ವಿಷಯದ ವಿವರಗಳಿಗೆ ದಾಟಿರಿ

ಮೇ 20, 2012

ದೀಪ ಭಾಗ -೩

‍ನಿಲುಮೆ ಮೂಲಕ

-ವಿಜಯ ಹೂಗಾರ್

ಸೂರ್ಯ ನೆತ್ತಿಯಿಂದ ಇನ್ನೊಂದೆಡೆಗೆ ವಾಲುತ್ತಿದ್ದ.ಮನೆಯೊಳಗಿನ ಪೂಜೆ ಮುಗಿಸಿ ಎಂದಿನಂತೆ ಬೆಟ್ಟದ ಮೇಲಿರುವ ಲಕ್ಷ್ಮಿ ದೇವರ ಕಡೆಗೆ ಹೋಗಲು ನೈವಿದ್ಯದ ತಟ್ಟೆ ಸಿದ್ಧಪದಿಸುತ್ತಿದ್ದಳು.ಇಷ್ಟೊತ್ತಿಗೆ ಮೈದುನ ಸೂರಪ್ಪನ ಹೆಂಡತಿ ಗಿರಿಜಕ್ಕ ಪೂಜೆ ಮಾಡಿ ದೀಪ ಹಚ್ಚಿ ಬಂದಿರುತ್ತಾಳೆ ಅಂತ ಬೆಟ್ಟದ ಮೇಲಿರುವ ದೇವಸ್ಥಾನದ ಕಡೆ ಉರಿಬಿಸಿಲಲ್ಲಿ ಹೆಜ್ಜೆ ಹಾಕತೊಡಗಿದಳು.ನೂರಾಹನ್ನೊಂದು ಮೆಟ್ಟಿಲು ಏರಿದ ಮೇಲೆ ತುಂಡಿನಂತೆ ಬರುವ ಮಟ್ಟಸ ನೆಲದ ಮೇಲೆ ದೇವಸ್ಥಾನ ಕಟ್ಟಲಾಗಿತ್ತು.ಶಾಂತವಾಗಿ ತಂಗಾಳಿ ಸುಸುತ್ತಿರುವ ದೇವಸ್ಥಾನದಲ್ಲಿ ಊರ ಗೌಡರು ಮತ್ತು ಗಿರಿಜಕ್ಕ ಗುಸು ಗುಸು ಮಾತಾಡುವದು ಕೇಳಿ ಕಮಲಜ್ಜಿ ಬೆಚ್ಚಿದಳು.ಇವಳು ಒಳ ನಡೆದಳು.ಅವರು ಸುಮ್ಮನಾದರು.ಗರ್ಭ ಗುಡಿಯೊಳಗೆ ಸೇರಿದಳು .ಗಾಳಿಯ ಆಟಕ್ಕೆ ಆಡುವಂತೆ ನೀಲಾಂಜನ  ಕುಣಿಯುತಿತ್ತು,ನಿನ್ನ ಕೈಗೆ ಸಿಗೋದಿಲ್ಲ ಅಂತ ಅಣುಕಿಸಿದಂತೆ.”ಸರದಿಯ ಪ್ರಕಾರ ನಿನಗೆ ದೀಪ ಹಚ್ಚುವ ಅವಕಾಶ ನಮಗೆ ಮಾಡಿ ಕೊಡು” ಅಂತ ದೇವರಿಗೆ ಅಧಿಕೃತವಾಗಿ ಬೇಡಿಕೊಂಡು ಹೊರಗೆ ಬಂದಳು.ಇನ್ನೇನು ಹೋಗಬೇಕು ಅನ್ನೋಷ್ಟರಲ್ಲಿ ಭೂಮಂಡಲದಂತಿರುವ ಹೊಟ್ಟೆಯ ಮೇಲೆ ಕೈ ಆಡಿಸುತ್ತ ಊರ ಗೌಡ  ‘ಕಮಲಜ್ಜಿ ನಿಮ್ ಮಗ ರಾಮಪ್ಪನಿಗೆ ಊರಿಂದ ಕರೆಸು,ಅವನ ಜೊತೆ ಮಾತಾಡೋದಿದೆ’ ಅಂತ ಗೌಡರ ಉಗ್ಗಂಡ ಧ್ವನಿಯಲ್ಲೇ ಹೇಳಿದ.ಪರಕಿವಿಯಿಂದ ಆಲಿಸುವಂತೆ ಕೇಳಿ ಮನೆಕಡೆಗೆ ಧಾವಿಸಿದಳು.ಗಿರಿಜಕ್ಕ ಮಾಡುತ್ತಿರುವ ಹುನ್ನಾರ ಕಮಲಜ್ಜಿಗೆ ತುಸು ಅರ್ಥವಾಗತೊಡಗಿತು.ಸರದಿಯ ಪ್ರಕಾರ ನಾವು ಮಾಡಬೇಕಿದ್ದ ಪೂಜೆ ಹೇಗೋ ಗೌಡರನ್ನ ತನ್ನ ಬಲೆಗೆ ಸಿಲುಕಿಸಿ ಲಪಟಾಯಿಸಬೇಕೆನ್ನುವದು ಸ್ಪಷ್ಟವಾಗತೊಡಗಿತು.

ವರ್ಷದಲ್ಲಿ ಆರು ತಿಂಗಳು ಸೂರಪ್ಪನ ಮನೆಯವರು,ಉಳಿದ ಆರು ತಿಂಗಳು ಕಮಲಜ್ಜಿಯ ಮನೆಯವರು ಮಾಡಬೇಕೆಂದು ಎಷ್ಟೋ ವರ್ಷಗಳ ಹಿಂದೆ ಭೀಮೆಗೌಡರು ಮಾಡಿದ ನಿಯಮವಿತ್ತು.ಅವರು ತೀರಿ ಹೋದ ಮೇಲೆ ಅವರ ಮಗ ರಾಮೇಗೌಡರು ಯಾವುದೇ ನಿಯಮ ಪಾಲಿಸುತ್ತಿರಲಿಲ್ಲ.ರಾಮೇಗೌಡರು ಗ್ರಾಮಕ್ಕೆಲ್ಲ ಒಡೆಯರು.ವಯಸ್ಸು ಅರವತ್ತರ ಮೇಲಾಗಿತ್ತು. ಊರಿನ ಜನರಿಗೆ ಹೆಚ್ಚು ಬಡ್ಡಿಯ ಮೇಲೆ ಸಾಲಕೊಟ್ಟು ಅವರ ಜಮೀನು ಹಡಪ್ ಮಾಡಿಕೊಂಡಿದ್ದರು.ಜನರು ಕೊಡುವ ಭೀತಿಯನ್ನು ಗೌರವವೆಂದು ಭಾವಿಸಿಕೊಂಡಿದ್ದರು.ಊರ ಜನರ ಸುದ್ಧಿ,ಮಕ್ಕಳಿಗೆ ಉಂಡೆ,ಯವ್ವನದಲ್ಲಿ ಚಮಕ್ ನೀಡಿದ ಗಿರಿಜಕ್ಕನ ಪರವಾಗಿ ಯಾವಾಗಲು ಇರುತ್ತಿದ್ದರು.

ಮನೆ ಪಕ್ಕದಲ್ಲೇ ಗಿರಿಜಕ್ಕ ಮತ್ತು ಅವಳ ಅಳಿದುಳಿದ ಅತೀ ವಿಭಕ್ತ ಕುಟುಂಬದ ಜೊತೆ ವಾಸಿಸುತ್ತಿದ್ದಳು.ಗಿರಿಜಕ್ಕ ಅಮಲುಕೋರ ಗಂಡ ಸೂರಪ್ಪನ ಎರಡನೇ ಹೆಂಡತಿಯಾಗಿದ್ದಳು.ಮೊದಲನೆ ಹೆಂಡತಿ ಕಾಶವ್ವ ತೀರಿ ಹೋದಮೇಲೆ ವಯಸ್ಸಿಗೆ ಬಂದ ಮಗನನ್ನು ಮರೆತು ಮತ್ತೊಂದು ಮದುವೆಯಾಗಿದ್ದ.ಕಾಶವ್ವ ಮಗ ಗಿರಿಧರನನ್ನು ಮುದ್ದಿನಿಂದ ಬೆಳೆಸಿದ್ದಳು.ಸೂರಪ್ಪ ಕಾಶವ್ವಳ ಜೊತೆ ಯಾವ ವಿಷಯದಲ್ಲೂ ಹೊಂದಾಣಿಕೆ ಬರುತ್ತಿರಲಿಲ್ಲ.ಅಮ್ಮನ ಕಣ್ಣಿರು  ನೋಡಿ ಗಿರಿಧರನಿಗೆ ಅಪ್ಪನ ಮೇಲಿನ ಗೌರವ ಕಡಿಮೆಮಾಡಿತ್ತು.ಅಪ್ಪ ಹೇಳುವ ಯಾವ ಮಾತು ಕೇಳುತ್ತಿರಲಿಲ್ಲ.ಅಪ್ಪನ  ಎರಡನೆಯ ಮದುವೆಯ ಅವಘಡದಿಂದಲೋ ಅಥವಾ ಊರಿನಲ್ಲಿ ಭರಪೂರ್ ಸಾಲ ಮಾಡಿದ್ದಕ್ಕೋ ಮುಂಬೈಗೆ ಓಡಿ ಹೋಗಿದ್ದ.ಅಲ್ಲಿ ಹೋಗಬಾರದಲ್ಲೆಲ್ಲ ಹೋಗಿ, ಮಾಡಬಾರದುದನೆಲ್ಲ ಮಾಡಿ ಚರ್ಮ ರೋಗದ ಅಥಿತಿಯಾಗಿದ್ದ.ಕಪ್ಪು ಬಣ್ಣದ ಚರ್ಮದ ಮೇಲೆ ಬಿಳಿ ಬಣ್ಣದ ಮಚ್ಚೆ ಅವನ ಮೈಯಲ್ಲ ತುಂಬಿ ಹೋಗಿದ್ದವು.ತುರಿಸಿಕೊಂಡಾಗೆಲ್ಲ ಬಿಳಿ ಹೊಟ್ಟು ಮೈಯಿಂದ ಉದುರುತಿತ್ತು.”ನಾನೀಗ ಸಾಯುತ್ತಿದ್ದೇನೆ,ನನ್ನ ನೋಡಲು ಬರಬೇಡಿ.ನಾನು ಪಾಪ ಮಾಡಿದ್ದೇನೆ,ದೊಡ್ಡ ತಪ್ಪು ಮಾಡಿದ್ದೇನೆ.ನಿಮ್ಮ ಮಾತು ಕೇಳಬೇಕಿತ್ತು,ದಯವಿಟ್ಟು ನನ್ನನ್ನು ನೋಡಲು ಬರಬೇಡಿ,ನೋಡಿ ನನ್ನ ಶವಕ್ಕೆ ನಚಿಕೆಯಾಗುವಂತೆ ಮಾಡಬೇಡಿ,ನನ್ನನ್ನು ಕ್ಷಮಿಸು……” ಅಂತ ಒಂದು ಪತ್ರ ಬರೆದು ಊರಿಗೆ ವಾಪಸ್ಸಾಗುತ್ತಿದ್ದ ಬಸ್ಸಪ್ಪನ ಕೈಯಿಂದ ಕಳಿಸಿದ್ದ.ಸೂರಪ್ಪ ಎದ್ದೋ ಬಿದ್ದು ಮುಂಬೈಯಲ್ಲಿ ಅವನಿರುವ ಕಡೆಗೆ ಹೋಗುವಷ್ಟರಲ್ಲಿ ಬೆಂಕಿ ಹಚ್ಚಿಕೊಂಡ ವಿಧಿವಶನಾಗಿದ್ದ.ಇದು ನಡೆದ ಎಷ್ಟೋ ವರ್ಷಗಳಾದರೂ ಸೂರಪ್ಪನ ಮನಸಿನಿಂದ ಮಗನ ಸಾವು ಮಾಸಿರಲಿಲ್ಲ.ಆ ಕ್ರೂರ ಕೊರಗಿನಿಂದ ಹೊರಬರಲು ಆಗದೆ ಕುಡಿತಕ್ಕೆ ಶರಣಾದ.ದಿನಾಲೂ ಕುಡಿದು ಬೆಟ್ಟದ ದೇವಸ್ಥಾನದ ಒಂದು ಮೂಲೆಯಲ್ಲಿ ಬಿದ್ದಿರುತ್ತಿದ್ದ.ಈಗ ಸೂರಪ್ಪನಿಗೆ ಅಪರವಯಸ್ಸಾಗಿದೆ, ಸಲೀಸಾಗಿ ಓಡಾಡುವಷ್ಟು ತ್ರಾಣವಿಲ್ಲ.ಮಗ ಸಾಯುವದಕ್ಕಿಂತ ಆರಂಭದ ದಿನಗಳಲ್ಲಿ ಸೇರಿದ್ದಕ್ಕೆ ಗಿರಿಜಕ್ಕನ ಹೊಟ್ಟೆಯಿಂದ ಹುಟ್ಟಿದ ಮಗ ಅಪ್ಪನನ್ನು ಅನ್ಯ ಮನಸ್ಕನಂತೆ ನೋಡುತ್ತಿದ್ದ.

ಗಿರಿಜಕ್ಕ ಅಮಲಿನಲ್ಲಿರೋ ಗಂಡನ ಗಂಡನಾಗಿ,ಊರುಕೇರಿಯ ಜನರ ಮೇಲೆ ದಬ್ಬಾಳಿಕೆ ನಡತೆ ತೋರಿಸುತ್ತಿದ್ದಳು.ತೆಳು ದೇಹ ಹೊಂದಿದರು ಮಾತಿನಲ್ಲಿ,ನೋಟದಲ್ಲಿ ಊರನ್ನೇ ಸುಡುವಷ್ಟು ಬೆಂಕಿಯ ಕಿಡಿ ಅವಳ ಕಣ್ಣಲ್ಲಿ ಅಡಗಿತ್ತು.ಅನ್ಯರಾಜ್ಯದಿಂದ ಸೆದೆಬಡಿಯಲು ಬಂದ ಗುಪ್ತಚರಳಂತೆ ಊರ ಜನರ ಕಿರುಕುಳದ ಅಂಗವಾಗಿದ್ದಳು.ಆಗದೆ ಇರುವ ಜನರ ಗುಟ್ಟಿನ  ವಿಷಯವನ್ನು ಬಯಲುಮಾಡುತ್ತಿದ್ದಳು.ಇವಳನ್ನ ಕಂಡರೆ ಜನ ಶನಿ ವಕ್ಕರಿಸಿತು ಅನ್ನೋ ನರಕ ಭಾವದ ಭಾಗವಾಗಿದ್ದಳು.ಇಡಿ ಊರನ್ನೇ ತನ್ನ ಹಿಡಿತದಲ್ಲಿರಿಸಬೇಕು ಅನ್ನೋ ಇವಳ ವರ್ತನೆ ಕಂಡು ಸೂರಪ್ಪ ಇನ್ನು ಹೆಚ್ಚಿಗೆ ಕುಡಿಯತೊಡಗಿದ.

೦೦೦೦೦೦೦೦೦೦

ಪದ್ಧತಿಯಂತೆ ಊರಿನಲ್ಲಿ ಯಾರಿಗಾದರು ಸರಕಾರೀ ಕೆಲಸ ಸಿಕ್ಕಿದರೆ ದೇವಸ್ಥಾನದ ಅಭಿವೃದ್ಧಿಗೆ ಐದು ಸಾವಿರ ರುಪಾಯಿ ದೇಣಿಗೆಯಾಗಿ ಕೊಡೋದು ವಾಡಿಕೆ ಯಾಗಿತ್ತು.ಆದರೆ ರಾಮಪ್ಪನ ನಿವೃತ್ತಿಯ ಸಮಯ ಬಂದಿದ್ದರು ಇನ್ನು ದೇಣಿಗೆ ನೀಡಿರಲಿಲ್ಲ.ಕಾರಣ ಇಷ್ಟೇ: ಊರ ಗೌಡರ ಮಕ್ಕಳಿಗೆಲ್ಲ ತಿಂಗಳಿಗೆ ಇಪ್ಪತ್ತು ಸಾವಿರ ಸಂಬಳ,ಅದರಲ್ಲಿ ಐದು ಸಾವಿರ ಕೊಟ್ಟರೆ ಅವರಿಗೆ ಮನೆ ನಡೆಸುವದಕ್ಕೆ ಯಾವುದೇ ಅಡೆತಡೆಯಾಗುವದಿಲ್ಲ.ಆದ್ರೆ ನಮಗೆ ಸಂಬಳ ಬರುವದೇ ಐದು ಸಾವಿರ ಇರೋದೆಲ್ಲ ದುಡ್ಡು ಕೊಟ್ಟರೆ ಮನೆ ಹೇಗೆ ಸಾಗಿಸೋದು ಅಂತ ರಾಮಪ್ಪನ ತರ್ಕ.ಲೆಕ್ಕದಿಂದ ಇಂತಿಷ್ಟು ಪ್ರತಿಶತ ಅಂತ ಕೇಳಿದ್ರೆ ಕೊಡಬಹುದು.ಸರಕಾರಿ ನೌಕರ ದಲ್ಲಿರುವರೆಲ್ಲ ಐದು ಸಾವಿರ ಕೊಡಬೇಕು ಅಂದರೆ ಯಾವ ಲೆಕ್ಕ ಅನ್ನೋ ವಾದ ರಾಮಪ್ಪ ಹಿಂದೆ ಸುಮಾರು ಸಲ ಮಂಡಿಸಿದ್ದ.ರಾಮಪ್ಪನ ಮಾತು ಸತ್ಯವಾದುದ್ದರಿಂದ ಗೌಡರು ರಾಮಪ್ಪನಿಗೆ ದೇಣಿಗೆ ಕೊಡುವದಕ್ಕೆ ಹೆಚ್ಚಿಗೆ ಒತ್ತಾಯ ಮಾಡುತ್ತಿರಲಿಲ್ಲ,ಹೆಚ್ಚಿಗೆ ಒತ್ತಾಯ ಮಾಡಿದರೆ ಇತರರಿಂದ ಬರುವ ಹಣದಮೇಲೆ ಕಲ್ಲು ಬೀಳಬಹುದು ಅಂತ ಸುಮ್ಮನಾಗಿದ್ದರು.ಗೌಡರು ರಾಮಪ್ಪನನ್ನು ಬಿಟ್ಟು ಮಿಕ್ಕಿದವರಿಗೆ ದೇಣಿಗೆ ಕೊಡಲಿಲ್ಲ ಅಂದ್ರೆ ನಿಮ್ಮ ಕೆಲಸ ಹೋಗತ್ತೆ ಯಾರಿಗೂ ಒಳ್ಳೆಯದಗಲ್ಲ,ದೇವರ ದುಡ್ಡು ಹಾಗೆ ಬಳಸಬಾರದು ಅಂತ ಹೇಳಿ ಪಾಪ ಪ್ರಜ್ಞೆ ಹುಟ್ಟಿಸುತ್ತಿದ್ದ.ಜನ ಕೂಡಾ ಕೆಲಸ ಗಿಟ್ಟಿಸುವದಕಿಂತ ಮುಂಚೆ ನೌಕರಿಯಾಗಲಿ ಅಂತ ಬೇಡಿಕೊಂಡಿರುವದರಿಂದಲೋ ಅಥವಾ ದೇವರ ಮೇಲಿನ ಭಯದಿಂದಲೋ ಯಾವುದೇ ತಕರಾರು ಇಲ್ಲದೆ ಕೊಟ್ಟಿದ್ದರು.ಆದ್ರೆ ರಾಮಪ್ಪ ಮಾತ್ರ ಕೊಡದೆ ಉಳಿದಿದ್ದ.

ಈ ವಿಷಯ ನೆನೆಸಿಕೊಂಡು ಕಮಲಜ್ಜಿ ದಿಙ್ಮೂಢಳಾದಳು,ಗೌಡರಿಗೆ ಈ ಮಾತು ಎತ್ತಿ ಹೇಳಿ ಎಲ್ಲಿ ನಮಗೆ ಬರಬೇಕಾದ ದೀಪ ಹಚ್ಚುವ ಅವಕಾಶ ಕಿತ್ತಿಕೊಳ್ಳುತ್ತಾಳೆ ಅಂತ ಕಮಲಜ್ಜಿಗೆ ಅನಿಸತೊಡಗಿತು.ದೇಣಿಗೆ ಕೊಡದ ಕಡತ ಈ ಪೂಜೆ ಕಸಿದು ಕೊಳ್ಳುವದರಿಂದ ತೀರಿಸಿಕೊಂಡರೆ….?ಅಂತ ಯೋಚಿಸಿ ಅಧಿರರಾದಳು.ದೇವಸ್ಥಾನದಿಂದ ಬರುವಾಗ ಗೌಡರು ಹೇಳಿದ ಮಾತು ಹುಳುವಿನಂತೆ ಕಮಲಜ್ಜಿಯ ತಲೆಯಲ್ಲಿ ಕೊರೆಯುತ್ತಿತ್ತು.ಅಷ್ಟೊತ್ತಿಗೆ ರಾಮಪ್ಪನನ್ನು ಕರೆಸುವ ವ್ಯವಸ್ಥೆ ಮಾಡತೊಡಗಿದಳು.

೦೦೦೦೦೦೦೦೦೦೦೦೦

ಕಾರಿರುಳು ಜಗತ್ತೆಲ್ಲ ಮಸಿಯಲ್ಲಿ ಅಳಿಸಿಹೊದಂತೆ ಕತ್ತಲು ಹೆಪ್ಪುಗಟ್ಟಿಕೊಂಡಿತ್ತು.ಸರದಿಯ ಪ್ರಕಾರ ಸಾಯಂಕಾಲ ಆರರಿಂದ ಮಧ್ಯರಾತ್ರಿ ಹನ್ನೆರಡರ ವರೆಗಷ್ಟೇ ತಾತ್ಕಾಲಿಕ ಉರಿಯುವ ಅರವತ್ತು ವ್ಯಾಟಿನ ಬೀದಿ ದೀಪಗಳು ಮುಜುಗುರದಿಂದ ಬೆಳಕು ಚೆಲ್ಲುತ್ತಿತ್ತು.ಊರಿನ ಜನ ಕರೆಂಟ್ ನಿಂದಾಗುವ ಕೆಲಸ ಒಂದೇ ಸಲ ಎಲ್ಲಾ ಮಾಡಿ ಮುಗಿಸುವದರಲ್ಲಿ ಮೌನನಿರತರಾಗಿದ್ದರು.ಟೇಲರ್ ಅಂಗಡಿಯವನು,ಧೋಬಿಯವನು,ಬ್ಯಾಟರಿಯಲ್ಲಿ ಉಳಿದಿರುವ ಕೊನೆಯ ಕಡ್ಡಿಯ ಮೊಬೈಲ್ ಮಾಲಿಕರು,ಶೌಚಕ್ಕೆ  ಹೋಗುವಾಗ ಬಳಸುವ ‘ಟರ್ಚಾ’ಸುರರು,ಏಳು ಗಂಟೆಯ ದೂರದರ್ಶನದ ವಾರ್ತೆಗಳು ತಪ್ಪದೆ ವಿಕ್ಷಿಸುವ ಮನೆಯ ಹಿರಿಯರು,’ಸ್ಟಾಪ್’ ಆಟ ಆಡುತ್ತ ರಾತ್ರಿಯ ಬೀದಿ ದೀಪದ ಬೆಳಕನ್ನು ಹಬ್ಬದಂತೆ ಆಚರಿಸುವ ಕೇರಿಯ ಪುಂಡ ಮಕ್ಕಳುಗಳೆಲ್ಲರು ಆ ಮೌನನಿರತತೆಯ ಭಾಗಗಳಗಿದ್ದವು.

ಅವತ್ತು ಶನಿವಾರವಾಗಿದ್ದರಿಂದ ಜೈ ಹುನುಮಾನ ಧಾರವಾಹಿ ನೋಡಲೆಂದು ಲಕ್ಷ್ಮಿಯಕ್ಕ ಕಮಲಜ್ಜಿಯ ಮನೆಗೆ ಬಂದಿದ್ದಳು.ರಾತ್ರಿಯ ಊಟ ಮುಗಿದ ಮೇಲೆ ಸುಮಾರು ಹೊತ್ತು ಲಕ್ಷಿಯಕ್ಕನ ಜೊತೆ ಮನಸು ಹಗುರಾಗುವಷ್ಟು ಮಾತಾಡಿದ್ದಳು.ಬೇಡವೆಂದರೂ ಎರಡೆರಡು ಸಲ ಕರ್ರನೆ ಚಹಾ ಕೊಟ್ಟು ಗಿರಿಜಕ್ಕನ ಮೇಲಿರುವ ಇಂಗದ ದ್ವೇಷ ಬಿಡಿ ಬಿಡಿಯಾಗಿ ಹೇಳಿ ತನ್ನ ಅಳಲು ತೋಡಿಕೊಂಡಿದ್ದಳು.ಅವಳಿಗೆ ಸಮಧಾನದ ವಿಗ್ರಹವಾಗಿ ಲಕ್ಷ್ಮಿಯಕ್ಕ ಅವಳ ಮಾತು ಆಲಿಸುತ್ತಿದ್ದಳು.ಅಷ್ಟೊತ್ತಿಗೆ ಕಿರಿಯ ಮಗ ರಮೇಶನ ಮಗ ಇನ್ಯಾ ಬಾಯಿಯಲ್ಲಿ ಬೆರಳಿಟ್ಟುಕೊಂಡು ಸಾಕ್ಷಾತ್ ಹನುಮಾನ್ ಕಂಡವರಂತೆ ಉದ್ಗರಿಸುತ್ತಿದ್ದ.”ಟಿವಿ ನೋಡಕ ಬರ್ತದ,ಕೆಲಸ ಮಾಡಕ್ ಏನ್ ಆತದೋ ನಿನಗ” ಅಂತ ಭುಜ ಹಿಡಿದು ಅಲುಗಾಡಿಸತೊಡಗಿದಳು. ಕುಯ್ ಪಿಟ್ ಅನ್ನದೆ ಸುಮ್ಮನಿದ್ದ.ಇನ್ನೂ ಜೋರಾಗಿ ಅಳುಗಾಡಿಸದಕ್ಕೆ,ಜೋರಾಗಿ ಅಳತೊಡಗಿದ .ನಮ್ಮವುಗ್ ಹೇಳ್ತೀನಿ ಅಂತ ಅಲ್ಲಿಂದ ಓಡಿ ಹೋದ.ಕಿರಿಯ ಸೊಸೆ ಕುಸುಮ ಮನೆ ಬೇರೆ ಮಾಡಿ ಹೋಗುವಾಗ ಒಂದು ಬೆಳ್ಳಿ ಲೋಟಕ್ಕೆ ಆದ ಜಗಳದಲ್ಲಿ ಕುಸುಮ ಮೇಲುಗೈ ಸಾಧಿಸಿ ಬೆಳ್ಳಿ ಲೋಟ ತನ್ನದಾಗಿಸಿದ್ದಳು.ಅದನ್ನು ಎತ್ತಿ ಹಿಡಿದು ‘ನಮ್ಮವುಗ್ ಹೇಳ್ತೀನಿ’ ಅಂತ ಎಚ್ಚರಿಸುವಂತೆ ಹೇಳಿ ಓಡಿದ ಇನ್ಯಾನ ಪ್ರೌಢ ಮಾತಿನ ಬದಲಾವಣೆಯನ್ನು ಕಂಡು ಬೆರಗಾದಳು.’ಹೋಗು ಹೋಗು ನಿಮ್ಮವ್ವುಗ್ ನಾ ಅಂಜುವದಿಲ್ಲ’ ಅಂತ ಕಮಲಜ್ಜಿ ಮತ್ತಿಷ್ಟು ಕೆಂಪಗಾದಳು.”ನಮಗ ಒಂದು ಚಿಂತಿ ಅಂದ್ರ ಇವಕ್ ಒಂದು” ಅಂತ ಸುಮ್ಮನಾದಳು.ಸ್ವಲ್ಪ ಹೊತ್ತಾದಮೇಲೆ ಕರೆಂಟ್ ಮತ್ತೆ ಮಾಯವಾಯಿತು,ದೇವರಂತೆ.ತುಂಬಾ ಹೊತ್ತು ಕಳೆದರು ನಿದ್ದೆ ಹತ್ತಿರ ಕೂಡ ಸುಳಿಯುತ್ತಿರಲಿಲ್ಲ,ನಿದ್ದೆ ಒಂದು ಕೈಗಟುಕದ ಕನಸಿನಂತೆ ಕಾಣತೊಡಗಿತು.ಮರುದಿನ ಮಗ ಬರುತ್ತಾನೆ ಅನ್ನೋ ಆಲೋಚನೆ ಕೂಡಾ ಮುಟ್ಟಾಗಿ ದೂರ ಕುಳಿತಂತಿತ್ತು.

೦೦೦೦೦೦೦೦೦೦

ಮರುದಿನ ಭಾನುವಾರದ ಸೂರ್ಯನ ಹೊಂಗದಿರು ಮೊದಲ ಪಾದದಲ್ಲಿತ್ತು.ಚುಮುಚುಮು ಚಳಿಯಲ್ಲಿ ಜನ ಕುಡಿಯುವ ನೀರಿನ ಬೋರ್ವೆಲ್ ಗಾಗಿ ಸಾಲಾಗಿ ನಿಂತಿದ್ದರು.ಬೆಟ್ಟದ ಮೇಲಿನ ದೇವಸ್ಥಾನದ ಗಂಟೆ ಪೂಜೆ ಮುಗಿದ ಸಾಕ್ಷಿಯಂತೆ ಬಾರಿಸುತ್ತಿತ್ತು.ಖೇಚರ  ಜೀವಿಗಳು ಸಾಲು ಸಾಲಾಗಿ ಸಹಿ ಹಾಕಿದಂತೆ ಹಾರಾಡುತ್ತಿದ್ದವು.ರಾತ್ರಿ ನಿದ್ದೆ ಬರದ ಕಾರಣ ಬೆಳಿಗ್ಗೆ ತುಸು ತಡವಾಗಿ ಎದ್ದ ಕಮಲಜ್ಜಿ ಕೆಲಸಕ್ಕೆ ತೊಡಗಿದಳು.ಮಗ ಬರುತ್ತಾನೆ ಅಂತ ಕೆಲಸ ಚುರುಕಾಗಿ ಮಾಡುತ್ತಿದ್ದಳು.ಬಿಸಿಲು ನೆತ್ತಿಗೆರುವದಕ್ಕಿಂತ ಮುಂಚೆ ರಾಮಪ್ಪ ಬಂದು ಬಿಟ್ಟ.ಗಿರಿಜಕ್ಕಳ ಎಲ್ಲ ವಿಷಯವನ್ನು ಒಂಚೂರು ಬಿಡದೆ  ಮಗನ ಮುಂದೆ ತೊಡಿದಳು.ಇರಲಿ ನಾನು ಗೌಡರ ಜೊತೆ ಮಾತಾಡುತ್ತೇನೆ ಅಂತ ಹೇಳಿದ.ಊಟದಷ್ಟೇ ತಿಂಡಿ ಮಾಡಿ ತಂದೆ ಪೂಜಾರಪ್ಪನ ಜೊತೆ ರಾಮಪ್ಪ ಗೌಡರ ಮನೆಗೆ ಹೋದ.

ಭಕ್ತರು ಪೂಜೆಗೆ ಅಂತ ತಂದ ತೆಂಗಿನ ಕಾಯಿಯ ಅರ್ಧ ಭಾಗ ಮನೆಗೆ, ಅನ್ನರ್ಧ ದೇವರಿಗೆ ಅರ್ಪಿಸುತ್ತಾರೆ.ಆ ಕಾಯಿಯಿಂದ ತುಪ್ಪದಲ್ಲಿ ಬೆರಸಿ ರುಚಿ ರುಚಿಯಾದ ಉಂಡೆಯನ್ನ ಮಾಡಿ ತಿಂಗಳಿಗೊಮ್ಮೆ ಗೌಡರ ಮನೆಗೆ ಹೋಗುತ್ತಿದ್ದಳು.ಗಿರಿಜಮ್ಮ ಬಂದರೆ ಗೌಡರ ಮಕ್ಕಳು “ಉಂಡೆ ಅಜ್ಜಿ ಉಂಡೆ ಅಜ್ಜಿ” ಅಂತ ಜಿಗಿಯುತ್ತ ಚಪ್ಪಾಳೆ ಹಾಕುತ್ತಿದ್ದರು.ರಾಮೇಗೌಡರ ಮೊಮ್ಮಕ್ಕಳನ್ನ ಮುದ್ದಾಗಿ ಎರಡು ಮಾತಾಡಿ “ಪಪ್ಪಿ ಕೊಟ್ಟರೆ ಮಾತ್ರ ಉಂಡೆ ಸಿಗೋದು” ಅಂತ ಆತ್ಮೀಯತೆ ಜಾಲ ಬೀಸಿ ದುರ್ಗಂಧ ಬರುವ ಬಾಯಿಯಿಂದ ಮುತ್ತಿಟ್ಟು ಮಕ್ಕಳನ್ನ ಕೈಯಾರ ತಿನಿಸಿ ಬರುತ್ತಿದ್ದಳು.ಗೌಡರ ಮನೆಗೆ ಹೋಗುವಾಗ ಹರಿದ ಸೀರೆ ಉಡೋದು ಮಾತ್ರ ಮರೆಯುತ್ತಿರಲಿಲ್ಲ.ದೀನತೆ ತೋರಿಸುವ ಯಾವ ಅವಕಾಶ ಕೂಡಾ ಬಿಡುತ್ತಿರಲಿಲ್ಲ.ಗೌಡರ ಹೆಂಡತಿಯ ಮುಂದೆ ಎರಡು ಕಣ್ಣಿರು ಹಾಕಿ ರಾಮೇಗೌಡರ ಹತ್ತಿರ ಮಾತನಾಡಲು ಹೋಗುತ್ತಿದ್ದಳು.ಕುಡುಕ ಗಂಡ,ತೀರಿ ಹೋದ ಸವತಿಯ ಮಗ,ಕೆಲಸ ಇಲ್ಲದ ಸ್ವಂತ ಮಗನ ಕೌಟುಂಬಿಕ ಸಮಸ್ಸೆ ಹೇಳಿ ಕರುಣೆಯಿಂದ ಗೌಡರ ಮನಸ್ಸು ಬಂಧಿಸುತ್ತಿದ್ದಳು.ವಾಪಸ್ಸು ಮನೆಗೆ ಹೋಗುವಾಗ ಗೌಡ್ತಿಯಿಂದ “ಪಾಪ ಹೆಂಗಸು” ಅನ್ನಿಸುವವರೆಗೂ ಹೋಗುತ್ತಿರಲಿಲ್ಲ.ಈ ಥರ ಪ್ರತಿ ತಿಂಗಳು ಹೋಗಿ ಗೌಡರ ಮೇಲೆ ಹುಲುಭಾರ ಹಾಕುತ್ತಿದ್ದಳು.ಉಂಡೆ ತಿಂದ ತಪ್ಪಿಗೋ ಅಥವಾ ಅವಳು ತೋರಿಸಿದ ದೀನತೆಗೋ ಗೌಡರು ಅವಳ ಮಾಯಾಜಾಲದಲ್ಲಿ ಬೀಳುತ್ತಿದ್ದರು.

ಈ ಎಲ್ಲ ವಿಷಯವನ್ನು ಗೌಡರ ಮನೆಗೆ ಕೆಲಸ ಮಾಡುವ ಸರಸಕ್ಕಾ ಕಮಲಜ್ಜಿಯ ಸೋಸೆಯಜೊತೆ ಬಯಲುಶೌಚಕ್ಕೆ  ಹೋದಾಗ ತಿಳಿಯುತ್ತಿತ್ತು,ಕಂತು ಕಂತಿನಂತೆ ಬಿತ್ತಾರವಾಗುವ ಧಾರಾವಾಹಿಯಂತೆ.ಎಷ್ಟೋ ಸಲ ಶೌಚ ಬರದೆ ಇದ್ದರು ಅತ್ತೆಯ ಒತ್ತಾಯಕ್ಕೆ ಹೋಗಬೇಕಾದ ಪ್ರಸಂಗ ಬರುತ್ತಿತ್ತು.

ತುಂಬಾ ಹೊತ್ತಾದರೂ ಮಗ ಮತ್ತು ಪತಿರಾಯ ಇನ್ನು ಬಂದಿರಲಿಲ್ಲ.ಗಿರಿಜಕ್ಕನ ಮನೆಗೆ ಒಂದೇ ಗೋಡೆಯ ಅಂತರ ಇದ್ದುದ್ದರಿಂದ ಅಲ್ಲಿ ನಡೆಯುವ ಮಾತು,ಕಥೆ,ಬೈಗುಳ,ಹುನ್ನಾರ,ಪಿಸುಮಾತು,ಶೃಂಗಾರದ ಮಾತು,ಮಾಡುತ್ತಿರುವ ಅಡುಗೆ ಎಲ್ಲ ಸ್ಪಷ್ಟವಾಗಿ ಕೇಳಿ ಬರಿತ್ತಿತ್ತು.ತುಂಬಾ ಹೊತ್ತಾದರೂ ಗಿರಿಜಕ್ಕಳ ಕರ್ಕಶ ಶಬ್ದ  ಕೇಳಿ ಬಂದಿರಲಿಲ್ಲ.ನೆನ್ನೆ ರಾತ್ರಿ ಬೇರೆ ಕೊಬ್ಬರಿಉಂಡೆ ಮಾಡುವ ವಾಸನೆ ಬರುತ್ತಿತ್ತು.ಕೊಬ್ಬರಿಉಂಡೆ ಅಂತ ನೆನಪಾದ ತಕ್ಷಣ ಓಡಿ ಹೋಗಿ ಕೊಳತು ಹುಳು,ಇಲಿ ಆಡುವ ಹೆಬ್ಬಾಗಿಲಿನಿಂದ ಇಣುಕಿ ನೋಡಿದಳು.ಗಿರಿಜಕ್ಕಳ ಸ್ವಂತ ಸೊಸೆ ಬಚ್ಚಲಲ್ಲಿ ಬಟ್ಟೆ ಒಗೆಯುತ್ತಿದ್ದಳು,ಕಮಲಜ್ಜಿ ಇಣುಕುವದನ್ನು ನೋಡಿ ಫಟ್ ಅಂತ ಮುಖಕ್ಕೆ ಭಾರಿಸುವಂತೆ ಬಾಗಿಲು ಮುಚ್ಚಿದಳು.’ಈ ಮನೆಹಾಳಿ ನಮ್ ಹೊಟ್ಟೆ ಮೇಲೆ ಕಾಲು ಇಡೋಕೆ ಹುಟ್ಟಿದ್ದಾಳೆ ಹಾದರಗಿತ್ತಿ’ ಅಂತ ಜಪಿಸುತ್ತ ವಾಪಾಸ್ಸದಳು.ಅವಳು ಮನೆಯಲ್ಲಿರಲಿಲ್ಲ ಅಂದರೆ ಗೌಡರ ಮನೆಗೆ ಉಂಡೆ ತೊಗೊಂಡು ಗೌಡರ ಮಕ್ಕಳ ಕುಂಡೆ ನೆಕ್ಕೊಕ್ಕೆ ಹೋಗಿರುತ್ತಾಳೆ ಅಂತ ಕುದಿಯತೊಡಗಿದಳು.”ಸರದಿಯ ಪ್ರಕಾರ ಪೂಜೆ ನಮಗೆ ಬಿಟ್ಟು ಕೊಡೋದಕ್ಕೆ ಏನಾಗತ್ತೆ…?ಆರು ತಿಂಗಳು ಇಡಿ ಮನೆತನಕ್ಕೆಲ್ಲ ಸಕ್ಕರೆ,ಎಣ್ಣೆ,ಹಣ್ಣು,ಎಮ್ಮೆ ಕೊಟ್ಟು ಸಾಕಾಗಲ್ವ…?”ಅಂತ ಬಡಬಡಿಸುತ್ತ ಮನೆ ಸೇರಿದಳು.

ಸಮಯ ಆರರ ಸುಮಾರಾಗಿತ್ತು.ಹೊತ್ತು ಇಳಿಯುವ ಸಮಯದಲ್ಲಿ  ಕ್ಷಿತಿಜದಲ್ಲಿ ಮಾಯವಾಗುತ್ತಿರುವ ಸೂರ್ಯ ಹಣ್ಣಾದ ಕಿತ್ತಳೆ ಹಣ್ಣಿನಂತೆ ಕಾಣುತ್ತಿದ್ದ.ಅನಾಮಧೇಯ ಬಂದು ಬಣ್ಣ ಎರಚಿದಂತೆ ಆಗಸ ಕೆಂಪಾಗಿ,ಮುದ್ದಾಗಿ ಎಳೆಮಗುವಿನ ಗಲ್ಲದಂತೆ ಕಾಣುತಿತ್ತು.ಗೌಡರ ಮನೆ ಚರ್ಚೆ ಮುಗಿದ ಮೇಲೆ ಉರಿದು ಶಾಂತವಾಗಿ ನಿಂತ ಮನೆಯಂತೆ ಕಾಣುತಿತ್ತು.ದೂರದ ಹನುಮಂದೇವರ ಗುಡಿಯಿಂದ ಗಂಟೆಯ ಶಬ್ದ ಕುರಿವೇಷದಲ್ಲಿರುವ ಜನರನ್ನ ಎಬ್ಬಿಸುವ ಯತ್ನದಲ್ಲಿತ್ತು.ರಸ್ತೆಯೆಲ್ಲ ಸೆಗಣಿ ಉಚ್ಚೆಯಿಂದ ಸಾರಿಸುತ್ತ,ಗೋಧೂಳಿ ಎಬ್ಬಿಸಿ ಅರಲು ವಾಸನೆ ಸೂಸುತ್ತ,ಅಂಬೋ….!ಅಂತ ಲಯದಿಂದ ಹೆಜ್ಜೆ ಹಾಕಿ ದನಕರುಗಳು ಗಡಿಬಿಯಿಂದ ಕೊಟ್ಟಿಗೆ ಸೇರುತ್ತಿದ್ದವು.ದೂರದಲ್ಲಿ ಪೂಜಾರಪ್ಪ ಒಂಟಿಯಾಗಿ ವಾಲುತ್ತ ಬರುವದನ್ನು ಕಮಲಜ್ಜಿಗೆ ಕಂಡಿತು.ಪೂಜಾರಪ್ಪನ ಹಿಂದೆ ಗಿರಿಜಕ್ಕ ಖುಷಿಯ ಉಕ್ಕಂದದಲ್ಲಿ ತೇಲುತ್ತ ಬರುವಳಂತೆ ಪಟಪಟನೆ ಹೆಜ್ಜೆಯಿಡುತ್ತ ಮನೆಸೇರಿ ಬಾಗಿಲು ಹಾಕಿದಳು.ಅವಳು ಮಿಂಚಿನಂತೆ ಬಂದು ಹೋದ ರೀತಿ ನೋಡಿ ಪೂಜೆ ಅವಳ ಮನೆಯವರ  ಕಡೆಗೆ ಹೋದಂತಿದೆ ಅಂತ ಅನಿಸತೊಡಗಿತು.ಕಮಲಜ್ಜಿಯ ಕಲ್ಪನೆ ರೂಪತಾಳುವಂತೆ ಪೂಜಾರಪ್ಪ ಅದನ್ನೇ ಮರುಕಳಿಸಿದ.ತುಟಿಯಲ್ಲಿ ಮಾತಿನ ಗರ್ಭಸ್ರಾವವಾದಂತೆ ಗಿರಿಜಕ್ಕನ ಮೇಲೆ ಕಿರುಚತೊಡಗಿದಳು.ಕೆಲಹೊತ್ತು ಮುಚ್ಚಿದ ಬಾಗಿಲಿನಿಂದಲೇ ಗಿರಿಜಕ್ಕನ ಪ್ರತಿಆಕ್ರಮಣ ಬರುತ್ತಿತ್ತು.ಕಿರುಚಾಡಿ ತ್ರಾಣವಿಲ್ಲದಂತಾದಾಗ ಕಮಲಜ್ಜಿ ಸುಧಾರಿಸಿಕೊಳ್ಳಲು ಮನೆ ಸೇರಿದಳು.ಎಲ್ಲ ಮುಗಿದಂತೆ ಗಿಜಿಜಕ್ಕನ ದ್ವೇಷ ಮೈಯಲ್ಲೆಲ್ಲ ಶೂನ್ಯವಾಹಕದಂತೆ ಏರಿಳಿಯತೊಡಗಿತು.

ತುಸು ಹೊತ್ತಾದ ಮೇಲೆ.ಪೂಜಾರಪ್ಪ ದನಕರುಗಳಿಗೆ ಮೇವು ಹಾಕಲು ಕೊಟ್ಟಿಗೆಗೆ ಹೋದ.ದೂರದಿಂದ ಇನ್ಯಾ “ಕರೆಂಟ್ ಬಂತು ಕರೆಂಟ್ ಪಿಕ್ಚರ್ ಸ್ವಲ್ಪ ಇರ್ತದ ಬರ್ರೋ” ಅಂತ ಭಾನುವಾರದ ಅಳಿದುಳಿದ ಚಿತ್ರ ಕಿರುಚಿತ್ರದಂತೆ ನೋಡಲು ಓಡಿ  ಬರುತ್ತಿದ್ದ.

ಚಿತ್ರಕೃಪೆ : ಗೂಗಲ್ ಇಮೇಜಸ್

*******************************************************************************************

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments