು ಬಿಟ್ಟು ದೊಡ್ಡ ಜಾಗಕ್ಕೆ ಹೋಗುವುದು ಕೂಡಾ ಸಿಡಿಯುವಿಕೆಯ ಪ್ರಕ್ರಿಯೆಯೇ ಎಂದರೆ ಅತಿಶಯೋಕ್ತಿಯಾಗಲಾರದು ಎಂದುಕೊಳ್ಳುತ್ತೇನೆ.

ಮುಂದೇನಾದೀತು?
ನಮ್ಮ ಕ್ಷೀರಫಥದಲ್ಲಿ ಇಷ್ಟೊಂದು ಆಕಾಶಕಾಯಗಳು ವಾಸಯೋಗ್ಯ ಪರಿಸರವನ್ನು ಹೊಂದಿವೆ ಎಂದಾಗ ನಮ್ಮ ಕಣ್ಣು ಮಿನುಗುತ್ತದೆ. ಆದರೆ ಅವು ನಮ್ಮಿಂದ ಎಷ್ಟು ದೂರದಲ್ಲಿವೆ ಗೊತ್ತೇ? ನಮ್ಮ ಕ್ಷೀರಪಥದ ವ್ಯಾಸ ೧.೨ ಲಕ್ಷ ಜ್ಯೋತಿರ್ವರ್ಷಗಳು (ಒಂದು ಜ್ಯೋತಿರ್ವರ್ಷ ಎಂದರೆ ೯೪೫೪೨೫೪೯೫೫೪೮೮ ಕಿ.ಮೀ.ಗಳು), ದಪ್ಪ  ೧೦೦೦ ಜ್ಯೋತಿರ್ವರ್ಷಗಳು. ಹೀಗಿರುವಾಗ ಭೂಮಿಯಿಂದ ಈ ಎಲ್ಲ ಗ್ರಹಗಳಿಗೆ ಪ್ರಯಾಣಿಸುವುದು ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸಿದಷ್ಟು ಸುಲಭವಲ್ಲ. ಹಾಗಂತ ಇದು ಸಾಧ್ಯವೇ ಇಲ್ಲದ ಮಾತು ಎಂದು ತಳ್ಳಿ ಹಾಕಬೇಕಾಗಿಯೂ ಇಲ್ಲ.

ಇಷ್ಟಾಗಿಯೂ ಇಲ್ಲಿ ಹಲವು ಪ್ರಶ್ನೆಗಳು ಉದ್ಭವಿಸುತ್ತಿದೆ. ಇಷ್ಟೊಂದು ಆಕಾಶಕಾಯಗಳಲ್ಲಿ ಜೀವಾಸ್ತಿತ್ವವನ್ನು ಪೋಷಿಸುವ ವಾತಾವರಣ ಇದೆ ಎಂಬುದನ್ನು ಖಂಡಿತವಾಗಿಯೂ ಒಪ್ಪಿಕೊಳ್ಳಬಹುದು. ಹಾಗಿದ್ದರೆ ಇಲ್ಲಿ ಈಗಾಗಲೇ ಜೀವಾಸ್ತಿತ್ವ ಇದೆಯೇ? ಅಥವಾ ಭೂಮಿಯಲ್ಲಿರುವಂಥ ಜೀವಿಗಳು ಇಲ್ಲಿ ಹೋಗಿ ಜೀವಿಸುವುದಕ್ಕೆ ಸಾಧ್ಯವಿದೆಯೇ? ಅಥವಾ ಮುಂದೊಂದು ದಿನ ಈ ಸೂಪರ್ ಅರ್ಥ್‌ಗಳೇ ಜೀವಾಸ್ತಿತ್ವದ ತಾಣಗಳಾಗಿ ನಮ್ಮ ಈಗಿನ ಭೂಮಿ ಆಗ ಕೇವಲ ಸೂಪರ್ ಅರ್ಥ್ ಆಗಿ ಪರಿವರ್ತನೆಗೊಳ್ಳುತ್ತದೆಯೇ? ಕಾಲವೇ ಉತ್ತರ ಹೇಳಬೇಕು.

*************

2 ಟಿಪ್ಪಣಿಗಳು Post a comment
 1. ಏಪ್ರಿಲ್ 27 2012

  ಅಂದ್ರೆ .. ನಾವು ಬೆಳಕಿನ ವೇಗದಲ್ಲಿ ಚಲಿಸಿದರೂ , ಅಲ್ಲಿಗೆ ಹೋಗಿ ಸೇರಲಿಕ್ಕೆ 25 ವರ್ಷಗಳೇ ಬೇಕು… ಎಂಥ supersonic ಯಂತ್ರ ಕಂಡು ಹಿಡಿದರೂ ಕಡಿಮೆ ಅಂದ್ರೂ 70 ವರ್ಷ ಬೇಕು ಅಲ್ಲಿಗೆ ಹೋಗಿ ಸೇರೋಕೆ… ಇದು ಸಾದ್ಯ ಅಂತೀರ ಗುರು.. .? ಮನುಷ್ಯ ಎಷ್ಟೇ ಮುಂದುವರೆದರೂ .. ತೀರ ಪ್ರಕೃತಿಗೆ ವಿರುದ್ದ ಏನು ಮಾಡೋಕಾಗಲ್ಲ… ನನ್ನ ಅಭಿಪ್ರಾಯ ಅಂದ್ರೆ.. ಅಲ್ಲಿಗೆ ಹೋಗಿ ಸೇರುವಷ್ಟು ಶಕ್ತಿಯನ್ನು ದೇವರು ನಮಗೆ ಕೊಡೋದೇ ಬೇಡ.. atleast ಅಲ್ಲಿ ಯಾವಿದಾದ್ರು ಜೀವಿಗಳು ಇದ್ದರೆ, ಅವಾದ್ರು ಚೆನ್ನಾಗಿರಲಿ .. ಮನುಷ್ಯ ಅಲ್ಲಿಗೂ ಕಾಲಿಟ್ಟು ಹಾಳು ಮಾಡೋದೇನೂ ಬೇಡ… ಈ ನಮ್ಮ ಧರಿತ್ರಿ ಕೂಡ ಕ್ಷಮಿಸಲಾದದಂತ ತಪ್ಪುಗಳನ್ನ ನಾವು ಮಾಡ್ತಾನೆ ಇದೀವಿ.. ಇನ್ನು ಎರಡು ಮೂರು ಶತಮಾನಗಳಲ್ಲಿ , ಭೂಮಿ ಕೋಪ ತಡೆಯಲಾರದೆ ಬಾಯಿ ಬಿಡ್ತ್ಹಾಳೆ.. ಮುಗೀತು ಅಷ್ಟೇ. ಮುಂದೊಂದು ದಿನ ಬೇರೆ ಯಾವುದೋ ಜೀವರಾಶಿ ನಮ್ಮಷ್ಟೇ ಬುದ್ದಿವ೦ತರಾಗಿದ್ದಾರೆ, ನಮ್ಮ ಅವಶೇಶಕ್ಕೆ ಕಾರಣ ಹುಡುಕಿಯಾರು.. 🙂

  ಉತ್ತರ
  • ಏಪ್ರಿಲ್ 24 2015

   ನೀವು ತಪ್ಪು ತಿಳಿತುಕೊಂಡಿದ್ದೀರ. ಮುಂದಿನ ೫೦ ವರ್ಷಗಳಲ್ಲಿ ನೀವು ಊಹಿಸಲಾಗದಂತ ಅದ್ಬುತ ಆವಿಷ್ಕಾರಗಳು ಆಗಲಿವೆ. ಹಿಬರ್ನೇಶನ್ ತಂತ್ರಜ್ಞಾನ ಉಪಯೋಗಿಸಿ ಮನುಷ್ಯ ಶರೀರಗೆ ವಯಸಾಗದ ಹಾಗೆ ಮಾಡಬಹುದು. ವರ್ಮ್ ಹೋಲ್ಗಳನ್ನು ಉಪಯೋಗಿಸಿಕೊಂಡು ಕೆಲವೇ ನಿಮಿಷಗಳ ಒಳಗೆ ಈ ವಿಶ್ವದ ಬೇರೆ ಕಡೆ ಹೋಗಬಹುದು.

   ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments