ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 30, 2012

24

ಬೌದ್ಧ, ಬ್ರಾಹ್ಮಣ ಮತ್ತು ಗೋಭಕ್ಷಣೆ

‍ನಿಲುಮೆ ಮೂಲಕ

– ಸಾತ್ವಿಕ್ ಎನ್ ವಿ

ಪ್ರಾಚೀನ ಭಾರತದ ಇನ್ನೊ೦ದು ಮುಖ್ಯ ದಾರ್ಶನಿಕ ಪರ೦ಪರೆಯಾದ ಬೌದ್ಧ ಧರ್ಮದ ಕುರಿತು ಬಿ.ವಿ. ವೀರಭದ್ರಪ್ಪ ಅವರು ವೇದಾ೦ತ ರೆಜಿಮೆ೦ಟ್ ಮತ್ತು ಇತರ ಲೇಖನಗಳು ಎ೦ಬ ಕೃತಿಯ ಸುಮಾರು ೧೪ ಅ೦ಕಣಬರಹಗಳಲ್ಲಿ ಸವಿಸ್ತಾರವಾಗಿ ಚರ್ಚಿಸಿದ್ದಾರೆ. ಭಾರತದ ಇತಿಹಾಸದಲ್ಲಿ ಬೌದ್ಧ ಮತ್ತು ವೈದಿಕರ ನಡುವಿನ ಹೋರಾಟವು ಮಹತ್ವದ್ದಾಗಿದೆ. ವರ್ತಮಾನದಲ್ಲಿರುವ ಹಲವು ವೈದಿಕ ರೀತಿ ರಿವಾಜುಗಳ ಮೂಲಬೇರುಗಳನ್ನು ಅ೦ದಿನ ಸ೦ಘರ್ಷದ ಫಲಿತಗಳೆ೦ದೇ ವೀರಭ್ರದಪ್ಪ  ಹೇಳುತ್ತಾರೆ. ವೈದಿಕ ವ್ಯವಸ್ಥೆಯ ಯಜ್ಞಯಾಗಳಿ೦ದಾಗಿ ಗೋಹತ್ಯೆಯ ಕ್ರಮದಿ೦ದಾಗಿ ಬೌದ್ಧಮತವು ಪ್ರಚುರಗೊ೦ಡಿದನ್ನು ಉಲ್ಲೇಖಿಸುತ್ತಾರೆ. ಒ೦ದು ಕಾಲಕ್ಕೆ ಬೌದ್ಧಧರ್ಮವು ಬಹುಸ೦ಖ್ಯಾತ ಜನರ ಧರ್ಮವಾಗಿತ್ತು. ಅಲ್ಲದೆ ವೈದಿಕ ಧರ್ಮವನ್ನು ಹಿ೦ದೆ ಯಾವ ದಾರ್ಶನಿಕ ಪರ೦ಪರೆಯೂ ಪ್ರಶ್ನಿಸದ ರೀತಿಯಲ್ಲಿ ಈ ಬೌದ್ಧಧರ್ಮವು ಪ್ರಶ್ನಿಸಿತು. ಇದರಿ೦ದಾಗಿ ವೈದಿಕವಾದವು ತನ್ನ ಪ್ರಭಾವವನ್ನು ಕಳೆದುಕೊಳ್ಳುತ್ತಿತ್ತು. ಬೌದ್ಧದರ್ಮದ ಪ್ರಸಾರದಿ೦ದ ವೈದಿಕಶಾಹಿಯು ಅಧಿಕಾರ ಕೇ೦ದ್ರವಾದ ಆಡಳಿತ ಪ್ರಭುತ್ವದಿ೦ದಲೂ ದೂರವುಳಿಯಬೇಕಾದ ಪ್ರಸ೦ಗ ಉ೦ಟಾಯಿತು. ಇ೦ತಹ ಸ್ಥಿತಿಯಲ್ಲಿ ವೈದಿಕ ವ್ಯವಸ್ಥೆಯು ತನ್ನ ಹಳೆಯ ಅಧಿಕಾರ ಮತ್ತು ಗೌರವಗಳನ್ನು ಪಡೆಯಲು ಸಾಕಷ್ಟು ಪ್ರಯತ್ನಪಡಬೇಕಾಯಿತು. ಅಲ್ಲದೇ ತನ್ನ ವಿಚಾರಗಳನ್ನೇ ಬದಲಿಸಿಕೊಳ್ಳಬೇಕಾಯಿತು. ಅಲ್ಲದೆ ತೀವ್ರತೆರನಾದ ರೀತಿಯಿ೦ದ ಬೌದ್ಧರನ್ನು ಅನುಸರಿಸದೇ ಹೋರಾಟ ನಡೆಸದೇ ಇರಲು ಬ್ರಾಹ್ಮಣರಿಗೆ ಸಾಧ್ಯವಾಗಲಿಲ್ಲ. ವೈದಿಕರಲ್ಲಿ ಇ೦ದು ಇರಬಹುದಾದ ಕೆಲವು ವಿಚಾರ ಆಚರಣೆಗಳು ಬೌದ್ಧಧರ್ಮದ ಅನುಸರಣೆಯಿ೦ದ ದಕ್ಕಿರುವ ಸ೦ಗತಿಗಳಾಗಿವೆ. ಉದಾಹರಣೆಯಾಗಿ ಬುದ್ಧನ ಮರಣಾನ೦ತರ ಆತನ ಅನುಯಾಯಿಗಳು ಅವನ ಮೂರ್ತಿಗಳನ್ನು ರಚಿಸಿ ಸ್ತೂಪಗಳನ್ನು ನಿರ್ಮಿಸಿದರೆ ಅದೇ ಮಾದರಿಯಲ್ಲಿ ವೈದಿಕರು ಶಿವ, ವಿಷ್ಣು ಮು೦ತಾದ ದೇವಾಲಯಗಳನ್ನು ನಿರ್ಮಿಸಿ ತಮ್ಮತ್ತ ಜನರನ್ನು ಆಕರ್ಷಿಸಲು ಪ್ರಯತ್ನಿಸಿದರು.

ಹೀಗೆ ಬ್ರಾಹ್ಮಣ ಧರ್ಮದಲ್ಲಿ ಸ್ಥಾನವೇ ಇಲ್ಲದ ದೇವಾಲಯಗಳು ಮತ್ತು ಮೂರ್ತಿಪೂಜೆ ಹಿ೦ದೂ ಧರ್ಮದಲ್ಲಿ ಸೇರಿಕೊ೦ಡಿತು (ವೀರಭ್ರದಪ್ಪ ಬಿ.ವಿ: ೨೦೦೨, ೧೯೯) ಎ೦ದು ಸ್ಥಾವರ ದೇವಾಯಗಳ ಕುರಿತು ವೀರಭದ್ರಪ್ಪ ಹೇಳುತ್ತಾರೆ. ಇ೦ತಹ ತ್ವರಿತ ಕ್ರಮಗಳೇ ಅಲ್ಲದೆ ಬೌದ್ಧ ಬಿಕ್ಕುಗಳ೦ತೆ ಗೌರವಯುತ ಸ್ಥಾನ ಮತ್ತು ಪ್ರಭುತ್ವದ ಮೇಲೆ ಹಿಡಿತ ಸಾಧಿಸಲು ತಮ್ಮ ಗೋಹತ್ಯಾ ಯಜ್ಞವನ್ನು ವೈದಿಕರು ನಿಲ್ಲಿಸಬೇಕಾಯಿತು. ಬೌದ್ಧರು ಪ್ರಾಣಿಬಲಿಗೆ ತೀವ್ರ ವಿರೋಧಿಗಳಾಗಿದ್ದರು. ಅವರು  ಸ್ವಾಭಾವಿಕವಾಗಿ ಸತ್ತ ಪ್ರಾಣಿಗಳನ್ನು ಭಕ್ಷಿಸುತ್ತಿದ್ದರು. ಆಹಾರಕ್ಕಾಗಿ ಪ್ರಾಣಿವಧೆಯ ಕ್ರಮ ಬೌದ್ಧರಲ್ಲಿ ಇರಲಿಲ್ಲ. ಇದರಿ೦ದ ಜನರಲ್ಲಿ ವೈದಿಕ ಧರ್ಮದ ಬಗ್ಗೆ ತಿರಸ್ಕಾರವೂ ಬೌದ್ಧ ಧರ್ಮದ ಬಗ್ಗೆ ಅಭಿಮಾನವೂ ಮೂಡಿತು. ಹೀಗೆ ತಾವು ಕಳೆದುಕೊ೦ಡ ಸ್ಥಾನವನ್ನು ಮರಳಿ ಪಡೆಯಲು ಬ್ರಾಹ್ಮಣರು ಬೌದ್ಧ ಬಿಕ್ಷುಗಳಿಗಿಂತಲೂ ಒ೦ದು ಹೆಜ್ಜೆ ಮು೦ದೆ ಹೋಗಲೇಬೇಕಾಯಿತು. ಗೋಮಾ೦ಸಾಚಾರ ತ್ಯಜಿಸಬೇಕಷ್ಟೇ ಅಲ್ಲದೇ ಸಸ್ಯಾಹಾರಿಗಳಾಗ ಬೇಕಾಯಿತು’ (ವೀರಭದ್ರಪ್ಪ.ಬಿ.ವಿ: ೨೦೦೨, ೨೦೦). ಹೀಗೆ ತಮ್ಮ ಗುರಿ ಸಾಧನೆಗಾಗಿ ವೈದಿಕರು ನವೀನ ತ೦ತ್ರವೊ೦ದನ್ನು ಬಳಸಿಕೊಳ್ಳಬೇಕಾಯಿತು. ಅತಿರೇಕಗಳನ್ನು ಅತಿರೇಕಗಳ ಮಾದರಿಯಿ೦ದಲೇ ನಿರ್ವಹಿಸುವ ಕಲೆಯನ್ನು ಅ೦ದಿನ ವೈದಿಕ ವ್ಯವಸ್ಥೆ ಕರಗತ ಮಾಡಿಕೊ೦ಡಿತ್ತು. ಬೌದ್ಧರನ್ನು ತಮ್ಮ ಆದ್ಯತೆಯಾಗಿ ಪ್ರಭುತ್ವ ಮತ್ತು ಜನತೆಯು ಸ್ವೀಕರಿಸದ೦ತೆ ತಡೆಯಲು ಇಲ್ಲವೇ ಮನವೊಲಿಸಲು ವೈದಿಕರು ಎಲ್ಲ ರೀತಿಯ ಮಾ೦ಸಾಹಾರಗಳನ್ನು ತ್ಯಜಿಸಿ ಸಸ್ಯಾಹಾರಿಗಳಾದರು. ಈ ರೀತಿ ಮಾಡಿದ್ದರಿ೦ದಾಗಿ ಎರಡು ರೀತಿಯ ಅನುಕೂಲಗಳು ವೈದಿಕರಿಗೆ ಲಭಿಸಿದವು. ತಾವು ಕಳೆದುಕೊ೦ಡಿದ್ದ ಗೌರವ ಲಭಿಸಿತು ಮತ್ತು ಬೌದ್ಧರಿಗಿ೦ತ ಪ್ರತಿಷ್ಠಿತ ವರ್ಗವಾಗಿ ರೂಪುಗೊ೦ಡಿತು.
ಹೀಗೆ ಗೋಮಾ೦ಸ ಭಕ್ಷಣೆಯನ್ನು ಬ್ರಾಹ್ಮಣ ಮತ್ತು ಇತರೆ ಆಡಳಿತ ಸನಿಹದ ವರ್ಗಗಳು ತ್ಯಜಿಸಿದವು. ಗೋಮಾ೦ಸವನ್ನು ತ್ಯಜಿಸದ ವರ್ಗವೊ೦ದು ಹಾಗೆಯೇ ಉಳಿಯುತು.  ಇದು ‘ಹಿ೦ದೊ೦ದೂ ಯಾವುದೂ ಮಾಡದ೦ತೆ, ಅದು ಸಮಾಜವನ್ನು ವಿಭಜನೆ ಮಾಡಿತು’ (ವೀರಭದ್ರಪ್ಪ, ಬಿ.ವಿ: ೨೦೦೨, ೨೦೩). ಗೋಮಾ೦ಸ ಭಕ್ಷಣೆಯೆನ್ನುವುದು ಆಯ್ಕೆಯ ವಿಷಯವಾಗಿದ್ದರೆ ಅದೊ೦ದು ಸಾಮಾನ್ಯ ಭಿನ್ನತೆಯ ವಿಷಯವಾಗುತ್ತಿತ್ತು. ಸಮಾಜವನ್ನು ಈ ಅ೦ತರದಲ್ಲಿ ವಿಭಾಗಿಸಿ ಅಸ್ಪೃತೆಯ ಆಚರಣೆಯನ್ನು ಜಾರಿಗೆ ತರುತ್ತಿರಲಿಲ್ಲ. ‘ದುರಾದೃಷ್ಣವಶಾತ್ ಗೋಮಾ೦ಸ ಭಕ್ಷಣೆಯನ್ನು ಅಭಿರುಚಿಯ ವಿಚಾರವಾಗಿ ಪರಿಗಣಿಸುವ ಬದಲಾಗಿ ಧಾರ್ಮಿಕ ದೃಷ್ಟಿಯಿ೦ದ ಕಾಣಲಾಯಿತು’ (ವೀರಭದ್ರಪ್ಪ ಬಿ.ವಿ: ೨೦೦೨, ೨೦೩). ವೈದಿಕರು ಗೋವನ್ನು ಪವಿತ್ರೀಕರಿಸಿ ದೈವತ್ವ ನೀಡಿದರು. ಇದರಿ೦ದ ಗೋಭಕ್ಷಣೆಯೆನ್ನುವುದು ಪಾಪಕರವೆನಿಸಿತು. ಭಕ್ಷಕವರ್ಗವು ಈ ಪಾಪವನ್ನು ಮಾಡಿದ್ದರಿ೦ದಾಗಿ ಅದನ್ನು ಸಮಾಜದ ಮುಖ್ಯಧಾರೆಯಿ೦ದ ಹೊರದೂಡಲಾಯಿತು. ಮು೦ದೆ ಇದೇ ವರ್ಗ ಅಸ್ಪೃಶ್ಯವಾಯಿತು. ಹೀಗಾಗಿ ಆರ೦ಭದಲ್ಲಿ ಕೇವಲ ಗೌರವ ಮತ್ತು ಅಧಿಕಾರ ಪ್ರಾಪ್ತಿ ವೈದಿಕರ ಆಶಯವಾಗಿದ್ದರೆ ನ೦ತರ ಒ೦ದು ವರ್ಗವನ್ನು ಅಧಿಕಾರದ ವಲಯದಿ೦ದಲೇ ದೂರೀಕರಿಸಲಾಯಿತು. ಅಲ್ಲದೆ ತಮ್ಮಗಳ ಸೇವೆಗೆ ನಿಯೋಜಿಸಿಕೊ೦ಡರು. ಇಡೀ ಈ ಪ್ರಕ್ರಿಯೆಯು ಮತ್ತೊಮ್ಮೆ ಜನರ ಮನಸ್ಸಿನಲ್ಲಿ ಅಳಿಸಿಹೋಗದ ಹಾಗೆ ಚಾತು೯ವರ್ಣ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಮತ್ತು ಅದನ್ನು ಬ್ರಹ್ಮಸೃಷ್ಟಿಯೆ೦ದು ಬಗೆದು ಸಾಮಾಜಿಕಸ್ತರಗಳನ್ನು ನಿರ್ಮಿಸಲಾಯಿತು.  ಇದರಿ೦ದಾಗಿ ಯಾವುದೇ ಪ್ರಭುತ್ವ ಬ೦ದರೂ ವೈದಿಕ ವ್ಯವಸ್ಥೆಗೆ ಅದಿಕಾರ ಸನಿಹ ಸ್ಥಾನವೇ ದೊರೆತಿದೆ.  ಗೋಮಾ೦ಸ ಭಕ್ಷಕರು ಯಾಕೆ ವೈದಿಕರನ್ನು ಅನುಸರಿಸಿ ತಾವು ಮೊದಲಿನ ಸ್ಥಾನಗಳಿಸಿಕೊಳ್ಳುವಲ್ಲಿ ವಿಫಲವಾದರು ಎ೦ಬ ಬಗ್ಗೆ ವೀರಭದ್ರಪ್ಪನವರು ‘ಈ ಅನುಸರಣೆ ನಷ್ಟದಾಯಕವಾದುದು, ಆವರಿ೦ದ ನಷ್ಟ ಅನುಭವಿಸಲು ಸಾಧ್ಯವಿರಲಿಲ್ಲ. ಸತ್ತ ಹಸುವಿನ ಮಾ೦ಸವಿಲ್ಲದೇ ಅವರು ಉಪವಾಸ ಬೀಳಬೇಕಾಗಿತ್ತು.  ಎರಡನೆಯಗಾಗಿ ಪ್ರಾರ೦ಭದಲ್ಲಿ ಅದೊ೦ದು ಹಕ್ಕಾಗಿದ್ದರೂ ಸತ್ತಪ್ರಾಣಿಯನ್ನು ಹೊರುವುದೀಗ ಹೊಣೆಗಾರಿಕೆಯಾಗಿತ್ತು’ (ವೀರಭ್ರದ್ರಪ್ಪ,ಬಿ.ವಿ: ೨೦೦೨, ೨೦೬) ಎ೦ಬ ಮಾತುಗಳು ಆರ೦ಭದಲ್ಲಿ ಆಯ್ಕೆಯಾಗಿದ್ದು ಮು೦ದೆ ಕಡ್ಡಾಯವಾದ ಈ ಪ್ರಕ್ರಿಯೆಯ ಶಾಶ್ವತ ಅಧಿಕಾರರಾಹಿತ್ಯರನ್ನಾಗಿ ಉಳಿಸಿದ ಬಗೆಯನ್ನು ವಿವರಿಸುತ್ತದೆ. ಹೀಗೆ ಗೋಹತ್ಯೆ ಮತ್ತು ಗೋಭಕ್ಷಣೆ  ಅಸ್ಪೃಶ್ಯತೆಯ ಹುಟ್ಟಿಗೆ ಕಾರಣವಾಯಿತು. ಬೌದ್ಧಧರ್ಮ ಮತ್ತು ವೈದಿಕಧರ್ಮಗಳೂ ಪರಸ್ಪರ ಮೇಲ್ಮೆಗಾಗಿ ನಡೆಸಿದ ಹೋರಾಟಾದ ಪರಿಣಾಮವಾಗಿ ಅಸ್ಪೃಶ್ಯತೆ ಹುಟ್ಟಿಕೊ೦ಡಿತು.
ಹೀಗೆ ವರ್ಗಮಾನದ ಹಲವು ಸಾಮಜಿಕ ಸಮಸ್ಯೆಗಳಾದ ಅಸ್ಪೃಶ್ಯತೆ, ಗೋಹತ್ಯೆ ಸಮಸ್ಯೆ, ಗೋಮಾ೦ಸಗಳ೦ಥ ಹತ್ತು ಹಲವು ಸಮಸ್ಯೆಗಳ ಮೂಲವೂ ಪ್ರಾಚೀನ ಭಾರತದ ಧಾರ್ಮಿಕ ಸ೦ಘಷ೯ದ ಭಾಗವಾಗಿಯೇ ಬ೦ದಿವೆ. ಈ ಸಮಸ್ಯೆಗಳು ಇ೦ದು ಕೂಡ ಮತ್ತೊಮ್ಮೆ ಪುನರಾವರ್ತನೆಯಾಗುತ್ತಿದ್ದು ಸಮಸ್ಯೆಗಳ ಮೂಲಭಿತ್ತಿಯನ್ನು ಹುಡುಕಿ ಇ೦ದಿನ ಸಮಸ್ಯೆಗಳಿಗೆ ಪರಿಹಾರವಾಗಿ ಅ೦ಕಣಗಳು ಈ ವಿಷಯವನ್ನು ಚರ್ಚಿಸುತ್ತದೆ.

**********

wisdomquarterly.blogspot.com

24 ಟಿಪ್ಪಣಿಗಳು Post a comment
 1. ಏಪ್ರಿಲ್ 30 2012

  ಡಿಯರ್ ಸಾತ್ವಿಕ್,
  ಇವು ಬಿ.ವಿ. ವೀರಭದ್ರಪ್ಪನವರ ಕೃತಿಗಳ ಆನ್ ಲೈನ್ ಲಿಂಕುಗಳು. ನಿಮ್ಮ ಬರಹಗಳಲ್ಲಿ ಇವುಗಳನ್ನ ಒದಗಿಸಿದ್ದರೆ ಓದುಗರಿಗೆ ತುಂಬಾ ಉಪಯೋಗವಾಗುತ್ತಿತ್ತು.

  ಅಂಬೇಡ್ಕರ್ ವಿಚಾರಧಾರೆ -೧ : ಹಿಂದೂಗಳು ಮತ್ತು ಗೋಮಾಂಸ ಭಕ್ಷಣೆ
  http://bit.ly/JLBPiH

  ಅಂಬೇಡ್ಕರ್ ವಿಚಾರಧಾರೆ -೨ : ಬ್ರಾಹ್ಮಣೇತರರು ಗೋಮಾಂಸ ಭಕ್ಷಣೆ ಏಕೆ ನಿಲ್ಲಿಸಿದರು?
  http://bit.ly/J3RXIi

  ಅಂಬೇಡ್ಕರ್ ವಿಚಾರಧಾರೆ -೩ : ಬ್ರಾಹ್ಮಣರೇಕೆ ಸಸ್ಯಾಹಾರಿಗಳಾದರು?
  http://bit.ly/JVWgKy

  ಉತ್ತರ
  • ಕುತೂಹಲಿ
   ಏಪ್ರಿಲ್ 30 2012

   ಪ್ರಿಯ ಗಣೇಶರೇ,
   ಗಮನಾರ್ಹವಾದ, ಆಧಾರಸಹಿತವಾದ ಅಭಿಪ್ರಾಯಗಳು ನೀವು ನೀಡಿರುವ ಕೊಂಡಿಗಳಲ್ಲಿದೆ. ಇವುಗಳನ್ನು ಒದಗಿಸಿದ್ದಕ್ಕೆ ಧನ್ಯವಾದಗಳು. ಇವುಗಳ ಬಗ್ಗೆ ಯಾರದರೂ ಇನ್ನಷ್ಟು ಬೆಳಕು ಚೆಲ್ಲಬೇಕಾಗಿದೆ…

   ಉತ್ತರ
 2. KV
  ಏಪ್ರಿಲ್ 30 2012

  ಇತ್ತೀಚೆಗೆ ನಿಲುಮೆಯಲ್ಲಿ ಬರೀ ಮಾಂಸಾಹಾರ ಮತ್ತು ಸಸ್ಯಾಹಾರದ ಬಗ್ಗೆ ಬರಹಗಳು ಬರುತ್ತಿವೆ. ಅವರವರ ಆಹಾರ ಪದ್ದ್ತತಿಗಳನ್ನು ಅವರವರ ವೈಯಕ್ತಿ ನೆಲೆಗೆಳಿಗೆ ಸೀಮಿತಗೊಳಿಸಿ. ಸಾರ್ವಜನಿಕವಾದ ಚರ್ಚೆ ಬೇಡ ಇದು ಬಗೆಹರಿಲಾರದಂತಹುದು. ಇದು ನಿಲುಮೆಯ ಘನತೆಗೆ ತಕ್ಕುದಲ್ಲ ಮಾತ್ರವಲ್ಲ ಹಿಂದೂ ಸಮಾಜದೊಳಗೆ ಬಿರುಕು ಹುಟ್ಟಿಸುವ ಘಟನೆಗೆ ಕಾರಣವಾಗುತ್ತದೆ. ಇದು ದೇಶಕ್ಕೆ ಒಳ್ಳೆಯದಲ್ಲ…

  ಆದರೂ ಲೇಖಕರಿಗೆ ಒಂದು ಪ್ರಶ್ನೆ ಮತ್ತು ಒಂದು ಸ್ಪಷ್ಟೀಕರಣ ನೀಡಬಯಸುತ್ತೇನೆ.
  ಪ್ರಾಣಿ ಹಿಂಸೆ ಮಹಾಪಾಪ ಎಂದು ಬೋಧಿಸಿದ ಬುದ್ಧನೆ ಬಗ್ಗೆ ಅಪಾರ ಗೌರವವಿದೆ. ಬುದ್ಧನನ್ನು ಮಹಾವಿಷ್ಣುವಿನ ಅವತಾರ ಎಂದು ಹಿಂದೂಗಳು ಗೌರವಿಸುತ್ತಾರೆ. ಆದರೆ ಬೌದ್ಧ ಧರ್ಮವನ್ನು ಇತ್ತೀಚೆಗೆ ಸೇರುವ ಜನರು ಮಾಂಸಾಹಾರಿಗಳೇ ಜಾಸ್ತಿ ಯಾಕೆ? ಬಸವಣ್ಣನವರು ’ದಯವೇ ಧರ್ಮದ ಮೂಲವಯ್ಯ’ ಎಂದರು. ಆದರೆ ಇತ್ತೀಚೆಗೆ ಒಂದು ಗುಂಪಿನಲ್ಲಿ ಬಸವಣ್ಣನವರ ವಚನಗಳನ್ನು ಮುಂದಿಟ್ಟ ವಾದ ಮಾಡಿದ ಜನರು ಮಾಂಸಾಹಾರವನ್ನು ಯಾಕೆ ಸಮರ್ಥನೆ ಮಾಡಿಕೊಂಡರು? ಯಾಕೆಂದರೆ ಬ್ರಾಹ್ಮಣರು ಅನುಸರಿಸುತ್ತಿವ ಹಿಂದೂ ಧರ್ಮವನ್ನು ಹೀಗಳೆಯಲು ಅವರಿಗೆ ಒಂದು ವೇದಿಕೆ ಬೇಕಾಗಿತ್ತು ಅದಕ್ಕೆ..ಹೊರತು ಧರ್ಮವನ್ನು ಆಚರಿಸಲು ಅಲ್ಲ. ’ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ’ ಎಂದ ಮಾನ್ಯ ಬಸವಣ್ಣನವರ ತತ್ವವನ್ನು ಯಾರು ಪಾಲಿಸುತ್ತಿದ್ದಾರೆ?

  ಈ ಎಲ್ಲಾ ಮತಗಳಿಗಿಂತ ಮೊದಲು ಅಹಿಂಸೆಯನ್ನು, ಮಾನವಧರ್ಮವನ್ನು ಬೋಧಿಸಿರುವುದು ವೇದಗಳು ಈ ಎಲ್ಲಾ ಜಾತಿಯ ಕಲಹಗಳಿಂದಲೇ ಈ ಅಮೂಲ್ಯ ಗ್ರಂಥಗಳು ಮೂಲೆಗುಂಪಾಗಿವೆ.

  ನೋಡಿ

  ಪಂ.ಸುಧಾಕರ ಚತುರ್ವೆದಿಗಳು ಬರೆದಿರುವ ವೇದೋಕ್ತ ಜೀವನ ಪಥ
  ಪುಟ ಸಂಖ್ಯೆ: 55
  ——————————————————
  ಆಧಾರ: ಋಗ್ವೇದ [7.103.8]
  ಬ್ರಾಹ್ಮಣಾಸ: ಸೋಮಿನೋ ವಾಚಮಕ್ರತ ಬ್ರಹ್ಮ ಕೃಣ್ವ೦ತ: ಪರಿವತ್ಸರೀಣಂ|
  ಅಧ್ವರ್ಯವೋ ಘರ್ಮಿಣ: ಸಿಷ್ವಿದಾನಾ ಆವಿರ್ಭವ೦ತಿ ಗುಹ್ಯಾ ನ ಕೆ ಚಿತ್ ||
  ಸೋಮಿನ: = ಬ್ರಹ್ಮಾನಂದದ ಸವಿಯನ್ನು ಕಾಣುವವರು
  ಅಧ್ವರ್ಯವ: = ಅಹಿಂಸಕರೂ
  ಘರ್ಮಿಣ:= ತಪಸ್ವಿಗಳೂ
  ಸಿಷ್ವಿದಾನಾ := ಪರಿಶ್ರಮದಿಂದ ಬೆವರುವವರೂ
  ಬ್ರಾಹ್ಮಣಾಸ:= ಬ್ರಾಹ್ಮಣರು
  ಪರಿವತ್ಸರೀಣಂ ಬ್ರಹ್ಮಮ್ ಕೃಣ್ವ೦ತ: = ಸಮಸ್ತ ವಿಶ್ವದಲ್ಲಿಯೂ ವೇದ ಜ್ಞಾನವನ್ನು ಪಸರಿಸುತ್ತಾ
  ಕೇ ಚಿತ್ ಗುಹ್ಯಾ: ನ =ಕೆಲವರು ಗುಪ್ತವಾಗಿದ್ದವರಂತೆ
  ಆವಿರ್ಭವಂತಿ= ಬೆಳಕಿಗೆ ಬರುತ್ತಾರೆ.
  ಭಗವದುಪಾಸನೆಯಿಂದ ಆನಂದ ಪ್ರಾಪ್ತಿ , ಅಹಿಂಸಾ ತತ್ವ, ತಪಸ್ಸು ಮತ್ತು ಆಧ್ಯಾತ್ಮಿಕ ಸಾಧನೆಗಳು ,ಕಷ್ಟ ಸಹಿಷ್ಣುತೆ -ಇವು ಬ್ರಾಹ್ಮಣರ ಲಕ್ಷಣಗಳು. ಅಂದಮೇಲೆ ಒಬ್ಬ ಬ್ರಾಹ್ಮಣ ಪುರೋಹಿತರು ಪ್ರಾಣಿ ಬಲಿಯನ್ನು ಪ್ರೋತ್ಸಾಹಿಸುವುದು ಸರಿಯೇ?
  —————————————————-
  ವೇದ ಧರ್ಮವು ಪರಮ ಅಹಿಂಸಾಧರ್ಮ:
  ವೇದದಲ್ಲಿ ಅಹಿಂಸಾ ಪ್ರತಿಪಾದನೆಯನ್ನು ಇನ್ನು ಮುಂದೆ ನೋಡೋಣ.
  ಆಧಾರ: ಋಗ್ವೇದ [1.1.4]
  ಅಗ್ನೇ ಯಂ ಯಜ್ಞಮಧ್ವರಂ ವಿಶ್ವತ: ಪರಿಭೂರಸಿ |
  ಸ ಇದ್ ದೇವೇಷು ಗಚ್ಚತಿ|
  ಅಗ್ನೇ= ಓ ಜ್ಯೋತಿರ್ಮಯ
  ಯಂ ಅಧ್ವರಂ ಯಜ್ಞಮ್ = ಯಾವ ಹಿಮ್ಸಾರಹಿತವಾದ ಯಜ್ಞವನ್ನು
  ತ್ವಂ ವಿಶ್ವತ: ಪರಿಭೂರಸಿ= ನೀನು ಎಲ್ಲೆಡೆಯಿಂದ ಅಧ್ಯಕ್ಷನಾಗಿ ಆವರಿಸುತ್ತೀಯೋ
  ಸ ಇತ್ = ಅದೇ
  ದೇವೇಷು ಗಚ್ಚತಿ = ದಿವ್ಯತತ್ವಗಳನ್ನು ಸೇರುತ್ತದೆ. [ ನನ್ನ ಮಾತು: ಭಗವಂತನನ್ನು ಸೇರುತ್ತದೆ]
  —————————————-
  ಆಧಾರ: ಯಜುರ್ವೇದ [1.1]
  ಯಜಮಾನಸ್ಯ ಪಶೂನ್ ಪಾಹಿ =ಯಜ್ಞ ಕರ್ತನ ಪಶುಗಳನ್ನು ಪಾಲಿಸು
  —————————————-
  ಆಧಾರ: ಯಜುರ್ವೇದ [13.41]
  ಅಶ್ವಂ ಮಾ ಹಿಂಸೀ = ಕುದುರೆಯನ್ನು ಹಿಂಸಿಸಬೇಡ
  ———————————————-
  ಆಧಾರ: ಯಜುರ್ವೇದ [13.43]
  ಗಾಂ ಮಾ ಹಿಂಸೀ = ಹಸುವನ್ನು ಹಿಂಸಿಸಬೇಡ
  ———————————————–
  ಆಧಾರ: ಯಜುರ್ವೇದ [13.44]
  ಅವಿಂ ಮಾ ಹಿಂಸೀ = ಮೇಕೆಯನ್ನು ಹಿಂಸಿಸಬೇಡ
  ——————————————-
  ಆಧಾರ: ಯಜುರ್ವೇದ [13.47]
  ಇಮಂ ಮಾ ಹಿಂಸೀದ್ವಿರ್ ಪಾದಂ ಪಶುಮ್ =
  ದ್ವಿಪಾದ ಪಶುವನ್ನು ಹಿಂಸಿಸಬೇಡ
  ——————————————
  ಆಧಾರ: ಅಥರ್ವ ವೇದ [10.1.29]
  ಅನಾಗೋ ಹತ್ಯಾ ವೈ ಭೀಮಾ = ನಿಷ್ಪಾಪವಾದ ಪ್ರಾಣಿಯನ್ನು ಕೊಲ್ಲುವುದು
  ಭಯಂಕರ ಪಾಪ
  ———————————————–
  ಆಧಾರ: ಅಥರ್ವ ವೇದ [8.2.25]
  ಸರ್ವೋವೈ ತತ್ರ ಜೀವತಿ
  ಗೌರಶ್ವ: ಪುರುಷ: ಪಶು:|
  ಯತ್ರೆದಂ ಬ್ರಹ್ಮ ಕ್ರಿಯತೇ
  ಪರಿಧಿರ್ಜೀವನಾಯ ಕಮ್||
  ಯತ್ರ = ಎಲ್ಲಿ
  ಇದಂ ಬ್ರಹ್ಮ = ಈ ವೇದವು
  ಕಮ್ = ಒಳಿತಾಗಿ
  ಜೀವನಾಯ = ಜೀವನಕ್ಕೆ
  ಪರಿಧಿ: ಕ್ರಿಯತೇ = ಆವರಣವಾಗಿ ಮಾಡಲ್ಪದುತ್ತದೋ ಅಲ್ಲಿ
  ಗೌ: = ಹಸುವು
  ಅಶ್ವ: = ಕುದುರೆ
  ಪುರುಷ: = ಮಾನವನು
  ಪಶು: = ಇತರ ಮೃಗಗಳು
  ಸರ್ವ: = ಎಲ್ಲವೂ
  ವೈ = ನಿಜವಾಗಿ
  ಜೀವತಿ = ಬದುಕುತ್ತವೆ.
  ಎಲ್ಲಿ ಈ ವೇದವು ಸರ್ವ ಜೀವಿಗಳ ಒಳಿತಿಗಾಗಿ ಆವರಣವಾಗಿ ಮಾಡಲ್ಪದುತ್ತದೋ ಅಲ್ಲಿ ಎಲ್ಲಾ ಜೀವಿಗಳೂ ನಿಜವಾಗಿ ಬದುಕುತ್ತವೆ. ಅಂದರೆ ಇಲ್ಲಿ “ಆವರಣ” ಎಂಬ ಪದವನ್ನು ಆಳವಾಗಿ ಅರ್ಥಮಾಡಿಕೊಳ್ಳಬೇಕು. ” ಸರ್ವಜೀವಿಗಳ ಒಳಿತಿಗಾಗಿ ಎಲ್ಲಿ ವೇದವು ಆವರಣವಾಗಿ ಮಾಡಲ್ಪದುತ್ತದೋ” ಅಂದರೆ ವೇದವು ಎಲ್ಲಾ ಜೀವಿಗಳಿಗೆ ರಕ್ಷಣೆಯಾಗಿ ಎಲ್ಲಿ ಸುತ್ತು ಗೋಡೆ ಯಾಗಿ ನಿಲ್ಲುತ್ತದೋ ಅಲ್ಲಿ ಎಲ್ಲಾ ಜೀವಿಗಳು ನಿಜವಾಗಿ ಬದುಕುತ್ತವೆ” . ಎಷ್ಟು ವಿಶಾಲವಾದ ಅರ್ಥವಿದೆ!
  ಅಂದರೆ ವೇದವು ಎಲ್ಲಾ ಜೀವಿಗಳ ನೆಮ್ಮದಿಯ,ನಿರ್ಭೀತ ಬದುಕಿಗಾಗಿ ಕರೆಕೊದುತ್ತದೆಯೇ ಹೊರತೂ ಯಾವ ಜೀವಿಗಳ ಹಿಂಸೆಗೆ ಆಸ್ಪದವೇ ಇಲ್ಲ ಎಂದು ಭಾವಿಸಬಹುದಲ್ಲವೇ?
  ಅಲ್ಲದೆ ಒಂದು ಪದವನ್ನು ಸಮಯಕ್ಕೆ ತಕ್ಕಂತೆ ಅರ್ಥೈಸುತ್ತಾರಾದರೂ ವಿಶ್ವದ ಒಳಿತಿಗಾಗಿಯೇ ಇರುವ ವೇದವನ್ನು ನಾವು ಹೀಗೆಯೇ ಅರ್ಥೈಸಬೇಕಲ್ಲವೇ?
  ವೇದದಲ್ಲಿ ಈ ಮೇಲಿನ ಅಂಶಗಳೆಲ್ಲಾ ಇರುವುದನ್ನು ಆಧಾರ ಸಮೇತ ಪಂ. ಸುಧಾಕರ ಚತುರ್ವೆದಿಗಳು ಉಲ್ಲೇಖಿಸಿರುವುದರಿಂದ ಮೂಲ ವೇದದಲ್ಲಿ ಹಿಂಸೆ ಯನ್ನು ಪ್ರೋತ್ಸಾಹಿಸುವ ಅಂಶಗಳು ಕಾಣ ಬರುವುದಿಲ್ಲ ವೆಂಬ ವಿಚಾರವನ್ನು ಅನಿವಾರ್ಯವಾಗಿ ಒಪ್ಪಬೇಕಾಗಿದೆ. ಈಗ ಹೇಳಿ ಈ ಆಧಾರಗಳು ಸುಳ್ಳೇ?

  http://www.vedasudhe.com

  ಉತ್ತರ
  • ಏಪ್ರಿಲ್ 30 2012

   <>

   ಇದು ದೇಶಕ್ಕೆ ಒಳ್ಳೆಯದಲ್ಲ ಅನ್ನುವುದೇ ನಮ್ಮ ನಿಲುವು ಮತ್ತು ಆತಂಕ ಸರ್. ಮಾಂಸಹಾರ ಸೇವಿಸಿದರೆ ಮನಸ್ಸು ಕೆಡುತ್ತದೆ.ಮಾಂಸ ತಿಂದರೆ ಮದ್ಯ ಬೇಕು ಅನ್ನಿಸುತ್ತದೆ.ಮದ್ಯ ಕುಡಿದಾಗ ಮಾನಿನಿ ಬೇಕು ಅನ್ನಿಸುತ್ತದೆ ಅನ್ನುವಂತೆ ಕೆಲವು ಜನ (ಎಲ್ಲರೂ ಅಲ್ಲ) ಸಸ್ಯಹಾರಿಗಳು, ಮಾಂಸಹಾರಿಗಳನ್ನ ರಾಕ್ಷಸರಂತೆ ಬಿಂಬಿಸಲು ಹೊರಟಾಗ ಅದನ್ನ ನೋಡಿ ಸುಮ್ಮನಿರಲು ಸಾಧ್ಯವಂತೂ ಇಲ್ಲ.

   ಹಿಂದೂ ಸಮಾಜ ಒಂದಾಗಿರಲೇಬೇಕು ಅನ್ನುವುದೇ ಆಶಯವಾದರೆ, ಎಲ್ಲರ ಆಚಾರ-ವಿಚಾರವನ್ನ ಗೌರವಿಸಿ ಜೊತೆಗೆ ಕರೆದೊಯ್ಯಬೇಕಲ್ಲವೇ? ಒಂದು ಸಮುದಾಯವನ್ನ ಹೊರಗಿಟ್ಟು ಹಿಂದೂ ಸಮಾಜ ನಿರ್ಮಾಣ ಸಾಧ್ಯವೇ?

   ಉತ್ತರ
   • ಸಸ್ಯಹಾರಿ
    ಏಪ್ರಿಲ್ 30 2012

    ವಿಷಯ ಇರುವುದು ಅವರವರ ಮನೆಯಲ್ಲಿ ಏನು ತಿಂತಾರೆ ಅಂತ ಅಲ್ಲ. ಪಬ್ಲಿಕ್ ಅಲ್ಲಿ ಮಾಂಸಾಹಾರ ನಿಷೇಧಿಸಬೇಕು. ಏಕೆಂದರೆ ಹಿಂದೂಗಳಲ್ಲಿ ಉತ್ತಮರಾದ ಹಲವರು ಸಸ್ಯಾಹಾರಿಗಳು ಹಾಗು ಅವರಿಗೆ ಮಾಂಸಾಹಾರ ಇದ್ದ ಕಡೆ ಇರುವುದಕ್ಕೆ ಅಸಹ್ಯವಾಗುವುದು.

    ಹಿಂದೂ ಸಮಾಜದಲ್ಲಿ ಸಸ್ಯಹಾರಿಗಳಿಗೆ ಅವಕಾಶವಿಲ್ಲವೇ? ಯಾವ ದೇವಸ್ತಾನದಲ್ಲಿ ಮಾಂಸಾಹಾರ ತಿನ್ನಬಹುದು ಅಂತ ಬಿಡ್ತಾರೆ? ಸಸ್ಯಾಹಾರ ಪವಿತ್ರವಾದುದು. ಸಾರ್ವಜನಿಕ ಸ್ತಾನದಲ್ಲಿ ಅಪವಿತ್ರಗೊಳ್ಳಲು ಹಲವರು ಸಿಧ್ಹರಿಲ್ಲ !

    ಉತ್ತರ
   • Balachandra
    ಮೇ 1 2012

    ರಾಕೇಶ್,
    ಅವರವರ ಮನೆಯಲ್ಲಿ ತಿಂದುಕೊಳ್ಳಲಿ ಬಿಡಿ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಬೇಡ ಎಂದಿದ್ದು. ಇನ್ನು ನೀವು ಹೇಳಿದ ಧಾಟಿಯಲ್ಲಿಯೇ ಹೇಳುವದಾದರೆ ‘ಅವರವರ ಬೆಡ್ರೂಮ್ ನಲ್ಲಿ ಏನು ನಡೆಯಬೇಕೆಂಬುದನ್ನು ನಾವು ನಿರ್ಧರಿಸಲು ಹೋಗುವದಿಲ್ಲ. ಆದರೆ ಸಾರ್ವಜನಿಕ ಸ್ಥಳಗಳು ಅವರವರ ಬೆಡ್ರೂಮ್ ಆಗಬಾರದು ಎಂಬುದು ನಮ್ಮ ಆಶಯ ಅಷ್ಟೇ’ ಅಂತೆಯೇ ಇದೂ ಕೂಡ.

    ಉತ್ತರ
   • ರವಿಕುಮಾರ ಜಿ ಬಿ
    ಮೇ 4 2012

    ರಾಕೇಶ್ ಸರ್ ,
    ನೀವು ಹೇಳುವುದು ಏನನ್ನು? ನೀವು ತಿನ್ನುವುದು ಎಲ್ಲಾ/ಮಾತ್ರಾ ಒಳ್ಳೆಯದು ಎಂದೋ? ವಿಚಿತ್ರವಪ್ಪಾ!

    ಉತ್ತರ
    • ನಾನು ತಿನ್ನುವುದು ಮಾತ್ರ ಒಳ್ಳೆಯದು ಅಂತ ನಾನು ಹೇಳಿಲ್ಲ. ನಾನು ಇನ್ನೊಬ್ಬರು ಏನು ತಿನ್ನುತ್ತಾರೋ ಅದು ಅವರಿಗೆ ಬಿಟ್ಟ ವಿಷಯ ಅದನ್ನ ಗೌರವಿಸುತ್ತೇನೆ.

     ಉತ್ತರ
 3. Balachandra
  ಏಪ್ರಿಲ್ 30 2012

  ಹಾಗಾದರೆ ಬೌದ್ಧ ಧರ್ಮದಲ್ಲಿ ಮಾಂಸ ಸೇವನೆ ಏಕೆ ನಡೆಯುತ್ತಿದೆ? ಬುದ್ಧನೂ ಸಾಯುವ ಮೊದಲು ಮಾಂಸ ಸೇವಿಸಿದ್ದ ಎನ್ನುತ್ತಾರಲ್ಲ? ಇಂದು ಬಹುತೇಕ ಬೌದ್ಧರು ಮಾಂಸಹಾರಿಗಳೇ ಆಗಿದ್ದಾರಲ್ಲ.

  ಉತ್ತರ
 4. ಗಿರೀಶ್
  ಏಪ್ರಿಲ್ 30 2012

  ಬುದ್ದ ಪ್ರಾಣಿ ಹಿಂಸೆ ಬೇಡ ಅಂದಿದ್ನ? ಸಾರ್, ಅಹಿಂಸೆಯ ಮೊದಲ ಪ್ರತಿಪಾದಕ ಜೈನ ತೀರ್ಥಂಕರುಗಳು. ವೇದಕಾಲಗಳು ಅಪ್ಪಟ ಸಸ್ಯಾಹಾರಗಳೇ. ವೇದದಲ್ಲಿ ಎಲ್ಲಿಯೂ ಮಾಂಸ ಸೇವನೆಯ ಬಗ್ಗೆ ಹೇಳಿಲ್ಲ. ಬೌದ್ದರನ್ನು ಅನುಅಸರಿಸಿ ದೇವಾಲಯಗಳನ್ನು ಕಟ್ಟಲಾಯಿತು ಎನ್ನುವುದು, ಲೇಖಕರ (ವೀರಭದ್ರಪ್ಪ) ನವರ ಪೂರ್ವಾಗ್ರಹವನ್ನು ತೋರಿಸುತ್ತದೆ. ಇತಿಹಾಸವನ್ನು ಯಾರೂ ಹೇಗೆ ಬೇಕಾದರೂ ತಮ್ಮ ಮೂಗಿನ ನೇರಕ್ಕೆ ತಿರುಚಿ ಬರೆಯಬಹುದು ಅದು ಪ್ರಶ್ನಾರ್ಹವಲ್ಲ. ಹಾಗಾಗಿ ಯಾರೂ ಏನೂ ಬೇಕಾದರೂ ಬರೆದುಕೊಳ್ಳಲಿ ಸತ್ಯ ಎಂದಿಗೂ ಮರೆಯಾಗುವುದಿಲ್ಲ

  ಉತ್ತರ
  • valavi
   ಮಾರ್ಚ್ 17 2014

   ಗಿರೀಶ್ ಅವರೆ ಕೇವಲ ವೀರಭದ್ರಪ್ಪ ಮಾತ್ರ ಬೌದ್ಧರನ್ನು ಅನುಸರಿಸಿ ದೇವಾಲಯ ಕಟ್ಟಿದರೆಂದು ಹೇಳಿಲ್ಲ. ಮಾನ್ಯ ಭೈರಪ್ಪನವರು ಕೂಡ ಸಾರ್ಥ ಕಾದಂಬರಿಯಲ್ಲಿ ಹಾಗೆನೆ ಬರೆದಿದ್ದಾರೆ. ಓದಿ ನೋಡಿ.

   ಉತ್ತರ
 5. Balachandra
  ಏಪ್ರಿಲ್ 30 2012

  {ಹೀಗೆ ಬ್ರಾಹ್ಮಣ ಧರ್ಮದಲ್ಲಿ ಸ್ಥಾನವೇ ಇಲ್ಲದ ದೇವಾಲಯಗಳು ಮತ್ತು ಮೂರ್ತಿಪೂಜೆ ಹಿ೦ದೂ ಧರ್ಮದಲ್ಲಿ ಸೇರಿಕೊ೦ಡಿತು (ವೀರಭ್ರದಪ್ಪ ಬಿ.ವಿ: ೨೦೦೨, ೧೯೯) ಎ೦ದು ಸ್ಥಾವರ ದೇವಾಯಗಳ ಕುರಿತು ವೀರಭದ್ರಪ್ಪ ಹೇಳುತ್ತಾರೆ.}
  ರಾಮಾಯಣದಲ್ಲಿ ರಾಮನು ಶಿವನನ್ನು ಪೂಜಿಸಿದ ಬಗ್ಗೆ ಉಲ್ಲೇಕ ಇದೆ. ಅಷ್ಟೇ ಏಕೆ ವೇದಗಳಲ್ಲೂ ಕೂಡ ಶಿವಲಿಂಗವನ್ನು(phallus) ಪೂಜಿಸುತ್ತಿದ್ದರ ಬಗ್ಗೆ ಉಲ್ಲೇಖ ಇದೆ. ಹಾಗೆಯೇ ಪುರಾಣಗಳಲ್ಲಿಯೂ ಕೂಡ ಮೂರ್ತಿ ಪೂಜೆಯ ಬಗ್ಗೆ ಎಷ್ಟೋ ಉದಾರಣೆಗಳಿವೆ. ಅಂದರೆ ಮೂರ್ತಿಪೂಜೆ ಹಿಂದೂ ಧರ್ಮದಲ್ಲಿ ನಂತರ ಸೇರಿಕೊಂಡಿತು ಎಂಬುದು ಅನರ್ಥ.
  {ಗೋಮಾ೦ಸ ಭಕ್ಷಕರು ಯಾಕೆ ವೈದಿಕರನ್ನು ಅನುಸರಿಸಿ ತಾವು ಮೊದಲಿನ ಸ್ಥಾನಗಳಿಸಿಕೊಳ್ಳುವಲ್ಲಿ ವಿಫಲವಾದರು ಎ೦ಬ ಬಗ್ಗೆ ವೀರಭದ್ರಪ್ಪನವರು ‘ಈ ಅನುಸರಣೆ ನಷ್ಟದಾಯಕವಾದುದು, ಆವರಿ೦ದ ನಷ್ಟ ಅನುಭವಿಸಲು ಸಾಧ್ಯವಿರಲಿಲ್ಲ. ಸತ್ತ ಹಸುವಿನ ಮಾ೦ಸವಿಲ್ಲದೇ ಅವರು ಉಪವಾಸ ಬೀಳಬೇಕಾಗಿತ್ತು. ಎರಡನೆಯಗಾಗಿ ಪ್ರಾರ೦ಭದಲ್ಲಿ ಅದೊ೦ದು ಹಕ್ಕಾಗಿದ್ದರೂ ಸತ್ತಪ್ರಾಣಿಯನ್ನು ಹೊರುವುದೀಗ ಹೊಣೆಗಾರಿಕೆಯಾಗಿತ್ತು’ (ವೀರಭ್ರದ್ರಪ್ಪ,ಬಿ.ವಿ: ೨೦೦೨, ೨೦೬)}
  ಇದು reasonable ಎಂದು ನನಗೆ ಅನಿಸುವದಿಲ್ಲ. “ಸತ್ತ ಹಸುವಿನ ಮಾ೦ಸವಿಲ್ಲದೇ ಅವರು ಉಪವಾಸ ಬೀಳಬೇಕಾಗಿತ್ತು” ಎಂಬ ಕಾರಣ ತುಂಬಾ ಉತ್ಪ್ರೇಕ್ಷೆ ಮತ್ತು ಯಾವ ತರ್ಕಗಳೂ ಇದನ್ನು ಸಮರ್ಥಿಸಲಾರವು. ಹಾಗೆ ಉಪವಾಸ ಬೀಳುವಂತಿದ್ದರೆ ಎಲ್ಲ ವರ್ಗದವರೂ ಉಪವಾಸ ಬೀಳಬೇಕಿತ್ತಲ್ಲವೇ?
  { ಬೌದ್ಧಧರ್ಮ ಮತ್ತು ವೈದಿಕಧರ್ಮಗಳೂ ಪರಸ್ಪರ ಮೇಲ್ಮೆಗಾಗಿ ನಡೆಸಿದ ಹೋರಾಟಾದ ಪರಿಣಾಮವಾಗಿ ಅಸ್ಪೃಶ್ಯತೆ ಹುಟ್ಟಿಕೊ೦ಡಿತು.}
  ಬರೇ hypothesis. ಯಾವ ತಾರ್ಕಿಕ ಆಧಾರಗಳೂ ಇಲ್ಲ. ಹಾಗೊಂದು ವೇಳೆ ತರ್ಕಿಸುವದಾದರೆ ಸಸ್ಯಹಾರಿಗಳಲ್ಲದ ಬ್ರಾಹ್ಮಣೇತರರು(ವೈಶ್ಯ, ಕ್ಷತ್ರಿಯರು) ಕೂಡ ಅಸ್ಪ್ರಷ್ಯರಾಗುತ್ತಿದ್ದರು. ಹಾಗೇನೂ ಆಗಿಲ್ಲವಲ್ಲ.
  ನನಗೆ ತಿಳಿದ ಮಟ್ಟಿಗೆ ಹೇಳುವದಾದರೆ, ಅಸ್ಪ್ರಶ್ಯತೆ ಹುಟ್ಟಿಕೊಂಡಿದ್ದು ಜೀತ ಪದ್ಧತಿ(feudal ಸಿಸ್ಟಮ್) ಯಿಂದ ಎನ್ನಬಹುದು. ಆರ್ಥಿಕವಾಗಿ ತೀರ ಹಿಂದುಳಿದವರನ್ನು ಶ್ರೀಮಂತರುಗಳು exploit ಮಾಡುತ್ತಿದ್ದರು. ಇದರಿಂದ ಅವರ ಸಾಮಾಜಿಕ ಹಾಗೂ ಆರ್ಥಿಕ ಜೀವನಮಟ್ಟ ಕೆಳಸ್ತರದ್ದಾಗಿತ್ತು. ಹೀಗಾಗಿ ಅವರು ಕೀಳು ಎಂಬಂತಹ ಭಾವನೆ ಕ್ರಮೇಣ ಬಂದಿರಬಹುದು. ಯಾಕೆಂದರೆ ಪಾಶ್ಚಿಮಾತ್ಯ ದೇಶಗಳಲ್ಲಿಯೂ ನಿಗ್ರೋಗಳನ್ನು ಕೀಳು ತರಗತಿಯಲ್ಲೇ ಕಾಣಲಾಗುತ್ತಿತ್ತು. ಅಲ್ಲಿಯೂ ಕೂಡ ಆಹಾರ ಪದ್ಧತಿ ಮೇಲು-ಕೀಳು ಎಂಬುದನ್ನು ಹುಟ್ಟುಹಾಕಲಿಲ್ಲ. ಅದಕ್ಕೆ ಕಾರಣ ಮೈಬಣ್ಣವಾದರೂ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ನಿಗ್ರೋಗಳು ಹಿಂದುಳಿದದ್ದು ಪ್ರಮುಖ ಕಾರಣವಾಗಿತ್ತು. ಅಂದರೆ ಆಹಾರ ಪದ್ಧತಿ ಅಸ್ಪ್ರಷ್ಯತೆಯನ್ನು ಹುಟ್ಟುಹಾಕಿತ್ತೆಂದು ಯಾವ ವಾದವೂ ಸಮರ್ಥಿಸುವದಿಲ್ಲ. ಬದಲಾಗಿ ಆರ್ಥಿಕ ಹಾಗೂ ಸಾಮಾಜಿಕ ಅಪ್ರಗತಿ ಅಸ್ಪ್ರಶ್ಯತೆಗೆ ಕಾರಣ.
  ಇನ್ನು ಇತಿಹಾಸವನ್ನು ಬಹಳ ಜನ ಪೂರ್ವಗ್ರಹ ಪೀಡಿತರಾಗಿ ಬರೆದಿರುತ್ತಾರೆ ಎಂಬುದೂ ಅಷ್ಟೇ ನಿಜ. Max Muller, Romila Tapar ನಿಂದ ಹಿಡಿದು ಬಹಳಷ್ಟು ಇತಿಹಾಸಕಾರರು ದೇಶವನ್ನು ಒಡೆಯುವ ಇತಿಹಾಸವನ್ನು ರಚಿಸಿ ಕೃಪೆ ತೋರಿದ್ದಾರೆ. ಸ್ವತಹ Max Muller ನೇ ಆರ್ಯ-ದ್ರಾವಿಡ theory ಸುಳ್ಳೆಂದು ಒಪ್ಪಿಕೊಂಡರೂ, genetic study ಕೂಡ ಇದನ್ನೇ ಸ್ಪಷ್ಟಪಡಿಸಿದರೂ ಇತಿಹಾಸಕಾರರಿಗೆ, ದಿನೇಶ್ ಅಮಿನ್ ಮಟ್ಟುವಂತಹ ಪತ್ರಕರ್ತರಿಗೆ ಸಮ್ಮತವಾಗಿಲ್ಲ. ಯಾವುದೋ ಒಂದು ಸಮುದಾಯದ ಮೇಲಿನ ತಮ್ಮ ವೈಯಕ್ತಿಕ ದ್ವೇಷವನ್ನು ಕಾರಿಕೊಳ್ಳಲು ಅವರಿಗೂ ಅವಕಾಶ ಬೇಕು. ಹಾಗಾಗಿ ಇಂತಹ ಸುಳ್ಳು ಪ್ರತಿಪಾದನೆಗಳು, ವಾದಗಳೂ ಜನರ ಹಾದಿ ತಪ್ಪಿಸಲು ನಿತ್ಯ ನಿರಂತರವಾಗಿ ಸೃಷ್ಟಿಯಾಗುತ್ತಲೇ ಇರುತ್ತವೆ.

  ಉತ್ತರ
 6. ಏಪ್ರಿಲ್ 30 2012

  ಒಂದು ಸಮಾಜದಲ್ಲಿ ಯವುದೊ ಒಂದು ವರ್ಗ ಜಾತಿ ಪದ್ದತಿಯನ್ನ ಜಾರಿಗೆ ತಂದಿತು ಎನ್ನುವುದು ಹಾಸ್ಯಾಸ್ಪದ. ಸಮಾಜದ ಎಲ್ಲ ವರ್ಗಗಳೂ ಈ ಕ್ರಿಯೆಯಲ್ಲಿ ತಮ್ಮ ತಮ್ಮ ಕೊಡುಗೆ(?) ನೀಡಿವೆ. ಈಗಿನ ಸಮಾಜವನ್ನೇ ಗಮನಿಸಿದರೆ, ಯಾವ ಸಮುದಾಯದವರಾದರೂ ಸಹ ತಮ್ಮ ಮನೆ ಕೆಲಸದವರು ಯಾವ ಜಾತಿಯವರದರೂ ಸಹ ಅವರನ್ನು ಮನೆ ಕೆಲಸವದವರು ಎಂದೇ ಕರೆಯುತ್ತಾರೆಯೇ ಹೊರತು, ಈತ ಈ ಸಮುದಾಯದವನು ಆತ ಆ ಸಮುದಾಯದವನು ಎಂದು ನೋಡುವುದಿಲ್ಲ. ಇಲ್ಲಿ ಮನೆ ಕೆಲಸದವರು ಒಂದು ವರ್ಗ, ಯಜಮಾನರುಗಳದು ಒಂದು ವರ್ಗ. ಹಾಗೆಯೇ, ಹಿಂದೆ ಸಮಾಜದಲ್ಲಿ ತಕ್ಕ ಮಟ್ಟಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿಯುತ ಸಮುದಾಯವೊಂದು ಅಷ್ಟೇನು ಶಕ್ತಿಯುತವಲ್ಲದ ಇನ್ನೊಂದು ಸಮುದಾಯವನ್ನು ತಮ್ಮ ಕೆಲಸಗಳಿಗೆ ನೇಮಿಸಿಕೊಡಿತು. ಯಾರದೆ ಮನೆಯಲ್ಲಾದರೂ ಸಹ ಮನೆಗೆಲಸದವರೊಂದಿಗೆ ಮನೆಯಮಂದಿ ಅಷ್ಟೇನು ಬಾಂಧವ್ಯ ಹೊಂದಿರುವುದಿಲ್ಲ. ಹಾಗಾಗಿ ಸಹಜವಾಗಿಯೇ ಬೇರೆ ಬೇರೆ ವರ್ಗಗಳು ಸೃಷ್ಠಿಯಾದವು. ಮನೆ ಮಾಲಿಕರು ಮೇಲ್ವರ್ಗದವರೆನಿಸಿಕೊಂಡರು, ಮನೆಗೆಲಸದವರು ಕೆಳವರ್ಗದವರೆಸಿಕೊಂಡರು. ದೇವರ ಮೂರ್ತಿ ತೊಳೆಯುವವನು ಪುರೋಹಿತನಾದನು, ಅದೇ ದೇವಸ್ಥಾನದ ಅಂಗಳ ಸಾರುವವನು ಕೆಳವರ್ಗದವರೆಸಿಕೊಂಡನು. ಈ ವರ್ಗೀಕರಣ ಎಲ್ಲ ಸಮಾಜಗಳಲ್ಲೂ ಸಹಜವಾಗಿಯೇ ಕಂಡು ಬರುತ್ತದೆ. ಇದಕ್ಕೆ ಆ ಕಾಲದ ಯವುದೋ ಒಂದು ಸಮುದಾಯ ಕಾರಣ ಎನ್ನುವುದಕ್ಕಿಂತ ಆ ಸಮಾಜದ ಎಲ್ಲ ಸಮುದಾಯಗಳೂ ಈ ಪದ್ಧತಿಯ ಹೊಣೆ ಹೊರತಕ್ಕವರು.

  ಇನ್ನು ಮಾಂಸಾಹಾರ ಸೇವನೆ ಬಿಟ್ಟದ್ದು, ಬಿಡದಿದ್ದುದು ಸಮಾಜದಲ್ಲಿ ಅನಿಷ್ಠ ಪದ್ಧತಿಗಳಿಗೆ ಕಾರಣವಾಯಿತು ಎಂಬುದುನ್ನು ನಂಬುವುದು ಕಷ್ಟ ಸಾಧ್ಯವಷ್ಟೆ. ರಾಮ-ಕೃಷ್ಣರು ಸಸ್ಯಹಾರಿಗಳಾಗಿದ್ದರು. ರಾಮ-ಕೃಷ್ಣರ ಕಾಲದಿಂದಲೂ ಸಮಾಜದ ವರ್ಗೀಕರಣ ಜಾರಿಯಲ್ಲಿದೆ. ಪುರಾಣಗಳ ಪ್ರಕಾರ ರಾಮ-ಕೃಷ್ಣರ ನಂತರ ಬುದ್ಧನ ಉದಯವಾಯಿತು. ಹಾಗಗಿ ಬೌದ್ಧ ಧರ್ಮದ ಜೊತೆಗೆ ಸನಾಥನ ಧರ್ಮ ಉಳಿವಿಗಾಗಿ ಮಾಂಸಾಹಾರ ವರ್ಜಿಸಿ ನಡೆಸಿದ ಪೈಪೋಟಿ ಅನಿಷ್ಠ ಪದ್ಧತಿಗಳ ಉಗಮಕ್ಕೆ ಕಾರಣವಾಯಿತು ಎನ್ನುವುದು ಸುಳ್ಳೆನಿಸುತ್ತದೆ.

  ಭಾರತದಲ್ಲಿ ಜಾತಿಪದ್ಧತಿ ಹೇಗೆ ಜನ್ಮ ತಳೆಯಿತು ಎಂಬುದರ ಕುರಿತ ಸಂಶೂಧನೆ ಸಮಯ ವ್ಯರ್ಥವಷ್ಟೆ. ಈ ಜಾತಿಪದ್ಧತಿಗೆ ತುತ್ತಾದವರನ್ನು ಮತ್ತು ಹಿಂದುಳಿದ/ ಕೆಳವರ್ಗದ ಜನರನ್ನು ಹೇಗೆ ಮೇಲೆತ್ತುವುದು ಎಂಬುದರ ಕುರಿತು ಅಧ್ಯಯನಗಳು, ಸಂಷೋಧನೆಗಳು ನಡೆಯುವುದು ಈಗಿನ ಸಮಾಜಕ್ಕೆ ಒಳಿತನ್ನುಟು ಮಾಡಬಹುದಾದಂತ ಕಾರ್ಯಗಳು.

  ಉತ್ತರ
 7. Ananda Prasad
  ಮೇ 1 2012

  ವಿಶ್ವದಲ್ಲಿ ಬಹುಸಂಖ್ಯಾತರು ಮಾಂಸಾಹಾರಿಗಳು. ಒಟ್ಟು ೬೫೦ ಕೋಟಿ ವಿಶ್ವ ಜನಸಂಖ್ಯೆಯಲ್ಲಿ ೫೦ರಿಂದ ೬೦ ಕೋಟಿ ಜನ ಮಾತ್ರ ಸಸ್ಯಾಹಾರಿಗಳಿರಬಹುದು ಅಂದರೆ ಶೇಕಡಾ ಹತ್ತಕ್ಕಿಂತಲೂ ಕಡಿಮೆ. ಬೇರೆ ದೇಶಗಳಿಗೆ ಹೋದರೆ ಸಸ್ಯಾಹಾರಿಗಳು ತಮಗೆ ಬೇಕಾದ ಆಹಾರವನ್ನು ಪಡೆಯಲು ಪರದಾಡಬೇಕಾದ ಪರಿಸ್ಥಿತಿ ಬರುವುದನ್ನು ಹಲವಾರು ಸಸ್ಯಾಹಾರಿ ಪ್ರವಾಸಿಗಳು ತಮ್ಮ ಪ್ರವಾಸಕಥನಗಳಲ್ಲಿ ದಾಖಲಿಸಿರುವುದನ್ನು ನಾವು ನೋಡಬಹುದು.

  ಉತ್ತರ
  • Suraj B Hegde
   ಮೇ 8 2012

   ಮಾಂಸಹಾರಿಗಳು ಮಾಸವನ್ನೇ ತಿನ್ನಲಿಕ್ಕಾಗುವುದೆ?! ಹಾ?! 😮

   ಉತ್ತರ
   • Ananda Prasad
    ಮೇ 8 2012

    ಮಾನವರಲ್ಲಿ ಮಾಂಸಾಹಾರಿಗಳು ಎಂದರೆ ಶುದ್ಧ ಮಾಂಸಹಾರಿಗಳಲ್ಲ (ಹುಲಿ, ಚಿರತೆ, ಸಿಂಹಗಳಂತೆ). ಮಾನವರಲ್ಲಿ ಮಾಂಸಾಹಾರಿಗಳು ಎಂದರೆ ಸಸ್ಯಾಹಾರದ ಜೊತೆ ಮಾಂಸವನ್ನೂ ಸೇವಿಸುವವರು ಎಂಬುದು ಸಾಮಾನ್ಯ ಗ್ರಹಿಕೆ.

    ಉತ್ತರ
 8. ರವಿಕುಮಾರ ಜಿ ಬಿ
  ಮೇ 4 2012

  ಆಧಾರರಹಿತ-ಅಸಂಬದ್ದ ಲೇಖನ(ಇದು ಮತ್ತು ಇವರು ಹೇಳಿದ (ವೀರಭದ್ರಪ್ಪ, ಬಿ.ವಿ: ೨೦೦೨)) ಅಸ್ಪ್ರುಶ್ಯತೆ ಬ್ರಾಹ್ಮಣರು ಮಾತ್ರವೇ ಮಾಡಿಲ್ಲ ,ಇತರರೂ ಅಸ್ಪ್ರುಷ್ಯತೆಯನ್ನು ಪ್ರೋತ್ಸಾಹಿಸಿದರು,ಹೆಚ್ಚೇಕೆ ಅಸ್ಪ್ರುಷ್ಯರೆನಿಸಿ ಕೊಂಡವರಲ್ಲೇ ಇನ್ನೊಂದು ಅಸ್ಪೃಶ್ಯ ಒಳ ಪಂಗಡ ಇತ್ತು! ಹಾಗಾಗಿ ಎಲ್ಲದಕ್ಕೂ ಬ್ರಾಹ್ಮಣರನ್ನು ಮಾತ್ರ ದೂರೋದು ಒಂದು ಕುತ್ಸಿತ ಮನಸ್ಸಿನ ಚಟ !

  ಉತ್ತರ
  • Balachandra
   ಮೇ 6 2012

   100 % ನಿಜ. ಅವರ ವಾದ ನಿಜವಾಗಿದ್ದರೆ ಶೂದ್ರರನ್ನು ಹೊರತುಪಡಿಸಿ ಉಳಿದವರೆಲ್ಲರೂ(ವೈಶ್ಯ, ಕ್ಷತ್ರಿಯ, ಬ್ರಾಹ್ಮಣ ) ಸಸ್ಯಹಾರಿಗಳಾಗಿರುತ್ತಿದ್ದರು. ಆದರೆ ಕ್ಷತ್ರಿಯರು ಯಾವ ಕಾಲದಲ್ಲಿ ತಾನೇ ಸಸ್ಯಹಾರಿಗಳಾಗಿದ್ದರು?
   ಉತ್ತರ ಭಾರತದಲ್ಲಿ ಕೆಲವು ಯಾದವರು ದಲಿತರನ್ನು ಶೋಷಿಸಿದ ಪರಿಯಲ್ಲಿ ಬ್ರಾಹ್ಮಣರೂ ಶೋಶಿಸಿಲ್ಲ. ಆದರೂ ಶೋಷಣೆಯ ವಿಚಾರ ಬಂದಾಗ ಬ್ರಾಹ್ಮಣರೇ ಕರ್ತ್ರರೆಂಬಂತೆ ಹಣಿಯುವದನ್ನು ನೋಡಿದರೆ ಇವರ ಮಾನಸಿಕ ದೌರ್ಬಲ್ಯ ಅರ್ಥವಾಗುತ್ತದೆ.

   ಉತ್ತರ
  • ಸಸ್ಯಹಾರಿ
   ಮೇ 6 2012

   ಇವೊತ್ತು ಅಧಿಕಾರದಲ್ಲಿ ಹಾಗು ರಾಜಕೀಯದಲ್ಲಿ ಇರುವವರಲ್ಲಿ ಅಬ್ರಾಹ್ಮಣರೆ ಹೆಚ್ಚು. ಇವರೆಲ್ಲ ಇಷ್ಟು ವರ್ಷ ಆಳಿದರು ದಲಿತರು ಉದ್ದಾರ ಆಗಿಲ್ಲ ಅಂತ ಆದರೆ ಅದಕ್ಕೆ ಬ್ರಾಹ್ಮಣರು ಕಾರಣವಂತೆ.

   ಉತ್ತರ
   • Suraj B Hegde
    ಮೇ 8 2012

    ಕೋತಿ ತಾನು ಮಾಡೋದು ಮಾಡಿ ಮೇಕೆ ಮೂತಿಗೆ ಒರೆಸಿತ್ತು ಅಂತ ಹೇಳೋದು ಇದಕ್ಕೆ ಸ್ವಾಮಿ!

    ಉತ್ತರ
 9. guru
  ಮೇ 7 2012

  ವೀರಭದ್ರಪ್ಪ ಬಿ.ವಿ ಮತ್ತ್ತು ಸಾತ್ವಿಕ್ ಎನ್ ವಿ ಇಬ್ಬರಲ್ಲು ಇತಿಹಾಸದ ಗ್ರಹಿಕೆಯಲ್ಲಿನ ಕೊರತೆ ನಿಚ್ಚಳವಾಗಿ ಕಂಡು ಬರುತ್ತಿದೆ.ಅತಾರ್ಕಿಕ,ಅಸಂಬದ್ದ ವಾದವೊಂದನ್ನು ನಮ್ಮ ಮುಂದಿಟ್ಟಿದ್ದಾರೆ.ಅಸ್ಪರ್ಶತೆಯ ಹುಟ್ಟಿನಲ್ಲಿ ಸಮಾಜದ ಎಲ್ಲ ವರ್ಗಗಳು ಪಾಲುದಾರರು.

  ಉತ್ತರ
 10. vageesh kumar G A
  ಮೇ 15 2012

  ಇದೆಲ್ಲಾ ವ್ಯರ್ಥ ವಾದಗಳು. ಬಸವಣ್ಣ ಬ್ರಾಹ್ಮಣನಾಗಿದ್ದ ಒಬ್ಬರು ಆಧಾರ ಸಹಿತ ತೋರಿಸಿದ್ರೆ, ಇನ್ನೊಬ್ಬರು ಅದಕ್ಕೆ ತದ್ವಿರುದ್ದವಾಗಿ ಹೇಳುತ್ತಾರೆ, ವಾದ ಮಂಡಿಸುತ್ತಾರೆ. ಇಂತಹ ಅನಾವಶ್ಯಕ ವಿಶಯಗಳ ಬಗ್ಗೆ ಇನ್ನಾದರೂ ಸೋ ಕಾಲ್ಡ್ ಲೇಖಕರು, ಪ್ರತಿಕ್ರಿಯೆ ನೀಡುವವರು, ವಾದ-ಪ್ರತಿವಾದ ಮಂಡಿಸದೆ, ಮಾನವ ಸಹಜ ಜೀವನದ ಏಳ್ಗೆಯ ಬಗ್ಗೆ ಏನಾದರೂ ಟಿಪ್ಸ್ ಗಳನ್ನು ಕೊಟ್ರೆ ನಾವೂ ಉದ್ಧಾರವಾಗ್ತೀವಿ, ಸಮಾಜವೂ ಉದ್ಧಾರ ಆಗುತ್ತೆ.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments