ಕಾನೂನಿನಂಗಳ ೨ : ಸಂಸ್ಕೃತಿಯೇ ಪ್ರಾಚೀನ ಭಾರತೀಯ ಕಾನೂನು
– ಉಷಾ ಐನಕೈ ಶಿರಸಿ
ಮನುಷ್ಯ ಆದಿಯಲ್ಲಿ ಯಾವಾಗ ಸಾಂಘಿಕಜೀವನವನ್ನು ಪ್ರಾರಂಭಿಸಿದನೋ ಆಗಿನಿಂದಲೇ ಹಲವಾರು ಅವ್ಯಕ್ತವಾದ ಕಾನೂನುಗಳನ್ನು ಕಟ್ಟಿ ಕೊಳ್ಳುತ್ತಾಬಂದ. ಶಿಲಾಯುಗದ ಮನುಷ್ಯ ಒಬ್ಬನೇ ಬೇಟೆಯಾಡುವುದನ್ನು ನಿಲ್ಲಿಸಿ ಹಲವಾರು ಜನರೊಂದಿಗೆ ಪ್ರಾಣಿಗಳ ಬೇಟೆಗೆ ಹೋಗತೊಡಗಿದ. ಬೇಟೆಯಾಡಿ ಬಂದನಂತರ ತಾವು ಬೇಟೆ ಯಾಡಿದ ರೀತಿಯನ್ನು ಈ ಗುಂಪು ಅಭಿನಯದ ಮೂಲಕ ತೋರಿಸುವ ಪ್ರಯತ್ನ ನಡೆಯಿತು. ಇದೇ ಮುಂದೆ ವಿಧಿ, ಆಚರಣೆಯಾಗಿ ಖಾಯಂ ಗೊಂಡಿತು. ಈ ಸಂದರ್ಭದಲ್ಲಿ ವಿಧಿಯಾಚರಣೆಗಳಿಗೆ ಕೆಲವು ನಿಯಮಾವಳಿಗಳನ್ನು ಹೆಣೆದುಕೊಳ್ಳುತ್ತ ಬಂದರು. ಅದನ್ನೇ ಆ ಕಾಲದ ಕಾನೂನಿನ ಸ್ವರೂಪ ಎಂದು ಗುರುತಿಸಬಹುದು. ಮನುಷ್ಯ ಗುಂಪು ಕಟ್ಟಿ ಸಮಾಜಜೀವನ ನಡೆಸತೊಡಗಿದಾಗ ಗುಂಪು-ಗುಂಪುಗಳ ನಡುವೆ ಗುಂಪು ಹಾಗೂ ವ್ಯಕ್ತಿಯ ನಡುವಿನ ವ್ಯವಹಾರಕ್ಕೆ ಹಲವು ನಿಯಮಾವಳಿಗಳು ಹುಟ್ಟಿಕೊಂಡವು. ಇದನ್ನು ಕಾನೂನು ಎಂದು ಕರೆಯುತ್ತೇವೆ. ಹೀಗೆ ಮನುಷ್ಯ ನಾಗರಿಕತೆಯುದ್ದಕ್ಕೆ ಒಂದಲ್ಲಒಂದು ರೀತಿಯ ಕಾನೂನು ರೂಪಗೊಳ್ಳುತ್ತ ಪರಿವರ್ತನೆಯಾಗುತ್ತ ಸಮಾಜವನ್ನು ಸುಸ್ಥಿತಿಯಲ್ಲಿಟ್ಟುಕೊಂಡು ಬಂದದ್ದನ್ನು ನಾವು ಕಾಣುತ್ತೇವೆ.
ನಮ್ಮ ಭಾರತ ದೇಶದ ಮಟ್ಟಿಗೆ ನೋಡುವುದಾದರೆ ಇಲ್ಲೂ ಕೂಡ ಕಾನೂನಿನ ಇತಿಹಾಸ ಬಹು ದೀರ್ಘವಾಗಿದೆ. ಸಾವಿರಾರು ವರ್ಷಗಳ ಪರಂಪರೆಯನ್ನು ಹೊಂದಿದ ಭಾರತೀಯ ಸಂಸ್ಕೃತಿ ಇಡೀ ಜಗತ್ತಿನ ಗಮನ ಸೆಳೆದಿದೆ. ಸಮೃದ್ಧಿಯಿಂದ ಮರೆದಿದೆ. ಹೀಗಿದ್ದಾಗ ಈ ಸಂಸ್ಕೃತಿಯ ಜನ ನೆಮ್ಮದಿಯಿಂದ ಬಾಳಿ ಬದುಕಿ ಬಂದಿದ್ದಾರೆಂಬು ದಂತೂ ನಿಜ. ಅಂದರೆ ಅಂತಹ ಒಂದು ಸುಸಂಬದ್ಧವಾದ ವ್ಯವಸ್ಥೆ ಈ ಸಂಸ್ಕೃತಿಯಲ್ಲಿ ಇತ್ತು ಅಂತಾಯಿತು. ಅದು ಯಾವ ವ್ಯವಸ್ಥೆ? ಹೇಗೆ ನಡೆಯುತ್ತಿತ್ತು? ಯಾವ ಪ್ರೇರಣೆಯಿಂದ ಹಾಗೂ ಹಿನ್ನೆಲೆಯಿಂದ ನಡೆಯುತ್ತಿತ್ತು ಎಂಬಿವೇ ಮುಂತಾದ ಪ್ರಶ್ನೆಗಳು ಎದುರಾಗುತ್ತವೆ. ಇದಕ್ಕೆಲ್ಲ ಒಂದೇ ಒಂದು ಸರಳವಾದ ಉತ್ತರ ಎಂದರೆ ‘ಪ್ರಾಚೀನ ಭಾರತದ ಕಾನೂನುಗಳು’.
ಪ್ರಾಚೀನ ಭಾರತದ ಕಾನೂನುಗಳನ್ನು ಆಧುನಿಕ ಭಾರತದ ಕಾನೂನುಗಳ ಪರಿಭಾಷೆ ಯಲ್ಲಿ ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ನಿರ್ಧಿಷ್ಟವಾಗಿ ಇಂಥವುಗಳೇ ಪ್ರಾಚೀನ ಭಾರತದ ಕಾನೂನುಗಳು ಎಂದು ಗುರುತಿಸುವುದು ಕಷ್ಟವಾಗಬಹುದು. ಆದರೂ ನಮ್ಮ ಗತಪುರಾಣ ಹಾಗೂ ಇತಿಹಾಸಗಳ ಮೂಲಕ ಅಧ್ಯಯನ ನಡೆಸಿದಾಗ ಪ್ರಾಚೀನ ಭಾರತದ ಸಮಾಜವನ್ನು ಹಾಗೂ ಜನಜೀವನವನ್ನು ನಿಯಂತ್ರಿಸುತ್ತಿದ್ದ ಕೆಲವು ಸಂಗತಿಗಳು ಕಂಡುಬರುತ್ತವೆ. ಈ ಸಂಗತಿಗಳೇ ಅಂದಿನ ಕಾನೂನು ಅಥವಾ ಕಾನೂನಿನ ಆಕರಗಳಾಗಿದ್ದವು. ವೇದಗಳು, ಧರ್ಮದ ಕಲ್ಪನೆ, ಸ್ಮೃತಿಗಳು, ಉಪನಿಷತ್ಗಳು, ಸ್ಥಾನಿಕ ಸಂಪ್ರದಾಯಗಳು ಮುಂತಾದವುಗಳೇ ಪ್ರಾಚೀನ ಭಾರತದ ಕಾನೂನುಗಳಾಗಿದ್ದವು.
ವೇದಗಳ ಕುರಿತಾಗಿ ಸಾಕಷ್ಟು ಸಾಹಿತ್ಯಗಳು ನಮ್ಮ ಸಂಸ್ಕೃತಿಯಲ್ಲಿ ಲಭ್ಯವಿದೆ. ವೇದಗಳನ್ನು ದೇವರವರದಾನ ಎಂದೂ ನಂಬಿದ್ದರು. ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣವೇದ ಹೀಗೆ ನಾಲ್ಕು ವೇದಗಳು ಆಯಾ ಸಮುದಾಯಕ್ಕೆ ಮೌಲ್ಯಗಳನ್ನು ಒದಗಿಸುವ ಆಕರಗಳಾಗಿ ಕಾನೂನಿನ ಸ್ವರೂಪವನ್ನೇ ಹೊಂದಿದ್ದವು. ಆಯಾ ವೇದಗಳನ್ನು ಅನುಸರಿಸುವ ಗುಂಪುಗಳು ಆಯಾ ವೇದಗಳಿಂದ ತಮ್ಮ ಬದುಕಿನ ನಿಯಂತ್ರಣವನ್ನು ಸಾಧಿಸುತ್ತಿದ್ದರು. ಬದುಕಿನ ನೀತಿ ನಿಯಮಗಳು ಸಾಧಕ-ಭಾದಕಗಳು, ಸದ್ವಿವೇಕಗಳು ಹಾಗೂ ಉನ್ನತ ಮೌಲ್ಯಗಳೆಲ್ಲ ಈ ವೇದಗಳ ಚೌಕಟ್ಟಿನಲ್ಲೇ ಅರಳುತ್ತಿದ್ದವು. ಹಾಗಾಗಿ ಆ ಸಮಾಜಕ್ಕೆ ವೇದಗಳೇ ಕಾನೂನುಗಳಾಗಿದ್ದವು. ಮುಂದೆ ಆಧುನಿಕ ಹಿಂದೂ ಕಾನೂನಿನ ರಚನೆಯಲ್ಲಿ ವೇದಗಳ ಹಲವಾರು ಅಂಶಗಳನ್ನು ಆಧಾರವಾಗಿ ತೆಗೆದುಕೊಂಡಿದ್ದನ್ನು ಕಾಣುತ್ತೇವೆ.
ಪುರಾತನ ಸ್ಮೃತಿಗಳೂ ಕೂಡ ಪ್ರಾಚೀನ ಕಾನೂನುಗಳೇ. ಉದಾಹರಣೆಗೆ ಮನುಸ್ಮೃತಿ ಯನ್ನು ನಮ್ಮ ಪುರಾತನ ಭಾರತದ ಕಾನೂನು ಎಂದೇ ಭಾವಿಸುತ್ತಾರೆ. ಮನುಸ್ಮೃತಿ ಆ ಕಾಲದ ಕಾನೂನು ಅಲ್ಲ, ಅದೊಂದು ಸಾಮಾಜಿಕ ವರದಿ ಎನ್ನುವ ಕುರಿತು ಚಿಂತಕರಲ್ಲಿ ಭಿನ್ನಾಭಿ ಪ್ರಾಯಗಳಿವೆ. ಆದಾಗ್ಯೂ ಮನುಸ್ಮೃತಿಯಲ್ಲಿ ನಾವು ಆ ಕಾಲದಲ್ಲಿ ಬಳಕೆಯಲ್ಲಿದ್ದ ಕಾನೂನುಗಳ ಸ್ವರೂಪವನ್ನು ಕಾಣಬಹುದು. ಇದೂ ಕೂಡ ಆಧುನಿಕ ಕಾನೂನಿಗೆ ಆಧಾರವಾಗಿದೆ.
ಇನ್ನು ಎಲ್ಲರಿಗೂ ಗೊತ್ತಿರುವ ಸಂಗತಿ ಎಂದರೆ ಧರ್ಮ. ಧರ್ಮಕ್ಕೆ ಯಾವ ಪರ್ಯಾಯ ಪದವೂ ಇಲ್ಲ. ಧರ್ಮ ಅಂದರೆ ಕಾನೂನು, ಧರ್ಮ ಅಂದರೆ ಜೀವನ ಮೌಲ್ಯ, ಧರ್ಮ ಅಂದರೆ ಮನುಷ್ಯತ್ವ ಹೀಗೆ ಧರ್ಮವನ್ನು ಸರ್ವ ರೀತಿಯಲ್ಲೂ ವ್ಯಾಖ್ಯಾನಿಸಬಹುದು. ಅಂದಿನ ರಾಜಕೀಯ ವ್ಯವಸ್ಥೆ ಕೂಡ ಒಂದು ಧರ್ಮ ಆಗಿತ್ತು. ‘ಧರ್ಮೇಣ ಧಾರ್ಯತೆ ಲೋಕಃ ಸುಖಸ್ಯ ಮೂಲಂ ಧಮಃ ಧರ್ಮಸ್ಯ ಮೂಲಂ ಅರ್ಥಂ ಅಥ್ಯಸ್ಯ ರಾಜ್ಯಂ’. ಭಾರತೀಯರಿಗೆ ಧರ್ಮ ಬೇರೆ ರಾಜಕೀಯ ಬೇರೆ ಆಗಿರಲಿಲ್ಲ. ಜೀವನದ ಪ್ರತಿ ರಂಗದಲ್ಲಿ ಧರ್ಮ ಹಾಸುಹೊಕ್ಕಾಗಿತ್ತು. ಈ ಧರ್ಮದೊಳಗೇ ಮನುಷ್ಯ ಅನುಸರಿಸಬೇಕಾದ ಪಾಠ ಇದೆ. ಮನುಷ್ಯ ಅವಶ್ಯವಾಗಿ ಮಾಡಲೇಬೇಕಾದ ಕರ್ತವ್ಯವನ್ನು ಧರ್ಮದಲ್ಲಿ ‘ವಿಧಿ’ ಎಂದು ಕರೆಯಲಾಗುತ್ತದೆ. ಮನುಷ್ಯ ಅವಶ್ಯವಾಗಿ ಮಾಡಲೇಬಾರದ ಕೆಲಸವನ್ನು ‘ನಿಷೇಧ’ ಎಂದು ವರ್ಣಿಸಲಾಗಿದೆ. ಇವೆರಡರ ಹೊರತಾಗಿಯೂ ‘ಆಪದ್ಧರ್ಮ’ ಎಂಬುದೊಂದಿದೆ. ಅನಿವಾರ್ಯ ಸಂದರ್ಭದಲ್ಲಿ ಪರಿಸ್ಥಿತಿಯ ಒಳಿತಿಗಾಗಿ ಮನುಷ್ಯ ತೆಗೆದುಕೊಳ್ಳ ಬಹುದಾದ ನಿರ್ಣಯವೇ ಆಪದ್ಧರ್ಮ. ಈ ಮೂರು ಅಂಶಗಳು ಜಗತ್ತಿನ ಯಾವುದೇ ಕಾನೂನಿ ನಲ್ಲಿಲ್ಲದ ಬಹುತ್ವವನ್ನು ಹೊಂದಿದೆ ಎಂದರೆ ಅತಿಶಯೋಕ್ತಿ ಅಲ್ಲ. ನಮ್ಮ ಆಧ್ಯಾತ್ಮಗಳ ಹುಟ್ಟಿಗೆ ಕಾರಣವಾದದ್ದೇ ಧರ್ಮ. ನೆಮ್ಮದಿಯ ಇನ್ನೊಂದು ಮಾರ್ಗವೇ ಆಧ್ಯಾತ್ಮ. ಹಾಗಾಗಿ ಧರ್ಮದಲ್ಲಿ ಆಧ್ಯಾತ್ಮ ಇದೆ. ನೆಮ್ಮದಿ ಇದೆ, ಆತ್ಮ ನಿಯಂತ್ರಣ ಇದೆ. ಇದೊಂದು ರೀತಿಯ ನೈಸರ್ಗಿಕ ಕಾನೂನು ಇದ್ದಂತೆ.
ಮನುಸ್ಮೃತಿ, ಪರಾಶರ ಸ್ಮೃತಿ, ಯಾಜ್ಞವಲ್ಕ್ಯ ಸ್ಮೃತಿ, ಉಪ ನಿಷತ್ತುಗಳೆಲ್ಲವೂ ಕೂಡ ಧರ್ಮವನ್ನಾಧರಿಸಿದ ಕಾನೂನು ಗ್ರಂಥಗಳೆಂದೇ ಪರಿಗಣಿಸಲ್ಪಟ್ಟಿದ್ದವು. ಇವು ಸಮಾಜ ಜೀವನಕ್ಕೆ ಒಂದು ನಿಯಮಗಳನ್ನು ನೀಡಿ ಚೌಕಟ್ಟಿನಲ್ಲಿ ಬದುಕಲು ಸಹಾಯಕವಾಗಿದ್ದವು.
ಮೇಲಿನ ಎಲ್ಲವುಗಳೂ ಭಾರತೀಯ ಸಂಸ್ಕೃತಿಯಲ್ಲಿ ರೂಢಿ ಹಾಗೂ ಪದ್ಧತಿಗಳ ಮೂಲಕ ಹರಿದು ಬಂದು ‘ಸಂಪ್ರದಾಯ’ ಎನಿಸಿಕೊಂಡಿತು. ಆದ್ದರಿಂದ ಸಂಪ್ರದಾಯ ಹಾಗೂ ಪದ್ಧತಿಗಳನ್ನು ಒಂದು ಕಾನೂನು ಎಂದೇ ಕರೆಯಲಾಗುತ್ತದೆ. ಈ ಸಂಪ್ರ ದಾಯಗಳು ನಿಯಮಗಳನ್ನು ರೂಪಿಸುತ್ತವೆ. ಕಾಲಕ್ಕೆ ತಕ್ಕಹಾಗೆ ನಿಯಮಗಳನ್ನು ಪರಿವರ್ತಿಸುತ್ತವೆ ಹಾಗೂ ಅಗತ್ಯ ಇದ್ದಾಗ ಹೊಸ ಹೊಸ ನಿಯಮಗಳನ್ನು ತನ್ನೊಳಗೆ ಸೇರ್ಪಡೆ ಮಾಡಿಕೊಳ್ಳುತ್ತದೆ. ನ್ಯಾಯಶಾಸ್ತ್ರ ಪಂಡಿತ ಹಾಲಂಡರ ಪ್ರಕಾರ ‘ಸಂಪ್ರದಾಯ ಒಂದು ನಡವಳಿಕೆಯ ಮಾರ್ಗ, ಇದನ್ನು ಸಾಧಾರಣವಾಗಿ ಆಚರಿಸ ಲಾಗುತ್ತದೆ’. ಸಂಪ್ರದಾಯದ ಸ್ವರೂಪವೇ ಹಾಗೆ. ಅದನ್ನು ಆಚರಿಸಲೇಬೇಕೆಂಬ ಒತ್ತಡವಿಲ್ಲ. ಆದರೂ ಮನುಷ್ಯರು ಕಡ್ಡಾಯವಾಗಿ ಆಚರಿಸುತ್ತಾರೆ. ಇದೇ ಸಂಪ್ರದಾಯದ ಸತ್ವ. ಇದೊಂದು ಅಲಿಖಿತ ಕಾನೂನು.
ಆಧುನಿಕ ಕಾನೂನುಗಳನ್ನ ರಚಿಸುವಾಗ ಸಂಪ್ರದಾಯ ಮತ್ತು ಪದ್ಧತಿಗಳನ್ನು ಆಕರಗಳನ್ನಾಗಿ ಬಳಸಿಕೊಂಡಿದ್ದಾರೆ. ಏಕೆಂದರೆ ಸಂಪ್ರದಾಯಗಳಲ್ಲಿ ಸಾವಿರಾರು ವರ್ಷಗಳ ಜನಜೀವನದ ಪ್ರಾಯೋಗಿಕ ಅನುಭವಗಳಿವೆ. ಅಂದಿನಿಂದಲೂ ಈ ಸಂಪ್ರ ದಾಯಗಳು ಸಮಾಜವನ್ನು ಸುವ್ಯವಸ್ಥೆಯಲ್ಲಿ ನಡೆಸಿಕೊಂಡು ಬಂದಿವೆ. ಆಧುನಿಕ ಯುಗದಲ್ಲಿ ಸಂಪ್ರದಾಯದ ಅತಿಯಾದ ಆಚರಣೆ ಮೌಢ್ಯವೆಂದೆನಿಸಿಕೊಂಡರೂ ಕೂಡ ಭಾರತೀಯ ಸಮಾಜದ ತಳಪಾಯವೇ ಈ ಸಂಪ್ರದಾಯಗಳು. ಹಿಂದೂ ವಿವಾಹ ಅಧಿನಿಯಮ, ದತ್ತಕ ಅಧಿನಿಯಮ, ವಾರಸಾಕಾನೂನು ಮುಂತಾದವುಗಳೆಲ್ಲ ಸಂಪ್ರದಾಯ, ರೂಢಿ ಪದ್ಧತಿಗಳನ್ನು ಅನುಸರಿಸಿಯೇ ರಚಿಸಿರುವಂಥದ್ದು.
ಭಾರತದಲ್ಲಿ ಬ್ರಿಟಿಶ್ ವಸಾಹತುಶಾಹಿ ಬರುವುದಕ್ಕಿಂತ ಪೂರ್ವದಲ್ಲಿ ಧರ್ಮ, ವೇದಗಳು, ಸ್ಮೃತಿಗಳು, ಸಂಪ್ರದಾಯಗಳು ಇವೆಲ್ಲವನ್ನೂ ಕ್ರೋಢೀಕರಿಸಿ ನ್ಯಾಯ ತಿರ್ಮಾನಗಳು ನಡೆಯುತ್ತಿದ್ದವು. ಇವುಗಳ ಆಧಾರದ ಮೇಲೆ ಪ್ರಭುತ್ವ ನ್ಯಾಯ ಯುತವಾಗಿ ರಾಜ್ಯಭಾರ ಮಾಡಿಕೊಂಡು ಹೋಗುತ್ತಿತ್ತು. ರಾಜ ಕೂಡ ಇಂಥ ಕಾನೂನಿಗಿಂತ ಹೆಚ್ಚಿನವನಾಗಿರಲಿಲ್ಲ. ಕಾನೂನಿನಿಂದ ಸುವ್ಯವಸ್ಥಿತವಾಗಿ, ನ್ಯಾಯಯುತ ವಾಗಿರುವ ರಾಜ್ಯ ಬಹು ಶಕ್ತಿಶಾಲಿಯಾದದ್ದು. ಕಾನೂನಿಗಿಂತ ಬಲಶಾಲಿ ಮತ್ತೊಂದಿಲ್ಲ. ಯಾಕೆಂದರೆ ಅತೀ ಕ್ಷುದ್ರನಾದವನೂ ಕೂಡ ಚಕ್ರವರ್ತಿಯ ಸಹಾಯದಿಂದ ‘ಅತೀ ಬಲಾಢ್ಯನನ್ನೂ ಸದೆ ಬಡಿಯಬಹುದು’ ಎಂದು ಶತಪಥ ಬ್ರಾಹ್ಮಣದಲ್ಲಿ ವರ್ಣಿಸಲಾಗಿದೆ.
ಹೀಗೆ ಪ್ರಾಚೀನ ಭಾರತದ ಕಾನೂನುಗಳು ಪ್ರತ್ಯಕ್ಷ ಹಾಗೂ ಪರೋಕ್ಷ ಮತ್ತು ಲಿಖಿತ ಹಾಗೂ ಅಲಿಖಿತ ಸ್ವರೂಪದ್ದಾದ್ದರಿಂದ ಯಾವುದೇಒಂದು ನಿರ್ಧಿಷ್ಟ ಚೌಕಟ್ಟಿನಲ್ಲಿ ವಿವರಿಸುವುದುಕಷ್ಟಸಾಧ್ಯವಾಗುತ್ತದೆ.
********
ಸಂಪ್ರದಾಯಗಳಲ್ಲಿ ಸಾವಿರಾರು ವರ್ಷಗಳ ಜನಜೀವನದ ಪ್ರಾಯೋಗಿಕ ಅನುಭವಗಳಿವೆ. ಎಂದಿದ್ದೀರಿ. ಸಂಪ್ರದಾಯಗಳು ಮಾನವೀಯ ನೆಲೆಯಲ್ಲೇ ಗಟ್ಟಿಗೊಂಡಿರಬೇಕೆಂದೇನೂ ಇಲ್ಲ. ಮನುಷ್ಯರಲ್ಲೇ ಪರಸ್ಪರ ಭೇದಬಾವ ಹುಟ್ಟು ಹಾಕಿದ್ದನ್ನು ವೇದ, ಉಪನಿಷತ್ತು ಮತ್ತು ಸ್ಮೃತಿಗಳಲ್ಲಿ ಬೇಕಾದಷ್ಟು ಕಾಣುತ್ತೇವೆ. ಹಾಗೆಯೇ ವರ್ತಮಾನದಲ್ಲಿ ನಾವು ಬದುಕುತ್ತಿರುವ ವಿಧಾನಗಳು ಭವಿಷ್ಯದಲ್ಲಿ ಸಂಪ್ರದಾಯಗಳಾಗಿ ಮಾರ್ಪಟ್ಟರೆ, ಅವುಗಳು ಅನುಸರಿಸಲು ಸರ್ವತಾ ಯೋಗ್ಯವಾಗಿರುತ್ತವೆಯೇ? ಸಂಸ್ಕೃತಿಯಿಂದ ಪಡೆದು, ಆಧುನಿಕತೆಯೊಂದಿಗೆ ಅಳೆದು ತೂಗಿ ಬದುಕುತ್ತಿದ್ದರೂ ಮಾನವ ಮೃಗಸ್ವರೂಪಿಯಾಗಿದ್ದಾನೆ. ಹಾಗಾಗಿ ಹಿಂದಿನ ಹಳಹಳಿಕೆಯಾಗಲೀ ಮುಂದಿನ ಭ್ರಮೆಗಳಾಗಲೀ ಇದಮಿತ್ತಂ ಎಂದು ಮಾದರಿಯಾಗಲಾರವು. ಆ ಕ್ಷಣದ ಸತ್ಯವಷ್ಟೇ ನಿಜ ಮತ್ತು ನ್ಯಾಯ. ನಾವು ಮತ್ತೆ ಮತ್ತೆ ವೇದ, ಉಪನಿಷತ್ತುಗಳ ಸ್ಮಶಾನ ಕೆದಕುವುದರಿಂದ ಪ್ರಯೋಜನವಿಲ್ಲ. ಭವಿಷ್ಯಕ್ಕೆ ಸ್ಮಶಾನ ಕಟ್ಟಿಕೊಳ್ಳದಂತೆ (ಕಾಂಕ್ರೀಟ್ ಕಾಡು?) ವರ್ತಮಾನದಲ್ಲಿ ವಿವೇಕ ತೋರಿಸುವುದರಲ್ಲಿ ಎಲ್ಲವೂ ಅಡಕವಾಗಿದೆ. ಏನೆಲ್ಲಾ ಅಧಿನಿಯಮಗಳಿಗೆ ಈ ವಿವೇಕ ಮಾನದಂಡವಾಗುವುದಾದರೆ ನಾವು ಹಿಂದೆ-ಮುಂದೆ ಹುಡುಕಾಡಬೇಕಾಗಿಲ್ಲ. ಆ ವಿವೇಕ ನಮ್ಮೊಳಗಿನಿಂದಷ್ಟೇ ಬರಲು ಸಾಧ್ಯವಿರುವ ಅಪರೂಪದ ವಿದ್ಯಮಾನ.
-ಟಿ.ಎಂ.ಕೃಷ್ಣ