ಪ್ರತಿಯೊಬ್ಬ ವ್ಯಕ್ತಿಯೂ ಅದ್ವಿತೀಯ
– ಎ.ವಿ.ಜಿ ರಾವ್
ಪ್ರತಿಯೊಬ್ಬ ವ್ಯಕ್ತಿಯೂ ಅದ್ವಿತೀಯ. ಎಲ್ಲ ಗುಣಲಕ್ಷಣಗಳನ್ನು ಒಟ್ಟಾರೆಯಾಗಿ ಪರಿಗಣಿಸಿದರೆ ಈ ಭೂಮಿಯ ಮೇಲೆ ಒಬ್ಬ ವ್ಯಕ್ತಿಗೆ ಪ್ರತಿಶತ ೧೦೦ ರಷ್ಟು ಸರಿಸಾಟಿಯಗಬಲ್ಲ ಇನ್ನೊಬ್ಬ ವ್ಯಕ್ತಿ ಇರುವುದಿಲ್ಲ. ಏಕಾಂಡಜ ಯಮಳರ ನಡುವೆ (ಐಡೆಂಟಿಕಲ್ ಟ್ವಿನ್ಸ್-ಇವರ ಜೈವಿಕ ಆನುವಂಶೀಯತೆ ಒಂದೇ ಆಗಿರುತ್ತದೆ) ಕೂಡ ಪ್ರತಿಶತ ೧೦೦ರಷ್ಟು ಸಮತೆ ಇರುವುದಿಲ್ಲ. ಅಂದ ಮಾತ್ರಕ್ಕೆ, ಮಾನವರಲ್ಲಿ ಸಮತೆ ಇಲ್ಲವೇ ಇಲ್ಲ ಎಂದು ತೀರ್ಮಾನಿಸ ಕೂಡದು. ಸಮತೆ ಮತ್ತು ವಿವಿಧತೆ ಇವೆರಡನ್ನೂ ಮಾನವರಲ್ಲಿ ಕಾಣಬಹುದು. ಯಾವದೇ ಒಂದು ಜೀವಿಜಾತಿಯನ್ನು ವೀಕ್ಷಿಸಿದರೂ ಸಾರ್ವತ್ರಿಕ ಲಕ್ಷಣಗಳಲ್ಲಿ ಸಮತೆಯೂ ನಿರ್ದಿಷ್ಟ ಲಕ್ಷಣಗಳಲ್ಲಿ ವಿವಿಧತೆಯೂ ಇರುವುದು ಗೋಚರಿಸುತ್ತದೆ. ಅಳತೆ ಮಾಡಬಹುದಾದ ಯಾವುದೇ ಮಾನವ ಲಕ್ಷಣವನ್ನು ಅಧ್ಯಯಿಸಿದರೂ ಈ ನಿಸರ್ಗ ನಿಯಮ ಸ್ಪಷ್ಟವಾಗುತ್ತದೆ. ಜೈವಿಕ ಆನುವಂಶೀಯತೆ ಮತ್ತು ಪರಿಸರಗಳ ನಡುವಿನ ಅನ್ಯೋನ್ಯಕ್ರಿಯೆಯೇ ಈ ವೈಚಿತ್ರ್ಯಕ್ಕೆ ಕಾರಣ.
ಸಹೋದರ ಸಹೋದರಿಯರ ಜನ್ಮದಾತೃಗಳು ಉಭಯಸಾಮಾನ್ಯರಾಗಿದ್ದರೂ ಅವರ ಜೈವಿಕ ಆನುವಂಶೀಯತೆ ಒಂದೇ ಆಗಿರುವುದಿಲ್ಲ. ವಂಶಪಾರಂಪರ್ಯವಾಗಿ ಬರಬಹುದಾದ ಗುಣಗಳ ವಾಹಕಗಳು ವಂಶವಾಹಿ (ಜೀನ್)ಗಳು ಎಂಬ ತಥ್ಯ ನಿಮಗೆ ತಿಳಿದಿದೆ. ಏಕಾಂಡಜ ಯಮಳರನ್ನು ಹೊರತುಪಡಿಸಿದರೆ ಬೇರೆ ಯಾವ ಇಬ್ಬರಲ್ಲಿಯೂ (ಅವರಿಬ್ಬರೂ ಒಂದೇ ಜನ್ಮದಾತೃಗಳಿಂದ ತಮ್ಮ ವಂಶವಾಹಿಗಳನ್ನು ಪಡೆದಿದ್ದರೂ) ಇವುಗಳು ಒಂದೇ ಆಗಿರುವುದು ಸಾಧ್ಯವೇ ಇಲ್ಲ. ಅಂದ ಮೇಲೆ, ಪ್ರತಿಯೊಬ್ಬ ವ್ಯಕ್ತಿಯ ಜೈವಿಕ ಆನುವಂಶೀಯತೆ ಅದ್ವಿತೀಯ ಅನ್ನುವುದರಲ್ಲಿ ಭಿನ್ನಾಭಿಪ್ರಾಯವಿಲ್ಲ. ವ್ಯಕ್ತಿಗಳ ಅದ್ವಿತೀಯತೆಗೆ ಇದು ಒಂದು ಕಾರಣ
ಯಾವುದೇ ಸಮಯದಲ್ಲಿ ವ್ಯಕ್ತಿಯ ವೀಕ್ಷಣೀಯ ಮತ್ತು ಅವೀಕ್ಷಣೀಯ ವರ್ತನೆಯನ್ನು ಪ್ರಭಾವಿಸುವ ಅಥವ ವ್ಯಕ್ತಿಯನ್ನು ಉದ್ದೀಪಿಸುವ ಸಮಸ್ತ ಉದ್ದೀಪಕಗಳ ಮೊತ್ತವೇ ಆ ಸಮಯದಲ್ಲಿ ಆ ವ್ಯಕ್ತಿಯ ಪರಿಸರ. ಇಂತು ವ್ಯಾಖ್ಯಾನಿಸಿದ ಪರಿಸರದ ಪರಿಕಲ್ಪನೆಯಲ್ಲಿ ಭೌತಿಕ ಅಂಶಗಳ ಜೊತೆಗೆ ಸಾಮಾಜಿಕ ಮತ್ತು ಮಾನಸಿಕ ಅಂಶಗಳೂ ಸೇರಿವೆ ಎಂಬುದನ್ನು ಗಮನಿಸಿ. ಸಹೋದರ ಸಹೋದರಿಯರು ಒಂದೇ ಮನೆಯಲ್ಲಿ ಒಟ್ಟಿಗೇ ಬೆಳೆಯುತ್ತಿದ್ದರೂ ಅವರ ಸುತ್ತಣ ಭೌತಜಗತ್ತು ಒಂದೇ ಆಗಿದ್ದರೂ ಅವರು ಬೆಳೆಯುತ್ತಿರುವ ಪರಿಸರ ಒಂದೇ ಆಗಿರುವುದಿಲ್ಲ. ಜನ್ಮದಾತೃಗಳು ಅನುಸರಿಸುವ ಪಾಲನೆ-ಪೋಷಣೆ ವಿಧಾನಗಳೂ ಬೇರೆಬೇರೆಯಾಗಿರುತ್ತವೆ. ಅಂದ ಮೇಲೆ, ಪ್ರತೀ ವ್ಯಕ್ತಿ ಅದ್ವಿತೀಯನಾಗದಿರಲು ಹೇಗೆ ಸಾಧ್ಯ?
ವ್ಯಕ್ತಿಯನ್ನು ಅದ್ವಿತೀಯನನ್ನಾಗಿಸುವುದರಲ್ಲಿ ಪ್ರಮುಖ ಪಾತ್ರ ಆನುವಂಶೀಯತೆಯದ್ದೇ? ಪರಿಸರದ್ದೇ? ಈ ಪ್ರಶ್ನೆಯನ್ನು ಉತ್ತರಿಸಲು ಮಾಡಿದ ಪ್ರಯತ್ನಗಳ ಉತ್ಪನ್ನವೇ ಆನುವಂಶೀಯತೆ – ಪರಿಸರ ವಿವಾದ. ಆನುವಂಶವಾದಿಗಳು, ಪರಿಸರವಾದಿಗಳು – ಇವರೀರ್ವರೂ ತಮ್ಮ ತಮ್ಮ ವಾದಗಳನ್ನು ಸಮರ್ಥಿಸಿಕೊಳ್ಳಬಲ್ಲ ಅನೇಕ ಅಧ್ಯಯನಗಳನ್ನು ಉಲ್ಲೇಖಿಸುತ್ತಾರೆ. ವಂಶಚರಿತ್ರೆಗಳು, ಅನ್ಯೋನ್ಯಾವಲಂಬನ (ಕಾರಿಲೇಷನಲ್) ಅಧ್ಯಯನಗಳು, ಪ್ರಾಣಿಪ್ರಯೋಗಗಳು ಈ ಪೈಕಿ ಪ್ರಮುಖವಾದವು. ಎರಡೂ ಪಂಥಗಳವರು ಉಲ್ಲೇಖಿಸುವ ಅಧ್ಯಯನಗಳು ಮೇಲ್ನೋಟಕ್ಕೆ ಸರಿಯಾಗಿರುವಂತೆ ಕಂಡು ಬಂದರೂ ಸೂಕ್ಷ್ಮವಾಗಿ ಪರಿಶೀಲಿಸಿದಾಗ ದೋಷಗಳು ಗೋಚರಿಸುತ್ತವೆ. ಎಂದೇ, ಈ ಕುರಿತಾದ ನಿರ್ಣಾಯಕ ವೈಜ್ಞಾನಿಕ ಮಾಹಿತಿ ಇಲ್ಲ. ಲಭ್ಯವಿರುವ ಮಾಹಿತಿಯನ್ನು ಆಧರಿಸಿ ಸಧ್ಯಕ್ಕೆ ಕೈಗೊಳ್ಳಬಹುದಾದ ತೀರ್ಮಾನಗಳು ಇಂತಿವೆ:
ಆನುವಂಶೀಯತೆ ಮತ್ತು ಪರಿಸರದ ನಡುವಿನ ಅನ್ಯೋನ್ಯ ಕ್ರಿಯೆಯ ಉತ್ಪನ್ನವೇ ಅದ್ವಿತೀಯತೆ. ಆನುವಂಶೀಯತೆ ಪ್ರಕಟವಾಗಲು ಯುಕ್ತ ಪರಿಸರ ಆವಶ್ಯಕ. ಪರಿಸರ ಪ್ರಭಾವ ಬೀರಲು ಆನುವಂಶೀಯತೆ ಇರಬೇಕಾದದ್ದೂ ಅನಿವಾರ್ಯ. ಒಂದು ಇನ್ನೊಂದಕ್ಕೆ ಪೂರಕ. ಎಂದೇ, ಆನುವಂಶೀಯತೆ ಮತ್ತು ಪರಿಸರದ ಪ್ರಭಾವಗಳ ನಡುವೆ ಸ್ಪಷ್ಟವಾದ ಸೀಮಾರೇಖೆಯನ್ನು ಎಳೆಯಲು ಸಾಧ್ಯವಿಲ್ಲ. ಮಾನವ ವರ್ತನೆಗಳನ್ನು ಮತ್ತು ಎಲ್ಲ ದೈಹಿಕ ಲಕ್ಷಣಗಳನ್ನು ಆನುವಂಶೀಯ ಮತ್ತು ಪರಿಸರದಿಂದಾಗಿ ಆರ್ಜಿತ ಎಂಬ ನಿರ್ದಿಷ್ಟ ಗುಂಪುಗಳಾಗಿ ವರ್ಗೀಕರಿಸಲು ಸಾಧ್ಯವಿಲ್ಲ.
ಒಂದು ನಿರ್ದಿಷ್ಟ ಪರಿಸರ ವಿಭಿನ್ನ ಆನುವಂಶಿಕ ವಸ್ತುಗಳ ಮೇಲೆ ಬೀರುವ ಪ್ರಭಾವಗಳು ಒಂದೇ ಆಗಿರುವುದಿಲ್ಲ. ಅರ್ಥಾತ್, ಯಾವುದೇ ಪರಿಸರದಲ್ಲಿ ಇರುವ ವ್ಯಕ್ತಿಗಳ ಮೇಲೆ ಆ ಪರಿಸರ ಬೀರುವ ಪ್ರಭಾವಗಳು ಒಂದೇ ಆಗಿರುವುದಿಲ್ಲ. ಒಂದು ಆನುವಂಶಿಕ ವಸ್ತು ವಿಭಿನ್ನ ಪರಿಸರಗಳಲ್ಲಿ ವಿಭಿನ್ನ ರೀತಿಗಳಲ್ಲಿ ವಿಕಸಿಸುತ್ತದೆ. ಅರ್ಥಾತ್, ಒಬ್ಬ ವ್ಯಕ್ತಿಯ ವಿಕಾಸದ ಮೇಲೆ ಆ ವ್ಯಕ್ತಿ ವಿಕಸಿಸುತ್ತಿರುವ ಪರಿಸರ ಅನನ್ಯ ಪ್ರಭಾವ ಬೀರುತ್ತದೆ ಎಂದೇ, ವ್ಯಕ್ತಿಗಳ ವಿಕಾಸ ಪ್ರರೂಪಗಳಲ್ಲಿ ಮತ್ತು ಅವರ ನಡೆವಳಿಕೆಗಳಲ್ಲಿ ಗೋಚರಿಸಬಹುದಾದ ಸಮತೆ ಅಥವ ಅಸಮತೆಗೆ ಆನುವಂಶೀಯತೆಯೇ ಕಾರಣ ಎಂದಾಗಲೀ ಪರಿಸರವೇ ಕಾರಣ ಎಂದಾಗಲೀ ಕರಾರುವಾಕ್ಕಾಗಿ ಹೇಳಲು ಸಾಧ್ಯವಿಲ್ಲ.
ವ್ಯಕ್ತಿಯ ವಿಕಾಸದ ವೇಗದ ಗರಿಷ್ಠ ಮಿತಿಯನ್ನೂ ವಿಕಾಸದ ಗರಿಷ್ಠ ಮಿತಿಯನ್ನೂ ಆನುವಂಶೀಯತೆಯೇ ನಿರ್ಧರಿಸುತ್ತದಾದರೂ ಆ ಗರಿಷ್ಠ ವೇಗದಲ್ಲಿ ವ್ಯಕ್ತಿ ವಿಕಸಿಸುತ್ತಾನೆಯೇ ಇಲ್ಲವೇ ಎಂಬುದೂ ವಿಕಾಸದ ಆ ಗರಿಷ್ಠ ಮಿತಿಯನ್ನು ತಲಪುತ್ತಾನೆಯೇ ಇಲ್ಲವೇ ಎಂಬುದೂ ಪರಿಸರವನ್ನು ಅವಲಂಬಿಸಿರುತ್ತದೆ ಎಂದು ಲಭ್ಯವಿರುವ ಮಾಹಿತಿ ಸೂಚಿಸುತ್ತಿದೆ.
ವಸ್ತು ಸ್ಥಿತಿ ಇಂತಿರುವಾಗ, ಸಾಧನೆಗಳಲ್ಲಿ ವ್ಯಕ್ತಿಗಳ ನಡುವೆ ಗಣೀತೀಯ ಸಮತೆ ಉಂಟುಮಾಡುವ ನಿರರ್ಥಕ ಪ್ರಯತ್ನದಲ್ಲಿ ತೊಡಗಿಸಿಕೊಳ್ಳುವುದರ ಬದಲು ಪ್ರತೀ ಮಗುವಿನ ಅಂತಸ್ಥ ಸಾಮರ್ಥ್ಯಗಳನ್ನು ನಿಖರವಾಗಿ ಗುರುತಿಸಿ ಅವು ಆ ಮಗುವಿಗೆ ತಕ್ಕುದಾದ ವೇಗದಲ್ಲಿ ಸಂಪೂರ್ಣವಾಗಿ ವಿಕಸಿಸಲು ನೆರವು ನೀಡಬಲ್ಲ ಶೈಕ್ಷಣಿಕ ಪರಿಸರವನ್ನು ಒದಗಿಸುವುದು ಹೇಗೆ ಎಂಬುದರ ಕುರಿತು ಆಲೋಚಿಸುವುದು ಒಳಿತಲ್ಲವೇ? ವ್ಯಕ್ತಿಗಳು ತಮ್ಮ ಕುಲ, ಮತ, ಜಾತಿ, ಲಿಂಗ, ಭಾಷೆ, ಆರ್ಥಿಕ ಸ್ಥಿತಿಗತಿ ಇಂಥ ಕಾರಣಗಳಿಂದಾಗಿ ಅಂತಸ್ಥ ಸಾಮರ್ಥ್ಯಗಳು ಪೂರ್ಣವಾಗಿ ಪ್ರಕಾಶಿಸಲು ಅವಶ್ಯವಾದ ಪರಿಸರದಲ್ಲಿ ವಿಕಸಿಸುವ ಅವಕಾಶಗಳಿಂದ ವಂಚಿತರಾಗದಂತೆ ಮಾಡುವುದು ಹೇಗೆ ಎಂಬುದರ ಕುರಿತು ಆಲೋಚಿಸುವುದು ಒಳಿತಲ್ಲವೇ?
ಚಿತ್ರ ಕೃಪೆ :http://soulflamer.deviantart.com/