ವಿಷಯದ ವಿವರಗಳಿಗೆ ದಾಟಿರಿ

ಮೇ 18, 2012

ಹುಚ್ಚು ಬುದ್ದಿಯ ಹತ್ತು ಪ್ರತಿಜ್ಞೆಗಳು

by ನಿಲುಮೆ

-ಪ್ರಶಸ್ತಿ. ಪಿ ಶಿವಮೊಗ್ಗ


೧) FB ಬಿಡಬೇಕು
ನಿನ್ನೆ Times Of India ದಲ್ಲಿ ಓದ್ತಾ ಇದ್ದೆ. ಒಬ್ಬ ಭಾರತೀಯ ದಿನದಲ್ಲಿ ಅಂದಾಜು ೮ ಘಂಟೆ ಕಾಲ ಇಂಟನ್ರೆಟ್ಟಲ್ಲೇ ಕಳೀತಾನೆ ಅಂತ.ಅಂದ್ರೆ ನಾವು ಎಚ್ಚರ ಇರೋದ್ರಲ್ಲಿ ಅರ್ಧ ಭಾಗ ಇಲ್ಲೇ ಆಯ್ತು!! ಅದರಲ್ಲಿ ಕೆಲ ಭಾಗ ಕೆಲಸಕ್ಕಾದ್ರೆ ಕೆಲ ಭಾಗ ಇಲ್ಲೇ.. ಇದರಿಂದ ಏನಾದ್ರೂ ಲಾಭ ಇದ್ಯಾ ? ಸಾಮಾಜಿಕ ತಾಣಗಳು ಇರೋದೇ Time Pass ಗೆ,  ಜೀವನದಲ್ಲಿ ಎಲ್ಲದನ್ನೂ ಲಾಭ , ನಷ್ಟ ಅನ್ನೋ ವ್ಯಾಪಾರಿ ಬುದ್ದಿಯಿಂದ ತೂಗಕ್ಕಾಗಲ್ಲಾ ಅಂದ್ರಾ? ಹೂಂ ಅಂದೆ ಕಣ್ರಿ… ಆದ್ರೂ..

೨)ಸಂದೇಶ ಕಳ್ಸೋದನ್ನ(ಮೆಸೇಜ್ ಮಾಡೋದನ್ನ) ಬಿಡ್ಬೇಕು
ಈಗೊಂದು ಆರು ದಿನದ ಹಿಂದೆ ಸಂದೇಶ ಕೌಂಟರನ್ನ ಮರುಸ್ಥಾಪಿಸಿಟ್ಟಿದ್ದೆ. ಖಾಲಿ ಕೂತಾಗ ಅತ್ವಾ ಬೇಜಾರಾದ ದಿನಗಳಲ್ಲಿ ಅಂದಾಜು ಎಷ್ಟು ಸಂದೇಶ ಕಳಿಸ್ತೀನಿ ನೋಡ್ಬೇಕು ಅಂತ.. ಆರು ದಿನ ಬಿಟ್ಟು ನೋಡಿದ್ರೆ ಐನೂರು ಚಿಲ್ರೆ ಆಗಿತ್ತು. ಅದೇನು ಮಹಾ ಅಂದ್ರಾ? ಒಂದು ಮೆಸೇಜಿಗೆ ಒಂದು ೩೦ ಸೆಕೆಂಡು ಅಂತಿಟ್ಕೊಳ್ರಿ.( ದೊಡ್ಡ ಮೆಸೇಜು ಬರ್ಯೋದು ಅಂದ್ರೆ ಒಂದೋ , ಎರ್ಡೋ ನಿಮಿಷನೂ ಆಗ್ಬೋದು. ಅದ್ನ ಸದ್ಯಕ್ಕೆ ಬಿಡೋಣ). ಅದನ್ನ ಕಳಿಸಿದ ಮೇಲೆ ಮತ್ತೊಂದು ೩೦ ಸೆಕೆಂಡಾದ್ರೂ ಅದೇ ಮೂಡಲ್ಲಿರ್ತೀವಾ ?..ಅಲ್ಲಿಗೆ ೧ ನಿಮಿಷ ಆಯ್ತು. ದಿನಕ್ಕೆ ನೂರು ಮೆಸೇಜು ಅಂದ್ರೆ ನೂರು ನಿಮಿಷ ಅಂದ್ರೆ ಸುಮಾರು ಒಂದೂವರೆ ,೨ ಘಂಟೆ !!.. “ಹರ್ ಏಕ್ ಪ್ರೆಂಡ್ ಜರೂರಿ ಹೋತಾ ಹೈ..”  ಯಾರ್ನೂ ಬಿಡಕ್ಕೆ ಬರಲ್ಲ.. ಆದ್ರೂ..

೩)ಬರ್ಯೋದನ್ನ ಬಿಡ್ಬೇಕು
ಏನಾರೂ ಬರೀಬೇಕು ಅಂತ ಅನ್ಸಿದ್ರೆ ಅದ್ನ ಬರ್ಯೋವರ್ಗೂ ಸಮಾಧಾನ ಇರಲ್ಲ. ಕಂಪ್ಯೂಟ್ರಿಲ್ಲ ಅಂದ್ರಂತೂ ಇನ್ನೂ ಗೋಳು. ಗೆಳೆಯರತ್ರ ಹೋಗಿ , ಅವ್ರು ಯಾವಾಗ ಕಂಪ್ಯೂಟ್ರನ್ನ ಉಪಯೋಗಿಸಲ್ಲ ಅಂತ ನೋಡ್ಕೊಂಡು, ಅವರನ್ನ ಗೋಗರೆದು ಕೇಳಿ.. ಅಬ್ಬಾ, ಅಂತೂ ಬರ್ಯೋ ಅಷ್ಟೊತ್ತಿಗೆ ಸಾಕು ಸಾಕಾಗಿರುತ್ತೆ. ಕೆಲೋ ಗೆಳೆಯರು ತುಂಬಾ ಒಳ್ಳೇಯವರಿರ್ತಾರೆ. ಏ ಬರ್ಯೋ ಅಂತ ಅವರೆ ಲ್ಯಾಪಿ ಕೊಡ್ತಾರೆ. ಇನ್ನು ಕೆಲವ್ರ ಕತೆ ಹೇಳ್ದೇ ಇದ್ರೇನೆ ಒಳ್ಳೇದು. ಅದೇನು ಕತೆ, ಕವಿತೆ ಅಂತ ಗೀಚ್ತಾ ಕೂರ್ತೀಯೋ ಮಾರಾಯ , ಮಾಡಕ್ಕೆ ಬೇರೆ ಕೆಲ್ಸ ಇಲ್ವಾ ಅಂತನೋ ಬಂದ ನೋಡಪ್ಪಾ ಸಾಯಿತಿ ಅಂತನೋ.. ಏನೋ ಒಂದು.. ಹಿಂದು ಬಿಟ್ಟು ಹೇಳದಕ್ಕೆಲ್ಲಾ ತಲೆ ಕೆಡಿಸ್ಕೋಬಾರ್ದು ಬಿಡಿ.. ಆದ್ರೂ ಈ ಬೇಡೋದಿದ್ಯಲ್ಲಾ ಅದು ಒಂದು ದೈನೇಸಿ ಬದುಕು.ನಮ್ಮ ಬಗ್ಗೇನೇ ಒಂದೊದ್ಸಲ ಬೇಜಾರಾಗಕ್ಕೆ ಶುರು ಆಗ್ಬಿಡತ್ತೆ. ನೆಗಡಿ ಆಯ್ತು ಅಂತ ಮೂಗು ಕತ್ತರಿಸಿಕೊಳ್ಳಕಾಗಲ್ಲ ಸರಿ.. ಆದ್ರೂ..

೪)ಭಾವನೆಗಳನ್ನ ಬಿಡ್ಬೇಕು
ಯಾರೋ ಏನೋ ಅಂದ್ರು ಅಂತನೋ , ಯಾರೋ ಅನ್ಬೇಕಾದವ್ರು ಅನ್ಲಿಲ್ಲ ಅಂತನೋ ತಲೆ ಕೆಡ್ಸಿಕೊಳ್ಳೋದ್ರಲ್ಲೇ ಎಷ್ಟೊಂದು ಸಮಯ ವ್ಯರ್ಥ ಮಾಡಿರ್ತೀವಿ.. ಉಪಕಾರ ಮಾಡ್ದೋರು ಅದ್ನ ನೆನಪಿಟ್ಕೊಳ್ಲಿ ಅಂತ ಬಯಸೋದು ತಪ್ಪು, ಅವರನ್ನು ನಂಬ್ಕೋಳ್ಳೋದು ತಪ್ಪೇ, ಪ್ರಯತ್ನಕ್ಕೆ ಬೆಲೆ ಸಿಗೋತ್ತೆ ಅಂತ ಬಯಸೋದೂ ತಪ್ಪೇ.. ಜೀವನ ಅನ್ನೋ ನಿರಂತರ ಪ್ರಯಾಣದಲ್ಲಿ ಪ್ರತಿ ದಿನ ನೂರಾರು ಜನ ಸಿಗ್ತಾರೆ. ಸಿಗೋ ಜನಗಳದ್ದೇ ಹೊಸ ಹೊಸ ಮುಖ ಕಾಣ್ತಿರತ್ತೆ ಪ್ರತೀ ಸಾರೀನೂ. ಹೀಗಾದಾಗ ಯಾರನ್ನ ನಂಬೋದು , ಯಾರನ್ನ ಬಿಡೋದು?
ಯಾರನ್ನಾದ್ರೂ , ಯಾವುದನ್ನಾದ್ರೂ ಹಚ್ಕೊಂಡ್ರೆ ಮಾತ್ರ ಅದ್ರಿಂದ ಬೇಜಾರಾಗೋದು ಅಲ್ವಾ ?

೫)ಪ್ರತಿಫಲದ, ಪ್ರೋತ್ಸಾಹದ ನಿರೀಕ್ಷೆ ಬಿಡ್ಬೇಕು
ಈ ಬಗ್ಗೆ ಮೊದ್ಲೆ ಹೇಳಿದ್ನಲ್ಲ. ಮತ್ಯಾಕೆ ಕೊರಿತಿದೀನಿ ಅಂದ್ಕಂಡ್ರಾ ? ನಿಮ್ಮಿಂದ ಈ ಪ್ರತಿಫಲ ನಿರೀಕ್ಷಿಸಿರಲಿಲ್ಲ 🙂 ಅದೂ ಅಲ್ದೇ ಇನ್ನೂ ಸ್ವಲ್ಪ ಹೇಳೋದಿತ್ತು . ಇದನ್ನೇ ಸ್ವಲ್ಪ ಬೇರೆ ತರ ಹೇಳೋದಾದ್ರೆ ,ಯಾರಿಗೋ ಹೊಗಳಿದೆ ಅಂದ್ರೆ ಅವ್ರೂ ತಿರ್ಗಿ ನನ್ನ ಹೊಗಳ್ಬೇಕು ಅನ್ನೋದು !! ಸಣ್ಣ ಮಕ್ಕಳನ್ನೇ ನೋಡಿ. ಒಬ್ಬ ತನ್ನ ಹುಟ್ಟಿದಬ್ಬಕ್ಕೆ ಎಲ್ರಿಗೂ ಚಾಕ್ಲೇಟು ತಂದ್ಕೊಟ್ಟ ಅಂದ್ಕೊಳ್ಳಿ. ಅವ್ನು ಯಾವ್ದೇ ಹುಟ್ಟಿದಬ್ಬ ಬಂದ್ರೂ ಅವ್ರು ತಂಗೂ ಚಾಕ್ಲೇಟು ಕೊಡ್ತಾರೆ ಅಂತ ಕಾಯ್ತಿರ್ತಾನೆ. ಕೊಡ್ಲಿಲ್ಲ ಅಂದ್ರೆ ಬೇಜಾರಾಗುತ್ತೆ . ಅದೇ ಉದಾಹರಣೇನ ಈಗ ಸ್ವಲ್ಪ ವಾಸ್ತವಕ್ಕೆ  ತರೋಣ. ಯಾರೋ ಗೆಳೆಯ ಒಳ್ಳೆಯ ಅಂಕ ಪಡೆದಿರ್ತಾನೆ, ಓಟದಲ್ಲಿ ಮೊದಲ್ನೇ ಬಂದಿರ್ತಾನೆ, ಯಾವುದೋ ಸ್ಪರ್ಧೆಯಲ್ಲಿ ಗೆದ್ದಿರ್ತಾನೆ, ಯಾವ್ದೋ ಪ್ರೋಗ್ರಾಮನ್ನ ತುಂಬಾ ಚೆನ್ನಾಗಿ ಮಾಡಿರ್ತಾನೆ . ಅವಾಗ ನಾವು ಅವನಿಗೆ ಚೆನ್ನಾಗೆ ಪ್ರೋತ್ಸಾಹಿಸಿರ್ತೀವಿ. ಬೇರೆ ಗೆಳೆಯರತ್ರ, ಲೆಕ್ಚರತ್ರ, ಅವ್ನ ಸ್ನೇಹಿತೆ ಹತ್ರನೂ ಹೇಳಿ!!.. ಅವರೆಲ್ಲರಿಂದಲೂ ಅವನಿಗೆ ಮೆಚ್ಚುಗೆ ಮಾತುಗಳು ಸಿಗೋ ಹಾಗೆ ಮಾಡಿರ್ತೀವಿ. ಆದ್ರೆ ನಾವು ಶ್ರಮ ಹಾಕಿ ಮಾಡಿರೋ ಒಳ್ಳೇ ಪ್ರಾಜೆಕ್ಟನ್ನೋ , ಬರೆದ ಕವನವನ್ನೋ , ತೆಗೆದ ಫೋಟೋವನ್ನೋ ಆ ಗೆಳೆಯನನ್ನೂ ಹಿಡಿದು ಯಾರೂ ಪ್ರೋತ್ಸಾಹಿಸ್ದೇ ಇದ್ದಾಗ ಮತ್ತದೇ ಒಂಟಿತನ, ಬೇಸರ ಹೀಗೆ ನೂರೆಂಟು ನೋವಿನ ಭಾವ ಕಾಡೋಕೆ ಶುರು ಆಗುತ್ತೆ. ಅದಕ್ಕೆ ನಾವು ಮಾಡಿದ್ರಿಂದ ಅವ್ರು ನಮ್ಮನ್ನು ಗ್ಯಾರಂಟಿ ಮರ್ಯಲ್ಲ, ಯಾರೋ ನಮ್ಮ ಬೆನ್ನು ತಟ್ತಾರೆ ಅನ್ನೋ ತರದ ನಿರೀಕ್ಷೆಗಳನ್ನೆಲ್ಲಾ ಇಟ್ಕೊಳ್ಲೆಬಾರ್ದು.

೬)ಸ್ವಾರ್ಥ
ಇದೊಂತರ ಇಬ್ಬದಿಯ ಕತ್ತಿ ಇದ್ದಂಗೆ. ಬೇಕೋ ಬೇಡ್ಬೋ ಏನೂ ಹೇಳಕ್ಕಾಗಲ್ಲ. ನಮ್ಮ ಸರ್ ಒಬ್ರಿದ್ರು. ನೀವು ಸ್ವಲ್ಪನಾದ್ರೂ ಸ್ವಾರ್ಥಿಗಳಾಗ್ಲೇ ಬೇಕು ಬದುಕಲ್ಲಿ ಅಂತಿದ್ರು. ಖಂಡಿತ ಹೌದು ಅನ್ಸುತ್ತೆ. ನಾವು ಪ್ರತೀಸಾರಿನೂ ಇಂಟ್ರುಗೆ ಹೋಗ್ತಾ ಆ ಇಂಟ್ರು ಬಗ್ಗೆ ಗೆಳೆಯನೊಬ್ನಿಗೆ ಹೇಳ್ತಿರ್ತೀವಿ. ಅವ್ನೊಂದಿನ ಇದ್ದಕ್ಕಿದ್ದಂಗೆ ಯಾವ್ದೋ ಕಂಪೆನಿ ಇಂಟ್ರುಗೆ ಹೋಗಿ ಸೆಲೆಕ್ಟಾಗಿರ್ತಾನೆ. ಆದ ಮೇಲೆ ಹಂಗೊಂದು ಇಂಟ್ರು ಇತ್ತು ಅಂತ ನಿಮಗೆ ಗೊತ್ತಾಗಿರತ್ತೆ. ಹೋಳಿ ದಿನ ಆಫೀಸಿದ್ಯಲ್ಲಾ ಅಂತ ಉಗುದುಕೊಳ್ಳುತ್ತಾ ಬೆಳಬೆಳಗ್ಗೆ ಆಫೀಸಿಗೆ ಹೋಗಿರ್ತೀರ. ಅವತ್ತು ರಾತ್ರೆ FB ನಲ್ಲಿ ನಿಮ್ಮ ಗೆಳೆಯರು ಹೋಳಿ ಆಡಿದ ಫೋಟೋ ನೋಡಿದ ಮೇಲೇ ಅವ್ರೆಲ್ಲ ಸಂಜೆ ಹೋಳಿ ಆಡಿದ್ರು ಅಂತ ನಿಮ್ಗೆ ಗೊತ್ತಾಗತ್ತೆ. ನಿಮ್ಮ ಬರ್ತಡೇ ಪಾರ್ಟಿಗೆ ಬಂದಿದ್ದ ಜನರೇ ಎಲ್ಲೋ ಹೋಟ್ಲಲ್ಲಿ ಪಾರ್ಟಿ ಮಾಡಿ ಅದ್ರ ಫೋಟೋ ಹಾಕಿರ್ತಾರೆ. ನಿಮ್ಮನ್ನೂ ಕರದ್ರೆ ದುಡ್ಡು ಜಾಸ್ತಿ ಆಗತ್ತಲ್ಲ ಅಂತ ನಿಮ್ಮನ್ನ ಕರ್ದಿರಲ್ಲ !! . ಇಂತದ್ದೆಲ್ಲ ನೋಡಿದ್ರೆ ಒಂದ್ಸಲನಾದ್ರೂ ಹೊಟ್ಟೆ ಚುರುಕು ಅನ್ನಲ್ವಾ ?

೭)ಬೇರೆಯವ್ರ ತಪ್ಪು ಕಂಡು ಹಿಡ್ಯೋದು
ಇಲ್ಲಿವರ್ಗೆ ನಾನು ಮಾಡಿದ್ದು ಅದೇ ಅಲ್ವಾ? !! ಪೂರ್ಣಚಂದ್ರನಲ್ಲೇ ಹೊಂಡ ಇದ್ಯಂತೆ. ಅಂತದ್ರಲ್ಲಿ ಪ್ರತಿಯೊಬ್ರ ತಪ್ಪು ಹುಡ್ಕೋದು ಯಾಕೆ? ಪೀಜಿಲಿ ರೊಟ್ಟಿ ಸರಿ ಮಾಡಿಲ್ಲ, ಮೆಸ್ಸಲ್ಲಿ ಸಾರಿಗೆ ಉಪ್ಪು ಕಡ್ಮೆ ಆಯ್ತು, ಪೂರಿಗೆ ಎಣ್ಣೆ ಹೆಚ್ಚಾಯ್ತು ಹೀಗೆ…ಎಲ್ಲೋ ಹೊರಗಡೆ ಬಂದಿರ್ತೀವಪ. ಅಲ್ಲಿ ಹೊಂದ್ಕಂಡಿರೋದು ಬಿಟ್ಟು ಹೀಗೆ ಪ್ರತಿಯೊಂದ್ರಲ್ಲೂ ತಪ್ಪು ಹುಡುಕಿದ್ರೆ, ದುಡ್ಡು ಕೊಟ್ಟಿದೀವಿ ಅಂತ ಶಾಪ ಹಾಕಿದ್ರೆ.. ನಮ್ಮ ಮನಸ್ಸು ಹಾಳಾಗೋದು ಬಿಟ್ಟು ಬೇರೆ ಏನಾದ್ರೂ ಆಗುತ್ತಾ ?
ಇದು ಒಂತರ ಆದ್ರೆ ಮತ್ತೊಂತರದ್ದು ಇವೆ.  ಅವ್ಳಿಗೆ ನಗೋಕೆ ಬರೋಲ್ಲ, ಅವ್ನಿಗೆ ಡ್ಯಾನ್ಸು ಬರೋಲ್ಲ.. ಹೀಗೆ ವ್ಯಕ್ತಿಗಳ ದೋಷ ಪಟ್ಟಿ ಮಾಡೋದು.  ಇದ್ರಿಂದ ಪಟ್ಟಿ ಹೆಚ್ಚಾಗತ್ತೆ ಹೊರ್ತು ಕಡ್ಮೆ ಏನಾಗಲ್ಲ. ಅವ್ರಿಗೆ ಆ ದುರ್ಗುಣಗಳ ಕಾರಣದಿಂದ ದ್ವೇಷ ಮಾಡೋಕೆ ಶುರು ಮಾಡಿದ್ರೆ  ನಮ್ಮ ಜೀವನ ಪೂರ್ತಿ ಶತ್ರುಗಳೇ ತುಂಬಿ ಹೋಗ್ತಾರೆ. ಅದಕ್ಕೆ ಯಾರ್ದು ಏನೇ ತಪ್ಪು ಕಂಡ್ರೂ  ಅದನ್ನೇ ದೊಡ್ಡದು ಮಾಡೋ ಬದ್ಲು ಅದ್ರ ಬದ್ಲು ಅವ್ರ ಒಳ್ಳೇ ಗುಣಗಳ್ನ ಇಷ್ಟಪಡೋದು..

೮)ಆತ್ಮನಿಂದನೆ
ಯಾರಿಗೋ ಹೋಲಿಸ್ಕಂಡು ನಮ್ಮನ್ನ ಯಾಕೆ ನಿಂದಿಸಿಕೊಳ್ಳೋದು ? ನಾನು ಮೈಕಲ್ ಜಾಕ್ಸನ್ ಆಗ್ಲಿಲ್ಲ ಅಂತನೋ, ವಿರಾಟ್ ಕೊಹ್ಲಿ ತರಾನೋ, ಸೋನು ನಿಗಮ್ ತರಾನೋ ಆಗ್ಲಿಲ್ಲ ಅಂತ ದಿನಾ ಶಾಪ ಹಾಕ್ಕೊಂಡ್ರೆ ಆಗುತ್ತ? ನಾವು ಏನಾಗಿದೀವು ಅದನ್ನ ಇಷ್ಟ ಪಡೋಣ. ಬೇರೆ ಅವ್ರನ್ನ ನೋಡಿ ಕಲೀಬಾರ್ದು ಅಂತಲ್ಲ. ಅದ್ರಲ್ಲಿರೋ ಒಳ್ಳೇ ಗುಣಗಳನ್ನೂ ಅಳವಡಿಸಿಕೊಳ್ಳೋಣ ಅಲ್ವಾ?

೯)ಭೂತದ ಯೋಚನೆ, ಭವಿಷ್ಯದ ಚಿಂತೆ
ನಾನು ಆ ಪರೀಕ್ಷೆಲಿ ಚೆನ್ನಾಗಿ ಮಾಡ್ಲಿಲ್ಲ, ಅಲ್ಲಿ ಹೋಗಿದ್ರೆ ಹಾಗಾಗ್ತಿದ್ದೆ, ಇಲ್ಲಿ ಬಂದು ತಪ್ಪು ಮಾಡ್ದೆ. ಇಂತಹ ಯೋಚ್ನೆಗಳು ದಿನಾ ಕಾಡ್ತಿದ್ರೆ ಆ ದಿನಗಳೆಲ್ಲಾ ಹಾಳೇ. ಭವಿಷ್ಯದ ಬಗ್ಗೆ ಯೋಚ್ನೆ ಮಾಡ್ಬಾರ್ದು ಅಂತಲ್ಲ. ಆದ್ರೆ ನನ್ನ ಮಗನ್ನ ಆ ಶಾಲೆಗೆ ಸೇರಿಸ್ತೀನಿ, ಅವ್ನಿಗೆ ಅದು ಕಲಿಸ್ತೀನಿ ಅಂತ ಯೋಚಿಸಿದ್ರೆ ? ತಪ್ಪು ಅಂತಲ್ಲ. ಆದ್ರೆ ನಾನೇ ಇನ್ನೂ ಸಮಾಜದಲ್ಲಿ ಅಂಬೆಗಾಲಿಡ್ತಾ ಇರೋ ಪಾಪು. ಏನೋ ಓದೋದು ಮುಗ್ಸಿ, ಉದ್ಯೋಗ ಹಿಡ್ದು ಜವಾಬ್ದಾರಿ ಹೊರೆ ಹೊರೋ ಹಾಗಾಗ್ಬೇಕು ಅನ್ನೋದು ಮೊದಲ ಆದ್ಯತೆ. ಆಮೇಲೆ ಮದ್ವೆ, ಪಾಪು ಎಲ್ಲ..
ಈ ತರದ ಭವಿಷ್ಯದ ಸಿಕ್ಕಾಪಟ್ಟೆ ಚಿಂತೆಗಳೂ ನಮ್ಮ ದೈನಂದಿನ ನಗೂನ, ಸಣ್ಣಪುಟ್ಟ ಸಂತೋಷಾನ ಹಾಳು ಮಾಡುತ್ತೆ. ಅದಕ್ಕೆ ಈ ಚಿತೇನ ಅಲ್ಲಲ್ಲ ಚಿಂತೇನ(ಸಂಸ್ಕೃತ ಶ್ಲೋಕವೊಂದರ ಸ್ಪೂತ್ರಿಯಿಂದ) ಬಿಡ್ಬೇಕು ಅಂತ..

೧೦)ಈ ಹತ್ತೂ ಬಿಡೋ ಪ್ರತಿಜ್ಞೆಗಳನ್ನ ಬಿಡ್ಬೇಕು !! 🙂
ಅದರಲ್ಲಿ ಕೆಲವಾದ್ರೂ, ಸ್ವಲ್ಪನಾದ್ರೂ , ಕೆಲ ಸಲನಾದ್ರೂ ಹೌದು ಅನಿಸಿತ್ತಾ? ಹಾಗಾದ್ರೆ ಈ ಪ್ರತಿಜ್ಞೆ ನೋಡಿ ನಿಮಗೆ ಆಶ್ಚರ್ಯ ಆಗ್ತಿರ್ಬೋದು ..ಸ್ವಲ್ಪ ತಡೀರಿ. ಓಶೋ ಅವರ ಒಂದು ಕತೆ ನೆನಪಾಗ್ತಾ ಇದೆ.

ಒಂದು ಹಳ್ಳಿ. ಒಂದಿನ ಅಲ್ಲಿ ಜನರಿಗೆಲ್ಲಾ ಒಂದು ದಿನ ಆಶರೀರವಾಣಿ ಕೇಳುತ್ತೆ. ನೀವು ನಿಮ್ಮ ದುಃಖಗಳನ್ನೆಲ್ಲಾ ಮೂಟೆ ಕಟ್ಟಿ ಬಿಸಾಕಿ. ನಾಳೆ ನಿಮಗೆ ಸುಖಗಳೇ ಸಿಗುತ್ತೆ ಅಂತ. ಸರಿ ಎಲ್ಲಾ ಮಧ್ಯರಾತ್ರಿ ತಂತಮ್ಮ ದುಃಖಗಳನ್ನೆಲ್ಲಾ ಮೂಟೆ ಕಟ್ಟಿ ಊರಾಚೆ ಬಿಸಾಕಿ ಬಂದ್ರು. ಮಾರನೇ ದಿನ ನೋಡಿದ್ರೆ ಏನಾಶ್ಚರ್ಯ. . ಎಲ್ಲರೂ ಹೊಸ ಭವ್ಯ ಬಂಗಲೆಗಳಲ್ಲಿ ಇದಾರೆ. ಆದರೆ ಎಲ್ರಿಗೂ ತಮ್ಮ ಪಕ್ಕದ ಮನೆಯವ್ರು ಹೆಚ್ಚಿನ ಸೌಲಭ್ಯ ನೋಡಿ, ಅದು ತಮ್ಮಲ್ಲಿ ಇಲ್ವಲ್ಲ ಅಂತ ಹೊಸ ದುಃಖಗಳು ಶುರು ಆದ್ವಂತೆ. ಹೀಗೆ ದುಃಖಗಳಿಂದ ಬಿಡುಗಡೇನೆ ಇಲ್ವೇನೋ.. ನಾವೂ ಒಂತರ ಆ ಕತೆಯ ಹಳ್ಳಿಗರ ತರಾನೇ ಆಗಿದೀವ ಅನ್ಸುತ್ತೆ. ಎಷ್ಟೇ ಸೌಲಭ್ಯಗಳಿದ್ರೂನೂ ಬೇರೆ ಅವ್ರನ್ನ ನೋಡಿ ಅದಿಲ್ವಲಾ ಅಂತ ಕೊರಗ್ತಿರ್ತೀವಲ್ವಾ? ಎಲ್ಲಾ ಕಲೆಗಳೂ ಎಲ್ರಿಗೂ ಸಿದ್ದಿಸಲ್ಲ. ಸುಮಾರಿಗೆ ಬರ್ಯೋಕೆ ಬರೋನೊಬ್ಬ ಅದ್ರಲ್ಲೇ ಖುಷಿಯಾಗಿರ್ತಾನೆ . ಆದ್ರೆ ಯಾರೋ ಚೆನ್ನಾಗಿ ಹಾಡೋವ್ಳನ್ನ ಕಂಡು , ಛೇ ನಂಗೆ ಹಾಡೋಕೆ ಬರೋಲ್ಲ, ಬರೀ ಗೀಚೋದೆ ಆಯ್ತು ಅಂತ ಅಸಹ್ಯ ಪಟ್ಕೊಂಡ್ರೆ.. ಈ ರೀತಿಯ ಅವನ ದೈನೇಸಿತನಕ್ಕೆ ಯಾರು ತಾನೇ ಪರಿಹಾರ ಕೊಡಕ್ಕೆ ಆಗುತ್ತೆ?

ಸಮಾಜದಲ್ಲಿ ಒಂಟಿಯಾಗಿ , ಬೇಕಂದಾಗೆ ಬಾಳೋಕೆ ಆಗಲ್ಲ, ಸರಿ. ಆದರೆ ಹೇಳೋರ ಮಾತುಗಳನ್ನೆಲ್ಲಾ ಕೇಳ್ತಾ ಕೂರಕ್ಕೆ ಆಗುತ್ಯೆ? ನೂರು ಜನ ನೂರು ತರ ಹೇಳ್ತಾರೆ. ಇವತ್ತು ಊದು ಅಂದೋರು ನಾಳೆ ಕುಣಿ ಅಂತಾರೆ. ನಾಡಿದ್ದು ನೀನು ಕುಣಿದಿದ್ದು ಮಂಗ ಕುಣಿದಂಗೆ ಕಾಣುತ್ತೆ. ನೀನ್ಯಾಕೆ ಎಲ್ಲರ ಮಾತು ಕೇಳೋಕೆ ಹೋಗ್ತೀಯ ಅಂತ ಮತ್ತೆ ಮೂತಿ ತಿವೀತಾರೆ.. ಇದೆಲ್ಲಾ ಬೇಕಾ ? ಯಶಸ್ಸು ಅನ್ನೋದು ದಡದಲ್ಲಿರುತ್ತೆ ಅಂತ ಯಾಕೆ ಅಂದ್ಕೊಳ್ಳೋದು? ಪ್ರತಿ ನಿತ್ಯ, ಪ್ರತಿ ಹೆಜ್ಜೆಯ ಸಣ್ಣಪುಟ್ಟ ಗೆಲುವುಗಳೂ ಯಶಸ್ಸು ಅಂತನೇ ಯಾಕೆ ಅಂದ್ಕೋಬಾರ್ದು? ಇವತ್ತೂ ದಾರೀಲಿ ಸಿಕ್ಕ ಎಂಟತ್ತು ವರ್ಷಗಳ ಹಿಂದೆ ಸಿಕ್ಕ ಗೆಳೆಯ/ಗುರುಗಳು ಗುರುತು ಹಿಡಿದು ಮಾತಾಡಿಸ್ತಾರೆ. ನೆಂಟ್ರಿಗೆ ನೆನ್ಪು ಮರ್ತಿರೋದಿಲ್ಲ. ನಾವು ಇಲ್ಲಿವರೆಗೆ ಗಳಿಸಿದ್ದು ಅಂದ್ರೆ ಇದೇನಾ? ಇದ್ರಿಂದ ಏನಾದ್ರೂ “ಲಾಭ” ಇದ್ಯಾ ? !! .. ಗೊತ್ತಿಲ್ಲ.

ದುಡ್ಡು, ಯಶಸ್ಸು, ಜೀವನದ ಸಾರ್ಥಕತೆ.. ಇಂತ ದೊಡ್ಡ ದೊಡ್ಡ ಮಾತೆಲ್ಲ ನಂಗೆ ಗೊತ್ತಿಲ್ಲ ಕಣ್ರಿ. ಭವಿಷ್ಯದ ಆಲೋಚನೆ ಇರ್ಬಾದ್ರು ಅಂತಲ್ಲ. ಆದ್ರೆ ಯಾವಾಗ್ಲೂ ಇಲ್ದೇ ಇರೋದನ್ನ, ಆಗದೇ ಇರೋದನ್ನ ನೆನಸ್ಕಂಡು ನಮ್ಮ ಇವತ್ತನ್ನ ಯಾಕೆ ಹಾಳು ಮಾಡ್ಕೊಳ್ಳೋಣ. ನಮ್ಮ ಅಪ್ಪ-ಅಮ್ಮ , ಅಕ್ಕ-ತಂಗಿ ಹೀಗೆ ನಮ್ಮನ್ನೇ ನಂಬ್ಕಂಡಿರೋ ಎಷ್ಟೋ ಜೀವಗಳಿರುತ್ತೆ. ಯಾವಾಗ್ಲೂ ಸಿಡುಕ್ತಾ ಅವ್ರ ಮನಸ್ಸನೂ ಯಾಕೆ ಹಾಳು ಮಾಡೋಣ ಅಲ್ವಾ?ಇದ್ದಿದ್ರಲ್ಲೆ ಸ್ವಲ್ಪ ಖುಷಿ ಖುಷಿಯಾಗಿ ಇದ್ಬುಡೋಣ ಅಲ್ವಾ? ಮತ್ತೆ ನಮ್ಮನ್ನ ಕಟ್ಟಾಕೋ ತರದ, ಸಂತೋಷ ಹಾಳು ಮಾಡೋ ಪ್ರತಿಜ್ಞೆಗಳು ಬೇಕಾ  ?  ..
ಏನಂತೀರಿ ?

******************

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments