ವಿಷಯದ ವಿವರಗಳಿಗೆ ದಾಟಿರಿ

ಜೂನ್ 11, 2012

ಚುಟುಕು ಕ್ರಿಕೆಟ್ ನೈತಿಕತೆಯ ಕೊನೆಗುಟುಕು

‍ನಿಲುಮೆ ಮೂಲಕ
-ರಾಕೇಶ್ ಎನ್ ಎಸ್
 
ಭಾರತ ೨೦೦೭ರಲ್ಲಿ ವಿಶ್ವ ಟೆಂಟಿ ಟ್ವೆಂಟಿ ಚಾಂಪಿಯನ್ ಆದ ಕುರುಹಾಗಿ ಮತ್ತು ಜೀ ಸಮೂಹದ ಇಂಡಿಯನ್ ಕ್ರಿಕೆಟ್ ಲೀಗ್‌ಗೆ ಸಡ್ಡು ಹೊಡೆಯಲಿಕ್ಕಾಗಿ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ಅಕಾಲದಲ್ಲಿ ಜನ್ಮ ತಾಳಿ ಐದು ವರ್ಷ ಸಂದಿದೆ. ’ಶುದ್ಧ ಕ್ರಿಕೆಟ್’ ಎಂಬುದು ಐಪಿಎಲ್‌ನ ಜಾತಕದಲ್ಲೇ ಬರೆದಿಲ್ಲ ಎಂಬುದು ಈ ಪಂಚ ವರ್ಷದಲ್ಲೆ ಸಾಬೀತಾಗಿದೆ.
ಭಾರತ ಟ್ವೆಂಟಿ-ಟ್ವೆಂಟಿ ವಿಶ್ವ ಚಾಂಪಿಯನ್ ಆದದ್ದು ಒಂದೇ ಐಪಿಎಲ್‌ನ ಉಗಮಕ್ಕೆ ಕಾರಣವಾಗಿರಲಿಲ್ಲ. ಭಾರತದಲ್ಲಿ ಕ್ರಿಕೆಟ್‌ನ ಏಕಸ್ವಾಮ್ಯ ಹೊಂದಿರುವ ಬಿಸಿಸಿಐಯ ಅಧಿಪತ್ಯಕ್ಕೆ ಜೀ ಸಮೂಹದ ಸುಭಾಶ್ ಚಂದ್ರ ಐಸಿಎಲ್‌ನ ಮೂಲಕ ಕೊಡಲಿಯೇಟು ನೀಡಿದಾಗ ತನ್ನ ಕ್ರಿಕೆಟ್ ಕೊಪ್ಪರಿಗೆ ಇನ್ನೊಬ್ಬರ ಪಾಲಾಗುವುದನ್ನು ಯಾವುದೇ ಬೆಲೆ ತೆತ್ತು ತಪ್ಪಿಸಬೇಕು ಎಂಬ ಬಿಸಿಸಿಐ ಯೋಚನೆಯೇ ಐಪಿಎಲ್‌ನ ತಳಪಾಯ. ಉಳಿದಂತೆ ಕ್ರಿಕೆಟಿಗರ ಉದ್ಧಾರ, ಮನರಂಜನೆ ಮುಂತಾದ ಬಿಸಿಸಿಐ
ಹೇಳಿಕೆಗಳು ಸುಮ್ಮನೆ ತೋರಿಕೆಯದ್ದು ಅಷ್ಟೆ.
 
ಟ್ವೆಂಟಿ-ಟ್ವೆಂಟಿ ನಿಂತಿರುವುದೇ ಹೊಡಿ ಬಡಿ ಸಿದ್ಧಾಂತದ ಮೇಲೆ. ಕ್ರಿಕೆಟ್‌ನ ಮೂಲ ಧರ್ಮಕ್ಕೆ ಇದು ವಿರುದ್ಧವಾದರೂ ಕಾಲ ಧರ್ಮಕ್ಕನುಗುಣವಾಗಿ ಈ ಸಂಸ್ಕ್ರತಿಯನ್ನು ಒಪ್ಪಿಕೊಂಡರೆ ಅದರಲ್ಲಿ ತಪ್ಪೇನಿಸಲಾಗದು. ಆದರೆ ಕ್ರಿಕೆಟ್ ಎಂಬ ಆಟ ಉದ್ದಿಮೆಗಳ ತೆಕ್ಕೆಗೆ ಸೇರಿಕೊಂಡಾಗ ಉಂಟಾಗುವ ಉತ್ಪಾತಗಳು ಮಾತ್ರ ಸಹ್ಯವಾಗಿಲ್ಲ. ಮನರಂಜನೆ ಮತ್ತು ವ್ಯಾಯಾಮ ಕ್ರೀಡೆಯ ಎರಡು ಕಣ್ಣುಗಳಿದ್ದಂತೆ. ಮನರಂಜನೆ ಆಡುವವನಿಗೆ ಮತ್ತು ನೋಡುವವನಿಗೆ ಹಾಗೆ ವ್ಯಾಯಾಮ ಆಡುವವನಿಗೆ ಸಿಗುತ್ತದೆ. ಆದರೆ ವೃತ್ತಿಪರ ಆಟಗಾರರಿಗೆ ಪ್ರತ್ಯೇಕವಾದ ವ್ಯಾಯಾಮವೇ ಇರುತ್ತದೆ. ನಮ್ಮಂತವರಿಗೆ ಮಾತ್ರ ಆಡುವುದೇ ವ್ಯಾಯಾಮ! ಅದ್ದರಿಂದ ಯಾವುದೇ ವೃತ್ತಿಪರ ಆಟಗಾರನಿಗೆ ಆತ ನಮ್ಮ ಮುಂದೆ ನೀಡುವ ಪ್ರದರ್ಶನ ಆತನಿಗೆ ವ್ಯಾಯಾಮ ಮತ್ತು ಮನರಂಜನೆಯಾಗಿ ಮುಖ್ಯವಾಗುವುದಕ್ಕಿಂತ ನೋಡುಗನಿಗೆ ಅದು ನೀಡುವ ಮನರಂಜನೆಯಷ್ಟೆ ಪ್ರಮುಖವಾಗುತ್ತದೆ. ಐಪಿಎಲ್ ನಂತಹ ಕ್ರೀಡಾಕೂಟದಲ್ಲಿ ಒಬ್ಬ ಆಟಗಾರ ಎಷ್ಟು ಮನರಂಜನೆ ನೀಡಬಲ್ಲ ಎಂಬುದರ ಮೇಲೆ ಅತನ ಹಣದ ಜೋಳಿಗೆ ತುಂಬುತ್ತದೆ. ಅದ್ದರಿಂದ ಇಲ್ಲಿ ಒಬ್ಬ ಆಟಗಾರ ಪ್ರದರ್ಶಕನಾಗಿ ಮುಖ್ಯನಾಗುತ್ತಾನೆಯೇ ಹೊರತು ಆತನ ಕೌಶಲ್ಯಗಳಿಂದಾಗಿ ಅಲ್ಲ.
ಒಂದು ಕ್ರೀಡಾ ತಂಡಕ್ಕೆ ಅಥವಾ ಕ್ರಿಡಾಳುವಿಗೆ ಮನರಂಜನೆ ನೀಡುವ ಸಾಮರ್ಥ್ಯವಿದ್ದರೆ ಅದು ಹೆಚ್ಚುಗಾರಿಕೆಯ ವಿಷಯ. ಒಂದು ಸಿನೆಮಾ, ನಾಟಕ ಕೂಡ ಮಾಡುವುದು ಅದೇ ಕೆಲಸವನ್ನು. ಆದರೆ ಸಿನೆಮಾ, ನಾಟಕಕ್ಕೆ ಒಂದು ಸ್ಕ್ರೀಪ್ಟ್ ಇರುತ್ತದೆ, ಕ್ರೀಡೆಗೆ ನೀತಿ ನಿಯಮದ ಚೌಕಟ್ಟು ಇರುತ್ತದೆ. ಆದರೆ ಇದು ಅದಲು ಬದಲಾದರೆ ಮಾತ್ರ ಶುದ್ಧ ಮನರಂಜನೆಯ ಆಶಯ ನೆಲಕಚ್ಚುತ್ತದೆ. ಕ್ರೀಡೆಯ ಸೋಲು, ಗೆಲುವು ಸ್ಕ್ರೀಪ್ಟ್ ರೂಪ ಪಡೆದರೆ ಮ್ಯಾಚ್ ಫಿಕ್ಸಿಂಗ್‌ನ ಭೂತ ಕಣ್ಣ ಮುಂದೆ ಬಂದು ನಿಂತಂತೆ. ಮ್ಯಾಚ್ ಫಿಕ್ಸಿಂಗ್ ದಶಕಗಳ ಹಿಂದೆಯೇ ಅಧಿಕೃತವಾಗಿ ಕ್ರಿಕೆಟ್‌ನೊಂದಿಗೆ ಸಂಬಂಧ ಕುದುರಿಸಿಕೊಂಡಿತ್ತು. ಭಾರತ ಮತ್ತು ದಕ್ಷಿಣ ಆಫ್ರಿಕಾದ ತಲಾ ಒರ್ವ ಯಶಸ್ವಿ ಕ್ರಿಕೆಟ್ ಕಪ್ತಾನರ ಮತ್ತು ಕೆಲ ಆಟಗಾರರ ಕ್ರಿಕೆಟ್ ಬದುಕಿಗೆ ಎಳ್ಳುನೀರು ನೀಡಿತ್ತು. ಆ ಬಳಿಕ ಮ್ಯಾಚ್ ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್‌ನ ಆನೇಕ ಆರೋಪಗಳು ಕೇಳಿಬಂದವು. ಕೆಲ ಪ್ರಕರಣಗಳು ಸಾಬೀತಾದವು ಕೂಡ. ಇನ್ನು ಅನೇಕ ಆರೋಪಗಳು ಸಾಕ್ಷ್ಯಾಧಾರಗಳ ಕೊರತೆ ಮುಂತಾದ ಅಂಶಗಳಿಂದ ಅಲ್ಲಿಗೆ ಕಣ್ಣು ಮುಚ್ಚಿದ್ದವು. ಆದರೆ ಈಗ ಮತ್ತೆ ಐವರು ಕ್ರಿಕೆಟಿಗರು ಮ್ಯಾಚ್ ಫಿಕ್ಸಿಂಗ್‌ನ ಆರೋಪಕ್ಕೆ ತುತ್ತಾಗಿ ಕ್ರಿಕೆಟ್‌ನಿಂದ ಅಮಾನತುಗೊಳ್ಳುವುದರೊಂದಿಗೆ ಐಪಿಎಲ್‌ನ ಆಶಯದ ಮೇಲೆ ಕರಿ ನೆರಳು ಮೂಡಿದೆ.
ಉದ್ದಿಮೆದಾರರು ಐಪಿಎಲ್‌ನ ಪ್ರಮುಖ ಪಾಲುದಾರರು. ಅವರಿಗೆ ಬ್ಯುಸಿನೆಸ್ ಎಂದರೆ ಒಂದು ರೂ ಚೆಲ್ಲಿ ಎಷ್ಟು ಆಗುತ್ತೋ ಅಷ್ಟನ್ನು ಬಾಚಿಕೊಳ್ಳುವುದು. ಹೆಚ್ಚು ಆದಾಯ ಬಂದಷ್ಟು ಅವರಿಗೆ ಖುಷಿಯೂ ಜಾಸ್ತಿ. ಇದು ವ್ಯವಹಾರ ಧರ್ಮ. ಐಪಿಎಲ್‌ನಿಂದ ಅವರಿಗೆ ಅದಾಯಗಳಿಸುವ ಹೊಸ ದಾರಿಯ ಗೋಚಾರವಾಗುವುದೇನೋ ಸರಿ ಆದರೆ ಅವರು ಈಗಾಗಲೇ ತಾವು ಗಳಿಸಿದ ಕರಿ ಹಣವನ್ನು ಬಿಳಿ ಹಣವನ್ನಾಗಿ ಮಾಡಲು ಐಪಿಎಲ್‌ನ ದಾರಿಯನ್ನು ಹಿಡಿದಿದ್ದಾರೆ ಎಂಬುದು ಹಲವು ಕಡೆಗಳಿಂದ ಕೇಳಿ ಬರುತ್ತಿರುವ ಗಟ್ಟಿ ಆರೋಪ. ಈ ಬಗ್ಗೆ ೨೦೧೧ರ ಆಗಸ್ಟ್ ೨ರಂದು ಆರ್ಥಿಕ ಸ್ಥಾಯಿ ಸಮಿತಿಯು ತನ್ನ ವರದಿಯಲ್ಲಿ ಉಲ್ಲೇಖಿಸಿತ್ತು. ಐಪಿಎಲ್ ಸ್ಪಾಟ್ ಫಿಕ್ಸಿಂಗ್‌ನ ಕಳಂಕಿತ ಕ್ರಿಕೆಟಿಗರಲ್ಲಿ ಮೋನಿಶ್ ಶರ್ಮಾ ಕೂಡ ಒಬ್ಬ. ಆತ ಅಂತರಾಷ್ಟ್ರೀಯ ಕ್ರಿಕೆಟ್ ಆಡದ ಕಾರಣ ಆತನಿಗೆ ಯಾವುದೇ ಐಪಿಎಲ್ ಪ್ರಾಂಚೈಸಿ ಕೊಡಬಹುದಾದ ಗರಿಷ್ಠ ಹಣ ೩೦ ಲಕ್ಷ. ಆದರೆ ಅವನಿಗೆ ಪುಣೆ ವಾರಿಯರ‍್ಸ್ ತಂಡದ ಪರ ಆಡಲು ೧.೫ ಕೋಟಿ ಸಿಕ್ಕಿದೆಯಂತೆ. ಅಂದರೆ ೧.೨ ಕೋಟಿ ರೂವನ್ನು ಪುಣೆ ತಂಡ ಅಕ್ರಮವಾಗಿ ಅವನಿಗೆ ನೀಡಿದೆ. ಆದರೆ ಅಮಾನತಿನ ಶಿಕ್ಷೆ ಮಿಶ್ರಾನಿಗೆ ಮಾತ್ರ ಸೀಮಿತ! ಇಲ್ಲಿ ನಿಜ ತಪ್ಪಿತಸ್ಥರಾದ ಪುಣೆ ತಂಡದ ಮಾಲೀಕರಿಗೆ ಯಾವುದೇ ಬೇಲಿಯ ಬಂಧನ ಇನ್ನೂ ಬಿದ್ದಿಲ್ಲ.
ಐಪಿಎಲ್‌ನ ಮೊದಲ ಮುಖ್ಯಸ್ಥ ಲಲಿತ್ ಮೋದಿಯನ್ನು ಕಿತ್ತೆಸೆದು, ಕೊಚ್ಚಿ ಟಸ್ಕರ‍್ಸ್ ತಂಡವನ್ನು ರದ್ದುಗೊಳಿಸಿ ಈಗ ಐವರು ಕ್ರಿಕೆಟಿಗರನ್ನು ಅಮಾನತುಗೊಳಿಸುವುದರ ಮೂಲಕ ತಮ್ಮ ಶುಭ್ರತೆಯ ಹಲ್ಲನ್ನು ಐಪಿಎಲ್ ಬೋರ್ಡ್ ತೋರಿಸುತ್ತಿದೆ. ಆದರೆ ಇದೇ ಐಪಿಎಲ್‌ನ ಸಂಘಟಕರು ಕಳೆದ ವರ್ಷ ತಮ್ಮ ಸಂವಿಧಾನಕ್ಕೆ ತಿಲಾಂಜಲಿ ನೀಡಿ ಮುಂಬೈ ತಂಡ ಐವರು ವಿದೇಶಿ ಕ್ರಿಕೆಟಿಗರನ್ನು ಆಡಿಸಲು ಅನುಮತಿ ನೀಡಿತ್ತು, ಈ ವರ್ಷ ಕ್ರಿಸ್ ಗೈಲ್‌ರನ್ನು ಬೆಂಗಳೂರು ತಂಡ ಉಳಿಸಿಕೊಳ್ಳುವಂತೆ ಮಾಡಿತ್ತು, ಪುಣೆ ತಂಡದ ತಕರಾರುಗಳ ಜೊತೆ ರಾಜಿ ಮಾಡಿಕೊಂಡಿತ್ತು ಹೀಗೆ ತಂಡಗಳ ಮಾಲೀಕರ ಹಿತಾಸಕ್ತಿಗಳಿಗೆ ಐಪಿಎಲ್ ಸದಾ ಸ್ಪಂದಿಸುತ್ತಿದೆ.
ಪಂದ್ಯಗಳ ನಡುವೆ ಟಿವಿ ವಾಹಿನಿಗಳ ಜಾಹೀರಾತು ದಾಹ ತೀರಿಸಲು ಟೈಮ್ ಔಟ್ ಜಾರಿಗೆ ತಂದದ್ದು ಪಂದ್ಯ ಮುಗಿದ ಬಳಿಕ ಅಧಿಕೃತ ಪಾರ್ಟಿಗಳನ್ನು ನಡೆಸುತ್ತಿರುವುದೆಲ್ಲ ಹಣದಾಸೆಗೆಯೇ ಹೊರತು ಮತ್ತೆನಕ್ಕೂ ಅಲ್ಲ. ಒಂದು ಕ್ರೀಡೆ ಕೆಲವೇ ಕೆಲವರ ಧನಪಿಶಾಚಿಯನ್ನು ಬಿಡಿಸಲು ಬಳಕೆಯಾದಾಗ, ದೊಡ್ಡವರ  ಅವ್ಯವಹಾರವನ್ನು ಮುಚ್ಚಿಡಲು ಸಾಧನವಾದಗ ಮತ್ತು ಈ ಆವಾಂತರಗಳಿಗೆ ಮನರಂಜನೆಯ ಲೇಪ ಸಿಕ್ಕಾಗ ಈಗ ನಡೆಯುತ್ತಿರುವ, ಬಯಲಾಗುತ್ತಿರುವ ಭಾನಗಡಿಗಳು ಸಂಭವಿಸುತ್ತವೆ!
ಅತ್ಯಾಚಾರ ಯತ್ನ, ರೇವ್ ಪಾರ್ಟಿ ಪ್ರಕರಣಗಳನ್ನು ಮೈದಾನದಾಚೆಗಿನ ಪ್ರಕರಣ ಎಂದು ಹೇಳಿ ಐಪಿಎಲ್ ಸಂಘಟಕರು ಬಚಾವಾಗಬಹುದು. ಆದರೆ ಯುವ ಕ್ರಿಕೆಟಿಗರಿಗೆ ಹಣ, ಮದ್ಯ, ಮಾನಿನಿ ಪೂರೈಕೆಯಾಗುವ ಸಂದರ್ಭದಲ್ಲಿ ಅವರು ದಾರಿ ತಪ್ಪದಂತೆ ನೋಡಿಕೊಳ್ಳುವ ಜವಾಬ್ದಾರಿ ಸಂಘಟಕರದ್ದೆ ಆಗಿರುತ್ತದೆ. ಏಕೆಂದರೆ ಪಂದ್ಯದ ಬಳಿಕ ಪಾರ್ಟಿ ಕಲ್ಚರ್‌ನ್ನು ಜಾರಿಗೆ ತಂದದ್ದು ಐಪಿಎಲ್ ಸಂಘಟಕರೆ. ಐಪಿಎಲ್ ಸಂಘಟಕರು ಪಾರ್ಟಿ ಮಾಡಬೇಡಿ ಎಂದು ಸ್ಪಷ್ಟವಾಗಿ ಹೇಳಿದ್ದೆ ಆದರೆ ಅಲ್ಲಿ ಸಮಸ್ಯೆಗಳು ಇರುವುದಿಲ್ಲ. ಭಾರತೀಯ ಕ್ರೀಡಾಪ್ರೇಮಿಗಳಿಗೆ ಶ್ರೀಮಂತ ಕ್ರಿಕೆಟಿಗರು ಬೇಕಾಗಿಲ್ಲ, ಸಂಸ್ಕಾರವಂತ ಕ್ರಿಕೆಟಿಗರು ಬೇಕು. ಅದಕ್ಕಾಗಿಯೆ ಇಂದಿಗೂ ಸಚಿನ್, ದ್ರಾವಿಡ್, ಕುಂಬ್ಳೆ, ಶ್ರೀನಾಥ್ ಎಂದರೆ ಎದೆಯಲ್ಲಿ ಗೌರವದ ಅಲೆ ತನ್ನಿಂದ ತಾನೆ ಎದ್ದಿರುತ್ತದೆ. ಅವರನ್ನು ಯಾವುದೇ ಅಭಿಮಾನಿ ಮೈದಾನ, ಮೈದಾನದಾಚೆಗಿನ ವ್ಯಕ್ತಿತ್ವ ಎಂದು ವಿಂಗಡಿಸುವ ಗೋಜಿಗೆ ಹೋಗುವುದಿಲ್ಲ. ಅದೇ ಯುವ ಕ್ರಿಕೆಟಿಗರಿಗೆ ಸಂಬಂಧಿಸಿದಂತೆ ಮಾತನಾಡುವಾಗ ಅವನು ಚೆನ್ನಾಗಿ ಆಡುತ್ತಾನೆ ಅಷ್ಟೆ ಎಂದು ಹೇಳಿ ಅಲ್ಲಿಗೆ ಮಾತು ನಿಲ್ಲಿಸುವುದು ಇದೇ ಕಾರಣಕ್ಕಾಗಿ. ಅವರಿಗೆ ಫ್ರಾಂಚೈಸಿಗಳ ಮಾಲೀಕರು ಕೋಟಿ ಕೋಟಿ ಸುರಿದರು ಕೂಡ ಅವರ‍್ಯಾರು ಜನರ ಹೃದಯದಲ್ಲಿ ನೆಲೆ ನಿಲ್ಲಲಾರರು.
ಈ ಬಾರಿ ಐಪಿಎಲ್‌ನ ಅನೇಕ ಪಂದ್ಯಗಳ ನಿರ್ಣಾಯಕ ಸಂದರ್ಭಗಳಲ್ಲಿ ಬೌಲರ್‌ಗಳು ಪುಲ್ಟಾಸ್ ಎಸೆದು ಸಿಕ್ಸ್ ಹೊಡೆಸಿಕೊಂಡಿರುವುದನ್ನು ಈಗ ಅನುಮಾನದ ದೃಷ್ಟಿಯಿಂದ ನೋಡದೆ ವಿಧಿಯಿಲ್ಲ. ಈ ಐದು ವರ್ಷದಲ್ಲಿ ಬಯಲಾದ ಎಲ್ಲಾ ಹಗರಣಗಳು ಏನೇನೂ ಅಲ್ಲ. ಐಪಿಎಲ್ ಎಂಬ ಹುತ್ತದಲ್ಲಿ ಲೆಕ್ಕವಿಲ್ಲದಷ್ಟು ಅಕ್ರಮ, ಅವ್ಯವಹಾರ, ಅನೈತಿಕ ಸಂಗತಿಗಳ ಘಟಸರ್ಪಗಳು ಅವಿತು ಕೂತಿವೆ. ಅದಕ್ಕಾಗಿಯೇ ಫಿಕ್ಸಿಂಗ್ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಬಿಸಿಸಿಐ ನೆಲದ ಕಾನೂನಿನಡಿ ಕೆಲಸ ನಿರ್ವಹಿಸುವ ಸಂಸ್ಥೆಗಳಿಗೆ ಕೊಟ್ಟಿಲ್ಲ. ಐಪಿಎಲ್‌ಗೆ ಬಾಲಗ್ರಹ ಪೀಡೆಯಿದೆ. ಯಾವುದೆ ಕ್ರೀಡಾಕೂಟ ೫ ವರ್ಷ ಪೂರೈಸಿದೆ ಎನ್ನುವುದು ಇತಿಹಾಸದಲ್ಲಿನ ಚಿಕ್ಕ ತುಣುಕು ಅಷ್ಟೆ. ಅದು ಮುಂದೆ ದಶಕ, ಶತಮಾನಗಳ ಕಾಲ ಬದುಕುವ ಆಯುಷ್ಯ ಹೊಂದಿರುತ್ತದೆ. ಈ ದೀರ್ಘಾವಧಿಯ ಪಯಣದಲ್ಲಿ ತೊಡಕು, ತೊಡರುಗಳು ವಿವಾದಗಳು ಸರ್ವೇ ಸಾಮಾನ್ಯ. ಒಲಿಂಪಿಕ್ಸ್ ಕ್ರೀಡಾಕೂಟ ಕೂಡ ಇದಕ್ಕೆ ಹೊರತಲ್ಲ. ಆದರೆ ಪಂಚ ವರ್ಷದಲ್ಲೇ ಸಾಕಷ್ಟು ಪಂಚ್ ತಿಂದಿರುವ ಐಪಿಎಲ್‌ನ ಬುಡವೇ ಸರಿಯಿಲ್ಲ ಎಂದಾದ ಮೇಲೆ ಅದಕ್ಕೆ ಅಕಾಲ ಮರಣ ಬರುವುದು ನಿಶ್ಚಿತ.
ಕೆಲವೊಮ್ಮೆ ಗುರಿ ಸರಿ ಇದ್ದರೆ ಯಾವುದೇ ದಾರಿ ಹಿಡಿದಾದರೂ ಅದನ್ನು ಸಾಧಿಸಬೇಕು ಅಥವಾ ಗುರಿ ಸಾಧನೆ ತಡವಾದರು ತೊಂದರೆಯಿಲ್ಲ ಆದರ್ಶದ ದಾರಿಯಲ್ಲೆ ಸಾಗಬೇಕು ಇದರಲ್ಲಿ ಎರಡನೇ ಅಂಶ ಅತ್ಯುತ್ತಮವಾಗಿದ್ದರೂ ಕೂಡ ಮೊದಲನೇಯ ಅಂಶವನ್ನು ಕೆಲವು ಸಂದರ್ಭಗಳಲ್ಲಿ ಸಮರ್ಥಿಸಿಕೊಳ್ಳಬಹುದೇನೋ. ಆದರೆ ಐಪಿಎಲ್‌ನ ಗುರಿಯೇ ಸರಿಯಿಲ್ಲ ಎಂದ ಮೇಲೆ ಅದು ಸಾಗುವ, ಸಾಗುತ್ತಿರುವ ದಾರಿ ಹೇಗೆ ತಾನೆ ಸರಿ ಇರಲು ಸಾಧ್ಯ?
 
 
**********
pic courtesy: blogs.thenews.com.pk

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments