’ಸತ್ಯ ಮೇವ ಜಯತೇ’ ಅನ್ನಲು ಕನ್ನಡಿಗರು ಅಪ್ಪಣೆ ಪಡೆಯಬೇಕಾ?
– ರಾಕೇಶ್ ಶೆಟ್ಟಿ
ಕಳೆದ ವರ್ಷ ‘ಕನ್ನಡ ಚಲನ ಚಿತ್ರ ಅಕಾಡೆಮಿ’ಯು ಬಿಡುಗಡೆ ಮಾಡಿದ್ದ ವರದಿ ಡಬ್ಬಿಂಗ್ ಪರವಾಗಿತ್ತು.ಆ ವರದಿ ಬಿಡುಗಡೆಯಾದ ತಕ್ಷಣ ಚಿತ್ರರಂಗದ ಬಹುತೇಕ ಮಂದಿ ನಾಗಾಭರಣರ ಮೇಲೆ ಮುಗಿಬಿದ್ದರು.ಕಡೆಗೆ ಅವ್ರು ವರದಿಯನ್ನ ಹಿಂಪಡೆದರು.ಇಲ್ಲಿ ನಷ್ಟ ಆಗಿದ್ದು ಯಾರಿಗೆ? ಕನ್ನಡ ಚಿತ್ರ ರಂಗಕ್ಕಾ? ಅಲ್ಲ … ಕನ್ನಡ ಪ್ರೇಕ್ಷಕನಿಗೆ.
ಇಷ್ಟಕ್ಕೂ, ಡಬ್ಬಿಂಗ್ ಬೇಕೋ ಬೇಡವೋ ಅಂತ ನಿರ್ಧರಿಸಬೇಕಾದವನು “ಕನ್ನಡ ಪ್ರೇಕ್ಷಕನೋ?” ಇಲ್ಲ “ಕನ್ನಡ ಚಿತ್ರ ರಂಗವೋ?”
ಡಬ್ಬಿಂಗ್ ಯಾಕೆ ಬೇಡ ಅಂದ್ರೆ, ಅದರಿಂದ ಕನ್ನಡದ ಮಕ್ಕಳಿಗೆ ಕೆಲಸವಿರೋದಿಲ್ಲ ಅಂತ ಹಳೆ ಕತೆ ಹೇಳ್ತಾ ಇದ್ದಾರೆ.ಈಗ ಬರ್ತಾ ಇರೋ ಅದಿನ್ನೆಷ್ಟು ಚಿತ್ರಗಳಲ್ಲಿ ಕನ್ನಡದ ಕಲಾವಿದರು,ತಂತ್ರಜ್ಞರು,ನಟಿಯರು,ಪೋಷಕ ನಟರು,ಖಳನಟರು,ಸಂಗೀತ ನಿರ್ದೇಶಕರು,ಗಾಯಕ-ಗಾಯಕಿಯರಿಗೆ ಕೆಲ್ಸ ಇದೆ?,ಎಲ್ಲದಕ್ಕೂ ಬೇರೆ ಭಾಷೆಯವರೇ ಬೇಕು.ಆಗ ಮಾತ್ರ ಯಾರು ಕನ್ನಡ ಮಕ್ಕಳಿಗೆ ಅನ್ಯಾಯವಾಗ್ತಾ ಇದೆ ಅಂತ ಉಸಿರೆತ್ತುವುದಿಲ್ಲ. ಭಾಷೆಯ ಉಚ್ಚಾರಣೆ ಬರದೆ ಇದ್ರೂ ನಮಗೆ ಬಾಲಿವುಡ್ ಗಾಯಕರು ಬಂದು ಉಸಿರು ಕಟ್ಟಿ ಹಾಡ್ಬೇಕು,ಬಾಯಿ ಅಲ್ಲಾಡಿಸಲು ಬರದ ಖಳ ನಟರು ಅಲ್ಲಿಂದಲೇ ಬರಬೇಕು.ಒಟ್ಟಿನಲ್ಲಿ ಬೇರೆ ಕಡೆಯಿಂದ ಜನ ಆಮದಾದಷ್ಟು ಚಿತ್ರ ಅದ್ದೂರಿ ಅನ್ನೋ ಭ್ರಮೆ! ಈಗಲೂ ಕನ್ನಡದ ಮಕ್ಕಳಿಗೆ ಆಗುತ್ತಿರುವುದು ಅನ್ಯಾಯವೇ ಅಲ್ಲವೆ?
ಇಷ್ಟಕ್ಕೂ ಡಬ್ಬಿಂಗ್ಗೆ ಅವಕಾಶ ಕೊಟ್ರೆ ಎಲ್ರೂ ಅದೇ ಮಾಡ್ತಾರೆ ಅನ್ನೋ ಅತಂಕವಿದ್ದರೆ,ಅದಕ್ಕಾಗಿ ಕೆಲ ನೀತಿ ನಿಯಮಗಳನ್ನ ಮಾಡಿಕೊಳ್ಳಬಹುದು. ಡಬ್ಬಿಂಗ್ ಮಾಡುವ ಹಕ್ಕನ್ನ ಮುಕ್ತವಾಗಿಡದೆ ‘ವಾಣಿಜ್ಯ ಮಂಡಳಿ’ ಯೇ ಆಯ್ದ ಚಿತ್ರಗಳನ್ನ ಡಬ್ಬಿಂಗ್ ಮಾಡಿ ಬಿಡುಗಡೆ ಮಾಡಬಹುದು.ಹಾಗೆ ಡಬ್ಬಿಂಗ್ ಮಾಡಿದ ಸಿನೆಮಾಗಳಲ್ಲಿ ನಮ್ಮ ನೇಟಿವಿಟಿ ಇಲ್ಲ ಅಂದ್ರೆ ಅವು ಗೆಲ್ಲೋದು ಅಷ್ಟರಲ್ಲೇ ಇದೆ,ಅದರಿಂದ ಯಾವ ಅಪಾಯವು ಇಲ್ಲ. ವಿಷಯ ಹೀಗಿರುವಾಗ ಇನ್ನು ಆಗಿನ ಕಾಲದ ಕತೆಯನ್ನೇ ಹೇಳಿ ಕನ್ನಡ ಪ್ರೇಕ್ಷಕರಿಗೆ ಒಳ್ಳೊಳ್ಳೆ ಚಿತ್ರವನ್ನ ನಮ್ಮ ಭಾಷೆಯಲ್ಲಿ ನೋಡದಂತೆ ಚಿತ್ರ ರಂಗದ ಕೆಲವರು ಯಾಕೆ ಮಾಡುತಿದ್ದಾರೆ!?, ಹಾಗೆ ಡಬ್ಬಿಂಗ್ನಿಂದ ಮುಳುಗಿ ಹೋಗುವಷ್ಟು ‘ಕನ್ನಡ ಚಿತ್ರ ರಂಗ’ ದುರ್ಬಲವಾಗಿಲ್ಲ.೭೫ ವರ್ಷದ ಇತಿಹಾಸವಿರುವ ಚಿತ್ರ ರಂಗದ ಮಾರುಕಟ್ಟೆ ವ್ಯಾಪ್ತಿ ಚಿಕ್ಕದು ಅಂತ ಇನ್ನ ಎಷ್ಟು ದಿನ ಹೆದರ್ತಿರ ಸ್ವಾಮೀ?
ಈಗಾಗಲೇ ಡಬ್ಬಿಂಗ್ ಪರವಾಗಿ ಹಲವಾರು ಜನ ಪತ್ರಿಕೆಗಳಿಗೆ ಬರೆಯುತ್ತಲೇ ಇದ್ದಾರೆ.ಆದ್ರೆ ವಿರೋಧಿಸುವ ಜನರು ಯಾಕೆ ಸಮರ್ಪಕ ಉತ್ತರ ನೀಡುತ್ತಿಲ್ಲ? ಅಣ್ಣಾವ್ರ ಸಮಾಧಿಯ ಮುಂದೆ ನಿಂತು ಶಿವರಾಜ್ “ಅಪ್ಪಾಜಿ ಡಬ್ಬಿಂಗ್ ವಿರೋಧಿಯಾಗಿದ್ದರು. ಅವರ ಆಶಯಕ್ಕೆ ವಿರುದ್ಧವಾಗಿ ಯಾರೇ ನಡೆದುಕೊಂಡರೂ ಸುಮ್ಮನಿರುವುದಿಲ್ಲ,ಜೀವ ಹೋಗುವವರೆಗೂ ಹೋರಾಟಕ್ಕೆ ಸಿದ್ದ” ಅನ್ನುವಂತ ಮಾತುಗಳನ್ನಾಡಿದ್ದಾರೆ? ಈ ಹೋರಾಟ ಯಾರ ವಿರುದ್ಧ ಅಣ್ಣಾವ್ರ ಅಭಿಮಾನಿ ದೇವರುಗಳ ವಿರುದ್ಧವಾ? ಹೀಗೆಲ್ಲ ಹೆದರಿಸಿ ಸುಮ್ಮನಾಗಿಸುವ ಕಾಲ ಇದಲ್ಲ.ನಮ್ಮ ಹಕ್ಕಿನ ಬಗ್ಗೆ ದನಿಯೆತ್ತಲು ಅಂಜಿಕೆಯೂ ನಮಗಿಲ್ಲ.
ಅಮೀರ್ ಖಾನ್ ಅವರ “ಸತ್ಯ ಮೇವ ಜಯತೇ” ಕನ್ನಡಕ್ಕೆ ಬರಲು ಅಡ್ಡಗಾಲು ಹಾಕುತ್ತಿರುವ ಈ ಮಂದಿಗೆ ಅಂತ ಒಂದು ಕಾರ್ಯಕ್ರಮ ಮಾಡೂವ ಮನಸ್ಸು,ಇಚ್ಚಾಶಕ್ತಿ ಇದೆಯಾ? ಅಲ್ಲಾ ಸ್ವಾಮಿ ಇವರೂ ಮಾಡುವುದಿಲ್ಲ ನಮಗೂ ನಮ್ಮ ಭಾಷೆಯಲ್ಲಿ ಅಂತ ಜನಪರ ಕಾರ್ಯಕ್ರಮ ನೋಡಲು ಬಿಡುವುದಿಲ್ಲ ಅನ್ನಲು ಇವರ್ಯಾರು?
ಇವತ್ತಿಗೆ ಕರ್ನಾಟಕದಲ್ಲಿ ಹಿಂದಿ ವ್ಯಾಪಕವಾಗಿ ಹರಡಿಕೊಂಡಿದೆಯೆಂದರೆ ಅದಕ್ಕೆ ಕಾರಣ ’ರಾಮಾಯಣ,ಮಹಾಭಾರತ’ದಂತ ಧಾರಾವಾಹಿಗಳನ್ನ ಕನ್ನಡಕ್ಕೆ ತರಲು ಅಡ್ಡಗಾಲಕ್ಕಿದ್ದರಿಂದ ಅನ್ನುವುದು ನೆನಪಿರಲಿ.
ಹೌದು..! ಸತ್ಯ ಮೇವ ಜಯತೇ ಬಂದರೆ ಕನ್ನಡ ಕಿರುತೆರೆ ಕಲಾವಿದರ ಅನ್ನಕ್ಕೆ ಕುತ್ತು ಬರುವುದು ಹೇಗೆ? ಹಿಂದಿಯ ಸಾಸ್-ಬಹೂ ಧಾರಾವಹಿಗಳನ್ನೆಲ್ಲ ಡಬ್ಬಿಂಗ್ ಮಾಡಿ ಅಂತ ಯಾರು ಕೇಳುತ್ತಿಲ್ಲ ಮಾಡಿದರೆ ಅದನ್ನ ಯಾರೂ ನೋಡುವುದೂ ಇಲ್ಲ. ನಮಗೆ ಬೇಕಿರುವುದು ಕನ್ನಡದ ಸೀಮಿತ ಮಾರುಕಟ್ಟೆಗೆ ನಿಲುಕದ ಕಾರ್ಯಕ್ರಮಗಳು-ಸಿನೆಮಾಗಳು.
ಡಬ್ಬಿಂಗ್ ಮಾಡಿದರೆ ಆಗುವ ಲಾಭಗಳಾದರು ಏನು ನೋಡೋಣ.
೧. ಕನ್ನಡದ ಕಂಠ ದಾನ ಕಲಾವಿದರಿಗೆ,ಕೆಲ ತಂತ್ರಜ್ಞರಿಗೆ,ಚಿತ್ರ ಮಂದಿರದವರಿಗೆ ಕೆಲ್ಸ ಸಿಗುತ್ತದೆ.
೨. ಬೇರೆ ಭಾಷೆಯಲ್ಲಿ ಹಿಟ್ ಆದ ಚಿತ್ರ ೩-೪ ವರ್ಷ ಬಿಟ್ಟು ಇಲ್ಲಿ ರಿಮೇಕ್ ಮಾಡಿ ಹೊಸತರಂತೆ ತೋರಿಸುವದು ನಿಲ್ಲುತ್ತದೆ.
೩.ರಿಮೇಕ್ ಕಡಿಮೆಯಾದಲ್ಲಿ ಸೃಜನಶೀಲತೆ ಹೆಚ್ಚುತ್ತದೆ.ಅದರಿಂದ ಕನ್ನಡ ಚಿತ್ರ ರಂಗ ಇನ್ನ ಬೆಳೆಯುತ್ತದೆ.
೪.ಈಗಿನ ಕನ್ನಡ ಪ್ರೇಕ್ಷಕರು ರಾಜ್ಯದ ಮೂಲೆ ಮೂಲೆಯ ಹಳ್ಳಿಗಳಲ್ಲೂ ಅನ್ಯ ಭಾಷೆಯ ಸಿನೆಮಾವನ್ನ ಅರ್ಥ ಆಗದೆ ಇದ್ರೂ ನೋಡ್ತಾರಲ್ವಾ, ಅವರೆಲ್ಲ ಆ ಸಿನೆಮಾಗಳು ಕನ್ನಡದಲ್ಲೇ ಡಬ್ ಆಗಿ ಬಂದ್ರೆ ಅವನ್ನೇ ನೋಡ್ತಾರೆ.ಕನ್ನಡನು ಉಳಿಯುತ್ತೆ.ಮತ್ತು ಅಷ್ಟರ ಮಟ್ಟಿಗೆ ನಾವು ಬೇರೆ ಭಾಷೆಯನ್ನ ನಮ್ಮ ನೆಲದಲ್ಲಿ ಬೇರೂರದಂತೆ ಮಾಡಬಹುದು.
ಇನ್ನ ನಷ್ಟ ಯಾರಿಗೆ?
೧. ಕೇವಲ ರಿಮೇಕ್ ಸಿನೆಮಾವನ್ನೇ ನಿರ್ಮಿಸೋ,ನಿರ್ದೇಶಿಸೋ,ನಟಿಸೋ ಅಂತವರಿಗೆ ಮಾತ್ರ.
ಅಂತಿಮವಾಗಿ ಒಬ್ಬ ಕನ್ನಡ ಪ್ರೇಕ್ಷಕನಾಗಿ ಜಗತ್ತಿನ ವಿವಿಧ ದೇಶದ ಅತ್ಯುತ್ತಮ ಚಿತ್ರಗಳು,ಕಾರ್ಯಕ್ರಮಗಳನ್ನ ‘ಕನ್ನಡ’ ಭಾಷೆಯಲ್ಲಿ ನೋಡಲಿಚ್ಚಿಸುವುದು ಪ್ರತಿಯೊಬ್ಬ ಕನ್ನಡಿಗನ ಹಕ್ಕು ಮತ್ತು ಇದನ್ನ ಕೇವಲ ಬೆರಳೆಣಿಕೆಯಷ್ಟು ಜನ ನಿರ್ಧರಿಸಲಾಗದು ಅನ್ನುವ ಜಾಗೃತಿ ಕನ್ನಡಿಗರಿಗೆ ಮೂಡಬೇಕು.ಯಾರೋ ಅಬ್ಬರಿಸಿ ಬೊಬ್ಬಿರಿದರೆ ಯಾಕೆ ಮಾತಾಡಲು ಭಯಪಡಬೇಕು?
(ನಿನ್ನೆಯ ವಿ.ಕ ದಲ್ಲಿ ಪ್ರಕಟವಾದ ಲೇಖನ.ಅಲ್ಲಿ ಸಂಪಾದಕರ ಕತ್ತರಿಗೆ ಸಿಕ್ಕ ಕೆಲ ಪ್ಯಾರಗಳು ಇಲ್ಲಿವೆ 🙂 )
ಖಂಡಿತ ಹೌದು… ನಾವು ಒಂದು ಹೆಜ್ಜೆ ಮುಂದಿಟ್ಟು ಟೈಟಾನಿಕ್ಕೆ ಅಲ್ಲದಿದ್ದರು “ಲಗಾನ್”ನಂತಃ ಚಿತ್ರ ಆದರೂ ನಮ್ಮ ಬಾಷೆಯಲ್ಲಿ ಪ್ರಚಲಿತಪಡಿಸಿ ದೇಶಭಕ್ತಿಯನ್ನು ಮೆರಯಬಹುದು – ಈಗಿನದಕ್ಕೂ ಹೆಚ್ಚಿನ ಕಲಾವಿದರ ಹೊಟ್ಟೆ ಹೊರೆಯಬಹುದು 🙂
ಕನ್ನಡ ಚಿತ್ರರಂಗದಲ್ಲಿ ಶಿವಣ್ಣ ಒಬ್ಬರಿಗೇ ಅಭಿಮಾನಿಗಳಿರುವಂತೆ ತೋರುತ್ತದೆ!!!
[ಹೌದಾದಲ್ಲಿ ಒಂದು ಶಿವಣ್ಣನವರ ಚಿತ್ರಗಳೇ ಚೆನ್ನಾಗಿಲ್ಲ ಅಥವ ಕನ್ನಡದಲ್ಲಿ ಚಿತ್ರಗಳನ್ನು ನೋಡಲು ಅಭಿಮಾನಿಗಳೇ ಇಲ್ಲ!!!]
ಡಾ|| ರಾಜ್ ಅವರ ಎಡಪಂಥಿಯರೂ ಸಿಕ್ಕಾಪಟ್ಟೆ ಇದ್ದಾರೆ, ಅಭಿನಯದಲ್ಲಿ ಚಂದಿಲ್ಲದಿದ್ದರೆ ರಾಜಕೀಯವಾಗಿ ಕೊಳಕಾಗಿ ಕಾಣಿಸುತ್ತಿದ್ದವರು ಅವರೇ! [ಅವರ ಅಭಿಮಾನಿಗಳು ಈ ಮಾತಿಗೆ ಕ್ಷಮಿಸಬೇಕು] ಸತ್ತವರ ಮಾತಿಗೋಸ್ಕರ ಬದುಕಿರುವ ಕಲಾವಿದರ ಜೀವ ತೆಗೆಯಬೇಕೆ??????? ಹುಂ?
“ಸತ್ತವರ ಮಾತಿಗೋಸ್ಕರ ಬದುಕಿರುವ ಕಲಾವಿದರ ಜೀವ ತೆಗೆಯಬೇಕೆ??????”
ಸೂರಜ್ ಕಲಾವಿದರ ಜೀವ ತೆಗೆಯುವುದು ಡಬ್ಬಿಂಗ್ ಎಂಬ ಭೂತ ನೆನಪಿರಲಿ
ಚಿತ್ರರಂಗವನ್ನೇ ನೆಚ್ಚಿ ಕುಳಿತ ಅದೆಷ್ಟೋ ಪೋಷಕ ಪಾತ್ರಧಾರಿಗಳು, ಅದನ್ನೇ ಹೊಟ್ಟೆ ಪಾಡು ಮಾಡಿಕೊಳ್ಳಲು ಅವಕಾಶಕ್ಕಾಗಿ ಕಾದಿರುವ ಯುವಪ್ರತಿಭೆಗಳು, ಇವರಿಂದ ಲೈಟ್ ಬಾಯ್ಸ್ ಮತ್ತು ಟೀ ಕಾಫಿ ಕೊಡುವ ಹುಡುಗರೆಲ್ಲಾರ ಅವಕಾಶಗಳು , ಬದುಕಿನ ದಾರಿಗಳು ಕಿರಿದಾಗುತ್ತವೆ
ಡಬ್ಬಿಂಗ್ ಅವಕಾಶ ಕೊಟ್ಟರೆ ಕನ್ನಡ ಸಿನೆಮಾಗಳೇ ನಿಂತು ಹೋಗುತ್ತವೇ ಅನ್ನುವ ಭಯ ಉತ್ಪ್ರೇಕ್ಷೆ ಅಷ್ಟೆ. ಸಿನೆಮಾದ ಮಂದಿ ಹೇಳುತ್ತಲಿರುವ ಭೂತದ ಕತೆಯಿದು.
ರಿಮೇಕ್ ಬಂದಾಕ್ಷಣ ಸ್ವಮೇಕ್ ಸಿನೆಮಾಗಳು ನಿಂತಿವೆಯಾ? ಇದು ಕೂಡ ಹಾಗೆಯೇ…
ತಮಿಳು, ತೆಲುಗಲ್ಲಿ ಡಬ್ಬಿಂಗ್ ಇದೆ. ಅಲ್ಲಿ ಸ್ಟಾರ್ ಅವರ ಚಾನೆಲ್ ಗಳು ಇದ್ದಾವೆ. ಹಾಗಿದ್ದರೂ ಯಾಕೆ ಅಮಿತಾಬ್ ಬಚ್ಚನ್ ಅವರ ಶೋ ಡಬ್ ಆಗಿ ಬರಲಿಲ್ಲ? ಯಾಕೆ ಅಲ್ಲಿಯ ನಟರನ್ನೇ ಹಾಕಿಕೊಂಡು ಕೋಟ್ಯಾಧಿಪತಿ ಕಾರ್ಯಕ್ರಮ ಮಾಡುತ್ತಿದ್ದಾರೆ? ಯಾಕೆ ಅಂದ್ರೆ ಜನರಿಗೆ ಅಭಿರುಚಿ ಅನ್ನುವುದೊಂದಿದೆ. He should be able to relate to the program. ಹೀಗಾಗಿ ಡಬ್ ಆದ ಕೆಲವು ಕಾರ್ಯಕ್ರಮ ಓಡಿದ್ರೆ, ಹಲವು ಕಾರ್ಯಕ್ರಮ ಓಡದೇ ಇರಬಹುದು ಮತ್ತು ಅಂತಲ್ಲಿ ಅಲ್ಲಿನವೇ ಆದ ಹೊಸ ಕಾರ್ಯಕ್ರಮ ಮಾಡಬಹುದು. ಈ ಎಲ್ಲ ಆಯ್ಕೆಯನ್ನು ನೋಡುವ ಗ್ರಾಹಕ ಮತ್ತು ದುಡ್ಡು ಹಾಕುವ ಚಾನೆಲಿನವನಿಗೆ ಬಿಡಿ. ಅದು ಬಿಟ್ಟು ಕೇಳಿದ ಕಂಟೆಂಟ್ ಪೂರೈಸುವ ವೆಂಡರ್ ಆದ ಕೆಲವರನ್ನು ಕೇಳಿ ನಿರ್ಧಾರ ಮಾಡುವುದೇ? ಇದು ನೋಡಿ, ಇದು ನೋಡಬೇಡಿ ಅನ್ನಲು ಇವರ್ಯಾರು? ಬರಗೆಟ್ಟ ಬಡವನಿಗೂ ಐದು ವರ್ಷಕ್ಕೊಮ್ಮೆ ಒಂದು ಮತದ ಮೂಲಕ ಬದಲಾವಣೆ ಮಾಡುವ ಆಯ್ಕೆ ಇದೆ. ಆದರೆ ದುಡ್ಡು ಕೊಟ್ಟು ನೋಡುವ ಗ್ರಾಹಕನಿಗೆ ತನ್ನ ನುಡಿಯಲ್ಲಿ ಆ ಆಯ್ಕೆ ಇಲ್ಲ ಅನ್ನುವುದು ಎಂತಹ ವಿಚಿತ್ರ.
ಸೂರಜ್ ಕಲಾವಿದರ ಜೀವ ತೆಗೆಯುವುದು ಡಬ್ಬಿಂಗ್ ಎಂಬ ಭೂತ ನೆನಪಿರಲಿ
ಚಿತ್ರರಂಗವನ್ನೇ ನೆಚ್ಚಿ ಕುಳಿತ ಅದೆಷ್ಟೋ ಪೋಷಕ ಪಾತ್ರಧಾರಿಗಳು, ಅದನ್ನೇ ಹೊಟ್ಟೆ ಪಾಡು ಮಾಡಿಕೊಳ್ಳಲು ಅವಕಾಶಕ್ಕಾಗಿ ಕಾದಿರುವ ಯುವಪ್ರತಿಭೆಗಳು, ಇವರಿಂದ ಹಿಡಿದು ಲೈಟ್ ಬಾಯ್ಸ್ ಮತ್ತು ಟೀ ಕಾಫಿ ಕೊಡುವ ಹುಡುಗರೆಲ್ಲಾರವರೆಗಿನ ಅವಕಾಶಗಳು , ಬದುಕಿನ ದಾರಿಗಳು ಕಿರಿದಾಗುತ್ತಾ ಹೋಗುತ್ತವೆ ಒಂದು ವೇಳೆ ಡಬ್ಬಿಂಗ್ ಎಂಬ ಮಹಾ ಮಾರಿಗೆ ದಾರಿ ಬಿಟ್ಟರೆ
ರೂಪ ಅವರೆ ಒಂದು ವಿಷಯ ಅಂದ್ರೆ ಬರೆ ನೆಗೆಟಿವ್ ವಿಚಾರ ಮಾತ್ರ ತೆಗೆದುಕೊಳ್ಳುವುದು ಸರಿಯೆ? ಅದರ ಉಪಯೋಗವನ್ನೂ ನೋಡಬೇಕಾಗುತ್ತದೆ ಅಲ್ಲವೆ???
ಮೊಟ್ಟ ಮೊದಲಿಗೆ ಅರಬರು ಚೀನಾ ಮತ್ತಿತರ ಪ್ರದೇಶಕ್ಕೆ ದಂಡೆತ್ತಿ ಬಂದಾಗ ಅಲ್ಲಿ ಮಂಜುಗಡ್ಡೆಯನ್ನಿ ಮುಟ್ಟಿ “ಅಯ್ಯಯ್ಯೋ – ಬಿಸಿ ಬಿಸಿ” ಅಂದಿದ್ದರಂತೆ!!! 😀 ಐಸ್ ಎನ್ನುವುದ ಕಾಣದವರ ಪರದಾಟ, ಈಗ್ಗೆ ಹಲವು ವರ್ಷಗಳ ಹಿಂದೆಯೆ ತೆಗೆದುಕೊಳ್ಳಿ, ಕಂಪ್ಯೂಟರ್ ಬಂದರೆ ಜನರು ಕೆಲಸ ಕಳೆದುಕೊಳ್ಳತ್ತಾರೆ – ಜೀವನ ಅಲ್ಲೋಲ ಕಲ್ಲೋಲ ಆಗುತ್ತದೆ ಅಂತಿದ್ದರು… ಹಲವು ಶತಮಾನ ಹಿಂದೆ ಹೋದರೆ ಮೊದಲಿಗೆ ಯಂತ್ರಗಳ ಜೋಡಣೆಗೂ ಈಗೆ ವಿರೋಧ ವ್ಯಕ್ತವಾಗಿತ್ತು – ಮಾನವ ಕುಲಕೆ ಕುತ್ತು ಯಂತ್ರಗಳು ಅಂತ!!!
ಈಗ ಜನ ಬದುಕಿಲ್ವೆ? 10 ವರ್ಷದ ಹಿಂದಿಗಿಂತ [ಅಥವ 200 ವರ್ಷದ ಹಿಂದಿಗಿಂತ] ಚೆಂದಾಗೆ ಇಲ್ಲವೆ??? ಹೇಳಿ?
ಡಬ್ಬಿಂಗ್ ಬಗ್ಗೆ ಮಾತಾಡಲು ಶೆಟ್ರು ಸಿನಿಮಾದಲ್ಲಿ ಕೆಲಸ ಮಾಡಬೇಕಿತ್ತ ಮಾಯ್ಸಣ್ಣ? ಒಂದು ವೇಳೆ ಕೆಲಸ ಮಾಡಿದ್ರೆ, ಬಹುಶಃ ಈ ರೀತಿಯ ಲೇಖನ ಬರೆಯುವ ಧೈರ್ಯ ಇರ್ತಿರ್ಲಿಲ್ವೇನೋ 🙂
ರಾಕೇಶ್ ಶೆಟ್ರೆ, ಈ ಗಜಿಬಿಜಿ ಕಿರಿಕಿರಿ ಕೊಕ್ಕೊಕ್ಕೋ, ಲಬೋಲಬ್ಬೋ.. ಎಲ್ಲ ಬಿಟ್ಟು ನಮ್ ಕೆಲಸ ಮಾಡಿಕೊಂಡು ಇರೋಣ. ಯಾವುದೋ “ಸತ್ಯ ಮೇವ ಜಯತೇ” ಗೆ ಬಿಟ್ಟಿ ಪ್ರಚಾರ ಯಾಕೆ ಕೊಡೋಣ?
ಕರೆಕ್ಟ್ !..
ರವಿ,
ಸತ್ಯ ಮೇವ ಜಯತೇ ಒಂದು ಕಾರಣವಷ್ಟೇ.ನನ್ನ ಉದ್ದೇಶ ಡಬ್ಬಿಂಗ್ ಬೇಕು ಅನ್ನುವ ಬಗ್ಗೆ.ಕನ್ನಡ ಸಿನೆಮಾ ರಂಗಕ್ಕೆ ನಿಲುಕದ ಒಳ್ಳೊಳ್ಳೆ ಸಿನೆಮಾ/ಕಾರ್ಯಕ್ರಮಗಳು ನಮ್ಮ ಭಾಷೆಗೂ ಬರಲಿ, ಮತ್ತೆ ಅದನ್ನ ಕೇವಲ ಕನ್ನಡ ಮಾತ್ರ ಬರುತ್ತದೆ ಅನ್ನುವ ಕಾರಣಕ್ಕೇ ಮಿಸ್ ಮಾಡಿಕೊಳ್ಳುತ್ತಿರುವ ಸಾಮಾನ್ಯನಿಗೂ ಅದು ತಲುಪಲಿ
ಜನ ತುಂಬಾ ಹೆದರುಪುಕ್ಕಲರು ಅನ್ನುವುದಕ್ಕೆ ಸಾಕ್ಷಿ ಡಬ್ಬಿಂಗ್!! ಪಕ್ಕದ ಮನೆಯವ ಏನು ಮಾಡಿದ್ದಾನೆ ಎನ್ನುವುದನ್ನು ನೋಡಿ, ಆತ ಯಶಸ್ಸು ಗಳಿಸಿದ್ದರೆ ತಾನೂ ಅದನ್ನು ಅನುಸರಿಸುವ ಕ್ರಮ!?
ತಾನು ಹೊಸತನ್ನು ರೂಪಿಸುವ ಜಾಣತನವನ್ನು ಆಳವಡಿಸಿಕೊಂಡಾಗ ಈ ಡಬ್ಬಿಂಗ್ ಸಮಸ್ಯೆ ಎದುರಾಗದು ಎಂಬುವುದು ನನ್ನ ವಾದ…
SHARED ON MY WALL