ವಿಷಯದ ವಿವರಗಳಿಗೆ ದಾಟಿರಿ

ಜೂನ್ 30, 2012

ಖೆಡ್ಡಾ – ೨ : ನಿಮಗೆ ಬೇಕಾ….. ಪ್ರೀತಿ!

‍ನಿಲುಮೆ ಮೂಲಕ

ಹೇಮಂತ್ ಕುಮಾರ್

ಯಾವನಾದರೂ ಇನ್ನು ಮುಂದೆ ಲವ್ ಆಗಿದ್ಯ ನಿನಗೆ ಅಂತ ಕೇಳಿದ್ರಿ ಅಂದ್ರೆ ಹಿಗ್ಗಾ ಮುಗ್ಗಾ ಒದೆ ತಿಂತೀರಾ ಹುಶಾರಾಗಿರಿ ಹೇಳಿದ್ದೀನಿ. ಲವ್ ಅಂತೇ ಲವ್ವು ಸುಡುಗಾಡು. ಬರೀ ಬೂಟಾಟಿಕೆ. ಲವ್ವು ಅಂದದ್ದೇ ಹದಿನೈದರಿಂದ ಇಪ್ಪತ್ತೈದು ವರ್ಷದ ಹುಡುಗ ಹುಡುಗಿಯ ಚಿತ್ರವನ್ನ ಮನದ ಮುಂದೆ ತಂದು ನಿಲ್ಲಿಸಿಕೊಂಡು, ಪಾರ್ಕು, ಥಿಯೇಟರು, ಕಾಫೀ ಡೇ, ರೆಸಾರ್ಟುಗಳಿಗೆಲ್ಲಾ ಹೋಗಿಬಂದುಬಿಡ್ತೀರಿ. ನಾಚಿಕೆ ಆಗಲ್ವೇನ್ರೀ ಯಾರಿಗೂ. ನಾನೂ ನಂಬಿದ್ದೆ ಪ್ರೀತಿ ಇನ್ನೂ ಉಳ್ಕೊಂಡಿದೆ ಅಂತ. ಆದರೆ ಎಲ್ಲಿ ಉಳ್ಕೊಂಡಿದೆ ಅಂತ ಹುಡುಕೋಕೆ ಹೊರಟಾಗಲೇ ಗೊತ್ತಾಗಿದ್ದು…….

ನನ್ನಲ್ಲಿ ಬೆಟ್ಟದಷ್ಟು ತುಂಬಿಕೊಂಡಿದ್ದ ಪ್ರೀತಿಯಲ್ಲಿ ಒಂದು ಚಮಚೆಯಷ್ಟನ್ನ ಅಂಗೈಯಲ್ಲಿ ಇಟ್ಟುಕೊಂಡು ಯಾರಿಗಾದರೂ ಒಬ್ಬರಿಗೆ ಪ್ರೀತಿ ಕೊಡೋಣೆಂದು ಹೊರಟೆ. ಯಾರಿಗೆ ಕೊಡಲೆಂದೇ ಪ್ರಶ್ನೆ. ಆರೆ ಯಾರಿಗಾದರೇನಂತೆ ಎಲ್ಲರೂ ಮನುಷ್ಯರೇ ತಾನೆ? ಇನ್ನೂ ನೋಡಿದರೆ ಪ್ರಾಣಿಗಳಿಗೂ ಸಹ ಕೊಡಬಹುದು ನಾನು. ಯಾರಾದರೇನಂತೇ ಒಂದು ಜೀವ ನನ್ನ ಪ್ರೀತಿ ಪಡೆದುಕೊಂಡರೆ ಸಾಕಿತ್ತು ನನಗೆ. ಸರಿ, ಯಾರಿಗೆ ಕೊಡಲಿ. ಈ ರಸ್ತೆಯ ಆ ಪಕ್ಕದಲ್ಲಿ ಯಾರೋ ಒಬ್ಬ ನಿಂತಿರುವನು. ಏನೋ ಗಲಿಬಿಲಿಗೊಂಡವನಂತೆ ಕಾಣುತ್ತಿರುವನು. ಅವನಿಗೂ ನನ್ನಂತೆಯೇ ಯಾರೂ ಪ್ರೀತಿ ಕೊಟ್ಟೇ ಇಲ್ಲವೇನೋ ಅದಕ್ಕೇ ನನ್ನಂತೆಯೇ ಚಿಂತೆಯಲ್ಲಿರುವನೆಂದು ಊಹಿಸಿಕೊಂಡು ನೇರ ಅವನ ಬಳಿಗೇ ಹೊರಟೆ. ಫೋನಿನಲ್ಲಿ ಯಾರ ಅಮ್ಮನನ್ನೋ, ಅಕ್ಕನನ್ನೋ ಕೆಟ್ಟದಾಗಿಯಾದರೂ ನೆನಪಿಸಿಕೊಳ್ಳುತ್ತಿದ್ದ. ಅವನು ಮಾತು ಮುಗಿಸಲೆಂದು ನನ್ನ ಮುಷ್ಟಿ ತುಂಬು ಪ್ರೀತಿಯನ್ನು ಹಿಡಿದೇ ಕಾದೆ. ಆತ ಯಾರೋ ತನ್ನ ಸ್ನೇಹಿತನಿರಬೇಕು ಅವನ ಸಂಸಾರ, ವಂಶವನ್ನೆಲ್ಲಾ ನೆನಪಿಸಿಕೊಳ್ಳುತ್ತಲೇ ಇದ್ದ.
ಅಕಸ್ಮಾತಾಗಿ ನನ್ನ ಕಡೆ ತಿರುಗಿದೊಡನೆಯೇ ಸಾರ್ ನನ್ನ ಪ್ರೀತಿ ತೊಗೊಳ್ಳಿ ಸಾರ್ ಎಂದು ನನ್ನ ಕೈ ಮುಂದೆ ಹಿಡಿದೆ. ಆತ ಮಾತನಾಡುವುದನ್ನ ನಿಲ್ಲಿಸಿ ನನ್ನ ಕೈ ಕುತೂಹಲದಿಂದ ನೋಡಿದ. ಮುಷ್ಟಿ ಮುಚ್ಚಿದ್ದರಿಂದ ಕಾಣಲಿಲ್ಲವೋ ಏನೋ. ಸಾರ್ ನನ್ನ ಪ್ರೀತಿ ಸಾರ್, ತೊಗೊಳ್ಳಿ ಎಂದೆ. ಮತ್ತೆ ತನ್ನ ಮಾತುಕತೆಗಳಲ್ಲಿ ಮಗ್ನನಾದ. ಮತ್ತೆ ಕಾದೆ. ಇನ್ನೂ ಅವನ ಬೆನ್ನಿಗೇ ನಿಂತಿರುವುದನ್ನ ಗಮನಿಸಿ ಮತ್ತೆ ನನ್ನೆಡೆಗೆ ತಿರುಗಿ ಏನು ಎಂದ. ಸಾರ್ ನನ್ನ ಪ್ರೀತಿ ಸಾರ್, ತೊಗೊಳ್ಳಿ ಎಂದೆ ದೈನ್ಯದಿಂದ. ಏನು! ನಿಂಗೇನ್ ತಲೆ ಕೆಟ್ಟಿದೆಯೇನಯ್ಯಾ ಎಂದುಬಿಟ್ಟ. ಸಾರ್, ಅಲ್ಲಾ ಸಾರ್ ನನ್ನ ಪ್ರೀತಿ ತೊಗೊಳ್ಳಿ ಸಾರ್ ಎಂದೆ ಮತ್ತೆ ವಿಚಲಿತನಾಗದೆಯೇ. ಯೋ ಹೋಗಯ್ಯಾ ಸುಮ್ಮನೆ ತಲೆ ತಿನ್ನಬೇಡ ನೀನು, ನನ್ನದೇ ನನಗೆ ಹರಿದುಹೋಗ್ತಾ ಇದೆ ಇವನು ಬೇರೆ. ಹಾ ಹೇಳೋ ಬೋ..ಮಗನೆ ಎಂದು ಮತ್ತೆ ತನ್ನ ಫೋನಿನೊಂದಿಗೆ ಮಾತು ಮುಂದುವರೆಸಿದ. ಓಹೋ ಈತನಿಗೆ ನನ್ನ ಪ್ರೀತಿ ಬೇಡವಾಯಿತು ಸರಿ, ಇನ್ನಾರಿಗಾದರೂ ಕೊಟ್ಟರಾಯಿತೆಂದು ಹೊರಟೆ ಅಲ್ಲಿಂದ. ಆತನ ಬಳಿ ಪಾಪ ನನ್ನ ಪ್ರೀತಿ ಸ್ವೀಕರಿಸಲು ಸಮಯವಿರಲಿಲ್ಲವೆನಿಸುತ್ತೆ. ಇನ್ನಾರಾದರೂ ಸಮಯವಿದ್ದವರ ಬಳಿ ಹೋಗಿ ನನ್ನ ಪ್ರೀತಿಯನ್ನು ಕೊಡುವುದೆಂದು ನಿರ್ಧರಿಸಿ ಹೊರಟೆ.
ಅದ್ಯಾರೋ ಕಾರಿನಲ್ಲಿ ಕುಳಿತು ಯಾರಿಗೋ ಕಾಯುತ್ತಿರುವವನಂತೆ ಕಂಡ, ಮಿಂಚುತ್ತಿರುವ ಬಟ್ಟೆ ತೊಟ್ಟು, ಪ್ರೀತಿ ಕೊಡುವವರಿಗಾಗಿಯೇ ಕಾಯುತ್ತಿರುವನೇನೋ ಎಂದು ಇವನು ನನ್ನ ಪ್ರೀತಿ ಸ್ವೀಕರಿಸೇ ಸ್ವೀಕರಿಸುತ್ತಾನೆಂದು ನಂಬಿ ಅವನ ಬಳಿ ಹೊರಟೆ. ಮುಷ್ಠಿ ಮುಂದೆ ಹಿಡಿದು ಸಾರ್ ನನ್ನ ಪ್ರೀತಿ ತೊಗೊಳ್ಳಿ ಸಾರ್ ಎಂದೆ. ವಾಟ್ ಎಂದು ಕಿವಿಯಲ್ಲಿ ಸಿಕ್ಕಿಸಿಕೊಂಡದ್ದೇನನ್ನೋ ತೆಗೆದು ಮತ್ತೆ ಏನದು ಎಂದು ಕೇಳಿದ. ನನ್ನ ಪ್ರೀತಿ, ತೊಗೊಳ್ಳಿ ಸಾರ್ ಎಂದೆ. ನಿನ್ ಮೂತಿ, ಹುಚ್ಚ ನನ್ನ ಮಗನೆ ಡೋಂಟ್ ವೇಸ್ಟ್ ಮೈ ಟೈಮ್, ಮುಚ್ಕೊಂಡ್ ಹೋಗು ಎಂದಂದು ಮತ್ತೆ ಕಿವಿಗೆ ಸಿಕ್ಕಿಸಿಕೊಳ್ಳಲು ಅನುವಾಗುತ್ತಿದ್ದವನನ್ನು ಮತ್ತೆ ಶಾಂತವಾಗಿಯೇ ತಡೆದೆ. ಸಾರ್ ಇದರಲ್ಲಿ ನನ್ನ ಪ್ರೀತಿಯಿದೆ, ತೊಗೊಳ್ಳಿ ಸಾರ್ ಎಂದೆ. ಹ ಹ ಹ ಎಂದು ನಕ್ಕುಬಿಟ್ಟ. ಏನಿದೆ, ನಿನ್ನ ಪ್ರೀತಿನಾ, ಯೋ ಯಾಕಯ್ಯಾ ಬೇರೆ ಯಾರೂ ಸಿಕ್ಕಲಿಲ್ವ ನಿನಗೆ ಬಕ್ರಾ ಮಾಡೋಕೆ. ಏನಾಗಿದೆ ನಿನಗೆ ಚೆನ್ನಾಗಿದ್ದೀಯಲ್ಲಾ, ದುಡಿದು ತಿನ್ನೋಕೆ ರೋಗಾನಾ ನಿನಗೆ. ಹೋಗಲಿ ತೊಗೊಂಡು ಹಾಳಾಗಿಹೋಗು ಮತ್ತೆ ಮುಖ ತೋರಿಸಬೇಡ ಎಂದು ದುಡ್ಡು ತೆಗೆದು ನನ್ನೆಡೆಗೆ ಹಿಡಿದ. ಸಾರ್ ನಾನು ಭಿಕ್ಷೆ ಬೇಡಲು ಬಂದಿಲ್ಲ ಸಾರ್, ನನ್ನ ಪ್ರೀತಿ ನಿಮಗೆ ಕೊಡೋಕೆ ಬಂದೆನಷ್ಟೇ ಎಂದು ದುಡ್ಡನ್ನು ನಿರಾಕರಿಸಿದ್ದಕ್ಕೆ. ಜಸ್ಟ್ ಫಕಾಫ್ ಮ್ಯಾನ್ ಎಂದು ಏನೋ ಹೇಳಿ ಕಾರು ಚಾಲ್ತಿ ಮಾಡಿಕೊಂಡು ಹೊರಟೇ ಹೋದ. ದುಡ್ಡು ಅಲ್ಲೇ ಬಿತ್ತು. ನನಗೆ ದುಡ್ಡು ಬೇಕಿರಲಿಲ್ಲ. ಸರಿ ಸುಮ್ಮನೆ ಮುನ್ನಡೆದೆ.
ಸೂಟು ಹಾಕಿಕೊಂಡು, ಸೂಟ್ ಕೇಸೊಂದನ್ನು ಹಿಡಿದಿದ್ದವನು ನಾನು ಕೇಳಿದ ತಕ್ಷಣವೇ ಕೊಡು ಏನಿದೆ ಅದರಲ್ಲಿ ಎಂದು ನನ್ನ ಮುಷ್ಠಿ ಬಿಚ್ಚಿ ನೋಡಲು ಪ್ರಯತ್ನ ಪಟ್ಟ. ಸಾರ್ ತೊಗೊಂಡ ಮೇಲೆ ನೋಡಿ, ಮುಂಚೆನೇ ಏನು ಎತ್ತ ಎಲ್ಲ ವಿಚಾರಣೆ ಮಾಡಲಾಗುವುದಿಲ್ಲ ಎಂದೆ. ನಿನ್ನ ಏನಾದರೂ ಇರಲಿ ನಿನ್ನ ಕೈಯಲ್ಲಿ ಆದರೆ ನನಗೇನಾದ್ರೂ ಉಪಯೋಗ ಇದ್ಯಾ ಅದರಿಂದ. ನಾನು ಲಾಭಕ್ಕಾಗಿ ದುಡಿಯುವ ಮನುಷ್ಯ. ಇದರಿಂದ ನನಗೇನಾದರೂ ಲಾಭವಿದೆ ಎಂದರೆ ತೊಗೋತೀನಿ ಎಂದು ಮತ್ತೆ ಮುಷ್ಟಿ ಬಿಚ್ಚಿ ನೋಡಲು ಪ್ರಯತ್ನ ಪಟ್ಟ. ಕೊಸರಿಕೊಂಡು ಬಂದುಬಿಟ್ಟೆ. ಸ್ವಲ್ಪ ದೂರದಲ್ಲೇ ಯಾರೋ ಕಷ್ಟ ಪಟ್ಟು ನಡೆದು ಬರುತ್ತಿದ್ದುದನ್ನು ಕಂಡು ಈತ ಖಂಡಿತಾ ನನ್ನ ಪ್ರೀತಿಯನ್ನು ಸ್ವೀಕರಿಸುತ್ತಾನೆ. ಕಷ್ಟ ಪಟ್ಟವರಿಗೇ ಪ್ರೀತಿಯ ಬೆಲೆ ಗೊತ್ತಿರುವುದೆಂದು ಲೆಕ್ಕಾಚಾರ ಮಾಡಿ ಹೊರಟೆ.
ಕೈಯಲ್ಲಿದ್ದ ಊರುಗೋಲನ್ನು ತೆಗೆದು ತಲೆಗೆ ಬಾರಿಸಿಯೇ ಬಿಟ್ಟ. ತಲೆ ಒಡೆದು ರಕ್ತವೂ ಬಂದುಬಿಟ್ಟಿತು. ಅಯ್ಯಯ್ಯೋ ಯಾಕ್ ಹೊಡೆದ್ರಿ ಸಾರ್ ಎಂದು ಇನ್ನೂ ದೈನ್ಯದಿಂದ, ಸಹನೆಯಿಂದಲೇ ಕೇಳಿದ್ದಕ್ಕೆ. ಏನ್ ನನ್ನನ್ನ “ಗೇ” ಅಂದುಕೊಂಡಿದ್ದೀಯ, ನಾನು ಕುಂಟ ಹೌದು, ಆದರೆ ನನಗೂ ಮದುವೆ ಆಗಿದೆ ಕಣಲೇ ಲೋಫರ್, ಮುಖ ಮೂತಿ ನೋಡ್ದೀರಾ ಚಚ್ಚಾಕಿ ಬಿಡ್ತೀನಿ ಹುಶಾರು ಎಂದು ಹಿಂದಿರುಗಿ ನೋಡದೆಯೇ ಹೊರಟುಹೋದ. ಅರೆ ನಾನೇನೂ ಸೆಕ್ಸ್ ಮಾಡಲು ಕರೆದೆನೆಂದುಕೊಂಡನೋ ಅರ್ಥವಾಗದೇ ಎದ್ದು ಸಾವರಿಸಿಕೊಂಡು ತಲೆಯ ಗಾಯ ಒರೆಸಿಕೊಳ್ಳುತ್ತಾ ಮುಷ್ಟಿಯನ್ನು ನೋಡಿಕೊಂಡು ಮುನ್ನಡೆದೆ. ಒಬ್ಬಳು ತರುಣಿ. ಕೇಳಿದ್ದೇ ಕಪಾಳೆಗೆ ಹೊಡೆದು ನಿನ್ನ ಉಟ್ಟಿಗೆ ಪ್ರೀತಿ ಬೇರೆ ಕೇಡು. ಮುಖ ನೋಡ್ಕೊಂಡಿದ್ದೀಯ ಕನ್ನಡಿಯಲ್ಲಿ. ಚಪ್ಪರ್ ಥೂ ಎಂದು ಹೊರಟೇ ಹೋದಳು. ಒಂದು ಪುಟ್ಟ ಮಗು ಒಂದು ಕೈಯಲ್ಲಿ ಇನ್ನೊಂದು ಕೈಯಲ್ಲಿ ಬಾಸ್ಕೆಟ್ಟು ತುಂಬಾ ತರಕಾರಿ ಹಣ್ಣುಗಳನ್ನು ತುಂಬಿಸಿಕೊಂಡು ಬರುತ್ತಿದ್ದಳೊಬ್ಬಳು ತಾಯಿ. ಆಹಾ ತಾಯಿಗಲ್ಲದೇ ಇನ್ನಾರಿಗೆ ತಾನೇ ಗೊತ್ತಿರುತ್ತೆ ಪ್ರೀತಿಯ ಮೌಲ್ಯ. ಇವಳು ನನ್ನ ಪ್ರೀತಿಯನ್ನ ಸ್ವೀಕರಿಸಿಯೇ ತೀರುವಳೆಂದು ನಂಬಿ ಓಡಿ ಅವಳ ಎದುರು ನಿಂತು ಮುಷ್ಟಿ ಮುಂದೆ ನೀಡಿ ಹೇಳಿದೆ. ಅಯ್ಯಯ್ಯೋ ಏನ್ ಹೇಳ್ತಿದ್ಯೋ, ಏನ್ ಅಂದುಕೊಂಡಿದ್ದೀಯ ನನ್ನನ್ನ, ಇಲ್ನೋಡ್ರೀ ಇವನು ಹೇಗೆ ಮಾತನಾಡ್ತಿದ್ದಾನೆ, ಒಂಟಿ ಹೆಂಗಸು ಅಂತ ಮೈಮೇಲೆ ಬಿದ್ದಿದ್ದೂ ಅಲ್ಲದೇ ನೋಡಿ ಬಾಯಿಗೆ ಬಂದಂಗೆ ಮಾತನಾಡ್ತಿದ್ದಾನೆ, ಥು ನಿನ್ನ ಮುಖಕ್ಕೆ ಎಂದು ಉಗಿದಿದ್ದೂ ಅಲ್ಲದೇ ನೋಡ ನೋಡುತ್ತಲೇ, ಏನು ನಡೆಯುತ್ತಿದೆಯೆಂದು ಅರಿವಾಗುವಷ್ಟರಲ್ಲೇ ಎದೆ ಎದೆ ಬಡಿದುಕೊಂಡು, ಬ್ಯಾಸ್ಕೆಟ್ಟು ಕೆಳಗೆ ಕುಕ್ಕಿ, ಮಗುವಿನ ಕೈ ಬಿಟ್ಟು, ಸುತ್ತ ಮುತ್ತಲ ಜನರನ್ನು ಬೊಬ್ಬೆಯಿಟ್ಟು ಸೇರಿಸಿ ಹೊಡೆದೂ ಹೊಡೆದಳು, ನೆರೆದವರೆಲ್ಲಾ ಸೇರಿ ಜಪ್ಪಿದರು. ಬಂದವರಲ್ಲಾರಿಗಾದರೂ ನನ್ನ ಪ್ರೀತಿ ಬೇಕಾದೀತೇನೋ ಎಂದು ಎಲ್ಲರನ್ನೂ ಕೇಳಿದೆ. ಯಾರೂ ಕೇಳುವ ವ್ಯವಧಾನವಿಟ್ಟುಕೊಂಡಿರಲಿಲ್ಲ, ಕೈಲಾದಷ್ಟೂ ಹೊಡೆದು ಹಾಕಿದ್ದ ಹಳೆಯ ಬಟ್ಟೆಯನ್ನೂ ಚಿಂದಿ ಚೂರು ಮಾಡಿ ಹೋದರು. ಮೈಕೈಯೆಲ್ಲಾ ಬಾತುಕೊಳ್ಳಲು ಶುರುಮಾಡಿಬಿಟ್ಟಿತು. ಕಷ್ಟ ಪಟ್ಟು ಎದ್ದು ಅಷ್ಟು ದೂರದಲ್ಲಿ ಕೋಲಿನ ಆಸರೆಯಲ್ಲಿ ನಡೆದುಬರುತ್ತಿದ್ದ ಮುದುಕಿಯೋರ್ವಳನ್ನು ಕಂಡದ್ದೇ ನನ್ನ ಆಸೆ, ಕನಸು ಮತ್ತೆ ಚಿಗುರಿಕೊಂಡಿತು, ಥೂ ಯಾರು ಯಾರನ್ನೋ ಕೇಳಿದೆನಲ್ಲಾ, ವಯಸ್ಸಿನ ಜೊತೆಯಲ್ಲಿ ಮಾಗಿ ಪ್ರೀತಿ ಎಂದರೇನೆಂದು ಅರಿತಿರಬಹುದಾದವರು ಯಾರಾದರೂ ಇದ್ದರೆ ಅದು ಈ ಅಜ್ಜಿಯೇ ಎಂದು ತೆವಳುವವನ ಹಾಗೇ ಓಡಿದೆ.
ಈ ವಯಸ್ಸಿನಲ್ಲಿ ನಿನ್ನ ಪ್ರೀತಿ ಕಟ್ಟಿಕೊಂಡು ನಾನೇನು ಮಾಡಲಪ್ಪ, ಈ ಇಳಿ ವಯಸ್ಸಿಗೆ ಊರುಗೋಲಾಗು, ಆಸರೆ ಕೊಡು ಸಾಕೆಂದಳು. ಯಾವುದೂ ಸಾಧ್ಯವಾಗದಿದ್ದಲ್ಲಿ ಕೈಲಾದಷ್ಟು ಸಹಾಯ ಮಾಡು ಸಾಕೆಂದಳು. ಯಾವುದೂ ನನ್ನ ಬಳಿ ಇಲ್ಲಜ್ಜಿ. ನನ್ನ ಬಳಿ ನನ್ನ ಪ್ರೀತಿಯೊಂದನ್ನು ಬಿಟ್ಟರೆ ಬೇರೇನೂ ಇಲ್ಲ ಎಂದೆ. ಮತ್ತೆ ನಿನ್ನ ಪ್ರೀತಿ ಇಟ್ಟುಕೊಂಡು ಏನ್ ಮಾಡ್ಲೀ ನಾನು. ದಾರಿ ಬಿಡು ಎಂದು ಉಶ್ಶೋ ಅಪ್ಪ ಎನ್ನುತ್ತಾ ಮುದುಕಿಯೂ ಹೋಯ್ತು. ಅಲ್ಲೇ ಕೂತೆ. ಯಾರಿಗೂ ಬೇಕಾಗಿಲ್ವಾ ನನ್ನ ಪ್ರೀತಿ. ಕಾಲು ನೆಲಕ್ಕೆ ಹೂತು ಹೋಗುತ್ತಿತ್ತು. ಅದಾಗಲೇ ಮಳೆ ಶುರುವಾಯ್ತು. ಮಳೆಯಿಂದ ಮೈಯ ತೊಯ್ದುಹೋಯ್ತೋ ಅಥವಾ ಕಣ್ಣಿಂದಲೇ ತೊಯ್ದು ತೊಪ್ಪೆಯಾಯ್ತೋ ಗೊತ್ತಾಗಲಿಲ್ಲ. ಮುಷ್ಟಿ ಹಿಡಿದು ಇನ್ನೂ ನೆನೆಯುತ್ತಲೇ ಇದ್ದೆ. ಚಮಚೆಯಷ್ಟು ಪ್ರೀತಿಯೇ ಯಾರಿಗೂ ಬೇಕಾಗಿಲ್ಲ ಇನ್ನು ಬೆಟ್ಟದಷ್ಟಿರುವುದನ್ನ ಯಾರಿಗೆ ತಾನೇ ಕೊಡಲೆಂದು ಮುಷ್ಟಿ ತೆರೆದೆ. ನನ್ನ ಪ್ರೀತಿಯ ವಜ್ರ ಇನ್ನೂ ಹೊಳೆಯುತ್ತಲೇ ಇತ್ತು. ಮಳೆಗೆ ತೊಯ್ದಷ್ಟೂ ಇನ್ನೂ ಸ್ಫಟಿಕ ಶುಭ್ರವಾಗಿ ಮಿಂಚುತ್ತಿತ್ತು. ಬೆಲೆಯಿಲ್ಲದ, ಯಾರೂ ಮೂಸಿ ನೋಡದ ಈ ಪ್ರೀತಿಯನ್ನು ಇಟ್ಟುಕೊಂಡೇನು ಮಾಡಲೆಂದು ಸುಮ್ಮನೆ ಅದೇ ಕೆಸರಿಗೆಸೆದು ಎದ್ದು ನಿಧಾನಕ್ಕೆ ನಡೆದು ಹೊರಟೆ. ನನ್ನೆದುರಿಗೆ ಒಬ್ಬ ಅಪ್ಪ ಮಗ ಛತ್ರಿ ಹಿಡಿದು ನಡೆದು ಬರುತ್ತಿದ್ದವರು, ಆ ಪುಟ್ಟ ಮಗು ನೋಡಿ ಕೈ ತೋರಿಸಿ ನಗುತ್ತಲಿತ್ತು. ಅದೂ ಸಹ ಹುಚ್ಚನೆಂದು ನಗೆಯಾಡುತ್ತಿರುವುದೇನೋ.
ಮುಗ್ಧ ಮಗು ಮುಂದೆ ಸರಿದ ಮೇಲೂ ಅದರ ಕಡೆಗೆ ತಿರುಗಿ ನೋಡುತ್ತಾ ನಿಂತೆ. ಕೆಸರು ಮೆತ್ತಿಕೊಂಡಿದ್ದ ಆ ನನ್ನ ಪ್ರೀತಿಯನ್ನು ಆ ಮಗು ಹೆಕ್ಕಿ ಮುಷ್ಟಿಯಲ್ಲಿ ಹಿಡಿದು ಒಮ್ಮೆ ನನ್ನ ಕಡೆ ನೋಡಿ ನಕ್ಕು ನಡೆಯ ತೊಡಗಿತು. ಮಳೆ ನಿಂತಿತ್ತು, ಕಣ್ಣಿನಲ್ಲಿ ಮೋಡ ಕಟ್ಟಿತು.
ಚಿತ್ರಕೃಪೆ : ಗೂಗಲ್ ಇಮೇಜಸ್
*********************************************************
Read more from ಲೇಖನಗಳು

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments