ವಿಷಯದ ವಿವರಗಳಿಗೆ ದಾಟಿರಿ

ಮೇ 28, 2012

ವೈಜ್ಞಾನಿಕ ಮನೋಧರ್ಮ ಉಳ್ಳ ಶ್ರೀಸಾಮಾನ್ಯ

‍ನಿಲುಮೆ ಮೂಲಕ

-ಎ.ವಿ.ಜಿ ರಾವ್

ಶಾಲೆಗೇ ಹೊಗದಿರುವ ಶ್ರೀಸಾಮಾನ್ಯನೂ ವಿಜ್ಞಾನ ಪದವೀಧರನಿಗಿಂತ ಹೆಚ್ಚು ವೈಜ್ಞಾನಿಕ ಮನೋಧರ್ಮ ಉಳ್ಳವನಾಗಿರುವುದು ಸಾಧ್ಯ. ವೈಜ್ಞಾನಿಕ ಮನೋಧರ್ಮ ಅಂದರೇನು ಅನ್ನುವುದರ ಕುರಿತು ಪಾಂಡಿತ್ಯಪೂರ್ಣ ಪ್ರವಚನ ನೀಡಬಲ್ಲವರು, ವೈಜ್ಞಾನಿಕ ಸಂಶೋಧನೆ ಮಾಡುವುದನ್ನೇ ತಮ್ಮ ಕಾಯಕವನ್ನಾಗಿಸಿಕೊಂಡಿರುವ ‘ವೃತ್ತಿಪರ’ ವಿಜ್ಞಾನಿಗಳು ತಮ್ಮ ವೈಯಕ್ತಿಕ ಬದುಕಿನಲ್ಲಿ ವೈಜ್ಞಾನಿಕ ಮನೋಧರ್ಮ ಪ್ರದರ್ಶಿಸದಿರುವ ಅಸಂಖ್ಯ ನಿದರ್ಶನಗಳು ಲಭಿಸುತ್ತವೆ. ವೈಜ್ಞಾನಿಕ ಮನೋಧರ್ಮ ಅಂದರೇನು ಎಂಬುದನ್ನು ತಿಳಿಯದೆಯೂ (ನೋಡಿ:ವಿಜ್ಞಾನ ವಿಧಾನ, ವೈಜ್ಞಾನಿಕ ಮನೋಧರ್ಮ, ವೈಜ್ಞಾನಿಕ ಪ್ರವೃತ್ತಿ, ಮೂಢನಂಬಿಕೆಗಳು) ವಿಜ್ಞಾನದ ಗಂಧಗಾಳಿ ಇಲ್ಲದೆಯೂ ನಿತ್ಯಜೀವನದಲ್ಲಿ ವೈಜ್ಞಾನಿಕ ಮನೋಧರ್ಮ ಉಳ್ಳವರಾಗಿರುವುದು ಸಾಧ್ಯ.

ಈ ಮುಂದೆ ವಿವರಿಸಿರುವ ಲಕ್ಷಣಗಳು ನಿಮ್ಮಲ್ಲಿ ಇದ್ದರೆ ನೀವೂ ವೈಜ್ಞಾನಿಕ ಮನೋಧರ್ಮ ಉಳ್ಳವರು. ಇಲ್ಲದೇ ಇದ್ದರೆ ಅವನ್ನು ಪ್ರಜ್ಞಾಪೂರ್ವಕವಾಗಿ ನಿಮ್ಮದಾಗಿಸಿಕೊಳ್ಳಲು ಪ್ರಯತ್ನಿಸಿ, ಮುಂದೊಂದು ದಿನ ನಿಮಗರಿವಿಲ್ಲದೆಯೇ ವೈಜ್ಞಾನಿಕ ಮನೋಧರ್ಮ ಉಳ್ಳವರು ನೀವಾಗಿರುತ್ತೀರಿ.

ಈ ಮುಂದಿನ ಕಾಲ್ಪನಿಕ ವಿದ್ಯಮಾನದ ನಿದರ್ಶನದಲ್ಲಿ ವರ್ಣಿಸಿದ ವ್ಯಕ್ತಿ ನೀವಾಗಿರಬಹುದೇ—–

ಖ್ಯಾತ ತಾಂತ್ರಿಕರೊಬ್ಬರು ಮಾಡುವ ವಿಶೇಷ ಹೋಮವೊಂದರಲ್ಲಿ ಬೆರಣಿ, ಒಣ ತೆಂಗಿನಗರಿ, ಒಣ ಕಡ್ಡಿ ಕಟ್ಟಿಗೆ ಮುಂತಾದವುಗಳಿಂದ ಅವರ ಶಿಷ್ಯರು ಸಜ್ಜುಗೊಳಿಸಿದ್ದ ಹೋಮಕುಂಡಕ್ಕೆ ಶ್ರೀಯುತರು ಮಂತ್ರಘೋಷದೊಂದಿಗೆ ತುಪ್ಪವನ್ನು ಹಾಕಿ ತದನಂತರ ಕಣ್ಣುಮುಚ್ಚಿ ಏನನ್ನೋ ಧ್ಯಾನಿಸಲಾರಂಭಿಸಿದ ಕೆಲವೇ ಕ್ಷಣಗಳಲ್ಲಿ ತಂತಾನೇ ಹೋಮಕುಂಡದಿಂದ ಹೊಗೆಯಾಡಲಾರಂಭಿಸುವುದನ್ನೂ ತದನಂತರ ಬೆಂಕಿ ಹೊತ್ತಿಕೊಳ್ಳುವುದನ್ನೂ ನೀವು ನೋಡುತ್ತೀರಿ ಎಂದು ಭಾವಿಸಿ.

‘ಇದು ಹೇಗಾಗಿರಬಹುದು?’ ಎಂಬ ಪ್ರಶ್ನೆ ನಿಮ್ಮನ್ನು ಕಾಡತೊಡಗುತ್ತದೆಯೇ? ಹೋಮಕುಂಡವನ್ನು ಸಜ್ಜುಗೊಳಿಸುವಾಗಲೇ ‘ಶಿಷ್ಯರು ಏನಾದರೂ ರಾಸಾಯನಿಕಗಳನ್ನು ದಹ್ಯವಸ್ತುಗಳ ನಡುವೆ ಹುದುಗಿಸಿಟ್ಟಿರಬಹುದೇ, ತಾತ್ರಿಕರು ಸುರಿದದ್ದು ನಿಜವಾಗಿಯೂ ತುಪ್ಪವೇ ಅಥವ ಅದನ್ನು ಹೋಲುವ ಯಾವುದಾದರೂ ರಾಸಾಯನಿಕವೇ’ ಎಂಬ ಸಂಶಯಗಳು ನಿಮ್ಮನ್ನು ಕಾಡತೊಡಗುತ್ತದೆಯೇ?. ಎಲ್ಲರೂ ನಿರ್ಗಮಿಸಿದ ಬಳಿಕ ಹೋಮಕುಂಡವನ್ನು ಪರೀಕ್ಷಿಸಬೇಕು, ವಿಜ್ಞಾನದ ಅರಿವು ಇರುವವರನ್ನು ಈ ಕುರಿತು ಕೇಳಬೇಕು ಅನ್ನಿಸುತ್ತದೆಯೇ?. ‘ಹೀಗಾಗಿರಬಹುದು’ ಎಂದು ನಿಮ್ಮದೇ ಆದ ವಿವರಣೆಯೊಂದು ಮನಸ್ಸಿನಲ್ಲಿ ಹುಟ್ಟುತ್ತದೆಯೇ?

— ಈ ಎಲ್ಲವಕ್ಕೂ ನಿಮ್ಮ ಉತ್ತರ ‘ಹೌದು’ ಎಂದಾದರೆ ನೀವು ವೈಜ್ಞಾನಿಕ ಮನೋಧರ್ಮ ಉಳ್ಳವರು ಅಂದನ್ನಲು ಅಡ್ಡಿಯಿಲ್ಲ. ಅದನ್ನು ಯುಕ್ತ ರೀತಿಯಲ್ಲಿ ಪೋಷಿಸಿದರೆ ಸಾಕು.

ಪೋಷಿಸುವುದು ಹೇಗೆ?

  • ನೀವು ವೀಕ್ಷಿಸಿದ ವಿದ್ಯಮಾನ ಜರಗಿದ್ದು ಏಕೆ? ಹೇಗೆ? ಎಂಬುದರ ಕುರಿತು ಆಲೋಚಿಸುವ ಪ್ರವೃತ್ತಿ ಬೆಳೆಸಿಕೊಳ್ಳಿ. ಈ ಭೌತಿಕ ವಿಶ್ವದಲ್ಲಿ ನಡೆಯುವ ಪ್ರತೀ ವಿದ್ಯಮಾನಕ್ಕೂ ಒಂದು ವೈಜ್ಞಾನಿಕ ವಿವರಣೆ ಇದ್ದೇ ಇದೆ. (ವಿವರಣೆ ಇಲ್ಲದ ವಿದ್ಯಮಾನಗಳಿದ್ದರೆ ಅವಕ್ಕೆ ವಿವರಣೆ ಹುಡುಕ ತೊಡಗಿದರೆ ನೀವು ಸಂಶೋಧಕರಾಗುತ್ತೀರಿ)
  • ನಿಮಗೆ ವಿವರಣೆ ಹೊಳೆಯದಿದ್ದರೆ ಅದರ ಬಗ್ಗೆ ವಿಶ್ವಾಸಾರ್ಹ ಮೂಲಗಳಿಂದ ಮಾಹಿತಿ ಪಡೆಯಲು ಪ್ರಯತ್ನಿಸಿ. ಕೆಲವು ಸಂದರ್ಭಗಳಲ್ಲಿ ಮಾಹಿತಿ ಸುಲಭಲಭ್ಯವಾಗದೇ ಇರಬಹುದು. ಮಾಹಿತಿ ಸಿಕ್ಕಲಿಲ್ಲ ಅಂದಮಾತ್ರಕ್ಕೆ ಅದು ‘ದೈವಿಕ’, ‘ಪವಾಡ’ ಎಂದು ತೀರ್ಮಾನಿಸಕೂಡದು.
  • ಮಾಹಿತಿಯ ಮೂಲ ಯಾರೇ ಆಗಿರಲಿ, ಯಾವುದೇ ಆಗಿರಲಿ ಒಮ್ಮೆಲೇ ‘ಸರಿಯಾಗಿದೆ’ ಎಂದು ತೀರ್ಮಾನಿಸದೆಯೇ, ಅದರ ನಿಷ್ಕೃಷ್ಠತೆಯನ್ನೂ ವಿಶ್ವಾಸಾರ್ಹತೆಯನ್ನೂ ಖಚಿತಪಡಿಸಿಕೊಳ್ಳಲು ವಿಭಿನ್ನ ಮಾಹಿತಿಮೂಲಗಳನ್ನು ಪರಿಶೀಲಿಸಿ. (ಮಾಹಿತಿಯ ಮೂಲ ವ್ಯಕ್ತಿ ಆಗಿದ್ದರೆ ಬಲು ನಾಜೂಕಾಗಿ ವರ್ತಿಸಿ. ನಿಮ್ಮ ುದ್ದೇಶ ಸತ್ಯಾನ್ವೇಷಣೆ ಆಗಿರಬೇಕೇ ವಿನಾ ಮಾಹಿತಿಮೂಲವನ್ನು ಸಾರ್ವಜನಿಕವಾಗಿ ಅವಮಾನಿಸುವುದು ಆಗಿರಬಾರದು)
  • ನಿಮಗೆ ‘ಸರಿ’ ಅನ್ನಿಸುವ ವಿವರಣೆಯನ್ನು ತಿರಸ್ಕರಿಸಲು ಏನಾದರೂ ‘ವಾದ’ಗಳನ್ನು ಮುಂದಿಡಲು ಸಾಧ್ಯವೇ ಅನ್ನುವುದನ್ನೂ ನೀವೇ ಪರಿಶೀಲಿಸಿ. ಯಾವುದೇ ತೀರ್ಮಾನಕ್ಕೆ ಬರುವ ಮುನ್ನ ನಿಮ್ಮ ಮೂಗಿನ ನೇರಕ್ಕೆ ಆಲೋಚಿಸುತ್ತಿಲ್ಲ ಎಂಬುದನ್ನು ಖಾತರಿ ಪಡಿಸಿಕೊಳ್ಳ ಬೇಕಾದದ್ದು ಬಲು ಮುಖ್ಯ
  • ನಿಮ್ಮ ತೀರ್ಮಾನವನ್ನು ಪುಷ್ಟೀಕರಿಸಲು ಇನ್ನೂ ಹೆಚ್ಚಿ ಸಾಕ್ಷ್ಯಾಧಾರಗಳನ್ನು ಹುಡುಕಿ, ಸಂಗ್ರಹಿಸಿ
  • ಯಾವುದೇ ಹಂತದಲ್ಲಿ ನಿಮ್ಮ ಆಲೋಚಿಸುವಿಕೆಯಲ್ಲಿ ಏನೋ ತಪ್ಪಾಗಿದೆ ಅನ್ನಿಸಿದರೆ ಅದನ್ನು ಒಪ್ಪಿಕೊಳ್ಳುವ, ತಿದ್ದಿಕೊಳ್ಳುವ, ಅವಶ್ಯವಿದ್ದರೆ ಆಲೋಚನಾಪಥವನ್ನೇ ಬದಲಿಸುವ ‘ತೆರೆದ ಮನಸ್ಸು’ ನಿಮ್ಮದಾಗಿರುವಂತೆ ನೋಡಿಕೊಳ್ಳಿ. (ಇದು ಅತ್ಯಂತ ಕಷ್ಟದ ಕಾರ್ಯ)
  • ಸಾಂಪ್ರದಾಯಿಕ ವಿಧಿ ವಿಧಾನಗಳಿಗೆ, ವಿಚಾರಲಹರಿಗಳಿಗೆ ಜೋತುಬೀಳದೆಯೇ ‘ಅಸಾಂಪ್ರದಾಯಿಕ’ ಅನ್ನಬಹುದಾದ ಪಥದಲ್ಲಿಯೂ ನಡೆಯಲು ಕಲಿಯಿರಿ

ಇಂತು ಮಾಡಿದರೂ, ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕುವ ಖಾತರಿ ಇಲ್ಲ. ಆದರೂ, ಈ ಪ್ರಕ್ರಿಯೆಯಲ್ಲಿ ನೀವು ಬಹಳಷ್ಟನ್ನು ಕಲಿತಿರುತ್ತೀರಿ.

ನೆನಪಿಡಿ: ನಮಗೆ ವಿವರಿಸಲು ಸಾಧ್ಯವಾಗದ ವಿದ್ಯಮಾನಗಳು ‘ಪವಾಡ’ಗಳಲ್ಲ. ವಾಸ್ತವವಾಗಿ ‘ಪವಾಡ’ಗಳೇ ಆಗುವುದಿಲ್ಲ.

***********************************************************

ಚಿತ್ರ ಕೃಪೆ : paradigm-shift-21st-century.nl

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments