ದೀಪ ಭಾಗ ೨
– ವಿಜಯ್ ಹೂಗಾರ್
ಬೆಳಕಿಂಡಿಯಿಂದ ಮೂಡುವ ಹಿಡಿ ಬಿಸಿಲುಗರಿಗಳು ಇಣುಕುವ ಮುಂಚೆ ದೇವಕಿ ಅಡುಗೆ ಮನೆ ಸೇರಿದ್ದಳು.ಒಲೆ ಹತ್ತಿಸಿದ ಮೇಲೆ ಅಡುಗೆ ಮನೆ ಹೊಗೆಯಿಂದ ತುಂಬಿ ತುಳುಕುತ್ತಿತ್ತು.ಅಡುಗೆಮನೆಯಿಂದ ಹೊರಮನೆ,ಹೊರಮನೆಯಿಂದ ಕೇರಿಯಲ್ಲ ಹರಡುತಿತ್ತು.ಅಮಾವಾಸ್ಸೆಯ ಕತ್ತಲೆಯಂತೆ ಗೋಚರಿಸುತ್ತಿರುವ ಗೋಡೆಗಳ ಮಧ್ಯೆ ಖೆಮ್ಮುತ್ತ,ಬೆಂಕಿ ಆರುವಂತಿದ್ದರೆ ಊದುತ್ತ,ಮೈಯಲ್ಲ ಬೆವತು,ಸುರಿಯುವ ಬೆವರ ಧಾರೆಗೆ ಸೆರಗಿನಿಂದ ಒರೆಸುತ್ತಾ ರುಚಿ ರುಚಿಯಾದ ಅಡುಗೆ ಮಾಡುತ್ತಿದ್ದಳು.
ಅಷ್ಟೊತ್ತಿಗೆ “ಏ ಇನ್ಯಾ…! ಹೋಗಿ ಆ ಭುರೆಗೊಳ್ ಮನ್ಯಾಗಿಂದು ಪಾವ್ ಲೀಟರ್ ಹಾಲ ಸಿಗ್ತದೆನು ತೊಗೊಂಬಾ,ಚಾ ಮಾಡಕ್ಕ ಹಾಲಿಲ್ಲ” ಅಂತ ದೇವರ ಮನೆಯಿಂದ ತರಕಸ್ವಾರದಲ್ಲಿ ಕಮಲಜ್ಜಿಯ ಅವಾಜ್ ಕೇಳಿ, ಪಡಸಾಲೆಲ್ಲಿ ಟಿವಿ ನೋಡುತ್ತಾ ಕುಳಿತ ಮೊಮ್ಮಗ ಇನ್ಯಾ ತನ್ನ ಸಂಗಡಿಗರ ಸಮೇತ ಪುರ್ರ್ ಅಂತ ಹಾರಿಹೋದ.ಮನೆಯೆಲ್ಲ ಊದಿನ ನುರುಹೊಗೆಯ ಪರಿಮಳ ಸೂಸುತ್ತ ದೇವರ ಮನೆಯಿಂದ ಬಂದ ಕಮಲಜ್ಜಿ ಹಠತ್ತಾನೆ ಖಾಲಿಯಾದ ಪಡಸಾಲೆಯನ್ನು ನೋಡಿ,”ಅಯಿ…!ಹಾಟ್ಯಗಳ ತೊಗೊಂಬಂದು…!ಕೆಲಸ ಮಾಡಕ್ಕ ಏನ್ ಬ್ಯಾನಿ ಬರ್ತದ…?ತಿಲ್ಲಕ್ ಹ್ಯಾಂಗ್ ಬರ್ತದ,ಎರಡೂ ದವಡಿಯಲ್ಲಿ …!”ಅಂತ ಕೈಯಲ್ಲಿರುವ ನೈವಿದ್ಯದ ತಟ್ಟೆ ಹಿಡಿದು ಖಾಲಿ ಪಡಸಾಲೆಯ ಮೇಲೆ ತನ್ನ ಕೋಪ ತೋರಿಸುತ್ತ ನಿಂತಳು.’ಇನ್ಯಾರಿಗೆ ತೋರಿಸಬೇಕು…..?’ ಅಂತ ಪ್ರಶ್ನಾರ್ಥಕ ಮುಖದಿಂದ ಟಿವಿಯ ಪರದೆ ಕಮಲಜ್ಜಿಯ ಕಡೆ ಹೆದರಿ ಮುಜುಗುರದಿಂದ ನೋಡತೊಡಗಿತು.ಹಾಗೆ ಕೋಪದಿಂದ ಗಲಿಬಿಲಿಗೊಂಡ ಮುಖದಿಂದ ಮನೆಯ ಹೊರಗಡೆಯ ಇರುವ ಚಿಕ್ಕ ಕಟ್ಟೆಯಮೇಲೆ ಆಸಿನಳಾದ ತುಳಸಿಗೆ ಭುಸುಗುಟುತ್ತಲೇ ನೈವಿದ್ಯ ಅರ್ಪಿಸತೊಡಗಿದಳು.
ಚೌಡಿಯ ಕಡೆಗೆ ಎಮ್ಮೆ ಹಾಕಲು ಚಿಕ್ಕ ತೊಗರಿ ಕಟ್ಟಿಗೆ ಹಿಡಿದು “ಹಲ್ಯಾ ಹಲ್ಯಾ” ಅನ್ನುತ್ತ ಬಂದ ಗೆಳತಿ ಲಕ್ಷ್ಮಿಬಾಯಿ
“ಏನಾಯ್ತು ಕಮಲಕ್ಕ ಯಾಕ ಚೀರಾಗತ್ತಿ….?”ಅಂತ ಕೇಳಿದಳು.
ಇತ್ತ ಕಮಲಕ್ಕ ಕೈಯಲ್ಲಿ ತಟ್ಟೆ ಹಿಡಿದು,ಒಂದು ಕಾಲು ಕಟ್ಟೆಯ ಮೇಲಿಟ್ಟು.
“ಇಲ್ಲ ಲಕ್ಷ್ಮಿಯಕ್ಕ ಈ ಚುಕ್ಕೊಳು ಒಂದ್ ಕೆಲಸ ಮಾಡಲ್ಲಾಗ್ಯಾವ,ಮುಂಜಾನಿಂದ ಚಾ ಕುಡಿಲಕ್ಕು ಪುರುಸೊತ್ತಿಲ್ಲ.ಬಳಸಕ್ಕ ನೀರಿಲ್ಲಂತ ಹಣಮಂತ ಊರ ಭಾವಿ ಇಂದ ನೀರ ತರಲಕ್ಕ ಹೋಗ್ಯಾನ ಅವನಿಗ ಚಾ ಕುಡಿಸೋಕ್ಕು ದಿಕ್ಕಿಲ್ಲದಂತಾಗ್ಯದ,ಆ ಭುರೆಗೊಳ್ ಮನ್ಯಾಗಿಂದು ಪಾವ್ ಲೀಟರ್ ಹಾಲ ಸಿಗ್ತದೆನು ತೊಗೊಂಬಾ ಹೇಳಿದ್ರ ಯಾರು ಕೆಳಾಲ್ಯಾಗರ” ಅಂತ ನಿರಾಶೆಯ ದ್ವನಿಯಲ್ಲಿ ಸೊಂಟದ ಮೇಲೆ ಕೈ ಇಟ್ಟು ದೂರು ಹೇಳತೊಡಗಿದಳು.
“ಆ ಟಿವಿ ಬಾಯಾಗ್ ಮಣ್ಣ ಹಾಕ,ಆ ಟಿವಿ ಬಂದಾಗಿನಿಂದು ಯಾವ ಪಾರಗೋಳು ಕೆಲಸ ಮಾಡಾಲಾಗ್ಯಾವ ನೋಡು…….
ನಮ್ಮ ಎಮ್ಮಿ ಈಗೆ ಕೈ ಕೊಟ್ಟದ ನೋಡಕ್ಕ,ನಮ್ ಪಾರ ಭುರೆ ಅವರ ಮನಿಗ್ ಹೋಗಿ ಬಂದಿತ್ತು,ಅವರ ಮನ್ಯಾಗು ಹಾಲ್ ಇಲ್ಲಂತ….! ಏನ್ ಮಾಡ್ತಿ ಇಡೀ ಊರಿಗೆ ಹಾಲಿಂದು ಬರ ಬಂದದ….!ಆ ನೇಮಾಂದು ಹೋಟೆಲ್ ನಾಗ ಪಾಕಿಟ್ ಹಾಲ್ ಸಿಗ್ತದ ಏನ್ ನೋಡಿ ಬಾ….!” ಅಂತ ಗೆಳತಿಗೆ ಸಲಹೆ ಕೊಟ್ಟಳು.
“ಹಾ…ಚಲೋ ನೆಂಪ ಮಾಡಿ ಕೊಟ್ಟಿ ನೋಡು….!ನಮ್ ಹಣಮಂತಗ ಕಳಿಸ್ತೀನಿ….!” ಅಂತ ಹೇಳಿದಳು
“ಕೆಲಸ ಮುಗಿತೆನಕ್ಕ….?” ಅಂತ ನಿರಾಳ ಉಸಿರಿನಲ್ಲಿ ಲಕ್ಷ್ಮಿಬಾಯಿ ಕೇಳಿದಕ್ಕೆ.”ಇಲ್ಲವ್ವ ಹಿನಾ ಬುಟ್ಟಿಯಷ್ಟು ಖಂಡಗ ಕೆಲಸ ಬಿದ್ದದ” ಮನಿ ಕೆಲಸ ತಪ್ಪಿದಲ್ಲ ಅನ್ನೋ ಭಾವದಲ್ಲಿ ಲಕ್ಷ್ಮಿಯಕ್ಕನನ್ನು ಬಿಳ್ಕೊಟ್ಟು ಕಟ್ಟೆಯ ಮೇಲಿನ ಕಾಲು ಕಿತ್ತಿ ಮನೆಯೊಳಗೇ ಧಾವಿಸಿದಳು.ಬಂದಿರೋ ಕೆಲಸ ಮರೆತು ಹೋದವರಂತೆ ಲಕ್ಷ್ಮಿಯಕ್ಕ ಬಾಗಿದ ಕೈಬೆರಳು ಹಣೆಯ ಮೇಲಿಟ್ಟು ದೂರದ ಬೆಟ್ಟ ನೋಡುವವರ ಥರ ಮರೆಯಾಗಿ ಹೋದ ಎಮ್ಮೆಯ ಕಡೆಗೆ ನೋಡತೊಡಗಿದಳು.